ಭತ್ತ, ಗೋಧಿ, ರಾಗಿ, ಜೋಳ
ಬೆಳೆಯುವ ಈ ಜನರು...
ಹೆಚ್ಚೆಂದರೆ ಹೊಟ್ಟೆಗೆ-ಬಟ್ಟೆಗೆ
ಗೇದು, ಸಂಪಾದಿಸುವರು...
ಮಕ್ಕಳು ಓದಿ, ಬರೆದು ನೆಟ್ಟಗೆ ಬಾಳಲಿ
ಎಂದು ಕನಸು ಕಾಣುವರು !
ಗಾಳಿ ಮಳೆ ಬಿಸಿಲು ಚಳಿಗೆ
ಹೆದರುವರೆ? ಬೆದರುವರೆ?
ಗೋಧಿ, ಭತ್ತ, ರಾಗಿ, ಜೋಳದ
ತೆನೆಗಳಂತೆ ಹಾಲು ತುಂಬಿದ
ತಾಯಿ ಗುಣದವರು....
ಕೆಟ್ಟರೂ, ಸುಟ್ಟರೂ ಮೊಲೆ ಉಣಿಸುವರು !
ಜಗತ್ತಿನ ಸಿರಿವಂತರ ಪಟ್ಟಿಯಲ್ಲಿ
ಎಂದಾದರೂ ಇದೆಯೆ ಇವನ ಹೆಸರು?
ನೂರಂತಸ್ತಿನ ಮನೆ, ವಿಮಾನ, ಹೆಲಿಕಾಪ್ಟರು
ಎಂದಾದರೂ ಹೊಂದಿರುವರೆ ಇವರು?
ಮಣಗಟ್ಟಲೆ ಬಂಗಾರ, ಬೆಳ್ಳಿ, ಕಂತೆ ಕಂತೆ ನೋಟು
ಎಂದಾದರೂ ಕೂಡಿಟ್ಟಿರುವರೆ ಇವರು ?
ಮೋಸ, ವಂಚನೆ.ಭ್ರಷ್ಟಾಚಾರ..ಎಸಗಿ
ಓಡಿ ಹೋದವರ ಪಟ್ಟಿಯಲ್ಲಿ
ಎಂದಾದರೂ ಸೇರಿರುವರೆ ಇವರು?
ಸಾಲ, ಕಳಪೆ ಬೀಜ-ಗೊಬ್ಬರ, ಬೆಳೆನಾಶ,ಜಪ್ತಿ,
ಇವೇ ಇವರ ಒಡನಾಡಿಗಳು....
ಹೆಚ್ಚೆಂದರೆ ತಮ್ಮ ಜಮೀನಿನಲ್ಲೇ ತಾವು ನೆಟ್ಟ
ಮರಗಳಿಗೇ ನೇಣು ಹಾಕಿಕೊಳ್ಳುವವರು...
ಮೇಟಿ ವಿದ್ಯೆಯೊಂದನೇ ನೆಚ್ಚಿರುವ ಇವರು
ನಿಮ್ಮ ಕೋಟಿ ವಿದ್ಯೆಯ
ಪ್ರಯೋಗ ಪಶುಗಳಾಗಲೊಲ್ಲರು...
ಬೆಳೆದು ಕೊಟ್ಟವರು, ಪಟ್ಟು ಹಿಡಿದು
ತಾ ಬಯಸಿದ ಬೆಳೆ ಬೆಳೆಯುವ ಹಕ್ಕು,
ಬೆಳೆದ ಬೆಳೆಗೆ ಬೆವರಿನ ಬೆಲೆ ಕೇಳುತಿಹರು..
ನೀವು ತಿನ್ನುವುದು ರೊಟ್ಟಿಯೇ ಆಗಿದ್ದರೆ
ಸಿಟ್ಟಾಗದೆ ಆಲಿಸಿರಿ.. ಬಿಟ್ಟುಬಿಡಿ ಪೊಗರು !
ಚಿತ್ರ : ವೀರಪ್ಪ ತಾಳದವರ
ಸವಿತಾ ನಾಗಭೂಷಣ
ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣ ಅವರು ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಶಿವಮೊಗ್ಗದಲ್ಲಿ. ಮಲೆನಾಡಿನ ಅನುಭವದ ಹಿನ್ನೆಲೆಯಲ್ಲಿ ಅವರ ಬಹಳಷ್ಟು ಕವಿತೆಗಳಲ್ಲಿ ಗಿಡ-ಮರ, ಹಸಿರು-ಹೂ-ಹಣ್ಣು ಮತ್ತು ಹೊಳೆ-ಮಳೆ- ಮೋಡಗಳ ಜೀವಂತ ರೂಪಕ ಒಳಗೊಂಡಿರುತ್ತವೆ. ವರ್ತಮಾನದ ಮನುಷ್ಯನ ಆಳದ ಸಂತೋಷ-ನೆಮ್ಮದಿ, ದುಃಖ- ವಿಷಾದಗಳನ್ನು ಅಂತಃಕರಣಪೂರ್ವಕವಾಗಿ ದಾಖಲಿಸುತ್ತವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾವ್ಯಕ್ಕಾಗಿ ನೀಡುವ ಪ್ರಶಸ್ತಿ ಪಡೆದ ಮೊದಲ ಕವಯತ್ರಿಯಾದ (ನಾ ಬರುತ್ತೇನೆ ಕೇಳು) ಸವಿತಾ ಅವರ ಎಲ್ಲ ಸಂಕಲನಗಳಿಗೆ ವಿವಿಧ ಸಂಘ-ಸಂಸ್ಥೆಗಳ ಬಹುಮಾನ -ಪ್ರಶಸ್ತಿ ಸಂದಿವೆ. ಅವರ ವಿಶಿಷ್ಟ ಕಾದಂಬರಿ ’ಸ್ತ್ರೀಲೋಕ’ಕ್ಕೆ ಎಂ.ಕೆ. ಇಂದಿರಾ ಮತ್ತು ಬಿ.ಎಚ್. ಶ್ರೀಧರ್ ಪ್ರಶಸ್ತಿ ಸಂದಿವೆ.ಕೆಲ ಕಾಲ ’ಸಾಹಿತ್ಯ ಸಂವಾದ’ ಸಾಂಸ್ಕೃತಿಕ ದ್ವೈಮಾಸಿಕದ ಸಂಪಾದಕರಾಗಿದ್ದ ಅವರು ಅಕಾಡೆಮಿ ಪ್ರಕಟಿಸಿದ ’ಸುವರ್ಣ ಕಾವ್ಯ’ ಸಂಪಾದಕರಲ್ಲಿ ಒಬ್ಬರಾಗಿದ್ದರು. ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸವಿತಾ, ತಮ್ಮ ಪತಿ ಡಿ.ಎಸ್. ನಾಗಭೂಷಣ ಅವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.
More About Author