ಕವಿ, ಕತೆಗಾರ್ತಿ ಕವಿತಾ ಹಿರೇಮಠ ಅವರು ರಾಯಚೂರು ಜಿಲ್ಲೆಯವರು. ಬಾಲ್ಯದಿಂದಲೂ ಬರವಣಿಗೆಯ ಹವ್ಯಾಸ ಬೆಳೆಸಿಕೊಂಡಿದ್ದ ಇವರು, ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಸ್ವಂತ ಫೋಟೋ ಸ್ಟುಡಿಯೋದಲ್ಲಿ ಛಾಯಾಗ್ರಾಹಕಿಯಾಗದ್ದಾರೆ. ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು 150ಕ್ಕೂ ಹೆಚ್ಚು ಗಝಲ್ ಗಳನ್ನು ಬರೆದಿದ್ದಾರೆ. ಪ್ರಸ್ತುತ ಅವರು ಬರೆದಿರುವ ‘ಕನಸು ಕೊಂದ ಉಬ್ಬಿದ ಗೋಡೆ’ ಕತೆ ನಿಮ್ಮ ಓದಿಗಾಗಿ...
ಬಡತನಕ್ಕೆ ಬಡತನವೇ ಜೊತೆಗಾರ ನಿನ್ನ ಕಟ್ಟಿಕೊಂಡು ದುಡುದು ದುಡುದು ಸಾಯೋದೇ ಆತು ಇನ್ನೂ ಎಲ್ಲಿ ಇಟ್ಟಾನೋ ಏನೋ ಶಿವ... ನನ್ನ ಸಾವು ಆತ ಏನಾದರೂ ಮೆಣಸಿನಕಾಯಿ ಚಾಪೆಯಲ್ಲಿ ಸುತ್ತಿ ಇಟ್ಟಿರಬೇಕು ತೆಗೆಲು ಹೋದರೆ ಘಾಟು ಅಂತ ನನ್ನ ಸಾವು ನೋಡವಲ್ಲ ...
ಈ ಮಳಿವೊಂದು ಮೂರು ದಿನ ಆತು ನಿಲ್ಲವಲ್ತು ಹಸಿ ಸೌದೆ ಒಲೆಯಲ್ಲಿ ಇಟ್ಟು ಹೊಗೆ ಕುಡಿಲಾರದ ಸಾಕಾಯ್ತು ಕಣ್ಣು ಹೋಗ್ತಾವಾ ಮಗಳು ಗಂಗಾ ಬೇರೆ ಹಡದಾಳ ಬಾಣಂತಿ ಎಮ್ಮೆ, ಕುರಿ, ಮೇಕೆ, ಬಾಣಂತಿ ಅಡಗಿ ಎಲ್ಲ ಕೆಲ್ಸ ಒಬ್ಬಾಕಿ ಮಾಡಿ ಮಾಡಿ ಸಾಕಾಯಿತು. ಎಷ್ಟು ಅಂತ ಬಡದಾಡಲಿ ಎಂದು ಬಡಬಡಿಸುತ್ತಾ ರೊಟ್ಟಿ ಬಡಿತಾ ಇದ್ದಳು ಮಾದೇವಿ.
ಗಂಡ ಕೆಂಚಪ್ಪ ಸುಮ್ಮನೆ ಬೀಡಿ ಸೇದುತ್ತಾ ಮೂಲೆಯಲ್ಲಿ ಏನೋ ಚಿಂತಿ ಮಾಡ್ತಾ ಕುತಿದ್ದ ಗಂಗಾ ಮಗುವಿಗೆ ಹಾಲು ಕುಡಿಸ್ತಾ ಇದ್ದಳು. ಹೊರಗಿನಿಂದ ಕೆಂಚ..ಕೆಂಚಾ ಅಂತ ಕೂಗಿದ ಶಬ್ಧ ಕೇಳದಷ್ಟು ಚಿಂತೆಯಲ್ಲಿ ಮಗ್ನನಾಗಿದ್ದ ..
ಅಯ್ಯೋ ಮೂದೇವಿ ಹೊರಗ ಕೂಗದು ಕೇಳವಲದು ಏನ್ ನಿನಗ ಏನಾಗ್ಯಾದ ನಿನ್ನ ಹೆಣ ಹೆತ್ತಲಿ ಅಂತ ಬೈಕೊಂತ ಹೊರಗೆ ಹೋಗಿ ನೋಡಿದಳು ಮಾದೇವಿ ಮಳೆ ಸಣ್ಣಾಗಿ ಬರ್ತಾ ಇತ್ತು. ಕಾಳಪ್ಪ ಒಂದು ಗೋಣಿ ಚೀಲ ತಲೆ ಮೇಲೆ ಹಾಕಿಕೊಂಡು ನಿಂತಿದ್ದ.
ಏನಣ್ಣಾ ಇಷ್ಟು ದೂರ ಬಂದಿದ್ದು ಎನ್ನುತ್ತಲೇ ಕೆಂಚಪ್ಪ ಬಂದ ಏನ್ಲಾ ಕಾಳಾ ಬಾ.. ಎಂದ. ಏನಿಲ್ಲ ನಮ್ಮದು ಒಂದಿಷ್ಟು ಜೋಳದ ಚೀಲಗಳು ಇವೆ ಅದನ್ನು ನಿಮ್ಮ ಗುಡಿಸಿಲಲ್ಲಿ ಇಟ್ಟು ಮಳೆ ನಿಂತ ಮೇಲೆ ಮನೆಗೆ ತಗೊಂಡು ಹೋಗ್ತೀನಿ ಕೆಂಚಣ್ಣಾ ಮನೆಗೆ ಹೋಗುವ ದಾರಿಯಲ್ಲಿ ಹಳ್ಳ ಇದೆ ಮಳೆನು ಈ ಪಾಟಿ ಜೋರು ಬಂದಿದೆ ಹಳ್ಳ ಬಂದಂಗೆ ಐತಿ ಹಳ್ಳ ಒದರ್ತಾ ಐತಿ ಅದ್ಕೆ ... ನೀನು ಊರು ಬಿಟ್ಟು ಹೊಲದಲ್ಲಿ ಗುಡಿಸಲು ಕಟ್ಟಿ ಬೆಸ್ ಮಾಡಿದ್ದಿ ಚಿಂತೆ ಇಲ್ಲ ನಿಂಗೆ.ಎಂದ ಕಾಳ
ನಮ್ಮದು ಹೊಲದಲ್ಲಿ ಕಟ್ಟಿದ ಗುಡಿಸಲು ತುಂಬಾ ಚಿಕ್ಕದು ಮಗಳು ಬೇರೆ ಬಾಣಂತಿ ಮದುವೆ ಆಗಿ ಆರು
ವರುಷ ಆದ್ರೂ ಮಕ್ಕಳು ಆಗಿಲ್ಲ ಅಂತ ಕಿರುಕುಳ ಅನುಭವಿಸಿದ ಮೇಲೆ ಈಗ ಒಂದು ಕೂಸು ಹುಟೈತಿ ಆಡುವ ಮಗಳಿಗೆ ಮದುವೆ ಮಾಡಿ ತಪ್ಪು ಮಾಡಿದ್ದಿವಿ ಈಗ ಮಗಳು ಮುಖದಲ್ಲಿ ನಗು ನೋಡಿವಿ .
ಇನ್ನೂ ಹಸಿ ಬಾಣಂತಿ ಒಂದು ಕಡೆ ಗೋಡೆ ಉಬ್ಬಿ ನಿಂತಿದೆ ಪೋಟಿ ಕೊಟ್ಟಿವಿ ಮನೆಯಾಗ ಕೂಡಲು ಜಾಗ ಇಲ್ಲ ತಾಯಿ ಮಗಳು ಗುಡಿಸಲಲ್ಲಿ ಮಲಗಿದರೆ ನಾನು ದನ ಕರು ನೋಡುತ್ತಾ ಹೋರಗೆ ಮಲಗ್ತಾ ಇದ್ದೆ. ಈ ಪಾಟಿ ಮಳೆ ಬಂದು ನನಗೆ ಆತಂಕ ಶುರುವಾಗಿದೆ . ಏನ್ ಮಾಡ್ಲಿ ಕಾಳ ಈ ಮಳೆಗೆ ಗೋಡೆ ಕುಸಿದು ಬಿದ್ದರೆ ಹಸಿ ಬಾಣಂತಿ ಕರಕೊಂಡು ಏನ್ ಮಾಡ್ಲಿ ಎಲ್ಲಿಗೆ ಹೋಗ್ಲಿ... ಅಂತ ಚಿಂತಿ ಆಗೈತಿ.
ನಿನ್ನ ಜೋಳದ ಚೀಲ ಎಲ್ಲಿ ಇಡ್ಲಿ ಕಾಳ...?
ಅಯ್ಯೋ ಹೌದು ಕೆಂಚಪ್ಪ ನಿನ್ನ ಬಡತನ ,ಕಷ್ಟ ನಂಗೂ ತಿಳಿತಾದ ಚೀಲದ ಮ್ಯಾಲೆ ಬರಕ ಹೋದಿಸಿ ಮನೆಗೆ ಹೋಗ್ತೀನಿ ಹಳ್ಳ ಇಳದ ಮೇಲೆ ಎತ್ತಿನ ಬಂಡಿ ಕಟ್ಟಿಕೊಂಡು ಬಂದು ಚೀಲ ತಗೊಂಡು ಹೋಗ್ತೀನಿ.. ನೀನು ಬ್ಯಾಸರ ಮಾಡಿಕೊ ಬೇಡ ಕೆಂಚಣ್ಣ ..
ಮಗಳು ಬಾಣಂತಿ ಆದ ವಿಷಯ ತಿಳಿದಿದ್ದಿಲ್ಲ ..
ಸುಮ್ನೆ ಊರ ಕಡೆ ಬಂದು ಬಿಡು ಏನಾದರೂ ಆದ್ರಾ ತಿಳಿಯಲ್ಲ ಅಡವಿಯಲ್ಲಿ ಬಾಣಂತಿ ಕೂಸು ಕೂಡ ಇರೋದು ಚಲೋ ಅಲ್ಲ ನೋಡು.. ಎಂದ ಕಾಳ
ಹೌದಪ್ಪ ಏನ್ ಮಾಡ್ಲಿ ಊರಗ ನನಗ ಅಂತ ಮನಿ ಮಠ ಇಲ್ಲ ಅದ್ಕಾ ...
ಇರೋದು 2 ಎಕರೆ ಭೂಮಿಯಲ್ಲಿ ಸಣ್ಣದು ಗುಡಿಸಲಿ ಹಾಕಿವಿ ದೊಡ್ಡದು ಆದ್ರಾ ಬೆಳೆ ಭೂಮಿ ನಷ್ಟ ಆದಾತು ಅಂತ ಒಬ್ಬಳೇ ಮಗಳು ಗಂಡನ ಮನಿಯಾಗ ಇರ್ತಾಳ ಮತ್ ನಾನು ಈಕಿ ಇಬ್ಬರೆ ಇರೋದು ಅಂತ ಮಾಡಿದ್ದೆ ಇರೋದು ಒಂದು ಗುಡಿಸಲು ಗೋಡೆ ಉಬ್ಬಿ ನಿಂತಿದ ಕಾಳ ಏನ್ಮಾಡ್ಲಿ..
ಏ.. ಮಾರಾಯಾ...ಅದ್ಕಾ ಯಾಕ್ ಚಿಂತಿ ಊರಿನ ಗೌಡ್ರಗೆ ಹೇಳಿ ಆ... ಕುಲಕರ್ಣಿಯರ ಮನಿ ಬಗಲಗಿನ ಜಾಗದಾಗ ಒಂದು ಗುಡಿಸಲು ಹಾಕು ಮಳೆಗಾಲ ಮುಗಿದ ಮೇಲೆ ಹೋತಿವಿ ಗೌಡ್ರೇ ಬಾಣಂತಿ ಕೂಸು ಐತಿ ಅಂತ ಹೇಳಿದರೆ ಆತು ನೀನು ಬಾ ನಾಳೆನೆ ಗೌಡ್ರ ಮನಿಗೆ ಹೋಗಿ ಕೇಳೋಣು .. ಎಂದು ಹೇಳಿ ಹೋದ ಕಾಳ.
ಮಾದೇವಿ ಮತ್ತು ಕೆಂಚಪ್ಪನಿಗೆ ಸರಿ ಅನಿಸಿತು ಹಂಗೆ ಮಾಡೋಣ ಅಂತ ಸ್ವಲ್ಪ ನಿಟ್ಟುಸಿರು ಬಿಟ್ಟರು ಕಾಳ ಹೋದ ಮಳೆ ನಿಲ್ಲುವಂತೆ ಕಾಣಲಿಲ್ಲ. ಒಳಗೆ ಬಂದು ಕೆಂಚಪ್ಪ ಮಗಳೇ... ಕಾಳ ಹೇಳಿದಂಗ ಮಾಡೋಣ ಯವ್ವಾ.. ಎಂದ ಮಗಳು ಗಂಗಾ ಏನಪ್ಪಾ ಏನಂದ ಕಾಳಪ್ಪಣ್ಣ ಅಯ್ಯೋ ನಮ್ಮವ್ವ ನಿಮ್ಮಪ್ಪ ಏನಾದರೂ ದೊಡ್ಡ ಅರಮನೆ ಕಟಿದ್ದಾನಾ ಏನೋ ಇಲ್ಲೆ ಒಂದು ಅಡಿ ಬಗಲಾಗ ನಿಂತು ಮಾತಾಡಿದ ಕಾಳನ ಧ್ವನಿ ಕೇಳಲಿಲ್ಲ ಏನ್ ಬೇ ನಿನಗಾ ... ಇಲ್ಲ ಯವ್ವಾ ನಿಮ್ಮ ಮಾತು ನಾನು ಕೇಳಿಸಿಕೊಂಡಿಲ್ಲ ನಾನು ನನ್ನ ಕೂಸಿನ ನೋಡ್ತಾ ಇದ್ದೆ ...
ಈ ಕೂಸಿಗಾಗಿ ಒಂದು ದೊಡ್ಡ ಕನಸು ಕಂಡಿನಿ ಅಪ್ಪ ನಾನು ಓದಿ ದೊಡ್ಡ ಪೊಲೀಸ್ ಅಧಿಕಾರಿ ಆಗಬೇಕು ಅಂತ ಎಷ್ಟು ಆಸೆ ಇತ್ತು... ಅಪ್ಪ ಏಳನೇ ತರಗತಿಗೆ ಬಿಡಿಸಿ ಮದುವಿ ಮಾಡಿದ ಆದ್ರಾ ನನ್ನ ಕೂಸು ಗಂಡು ಮಗ ಅದಾನ ಅದ್ಕಾ ಅವನು ನಾನು ಏನು ಆಗಬೇಕು ಅಂತ ಆಸೆ ಇತ್ತು ಅಲ್ಲ ಅದು ನನ್ನ ಮಗ ಆಗಲಿ ಅಂತ ಕನಸು ಕಾಣ್ತಾ ಇದ್ದೆ ...ಅವ ದೊಡ್ಡವ ಆಗಿ ಪೊಲೀಸ್ ಬಿಟ್ಟೆ ಹಾಕಿಕೊಂಡು ಬಂದು ಅವ್ವಾ ಅಂತ ನಿಲ್ಲುವ ಹಂಗ್ ನಾನು ಮಾಡೆ ಮಾಡ್ತೀನಿ .. ಅಂತ ಹೇಳಿದ ಮಗಳ ಆಸೆ, ಕನಸು ಕೇಳಿ ಮಾದೇವಿ,ಕೆಂಚಪ್ಪರಿಗೆ ಎಲ್ಲಿಲ್ಲದ ಸಂಭ್ರಮ ಸಡಗರ.. ಬಡತನದ ಕಷ್ಟ ಮರೆತು ನಗತೊಡಗಿದರು ಆಯ್ತು ಮಗಳೇ ನಿನ್ನ ಕನಸು ನನಸಾಗಲಿ...ಆ ದೇವರು ಆಶೀರ್ವಾದ ನಿನ್ನ ಮೇಲೆ ಕೂಸಿನ ಮೇಲೆ ಇರಲಿ ಎಂದರು.
ಸರಿ ಊಟ ಮಾಡವ್ವ ಬಾಣಂತಿ ಜಾಸ್ತಿ ಮಾತಾಡಿ ಆಯಾಸ ಮಾಡಿಕೊಳ್ಳಬೇಡ ಊಟ ಬಿಸಿ ಇದ್ದಾಗಲೇ ಉಂಡು ಬಿಡಬೇಕು ಅಂತ ಹೇಳ್ತಾ ಮಾದೇವಿ ತಟ್ಟೆಯಲ್ಲಿ ಸಜಕ್ಕ ತುಪ್ಪ ಹಾಕಿಕೊಂಡು ಬಂದು ಕೊಟ್ಟಳು.. ಮಗಳ ನಗು ನೋಡಿ ಹಿಗ್ಗಿದ್ದ ಕೆಂಚಪ್ಪ .
ಮಾದೇವಿ , ಕೆಂಚಪ್ಪ ಉಂಡು ಅಲ್ಲೆ ಸ್ವಲ್ಪ ಜಾಗದಲ್ಲಿ ಮಲಗಿದರು. ನೀರು ಸೊರ್ತಾ ಇತ್ತು .. ಕಂಬಳಿ ಹೊದ್ದು ಮಲಗಿದರು ನಾಳೆ ಯಾವಾಗ ಆದಿತು ...
ಗೌಡ್ರ ಹೊಟ್ಟೆಯಲ್ಲಿ ಶಿವನೇ ಹೊಕ್ಕಂಡು ಅವರ ಜಾಗದಾಗ ಗುಡಿಸಲು ಹಾಕಿಕೊಳ್ಳಲು ಒಪ್ಪಿಗೆ ಕೊಟ್ಟರೆ ಸಾಕು.. ಮಗಳು ಬಾಣಂತನ ಮುಗಿದ ಮೇಲೆ ಆಕಿನ ಗಂಡನ ಮನೆಗೆ ಕಳುಹಿಸಿ ನಾವಿಬ್ಬರೂ ಇದೆ ಜಾಗಕ್ಕೆ ಬಂದರೆ ಆಯ್ತು.
ಹೊಸ ಗುಡಿಸಲು ಹಾಕಲು ಕಟ್ಟಿಗೆ ಬೇಕು ಹೊಲದ ಮ್ಯಾರಿಗೆ ಇರುವ ಗಿಡ ಕಡಿಬೇಕು ಎಲ್ಲ ವ್ಯವಸ್ಥೆ ಆಗಬೇಕು ಅಂತ ಗಂಡ ಹೆಂಡತಿ ಮಾತಾಡ್ತಾ ಮಲಗಿದರು.
ಬೆಳಿಗ್ಗೆ ಎದ್ದು ಕೆಂಚ ಊರ ಕಡೆ ಹೊರಟ ಮಳೆ ಬರ್ತಾ ಇತ್ತು ಒಂದು ಗೋಣಿ ಚೀಲ ತಲೆ ಮೇಲೆ ಹಾಕಿಕೊಂಡು ನಡೆದ ಸೀದಾ ಗೌಡ್ರ ಮನೆಗೆ.
ಇನ್ನೂ ಗೌಡ್ರು ಮಲಗಿದ್ದರು. ಮನೆಯ ಆಳುಗಳು ಏನ್ ಕೆಂಚಪ್ಪ ಮಳೆಯಲ್ಲಿ ಬಂದಿದ್ದಿ ಅಂದಾಗ ಹೌದಪ್ಪ ಗೌಡ್ರನ ಬೇಟಿ ಮಾಡೋದು ಇತ್ತು ಅದ್ಕೆ ಬಂದೆ. ಎಂದು ನಡುಗುತ್ತಾ ಮನೆಯ ಹೊರಗೆ ನಿಂತಿದ್ದ.
ಮಳೆಯಲಿ ಮನೆ ಮುಂದೆ ಕೆಂಚಪ್ಪ ನಿಂತಿದ್ದು ನೋಡಿದ ಗೌಡನ ಹೆಂಡತಿ ಒಳಗೆ ಹೋಗಿ ಗೌಡ್ರನ ಎಬ್ಬಿಸಿ ಯಾಕೋ ಏನೋ ಕೆಂಚಪ್ಪ ಬಂದಾನ ನೋಡ ಹೋಗ್ರಿ ಅವನ ಮಗಳು ಹಡದಾಳ ಅಂತ ನಿಂಗವ್ವ ಹೇಳ್ತಾ ಇದ್ದಳು.
ಯಾರು ಇಲ್ಲದ ಪರದೇಶಿಗಳು ಪಾಪ ಅಡಿವಿಯಲ್ಲಿ ಮನಿ ಮಾಡಿಕೊಂಡು ಇದ್ದಾವ ಊರ ಕಡೆ ಬರೋನು ಅಲ್ಲ ಕೆಂಚಪ್ಪ .. ಯಾಕ್ ಬಂದಾನೋ ಏನೋ ನೋಡ ಹೋಗ್ರಿ ಎಂದಳು . ಬೆಳಿಗ್ಗೆ ಬೆಳಿಗ್ಗೆ ಏನ್ ಕಿರಿಕಿರಿ ನಿಂದು ಎನ್ನುತ್ತಾ ಎದ್ದು ಬಂದು ಕೆಂಚಪ್ಪ ಬಾ ಒಳಗ ಏನ್ ವಿಷ್ಯಾ ಯಾಕ್ ಎದ್ದ ಹಾಸಿಗೆ ಹೆಗಲಿಗೆ ಹಾಕಿಕೊಂಡು ಬಂದಿದ್ದಿ ಏನಾತು ಎಂದ.
ಏನಿಲ್ಲ ಗೌಡ್ರೇ ನಮ್ಮ ಗುಡಿಸಲಿನ ಗೋಡೆ ಉಬ್ಬಿ ನಿಂತಿದೆ ಮಗಳು ಬಾಣಂತಿ ಇನ್ನೂ ವಾರ ಆಗಿಲ್ಲ ಮಳೆ ಬೇರೆ ಒಂದೇ ಸಮನೆ ಸುರಿತಾ ಇದೆ ಹಿಂಗೆ ಆದ್ರೆ ಗೋಡೆ ಬಿದ್ದು ಬಿಟ್ಟರೆ ಅಂತ ಆತಂಕ ಅದ್ಕೆ..........
ಅದ್ಕೆ ಅಂತ ಯಾಕ ಸುಮ್ಮನೆ ಆದಿ ಏನ್ ಅಂತ ಹೇಳು ನನ್ನ ಕೈಲಾದಷ್ಟು ಸಹಾಯ ಮಾಡತ್ತಿನಿ. ಎಂದ ಗೌಡನ ಮಾತು ಕೇಳಿ ಕೆಂಚಪ್ಪನಿಗೆ ಧೈರ್ಯ ಬಂತು ಬಾಯಿ ಬಿಟ್ಟು ಕೇಳಿದ ಕುಲಕರ್ಣಿಯವರ ಮನಿ ಬಗಲಗಿನ ಜಾಗದಾಗ ಗುಡಿಸಲು ಹಾಕಿಕೊಳ್ಳಲು ಒಪ್ಪಿಗೆ ಕೊಡ್ರಿ ಗೌಡ್ರೇ ಎಂದು ಕೈ ಮುಗಿದ ..ಹ್ಮಾ ಆತು ಹಾಕಿಕೊಂಡು ಇರು ಬೇಕಾದರೆ ನಿನ್ನ ಸಹಾಯಕ್ಕೆ ನಮ್ಮ ಮನೆ ಕೆಲಸದವರನ್ನ ಕರೆದುಕೊ ಎಂದು ಒಳಗೆ ಹೋದ ಗೌಡ.
ಕೆಂಚಪ್ಪನಿಗೆ ಪಂಚಾಮೃತ ಉಂಡಷ್ಟು ಆನಂದ ಆಯ್ತು ಹೆಂಡತಿಗೆ ಹೇಳಬೇಕು ಅಂತ ದೌಡಾಯಿಸಿ ನಡೆದ. ಹೆಂಡತಿ ದನಗಳ ಸಗಣಿ ಗಂಜಲ ಬಾಚತ್ತಾ ಇದ್ದಳು ಗೌಡ್ರ ಹಿಂಗದರು ನೋಡು .. ನಾನು ಹೋಗಿ ಗುಡಿಸಲು ಹಾಕಲು ಕಟ್ಟಿಗೆ ಕಡಿತಿನಿ ಎಂದು ಕೊಡಲಿ ಹಿಡಿದು ಹೊರಟ ಮಾದೇವಿಗೂ ದೇವರು ಕಡಗೂ ನಮ್ಮ ಕೈ ಬಿಡಲಿಲ್ಲ ಎಂದು ಅವರಸದಲ್ಲಿ ಕೆಲಸ ಮುಗಿಸಿ ಮನೆ ಒಳಗೆ ಹೋಗಿ ಮಗಳಿಗೆ ಕೂಸಿಗೆ ಜಳಕ ಮಾಡಿಸಿ ಊಟ ಕೊಟ್ಟು ತಿನ್ನಿಸಿ ತಾಯಿ ಮಗ ಮಲಗಿ ನಾನು ನಿಮಪ್ಪನಿಗೆ ಸಹಾಯ ಮಾಡ್ತೀನಿ ಸ್ವಲ್ಪ ಮಳೆ ನಿಂತಿದೆ ಗಾಳಿ ಬಿಟ್ಟಿದೆ ..ಬೇಗ ಬೇಗ ಕೆಲ್ಸ ಮುಗಿಸಿ ಸಂಜೆ ಅಷ್ಟೋತ್ತಿಗೆ ಗುಡಿಸಲು ಹಾಕಿಕೊಂಡು ನಾಳೆನೇ ಊರಕ್ಕ ಹೋಗಿ ಬಿಡೋಣ ಶಿವಪ್ಪಣ್ಣ ಹೇಳ್ತಾ ಇದ್ದ ಇನ್ನೂ ಒಂದು ವಾರ ಮಳೆ ಬರ್ತಾದ ಅಂತ. ಅದ್ಕೆ ನಾವು ಊರ ಒಳಗ ಹೋಗೋಣ ಅಂತ. ಗೌಡ್ರಗೆ ಪುಣ್ಯ ಬರಲಿ ಜಾಗ ಕೊಟ್ಟಾರ ನಾನು ಹೋಗ್ತೀನಿ ನೀನು ಮಲಗು ಮಗಳೇ ಈಗ ಜಲ್ದಿ ಬಂದು ಬಿಡ್ತೀನಿ ಎಂದಳು. ಮಗಳು ಗಂಗಾ ಹುಂನವ್ವ ನಾನು ನನ್ನ ಕೂಸು ಮಲಗಿ ನಿದ್ದೆ ಮಾಡ್ತೀವಿ ನೀನು ಹೋಗು ಎಂದಳು.
ಮಾದೇವಿ ಗುಡಸಿಲಿನ ಕದ ಮುಚ್ಚಿಕೊಂಡು ಗಂಡನಿಗೆ ಬುತ್ತಿ ತೆಗೆದುಕೊಂಡು ಹೊರಟಳು.
ಕೆಂಚಪ್ಪ ಕಟ್ಟಿಗೆಯಿಂದ ಕೋಲು ರೆಡಿ ಮಾಡುತ್ತಾ ಇದ್ದ ಮಾದೇವಿನ ನೋಡಿ ನೀನು ಯಾಕ್ ಬಂದಿ ಬಾಣಂತಿ ಕೂಸು ಬಿಟ್ಟು ಅಂದ .
ಮಾದೇವಿ ಅವರಿಬ್ಬರಿಗೆ ಜಳಕ ಮಾಡಿಸಿ ಊಣ್ಣಿಸಿ ಮಲಗಿಸಿ ಬಂದಿನಿ ನೀನು ಊಣ್ಣು ನಾನು ಸ್ವಲ್ಪ ನೋಡಿಕೊಳ್ಳತ್ತಿನಿ ಅಂದಳು .
ಸರಿ ಎಂದು ಕೆಂಚಪ್ಪ ಉಣ್ಣಲು ಬುತ್ತಿ ಬಿಚ್ಚಿ ಒಂದು ತುತ್ತು ಬಾಯಿಗೆ ಹಾಕಿಕೊಂಡ ದಪ್ ಎಂದು ಜೋರಾದ ಶಬ್ದ ಕೇಳಿಸಿತು... ಇಬ್ಬರೂ ಗಾಬರಿಯಿಂದ ಒಬ್ಬರ ಮುಖ ಒಬ್ಬರು ನೋಡಿ ಗುಡಿಸಿಲಿನ ಕಡೆ ಓಡಿದರು.
ಗುಡಿಸಲು ನೋಡಿ ನೆಲಕ್ಕೆ ಕುಸಿದು ಬಿದ್ದು ರೋದಿಸತೊಡಗಿದಳು. ಮಾದೇವಿ. ಕೆಂಚಪ್ಪ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದ . ಮಾದೇವಿ ಅಳುವ ಧ್ವನಿ ಕೇಳಿ ಕುರಿ ಕಾಯುವ ಜನರು ಓಡಿ ಬಂದರು ಕೆಂಚಪ್ಪನ ಗುಡಿಸಲು ಬಿದ್ದು ನೆಲ ಸಮವಾಗಿತ್ತು.
ಒಬ್ಬರಿಗೊಬ್ಬರು ಜನ ಸೇರಿ ಗುಡಿಸಲಿನ ಕಲ್ಲು ಮಣ್ಣು ಕಟ್ಟಿಗೆ ಬೇರೆ ಪಡಿಸಿದರು .
ಮಾದೇವಿ ಕೆಂಚಪ್ಪರ ರೋಧನೆ ಅಳು. ಸಂಕಟ ಮುಗಿಲು ಮುಟ್ಟಿ ಅವಕ್ಕಾಯಿತ್ತು. ಅವರ ಮಗಳು ಗಂಗಾ ಎಂಟು ದಿನದ ಕೂಸು ಮಲಗಿದ ಜಾಗದಲ್ಲಿ ಗೋಡೆ ಕುಸಿದು ತಾಯಿ ಮಗುವಿನ ಮೇಲೆ ಬಿದ್ದಿದ್ದರಿಂದ ಹೆಣವಾಗಿದ್ದರು.
ನನ್ನ ಮಗ ಪೋಲಿಸ್ ಅಧಿಕಾರಿ ಆಗಿ ಬರುತ್ತಾನೆ ಎಂದು ಹೇಳಿದ ಗಂಗಾಳ ಕನಸು ಮತ್ತು ಕೂಸು ಎಂದು ಮೇಲೆ ಎದ್ದು ಬರದಂತೆ ಮರಣಿಸಿತ್ತು ಮಗಳ ಮಾತುಗಳ ನೆನೆದು ನೆನೆದು ಅಳು ತೋಡಗಿದರು ಮಳೆಯನ್ನು ಶಪಿಸುತ್ತಿದ್ದರು. ಅವರ ಕಣ್ಣೀರು ಕಾಣದಂತೆ ಮಳೆ ಹನಿಗಳು ತೊಳೆಯುತ್ತಾ ಇದ್ದವು ಅವರ ರೋದನೆ ಕೇಳಿಸದಂತೆ ಗುಡುಗು ಸಿಡಿಲು ಮಿಂಚುನ ಆರ್ಭಟ ಮುಂದುವರೆದಿತ್ತು.
ಮಳೆ ಎರಡು ಜೀವಗಳ ಬಲಿ ತೆಗೆದುಕೊಂಡಿತ್ತು.
ಕವಿತಾ ಹಿರೇಮಠ
ಕವಿತಾ ಹಿರೇಮಠ ಅವರು ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಚಿಂಚರಕಿ ಎಂಬ ಗ್ರಾಮದಲ್ಲಿ. ಬಾಲ್ಯದಿಂದಲೂ ಬರವಣಿಗೆಯ ಹವ್ಯಾಸ ಬೆಳೆಸಿಕೊಂಡಿದ್ದ ಇವರು, ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಸ್ವಂತ ಫೋಟೋ ಸ್ಟುಡಿಯೋದಲ್ಲಿ ಛಾಯಾಗ್ರಾಹಕಿಯಾಗಿದ್ನದಾರೆ. ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು 150ಕ್ಕೂ ಹೆಚ್ಚು ಗಝಲ್ ಗಳನ್ನು ಬರೆದಿದ್ದಾರೆ. ಕೃತಿ: ಹೃದಯವೀಣೆ
More About Author