Poem

ಒಡಲಾಗ್ನಿಯ ನುಡಿ

ಮೈ ಮೇಲೆ ಬಟ್ಟೆಯಿರುವಾಗಲೇ
ಬೆತ್ತಲಾಗಿಸಿ ಅಳೆದು ತೂಗುವ ಕಣ್ಣುಗಳೇ
ಬಿಚ್ಚಿಸಿ ಆಸ್ವಾದಿಸುವ ಆತುರವೇಕೆ
ಸಾಕಾಗಲಿಲ್ಲವೇ ಅಂಕು ಡೊಂಕಿನ
ಮಾಟದ ದೇಹದ ಉಬ್ಬುತಗ್ಗಿನ ನೋಟ?

ಬಟ್ಟೆ ಬಿಚ್ಚಲು ಹಿಂಸಿಸುವ ಮುನ್ನ
ನೆನಪಾಗಲಿಲ್ಲವೇ ಅಂತಹುದ್ದೇ ದೇಹವೊಂದು
ತನ್ನೊಡಲಲ್ಲಿ ತನ್ನದೇ ರಕ್ತ ಕೊಟ್ಟು
ತಾನು ಬಯಸಿ ಬಗೆದೆ ಅಂಗದಿಂದಲೇ
ಈ ಭೂಮಿಗೆ ತಂದಿದ್ದೆಂದು?

ತನ್ನನ್ನು ಹೆತ್ತ ದೇಹವನ್ನು
ಮರೆಯಿಲ್ಲದೆ ಮೆರವಣಿಗೆ ಮಾಡುವಾಗ
ಎದೆ ಹಾಲಿನ ಜೀವಾಮೃತ ನೀಡಿದ ಅವ್ವ,
ಜೊತೆಯಲ್ಲಿ ಆಡಿ ಬೆಳೆದ ಅಕ್ಕ ತಂಗಿಯರು
ಎದೆಯೊಳಗೆ ಪ್ರೀತಿಯ ಮೊಳಗಿಸಿದ ಹುಡುಗಿ
ಮೊಗೆಮೊಗೆದು ಸುಖ ನೀಡಿದ ಹೆಂಡತಿ
ತನ್ನದೇ ರಕ್ತಹಂಚಿಕೊಂಡ ಮಗಳು
ಯಾರೆಂದರೆ ಯಾರೂ ಕಣ್ಣೆದುರು ಸುಳಿಯಲಿಲ್ಲವೆ
ಮೃಗದ ಅಟ್ಟಹಾಸಗೈದು ಮೆರೆಯುವಾಗ

ಇದು ಶತಶತಮಾನದ ದುರಂತ ಶಾಪ
ಸೀರೆ ಸೆಳೆಯುವುದನ್ನೇ ಧರ್ಮಗ್ರಂಥವನ್ನಾಗಿಸಿ
ಕನ್ನೆ ತಟ್ಟಿಕೊಂಡು ಶಾಂತಂಪಾಪಂ ಹೇಳಿಕೊಂಡು
ಮಾಯಾವಿ ಸೀರೆಗೆ ಬೆರಗುಗೊಂಡವರು ನಾವು
ಅಪಾಯವನ್ನರಿತೂ ಮೂರು ಗೆರೆ ಎಳೆದು
ಕದ್ದೊಯ್ಯುವ ವಿಮಾನವನ್ನೇ ವೈಭವಿಕರಿಸಿ
ಅವಳ ನೋವನ್ನು ನಿರುಮ್ಮಳವಾಗಿ ಕಡೆಗಣಿಸಿ
ಅಳಿಲಿನ ಬೆನ್ನ ಮೇಲಿನ ಮೂರು ಗೆರೆಗಳಿಗೆ
ದೀರ್ಘದಂಡ ನಮಸ್ಕಾರ ಹಾಕಿ
ಪಾಪ ತೊಳೆದು ಹೋಗಿದೆಯೆಂದು
ಕೇಕೆ ಹಾಕಿ ಕುಪ್ಪಳಿಸಿದವರಿಂದ
ಮತ್ಯಾವ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯ ಹೇಳು

ಕುಸಿದು ಹೋಗಿದ್ದೇವೆ
ದೇಹ, ಮನಸ್ಸು ಭಾವನೆಗಳ ಮೇಲೆ
ಸಾವಿರಾರು ವರ್ಷಗಳಿಂದ ನಡೆಯುತ್ತಿರುವ
ಅವ್ಯಾಹತ ದಾಳಿ, ಶೋಷಣೆಗಳಿಂದ
ಸಾಕಿನ್ನು, ನೆಲಕ್ಕೆ ಬಿದ್ದ ಹನಿ ಹನಿ ರಕ್ತವೂ
ಬೀಜಾಸುರವಾಗಿ ಆಹುತಿ ಪಡೆಯುವ
ಮಹಾ ಸಂಧಿ ಕಾಲಕ್ಕೆ ಮುನ್ನುಡಿ ಬರೆಯಬೇಕಿದೆ

- ಶ್ರೀದೇವಿ ಕೆರೆಮನೆ

ವಿಡಿಯೋ
ವಿಡಿಯೋ

ಶ್ರೀದೇವಿ ಕೆರೆಮನೆ

ಉತ್ತರ ಕನ್ನಡ ಜಿಲ್ಲೆ  ಹಿರೇಗುತ್ತಿ ಮೂಲದ  ಶ್ರೀದೇವಿ ಕೆರೆಮನೆ ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕಿ. ಸಾಹಿತ್ಯ ರಚನೆ ಹವ್ಯಾಸ. ಮೊದಲ ಕವನ ಸಂಕಲನ ’ನಾನು ಗೆಲ್ಲುತ್ತೇನೆ’. ಬಳಿಕ ’ಗೆಜ್ಜೆ ಕಟ್ಟದ ಕಾಲಲ್ಲಿ’,’ಮೌನದ ಮಹಾ ಕೋಟೆಯೊಳಗೆ’, ’ಮೈ ಮುಚ್ಚಲೊಂದು ತುಮಡು ಬಟ್ಟೆ’, ಕೃತಿಗಳು ಬಂದವು. ಅಂಗೈಯೊಳಗಿನ ಬೆಳಕು(ವಿಮರ್ಶಾ ಸಂಕಲನ), ’ಅಲೆಯೊಳಗಿನ ಮೌನ’, ’ನನ್ನ ದನಿಗೆ ನಿನ್ನ ದನಿಯು’ ಗಜಲ್‌ ಕೃತಿ. ’ಬೈಟೂ’ ಚಹಾ ಕುರಿತ ಸಂಕಲನವಾದರೆ ಬಿಕ್ಕೆಹಣ್ಣು, ಚಿತ್ತ ಚಿತ್ತಾರ ಅವರ ಕತೆಗಳ ಗುಚ್ಛ. ಗೂಡು ಕಟ್ಟುವ ಸಂಭ್ರಮದಲ್ಲಿ (ಪ್ರಬಂಧ ಬರಹ ಸಂಕಲನ).

’ಪ್ರೀತಿ ಎಂದರೆ ಇದೇನಾ?, ಹೆಣ್ತನದ ಆಚೆ ಈಚೆ, ಉರಿವ ಉಡಿ, ಮನದಾಳದ ಮಾತು, ವರ್ತಮಾನದ ಉಯ್ಯಾಲೆ ಇವು ಅಂಕಣ ಬರಹದ ಸಂಗ್ರಹಗಳು.

ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ, ಬಿ.ಎಂ.ಶ್ರೀ ಕಾವ್ಯ ಪುರಸ್ಕಾರ, ಶ್ರೀಗಂಧ ಹಾರ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಪ್ರಶಸ್ತಿ, ಬೇಂದ್ರೆ ಗ್ರಂಥ ಪುರಸ್ಕಾರ, 2020ನೇ ಶ್ರೀವಿಜಯ ಸಾಹಿತ್ಯ ಪ್ರಶಸ್ತಿ, ಸಾರಾ ಅಬೂಬ್ಕರ ಪ್ರಶಸ್ತಿ , ಸುಮನಾ ಸೋಮಶೇಖರ ಸೋಮವಾರಪೇಟೆ ದತ್ತಿ ಪ್ರಶಸ್ತಿ ‌, ದೇವಾಂಗನಾ ಶಾಸ್ತ್ರಿ ಕಥಾ ಪ್ರಶಸ್ತಿ , ಅಂತರಾಷ್ಟ್ರೀಯ ಮಹಿಳಾ ವರ್ಷದ ದತ್ತಿ ಪ್ರಶಸ್ತಿ -2021,  ಹೇಮರಾಜ ದತ್ತಿ ಪ್ರಶಸ್ತಿ,  ಕ್ರೈಸ್ತ ಕಾಲೇಜು ಪ್ರಶಸ್ತಿ, ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ ಅವರಿಗೆ ಇದುವರೆಗೆ ಸಂದ ಗೌರವಗಳು. 

 

 

 

 

 

 

More About Author