Article

ಬದುಕು ಪರಿಚಯಿಸಿದ ವಸಂತ....

ನಮ್ಮ ಮೊಬೈಲ್ ಒಳಗಿನ ಕೆಲವೊಂದು ಹಾಡುಗಳು, ಕೆಲವೊಂದು ಸಿನಿಮಾಗಳನ್ನು ನಾವು ಡಿಲಿಟ್ ಮಾಡುವುದೇ ಇಲ್ಲ. ಕಾರಣ ಅವುಗಳ ಜೊತೆ ನಮಗಿರುವ ತೀರಾ ಹತ್ತಿರದ ಭಾದ್ಯವೆ. ಪದೇ ಪದೇ ಅದೆ ಹಾಡನ್ನೋ ಅಥವಾ ಅದೆ ಸಿನಿಮಾನೋ ಕೇಳೋದು, ನೋಡೋದು ಮಾಡತ್ತೀವಿ. ಅದೆ ರೀತಿ ನಮ್ಮ ಸ್ವಂತದ ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ಇದ್ದರೂ ಸಹ ಕೆಲವೊಂದು ಪುಸ್ತಕಗಳು ನಮಗೆ ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸಿತ್ತವೆ. ಅಂತಹ ಪ್ರೇರೇಪಿಸಿದ ಪುಸ್ತಕ ವೆಂದರೆ ವೀರಣ್ಣ ಮಡಿವಾಳರ ಖಂಡಕಾವ್ಯವಾದ 'ಎಲ್ಲೋ ಹಾಳಾಗಿ ಹೋಗಿದ್ದಾನೆ ವಂಸತ'.

ಮೊನ್ನೆ ಸುಮ್ಮನೆ ಫೇಸ್ಬುಕ್ ನಲ್ಲಿ ಈ ಪುಸ್ತಕದ ಒಂದು ಪೋಟೋ ಶೇರ ಮಾಡಿದ್ದೆ. ತಕ್ಷಣ ಮಡಿವಾಳ ಸರ್ ಅದಕ್ಕೆ ಕಮೆಂಟ್ ಮಾಡಿದ್ರೂ. ಇದು ಬಿಡುಗಡೆ ಆಗಿ ಏಳು ವರ್ಷ ಸಂಧಿವೆ ಆದರೂ ಇದನ್ನು ಪ್ರೀತಿಯಿಂದ ಓಥಾ ಇದ್ದಿರಲ್ಲ ಅಂತ. ನಿಜ ಇದು ಬಿಡುಗಡೆಗೊಂಡು ಏಳು ವರ್ಷಗಳೆ ಆಗಿವೆ. ಆದರೆ ನನ್ನ ಕೈಗೆ ಬಂದು ಎರಡು ವರ್ಷ ಆಗಿತ್ತು. ಆಗೊಮ್ಮೆ ಈಗೊಮ್ಮೆ ಅಂತ ಸುಮ್ಮನೆ ಅವಾಗ ಅವಾಗಾ ಕಣ್ಣಾಡಿಸ್ತಾ ಇದ್ದೆ.

ನನಗೆ ಸಾಮಾನ್ಯವಾಗಿ ಈ ಪ್ರಯಾಣ ಮಾಡುವಾಗ ಯಾವುದಾದರೊಂದು ಕೃತಿ ಓದುವ ಹುಚ್ಚು. ಮೊನ್ನೆ ಬೆಳಗಾವಿಗೆ ಹೋಗತ್ತಾ ಇದ್ದಾಗ, ಇರಲಿ ಅಂತ ಕೀರ್ತಿನಾಥ ಕುರ್ತಕೋಟಿ ರವರ 'ರೊಮ್ಯಾಂಟಿಸಿಜಮ್' ಮತ್ತು ಈ 'ವಸಂತ'ನನ್ನು ಜೊತೆಗೆ ಕರೆದುಕೊಂಡು ಹೋಗಿದ್ದೆ. 'ರೊಮ್ಯಾಂಟಿಸಿಜಮ್' ಇನ್ನೂ ಸ್ವಲ್ಪ ಇದ್ದ ಕಾರಣ ಅದನ್ನು ಓಥಾ ಇದ್ದೆ. ಪಕ್ಷದಲ್ಲಿ ಇದ್ದ ಒಬ್ಬ ವ್ಯಕ್ತಿ ನನ್ನೇ ನೋಡಿತ್ತಾ ಇದ್ದ. ಅವನಿಗೂ ಓದಬೇಕು ಅಂತ ಅನಸ್ತಿರಬೇಕು ಅಂತ ತಿಳಿದು 'ವಸಂತ'ನ ಹೊರತೆಗೆದು, 'ತೊಗೋಳಿ ಸರ್ ಓದಿ' ಅಂತ ಕೊಟ್ಟೆ. ಆ ವ್ಯಕ್ತಿ ಮುನ್ನುಡಿ-ಬೆನ್ನುಡಿ ಓದಿದ ಮೇಲೆ, ಬುಕ್ ಕೊಟ್ಟು 'ಸರ್ ಭಾರೀ ಮಸ್ತ ಅದ ರೀ' ಅಂದ. ನನಗ ಪೂರ್ತಿ ಓದಸೋ ತಕ ಸಮಾಧಾನ ಆಗಲ್ಲ. 'ಸರ್ ಒಳಗ ನೋಡ್ರೀ ಇನ್ನೂ ಮಸ್ತ ಅದ' ಅಂತ ಹೇಳಿದಾಗ, ಕೆಲವಿಷ್ಟು  ಪುಟಗಳನ್ನು ತಿರುವಿದ. ಪುಸ್ತಕ ಕೊಟ್ಟು 'ಏನ್ ಸರ್ ಇವರು ಎಷ್ಟ ಚಂದ ಬರಿತ್ತಾರ ರೀ ಇವರು' ಅಂದ. 'ಹೌದು ಸರ್ ಬಾಳ ಚಂದ ಬರಿತ್ತಾರ ರೀ ಅವರು, ಬಹಳ ಒಳ್ಳೆಯ ಬರಹಗಾರರು' ಅಂತ ಹೇಳತ್ತಾ ಮಡಿವಾಳ ಸರ್ ಬಗ್ಗೆ ಅವರ ಕೃತಿಯ ಬಗ್ಗೆ ಮಾತಾಡ್ತಾ ಕುಂತ್ವಿ. ಯರಗಟ್ಟಿಗಿ ಇಳದು, 'ತುಂಬಾ ಥ್ಯಾಂಕ್ಸ್ ರೀ ಸರ್' ಅಂತ ಹೇಳಿ ಹೋದ.

ಯಾಕೋ ನನಗೆ ಇದೊಂದು ಚಟಾ ನನಗ ಇಷ್ಟಾ ಆದ ಪುಸ್ತಕಗಳನ್ನು ನನ್ನ ಸುತ್ತ ಇರೋ ಒಂದ ನಾಲ್ಕು ಜನ ಓದಿ, ಖುಷಿ ಪಡಬೇಕು. ಅದರ ಕುರಿತು ಒಳ್ಳೆಯ ಅಭಿಪ್ರಾಯ ಹೇಳಿದರೆ, ಆ ಪುಸ್ತಕ ಓದಿದ ಓದಿಸಿದ ಹೆಮ್ಮೆ ನನ್ನದಾಗುತ್ತದೆ. ಆ ಪುಸ್ತಕದ ಕುರಿತು ಒಂದ ಸ್ವಲ್ಪ ಹೊತ್ತು ಅವರ ಜೊತೆ ಚರ್ಚೆ ಮಾಡಿದಾಗಲೇ ಮನಸ್ಸಿಗೆ ಒಂಥರಾ ಆನಂದ.

ನಾನು ಯಾವುದಾದರೊಂದು ಪುಸ್ತಕ ಓದುವಾಗ ಕೈಯೊಳಗ ಒಂದ ಪೆನ್ಸಿಲ್ ಹಿಡಕೊಂಡು, ಮನಸ್ಸಿಗೆ ಇಷ್ಟಾ ಆಗೋ ಸಾಲುಗಳೋ ಅಥವಾ ಪದಗಳ ಕೆಳಗೆ ಗೇರೆ ಹಾಕೋದು ನನ್ನ ಹವ್ಯಾಸ. ಆದರೆ ಈ ಖಂಡಕಾವ್ಯ ಓದುವಾಗ ಇಡೀ ಪುಸ್ತಕಕ್ಕೆ ಗೇರೆ ಹಾಕ್ಲಾ ಅನ್ನೋ ಫೀಲ್....! ಆಯಿತು. ಇಲ್ಲಿನ ಪ್ರತಿಯೊಂದು ಸಾಲುಗಳು, ಪದಗಳಿಗೆ ವ್ಹಾ...! ಎನ್ನಲೇ ಬೇಕು. ಅಂತಹ ಸಾಲುಗಳು ಈ ಖಂಡಕಾವ್ಯ ಹೊಂದಿದೆ.

ಬುದ್ಧನಿಗೆ ವಂದಿಸುವ ಮೂಲಕ ಪ್ರಾರಂಭವಾಗುವ ಈ ಕಾವ್ಯ ಹಲವಾರು ವಿಷಯಗಳನ್ನು ಇದು ಒಳಗೊಂಡಿದೆ. ಹಸಿವು-ನೀರಡಿಕೆ, ಪರಿಸರ-ಸಂಬಂಧ, ಪ್ರೀತಿ-ಪ್ರೇಮ, ನಗು-ಅಳು ಅಬ್ಬಬ್ಬಾ ಒಂದೋ ಎರಡೋ.

ಈ ಹಾಳು ಮಣ್ಣಿನಲ್ಲಿ

ಶತಶತಮಾನದಿಂದಲೂ ನಗು

ಬೆಳೆಯುತ್ತಿಲ್ಲ.

 

                 *****

 

ಹೂ ಬನಕೆಲ್ಲ

ಬೆಂಕಿ ಬಿದ್ದೀತೆಂದು

ಯಾರು ತಾನೆ ತಿಳಿದಾರು

ಮೈಯೆಲ್ಲ ನಗುವ ಹೊದ್ದವರು

 

                *****

 

ಯಾರಿಗೂ ಕಾಣದಂತೆ ಇಲ್ಲಿ

ಎಲ್ಲರೂ

ಅಳುವಿನ ಬಂಡೆ ಹೊತ್ತಿದ್ದಾರೆ

ನಡೆಯುತ್ತಿದ್ದಾರೆ ಯಾರಿಗೂ ಕಾಣದ ಜಾಗಕ್ಕೆ 

ಅಂಗಾಂಗಗನೆಲ್ಲ ಚಾಳವಾಗಿಸಿಕೊಂಡು

ಕಟೆದು ಕಟದು ಕೆತ್ತುತ್ತಲೇ ಇದ್ದಾರೆ

ನಗುವ ತಮ್ಮದೇ ಮೂರ್ತಿಯ

ದುಃಖದ ಕಪ್ಪುಬಂಡೆ ಕರಗಿದಂತೆಲ್ಲ

ಸೋತ ಕೈಗಳು ಮುಗಿಯುತ್ತವೆ

ನಗುವಿನ ಶಿಲೆಯೂ ಅಳತೊಡಗುತ್ತದೆ

 

ನಾವು ನಗುವನ್ನು ಸಹ ಮಾರಾಟಕ್ಕಿಟ್ಟಿದ್ದೇವೆ. ಮನಸ್ಸು ಬಿಚ್ಚಿ ನಗಲು ಹಿಂದೆ-ಮುಂದೆ ನೋಡೋ ವ್ಯವಸ್ಥೆಯಲ್ಲಿ ನಾವೀಗ ಬದುಕುತ್ತಿದ್ದೇವೆ. ನಗುವಿನ ಮುಖವಾಡ ಹೊತ್ತು ಬದುಕಿನ ಬಂಡೆ ಓಡಸ್ತಾ ಇದ್ದೇವೆ.

'ಶಿವರಾತ್ರಿ ಮುಗದ್ರ ಶಿವಾ... ಶಿವಾ... ಅನಬೇಕ ಹಂತಾ ಬಿಸಿಲ ನೋಡ' ಅಂತ ನಮ್ಮ ಅಮ್ಮ (ಅಜ್ಜಿ) ಹೇಳತ್ತಾಳ. ಈ ಬಿಸಿಲ ಅಂದ ತಕ್ಷಣ ನಮಗೆ ನೆನಪಿಗೆ ಬರೋದೆ ತಂಪಾದ ನೆರಳು, ತಣ್ಣನೆಯ ನೀರು. ಇವು ನಮಗ ಹೆಂಗೋ ಸಿಗತ್ತಾವು. ಆದರೆ ಪ್ರಾಣಿ-ಪಕ್ಷಿಗಳಿಗೆ....? 

    

ಬೀದಿಯಲ್ಲಿ

ಬಾಯಾರಿ ಬಿದ್ದ ಗುಬ್ಬಿ

ಅಲವತ್ತುಕೊಳ್ಳುತ್ತಿದೆ

ಮುದ್ದು ಕಾಗೆ

ಹನಿ ನೀರು ನೀಡಿ

ನೀಗು ಬೇಗ

 

    *****

 

ಭಿಕ್ಷಾಪಾತ್ರೆ ಅಳುತ್ತಿದೆ

ಬಿಸಿಲಿನ ಬೇಗೆಗೆ

ಹಿಡಿದು ಹೊರಟ

ಕೈಗಳ ಕತೆ ಏನು

 

ಬಾಯಾರಿದ ಗುಬ್ಬಿ-ಕಾಗೆಗೆ ಹಿಡಿ ಕಾಳು, ಒಂದು ಹನಿ ನೀರು ಹಾಕ್ರೀ. ಹಸಿದು ಬಂದವರಿಗೆ ಒಂದ ತುತ್ತು ಅನ್ನ ನೀಡ್ರೀ ಅಂತ ವೀರಣ್ಣ ರವರು ಎಷ್ಟು ಮರುಗಿ ಹೇಳತ್ತಾ ಇದ್ದಾರೆ ನೋಡಿ. ಆ ಕಳಕಳಿ ಎಲ್ಲರಿಗೂ ಬರುವಂತಾಗಬೇಕು.

 

ನಾನು ಲಂಕೇಶರನ್ನೋ, ದೇವನೂರನ್ನೋ ಓದುವಾಗ ಒಂದೇ ಸಾಲನ್ನು ಪದೇ ಪದೇ ಓದುತ್ತೇನೆ. ಈಗೀಗ ಚಾಂದ ಪಾಷ ಮತ್ತು ಮಡಿವಾಳರು ಬರೆಯುವ ಸಾಲುಗಳು ಮತ್ತೆ ಮತ್ತೆ ಓದಿಸಿಕೊಂಡು ಹೋಗುತ್ತವೆ. ನನಗೆ ಇಡೀ ಕಾವ್ಯದ ತುಂಬಾ ಹಿಡಿದು ನಿಲ್ಲಿಸಿದ್ದು, ಹಗಲೇ-ಮುಗಲೇ ಓದುವಂತೆ ಮಾಡಿದ ಹಲವಾರು ಸಾಲುಗಳಿವೆ ನಿಜಾ. ಆದರೆ ಈ ಮೂರು ಸಾಲುಗಳು ಯಾಕೋ ಓದುತ್ತಲೇ ಇರಬೇಕು ಅನ್ನುವಷ್ಟು ಆಪ್ತವಾಗಿವೆ.

 

ಅವ್ವ

ಬಾಯಿತುಂಬ

ದುಃಖದ ಪದ ಹೇಳುವಾಗ

ನನಗೆ ಬೇರೆ ಏನೂ ಕೇಳಿಸಲಿಲ್ಲ

 

           *****

 

ಆನೆ ಬೆಳೆದಿವೆ ಚೈತ್ರ

ಅಂಗಾಲ ತುಂಬ ದಡ್ಡು ಬಿದ್ದು

ಈ ಮಿದು ಹೃದಯವೀಗ ಕಲ್ಲುಗುಡ್ಡ

ನೋಡು ಆ ಹಂಪಿ ಈ ಪಟ್ಟದ ಕಲ್ಲು

ಬದಾಮಿಯೋ ಬನಶಂಕರಿಯೋ

ಹಳೇಬೀಡು ಬೇಲೂರು

ಎಲ್ಲವೂ ಅಷ್ಟೇ

ಬದುಕಿನ ತಾಪದಲ್ಲಿ ಬೆಂದು ಗಟ್ಟಿಯಾದ

ಆತ್ಮಗಳ ಬಂಡೆ

ಕಟೆದು ಕಟೆದು ಶಿಲ್ಪವಾಗಿಸಿದ್ದಾರೆ

ನಮ್ಮದೇ ಪಿತಾಮಹರು

                 ******

ಸುಟ್ಟುಕೊಂಡ ಕೊಳಲು

ಅಳುತ್ತಲೇ ಇದೇ

ಹುಟ್ಟಿದಾಗಿನಿಂದ

ಹಾಡು ಎನ್ನುತ್ತಾರೆ

ಇಂಪು ಎನ್ನುತ್ತಾರೆ

ಗಾಯಕ್ಕೀಗ ಹಲವು ಬಣ್ಣ

ಅಳುವಿನ ಸ್ವರಕ್ಕೂ

ರಾಗಗಳ ಹೆಸರು

ಈ ಖಂಡಕಾವ್ಯದೊಳಗ ಬುದ್ಧ-ಫರೀಪರು ಬರುತ್ತಾರ, ಅವ್ವ ಬರತ್ತಾಳ, ಕಾಗಿ-ಗುಬ್ಬಿ ಬರತ್ತಾವ, ವಿಮಾನ ಜೊತಿ ನೇಗಿಲ ಬರತ್ತೈತಿ, ಸಮುದ್ರದ ಜೊತಿಗಿ ರೈಲು ಸಹ ಬರತ್ತೈತಿ. ಏನೂ ಬರಗಿಲ್ಲ ಅನ್ನುವಂಗ ಇಲ್ಲ. ಅಡಿಗರು ಒಂದು ಪದ್ಯದೊಳಗ ಹೆಂಗ ಇಡೀ ಭೂಮಂಡಲ ತರಸ್ತಾರೋ ಹಂಗ ಮಡಿವಾಳರು ಅನೇಕ ವಸ್ತುಗಳನ್ನ ತೋರಸ್ತಾರ. ವ್ಯಕ್ತಿಗಳ ಜೊತಿ ಮಾತಾಡಸ್ತಾ, ಕಾಗಿ-ಗುಬ್ಬಿಯ ನೋವಿನ ಹಾಡ ಕೇಳಸ್ತಾರ, ಗಿಡ-ಮರದ ತ್ರಾಸ ಕಣ್ಣ ಮುಂದ ತರಸ್ತಾರ ಒಟ್ಟಿನ್ಯಾಗ ಇಡೀ ಕಾವ್ಯ ಮುಗಿಸಿದಾಗ ಏನೋ ಒಂದ ನೋಡಿದ್ಯಾ, ಏನೋ ಒಂದ ಕೇಳಿದ್ಯಾ ಅನ್ನೋ ಅನುಭವ ಆಗತ್ತದ.

ನಾನು ಇದನ್ನ ಓದುವಾಗ ನಕ್ಕ್ಯಾ, ಕ್ಷಣ ಹೊತ್ತ ಮರಗಿದ್ಯಾ. ಹಂಗ ಒಂದೊಳ್ಳೆ ಕಾವ್ಯ ಓದಿದ್ಯಾ ಅಂತ ಹೆಮ್ಮೆಯಿಂದ ನನ್ನ ಬೆನ್ನ ನಾನ್ ಚಪ್ಪರಸ್ಕೊಂಡ್ಯಾ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಂತೇಶ ಹೊದ್ಲೂರ