Poem

ಅಂತ್ಯವಾಗಲಿ ಅರಿವು

ಹುತಾತ್ಮರ ದಿನ ಅಮರರಾದರು ಬಾಪು;
ಸಾವಿಲ್ಲದಂತೆ ಜನಮಾನಸದಲಿ ಅಜರಾಮರರಾದರು.
ಆದರೆ, ಈಗಿನ ಕಥನವೇ ಬೇರೆ.
ಬಾಪು ದಿನಂಪ್ರತಿ ನಶಿಸುತ್ತಿದ್ದಾರೆ ಚೂರು ಚೂರೇ.
ಸತ್ಯ ಸುಳ್ಳಾಗಿ, ಅಹಿಂಸೆಯ ಖೂನಿಯಾಗಿ,
ಧರ್ಮಾತೀತ ನೆಲೆಗಳು ಅದೃಶ್ಯವಾಗಿ,
ಬಾಪು ಕಟ್ಟಿ ಪೋಷಿಸಿ ಕನಸಿದ
ಸರಳ ಆಶ್ರಮದ ಅಡಿಪಾಯ ಸಡಿಲವಾಗುತ್ತಿದೆ.
ನಿರುಮ್ಮಳ ಸ್ಥಿತಿ ಅಳಿದು ಉಸಿರುಕಟ್ಟಿ
ಜೀವಕಣಗಳು ವ್ಯವಕಲನಗೊಂಡು
ಬಾಪುವಿನ ಸಾವು ಸನ್ನಿಹಿತವಾಗುತ್ತಿದೆ.
ಅದಕ್ಕೂ ಮುನ್ನ ಅರಿವಿನ ಅಂತ್ಯವಾದರೆ ಚೆನ್ನ.

ಗಿಡಮರಗಳೇ ಜೀವದ ಕುರುಹು.
ಹಸಿರಿನಿಂದಲೇ ಉಸಿರು; ಸಮೃದ್ಧ ಬದುಕು.
ರಸ್ತೆಗೆ ಹನನ; ಕಾರ್ಖಾನೆಗೆ ದಹನ.
ಅಂಗೈಯಗಲದ ಸಾಗುವಳಿಯ ವಿಸ್ತರಣೆಗೆ,
ಅಣೆಕಟ್ಟಿನಿಂದ ಹಸನು ಮಾಡುವ ಭ್ರಮೆಗೆ
ಕತ್ತಲ ಕಾನಿಗೆ ಬೆಳಕು ನಿರಂತರ ನುಗ್ಗುತಿದೆ.
ಸಸಿಯೊಂದ ಬೆಳೆಸಿ ಉಳಿಸೆಂದಿತು ಪ್ರಕೃತಿ;
ನೂರು ಮರ ಕಡಿದು ಮೇಳೈಸಿತು ವಿಕೃತಿ.
ಬಸಿರಾಗದ ಹಸಿರು;ನೇಪಥ್ಯದತ್ತ ಉಸಿರು.
ಅದಕ್ಕೂ ಮುನ್ನ ಅರಿವಿನ ಅಂತ್ಯವಾದರೆ ಚೆನ್ನ.

ಪ್ರಾಣವಾಯುವೇ ಭೂಮಿಯ ಮೆರಗು;
ನಿಷ್ಕಲ್ಮಶ ಗಾಳಿಯೇ ಸ್ವಾಸ್ಥ್ಯದ ಬೆರಗು.
ನಂಜನುಗುಳುತ್ತಿವೆ ಸಿಡಿಮದ್ದುಗಳು.
ಎಲ್ಲೆ ಮೀರಿದ ನಗರೀಕರಣ;ವೃದ್ಧಿಸಿದ ಯಂತ್ರಗಳು;
ವ್ಯೋಮ ತುಂಬಿದ ಕೊಳಕು ಮಂಜು.
ಸುತ್ತುವರಿದ ಗಾಳಿ ಮಲಿನವಷ್ಟೇ ಅಲ್ಲ,
ಉಚ್ಛ್ವಾಸ ಕುಗ್ಗಿಸುವ ವಿಷಾನಿಲವಾಗುತ್ತಿದೆ.
ಸದಾ ಸಕ್ರಿಯ ಮೂಗಿನ ಹೊಳ್ಳೆಗಳು
ಅಘ್ರಾಣಿಸಲು ಅಸಾಧ್ಯವಾಗಿ ನಿಶ್ಚಲವಾಗುತ್ತಿವೆ.
ಅದಕ್ಕೂ ಮುನ್ನ ಅರಿವಿನ ಅಂತ್ಯವಾದರೆ ಚೆನ್ನ.

- ಡಾ.ಕೆ ಎಸ್ ಗಂಗಾಧರ

ಕೆ.ಎಸ್ ಗಂಗಾಧರ

ಡಾ. ಕೆ.ಎಸ್ ಗಂಗಾಧರ ಅವರು ಮೂಲತಃ ಶಿವಮೊಗ್ಗದವರು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ಅವರು ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾಲೇಜಿನಲ್ಲಿ ಮುಖ್ಯಸ್ಥರಾಗಿರುತ್ತಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ.

More About Author