Article

ಅನಂತಮೂರ್ತಿ ಕಥಾಲೋಕದ ಬೆರಗು `ಐದು ದಶಕದ ಕಥೆಗಳು’

ಕನ್ನಡದ ಮಹತ್ವದ ಬರಹಗಾರ ಯು.ಆರ್.ಅನಂತಮೂರ್ತಿ ನಮ್ಮ ಸಮಕಾಲೀನ ಬೆರಗು. ಮಾತು,ಬರಹ,ಓಡಾಟ,ಜೀವನೋತ್ಸಾಹ,ವಾದ,ವಿವಾದಗಳು. ಅರ್ಹತೆಗೆ ತಕ್ಕಂತೆ ಗೌರವ-ಆದರಗಳು,ಸ್ಥಾನ-ಮಾನಗಳು ಆದರೆ ಇದಾವುದೂ ಪುಕ್ಕಟೆ ದಕ್ಕಿಸಿಕೊಂಡದ್ದಂತೂ ಅಲ್ಲ; ಶ್ರಮವಿದೆ, ಅಷ್ಟೇ ಪ್ರಮಾಣದ ಸಾಮರ್ಥ್ಯವೂ ಇದೆ;ಇತ್ತು.

ಎರಡು ದಶಕಗಳ ಹಿಂದೆ ಹೆಗ್ಗೋಡಿನ ಅಕ್ಷರ ಪ್ರಕಟಿಸಿದ 'ಐದು ದಶಕದ ಕಥೆಗಳು' ಕೈಗೆ ಸಿಕ್ಕಾಗ ಖುಷಿಯಾಯಿತು. ಒಟ್ಟು ಐದುನೂರು ಪುಟಗಳ ತುಂಬ ಆಕರ್ಷಕ ಕಥೆಗಳ ಕಲರವ.

ಲಂಕೇಶ್, ತೇಜಸ್ವಿ ಅವರ ಸಮಕಾಲೀನರಾದ ಅನಂತಮೂರ್ತಿ ಎಲ್ಲರಿಗಿಂತ ಹೆಚ್ಚು ಕಲರ್ ಫುಲ್.‌ ಅವರ ವ್ಯಕ್ತಿತ್ವ, ಆಕರ್ಷಕವಾಗಿ ಮಾತನಾಡುವ ಶೈಲಿ, ವಿದೇಶಿ ಶಿಕ್ಷಣದ ಜೊತೆಗೆ ಮಲೆನಾಡಿನ ಘಮಲು ಬೇರೆ!  ಲಂಕೇಶ್, ತೇಜಸ್ವಿ ಅವರಂತೆ ನೇರಾ ನೇರ ದೇಸಿಯ ಸೊಗಡಿರದಿದ್ದರೂ ಅದೇನೋ ಸೊಗಸು.

ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪಾಠದ ಜೊತೆಗೆ, ಸಕ್ರಿಯ ರಾಜಕಾರಣದ ಒಡನಾಟ, ಜೆ.ಎಚ್.ಪಟೇಲ್, ಶಾಂತವೇರಿ ಗೋಪಾಲಗೌಡರ ಸಾಂಗತ್ಯ, ಲೋಹಿಯಾ ಓದು, ಪ್ರಭುತ್ವದ ವಿರುದ್ಧ ಮಾತನಾಡುವಷ್ಟು ಪ್ರಭುತ್ವದ ಜೊತೆಗೆ, ಅಧಿಕಾರದಲ್ಲಿ ಇರುವವರ ಸಾಮಿಪ್ಯ. ಈ ಸಖ್ಯಗಳ ಆಚೆಗೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಹಿಡಿತ ರಕ್ಷಿಸಿಕೊಂಡು ಬಂದವರು ಅನಂತಮೂರ್ತಿ. ಅವರ ಕೊನೆಯ ದಿನಗಳಲ್ಲಿ ಅವರು ಅನುಭವಿಸಿದ ಅವಮಾನ ನೆನಪಿಸಿಕೊಂಡರೆ ಹಿಂಸೆಯಾಗುತ್ತದೆ.
ಸೈದ್ಧಾಂತಿಕ ವಾದಗಳು ಬೇಡವೇ ಬೇಡ ವಿರೋಧಿಗಳು ಸಾಯಲಿ ಎಂಬ ಹಾದಿ ಹಿಡಿದು ಕೊಲ್ಲುವ ಮಾತಾಡುವ ಕಷ್ಟದ ದಿನಗಳಲ್ಲಿ ಅನಂತಮೂರ್ತಿ ವಿಧಿವಶರಾದರು.  ಈ ತರಹದ ಸೈದ್ಧಾಂತಿಕ ಅನಾರೋಗ್ಯ ಮತ್ತು ಅನಾಗರಿಕತೆ ಸೂಕ್ಷ್ಮ ಮನಸುಗಳ ನೋಯಿಸಿ,ಹಿಂಸಿಸುವ ಪರಿ ಊಹಿಸಲಾಗದು. ಮುಂದೆ ಹೇಗೋ !?

ಇಡೀ ಕನ್ನಡ ಸಾಹಿತ್ಯ ಲೋಕದ ಪ್ರೀತ್ಯಾದರಗಳ ಗಳಿಸಿಕೊಂಡ ಅವರ ಒಟ್ಟು ಕಥೆಗಳು ಓದಿಸಿಕೊಂಡು ಹೋಗುತ್ತವೆ. ಅರವತ್ತೈದು ವರ್ಷಗಳ ಹಿಂದೆ ಬರೆದ ಕಥೆ ಓದುವಾಗ ಅಬ್ಬಾ ! ಅನಿಸದಿರದು. ಅರ್ಧ ಶತಮಾನಗಳ ಸುದೀರ್ಘ ಪಯಣವನ್ನು ಅರ್ಥಪೂರ್ಣವಾಗಿ ಅನುಭವಿಸಿ, ಅಷ್ಟೇ ಅರ್ಥಪೂರ್ಣವಾಗಿ ಕಾಲಕ್ಕೆ ತಕ್ಕಂತೆ ಟ್ರೆಂಡ್ ಗ್ರಹಿಸಿ ಬರೆಯುತ್ತಲೇ ಹೋದ ಅನಂತಮೂರ್ತಿ ಅವರ 'ಕ್ಲಿಪ್ ಜಾಯಿಂಟ್ ' 1964 ರಲ್ಲಿ ಬರೆದ  36 ಪುಟಗಳ ದೀರ್ಘ ಕಥೆ.
ಸಣ್ಣಕಥೆಗಳ ಗಡಿಯಾಚೆ ಬರೆದ ಸಣ್ಣ ಕಾದಂಬರಿಯೂ ಅಲ್ಲದೆ ನೀಳ್ಗತೆಯಿದು. 

ಆರು ದಶಗಳ ಹಿಂದೆ ಯುರೋಪಿಗೆ ಕಾಲಿಟ್ಟ ಭಾರತೀಯ ಮಡಿವಂತ ಮನಸಿನ ತಲ್ಲಣಗಳನ್ನು ರಸವತ್ತಾಗಿ ದಾಖಲಿಸಿದ್ದಾರೆ. ಪೂರ್ವ ಮತ್ತು ಪಶ್ಚಿಮ ಕೇವಲ ಭೌಗೋಳಿಕವಾಗಿ ವಿರುದ್ಧ ದಿಕ್ಕಿನಲ್ಲಿ ಇರದೇ ಸಂಸ್ಕೃತಿ ಮತ್ತು ಜೀವನಶೈಲಿಯಲ್ಲೂ ಅದೇ ವೈರುಧ್ಯ. ನಮ್ಮನ್ನು ದಾಸ ಮುಕ್ತರನ್ನಾಗಿ ಮಾಡಿ ತಮ್ಮ ದೇಶ ಸೇರಿದ ಇಂಗ್ಲಿಷರು ಭಾಷೆಯ ಸೆಳೆತವನ್ನು ಬಿಟ್ಟು ಹೋಗಿದ್ದರು, ಈಗಲೂ ಆ ಸೆಳೆತ ಇದೆ. ವಿದೇಶಕ್ಕೆ ಹೋಗಿ ಓದುವ ಅನುಕೂಲವನ್ನು ತೆರೆದಿಟ್ಟಿದ್ದರು. ಹಾಗೆ ಓದಲು ಹೋದಾಗ ಮಾತೃಭಾಷೆಯಲ್ಲಿ ಬರೆಯುವ ಮಹತ್ವವನ್ನು ಅದೇ ಇಂಗ್ಲಿಷರು ನಮಗೆ ಹೇಳಿಕೊಟ್ಟದ್ದು ಅಷ್ಟೇ ಸೋಜಿಗ. 

ಅನಂತಮೂರ್ತಿ ಕನ್ನಡದಲ್ಲಿ ಬರೆಯುವುದರ ಮೂಲಕ ತಮ್ಮ ಆಪ್ತತೆಯನ್ನು ಕುವೆಂಪು ಅವರಂತೆ ಕಾಪಿಟ್ಟುಕೊಂಡರು. ಬಹುಪಾಲು ಇಂಗ್ಲಿಷ್ ಮೇಷ್ಟ್ರುಗಳು ಕನ್ನಡದ ಆಕರ್ಷಕ ಬರಹಗಾರರಾದರು. ಲಂಕೇಶ್, ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗರು, ಸುಮತೀಂದ್ರ ನಾಡಿಗ, ವಿ.ಕೆ.ಗೋಕಾಕ, ಗಿರಡ್ಡಿ ಗೋವಿಂದರಾಜ, ಚಂದ್ರಶೇಖರ ಪಾಟೀಲ ಹೀಗೆ ನವ್ಯದ ಬಹುಪಾಲು ಬರಹಗಾರರು ಇಂಗ್ಲಿಷ್ ಸಾಹಿತ್ಯದ ವೈಯಕ್ತಿಕ ಆತ್ಮಾವಲೋಕನ ನಿರೂಪಣೆಗೆ ಕನ್ನಡದ ಸೊಗಡ ಪಸರಿಸಿದರು. 

ಮಡಿವಂತ ಬ್ರಾಹ್ಮಣ ಕುಟುಂಬದ ಯುವಕ ಅಧ್ಯಯನ ಮಾಡುವಾಗ ತನ್ನ ಇಂಗ್ಲಿಷ್ ಗೆಳೆಯನನ್ನು ಅಚ್ಚರಿ ಪಡಿಸಲು ಅನೇಕ ಸಂಗತಿಗಳನ್ನು ಹೇಳುತ್ತ ಹೋಗುತ್ತಾನೆ; ಬೆರಗು ಹುಟ್ಟಿಸಬಹುದೆಂಬ ಭರವಸೆಯಿಂದ! ಕೇಶವ ಮತ್ತು ಸ್ಟುವರ್ಟ್ ( ಕತೆಗಾರ ಬರೆದಂತೆ ಸ್ಟುಅರ್ಟ್ ) ಆಪ್ತ ಸ್ನೇಹಿತರು. ಇಂಗ್ಲಿಷ್ ಸಂಸ್ಕೃತಿಯನ್ನು ತುಂಬ ಮುಕ್ತವಾಗಿ, ಪ್ರಾಮಾಣಿಕವಾಗಿ ಪರಿಚಯಿಸುವ ಸ್ಟುವರ್ಟ್ ಕೇಶವನಿಗೆ ಇಷ್ಟವಾಗುತ್ತಾನೆ.  ಭಾರತೀಯ ಯುವಕರ ಬಗ್ಗೆ ರೇಸಿಸಂ ಭಾವನೆ ಹೊಂದಿರದ ಸ್ಟುವರ್ಟ್ ಕೇಶವನ ಸಂಕೋಚ ಮತ್ತು ಪ್ರಾಮಾಣಿಕತೆಯನ್ನು ಇಷ್ಟಪಡುತ್ತಾನೆ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಕುತೂಹಲ ಕೇಶವನಿಗೆ ಇದ್ದುದು ಕೂಡ ಅಷ್ಟೇ ಸಹಜ. ಅಧ್ಯಯನ ಕಾರಣಕ್ಕಾಗಿ ಎಲ್ಲವನ್ನೂ ಅರಿಯುವ ಧಾವಂತ.

ವಯೋಮಾನ ಸಹಜ ಕಾಮ ಕುತೂಹಲ ಕೇವಲ ಆಸಕ್ತಿಯಾಗಿ ಉಳಿಯದೇ ಹದ್ದು ಮೀರಿ ದಾಟುವ ಆತಂಕ ಅನೇಕ ಗೊಂದಲಗಳನ್ನು ಮತ್ತು ಪಾಪ ಪ್ರಜ್ಞೆಯನ್ನು ಹುಟ್ಟು ಹಾಕುತ್ತದೆ. ಅದೂ ಆರು ದಶಕಗಳ ಹಿಂದೆ.  ಈಗ ಬಿಡಿ ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮ ನಡೆ ನುಡಿಯ ಭಾಗವಾಗಿ ಹೋಗಿದೆ. ಹಾಗೆ ಉಂಟಾಗುವ ಅಪರೂಪದ ಅನುಭವಗಳನ್ನು ಬರಹದ ಮೂಲಕ ಹೇಳುವ ದೈರ್ಯದಿಂದಾಗಿ ಅನಂತಮೂರ್ತಿ ಹೆಚ್ಚು ಪ್ರಾಮಾಣಿಕರೆನಿಸಿಕೊಂಡರು. 
ಕ್ಲಿಪ್ ಜಾಯಿಂಟ್ ಆ ಕಾಲದಲ್ಲಿ‌ ಹುಟ್ಟಿಸಿದ ಕಂಪನವನ್ನು ಸರಳವಾಗಿ ಊಹಿಸಿಕೊಳ್ಳಬಹುದು. 

ಕೇಶವ ಕ್ಲಿಪ್ ಜಾಯಿಂಟ್ ಪ್ರದೇಶದಲ್ಲಿ ಅನುಭವಿಸಿದ ಘಟನೆಗಳ ಸುದೀರ್ಘ ವಿವರಣೆ ಕಥೆಯ ಹೆಗ್ಗಳಿಕೆ. ಕಥೆ ಬರೆದ ಕಾಲ,ಸ್ಥಳ ಮತ್ತು ಸಂದರ್ಭ ಊಹಿಸಿಕೊಂಡಾಗ ಕಥೆ ಹೆಚ್ಚು ಪ್ರಸ್ತುತವೆನಿಸಿ ಅನಂತಮೂರ್ತಿ ಅವರ ಪ್ರಾಮಾಣಿಕತೆ ಗ್ರಹಿಕೆಗೆ ಸಿಗುತ್ತದೆ.  ಇಲ್ಲಿ ಒಟ್ಟು ಆರು ಕಥಾ ಸಂಕಲನಗಳು ಸೇರಿಕೊಂಡು ಒಟ್ಟು ಕಥೆಗಳ ಅಧ್ಯಯನಕ್ಕೆ ನೆರವಾಗುತ್ತವೆ.

ಎಂದೆಂದೂ ಮುಗಿಯದ ಕಥೆ (1955)
ಪ್ರಶ್ನೆ ( 1963)
ಮೌನಿ( 1972)
ಆಕಾಶ ಮತ್ತು ಬೆಕ್ಕು ( 1981)
ಸೂರ್ಯನ ಕುದುರೆ( 1995)
ಮತ್ತು 1995 ರ ನಂತರದ ಕಥೆಗಳು.

ಕಥೆಗಳೊಂದಿಗೆ ಅನಂತಮೂರ್ತಿ ಅವರದು ಬಹುಕಾಲದ ಪಯಣ.
ಮೇಲ್ವರ್ಗದ ಶೋಷಣೆ, ಸಾಮಾಜಿಕ ತಾರತಮ್ಯ, ಜಾತಿಯ ಅಟ್ಟಹಾಸ, ರಾಜಕೀಯದ ಒಳಸುಳಿಗಳಂತಹ ಸೂಕ್ಷ್ಮ ಸಂಗತಿಗಳನ್ನು ಮುಕ್ತವಾಗಿ ತಮ್ಮ ಪಾತ್ರಗಳ ಮೂಲಕ ಖಂಡಿಸುತ್ತಾರೆ. ಅವರ ಪ್ರಾಮಾಣಿಕತೆ ಮತ್ತು ಮುಖವಾಡರಹಿತ ಮುಖಗಳಿಂದಾಗಿ ಅವರ ಪಾತ್ರಗಳು ನಮ್ಮ ಜೊತೆಗೆ ಆಪ್ತವಾಗಿ ಸುಳಿದಾಡಿದಂತಾಗುತ್ತವೆ. ಗೋಪಾಲಕೃಷ್ಣ ಅಡಿಗರು ಮತ್ತು ರಾಜೀವ್ ತಾರಾನಾಥರು ಬರೆದ ಮುನ್ನುಡಿಗಳು ಮಹತ್ವಪೂರ್ಣ ಸಾಹಿತ್ಯಿಕ ದಾಖಲೆಗಳು. ಅವು ಕಥೆಗಳ ಆಚೆ ಇರುವ ಸಮಕಾಲೀನ ಬರಹಗಾರರನ್ನು ಗುರುತಿಸಿ ಗೌರವಿಸುವ ರಿವಾಜುಗಳನ್ನು ಹೇಳುತ್ತವೆ. ಇಪ್ಪತ್ತನೆಯ ಶತಮಾನದ ಮಧ್ಯೆ ಕಾಲದ ಸಾಹಿತಿಗಳು ಪೂರ್ವಾಗ್ರಹ ಗುಂಪುಗಾರಿಕೆ ಮತ್ತು ಎಡ-ಬಲ ಸೈದ್ಧಾಂತಿಕ ಗೊಂದಲದಿಂದ ದೂರ ನಿಂತು ಕೃತಿಗಳನ್ನು ಗುರುತಿಸುತ್ತಿದ್ದರು.
ಎರಡು ಸಿದ್ಧಾಂತಗಳ ಕಂದರ ಈಗಿನಂತೆ ಬಿರುಸಾಗಿರಲಿಲ್ಲ.‌

ಹಿರಿಯ ಲೇಖಕರು, ಕಿರಿಯರ ಮೌಲ್ಯವನ್ನು ಮುಕ್ತವಾಗಿ ಗೌರವಿಸಲು ಸಾಂಸ್ಕೃತಿಕ ಅಂತರ ಮತ್ತು ಜನರೇಷನ್ ಗ್ಯಾಪ್ ಎಂಬ ಗೊಣಗಾಟ ಇಟ್ಟುಕೊಂಡಿರಲಿಲ್ಲ ಎಂಬುದಕ್ಕೆ ಇಲ್ಲಿಯ ಮುನ್ನುಡಿಗಳೆ ಸಾಕ್ಷಿ. ಈಗ ನವ್ಯ, ನವ್ಯೋತ್ತರ ಮತ್ತು ಹೊಸ ತಲೆಮಾರಿನ ಬರಹಗಾರರು ವಯೋಮಾನ ಬದಿಗಿರಿಸಿ ನೋಡಿದಾಗ ನಮ್ಮ ಸಮಕಾಲೀನರು ಎಂಬ ಹೆಮ್ಮೆ ನಮ್ಮದು. ನಮ್ಮ ಕಣ್ಣಿಗೆ ಕಂಡ ಇತಿಹಾಸ ಮತ್ತು ವರ್ತಮಾನದ ಯುವಕರು ಕಟ್ಟಿ ಕೊಡುವ ಭವಿಷ್ಯದ ಸಾಕ್ಷಿ ನಾವಾಗಿದ್ದೇವೆ ಎಂಬ ಸಡಗರ ನಮ್ಮದು.

ಸಿದ್ದು ಯಾಪಲಪರವಿ