ಸದಾ ಹಸಿರಾಗಿರುವ ಹಸಿಯಾಗಿರುವ ಹದವಾಗಿ ಮಳೆ ಸುರಿಯುವ ಮಲೆನಾಡ ಮಲೆಯೊಳಗೆ ಎಂಟು ವರ್ಷಕ್ಕೆ ಹೂ ಬಿಟ್ಟ ಗುರುಗಿ ಜಾತಿಯ ಸಸ್ಯ ಅದೆಷ್ಟು ಜೇನಿನುತ್ಪಾದನೆಗೆ ಕಾರಣವಾಗಿತ್ತೆಂದರೆ, ಕೊಳ್ಳಲು ಸ್ವತಃ ಸೊಸೈಟಿಯಲ್ಲಿದ್ದ ಹಣವೆಲ್ಲಾ ಖಾಲಿ ಆಗಿ ಹೋಗಿತ್ತು ಅಂತ ಲೇಖಕರು ಅನುಭವದ ಕತೆ ಹೆಣೆಯಲು ಶುರುವಿಟ್ಟುಕೊಳ್ಳುತ್ತಾರೆ. ಹೀಗೆ ಶುರುವಾಗುವ ಕತೆಯಲ್ಲಿ ಪೂಚಂತೇ ಜೇನಿನ ಉತ್ಪಾದನೆ - ಸಂಶೋಧನೆ - ನಿರ್ವಹಣೆ ಎಲ್ಲವನ್ನೂ ಬಿಚ್ಚಿಡುತ್ತಾರೆ. ಜೇನು ಗೂಡಿನ ಸ್ಥಳಾಂತರ, ಅವುಗಳ ಮನಸ್ಥಿತಿ ಅವುಗಳ ಸಂಘರ್ಷಣೆ ಜೊತೆ ಜೊತೆಗೆ ಅದರಿಂದಾಗುವ ಆರ್ಥಿಕ ಲಾಭ ನಷ್ಟ ಹೀಗೆ ಜೇನಿನ ಬೆನ್ನು ಹತ್ತಿದವರಿಗೆ ಮಂದಣ್ಣನ ಪಾತ್ರ ಪರಿಚಯವಾಗುತ್ತದೆ. ಕಾಡಿನ ಒಳಾಂತರಗಳ ಬಗ್ಗೆ ಅದಮ್ಯವಾಗಿ ಗ್ರಹಿಸುವ ಶಕ್ತಿ - ತಾಳ್ಮೆ - ಜಾಣತನ ಎಲ್ಲವನ್ನೂ ಹೊಂದಿದ ಮಂದಣ್ಣನಿಗೆ ತನ್ನ ಜೀವನದ ಮೇಲೆ ತನಗೆ ನಿರುತ್ಸಾಹ ಇರುವ ಬಗ್ಗೆ ತೇಜಸ್ವಿ ಎಷ್ಟು ಚೆಂದವಾಗಿ ಬರಿಯುತ್ತಾರೆಂದರೆ ಕತೆ ತನ್ನ ತಾನೆ ಹೆಣೆದುಕೊಂಡು ಹೋಗಲು ಇದು ತುಂಬಾ ಅನುಕೂಲಕರ ವಾತಾವರಣ ಸೃಷ್ಟಿ ಮಾಡುತ್ತದೆ.
ಈ ಗದ್ದೆಗೆ ಶುರುವಾದ ಹುಳುವಿನ ಕಾಟದಿಂದ ಪರಿಹಾರ ಕಂಡುಕೊಳ್ಳಲು, ಮಂದಣ್ಣನ ಬಗ್ಗೆ ಅಪಾರ ಕಾಳಜಿ ಉತ್ಸಾಹ ಗೌರವವೂ ಇರುವ ಗುರು ಕಾರ್ವಾಲೊರನ್ನು ಭೇಟಿಯಾಗಬೇಕಾಗಿ ಬಂದಾಗ ನಲವತ್ತು ವರ್ಷಗಳ ಹಳೆಯದಾದ ಮೇಲ್ಛಾವಣಿ ಇಲ್ಲದ ಜೀಪೊಂದನ್ನು ಹತ್ತಿ ಅವರ ರಿಸರ್ಚ್ ಸ್ಟೆಷನ್ನಿಗೆ ಹೋಗಬೇಕಾಗಿ ಬರುತ್ತದೆ. ನಿಸರ್ಗದ ಬಗ್ಗೆ ಅವರಿಗಿರುವ ಕೌತುಕ ಕುತೂಹಲಗಳು ಲೇಖಕರಲ್ಲಿ ಅಚ್ಚರಿ ಮೂಡಿಸುತ್ತವೆ. ಮಂದಣ್ಣನ ಮದುವೆ ಮತ್ತು ಅಲ್ಲಿ ನಡೆಯಲ್ಪಡುವ ಹಾಸ್ಯ ಪ್ರಸಂಗಗಳು ಕತೆಯನ್ನು ರಂಜನಿಯವಾಗಿ ಎಳೆದುಕೊಂಡು ಹೋಗುತ್ತವೆ. ಕೊನೆಗೊಂದು ದಿನ ಅನಾದಿ ಕಾಲದಿಂದಲೂ ಉಳಿದು ಬಂದ ಅಪರೂಪದ ಅವಶೇಷಗಳು ಮತ್ತು ಅಳಿವಿನಂಚಿನ ಸಂತತಿಗಳ ಸುರುಳಿ ಬಿಚ್ಚಿಟ್ಟು ಕಾರ್ವಾಲೊ ಎಲ್ಲರ ಮನಸ್ಸನ್ನು ತಮ್ಮ ವಿಚಾರಗಳಿಗೆ ಗಂಟು ಹಾಕಿ ವಿಸ್ಮಯ ಹುಟ್ಟಿಸುತ್ತಾರೆ. ಕುತೂಹಲಕಾರಿಯಾದ ವಿಶೇಷ ವಿಷಯ ಒಂದನ್ನು ಮಂದಣ್ಣನಿಂದ ಎರವಲು ಪಡೆದದ್ದನ್ನು ಹಾಗೂ ಅದರ ಸೂಕ್ಷ್ಮತೆಯನ್ನೂ ಸವಿವರವಾಗಿ ವಿವರಿಸಿದಾಗ ಬೆರಗುಗಣ್ಣ ತೆರೆದುಕೊಂಡು ಕಿವಿ ನಿಮಿರಿಸಿ ಕೂರುತ್ತಾರೆ. ಈ ಹಾರುವ ಓತಿಕೇತದ ಅನ್ವೇಷಣೆಗೆಂದು ಅಣಿಯಾಗಿ ನಿಂತಾಗ ಎಲ್ಲರಲ್ಲೂ ಕುತೂಹಲ ಕೌತುಕ ಹುಚ್ಚು ಕನಸು ಉತ್ಪತ್ತಿಯಾಗಿ ಎಂಥದೊ ಭರವಸೆ ಅವರಲ್ಲರೊಳಗೆ ಇಣುಕಿ ನೋಡುತ್ತದೆ.
ಹಳ್ಳಿಯ ಮಂದಣ್ಣ ಎಂದೊ ನೋಡಿದ ಈ ಹಾರುವ ಓತಿಕೇತದ ಬೆನ್ನು ಹತ್ತಿ ಈಗ ವಿಜ್ಞಾನಿ ಕರ್ವಾಲೊ, ಕ್ಯಾಮೆರಾ ಪ್ರಭಾಕರ, ಕರಿಯಪ್ಪ ಮತ್ತು ಬೇಟೆಗಾರರ ಗೆಳೆತನ ಬೆಳೆಸುವ ಕಿವಿ ಎಂಬ ನಾಯಿ ಮತ್ತು ಲೇಖಕ ಹೊರಟು ನಿಲ್ಲುತ್ತಾರೆ. ಇಲ್ಲಿಂದ ಕತೆ ಇನ್ನಷ್ಟು ರೋಚಕಗೊಳ್ಳುತ್ತದೆ. ಅವರ ಪ್ರತಿ ತಿರುವು ಅಚ್ಚರಿಯಲ್ಲಿ ಜನ್ಮತಾಳಿ ಹುಬ್ಬೇರಿಸುವಂತೆ ಮಾಡುತ್ತದೆ. ಈಚಲ ಮರಗಳ ವಿಸ್ತಾರ ಭೂಮಿಯನ್ನು ದಾಟಿದ ಮೇಲೆ ದಟ್ಟ ಕಾಡಿನ ಅಂಚೊಂದು ಎದುರುಗೊಂಡು ಅಲ್ಲಿ ಹಳೆ ಪರಿಚಯದ ಎಂಗ್ಟನ ಪರಿವಾರ ಎದುರುಗೊಳ್ಳುತ್ತದೆ. ಆ ರಾತ್ರಿ ಅಲ್ಲಿಯೆ ಉಳಿದು ಫೈರ್ ಕ್ಯಾಂಪ್ ಹಾಕಿ ಈಡಿಗೆ ಗುರಿಯಾದ ಕಾಡುಕೋಳಿಯನ್ನೆ ಹದವಾಗಿ ಬೇಯಿಸಿ ರಾತ್ರಿ ಊಟಕ್ಕೆ ಸಿದ್ಧಪಡಿಸಿ ತಿಂದು ಮಲಗುತ್ತಾರೆ.
ಮಹಾಮಲೆಯ ತೀರದಲ್ಲಿ ಬಿಡಾರ ಹೂಡಿದ ಈ ಹಿಂಡು ಮಾರನೆ ದಿನ ಎದ್ದಾಗ ಶುದ್ಧ ಕಾಡ್ಬೆಳಗು! ಅಗಾಧ ಕಾಂಡಗಳು ಅಸಂಖ್ಯಾ ಎಲೆಹೂಗಳು ಅನಂತ ಹಸಿರು ಎಲ್ಲೆಂದರಲ್ಲಿ ಬೆಳೆದ ಆರ್ಕಿಡ್ ಗಳು , ನೂರಾರು ತರದ ಹಾಸುಂಬೆ ಪಾಚಿಗಳು , ಅನೇಕ ರೀತಿಯ ಫರ್ನ್ ಗಳು , ಗುಮ್ಮಾಡಲು ಹಕ್ಕಿಗಳು , ಕಾಡುಕೋಳಿಗಳು , ಓತಿ - ಹಾವುರಾಣಿಗಳು , ನೆಲದಲ್ಲಿ ತೆಳ್ಳಗೆ ಹಾಸಿದ ಗುರುಗಿ ಹಳು ಸಸ್ಯ ಸಂಪತ್ತು! ಮರವೇರುವ ಎರೆಹುಳು, ಕಾಂಡಗಳಿಗಂಟಿದ ಅಣಬೆಗಳು , ಅಲ್ಲಲ್ಲಿ ಹರಿದು ಬರುವ ಜರಿ ನೀರಿನಿಂದಾವೃತವಾದ ಕೊಳ ಅದರಲ್ಲಿಯ ಮೀನು , ಅಲ್ಲಲ್ಲಿ ಗೂಡು ಕಟ್ಟಿದ ಜೇನು ಎಲ್ಲವೂ ತಮ್ಮ ರೂಪ ವರ್ಣ ವೈವಿಧ್ಯಗಳಿಂದ ಕರ್ವಾಲೊ ಮತ್ತು ಸಂಗಡಿಗರನ್ನು ತಲ್ಲೀನಗೊಳಿಸಿಬಿಡುತ್ತವೆ! ಈ ಹಾರುವ ಕೋತಿಯ ಆಹಾರ ಕ್ರಮ , ಅದರ ಹೆಜ್ಜೆ ಗುರುತು , ಅದು ನೀರು ಕುಡಿಯುವ ಜಾಗ , ಅದು ಸಂತಾನ ವೃದ್ಧಿ ಮಾಡುವ ವಿಧಾನ ಎಲ್ಲದರ ಬಗ್ಗೆ ಅಜ್ಞಾನ ಇದ್ದೂ ಅದರ ಅನ್ವೇಷಣೆಯಲ್ಲಿ ತೊಡಗಿದ್ದು ವಿಶೇಷ ಹುಚ್ಚುತನ!
ಈ ಮನ್ವಂತರದಾಚೆಯ ಓತಿಕ್ಯಾತಗಳ ಜಾಡು ಹಿಡಿದು ಹೊರಟಾಗ ಲೇಖಕರ ಅಂತರಂಗದಲ್ಲಿ ಅನಂತ ಪ್ರಶ್ನೆಗಳ ಗೊಂಚಲು ಬಿಚ್ಚಿಕೊಂಡಿತು. ಅಷ್ಟೆ ಪ್ರಮಾಣದ ವಿಪರೀತ ಕೂತೂಹಲ ಕೆರಳಿಸಿದ್ದು ಸಹ ವಿಶೇಷವೆ! “ದೇವರಿದ್ದಾನೆ ಅನ್ನೋದಕ್ಕೆ ಒಬ್ಬ ಆಸ್ತಿಕ ಏನೇನು ಉದಾಹರಣೆ ಕೊಡ್ತಾನೋ ಅದನ್ನೆ ಒಬ್ಬ ನಾಸ್ತಿಕನೂ ತನ್ನ ವಾದಕ್ಕೆ ಉಪಯೋಗಿಸುತ್ತಾನೆ. ಆದ್ದರಿಂದ ಉದಾಹರಣೆಗಷ್ಟೇ ಸತ್ಯ. ಅವುಗಳನ್ನು ಉಪಯೋಗಿಸಿಕೊಂಡು ಮಾಡುವ ತಿರ್ಮಾನಗಳೆಲ್ಲಾ ಭ್ರಾಂತಿ” ನಡುನಡುವೆ ಕರ್ವಾಲೊ ಅವರ ಇಂತಹ ಫಿಲಾಸಫಿ ಇಷ್ಟವಾಗಿಬಿಡುತ್ತವೆ.
ಗಡತ್ತಾದ ನಿದ್ದೆಯಿಂದ ಎದ್ದಾಗ ತರಗೆಲೆಗಳು ಬೀಳುವ ಸದ್ದು. ಚಗುಳಿ ಇರುವೆ ಗೂಡಿನ ಪಕ್ಕದಲ್ಲಿ ಹಾರುವ ಓತಿಕೇತ. ಲೇಖಕರು ಇಲ್ಲಿ ಅನುಭವಿಸುವ ಅನುಭವ ಪ್ರತಿಯೊಬ್ಬ ಓದುಗನು ಈ ಹಾರುವ ಓತಿಕೇತದ ಬೆನ್ನು ಹತ್ತಿ ಒಂದೊಂದು ಕ್ಷಣಕ್ಕೂ ಒಂದೊಂದು ಪಾತ್ರದೊಳ ಹೊಕ್ಕು ಪ್ರಪಾತದ ತುದಿಯಲ್ಲಿ ನಿಂತು ಅವಕಾಶ ಒಂದಕ್ಕೆ ಕಾಯ್ದಷ್ಟು ತಿವ್ರತೆಯಿಂದ ಓದುತ್ತಾ ಹೋಗುತ್ತಾನೆ. ದೃಷ್ಟಿ ನೆಟ್ಟ ಕಣ್ಣುಗಳು ಪುಟದ ಆಚೀಚೆ ಅಲುಗಾಡದಂತೆ ತಟಸ್ಥವಾಗಿ ಸಾಲುಗಳನ್ನೆ ಓದಿಸುವ ಭಾರಿ ಕೌತುಕದ ಅನ್ವೇಷಣಾ ಮನಸ್ಥಿತಿಯನ್ನು ಸೃಷ್ಟಿಸುವ ಕತೆ ಇಲ್ಲಿ ಹೆಣೆದುಕೊಂಡು ಸಾಗುತ್ತದೆ. ಜೀವ ವಿಕಾಸ ಪಥದಲ್ಲಿ ಅನಂತ ಬದಲಾವಣೆಗಳಾಗುತ್ತಲೆ ಇರುತ್ತವೆ. ಇದೊಂಥರಾ ಚಿದಂಬರ ರಹಸ್ಯ. ಮೂಳೆ ಚೂರುಗಳು, ಶಿಲಾಪದರೊಳಗೆ ಬೆಚ್ಚಗೆ ಮಲಗಿದ ಪಳಿಯುಳಿಕೆಗಳು, ತದ್ರೂಪಿ ಜೀವಂತ ಜೀವಗಳು, ಅವುಗಳ ಜೀವನ ಕ್ರಮ - ಸಂತಾನ, ಕಾರ್ಬನ್ ಟೆಸ್ಟ್ ಗಳು ಎಲ್ಲವನ್ನು ಇಟ್ಟುಕೊಂಡು ಕರಾರುವಾಕ್ಕಿಗಿ ಹೇಳಬೇಕೆನ್ನುವ ವಿಜ್ಞಾನಿಯ ಕುತೂಹಲ ಓದುಗರಲ್ಲಿ ಒಂದು ಸತ್ಯಾನ್ವೇಷಣೆಯ ಭಾವವನ್ನು ಹುಟ್ಟು ಹಾಕಿಬಿಡುತ್ತದೆ.
ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ