Article

ಹತ್ತಾರು ವರ್ಷಗಳು ಕತೆ ಬರೆಯದೇ ಇದ್ದದ್ದು ಅಕ್ಷಮ್ಯ

ಸತೀಶ್ ಚಪ್ಪರಿಕೆ ಅವರ ’ವರ್ಜಿನ್ ಮೊಹಿತೊ’ ಕತಾ ಸಂಕಲನದ ಕತೆಗಳನ್ನು ಓದಿ ಮುಗಿಸಿದೆ. ಅವರು ಹಿರಿಯ ಪರ್ತಕರ್ತರೆಂದು ಮುನ್ನುಡಿ , ಬೆನ್ನುಡಿ ಓದಿದಾಗ ಅನ್ನಿಸಿದ್ದರಿಂದ ಇವು ಯಾವ ಕಾಲದ ಕತೆಗಳಿರಬಹುದು ಎಂಬ ಕುತೂಹಲ ನನಗಿತ್ತು. ಇವೆಲ್ಲವೂ ಭೂತದ ನೆನಪುಗಳನ್ನು , ಘಟನಾವಳಿಗಳನ್ನು ಹೊಂದಿರುವ ವರ್ತಮಾನದ ಕತೆಗಳು ಎಂಬುದು ನನಗೆ ಒಂದೊಂದೇ ಕತೆಯನ್ನು ಓದುತ್ತಾ ಮನದಟ್ಟಾಯಿತು. ಹಾಗಾಗಿಯೇ ನಾನು ಎಲ್ಲ ಕತೆಗಳನ್ನು ಓದಲು ಸಾಧ್ಯವಾಯಿತು. ಪ್ರತಿ ಕತೆಯ ಬಗ್ಗೆ ನೀವು ಇತರ ಕತೆಗಾರರಿಂದ ಬರೆಸಿರುವುದನ್ನು ನಾನು ಮೊದಲ ಓದಲಿಲ್ಲ. ಇದರಿಂದ ಕತೆ ನನಗೆ ದಕ್ಕುವ ರೀತಿ ಬದಲಾದೀತು ಎಂಬ ನಂಬಿಕೆ ನನ್ನದು. ಎಲ್ಲ ಕತೆಗಳನ್ನು ಓದಿಯಾದ ಮೇಲೆ ಅವುಗಳನ್ನು ಓದಿದೆ.

ಶೀರ್ಷಿಕೆಯ ಕತೆ ’ವರ್ಜಿನ್ ಮೊಹಿತೊ’ ಅರಸ್ಟೋಕ್ರಟಿಕ್ ಕುಟುಂಬಗಳಲ್ಲಿ ಮದುವೆ ಸಂಬಂಧಗಳನ್ನು ಸೇರಿಸುವ ಬಗೆಯನ್ನು ಚೆನ್ನಾಗಿ ಹೇಳಿದ್ದೀರಿ. ಹಾಗೂ ನೇರವಂತಿಕೆ ಎಂಬುದು ವರವೋ ? ಶಾಪವೋ ? ಹಾಗಾದರೆ ಈ ಜಗತ್ತಿನಲ್ಲಿ ಎಲ್ಲ ಮದುವೆಗಳು ವರ್ಜಿನಿಟಿಯನ್ನು ಪರೀಕ್ಷಿಸುತ್ತಾ ಕೂರಲಾದೀತೆ? ಎಂಬ ಸಂಶಯದೊಂದಿಗೆ ಕತೆ ಮುಕ್ತಾಯವಾಗುತ್ತದೆ.

’ಬೊಂಬಾಯಿ ಪೆಟ್ಟಿ’ಗೆ ಕತೆ ನನಗೆ ತುಂಬಾ ಹಿಡಿಸಿತು. ವರದಿಯಾಗಬಹುದಾದ್ದನ್ನು ಕತೆಯಾಗಿಸಿರುವ ತಂತ್ರ ಅಲ್ಲಿಯೂ ' ನೆನಪು'.

ಇನ್ನು ’ಮೂರು ಮುಖಗಳ” ಕತೆಗೆ ನೀವು ' ಆರು ಮುಖಗಳು' ಎಂದೂ ಶೀರ್ಷಿಕೆ ನೀಡಬಹುದಿತ್ತು. ಈ ಮೂರು ಮುಖಗಳ ಮನೋವ್ಯಾಕುಲತೆಗೆ ಕಾರಣವಾದ ಆ ಮೂರು ಮುಖಗಳೂ ಇವೆಯಲ್ಲವೆ ಅದಕ್ಕೆ ಹಾಗೆ ಹೇಳಿದೆ ಅಷ್ಟೆ. ಈ ಕತೆಯನ್ನು ಮಾತ್ರ ನೀವು ಉದ್ದೇಶಪೂರ್ವಕವಾಗಿ ಹಾಗೆಯೇ ಬರಬೇಕೆಂದು ಹೆಣೆದಿರುವುದು ಎಂಬುದು ನನ್ನ ಅನಿಸಿಕೆ. ಕತೆಗಳು ಹಾಗೆಯೇ ಇರಬೇಕು ಎಂದು ನಾನು ಒಪ್ಪಿಕೊಳ್ಳುತ್ತೇನೆ‌.

’ಕಾಣದ ಕೈಗಳ ಆ” ಕತೆಯಲ್ಲಿ ವೃತ್ತಿಪರತೆ ಮತ್ತು ಭೂತದ ಕಹಿ ಘಟನೆಯ ಸೇಡಿನ ನಡುವೆ ಘರ್ಷಣೆ ತಂದು ಮತ್ತಷ್ಟು ಮಾನವೀಯ ನೆಲೆಯನ್ನು ಕತೆಗೆ ಕೊಡುವ ನಿಮ್ಮ ನಿರೂಪಣೆ ಶ್ಲಾಘನೀಯವಾದುದು.

'ಹೈಡ್ ಪಾರ್ಕ್' ನನಗೆ ತುಂಬಾ ಇಷ್ಟವಾದ ಕತೆ. ದೇಹಗಳು ಸೆಣಸಿ , ಸುಖಿಸಿದ ಮೇಲೂ ಉಳಿಯುವ ತೀವ್ರವಾದ ಭಾವ ವೇ ಪ್ರೇಮ. ಅದಕ್ಕೆ ವಯಸ್ಸಿನ ಅಂತರವಿಲ್ಲ ಎಂಬುದನ್ನು ಹೇಳುವ ಕತೆ ಇದು.

’ದಾಸ’ ಕತೆಯಲ್ಲಿನ ಮನುಷ್ಯತ್ವಾರೋಹಣ ಹಾಗೂ ’ಗರ್ಭ’ ಕತೆಯಲ್ಲಿನ ಅಮ್ಮನ ಕಳೆದುಕೊಳ್ಳುವ ಭಯ ನಿಮ್ಮ ಯೋಚನಾಲಹರಿಯ ದಿಕ್ಕನ್ನು ಸೂಚಿಸುತ್ತವೆ.

ಒಟ್ಟಾರೆ ಸತೀಶ್ ಚಪ್ಪರಿಕೆ ಕತೆಗಳಲ್ಲಿ ಕಾಡುವ , ಭಾವ ತೀವ್ರತೆಯ ಸಂದಿಗ್ಧವೊಂದು ಸೃಷ್ಟಿಯಾಗುತ್ತಾದರೂ ಅದನ್ನು ಅವರು ಸುಖಾಂತ್ಯಕ್ಕೆ ಸೇರಿಸುತ್ತಾರೆ. ಅದು ಅವರ ಪ್ರಜ್ಞಾಪೂರ್ವಕವಾದ ನಿಲುವಾಗಿದ್ದರೆ ಆ ವ್ಯಕ್ತಿಯ ಸದಾಶಯವನ್ನು ಸೂಚಿಸುತ್ತದೆ. ವಿವೇಕ ಶಾನುಭಾಗ ಅವರು ಗುರುತಿಸಿರುವಂತೆ ನಿರೂಪಕ ತಾಯಿಯ ಸಾವನ್ನು ಸ್ವೀಕರಿಸಲು ಸಿದ್ಧನಿರಲಿಲ್ಲವೆ ? ಎಂಬ ಪ್ರಶ್ನೆ ನನಗೂ ಕಾಡಿತು. ಆದರೆ ನಾನು ವಿಮರ್ಶಕನಲ್ಲ. ನನಗೆ ಯಾವ ಕತೆಗಳು ಪೂರ್ತಿಯಾಗಿ ಓದಿಸಿಕೊಳ್ಳುತ್ತವೆಯೋ ಆ ಎಲ್ಲ ಕತೆಗಳೂ ಇಷ್ಟವೆ. ಆಮೇಲೆ ಹೇಳೋದೆಲ್ಲ ಬುದ್ದಿವಂತಿಕೆಯ ಮಾತುಗಳು ಮಾತ್ರ ಎಂಬುದು ನನಗರಿವಿದೆ. ಸತೀಶ್ ಚಪ್ಪರಿಕೆ ಅವರ ಎಲ್ಲ ಕತೆಗಳು ಓದುಗರಲ್ಲಿ ಒಂದಷ್ಟು ನೆನಪುಗಳಿಗೆ Revisit ಮಾಡುವಂತೆ ಮಾಡುತ್ತವೆ. ಅದೇ ಅಲ್ಲವೆ ಓದುಗನೊಂದಿಗೆ ಕನೆಕ್ಟ್ ಮಾಡಿಕೊಳ್ಳುವುದೆಂದರೆ...

ಅವರು ಹತ್ತಾರು ವರ್ಷಗಳ ಕಾಲ ಕತೆ ಬರೆಯದೆ ಇದ್ದದ್ದನ್ನು ನಾನು ಅಕ್ಷಮ್ಯವೆಂದೇ ಭಾವಿಸುತ್ತೇನೆ. ಇನ್ನು ಅಂಥ ತಪ್ಪು ಮಾಡಬಾರದೆಂದು ವಿನಮ್ರವಾಗಿ ತಾಕೀತು ಮಾಡುತ್ತೇನೆ...

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಡಿ

ಶಿವಕುಮಾರ್‌ ಮಾವಲಿ