Story/Poem

ಶ್ರೀನಿವಾಸ ವೈದ್ಯ

ನಗೆಬರಹ, ಹಾಸ್ಯಪ್ರಧಾನ ಸಾಹಿತ್ಯ ಹಾಗೂ ಲಲಿತ ಪ್ರಬಂಧ ಮುಂತಾದ ಪ್ರಕಾರಗಳಿಂದ ಒಮ್ಮೆಲೆ ಗಂಭೀರ ಸಾಹಿತ್ಯದೆಡೆಗೆ ಜೀಕಿಕೊಂಡ ಶ್ರೀನಿವಾಸ ವೈದ್ಯರು ಹುಟ್ಟಿದ್ದು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ. ತಂದೆ ಬಿ.ಜಿ. ವೈದ್ಯ, ಸುಪ್ರಸಿದ್ಧ ವಕೀಲರು. ತಾಯಿ ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ಬಂದ ಸುಂದರಾಬಾಯಿ. ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಎಂ.ಎ.ವರೆಗೂ ಧಾರವಾಡದಲ್ಲೇ ಶಿಕ್ಷಣ ಪೂರ್ಣ ಗೊಳಿಸಿದರು. 1959ರಲ್ಲಿ ಅರ್ಥಶಾಸ್ತ್ರ-ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದ ಅವರು ಬ್ಯಾಂಕಿಂಗ್ ಪರೀಕ್ಷೆಯಾದ ಸಿ.ಎ.ಐ.ಐ.ಬಿ ಮತ್ತು ಭಾರತೀಯ ವಿದ್ಯಾಭವನದಿಂದ ಪಡೆದ ಪತ್ರಿಕೋದ್ಯಮ ಡಿಪ್ಲೊಮಾವನ್ನು ಪೂರೈಸಿದರು. ಮನೆಯಲ್ಲಿದ್ದುದು ಸಾಹಿತ್ಯಕ, ಸಾಂಸ್ಕೃತಿಕ ವಾತಾವರಣ. ಬಿಡುವಿನ ವೇಳೆಯಲ್ಲೆಲ್ಲಾ ಕೈಯಲ್ಲೊಂದು ಕಾದಂಬರಿ ಹಿಡಿದು ಸದಾ ಓದಿನಲ್ಲಿ ಮಗ್ನರಾಗಿರುತ್ತಿದ್ದ ತಾಯಿ. ಇದರಿಂದ ಪ್ರಭಾವಿತರಾದ ಶ್ರೀನಿವಾಸ ವೈದ್ಯರು ಧಾರವಾಡದ ಕರ್ನಾಟಕ ಹೈಸ್ಕೂಲಿನಲ್ಲಿದ್ದಾಗಲೇ ಬರವಣಿಗೆಯ ಬಗ್ಗೆ ಆಸ್ಥೆ ಬೆಳೆಸಿಕೊಂಡಿದ್ದರು. ಆವೇಳೆಗಾಗಲೇ  ಕೈಬರಹದ ಪತ್ರಿಕೆ ‘ನಂದಾದೀಪ’ವನ್ನು ಆರಂಭಿಸಿದ್ದರು. ಈ ಪತ್ರಿಕೆಗೆ ಸಹ ಸಂಪಾದಕರಾಗಿ ಮಹಾದೇವ ಬಣಕಾರರಿದ್ದರು. ಸಾಂಸ್ಕೃತಿಕ ಚಟುವಟಿಕೆಗಳನ್ನು ಗುರುತಿಸಿಕೊಳ್ಳುತ್ತಿದ್ದ ವೈದ್ಯರು ಕಾಲೇಜು ದಿನಗಳಲ್ಲೇ ವಿ.ಕೃ.ಗೋಕಾಕರ ಪ್ರಭಾವಕ್ಕೆ ಒಳಗಾದರು. ತಾವೂ ಅವರಂತೆ ಪ್ರೊ. ಆಗಬೇಕೆಂದು ಬಯಸಿದರು. ಆದರೆ ಮನೆತನದ ವೈದ್ಯ ವೃತ್ತಿಗೂ ಸೇರದೆ, ತಂದೆಯ ವಕೀಲಿ ವೃತ್ತಿಯನ್ನೂ ಹಿಡಿಯದೆ ಸೇರಿದ್ದು ಮುಂಬಯಿಯ ಷಹರದಲ್ಲಿ ಪಿಎಚ್.ಡಿ. ಮಾಡಲು. 1959ರಲ್ಲಿ ಮುಂಬಯಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಸೇರಿ ಬೆಳಗಾವಿ, ಗೋವಾ, ಧಾರವಾಡ, ದೆಹಲಿ, ಚೆನ್ನೈ ಮತ್ತು ಬೆಂಗಳೂರುಗಳಲ್ಲಿ ಕಾರ್ಯನಿರ್ವಹಿಸಿದ ಅವರು 1996ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರು 2023 ಏಪ್ರಿಲ್ 21 ರಂದು ನಿಧನರಾದರು. 

More About Author

Story/Poem

ಶ್ರದ್ಧಾ

ಮಾಘ ಮಾಸದ ಶುಕ್ಲಪಕ್ಷದ ದ್ವಾದಶಿ ನಮ್ಮ ತಂದೆಯವರ ಶ್ರಾದ್ಧದ ದಿನ. ಅದು ಸಾಧಾರಣ ಜನವರಿ ಫೆಬ್ರುವರಿ ತಿಂಗಳಿನ್ಯಾಗ ಯಾವಾಗೋ ಬರತದ. ಆ ಸುಮಾರಕ್ಕ ನನ್ನ ಸ್ವರ್ಗಸ್ಥ ತಂದೆಯವರ ನೆನಪು ನನ್ನನ್ನು ಎಡೆಬಿಡದೆ ಕಾಡುತ್ತಿರುತ್ತದೆ. ಹಂಗ ನೋಡಿದರ ನಮ್ಮ ತಂದೀದು ಸಾಕಷ್ಟು ವಿರೋಧಾಭಾಸಗಳಿಂದ ಕೂಡಿದ ...

Read More...