ಪ್ರತಿಭಾ ನಂದಕುಮಾರ್
ಲೇಖಕಿ ಪ್ರತಿಭಾ ನಂದಕುಮಾರ್ ಅವರು ಮೂಲತಃ ಬೆಂಗಳೂರಿನವರು. 1955 ಡಿಸೆಂಬರ್ 25ರಂದು ಜನಿಸಿದರು. ತಂದೆ-ವಿ. ಎಸ್. ರಾಮಚಂದ್ರರಾವ್, ತಾಯಿ- ಯಮುನಾಬಾಯಿ. ಬಾಲ್ಯದ ಬಹುದಿನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಳೆದಿರುವ ಪ್ರತಿಭಾ, ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿ ಪಡೆದಿದ್ದಾರೆ. ಎನ್.ಜಿ.ಎಫ್‌ನಲ್ಲಿ ಭಾಷಾಂತರಕಾರರಾಗಿ ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲಿಯೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪತಿ ನಂದಕುಮಾರ್ ಹಾಗೂ ಮಕ್ಕಳು ಅಭಿರಾಮ್ ಮತ್ತು ಭಾಮಿನಿ ಜೊತೆ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಪ್ರತಿಭಾ ನಂದಕುಮಾರ್ ಕಾವ್ಯಧರ್ಮವನ್ನೇ ತಮ್ಮ ಮನೋಧರ್ಮವನ್ನಾಗಿಸಿಕೊಂಡಿರುವ ಕವಿ. ಅವರ ವೈಯಕ್ತಿಕ ಮತ್ತು ವೃತ್ತಿ ಬದುಕುಗಳೆರಡರಲ್ಲೂ ನಿರಂತರ ಸಾಹಸ ಮತ್ತು ಪ್ರಯೋಗಗಳನ್ನು ನಡೆಸಿದವರು. ಉತ್ಕಟವಾಗಿ ಜೀವಿಸುವುದೇ ಬದುಕಿನ ಪರಮ ಸತ್ಯವನ್ನು ತಿಳಿಯಲು ಇರುವ ಏಕೈಕ ದಾರಿ ಎಂದು ನಂಬಿರುವ ಪ್ರತಿಭಾ ಅದೇ ಉತ್ಕಟತೆಯನ್ನು ತಮ್ಮ ಕವಿ ಸಮಯದುದ್ದಕ್ಕೂ ಕಾದುಕೊಂಡಿದ್ದಾರೆ. ಅವರ ಪ್ರಕಟಿತ ಪುಸ್ತಕಗಳು- ನಾವು ಹುಡುಗಿಯರೇ ಹೀಗೆ, ಈ ತನಕ, ರಸ್ತೆಯಂಚಿನ ಗಾಡಿ, ಕವಡೆಯಾಟ, ಆಹಾ ಪುರುಷಾತಾರಂ, ಅವರು ಪುರಾವೆಗಳನ್ನು ಕೇಳುತ್ತಾರೆ, ಮುನ್ನುಡಿ ಬೆನ್ನುಡಿಗಳ ನಡುವೆ, ಕಾಫಿ ಹೌಸ್, ಮುದುಕಿಯರಿಗಿದು ಕಾಲವಲ್ಲ ಅವರ ಕವನ ಸಂಕಲನಗಳು. ಯಾನ- ಕಥಾಸಂಕಲನ, ಆಕ್ರಮಣ- ಅನುವಾದಿತ ಕಥೆಗಳು, ಸೂರ್ಯಕಾಂತಿ- ಅನುವಾದಿತ ಡೋಗ್ರಿ ಕವನಗಳು.
More About Author