ಕೇಶವ ಮಳಗಿ ಸರ್ ಅವರ ಎಂಟು ಕತೆಗಳನ್ನು ಒಳಗೊಂಡ 'ಅಕಥ ಕಥಾ' ಎನ್ನುವ ಕಥಾಸಂಕಲನ ಓದಿ ಮುಗಿಸಿದೆ..ಇಲ್ಲಿಯ ಬಹುತೇಕ ಕತೆಗಳು ಕೃಷ್ಣಾ ಮೇಲ್ದಂಡೆ ಪರಿಸರದ್ದಾಗಿವೆ. ಈ ಭಾಗದಲ್ಲಿ ಕೊಡೆಕಲ್ ಬಸವಣ್ಣ, ತಿಂತೂಣಿ ಮೋನಪ್ಪ, ಚಿದಾನಂದಾವಧೂತರಂಥವರು ಆಗಿ ಹೋಗಿದ್ದಾರೆ..ಈ ಕಥಾ ಸಂಕಲನದ ಶೀರ್ಷಿಕೆ ಕಬೀರದಾಸರ ದೋಹಾಗಳಲ್ಲಿ ಬರುವುದೇ ಆಗಿರುವುದು ಆಕಥ ಕಥಾ ಕತೆಯ ಪ್ರಾರಂಭದಲ್ಲಿಯೇ ಬಳಸಿರುವುದರಿಂದ ಇಲ್ಲಿಯ ಕಥೆಗಳು ಶ್ರಮಣ ಪಂಥಗಳು, ಭಕ್ತಿ ಪಂಥಗಳ ಸುತ್ತಮುತ್ತ ಘಟಿಸುತ್ತವೆ...
ರಹಮತ್ ತರೀಕೆರೆ ಸರ್ ಅವರ 'ಕರ್ನಾಟಕದ ಸೂಫಿಗಳು' ಎನ್ನುವ ಪುಸ್ತಕದಲ್ಲಿ ಗೋಗಿಯ 'ಚಂದಾ ಹುಸೇನ್' ಕುರಿತು ಅಧ್ಯಯನ ಮಾಡಲು ಅಮೇರಿಕಾದಿಂದ ಬಂದ 'ಈಟನ್' ಕುರಿತು ಪ್ರಸ್ಥಾಪ ಬರುತ್ತದೆ..ಈಟನ್ ಹಾಗೆ ಬರಲು ಅನೇಕ ಚರ್ಚೆಗಳು ಆ ಪುಸ್ತಕದಲ್ಲಿ ಇದ್ದಾವೆ; ಜೊತೆಗೆ ಶಂಭಾ ಜೋಶಿ, ಕಪಟರಾಳರಂಥ ಬಹುದೊಡ್ಡ ನಾನ್ ಅಕಾಡೆಮಿಕ್ ಸಂಶೋಧಕರ ಕುರಿತೂ ಚರ್ಚಿಸಿದ್ದಾರೆ..ಇಲ್ಲಿ ಅವೆಲ್ಲವೂ ಪ್ರಸ್ಥಾಪ ಮಾಡುವುದಕ್ಕೆ ಹೋಗುವುದಿಲ್ಲ..ಪಾರಂಭದ ಆಕಥ ಕಥೆಯಲ್ಲಿ ಇಲ್ಲಿಯ ಮತ್ತು ಇಲ್ಲಿಯಾಚೆಗಿರುವ ಆರೂಢರು, ಅವಧೂತರು, ನಾಥರು, ಸಿದ್ಧರು, ಸೂಫಿಗಳ ಕುರಿತು ಅಧ್ಯಯನ ಮಾಡಲು ಹೊರದೇಶದಿಂದ ಬಂದ 'ಸಲೋಮಿ ಮೇಹಿಯಾ' ಎನ್ನುವ ಪ್ರಾಧ್ಯಾಪಕಿ ಮತ್ತು ಅವಳ ಸಾಹಯಕ್ಕಾಗಿ 'ಋತುಜ' ಎನ್ನುವ ಕಿರಿಯ ಸಂಶೋಧನಾ ವಿದ್ಯಾರ್ಥಿನಿ, ಇವರ ಸಂಶೋಧನೆ ಸಹಾಯಕ್ಕಾಗಿ ನಿಲ್ಲುವ ಶ್ರಮಣ ಪಂಥಗಳ ಕುರಿತು ಅಪಾರವಾದ ತಿಳುವಳಿಕೆ ಹೊಂದಿರುವ ನಾನ್ ಅಕಾಡೆಮಿಕ್ ಯುವ ಸಂಶೋಧಕರಾದ 'ನಂದ ಕಿಶೋರ್' ಮತ್ತು 'ಪ್ರಮೋದ' ಇವರಿಬ್ಬರೂ ಒಟ್ಟು ಭಾರತವನ್ನು ಸಂಚರಿಸಿ ಶ್ರಮಣ ಪಂಥಗಳ ಪ್ರಾಥಮಿಕ ತಿಳುವಳಿಕೆಯನ್ನು ನೀಡುತ್ತಾರೆ..ಈ ಕತೆಯಲ್ಲಿ ಬಹುಮುಖ್ಯವಾಗಿ ಅಕಾಡೆಮಿಕ್ ಇಂದ ಹೆಚ್ಚಾಗಿ ದೂರುಳಿದ ಶ್ರಮಣ ಪಂಥಗಳು ಮತ್ತು ಅಂಥ ಪಂಥಗಳ ಕುರಿತು ತಿಳಿದುಕೊಂಡವರ ಕುರಿತು ಘಟಿಸುತ್ತದೆ...ಕತೆಯ ವಸ್ತು ಒಂದು ವಿಷಯಕ್ಕೆ ಸಂಬಂಧಿಸಿದ ಕ್ಷೇತ್ರ ಕಾರ್ಯದ ಕುರಿತಾಗಿದ್ದರೂ ಪ್ರಮೋದನಂಥ ತಿಳುವಳಿಕೆ ಉಳ್ಳಂತವರಿಗೆ ತಿಳುವಳಿಕೆಗೆ ಅನುಗುಣವಾಗಿ ಕೆಲಸ ದೊರೆಯದೇ ಇರುವುದನ್ನು, ನಿರೂಪಕರು "ಕಚೇರಿಯ ಸಹೋದ್ಯೋಗಿಗಳ ಸಭೆಯೊಂದರಲ್ಲಿ ಎಲ್ಲರೂ ತಮ್ಮ ಹೆಸರಿನ ಮುಂದೆ 'ಡಾಕ್ಟರ್' ಸೇರಿಸಿಕೊಂಡು ಪರಿಚಯ ಮಾಡಿಕೊಂಡಿದ್ದು ಇವನಿಗೆ ಕಿರಿಕಿರಿಯಾಯಿತು" (ಪು.ಸಂ೧೨)ಎಂದು ಪ್ರಮೋದನ ಕುರಿತು ನಿರೂಪಿಸಿರುವುದು ಕಂಡು ಬರುತ್ತದೆ... ಒಟ್ಟು ಕಥೆಯಲ್ಲಿ ತಮ್ಮ ಕಾಲದಲ್ಲಿಯ ಅಕಾಡೆಮಿಕ್ ವಲಯದ ಕುರಿತು ಚರ್ಚಿಸುತ್ತಾ, ಅದು ಕಂಡುಕೊಳ್ಳಬೇಕಾದ ಮಾರ್ಗದ ಕುರಿತು ಸೂಕ್ಷ್ಮವಾಗಿ ಸಾಗುತ್ತದೆ..
'ಅತಿಲೋಕದ ಸುಂದರಿ' ಎನ್ನುವ ಇನ್ನೊಂದು ಕತೆಯಲ್ಲಿ, 'ಸುಂಕಲಮ್ಮ' ಮತ್ತು ಆಕೆಯ ಮಗಳು 'ಮಂಗಮ್ಮ' 'ಗುದ್ದು ಮೇಸ್ತ್ರಿ' ಕೈ ಕೆಳಗೆ ಕೂಲಿ ಕೆಲಸದಾಳುಗಳು; ಗುದ್ದು ಮೇಸ್ತ್ರಿಗೆ ಪ್ರಾರಂಭದಲ್ಲಿ ಕಚ್ಚೆ ಹರುಕು ಕೆಲಸ ಮಾಡ್ತಿದ್ದ.. ಯಾವಾಗ ಮಂಗಮ್ಮಳನ್ನು ಮದುವೆ ಆಗುತ್ತಾನೆಯೋ ಆತನಲ್ಲಿರುವ ಎಲ್ಲಾ ಕೆಟ್ಟ ವ್ಯಸನಗಳಿಂದ ದೂರಾಗುತ್ತಾ ಸಾಗುತ್ತವೆ...ಇಲ್ಲಿ ಮಂಗಮ್ಮ ಮತ್ತು ಗುದ್ದು ಮೇಸ್ತ್ರಿ ನಡುವೆ ವಯಸ್ಸಿನ ಮತ್ತು ಭಾವನೆಗಳ ಅಂತರವಿರುವುದು ಸಹಜವಾಗಿ ಕಂಡು ಬರುತ್ತದೆ...ಮಂಗಮ್ಮಳು ಕೊನೆವರೆಗೂ ಗುದ್ದು ಮೇಸ್ತ್ರಿಯನ್ನೂ ಕಣ್ಣೆತ್ತಿಯೂ ಸಹ ನೋಡುವುದಿಲ್ಲ..ಇಲ್ಲಿಯ ತೆಲುಗು,ಕನ್ನಡ ಮಿಶ್ರಿತವಾದ ಭಾಷೆ, ಮತ್ತು ಆಳುವ ವರ್ಗ ತನ್ನದಲ್ಲದ್ದನ್ನು ತನ್ನಂತೆ ಮಾಡಿಕೊಳ್ಳುವುದನ್ನು ಕಂಡುಬಂದರೂ..ತನ್ನಂತೆ ಮಾಡಿಕೊಳ್ಳುವಾಗಲೂ ತನ್ನದಲ್ಲದರಂತೆ ಪ್ರಾಮಾಣಿಕವಾಗಿ ಬದುಕುವುದು ಈ ಕತೆಯಲ್ಲಿ ಕಂಡು ಬರುತ್ತದೆ.
'ಹೊಳೆ ಬದಿಯ ಬೆಳಗು' ಎನ್ನುವ ಇನ್ನೊಂದು ಕತೆ ತುಂಬಾ ಆಪ್ತವಾಗುವಂಥಾದ್ದು, ಇದು ಕೃಷ್ಣ ನದಿ ದಂಡೆಯಲ್ಲಿರುವ ತಿಂತುಣಿ ಮೊನಪ್ಪನ ಗುಡಿಯ ಹತ್ತಿರ ಮೂರು ಪಾತ್ರಗಳು ತಮ್ಮ ತಮ್ಮ ಬದುಕಿನ ಏರಿಳಿತಗಳನ್ನು ಪರಸ್ಪರ ಹಂಚಿಕೊಂಡು ತಮ್ಮ ನೋವುಗಳನ್ನು ಕಡಿಮೆ ಮಾಡಿಕೊಳ್ಳುವುದು ಕಂಡು ಬರುತ್ತದೆ..'ಚಂದ್ರವ್ವ', 'ಚೊಂಚ ರುಕಮವ್ವ' ಈಕೆಯ ಮೊಮ್ಮಗ ದೇವೇಂದ್ರ, ಮತ್ತು 'ಬಾಬಾ' ಇಲ್ಲಿಯ ಮೂರೂ ಪಾತ್ರಗಳು ತಮ್ಮ ಕತೆಯನ್ನೂ ಹೇಳುತ್ತಾ ಸಾಗುತ್ತವೆ...ಯಾವ ಸಮುದಾಯದ ವ್ಯಕ್ತಿಯಾಗಿರಲಿ ಅವರು ಅಧಿಕಾರದಲ್ಲಿರುವಾಗ ಶೋಷಿಸುವುದು ಸಹಜವಾಗಿರುತ್ತದೆ ಎನ್ನುವುದನ್ನು ಸುರುಪುರದ ದೊರೆಗಳ ದರ್ಪವನ್ನಿಲ್ಲಿ ಪಾತ್ರಗಳು ಬಿಚ್ಚಿಡುತ್ತಾ ಸಾಗುತ್ತವೆ.
'ನೀಲಿ ಆಕಾಶದ ಹಣ್ಣು' ಈ ಕತೆ ದೇವರ ಹಿಪ್ಪರಗಿ ಹತ್ತಿರ ಬರುವ ಡೋಣಿಸಾಲಿ, ಸಾತಿಹಾಳ, ದಿಂಡವಾರ ಪ್ರದೇಶದ ಹೂವ್ವಕ್ಕ ಎನ್ನುವ ಹೆಣ್ಣು ಪಾತ್ರದ ಮುಖಾಂತರ ಸಾಗುತ್ತದೆ..ಈಕೆಯ ಗಂಡ ರೇವಣಸಿದ್ದ, ಈಕೆ ಹೆಣ್ಣು ಹಡೆದಳೆಂಬ ನೆಪವಾಗಿಸಿ ಇವಳಿಂದ ದೂರ ಆಗುತ್ತಾನೆ..ಹಾಗೆ ನೋಡಿದರೆ ಹೆಣ್ಣು ಹಡೆದಿರುವುದು ಅವಳನ್ನು ಬೀಡಲಿಕ್ಕೆ ನೆಪಮಾತ್ರವಾಗಿರುತ್ತದೆ.. ಈಕೆಯ ಆಸರೆಗಾಗಿ ನಿಲ್ಲುವವರು ಶಾಲೆಯ ಶೇಖರ ಮಾಸ್ತರರು.. ಪ್ರಾರಂಭದಲ್ಲಿ ಓದುತ್ತಾ ಹೋದಂತೆ ಪರಸಂಗದ ಗೆಂಡೆ ತಿಮ್ಮ ಕತೆಯಂತೆ ಸಾಗಿದರೂ ಶೇಖರ ಮಾಸ್ತರರು ಮಾನವೀಯತೆ ಮೆರೆದು ಭಿನ್ನವಾಗಿ ನಿಲ್ಲುತ್ತಾರೆ.
'ಬಾರೋ ಗಿಜಗ' ಎನ್ನುವ ಕತೆ ಇದೊಂದು ಕವಿಗೋಷ್ಠಿಗೆ ಹೋದ ಪ್ರೊಫೆಸರ್ 'ಕದಂ' ಮತ್ತು ಅಲ್ಲಿಯ ಕಾರ್ಯಕ್ರಮದ ವ್ಯವಸ್ಥಾಪಕಿ 'ನೀಲಾಂಜನಾಳ' ನಡುವೆ ನಡೆಯುವ ಸಂಭಾಷಣೆ ಕಾವ್ಯಾತ್ಮಕವಾಗಿ, ಫಿಲಾಸಫಿಕಲ್ಲಾಗಿದೆ...ಆ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಸಚಿವರು ಬರದೇ ಇರುವುದರಿಂದ ಗೆಸ್ಟ್ ಹೌಸ್ ಇಂದ ಪ್ರಾರಂಭವಾದ ಇವರೀರ್ವರ ಮಾತು ಕೊನೆಗಳಿಗೆ ಹೋಗುವವರೆಗೂ ನಡೆಯುತ್ತದೆ...ಕದಂ ಬಂದದ್ದು ಬಹುಮುಖ್ಯವಾಗಿ ಕಾರ್ಯಕ್ರಮಕ್ಕಾದರೂ ಅದಕ್ಕಿಂತ ಹೆಚ್ಚು ಕೇಳಿದ್ದು, ಹೇಳಿದ್ದು ನೀಲಾಂಜನೆಯ ಜೊತೆಗೆ..ಇಲ್ಲಿಯ ಒಂದೊಂದು ಥಾಟ್ ಆಲೋಚನೆಗೆ ಹಚ್ಚುವ ಮತ್ತು ನಾವು ನಮ್ಮೊಳಗಿರುವುದನ್ನು ಕಂಡುಕೊಳ್ಳುವುದಕ್ಕೆ ಹಚ್ಚುತ್ತವೆ...ಇಲ್ಲಿ ಒಂದೈದನ್ನು ಕೋಟ್ ಮಾಡುವುದಾದರೆ...'ಒಳಗಿದನ್ನು ಕಾಣದವರು ಹೊರಗಿನವರನ್ನು ಹುಡುಕಿಕೊಂಡು ಹೋಗುತ್ತಾರೆ. ಇರಲಿ ಬಿಡು. ನೀನು ಬದುಕುತ್ತಾ ಹೋದಂತೆ ಎಲ್ಲಾ ತೆರೆದುಕೊಳ್ಳುತ್ತದೆ...'
'ಕಹಿ ನೆನೆಪಿನ ಗಂಟನ್ನು ಬೆನ್ನ ಮೇಲೆ ಹೊತ್ತಿರಬಾರದು; ಮಾಡುವ ಎಲ್ಲಾ ಕ್ರಿಯೆಯಲ್ಲೂ ಕನ್ಯೆತನ, ಕೌಮಾರ್ಯ್ಯ ಹೊಂದಿರಬೇಕು ಎಂದು ಆಪೇಕ್ಷಿಸುವವರೇ. ಆದರೆ ಸುಖದ ಸಂಬಂಧ ಸುಮ್ಮನೆ ಕಾಣುವ ಮರೀಚಿಕೆ ಯಾಗಿರುತ್ತದೆ..' 'ಎಲ್ಲಾ ಮುಗಿದು ನಿರಾಳವಾಗುವುದು ಅನ್ನುವಂಥ ಸ್ಥಿತಿಯೊಂದು ಯಾವಾಗಲೂ ಇರುವುದೇ ಇಲ್ಲ; ಅಂಥದೊಂದು ಭ್ರಮೆ ಮಾತ್ರ ಇರುತ್ತದೆ..' 'ಜಗಳದಿಂದ ಆರಂಭವಾದ ಬೆಳಗು ಜಗಳದಿಂದಲೇ ಮುಕ್ತಾಯವಾಗುವ ಇರುಳಿನ ಹಂತಕ್ಕೆ ತಲುಪಿದಾಗ ಬೇರೆಯಾಗುತ್ತಾರೇನೋ..' ಈ ಥರಹದ ಅನೇಕ ಸಾಲುಗಳು ಇವರಿಬ್ಬರ ಸಂಭಾಷಣೆಯಲ್ಲಿ ನಡೆಯುತ್ತವೆ.. ಒಂದು ಕುತೂಹಲವೇನೆಂದರೆ ಕದಂ, ನೀಲಾಂಜನ ನಡುವೆ, ಹೂವ್ವಕ್ಕ, ಶೇಖರ ಮಾಸ್ತರ, ಪ್ರಮೋದ್, ಸಲೋಮಿ ಮೇಹಿಯಾ ನಡುವೆ, ಮಂಗಮ್ಮ,ಗುದ್ದು ಮೇಸ್ತ್ರಿ ಈ ಎಲ್ಲಾ ಗಂಡು ಹೆಣ್ಣಿನ ಪಾತ್ರಗಳಲ್ಲಿ ವಯಸ್ಸಿನ ಅಜಗಜಾಂತರ ವ್ಯತ್ಯಾಸವಿದೆ..ಇವುಗಳಾಚೆ ಅಮೂರ್ತವಾದ ಆಪ್ತತೆ ಇದೆ...
'ಮಾಘ ಮಾಸದ ಇಳಿಸಂಜೆ' ಎನ್ನುವ ಕಿರು ಕತೆಯಲ್ಲಿ ಬಾಲ್ಯದಲ್ಲಿ ಘಟಿಸಿದ ಪ್ರೇಮ ಸಾಮಾಜಿಕ ವ್ಯವಸ್ಥೆಯಲ್ಲಿ ಸ್ಥಿತ್ಯಂತರ ಗೊಂಡು ಮುಂದೊಂದಿನ ಎಲ್ಲೋ ಪರಸ್ಪರ ಎದುರಾದಾಗ ಹತ್ತಾರು ಭಾವಗಳು ನಮ್ಮ ಹಿಂದಣದ ಹೆಜ್ಜೆಗಳನ್ನು ನೆನಪಿಸುವುದು ಇಲ್ಲಿ ಕಂಡು ಬರುತ್ತದೆ... ನಿಜಕ್ಕೂ ವೈಯಕ್ತಿಕವಾಗಿ ಇದು ನನ್ನದೇ ಕತೆಯಾಗುತ್ತಿದೆ ಏನೋ ಅನ್ನುವಷ್ಟೊತ್ತಿಗೆ ಕತೆ ಮುಗಿದು ಹೋಗುತ್ತದೆ..ಇಲ್ಲಿ ಎಲ್ಲೂ ಪಾತ್ರಗಳು ಬರುವುದಿಲ್ಲ, ನಿರೂಪಕರೇ ಈ ಎರಡೂ ಪಾತ್ರಗಳಾಗಿ ನಿರೂಪಿಸಿದ್ದಾರೆ....
'ಕನ್ಯಾಗತ' ಈ ಕತೆ ಬ್ರಾಹ್ಮಣ ಕುಟುಂಬದ ಸುತ್ತ ನಡೆಯುವಂಥಾದ್ದು ಈ ಕತೆಯಲ್ಲಿ 'ವಾಸುದೇವ' ಎನ್ನುವ ಪಾತ್ರ ಇಡೀ ಕುಟುಂಬದಲ್ಲಿ ಕಿರಿಯ ಮಗನೂ ಹೌದು, ಈತನನ್ನು ಇಡೀ ಕುಟುಂಬವು ಅವಗಾಹನೆಗೆ ಒಳಪಡಿಸಿದ್ದೂ ಇದೆ..ಹೀಗಾಗಿರುವುದಕ್ಕೆ 'ಬೀದಿ ಮಕ್ಕಳು ಬೇಳ್ದೋ' ಎನ್ನುವ ಮಾತಿನಂತೆ ಈತ ಎಲ್ಲವನ್ನೂ ಕಳಚಿಕೊಂಡವನಂತೆ ಕಂಡುಬರುತ್ತಾನೆ..ದೇಶದ ಮೂಲೆ ಮೂಲೆಗಳಿಗೆ ಬರಿಗಾಲಿನ ಫಕೀರನಂತೆ ಅಡ್ಯಾಡಿ ಬರುತ್ತಾನೆ...ಕತೆಯಲ್ಲಿಯ ಕೊನೆಯ ಮಾತುಗಳು ಆತ ಬ್ರಾಹ್ಮಣ್ಯವನ್ನು ಮೀರುವುದು ತನಗೆ ಸಿಕ್ಕಿದ್ದ ತನ್ನ ತಾಯಿ ತಂದೆ ಸಾಯೂ ಮುಂಚೆ ಕೂಡಿಟ್ಟಿದ್ದ ಬಂಗಾರದ ಗಂಟನ್ನು ತಾನೂ ತೆಗೆದುಕೊಳ್ಳದೆ, ತನ್ನ ಕುಟಂಬಕ್ಕೂ ಕೊಡದೆ ಹೊಳೆಯಲ್ಲಿ ಹರಿಬಿಡುತ್ತಾನೆ..ಹೀಗೆ ಹರಿಬಿಡುವುದನ್ನು ನಿರೂಪಕರು ಎಚ್ಚರಿಕೆಯಿಂದ ವರ್ಣಿಸಿದ್ದಾರೆ.. ಅದನ್ನಿಲ್ಲಿ ಪ್ರಸ್ತಾಪಿಸಿದ್ದಾದರೆ, "ಒಡವೆಗಳ ಗಂಟನ್ನು ನೀರಿಗೆ ಹರಿಬಿಟ್ಟ..ಒಜ್ಜೆಯ ಗಂಟು ಒಳಗಿಳಿದಂತೆ ಗುಳು ಗುಳು ಶಬ್ದ ಕೇಳಿಸಿತು. ಹಳೆಯ ಬದುಕಿನ ಕಥೆ ಮುಗಿಯಿತು. ಇನ್ನೇನಿದ್ದರೂ ಹೊಸ ತಿರುವು ಎಂಬಂತೆ ನದಿ ಅರೆಚಣ ಸ್ತಬ್ಧವಾಯಿತು. ಮತ್ತೆ ಹೊಸ ನೀರಿನೊಂದಿಗೆ ಹರಿಯತೊಡಗಿತು. ತಲೆಮಾರುಗಳಿಂದ ಕಾಪಿಟ್ಟಿದ್ದ ಬೆವರು, ಸುಖ, ದುಃಖ, ಭಯ, ಬಯಕೆಗಳನ್ನು ಹೊತ್ತಿದ್ದ ಒಡವೆಗಳ ಗಂಟು ತಳ ಮುಟ್ಟಿತು. ಯಾರೂ ಅರಿಯದ ಒಡಪಿನ ಒಡವೆಗಳ ಗಂಟನ್ನು ತಳದಲ್ಲಿದ್ದ ಮಣ್ಣು ಮುಚ್ಚಿ ಮರೆಮಾಡಿತು......" ಈ ಸಾಲುಗಳು ಆತನಲ್ಲಿರುವ ಬಯಲು ಬಯಸುವ ಗುಣ ಕಂಡುಬರುತ್ತದೆ.. ಮೊಘಲ್ ಸಾಮ್ರಾಜ್ಯದಲ್ಲಿದ್ದ ಷಹಜಾನನ ಮಗ, ಔರಂಗಜೇಬನ ಅಣ್ಣನಾದ 'ದಾರಾಶಿಕೋ' ನಂತೆ ಈ ವಾಸುದೇವ ಪಾತ್ರ ಇಲ್ಲಿ ಚಿತ್ರಿತವಾಗಿದೆ...ಈ ಒಟ್ಟು ಕತೆಗಳ ವಸ್ತು, ಭಾಷೆ, ಕತೆ ಕಟ್ಟುವಾಗಿನ ಬಹುತೇಕ ಕತೆಗಳ ಸಿಂಹಾವಲೋಕನ ಕ್ರಮ, ಕತೆಯಲ್ಲಿ ಪಾತ್ರಗಳ ಮುಖಾಂತರ ಉಪಕತೆಗಳನ್ನು ಬಿಚ್ಚಿಕೊಳ್ಳುತ್ತಾ ಮೂಲ ಕತೆಯನ್ನು ಡಿವೆಲಪ್ ಮಾಡುತ್ತಾ ಸಾಗುತ್ತವೆ..ಕತೆ ದೊಡ್ಡದಾಗುವುದೆಂದರೆ ಸಣ್ಣ ಸಣ್ಣ ಸಂಗತಿಗಳನ್ನು ಕತೆಯಲ್ಲಿ ಹಿಡಿದಿಡುವುದಾಗಿರುತ್ತದೆ..ಅದಿಲ್ಲಾಗಿದೆ...