ಈ ವರ್ಷ ಹೆಮ್ಮಾಡಿಗೆ ಸೊಸೆಯಾಗಿ ಬಂದವರಲ್ಲಿ ರತಿ ಮೂರನೆಯವಳು. ಅವಳ ಹೆಸರೇ ಹಲವರ ನಿದ್ದೆಗೆಡಿಸಲು ಕಾರಣವಾಯಿತು. ನಾಗಿ, ಗಣಪಿ, ಪಾತಿ, ಗ್ವಾದು ಹೀಗೆ ವಂಶಸ್ಥರ ನೆನಪಿಗೆ ತಲೆಮಾರುಗಳಿಂದ ಪುನರಾವರ್ತನೆಯಾದ ನಿರಾಕರ್ಷಕ ನಾಮಧಾರಿಗಳಾದ ಗರತಿಯರು ತಲ್ಲಣಿಸಿದ್ದು ಅವಳ ಕ್ರಾಂತಿಕಾರಕ ಹೆಸರು, ವೇಷ, ಭಾಷೆ ಮತ್ತು ವರ್ತನೆಯಿಂದ. ಹೆಮ್ಮಾಡಿಯ ಸಣ್ಣ ಪೇಟೆಯಲ್ಲಿ ಅವಳು ಪಾದ ಊರಿ ನಡೆದದ್ದನ್ನು ಯಾರೂ ನೋಡಿದಂತಿಲ್ಲ; ಬೀಸುವ ಮಂದ ಗಾಳಿಗೆ ಓರೆ ರೆಕ್ಕೆ ಮೈಯಲ್ಲಿ ವಯ್ಯಾರದಿಂದ ಹಾರುವ ಪಾತರಗಿತ್ತಿಯಂತೆ ಅವಳು ಸ್ಕೂಟಿಯ ಮೇಲೆ ಬಣ್ಣವೇ ಬಳುಕಿದಂತೆ ರಸ್ತೆಯಲ್ಲಿ ಮಾಯವಾಗುತ್ತಿದ್ದಳು. ಸರಿದು ಹೋಗುವವಳ ಹಿಂದೆ ಮಲ್ಲಿಗೆಯ ಕಂಪಿರುತ್ತಿತ್ತು; ತಂಗಾಳಿಗೆ ಮಸೆದ ಮುಂಗುರುಳು ನರ್ತಿಸಿದ ಚಿತ್ರಬಿಂಬ ಕ್ಷಣಕಾಲ ಕಣ್ಣು ಬೊಂಬೆಯ ಮೇಲೆ ಓಡುತ್ತಿತ್ತು; ಕುಲುಕುವ ಮೈ ಮಾಟದ ಗೆರೆ ಹೊಡೆದಂತಿದ್ದ ಮೋಹಕ ಆಕಾರಕ್ಕೆ ಅಂಟಿಕೊಂಡ ಚೂಡಿಯ ಛಾಯೆಯ ಛಾಪಿರುತ್ತಿತ್ತು. ನಿತ್ಯ ಬೆಳಗಿನ ಮೊದಲ ಬಸ್ಸಿಗೆ ಕಾಲೇಜಿಗೆ ಹೋಗಲು ‘ಪ್ರಯಾಣಿಕರ ತಂಗುದಾಣ’ದಲ್ಲಿ ಕಾದು ನಿಂತಿರುತ್ತಿದ್ದ ಹುಡುಗರು ಚಂಚಲ ಚಿತ್ತರಾಗಿ ಚಡಪಡಿಸುತ್ತಿದ್ದಂತೆ ಹುಡುಗಿಯರೂ ರತಿಯನ್ನು ಬೆರಗಿನಿಂದ ಕಣ್ತುಂಬಿಕೊಳ್ಳುತ್ತಿದ್ದರು. ಯುವಕರನ್ನು ಬಿಡಿ ಮಧ್ಯವಯಸ್ಕರಲ್ಲೂ ಮನ್ಮಥ ಇದ್ದಕಿದ್ದಂತೆ ಕೆರಳಿ ದೈನಿಕ ಧಾರಾವಾಹಿಯಲ್ಲಿ ರಸಿಕತನವನ್ನು ಪ್ರಕಟಿಸತೊಡಗಿದ. ಪ್ರತಿ ಹೆಣ್ಣು ಸಹಜವಾಗಿ ಬಯಸುವ ರೂಪ ಲಾವಣ್ಯ ರತಿಗೆ ಪ್ರಾಕೃತಿಕವಾಗಿಯೇ ಪ್ರಾಪ್ತವಾಗಿತ್ತು. ರವಿವರ್ಮನ ಕುಂಚಗಳಿಂದ ಮೂಡಿದ ದೇವತೆಗಳಿಗೋ ಸಿನೆಮಾ ತಾರೆಯರಿಗೋ ಸಾಧ್ಯವಿದ್ದ ಸೌಂದರ್ಯ ಹೀಗೆ ರತಿಯಂತಹ ಸಾಮಾನ್ಯ ಸ್ತ್ರೀಯಲ್ಲಿ ಧರೆಗಿಳಿದದ್ದು ಅಚ್ಚರಿ ಮೂಡಿಸಿತ್ತು. ದೂರದ ಮಡಿಕೇರಿಯ ಈ ಅಪೂರ್ವ ಪೋರಿಯನ್ನು ಅಣ್ಣಪ್ಪ ಹೇಗೆ ಮದುವೆಯಾದ ಎಂಬುದೇ ನಿಗೂಢವಾಗಿತ್ತು. ಅದಕ್ಕಿಂತ ವಿಸ್ಮಯದ ವಿಷಯವೆಂದರೆ ಹೆಮ್ಮಾಡಿಯ ನೂರಾರು ಯುವಕರಲ್ಲಿ ಸಾಮಾನ್ಯ ಪ್ರಜೆಯಾಗಿರುವ ಅಣ್ಣಪ್ಪನಿಗೆ ಅವಳು ಹೇಗೆ ಒಲಿದಳು ಎಂಬುದು. ಅಂತೂ ಊರಿನ ಯಾರದೊ ತಪೋಭಂಗಕ್ಕೆ ಧರೆಗಿಳಿದ ಅಪ್ಸರೆಯಂತೆ ಅವಳ ಸುತ್ತ ಪ್ರಭಾವಳಿಯೊಂದು ಸೃಷ್ಟಿಯಾಗಿತ್ತು. ತನ್ನ ಬಗೆಗಿನ ಅಪಕಲ್ಪನೆಗಳನ್ನು ನಿವಾಳಿಸಿ ಹಾಕಲು ಅವಳು ಎಲ್ಲರೊಂದಿಗೆ ಕೃತ್ರಿಮವೆನಿಸದ ಗಾಂಭೀರ್ಯದಿಂದ ವರ್ತಿಸುತ್ತಿದ್ದಳು. ಅವಳಲ್ಲಿ ಸಲಿಗೆ, ಸಲೀಸುತನ ಸಾಧ್ಯವಾಗದೆ ಹಲವರು ಭ್ರಮನಿರಸನರಾಗಿ ಗೌರವಪೂರ್ವಕ ಸುರಕ್ಷಿತ ಅಂತರದಲ್ಲಿ ಉಳಿಯಬೇಕಾಯಿತು.
ಅಣ್ಣಪ್ಪನಿಗೆ ಮಿಠಾಯಿ ತಯಾರಿಸುವ ಪಾಕವಿದ್ಯೆ ಮಾತ್ರ ಪಿತ್ರಾರ್ಜಿತವಾಗಿ ಬಂದಿತ್ತು. ಅವನ ಅಪ್ಪ ಸಾಯುವವರೆಗೂ ಜಾತ್ರೆ ಜರಗುತ್ತಿದ್ದ ಕಡೆಗೆಲ್ಲ ಸುತ್ತಾಡಿ ಪರಿಚಯಸ್ಥರ ಮನೆಯಲ್ಲುಳಿದು ಅಲ್ಲಿನ ತೇರುಬೀದಿಯ ಹಲಿಗೆ ಅಂತಸ್ತುಗಳ ಅಂಗಡಿಗಳಿಗೆ ಮಿಠಾಯಿ ತಯಾರಿಸಿ ಕೊಡುತ್ತಿದ್ದ. ಸಿಗಂಧೂರು ಜಾತ್ರೆಗೆ ಹೋದಾಗ ಭೇಟಿಯಾದ ರತಿಯ ಸಂಬಂಧ ಕುದುರಿದ್ದು ಈ ಮಿಠಾಯಿಯ ದಂಧೆಯಿಂದ ಎಂದು ಅಣ್ಣಪ್ಪ ತನ್ನ ವಿದ್ಯೆಯ ಸಿಹಿ ರುಚಿಯ ಸಾರ್ಥಕ ಮಹಿಮೆಯ ಬಗ್ಗೆ ಹೇಳಿಕೊಂಡಿದ್ದ. ಮಿಠಾಯಿ ತಯಾರಿಕೆ ವರ್ಷವಿಡೀ ಇರುತ್ತಿರಲಿಲ್ಲ; ಜಾತ್ರೆ ನಡೆಯುತ್ತಿದ್ದಾಗ ಅದರಲ್ಲೂ ಬೇಸಿಗೆಯಲ್ಲಿ ಅವನಿಗೆ ಪುರಸೊತ್ತಿರುತ್ತಿರಲಿಲ್ಲ. ಮುಂದಿನ ಜಾತ್ರೆಯಲ್ಲಿ ಚುಕ್ತಾ ಮಾಡ್ತೇನೆ ಎಂಬ ವಾಗ್ದಾನದ ಮೇರೆಗೆ ಮುಂಗಡ ಸಾಲವನ್ನು ಪಡೆದು ಅಂಗಡಿಯವರು ತನ್ನನ್ನು ಆಮಂತ್ರಿಸುವುದನ್ನು ಅನಿವಾರ್ಯಗೊಳಿಸುತ್ತ ಬಂದಿದ್ದ; ಅಪ್ಪನ ಈ ಉಪಾಯದ ವಾರಸುದಾರನಾಗಿದ್ದ ಅಣ್ಣಪ್ಪ. ಉಳಿದ ದಿನ ಸೋಮಾರಿಯಾಗಿ ಅಲೆಯುತ್ತಿದ್ದ. ಮುದಿ ತಾಯಿಯ ವೃದ್ಧಾಪ್ಯ ವೇತನ ಮತ್ತು ರೇಶನ್ ಅಕ್ಕಿ, ಗೋಧಿಯಿಂದ ಹೇಗೊ ಅವರ ಗಂಜಿ ಕೂಳಿನ ಜೀವನ ಸಾಗಿತ್ತು. ಆದರೆ, ರತಿ ಆ ಮನೆಯ ಮೂರನೆಯ ಜೀವವಾಗಿ ಪ್ರವೇಶಿಸಿದ ನಂತರ ಜೀವನದ ದಿಕ್ಕೇ ಬದಲಾಗಿ ಹೋಯಿತು.
ಹೆಮ್ಮಾಡಿಯಲ್ಲಿ ಅದಾಗಲೆ ಸಣ್ಣ ಪೇಟೆಯಾಗಿ ಪರಿವರ್ತನೆಯಾಗುತ್ತಿದ್ದ ಚಹರೆಗಳು ಗೋಚರಿಸತೊಡಗಿದ್ದವು. ರಾತ್ರಿ ಎಂಟಕ್ಕೆ ಚಪಾತಿ ಭಟ್ಟರ ಓರೆ ಬೋರ್ಡಿನ ಚಾ ಹೋಟ್ಲಿನ ಎದುರು ವಸತಿ ಬಸ್ ಬಂದು ನಿಲ್ಲತೊಡಗಿದ ದಿನದಿಂದ ಹಳ್ಳಿ ನಿಧಾನವಾಗಿ ಗೈರು ಹಾಜರಿಯಾಗತೊಡಗಿತು. ಸರಕಾರದಿಂದ ಮಂಜೂರಾದ ವಾರಕ್ಕೊಮ್ಮೆ ಡಾಕ್ಟರ್ ಬರುವ, ಕಂಪೌಂಡರ್ ಮಾತ್ರ ಖಾಯಂ ಇರುವ ಆಸ್ಪತ್ರೆ, ಸೊಸೈಟಿ, ಕಿರಾಣಿ ಅಂಗಡಿಗಳು, ಹೈಸ್ಕೂಲು, ಢಗ್ ಢಗ್ ಸದ್ದಿನ ಅಕ್ಕಿ ಮಿಲ್ಲು, ರಸ್ತೆಯ ಸಂಚಾರಿ ಚಿತ್ರಾವಳಿಯನ್ನು ಛಾಪಿಸುವ ಕನ್ನಡಿಯ ಸಲೂನ್, ಬಾಡಿಗೆ ಬೈಕ್ಗಳು, ಕೂಲಿಯವರ ಮನೆಗಳ ಸಾಲು ಹೀಗೆ ಡಾಂಬರು ರಸ್ತೆಯ ಕತ್ರಿಯಲ್ಲಿ ನಿಂತು ಬೀಡಿ ಸೇದುತ್ತ, ಪಕ್ಕದ ಮೋರಿಯ ಮೇಲೆ ಲುಂಗಿ ಮಡಚಿ ಕೂತು ಎರಡ್ಮೂರು ಭಾಷೆಗಳಲ್ಲಿ ಹರಟುತ್ತ ಜನ ಸಂಚಾರ ಆರಂಭವಾಯಿತು. ಪಶು ಆಸ್ಪತ್ರೆಯ ಹುಣಸೆ ಮರದ ನೆರಳಲ್ಲಿ ವಾರಕ್ಕೊಮ್ಮೆ ಸಣ್ಣ ಸಂತೆ ಸೇರ ತೊಡಗಿತು. ನಡುವೆ ಎರಡು ಸಲ ಜಮೀರನ ಮೀನಿನ ಸೈಕಲ್ ಗಂಟೆ ಬಾರಿಸುತ್ತ ಹೋಗುತ್ತಿತ್ತು. ಕಾಳಗದ ನಾಯಿ ಮತ್ತು ಜಗಳದ ಕೋಳಿಗಳ ಪರಿವಾರ ವೃದ್ಧಿಯಾಗಿ ಅದೊಂದು ಪೇಟೆ ಎಂಬ ಮಟ್ಟಕ್ಕೆ ಬಂತು; ಮನೆಯ ಬಚ್ಚಲ ತಂಗಳಿಗೆ ಬೇಸತ್ತ ಕಾಗೆಗಳು, ಕೊಟ್ಟಿಗೆಯ ದನಗಳು ಹೆಮ್ಮಾಡಿಯ ಪೇಟೆಯ ಚಾಟ್ ಮಸಾಲೆಯ ರುಚಿಗೆ ಮಾರು ಹೋಗಿದ್ದವು. ಹೆಮ್ಮಾಡಿಯಲ್ಲಿ ತನ್ನ ಅನ್ನದ ದಾರಿಯನ್ನು ಕಂಡುಕೊಳ್ಳಲು ರತಿ ಯೋಚಿಸ ತೊಡಗಿದಳು. ಊರ ಧನಿಕರ ತೋಟ-ಗದ್ದೆಗಳಲ್ಲಿ ಕೂಲಿ ಮಾಡುವ, ಅವರ ಮನೆಯಲ್ಲಿ ಸಗಣಿ, ಪಾತ್ರೆ ಬಳಿದು ಹೊಟ್ಟೆ ತುಂಬಿಸಿಕೊಳ್ಳುವ ಬಿಡಾರ ಬದುಕಿನ ಕಾಲ ಮುಗಿದು ಹೋಗಿದೆ ಎಂದು ಅವಳು ಅಣ್ಣಪ್ಪನಿಗೆ ಹೇಳಿದ್ದಳು; ಸೊಸೈಟಿಯ ಗೋಡೌನಿಗೆ ಕಾವಲುಗಾರನನ್ನು ನೇಮಿಸುತ್ತಾರೆಂಬ ಮಾತನ್ನು ನಂಬಿ ಆಯುಷ್ಯ ಹಾಳು ಮಾಡಿಕೊಳ್ಳೋದು ಬೇಡವೆಂದು ಅಣ್ಣಪ್ಪನ ಹುಸಿ ಕನಸನ್ನು ಭಗ್ನಗೊಳಿಸಿದಳು.
ಹೆಮ್ಮಾಡಿಯ ವಿನೂತನ ಕಥಾ ಪ್ರಸಂಗಕ್ಕೆ ಹೊಸ ಪಾತ್ರವೊಂದರ ಆಯ್ಕೆ ಅವಳ ಮುಂದಿತ್ತು. ಕಾತೂರಿಂದ ಪ್ರತಿ ದಿನ ಮುಸ್ಸಂಜೆ ಡೈರಿಗೆ ಹಾಲು ಒಯ್ಯಲು ಬರುತ್ತಿದ್ದ ವ್ಯಾನ್ ಇದ್ದಕಿದ್ದಂತೆ ನಿಂತು ಹೋಯಿತು. ಕ್ಯಾನಿನಲ್ಲಿ ಹಾಲು ತರುತ್ತಿದ್ದವರು ಹಾಲು ಸೊಸೈಟಿಯ ಶೆಡ್ಡಿನೆದುರು ಕೂತು, ಬಾರದ ವ್ಯಾನಿಗೆ ಶಾಪ ಹಾಕಿ ಗೊಣಗುತ್ತ ವಾಪಸ್ಸಾಗುತ್ತಿದ್ದ ದೃಶ್ಯ ನೋಡುತ್ತಿದ್ದ ರತಿಗೆ ತಾನೇ ಆ ಕೆಲಸವನ್ನು ಹಿಡಿದರೆ ಹೇಗೆ ಎಂದು ಆಸೆಯಾಯಿತು. ಹಾಲು ಸಾಗಿಸಲು ಮಡಿಕೇರಿಯಿಂದ ಸೆಕೆಂಡ್ ಹ್ಯಾಂಡ್ ವ್ಯಾನ್ ತರುವುದು, ಅಣ್ಣಪ್ಪ ಡ್ರೈವಿಂಗ ಕಲಿಯುವುದು ಎಂದು ಅವಳ ಯೋಜನೆ ಸಿದ್ಧವಾಯಿತು; ಆದರೆ, ಅದು ಜಾರಿಗೆ ಬರುವಷ್ಟರಲ್ಲಿ ಬೇರೆ ಯಾರೋ ಗುತ್ತಿಗೆ ಹಿಡಿದು ಅವಕಾಶ ತಪ್ಪಿ ಹೋಯಿತು.
ಅದೊಂದು ಸಂಜೆ ಹಾಲು ಕೊಡಲು ಬಂದಿದ್ದ ಮಾವಿನೂರಿನ ಮುದ್ದಪ್ಪ ಅಣ್ಣಪ್ಪನಿಗೆ ತನ್ನ ವಿದೇಶ ಪ್ರವಾಸದ ವಿಷಯ ಎತ್ತಿ ಮಾತಾಡುತ್ತ, “ಮನೆ ಕಾಯಲು ನಾಕು ತಿಂಗಳ ಮಟ್ಟಿಗೆ ಯಾರನ್ನಾದ್ರೂ ಹುಡುಕಿ ಕೊಡು” ಎಂದು ದುಂಬಾಲು ಬಿದ್ದನಂತೆ. ದಿನಾ ಮುಸ್ಸಂಜೆ ಹಾಲು ಕೊಡಲು ಬರುತ್ತಿದ್ದ ಮುದ್ದಪ್ಪ ಅಳತೆ ಪಾಳಿಯಲ್ಲಿರುತ್ತಿದ್ದವರಿಗೆಲ್ಲ ಹೇಳಿ ಅವನ ದೇಶಾಂತರ ಪಯಣ ಜಗಜ್ಜಾಹೀರಾದ ನಗೆಪಾಟಲಿನ ವಿಷಯವಾಗಿತ್ತು. ಅವನಿಂದ ಪಾರಾಗಲು ‘ನೋಡ್ವಾ ಹಾಂ’, ‘ಅದೊಂದು ಜವಬ್ದಾರಿ ಬ್ಯಾಡ ಅನ್ನವರೇ ಎಲ್ಲ’ ‘ನಂಬಿಗಸ್ತರು ಸಿಗೋದು ಕಷ್ಟ’ ಎಂದೆಲ್ಲ ಮಾತು ತೇಲಿಸಿ ಹೋಗುತ್ತಿದ್ದರು. ಮುದ್ದಪ್ಪನ ಪ್ರಲಾಪವನ್ನು ಹಾಸ್ಯ ಮಾಡಿ ಅಣ್ಣಪ್ಪ ತನ್ನೆದುರು ಪ್ರಸ್ತಾಪಿಸಿದಾಗ ಅದರಲ್ಲೊಂದು ಅನಾಯಾಸ ಉದ್ಯೋಗದ ಸಾಧ್ಯತೆ ರತಿಗೆ ಹೊಳೆಯಲು ತಡವಾಗಲಿಲ್ಲ.
ಹೆಮ್ಮಾಡಿಯ ಬಹುತೇಕ ಎಲ್ಲ ಮನೆಗಳಲ್ಲಿ ಅರವತ್ತು ದಾಟಿದ ದಂಪತಿಗಳು ವಾಸಿಸುತ್ತಿದ್ದದ್ದು ಸಾಮಾನ್ಯವಾಗಿತ್ತು; ಅವರ ಮಕ್ಕಳೆಲ್ಲ ಬೆಂಗಳೂರೊ ಹೊರ ದೇಶಗಳಲ್ಲೊ ಸಂಸಾರ ವಂದಿಗರಾಗಿದ್ದವರೇ; ವರ್ಷಕ್ಕೊಮ್ಮೆ ಅವರು ಹಬ್ಬ-ಹರಿದಿನಗಳಿಗೆ ಪ್ರವಾಸಿಗರಂತೆ ಊರಿಗೆ ಬರುವುದು, ಇಳಿಗಾಲದ ತಂದೆ-ತಾಯಂದಿರನ್ನು ಅವರು ತಮ್ಮಲ್ಲಿಗೆ ಕರೆಯಿಸಿಕೊಳ್ಳುವುದು ಇತ್ತೀಚಿಗೆ ಹೆಚ್ಚಾಗಿತ್ತು. ಮನೆಯಲ್ಲಿರುವ ವೃದ್ಧ ದಂಪತಿಗಳು ಹೊರ ತಿರುಗಾಟದ ವಾಹನಕ್ಕೆ, ಕಾಲ ಕಾಲಕ್ಕೆ ಸೇವಿಸಬೇಕಾದ ಔಷಧಗಳನ್ನು, ಕೊಟ್ಟಿಗೆಯಲ್ಲಿ ಹಸು ಕಟ್ಟಿ ವಾಗಾತಿ ಮಾಡಲಾಗದೆ ಹಾಲನ್ನು ಡೈರಿಯಿಂದ ತರಿಸಿಕೊಳ್ಳಲು ಪರರನ್ನು ಅವಲಂಬಿಸಿದ್ದರು. ಮಕ್ಕಳು ಬ್ಯಾಂಕಿನಲ್ಲಿ ಠೇವಣಿ ಇಟ್ಟದ್ದರಿಂದ ಅವರಿಗೆ ಹಣದ ಕೊರತೆಯೇನೂ ಇದ್ದಿರಲಿಲ್ಲ. ‘ಇಷ್ಟು ವರ್ಷ ದುಡಿದದ್ದು ಸಾಕು; ಇನ್ನಾದರೂ ಆರಾಮಾಗಿರಿ’ ಎಂದು ವಿಡಿಯೊ ಕಾಲ್ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದ ಮಕ್ಕಳ ಮಾತನ್ನು ಅನುಸರಿಸಿದ್ದರು. ಹೆಮ್ಮಾಡಿ ಪೇಟೆಯಲ್ಲಿ ಸುಖಾಸೀನ ಬಸ್ಸುಗಳ ಬುಕಿಂಗ್ ಆಫೀಸ್ ಕೂಡಾ ತೆರೆಯಲಾಗಿದೆ. ಹೊರ ದೇಶಕ್ಕೆ ಹೋಗುವವರ ಮನೆಯಲ್ಲದೆ ತೋಟ, ಕೊಟ್ಟಿಗೆಯ ಹಾಲು ಹಸುವಿನ ಉಸ್ತುವಾರಿ ವಹಿಸಿಕೊಳ್ಳಬೇಕಿತ್ತು; ಇದರೊಂದಿಗೆ ಬೆಕ್ಕಿಗೆ ಹಾಲು, ನಾಯಿಗೆ ಅನ್ನ ಹಾಕಿ ಜೋಪಾನ ಮಡುವ ಜವಬ್ದಾರಿಯೂ ಇರುತ್ತಿತ್ತು. ಮನೆ ದೇವರನ್ನು ಕೇರಿಯ ದೇವಸ್ಥಾನದಲ್ಲಿರಿಸಿ ಹೋಗುತ್ತಿದ್ದರು.
“ಮುದ್ದಪ್ಪರನ್ನು ನನಗೆ ಭೇಟಿ ಮಾಡಿಸು” ರತಿ ಕಾತುರಳಾದಳು.
ಅಣ್ಣಪ್ಪ ಉದಾಸೀನದಲ್ಲೆ ಮರುದಿನ ಮುಸ್ಸಂಜೆ ಡೈರಿಗೆ ಬಂದ ಮುದ್ದಪ್ಪನನ್ನು ಅವಳಿಗೆ ಭೇಟಿ ಮಾಡಿಸಿದ.
“ಯಾವುದಕ್ಕೂ ರಸ್ತೇಲಿ ನಿಂತು ಮಾತಾಡೋದು ಸರಿಯಲ್ಲ; ಮನೆಗೆ ಬನ್ನಿ” ಮುದ್ದಪ್ಪ ಕರೆದು ಕತ್ತಲಲ್ಲಿ ಕರಗಿ ಬೈಕಿನ ಸದ್ದಾಗಿ ಹೋದ.
ಮರುದಿನ ಗಂಡನ ಜೊತೆಗೆ ರತಿಯ ಸ್ಕೂಟಿ ಸವಾರಿ ಹೊರಟಿತು.
ಕಾಡಿನ ನಡುವಿನ ಮಾವಿನೂರು ಒಂಟಿ ಸಾಮ್ರಾಜ್ಯವಾಗಿತ್ತು; ಉಳುಮೆ ಮಾಡದೆ ಪಾಳು ಬಿದ್ದ ಗದ್ದೆ ಮತ್ತು ಮನೆಯ ಅಂಗಳದಿಂದಲೆ ಆರಂಭವಾದ ತೋಟದ ನೆರಳಲ್ಲಿ ನಿಂತ ಹಳೆಯ ಹಂಚಿನ ಮನೆಯ ನೀರವತೆಯನ್ನು ಸ್ವಚ್ಛಂದ ಹಾರುವ ಹಕ್ಕಿಗಳ ಚೀರಾಟ ಕಲಕುತ್ತಿತ್ತು. ಮುದ್ದಪ್ಪ ಮತ್ತು ಅವನ ಹೆಂಡತಿ ಮಾತ್ರ ಅಲ್ಲಿಯ ಖಾಯಂ ನಿವಾಸಿಗಳು; ಹಿರಿಯ ಮಗನ ಜೊತೆಗಿದ್ದ ತಾಯಿ ಸುಬ್ಬಮ್ಮ ಮತ್ತು ಬಾಣಂತನಕ್ಕೆ ಬಂದ ತಂಬಾಕಿನ ಕವಳದ ಭಾಗಿ ಹಾಲಿ ಬಂದು ಸೇರಿದ್ದಾರೆ.
ಅದು ಹಳೆಯ ಶೈಲಿಯ ಎರಡು ಕಂಬಗಳ ಉದ್ದ ಅಂಕಣದ ಜಗಲಿ; ಜಮಖಾನ ಹಾಸಿದ ಮಂಚ ಮತ್ತು ಅಂಕಣದಿಂದ ಮುಂಚಾಚಿದ ಒಂದತಸ್ತು ಕೆಳಗೆ ಪ್ರತ್ಯೇಕಿಸಿದ ಜಗಲಿಯ ತಳಿಯ ಅಂಚಿಗೆ ‘ಬೇರೆ’ಯವರಿಗೆ ಕೂರಲು ಹಾಕಿದ ಬಾಂಕು. ರತಿ ಅಂಗಳದ ಮೇಲೆ ಸ್ಕೂಟಿ ನಿಲ್ಲಿಸಿ ಒಳ ಪ್ರವೇಶಿಸುವಷ್ಟರಲ್ಲಿ ಅಣ್ಣಪ್ಪ ಬಾಂಕಿನ ಮೇಲೆ ಮುದುಡಿ ಕೂತಿದ್ದ. ಮುದ್ದಪ್ಪ ಕುರ್ಚಿಯ ಮೇಲೆ ದರ್ಬಾರು ನಡೆಸುವಂತೆ ಕೂತು “ಬಾ ಅಣ್ಣಪ್ಪ, ಅದ್ರ ಹೆಸರು ಗೊತ್ತಿಲ್ಲ” ಎಂದ. ಜಗಲಿಯ ಮೂಲೆಯ ಬಾಂಕು ನೋಡುತ್ತ ಅನುಮಾನಿಸುತ್ತ ರತಿ ಕ್ಷಣ ಹೊತ್ತು ನಿಂತು ಮಂಚದ ಮೇಲೆ ಕೂತಳು; ಮುದ್ದಪ್ಪ ಮತ್ತು ಕದದ ಮರೆಯಿಂದ ಮುಖ ಮಾತ್ರ ಇಣುಕಿದ ಅವನ ಹೆಂಡತಿ ರತಿಯ ಸ್ಥಾನ ಉಲ್ಲಂಘನೆಯನ್ನು ಮುಜುಗರದಲ್ಲಿ ಚಡಪಡಿಸಿದರು; “ಅದು ನನ್ನ ಹೆಂಡ್ತಿ” ಅಣ್ಣಪ್ಪನ ಮಾತಿಗೆ ಕೆರಳಿದ ರತಿ, “ಅದು ಅನ್ನೋದಕ್ಕೆ ನಾನು ವಸ್ತುವಲ್ಲ, ಪ್ರಾಣಿನೂ ಅಲ್ಲ; ಅದೆಂಥ ಕೆಟ್ಟ ಪದ್ಧತಿ ನಿಮ್ಮ ಕಡೆಗೆ ಹೆಣ್ಣು ಮಕ್ಕಳಿಗೆ ‘ಅದು’ ಎಂದು ಕರೆಯೋದು!” ಎಂದಳು.
ಮನೆಯ ವಾಸ್ತುವಿನಲ್ಲೆ ಮನುಷ್ಯರ ನಡುವೆ ಅಸಮಾನತೆಯ ಭೇದ ಕಲ್ಪಿಸುವ ಗುಪ್ತ ಯೋಜನೆ ಇರುವುದನ್ನು ರತಿ ಗಮನಿಸಿದಳು: ಅಡಿಗೆ ಮನೆಗೆ ಅನ್ಯರ ಪ್ರವೇಶಕ್ಕಿರುವ ಹೊರ ಬಾಗಿಲು; ಅಟ್ಟಕ್ಕೆ ಜಗಲಿಯಿಂದಲೆ ಏರುಲಿಟ್ಟಿರುವ ಏಣಿ; ಮಂಚ ಮತ್ತು ಬಾಂಕಿನ ನಡುವಿರುವ ವರ್ಗಾಂತರ; ಚಿಟ್ಟೆಯ ಹೊರ ಸುತ್ತಿನ ಮಾಡಿನಲ್ಲಿ ಕೆಲಸದವರಿಗೆ ಮೀಸಿಲಿಟ್ಟ ಊಟದ ಚಿಟ್ಟೆ ಮಾಡಿನ ಸಾಲು. ತುಸು ಹೆಚ್ಚೇ ಕಪ್ಪೆನಿಸುವ ಮುದ್ದಪ್ಪನ ದೊಡ್ಡ ಸೊಂಟದ ಹೆಂಡತಿ ಚಹಾ ತಂದಿಟ್ಟಳು; ಮುದ್ದಪ್ಪನ ಲೋಟಕ್ಕಿಂತ ಬೇರೆಯಾದ ನಪ್ಪಿದ ಪ್ಯಾಲೆ; ಕುಡಿದ ನಂತರ ತೊಳೆಯಲು ಪ್ಯಾಲೆಯನ್ನು ಎತ್ತಿಕೊಳ್ಳಲು ಬಂದ ಅಣ್ಣಪ್ಪನಿಗೆ ಮುಟ್ಟದಿರಲು ರತಿ ಕಣ್ಣಲ್ಲೆ ಸನ್ನೆ ಮಾಡಿದಳು. ಮುದ್ದಪ್ಪನ ಹೆಂಡತಿ ಎಂಜಲಾದ ಪ್ಯಾಲೆಗಳನ್ನು ಆತಂಕದಿಂದ ನೋಡುತ್ತ, ಅತಿ ಜಾಣತನದಿಂದ, “ಅಂಗಳದ ಕಂಬದ ಬುಡದಲ್ಲಿ ತೊಳೆಯೋದಕ್ಕೆ ಬಕೇಟಲ್ಲಿ ನೀರು ಉಂಟು” ಎಂದಳು. ಮುದ್ದಪ್ಪ ತನ್ನ ಸಂಚಿಯಿಂದ ಅಣ್ಣಪ್ಪನಿಗೆ ತಾನೇ ಸುಣ್ಣ ಸವರಿದ ಎಲೆ, ಅಡಿಕೆ ಹೋಳು ಮತ್ತು ತಂಬಾಕಿನ ಚೂರನ್ನು ಎಸೆದ. ರತಿ “ನನಗೆ ಒಗರಿಲ್ಲದ ಹಾಲಡಿಕೆ ಚೂರು ಬೇಕು” ಎನ್ನುತ್ತ ಮುದ್ದಪ್ಪನ ತೊಡೆಯ ಮೇಲಿದ್ದ ಸಂಚಿಯನ್ನೆತ್ತಿಕೊಂಡು ಖಾನೆಗಳಲ್ಲಿ ಬೆರಳಾಡಿಸಿ ಮುದ್ದಪ್ಪನ ಮುಜುಗರವನ್ನು ಹೆಚ್ಚಿಸಿದಳು. “ನಮ್ಮನೆ ಪ್ರಾಣಿ ಶಾಸ್ತ್ರಗಿತ್ತಿ” ಮುದ್ದಪ್ಪನ ಮಾತಿಗೆ, “ಪ್ರಾಣಿ!” ಎಂದು ರತಿ ತುಟಿ ಕಚ್ಚಿ ನಕ್ಕಳು.
“ದುಡ್ಡಿನ ಮುಖ ನೋಡುವ ಜನಾ ಅಲ್ಲ ನಾವು” ಮುದ್ದಪ್ಪನ ಮಾತಿನ ಹಿಂದೆ ಮಕ್ಕಳ ಹಣದ ಭರವಸೆಯ ದರ್ಪವಿರುವುದನ್ನು ಅರಿತ ರತಿ, “ಜವಬ್ದಾರಿ ವಹಿಸ್ಕಂಡ ಮ್ಯಾಲೆ ನಾವೂ ಅಷ್ಟೆ” ನಿಯತ್ತಿನ ಉತ್ತರವಿತ್ತಳು.
“ನಿಮ್ಮ ಬ್ಯಾಂಕಿನ ನಂಬರ್ ಕೊಡಿ; ಮಗ ಅಲ್ಲಿಗೆ ನೇರ ಹಣ ಜಮಾ ಮಾಡ್ತಾನೆ. ಅವನು ಬಂದಾಗ ಲೆಕ್ಕಾಚಾರ ಮಾಡ್ಕಂಡ್ರಾಯ್ತು” ವ್ಯವಹಾರ ಯಾವ ಚೌಕಾಸಿಯಿಲ್ಲದೆ ಮುಗಿದದ್ದು ರತಿಗೆ ಅಚ್ಚರಿ ಉಂಟು ಮಾಡಿತು.
“ನಿಮ್ಮ ಟೂರ್ ಡಿಟೇಲ್ಸ್ ಕೊಡಿ” ರತಿ ವಿಚಾರಿಸಿದಳು.
“ಮನೆ ಕಾಯೋದಕ್ಕೆ ಜನ ಗಟ್ಟಿಯಾದ್ಮೇಲೆ ತಿಳಿಸು; ವಿಸಾ, ವಿಮಾನ ಟಿಕೇಟು ಮಾಡಿಸ್ತೇನೆ ಎಂದಿದ್ದಾನೆ ಮಗ”
“ನಾನು ನೀವು ಬರುವ ತನಕ ಈ ಮನೇಲಿ ಇರಬೇಕಾಗ್ತದೆ. ಇಲ್ಲೆ ಅಡಿಗೆ ಬೇಯಿಸೋದು. ನಿಮ್ಮ ಕಿಚನ್ ನೋಡಬಹುದಲ್ಲ.” ಎರಡು ವರ್ಷಗಳ ಅವಳ ಕಾಲೇಜಿನ ಇಂಗ್ಲಿಶ್ ಪದಗಳು ಮನೆಯ ಕಟ್ಟುಪಾಡುಗಳನ್ನು ಸಡಿಲಿಸಿದವು.
ಮುದ್ದಪ್ಪ ಹಠಾತ್ತಾನೆ ಒಳಗೆ ನಡೆದ. ಕದದ ಸಂಧಿಯಿಂದ ಅವನ ಹೆಂಡತಿಯ ತುರ್ತು ಸನ್ನೆ ಬಂದಿತ್ತು. ಬಚ್ಚಲೊಲೆಯ ಸನಿಹ ನಿಂತು, “ಅದು ಗಮಂಡಿ; ತಾನೇ ಮನೆ ಯಜಮಾನ್ತಿ ಹಾಂಗೆ ಕುಣೀತು. ನಾವು ವಾಪಸ್ಸಾಗುವಷ್ಟರಲ್ಲಿ ಮನೆ ಮಾರಾಟ ಮಾಡೊ ಪೈಕಿ” ಪಿಸುಗುಟ್ಟಿ ಎಚ್ಚರಿಸಿದಳು. ಮುದ್ದಪ್ಪನಿಗೆ ಸಹನೆಗೆಟ್ಟು ಹೋಯಿತು; ಮನೆ ಕಾಯುವವರನ್ನು ಹುಡುಕುವದರಲ್ಲಿ ಅವನು ಸೋತು ಹೋಗಿದ್ದ. “ಇವರು ಬಿಟ್ರೆ ನಾವು ಹೋಗೋದ ಕ್ಯಾನ್ಸಲ್ ಮಾಡೋದೆ” ಎಂದ. ರಹಸ್ಯ ಸಮಾಲೋಚನೆ ನಡೆಯುತ್ತಿರುವಾಗ ರತಿ ಅಡಿಗೆ ಮನೆಗೆ ಬಂದು ನಿಂತಿದ್ದಳು. ಕಾದ ಹಂಚಿನ, ಹೊಗೆಗೆ ಕಂದಿದ ಪಕಾಸಿನ ತಗ್ಗು ಮಾಡಿನಿಂದ ಧಗೆ ಇಳಿದಿತ್ತು; ಬೆಳಕಿಂಡಿಯಿಂದ ಅನಾಮತ್ತು ಬಿದ್ದು ಒದ್ದೆ ನೆಲಕ್ಕಂಟಿದ ಓರೆ ಬಿಸಿಲಿನ ಚಪ್ಪಟೆ ಚೌಕ; ಹೊಗೆ ಕಪ್ಪಿನ ದಪ್ಪನೆಯ ಚೀರುವ ಗಿಡ್ಡ ಕದಗಳು ಮನೆಯ ಪ್ರಾಚೀನತೆಯನ್ನು ಸಾರುತ್ತಿದ್ದವು; ಬಳಸದಿರುವ ಮಣ್ಣಿನ ಜೋಡು ಒಲೆಗಳು, ಅದರಾಚೆ ಕೃಷ್ಣನ ಡೊಂಕು ಭಂಗಿಯಲ್ಲಿ ನಿಂತ ಕಡಗೋಲು; ಬೀಸದೆ ಬಿಟ್ಟ ಒಳ್ಳು; ಸ್ಟೀಲು, ಗಾಜು ಮತ್ತು ಅಲ್ಯೂಮಿನಿಯಂ ಡಬ್ಬಗಳು....“ಇಲ್ಲಿದ್ದ ಗ್ಯಾಸ್ ಒಲೆ, ಪ್ರಿಝ್, ಗ್ರೈಂಡರ್ ಎಲ್ಲ ಇಲ್ಲೆ ಇರಲಿ. ಪಾತ್ರೆಗಳೂ ಹಾಗೇ ಇರಲಿ; ಕಾಳು ಕಡಿ ಡಬ್ಬ ತೋರ್ಸಿ ಅಮ್ಮ” ಎಂದಳು. ದಂಪತಿಗಳು ಲಘು ಆಘಾತವಾದಂತೆ ಕುಸಿದು ಹೋದರು. “ನಾನು ಅಟ್ಟದಲ್ಲಿ ಮಲಗ್ತೇನೆ. ನಡುಮನೆಗೆ ಬೀಗ ಹಾಕಿ ಹೋಗಿ. ಬಂಗಾರ-ದುಡ್ಡು ಇಡ್ಬೇಡಿ” ಎನ್ನುತ್ತ ಹೊಸ್ತಿಲಲ್ಲಿ ನಿಂತು ಬಾಗಿಲ ಚೌಕಟ್ಟನ್ನು ಹಿಡಿದು ಬಾಗಿ ಇಣುಕಿ, “ದೇವರ ಮನೆ” ಎಂದಳು. ಅವಳೆಲ್ಲಿ ನುಗ್ಗುತ್ತಾಳೊ ಎಂಬ ಎದೆಗುದಿಯಲ್ಲಿ ಮುದ್ದಪ್ಪನ ‘ಪ್ರಾಣಿ’ ಹೊಸ್ತಿಲ ಬಾಗಿಲ ಒಳಗಡೆ ತಡೆಯೊಡ್ಡುವಂತೆ ನಿಂತಳು. ಹೊಸ್ತಿಲೊಳದ ಮಬ್ಬಿನಲ್ಲಿ ಶಿಶು ಕೊಸರಾಡುವ ಸದ್ದು, ಬಾಣಂತಿಯ ಹಾಲು ಮತ್ತು ಎಣ್ಣೆಯವಾಸನೆಗೆ ರತಿ ಚುರುಕಾದಳು. ಆ ಮಬ್ಬಿನಲ್ಲಿ ನೆರಳಂತೆ ಎರಡು ಹೆಣ್ಣು ಜೀವಗಳು ಮಿಸುಕಾಡಿದವು.
ಮುದ್ದಪ್ಪ ತೆರೆದ ಕಿಟಕಿಯ ಬಾಗಿಲ ಬೆಳಕಲ್ಲಿ ತಿಂಗಳು ಕಳೆದ ಬಾಣಂತಿ ಭಾಗಿ ಮತ್ತು ಮಗಳ ಆರೈಕೆಗೆ ಬಂದುಳಿದ ಸುಬ್ಬಮ್ಮ ಎದ್ದು ನಿಂತರು. ಮರದ ಮಾರಿ ವಿಗ್ರಹಕ್ಕೆ ಬಿಗಿಯಾಗಿ ವಸ್ತ್ರ ಸುತ್ತಿದಂತೆ ಭಾಗಿ ಸೀರೆ ಸುತ್ತಿಕೊಂಡಿದ್ದಳು. ಕವಳದ ಕೆಂಪು ತುಟಿ ಅರಳಿಸಿ ನಕ್ಕಳು. ಸುಬ್ಬಮ್ಮ ಬೆತ್ತದ ಬುಟ್ಟಿಯನ್ನೆ ತೊಟ್ಟಿಲಾಗಿಸಿ ಜರಾ ಬರಾ ಶಿಶುವನ್ನು ತೂಗುತ್ತಿದ್ದಳು. “ಭಾಗಕ್ಕ ನೀವಿಲ್ಲಿ!” ರತಿಗೆ ಅಚ್ಚರಿಯಾಯಿತು.
“ಅಪ್ಪನ ಮನೆಗೆ ಬಾಣಂತನಕ್ಕೆ ಬಂದಿದ್ದೆ”
“ಅವರು ನಿಮ್ಮಮ್ಮ ಅಲಾ?” ಹೋಲಿಕೆ ಗುರುತಿಸಿ ಕೇಳಿದಳು.
“ಇಬ್ಬರಿಗೂ ಹೋಗೋದಕ್ಕೆ ವರಾತ ಆಗದೆ. ವಾರದ ನಂತರ ಹೋಗಿ ಅಂತ ಹೇಳಿದ್ದೇನೆ” ಮುದ್ದಪ್ಪ ವಾಯದೆ ನೀಡಿದ.
ಭಾಗಿಯ ಸಣ್ಣ ಮೋರೆಯಲ್ಲಿ ಕಣ್ಣುಗಳು ಚಿಂತೆಯಲ್ಲಿ ಒಳಕ್ಕೆ ಹೋಗಿದ್ದವು. ಕುತ್ತಿಗೆ ಎಲುಬುಗಳು, ನರವೆದ್ದ ಸಡಿಲ ಬಳೆಗಳ ಕೈ ನೋಡಿ ರತಿಯ ಕರುಳು ಚುರುಗುಟ್ಟಿತು. ನಗುವ ಯತ್ನ ಅಳುವಾಗುತ್ತಿರುವುದು ನಾಚಿಕೆಯಾಗಿ ಸೀರೆ ಸೆರೆಗನ್ನು ಬಾಯಿಗೊತ್ತಿದಳು. ಎಂದೊ ಆರಂಭವಾದ ಅವಳ ಗೋಳಿನ ಅಳುವನ್ನು ತಾನು ನೋಡಿದ್ದು ತಿಂಗಳ ಮೊದಲೆಂದು ರತಿ ನೆನಪಿಸಿಕೊಂಡಳು.
ಹೆಮ್ಮಾಡಿಯ ಅನಾದಿ ಕಾಲದ ಹುಲ್ಲು ಜಡ್ಡಿನ ತಾವರೆಗಳ ಕೆರೆಯ ಏರಿಯ ಮೇಲೆ ಸಿಗುವ ಮೊದಲ ಮನೆ ರತಿಯದು. ಪೇಟೆ ಕಡೆಯಿಂದ ಬಂದರೆ ಅದು ಕೊನೆಯದು. ಕೆರೆಯ ದಂಡೆಯ ಗುಂಟ ನಡೆದು ಸಾಗುವಾನಿ ತೋಪನ್ನು ದಾಟಿದರೆ ಪಾಳು ಸುರಿಯುತ್ತಿರುವ ಗದ್ದೆಯ ಬಯಲು. ಅಲ್ಲಿ ಊರ್ಜಿತವೆ ಕಾಣದ ಬಡತನದಲ್ಲಿ ಜರ್ಜರಿತವಾದ ಸರ್ವೇಶ್ವರನ ಸಂಸಾರ. ಅಂಕಣವಿಲ್ಲದ ಎರಡು ಮಾಡುಗಳ, ಮಣ್ಣು ಗೋಡೆಯ, ಮಕ್ಕಳು ಬರೆದ ಚಿತ್ರದಂತಹ ಸಣ್ಣ ಮನೆ; ಆ ದಾರಿದ್ರ್ಯಕ್ಕೆ ಬಂದು ಸೇರಿದವಳು ಭಾಗಿ. ಸರ್ವೇಶ್ವರನಿಗೆ ತಿರುಗಾಟದ ಚಪಲ. ತಾಳೆಮದ್ದಳೆಯ ಹುಚ್ಚು ಈ ಚಪಲತನಕ್ಕೆ ಅಂಟಿಕೊಂಡು ಅಲೆದಾಟದಲ್ಲೆ ಇರುತ್ತಿದ್ದ. ಹೆಮ್ಮಾಡಿ ಸೊಸೈಟಿಯಲ್ಲಿ ಅವನ ಸಾಲ ಏರುತ್ತ ಒಮ್ಮೆ ಲೀಲಾವು ನೋಟೀಸ್ ಜಾರಿಯಾಗಿತ್ತು. ಬೆಳಿಗ್ಗೆ ಒಂಬತ್ತಕ್ಕೆ ಮನೆಯಿಂದ ಹೊರಟು ಸೊಸೈಟಿಯಲ್ಲಿ ಕೂತು ದಿನಪತ್ರಿಕೆ ಓದಿ ರಾಜಕೀಯ ಮಾತಾಡುತ್ತ ಕಾಲಹರಣ ಮಾಡುತ್ತಿದ್ದ. ಪಕ್ಷದ ರಾಜಕೀಯ ಗೆಳೆಯರು, ಅರ್ಥಧಾರಿಗಳು ಜೊತೆಗೂಡಿದಾಗ ಯಾರದೊ ಮನೆಯಲ್ಲಿ ಇಸ್ಪೀಟ್ ಆಡುತ್ತ ವಾರದವರೆಗೆ ಮನೆಯತ್ತ ಮುಖ ಹಾಕುತ್ತಿರಲಿಲ್ಲ.
ಅಂದು ಹೆಮ್ಮಾಡಿಯ ಸೊಸೈಟಿಯಲ್ಲಿ ತಾಳಮದ್ದಳೆ. ಸರ್ವೇಶ್ವರ ಸಂಜೆ ಶಾಲೆಯಿಂದ ಮನೆಗೆ ವಾಪಸ್ಸಾಗುತ್ತಿದ್ದ ಹುಡುಗನ ಮೂಲಕ ಎರಡು ಜನ ಅರ್ಥಧಾರಿಗಳಿಗೆ ಅಡಿಗೆ ಮಾಡಲು ಭಾಗಿಗೆ ಸುದ್ದಿ ತಲುಪಿಸಿದ. ಮನೆಯಲ್ಲಿ ಎರಡೂಟಕ್ಕೆ ಸಾಲುವಷ್ಟು ಅಕ್ಕಿ ಮಾತ್ರವಿತ್ತು. ಅನ್ನ ತೊಯ್ಯಿಸಲು ಸಾರಿಗೆ ಬೇಳೆ ಇರಲಿಲ್ಲ; ಭಾಗಿ ಏಳು ತಿಂಗಳ ಬಸುರಿ. ಜತೆಗೆ ಎದೆ ಹಾಲು ಬಿಡಿಸಿದ ಮೂರು ವರ್ಷದ ಕಿರಾತ ಮಗುವಿದೆ. ರಾತ್ರಿ ಊಟಕ್ಕೆ ಬರಲಿರುವ ಅತಿಥಿಗಳಿಗೆ ಕೂಳು ಬೇಯಿಸಿ ಮರ್ಯಾದೆ ಕಾಪಾಡಿಕೊಳ್ಳಬೇಕು; ಪಕ್ಕದ ದಾಯಾದಿ ಮನೆಯಿಂದ ಕಡ ತರಲು ಅವಮಾನ; ಹಳೆ ಬಾಕಿ ತೀರದ ಸೊಸೈಟಿಯಲ್ಲಿ ಹೊಸದಾಗಿ ಹುಟ್ಟುವುದಿಲ್ಲ; ಗೋಪಾಲಣ್ಣನ ಅಂಗಡಿಗೆ ಹೋಗಲು ದುಡ್ಡೂ ಇಲ್ಲ; ತನ್ನ ಜನ್ಮದ ಬಗ್ಗೆಯೇ ಹೇಸಿಗೆ ಎನಿಸಿತು. ಗಂಡನಂತು ಹೊತ್ತಿಗೆ ಬಂದು ಉಂಡು ಹೋಗುವುದನ್ನು ಬಿಟ್ಟರೆ ಗೋಳನ್ನು ಕಿವಿಗೆ ಹಾಕಿ ಕೊಳ್ಳುವ ಜಾತಿಯಲ್ಲ. ಭಾಗಿಗೆ ಆ ಕ್ಷಣ ಕಂಡದ್ದು ಹೆಮ್ಮಾಡಿಯ ಕನ್ನಡ ಶಾಲೆಯಲ್ಲಿ ಸಹಪಾಠಿಯಾಗಿದ್ದ ಅಣ್ಣಪ್ಪನ ಮನೆಯ ದಾರಿ.
ದಣಪೆಯ ಎದುರು ಮೆಂದು ಬಂದು ನಿಂತ ಹಸುವನ್ನು ಕೊಟ್ಟಿಗೆಯಲ್ಲಿ ಕಟ್ಟಿ, ಗದ್ದೆಯ ಹೊಂಡದಿಂದ ಕೊಡದಲ್ಲಿ ನೀರೆತ್ತಿ ತಂದಿಟ್ಟು, ಮನೆ ಬಾಗಿಲೆರೆಸಿ, ಮಗುವನ್ನು ಸೊಂಟಕ್ಕೇರಿಸಿ ನಡೆದಳು; ಕೈಯಲ್ಲಿ ಹಿಡಿದ ಬಟವೆಯಲ್ಲಿ ಬಿದರಿನ ಅಳತೆ ಪಾವು; ಹೊಟ್ಟೆಯ ಭಾರಕ್ಕೆ ದಣಿವಾಯಿತು; ಏರುಸಿರಿಗೆ ಸೊಂಟಕ್ಕೆ ಕೈಯೂರಿ ನಿಂತು ಚೇತರಿಸಿಕೊಂಡಳು, ಕೆರೆಯ ದಂಡೆಯ ಮೇಲೆ ಹೆಜ್ಜೆ ಇಡುವಾಗ ನೀರಿಗೆ ಹಾರಿ ಪ್ರಾಣ ತ್ಯಜಿಸುವ ಯೋಚನೆಯ ಚೂರು ತಲೆಯಲ್ಲಿ ಹಾದು ಹೋಯಿತು; ಅಡಗುತ್ತ, ಅಳುಕುತ್ತ ಜೀವವನ್ನು ಸಣ್ಣ ಮಾಡಿಕೊಂಡು ಅಣ್ಣಪ್ಪನ ಮನೆಯ ಬಳ್ಳಿ ಹಬ್ಬಿದ ಬೇಲಿಯ ಪಕ್ಕ ಬಾಳೆ ಮರದ ಮರೆಯಲ್ಲಿ ನಿಂತು ಬಂದವರು ಹೋಗುವುದನ್ನು ಕಾಯುತ್ತ ಚಡಪಡಿಸಿದಳು; ಹೊರಟವರನ್ನು ಕಳುಹಿಸಲು ದಣಪೆಯವರೆಗೆ ಬಂದ ಅಣ್ಣಪ್ಪನ ಕಣ್ಣಿಗೆ ಬಿದ್ದಳು; ಅವಳ ಅವಸ್ಥೆ ನೋಡಿ ಅಣ್ಣಪ್ಪ ಗಾಬರಿಯಾದ. “ಮೂರು ಪಾವು ಅಕ್ಕಿ ಮತ್ತೆ ಅರ್ಧ ಸೇರು ತೊಗರಿ ಬ್ಯಾಳೆ ಬೇಕಿತ್ತು.” ಮಾನ ಮುಚ್ಚುವಂತೆ ಅವಳ ಮಾತು ಸಣ್ಣದಾಯಿತು. ಎಲ್ಲ ಬಲ್ಲ ಅಣ್ಣಪ್ಪ ಮರು ಮಾತಾಡದೆ ಬಟವೆ ಪಡೆದು ಅವಳು ಕೇಳಿದ್ದಕ್ಕಿಂತ ಹೆಚ್ಚೇ ತಂದು ಕೊಟ್ಟ. ರತಿಯ ಪರಿಚಯ ಮಾಡಿದ. ಭಾಗಿಯ ಬಸವಳಿದ ಮುಖ, ದೊಡ್ಡ ಹೊಟ್ಟೆ, ಸೊಂಟದಿಂದಿಳಿಯದ ಹಠಮಾರಿ ಹುಡುಗನ ದೃಶ್ಯಕ್ಕೆ ರತಿ ಕರಗಿದಳು. ಭಾಗಿಯ ಬೆನ್ನು ಮರೆಯಾದ ನಂತರ ಅಣ್ಣಪ್ಪ ಕಣ್ಣೀರಾದ ಅವಳ ಕತೆಯನ್ನು ಹೇಳಿದ.
ಮುದ್ದಪ್ಪ ಕಾಡಿನ ಮೂಲೆಯಲ್ಲಿರುವ ತೋಟ ತೋರಿಸಲು ಮುಂದಾದ. ಬೇಸಿಗೆಯಲ್ಲಿ ಝರಿ ಒಣಗುವ ಹಳ್ಳದ ದಂಡೆ ಗುಂಟ ನಡೆದರು. ಮುದ್ದಪ್ಪ ತೋಟ ಮಾರುವ ತನ್ನ ತೀರ್ಮಾನವನ್ನು ದಾರಿಯ ಮಾತಿನ ನಡುವೆ ಪ್ರಸ್ತಾಪಿಸಿದ. ನಿ:ಶ್ಯಬ್ದ ಜೀಗುಡುವ ಕಾಡಿನ ಕಣಿವೆಯಲ್ಲಿರುವ ಎರಡು ತುಂಡಿನ ತೋಟದ ಸನಿಹ ಹಳೆಯ ದೇವಸ್ಥಾನ. ಕುಸಿದ ಮಾಡಿನ, ಒಡೆದ ಹಂಚಿನ, ಜರಿದ ತಳಿಗಳ ದೇವಸ್ಥಾನದ ಅಗಳಿ ಎಳೆದ ಬಾಗಿಲಿಗೆ ಬೀಗ ಇರಲಿಲ್ಲ. ಅದಾಗಲೆ ಪೂಜೆ ಮಾಡಿದ ಕುರುಹಾಗಿ ಮಿಣುಕು ದೀಪ, ಊದುಬತ್ತಿಯ ಪರಿಮಳ ಮತ್ತು ಒದ್ದೆ ಮೆಟ್ಟಿಲ ಮೇಲಿರುವ ಹೂ ಪ್ರಸಾದವಿದ್ದವು. ಮುದ್ದಪ್ಪ ಕದ ದೂಡಿ, ಗಂಟೆ ಬಾರಿಸಿ ಉದ್ದಂಡ ಬಿದ್ದು ಕಿರುಚುವ ಮಂಗ, ಇಕ್ಕಡಿ ಸದ್ದಿನ ದನಗಳನ್ನು ತೋಟದಿಂದ ಓಡಿಸಲು ಓಡಿದ. ಅವನು ತೂಗಿದ ಗಂಟೆಯ ಅಲೆ ಕಾಡಿನ ಆಳಕ್ಕಿಳಿಯುತ್ತ ಕ್ಷೀಣವಾಗುತ್ತಲೆ ಇತ್ತು. ರತಿ ಮತ್ತು ಅಣ್ಣಪ್ಪ ವಿಚಿತ್ರ ದಿಗಿಲಿನಲ್ಲಿ ತುಸು ಹೊತ್ತು ಮಾತಿಗೆ ಮೀರಿದ ಅಸ್ಪಷ್ಟ ಲಹರಿಯಲ್ಲಿ ಚಿಟ್ಟೆಯ ಮೇಲೆ ಕುಳಿತರು. “ತ್ವಾಟದ ಕಡೆ ಲಕ್ಷ್ಯ ಕಡಿಮೆ”. “ಪರದೇಶದಲ್ಲಿದ್ದ ಮಗ ಇಲ್ಲಿಗೆ ಯಾಕೆ ಬರ್ತಾನೆ?”. “ನಾವೇ ಜಮಾಯಿಸಿಬಹುದು”. ದಂಪತಿಯ ಮಾತುಕತೆಯಲ್ಲಿ ಹೊಸ ಕನಸೊಂದು ಹುಟ್ಟಿ ಹೋಯಿತು.
“ವಾರಕ್ಕೆರೆಡು ಸಲ ಕೆರೆ ನೀರಿನ ಪಾಳಿ ಇದಕ್ಕೆ” ಎಂದ.
“ತೋಟ ಮಾರುವುದು ಗ್ಯಾರಂಟಿಯಾ?” ರತಿ ಕೇಳಿಯೇ ಬಿಟ್ಟಳು.
“ಅಣ್ಣಪ್ಪನೆ ಗಿರಾಕಿಯಾಗಬಹುದಲ್ಲ”
ರತಿ ಗಂಡನ ಮುಖ ನೋಡಿದಳು. ಅಣ್ಣಪ್ಪ ಮಂದಹಾಸದಲ್ಲಿ ಉಕ್ಕುತ್ತಿದ್ದ.
ಮುದ್ದಪ್ಪ ನಿಂತಲ್ಲೆ ಪ್ರದಕ್ಷಣೆ ಹಾಕಿ, “ದೇವರ ಇಚ್ಛೆ, ಹಣೆಬರಹ..” ಎಂದ.
“ಆ ಮುಂದಿನ ಶನಿವಾರ ಸರಿಯಾಗಿ ಇಷ್ಟೊತ್ತಿಗೆ ನಾವು ವಿಮಾನದಲ್ಲಿರುತ್ತೇವೆ” ಎಂದು ಮುದ್ದಪ್ಪ ರೋಮಾಂಚನದಲ್ಲಿ ಇಂಗ್ಲೆಂಡ್ ಪ್ರವಾಸವನ್ನು ಪ್ರಕಟಿಸಿದ. ಈ ನಡುವೆ ರತಿ ಎರಡು ಸಲ ತೋಟ ಸುತ್ತಿ ಹೋಗಿದ್ದಳು. ಅಣ್ಣಪ್ಪ, “ದುಡ್ಡು ಎಲ್ಲಿಂದ ತರೋದು” ಎಂದು ಯಕ್ಷ ಪ್ರಶ್ನೆ ಹಾಕಿ ಕುಳಿತ. “ನನ್ನಣ್ಣ ಮದತ್ ಮಾಡ್ತಾನೆ” ಎಂದು ಬಲು ಉಮೇದಿಯಲ್ಲಿ ಇದ್ದಳು. ತೋಟ ಮಾರುವ ಸುದ್ದಿ ಚಾಲ್ತಿಯಲ್ಲಿದ್ದು ಎರಡು ವರ್ಷಗಳು ಕಳೆದಿದ್ದವು. ನೋಡಲು ಬಂದವರಿಗೆ ದೇವಸ್ಥಾನದ ಅರ್ಚಕ, “ಈ ದೇವರ ತಕರಾರು ಉಂಟು ಈ ಜಮೀನಿಗೆ” ಎಂದು ಚಾಡಿ ಹೇಳಿದ್ದಕ್ಕೆ ಹಿಂಜರಿದಿದ್ದರು. “ತೋಟದ ದೇಖರೇಖೆ ಮಾಡಿದ ಮೇಲೆ ಬೆಳೆಯ ಪ್ರಮಾಣ, ನೀರಿನ ಅಂದಾಜು ಆಗ್ತದೆ. ತಾಪಡ್ತೋಪ್ ಮಾರುವ ಯೋಚನೆ ಇಲ್ಲ.” ಮುದ್ದಪ್ಪ ರತಿಯನ್ನು ನಿರಾಳಗೊಳಿಸಿದ್ದ. ಆದರೆ, ಈ ನಿರಾಳತೆ ಬಹಳ ದಿನ ಬಾಳಲಿಲ್ಲ.
ಮುದ್ದಪ್ಪನ ಮನೆಯ ಒಡನಾಟ ಹತ್ತಿರವಾಯಿತು. ರತಿ ಇದ್ದಾಗೊಮ್ಮೆ ಸರ್ವೇಸ್ವರನ ಸವಾರಿ ಅಲ್ಲಿಗೆ ಬಂತು. ಮುದ್ದಪ್ಪನ ದಂಪತಿ ಪ್ರವಾಸದ ಪೂರ್ವ ತಯಾರಿ ನಿಮಿತ್ತ ಪೇಟೆಗೆ ಹೋಗಿದ್ದರು. ಅವನ ಆಗಮನದ ಅಂತರ್ಯವನ್ನರಿತ ಸುಬ್ಬಮ್ಮ ತೊಟ್ಟಿಲಿಂದ ಶಿಶುವನ್ನೆತ್ತಿಕೊಂಡು ಜಗಲಿಗೆ ಬಂದಳು. ಕೋಣೆಯ ಕದವಿಕ್ಕಿ ಅಗಳಿ ಸರಿಸಿದ ಸದ್ದಾಯಿತು. ಕೋಣೆಯನ್ನು ತೆರವುಗೊಳಿಸಿ ಹಸಿ ಬಾಣಂತಿಯನ್ನು ಅವನ ಉನ್ಮಾದದ ಏಕಾಂತಕ್ಕೆ ಒಪ್ಪಿಸಿದ್ದು ರತಿಗೆ ತಿಳಿಯದಿರಲಿಲ್ಲ. ಹಗಲಲ್ಲಿ, ಹೊರಗೆ ಜನರಿರುವಾಗಲೇ ಈ ಮನುಷ್ಯನ ಲೀಲೆ ನಡೆದು ಹೋಯಿತಲ್ಲ ಎಂದು ರತಿಗೆ ಅಸಹ್ಯವೆನಿಸಿತು. ಸುಬ್ಬಮ್ಮನ ಮುಖ ನೋಡಲು ಖೇದವಾಯಿತು. ಕೋಣೆಯಲ್ಲಿ ಹಸಿ ಬಾಣಂತಿ ಭಾಗಿ ಅದೆಷ್ಟು ಹಿಂಸೆ ಅನುಭವಿಸಿದಳೊ ಎಂದು ಬೇಸರಿಸಿದಳು. ತೊಟ್ಟಿಲ ಮಗುವನ್ನು ಮುದ್ದಾಡುವ ಬದಲಿಗೆ ಅವನು ಭಾಗಿಯ ಜೀವ ಹಿಂಡಿದ್ದ. ಅವನ ವಾದವಿಷ್ಟೆ: ಮುದ್ದಪ್ಪ ಮಾರಲು ಹೊರಟ ತೋಟ ಪಿತ್ರಾರ್ಜಿತ. ಅದರಲ್ಲಿ ಭಾಗಿಯ ಸಮ ಪಾಲಿದೆ. ತೋಟದ ಹಿಸ್ಸೆ ಅಥವ ಮಾರಿದ ಹಣದಲ್ಲಿ ಪಾಲು ಅವಳು ಪಡದೇ ಬರಬೇಕು; ಅವಳ ಹಕ್ಕಿನ ಆಸ್ತಿಯ ಬಗ್ಗೆ ಗಟ್ಟಿ ಮಾತಾಡಬೇಕು. ಜಗಲಿಯ ಮಂಚದ ಮೇಲಿದ್ದ ರತಿಯ ಮೈ ಉರಿದು ಹೋಯಿತು. ‘ಇದು ನಿನ್ನ ಅಪ್ಪನ ಮನೆ, ತಿಳೀತಾ’, ‘ಗಂಜಿಗೆ ಗತಿಯಿಲ್ಲದ ಗಂಡನ ಮನೇಲಿ ನೀನಿದ್ದೆ, ತಿಳೀತಾ’ ಎಂಬ ಅವನ ಮೂದಲಿಕೆ ರತಿಯನ್ನು ಚುಚ್ಚುತ್ತಿತ್ತು. ಸುಬ್ಬಮ್ಮನ ಗಹನ ಮೌನ ಒಗಟಾಗಿತ್ತು. ಭಾಗಿ ಬಿಕ್ಕುತ್ತಿದ್ದಳು. ತವರಲ್ಲಿ ಪಾಲು ಕೇಳುವ ಒತ್ತಡ ಭಾಗಿಯ ಮೇಲೆ ಹೇರಲು ಸರ್ವೇಶ್ವರ ಮನೆಗೆ ದಿನಸಿ ತಂದು ಹಾಕದೆ ಸತಾಯಿಸುತ್ತಿದ್ದ. “ಅದೆಲ್ಲೊ ಇಂಗ್ಲೆಂಡಿಗೆ ಹೋಗ್ತಾರಂತೆ; ಹೋಗ್ಲಿ, ಮಗನಿದ್ದಲ್ಲಿ ಹೋಗೋದೆ. ಮನೆ ಉಸ್ತುವಾರಿ ನಾನು ನೋಡಿಕೊಳ್ತಿದ್ದೆ. ಒಂದು ಮಾತು ಹೇಳಲಿಲ್ಲ. ತೋಟದ ಉತ್ಪನ್ನ ತಿಂದು ಬಿಡ್ತೇನೆಂತ ಅವನಿಗೆ ಸಂಶಯ! ಚೆಂದದ ಬಣ್ಣದ ಮಾತಿನ ಪ್ರೀತಿಗೆ ಮಾತ್ರ ನೆಂಟರಾ? ಬೆನ್ನಿಗೆ ಬಂದ ತಂಗಿಯ ಹರಕು ಸಂಸಾರ ನೋಡದೆ ಕಣ್ಮುಚ್ಚಿ ಕೂತಿದ್ದಾನೆ. ನಮ್ಮನೆ ಪ್ರಾಣಿ ಭಾಗಿ ಕವಳ ಹಾಕೋದಕ್ಕೆ ಲಾಯಕ್ಕು. ಗಂಜೀಲಿ ಬಿದ್ದ ನೊಣದಂತವಳು” ಸರ್ವೇಶ್ವರ ಬಾಣಂತಿ ಕೋಣೆಯಿಂದ ಆವೇಶದಿಂದ ಹೊರ ಬಿದ್ದು ರತಿಯ ಮುಂದೆ ರೇಗಾಡಿದ. ಖಾಸಗಿ ಜಗಳವನ್ನು ತನ್ನೆದುರು ತಂದು ನಿಲ್ಲಿಸಿದಾಗ ರತಿ ನಿರುಪಾಯಳಾಗಿ, “ನೀವು ಹೇಳೋದು ಸರಿ ಸರ್. ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಹಕ್ಕುಂಟು. ಅದ್ಯಾಕೆ ಹೆಂಡ್ತೀನಾ ಮುಂದಿಟ್ಟು ಮಾತಾಡ್ತೀರಿ? ಮೇಡಂ ಯಾಕೆ, ನೀವೇ ನೇರವಾಗಿ ಕೇಳಿ ಸರ್” ಎಂದು ಬಿಟ್ಟಳು. ಏಳನೆ ಎತ್ತೆ ಪಾಸಾಗಲಾರದ ಅವನಿಗೆ ಅವಳು ಸಂಬೋಧಿಸಿದ ಸರ್ ಮತ್ತು ಮೇಡಂ ಪದಪುಂಜ ಅಪರಿಚಿತ ವಿಶ್ವವನ್ನು ತೆರೆದು ಬಿಟ್ಟಿತು. ರತಿಯ ಮಾತಿಗೆ ಉದಾಸೀನ ಅಭಿನಯಿಸುತ್ತ ಯಕ್ಷಗಾನದ ಪದ್ಯದ ಸೊಲ್ಲೊಂದನ್ನು ಗುನುಗುತ್ತ, ‘ಅದು ಎಲ್ಲೋತು?’ ಎನ್ನುತ್ತ ಬಾಣಂತಿ ಕೋಣೆಗೆ ಇಣುಕಿ ಭಾಗಿಯನ್ನು ಹುಡುಕಿದ. ಕಣ್ಣೊರೆಸುತ್ತ ಮೂಲೆಯಲ್ಲಿ ನಿಂತಿದ್ದ ಅವಳಿಗೆ, “ಸಹಿ ಕೊಡ್ಬೇಡ ಮಳ್ಳಿ” ಎಂದು ಎಚ್ಚರಿಸಿದ. ಭಾಗಿ ಮೂಲೆಯ ಮಬ್ಬಿನಲ್ಲಿಟ್ಟ ಕಸಬರಿಗೆಯಂಥ ವಸ್ತುಗಿಂತ ಹೆಚ್ಚೇನೂ ಅಲ್ಲ ಎಂದು ರತಿ ಖೇದ ಪಟ್ಟಳು. ಅವನು ಸಿಟ್ಟಿನಲ್ಲೆ ಹೊರಡುವ ಸೂಚನೆಯಾಗಿ ರತಿ ತೊಟ್ಟಿಲಿಂದ ವಸ್ತ್ರದ ಗೂಡಿನಲ್ಲಿ ಬೆಚ್ಚಗೆ ಮಲಗಿದ್ದ ಹಾಲುಗೂಸನ್ನು ಎತ್ತಿ ಕೊಂಡು ಬಂದು, “ಮಗೂನ ಮಾತಾಡ್ಸಿ ಹೋಗಿ ಸರ್” ಎಂದು ಅವನೆದುರು ಒಡ್ಡಿದಳು. ಕೇಳದ ಕಿವಿ ಮಾಡಿಕೊಂಡು ಸರ್ವೇಶ್ವರ ದಾಪುಗಾಲು ಹಾಕುತ್ತ ಹೊರಟು ಹೋದ.
ಮುದ್ದಪ್ಪನ ದಂಪತಿ ಮರಳುವವರೆಗೂ ರತಿ ವಿಚಿತ್ರ ಅಸ್ವಸ್ಥ ಮನಸ್ಥಿತಿಯಲ್ಲಿ ಮಂಚದ ಮೇಲೆ ಕೂತೇ ಇದ್ದಳು. ಸರ್ವೇಶ್ವರ ದಾರಿಯಲ್ಲಿ ಅವರಿಗೆ ಎದುರಾದನಂತೆ. ಮುಖ ಗಂಟು ಹಾಕಿಕೊಂಡು ಬಂದ ಮುದ್ದಪ್ಪ ಜಗಲಿಗೆ ಕಾಲಿಡಲು ಪುರಸೊತ್ತಿಲ್ಲದವನಂತೆ, ಮಂಚದ ಮೇಲೆ ಕವಳ ಹಾಕುತ್ತ ಕುಳಿತ ಸುಬ್ಬಮ್ಮನಿಗೆ, “ನಿನ್ನ ಅಳಿಯ ಏನಂದ ಗೊತ್ತಾ? ತೋಟ ಮಾರಲು ಅವಂದೇನೂ ತಕರಾರಿಲ್ಲಂತೆ; ಹಿಸ್ಸೆ ಕೊಡದಿದ್ದರೆ ಕಾಗದ ಪತ್ರಕ್ಕೆ ಸಹಿ ಹಾಕೋದಿಲ್ಲ ಎಂದು ಭಾಗಿ ಹಠ ಹಿಡಿದಿದ್ದಾಳಂತೆ. ನಿನ್ನ ಪಾಲು ಬಿಡ್ಬೇಡ ಅಂತ ಭಾಗೀಗೆ ಹಿಂದಿಂದ ಚಾಡಿ ಚುಚ್ಚಿ ಕೊಟ್ಟವರು ಯಾರಂತ ಗೊತ್ತು ನನಗೆ.” ಎಂದು ಉರಿ ಮೋರೆಯಲ್ಲಿ ಎದ್ದು ಹೋದ. ಚಾಡಿ ಚುಚ್ಚಿದವಳು ತಾನೆಂದು ಪರೋಕ್ಷ ಬೆರಳಿಟ್ಟು ಅಪಾದಿಸುತ್ತಿದ್ದಾನೆಂದು ಸುಬ್ಬಮ್ಮನಿಗೆ ಕಳವಳವಾಯಿತು. ಒಳಗೆ ಅಂಗಿ-ಲುಂಗಿ ಕಳಚಿಡುತ್ತ ಮುದ್ದಪ್ಪ, “ನಾಲ್ಕು ದಿನದ ಮಟ್ಟಿಗೆ ಉಳಿಯೋದಕ್ಕೆ ಬಂದವ್ರಿಗೆ ಚೆಂದಾಗಿ ಉಂಡು, ತಿಂದು, ಒಳ್ಳೆ ಮಾತಾಡಿ ಹೋಗೋದು ಬಿಟ್ಟು ಬ್ಯಾಡದ ಪಂಚಾಯ್ತಿ ಎಂತಕ್ಕೆ ಬೇಕಾಗಿತ್ತು” ತಾಯಿ-ಮಗಳಿಗೆ ಕೇಳಿಸಲೆಂದೇ ದನಿ ಏರಿಸಿ ಬಡಬಡಿಸುತ್ತಿದ್ದ. “ಧರ್ಮಸ್ಥಳ ದೇವರಾಣೆಗೂ ಪಿತೂರಿ ಮಾಡೋದು ನನಗೆ ಗೊತ್ತಿಲ್ಲ” ಸುಬ್ಬಮ್ಮನ ಮಾತು ಮುಗಿಯುವ ಮುನ್ನ ಕಣ್ಣುಗಳು ಒದ್ದೆಯಾದವು. “ಸಹಿ ಹಾಕಲು ಹೇಳಿ ಹೋದವ್ರು ಯಾರಂತ ರತಿಯಕ್ಕನ ಕೇಳು” ಭಾಗಿಯ ಸಮಜಾಯಿಸಿಗೆ ಸರ್ವೇಶ್ವರ, “ಯಾರ ಸಾಕ್ಷಿಯೂ ಬ್ಯಾಡ” ಎಂದು ಮಾತು ಕತ್ತರಿಸಿದ. ನರಕವಾಗುತ್ತಿರುವ ನರ ಮನುಷ್ಯರ ಬಗ್ಗೆ ಅಸಹ್ಯವಾಗಿ ಪ್ರಯಾಣದ ಮುಂಚಿನ ದಿನ ಬರುವುದಾಗಿ ಹೇಳಿ ರತಿ ಸ್ಕೂಟಿ ಚಾಲೂ ಮಾಡಿದಳು.
ಸ್ಲೀಪರ್ ಬಸ್ಸಿಗೆ ರತಿ ತನ್ನ ಸ್ಕೂಟಿಯಲ್ಲಿ ಮುದ್ದಪ್ಪ ದಂಪತಿಯನ್ನು ಒಬ್ಬೊಬ್ಬರನ್ನಾಗಿ ಹೆಮ್ಮಾಡಿಯ ಪಿಕ್ ಅಪ್ ಕ್ರಾಸಿಗೆ ಸಾಗಿಸಿದಳು. ಹೊರಡುವ ಮುನ್ನ ಹಿಂದೆಂದೂ ಧರಿಸಿರದ ಪ್ಯಾಂಟು, ಜರ್ಕಿನ್, ಶೂ, ಚೂಡಿ ತೋರಿಸಿ, “ಇವೆಲ್ಲ ರೂಢಿಯಿಲ್ಲ. ಅಲ್ಲಿಯ ವಾತಾವರಣಕ್ಕೆ ಬೇಕಂತೆ. ಮಗನ ಒತ್ತಾಯ” ಮುಜುಗರವನ್ನು ತೋಡಿಕೊಂಡರು. ಮನೆಯ ಹೊರ ಬಾಗಿಲ ಚಾವಿಯನ್ನು ರತಿಯ ಕೈಗೆ ನೀಡುವಾಗ ಮುದ್ದಪ್ಪನ ಮೈ ಮತ್ತು ಧ್ವನಿ ಕಂಪಿಸಿ, “ನಿಮ್ದೇ ಮನೆ ಹಾಂಗೆ ತಿಳ್ಕಂಡು ಇದ್ರಾಯ್ತು, ಹುಷಾರು, ಹುಷಾರು” ಎಂದು ಭಾವುಕನಾದ. ದೇವರಿಗೆ ಅಡ್ಡ ಬಿದ್ದು ಹೊರ ಬರುತ್ತಿದ್ದ ಮುದ್ದಪ್ಪನ ‘ಅದು’ ಉದ್ವೇಗದಲ್ಲಿ ಅಳುತ್ತಿದ್ದಾಳೊ ನಗುತ್ತಿದ್ದಾಳೊ ತಿಳಿಯುವಂತಿರಲಿಲ್ಲ. “ಹೂವಿನ ಗಿಡಕ್ಕೆ, ಹಿತ್ಲಿಗೆ ನೀರು ಹಾಕೋದಕ್ಕೆ ಮರ್ತು ಹೋಗ್ತದೆ, ಮತ್ತೆ” ಕಾಳಜಿ ಮಾಡಿದಳು. ತನ್ನ ಯಜಮಾನಿಕೆಯ ಜಾಗದಲ್ಲಿ ನಿಂತು ರತಿ ಅಡಿಗೆಮನೆಯನ್ನು ಬಳಸುವುದು, ಹಸುವಿನ ಹಾಲನ್ನು ಅನುಭೋಗಿಸುವುದು ಅವಳಿಗೆ ಕರಳು ಕಿವಿಚುವ ಕಲ್ಪನೆಯಾಗಿ ಹೋಗಿತ್ತು. ಭಾಗಿ ಮತ್ತು ಸುಬ್ಬಮ್ಮ ಚಿಟ್ಟೆ ಮೇಲೆ ತಳಿಗೆ ಚಾಚಿ ವಿದಾಯ ಹೇಳಲು ನಿಂತಿದ್ದರು. ಅವರ ಅಸಹಾಯಕ ದೀನ ಭಂಗಿ ತಮಗಿಲ್ಲದ ಭಾಗ್ಯವನ್ನು ವಿಷಾದದಿಂದ ನೋಡುತ್ತಿತ್ತು. ಅಂಗಳದ ತುದಿಯಲ್ಲಿ ಮುದ್ದಪ್ಪ ದಂಪತಿ ಕ್ಷಣ ಹೊತ್ತು ನಿಂತ ನಿಲುವಿನಲ್ಲಿದ್ದ ಸಂಸಾರದ ಸರ್ವಸ್ವವನ್ನೂ ಹಸ್ತಾಂತರಿಸಿದ ತಳಮಳದ ವೈರಾಗ್ಯ ರತಿಯನ್ನು ಬಾಧಿಸಿ, “ಈ ಕಡೆ ಚಿÉಂತೆ ಬಿಡಿ. ಮಜಾ ಮಾಡಿ ಬನ್ನಿ” ಉತ್ಸಾಹ ಉಕ್ಕಿಸಲು ಸಂಭ್ರಮ ಚೆಲ್ಲಲು ಯತ್ನಿಸಿದಳು. “ಹಳೇ ಕಾಲ್ದಲ್ಲಿ ಕಾಶಿಗೆ ಹೋದಾಂಗಲ್ಲ” ಅಳುಬರುಕ ವಾತಾವರಣಕ್ಕೆ ಅಣ್ಣಪ್ಪ ಧೈರ್ಯ ಸೋಕಿದ.
ಸರ್ವೇಶ್ವರ ಹೆಮ್ಮಾಡಿ ಮನೆಯ ಯಾಂತ್ರಿಕ ದೈನಿಕವನ್ನು ಕಲಕಿದ್ದ. ಭಾಗಿಯ ಮಗುವಿಗೆ ತವರಿನ ಉಡುಗರೆಯಾಗಿ ಕೊಡುವುದಾಗಿ ಹೇಳಿದ್ದ ಸೊಂಟದ ಬೆಳ್ಳಿಯ ಚೈನಿನ ಬಗ್ಗೆ ಮುದ್ದಪ್ಪ ಮತ್ತೆ ಮಾತೆತ್ತಲಿಲ್ಲ; ಬಾಣಂತಿಯ ಸ್ನಾನಕ್ಕೆ ಹಂಡೆ ತುಂಬ ನೀರು ಕಾಯಿಸುತ್ತಿದ್ದ ಮುದ್ದಪ್ಪನ ‘ಅದು’ ಬಚ್ಚಲತ್ತ ಮುಖ ಹಾಕಲಿಲ್ಲ; ಸ್ನಾನ ಮಾಡಿಸಿದ ಹಸುಗೂಸನ್ನು ಮುದ್ದಿಸಿ, ತಲೆಗೂದಲು ಒಣಗಲು ಚಿಮುಕಿಸಿದ ಪೌಡರ್ ಸುಗಂಧವನ್ನು ನೀಳವಾಗಿ ಮೂಸಲೂ ಬರಲಿಲ್ಲ. ಕೆಲಸದ ನಡುವೆ ಬೆಲ್ಲ ಮಜ್ಜಿಗೆ ಕುಡಿದು ಕವಳ ಹಾಕುತ್ತ ಭಾಗಿಯ ಸನಿಹ ಕೂತು ಹರಟಿ ಹೋಗುತ್ತಿದ್ದ ಮುದ್ದಪ್ಪ ಬಾಣಂತಿ ಕೋಣೆಯಿಂದ ದೂರ ಉಳಿದ; ಹಸಿ ಬಾಣಂತಿಗೆ ಬಿಸಿ ಅನ್ನಕ್ಕೆ ಹಾಕುತ್ತಿದ್ದ ತುಪ್ಪ ಖರ್ಚಾದರೂ ಗಮನಿಸಲಿಲ್ಲ; ಭಾಗಿ ನೀರು ಮಜ್ಜಿಗೆ ಉಣ್ಣುವುದನ್ನು ಮುದ್ದಾಂ ನೋಡಲಿಲ್ಲ. ಬಾಣಂತಿ ಕೋಣೆಯಲ್ಲಿ ತಾಯಿ-ಮಗಳು ಪ್ರತ್ಯೇಕವಾಗಿ ಹೋದರು; ಇಡೀ ದಿನದಲ್ಲಿ, ‘ಊಟ ಮಾಡ್ವಾ ಬಾ’ ಎಂಬ ಒಂದು ಸಾಲಿನ ಮಾತನ್ನು ತಾಯಿಗೆ ಮುದ್ದಪ್ಪ ಎರಡು ಸಲ ಧ್ವನಿ ಮುದ್ರಿಸಿದಂತೆ ಆಡುತ್ತಿದ್ದ. ತವರಿಂದ ಆಸ್ತಿ ತಂದರೆ ಗಂಡನ ಪ್ರೀತಿ; ಏನೂ ಬೇಡದಿದ್ದರೆ ತವರಿನಲ್ಲಿ ಗೌರವ. ಭಾಗಿ ಉಭಯ ಸಂಕಟದಲ್ಲಿ ತೊಳಲಾಡಿದಳು. ಅವಳ ಯಾತನೆ ರತಿಗೂ ಅಷ್ಟಿಷ್ಟು ತಿಳಿದಿತ್ತು. ಒಮ್ಮೆ ರತಿಯ ಎದುರಲ್ಲೆ ಸುಬ್ಬಮ್ಮ, “ಮದುವೆಯಲ್ಲಿ ಬಂಗಾರ ಗೈಸಿದ್ದು, ಗರ್ಧಿ ಮದುವೆ ಮಾಡಿದ್ದು ನೆನಪಿಟ್ಕಾ. ಅಪ್ಪನ ಮನೆಯಲ್ಲಿ ಆಸೆ ಪಡಬಾರ್ದು; ನಾನು ಮಗನ ಮನೇಲಿದ್ದೇನೆ ಎಂಬ ಎಚ್ಚರ ನನಗಿದೆ” ಎಂದು ಮಗಳಿಗೆ ಬುದ್ಧಿ ಹೇಳಿದಳು. ಭಿಕ್ಷುಕನಿಗೆ ಮುಷ್ಟಿ ಅಕ್ಕಿ ನೀಡಲೂ ಮಗ ಅಥವ ಸೊಸೆಯ ಅನುಮತಿಯನ್ನು ಪಡೆಯುವಷ್ಟು ದಾರುಣ ಗತಿ ಮುದಿ ಜೀವಕ್ಕೆ ಪ್ರಾಪ್ತವಾಗಬಾರದಿತ್ತೆಂದು ರತಿ ಅಲವತ್ತುಕೊಂಡಳು.
ಸುಬ್ಬಮ್ಮನ ಹಿರಿಯ ಮಗ ಬಂದಾಗ ರತಿ ಮಾವಿನೂರಿನಲ್ಲಿದ್ದಳು. ಸುಬ್ಬಮ್ಮನ ದಿನದೌಷಧ, ಹಣ್ಣು ತಂದು ಕೊಟ್ಟು, ಒಂದಿಷ್ಟು ಹಣವನ್ನು ಕೈಯಲ್ಲಿರಿಸಿ, “ಮಗಳ ಜೊತೆಗೆ ಇದ್ದಾಂಗೆ ಸೊಸೆಯ ಬಳಿ ಕೂಡಿ ಬರೋದು ಕಷ್ಟ. ಮುದ್ದಣ್ಣ ಬರೋ ತನಕ ಇಲ್ಲೆ ಇದ್ಬಿಡು” ಎಂದು ಹಣದ ವ್ಯವಸ್ಥೆಯಲ್ಲಿಯೇ ತನ್ನ ಜವಬ್ದಾರಿ ಮುಗಿಸಿ ಹೊರಟು ಹೋದ. ಮದದಿಂದ ಮೇಲೇರಿ ಎದೆ ಚೀಪುತ್ತ ಕ್ಷಣಿಕ ಸುಖ ಉದ್ದೀಪಿಸುತ್ತ ಹೆಣ್ಣಿನ ರಹಸ್ಯ ಸೃಷ್ಟಿಯ ಕೋಣೆಯನ್ನು ಪ್ರವೇಶಿಸುವವನಿಗೂ ಅದೇ ಬಾಗಿಲಿಂದ ವೇದನೆಯಲ್ಲಿ ನರಳಿಸುತ್ತ ಹೊರ ಬಂದು ಹಾಲುಣ್ಣುವವನಿಗೂ ವ್ಯತ್ಯಾಸವಿಲ್ಲವೆಂದು ರತಿಗೆ ಅನಿಸಿತು.
ಹೆಮ್ಮಾಡಿಯ ಮುತ್ತೈದೆಯರ ಬೇರಿಲ್ಲದ ಬದುಕಿಗೆ ರತಿ ಮರುಗಿದಳು. ಹಾಕುವ ಚಪ್ಪರಕ್ಕೆ ತಂಟೆ-ತಕರಾರುಗಳಿಲ್ಲದೆ ಹಬ್ಬಿಕೊಳ್ಳುವ ಜಾತಿಯವರು; ಉಟ್ಟ ಸೀರೆಗೆ ಹೊಗೆಯ ಕಂದು ಬಣ್ಣ ಮತ್ತು ಸಗಣಿಯ ವಾಸನೆ ಹಿಡಿದು, ಅಡುಗೆ, ಹಬ್ಬ, ಹೆರಿಗೆಯಲ್ಲೆ ಮುಪ್ಪು ಸುಕ್ಕುಗಟ್ಟಿಹೋದ ಅವರಿಗೆ ಸ್ವಂತ ಪ್ರಪಂಚವೇ ಇಲ್ಲ. “ತಾವೇ ತಮಗೆ ಅತಂತ್ರ ಸ್ಥಿತಿಯನ್ನು ತಂದುಕೊಂಡದ್ದು ಈ ಊರಿನ ಹೆಂಗಸ್ರಿಗೆ ಗೊತ್ತೇ ಇಲ್ಲ! ಕೊಟ್ಟಿಗೇಲಿ ಕಟ್ಟಿದ ದನದಾಂಗೆ ಮೂದೇವಿಯರಾಗಿದ್ದಾರಪ್ಪ. ತೀಟೆಯ ಅಮಲೇರಿದಾಗ ಚಕ್ಕಂದ ಆಡ್ತಾ ಹೆಂಡ್ರ ಮೂಸೋದಕ್ಕೆ ರಾತ್ರಿ ಹಾಸಿಗೇಗೆ ಬರೋದಕ್ಕೆ ಅವರ ಗಂಡಂದ್ರಿಗೆ ಮರ್ಯಾದೆ ಅಡ್ಡ ಬರೋದೇ ಇಲ್ಲ. ತೆವಲಿನ ಬಿಸಿ ಮೈಯಿಳಿದ ನಂತರ ಯಥಾ ಪ್ರಕಾರ ಕಟುಕರು. ಕತ್ತಲಲ್ಲಿ ಏನೂ ಕಾಣೋದಿಲ್ಲ, ಪಾಪ. ‘ಅದು’ ಎಂದು ಕಟ್ಟಿಕೊಂಡವಳಿಗೆ ಎಷ್ಟು ಅಸಹ್ಯ ಕರೀತಾರೆ ನೋಡಿ! ಹಾಸಿಗೆಯಾದ್ರೂ ತಮ್ಮ ಸ್ವಂತ ಆಸ್ತಿ ಎಂದು ಈ ಹೆಂಗಸ್ರು ಹೇಳೋ ತನಕ ಈ ಊರು ಉದ್ಧಾರಾಗೋದಿಲ್ಲ” ರತಿಯ ಹೊಸ ಶಸ್ತ್ರ ಸಜ್ಜಿತ ಆಕ್ರೋಶಕ್ಕೆ ಅಣ್ಣಪ್ಪ, “ಅಯ್ಯೋ ಮಾರಾಯ್ತಿ, ಈ ಊರ ಉದ್ಧಾರದ ಉಸಾಬರಿಗೆ ಹೋಗ್ಬ್ಯಾಡ. ಕೆಟ್ಟ ರಾಜಕೀಯದ ಜನ” ಎಂದ. “ನಾವು ಬಾಯಿ ಮುಚ್ಕಂಡು ಕೂತಿದ್ದಕ್ಕೆ ನಿಮ್ಮ ಹಾರಾಟ” ರತಿಯ ‘ನಾವು’ ಎಂಬುದರ ವ್ಯಾಪ್ತಿಯ ಆವೇಶದಲ್ಲಿ ತಮ್ಮ ದಾಂಪತ್ಯದಲ್ಲಿ ಮೊದಲ ಸಲ ಅಪಸ್ವರ ಕೇಳಿದಂತಾಗಿ ಅಣ್ಣಪ್ಪ ಆತಂಕಿತನಾದ. “ಭಾಗಿ ಗಂಡ ಬಂದಿದ್ರು. ಊರ ತಂಟೆ ತಗಾದೆಯಿಂದ ದೂರ ಉಳಿಯೋದು ಒಳ್ಳೇದು ಅಂತ ನಿಮ್ಮ ಸೊಸೆಗೆ ಬುದ್ಧಿ ಹೇಳಿ ಎಂದು ಹೇಳಿದ್ರು. ನಮ್ಮಂತ ಬಡವರಿಗೆ ಇಲ್ಲದ ಉಸಾಬರಿ ಎಂತಕ್ಕೆ ಬೇಕು ಎಂದನಸ್ತು ನನಗೂ.’ ಅಣ್ಣಪ್ಪನ ತಾಯಿ ಚಡಪಡಿಸಿದಳು.
ರತಿ ಮಾವಿನೂರಿನ ಮನೆ ಕಾಯಲು ಹೋಗುವಷ್ಟರಲ್ಲಿ ತಾಯಿ-ಮಗಳು ಹೊರಟು ಹೋಗಿದ್ದರು. ಅವರ ಹಠಾತ್ ನಿರ್ಗಮನ ಒಂದು ಘಳಿಗೆ ಸತಾಯಿಸಿತು. ಸಂತನಂತಹ ಮನೆಯ ಸುತ್ತಲಿನ ಹಸುರು ಏಕಾಂತದಲ್ಲಿ ವಿಚಿತ್ರ ಸಂತಸವಿತ್ತು; ಮನೆಯೊಳಗೆ ಎಂದೋ ನಿದ್ರಿಸಿದ್ದ ನಿ:ಶ್ಯಬ್ದ ಎದ್ದು ಆಕಳಿಸುವಂತೆ ರತಿ ಬಾಗಿಲು ತೆರೆದು ನೆನಪಿನಲ್ಲಿ ಈಸುವಂತೆ, ಕನಸಿನಲ್ಲಿ ಹಾರುತ್ತಿರುವಂತೆ ಹೆಜ್ಜೆ ಹಾಕಿದಳು; ಜಗಲಿಯ ಗಡಿಯಾರದ ಟಿಕ್ ಟಕ್ ಸದ್ದು ಅವಳ ಹೃದಯದೊಳಗೆ ಮಿಡಿಯುತ್ತಿತ್ತು; ಹಿತ್ತಲ ಕದ ತೆರೆದಳು: ತೊಂಡೆಯ ಚಪ್ಪರ, ಡೊಂಕು ಮೈ ಬದನೆ ಗಿಡಗಳು, ಬಚ್ಚಲ ನೀರು ಇಂಗುವಲ್ಲಿ ಬಸಳೆ ಬಳ್ಳಿಯ ಕುಡಿ.. ಬಚ್ಚಲೊಲೆಯ ಬೂದಿಯಲ್ಲಿ ಇಂಗಾಳ ನಂದಿರಲಿಲ್ಲ. ತಗ್ಗು ಮಾಡಿಗೆ ತಲೆ ಬಡಿಯದಂತೆ ಬಗ್ಗಿ ಸಾಗಿ ಕೊಟ್ಟಿಗೆಯ ಹಸುವಿಗೆ ಹುಲ್ಲು ಹಾಕಿದಳು. ಹಣೆಗೆ ಅಂಟಿದ ಬಿಂಜಲು ಬಲೆಯ ಸಿಕ್ಕು ಬಿಡಿಸಿದಳು; ಹಿಟ್ಟಿನ ಚುಕ್ಕೆಯ ಕುಳಿಗಳ ಒರಳ ಮೇಲೆ ಹಲ್ಲಿ ಹರಿದು ಹೋಯಿತು. ಬಾಗಿಲೆರೆಸಿ, ಹೊರ ಚಿಲಕಕ್ಕೆ ಬೀಗ ಸಿಕ್ಕಿಸಿ ಮೆಟ್ಟಿಲಿಳಿದಳು. ಮನೆ ಮನುಷ್ಯರಿಲ್ಲದ ಮನೆಯೊಳಗೆ ಹೋಗಲೇಕೊ ಅಣ್ಣಪ್ಪನಿಗೆ ಅಳುಕಾಯಿತು. ಅಂಗಳದಲ್ಲಿ ಅವನಿಗೆ ಜೊತೆಯಾಗಿ ತೋಟದ ದಾರಿ ಹಿಡಿದರು.
ದೇವಸ್ಥಾನಕ್ಕೆ ಅರ್ಚಕ ಪೂಜೆಗೆ ಬಂದ ಸಮಯವಾಗಿತ್ತು. ಚಿಟ್ಟೆ ಮೇಲೆ ಕೂರಿಸಿ ಹೂ ಪ್ರಸಾದ ನೀಡಿದ. ಊದಿದರೆ ಹಾರಿ ಹೋಗುವಂತಿದ್ದ ಅರ್ಚಕನನ್ನು ರತಿ ಮಾತಾಡಿಸಿದಳು.
“ಮೂಲದಲ್ಲಿ ಈ ತೋಟ ದೇವರದ್ದಾಗಿತ್ತಂತೆ; ಆಮ್ಯಾಲೆ ಕಾಯ್ದೆ ಬಂದು ಗೇಣಿ ಕೊಡ್ತಿದ್ದವರ ಹಕ್ಕಿಗೆ ಹೊಯ್ತು. ಆದರೆ, ಈ ಜಮೀನಿನ ಆಳ್ವಿಕೆ ದೇವರದ್ದೇ.” ಪೂರ್ವ ವೃತ್ತಾಂತ ವಿವರಿಸುತ್ತ ಸನಿಹ ಬಂದು, “ದೇವರೆದುರಲ್ಲಿ ನಿಂತು ನನಗನಿಸಿದ್ದು ಹೇಳ್ತೇನೆ. ಇವತ್ತಲ್ಲ ನಾಳೆ ಮುದ್ದಪ್ಪ ಇದನ್ನು ಮಾರವರೇ. ಯಾವ ಕಾಲಕ್ಕೂ ಮಗನಂತೂ ಬರೋದಿಲ್ಲ. ನಿಮ್ಮ ನಸೀಬದಲ್ಲಿ ಜಮೀನು ಬರೆದಿದ್ರೆ ಯಾರು ತಪ್ಪಿಸ್ತಾರೆ? ಕಾನೂನು ಏನೇ ಹೇಳ್ಲಿ ಧರ್ಮದ ಪ್ರಕಾರ ಜಮೀನು ದೇವರದ್ದೇ” ಗುಟ್ಟಾಗಿ ಹೇಳಿದನು. ಅವನ ಹಾವ-ಭಾವದಲ್ಲಿ ಸಂಚು ಅಭಿನಯಿಸುತ್ತಿತ್ತು; ಆದರೂ ರತಿಗೆ ಅದು ಆಶೀರ್ವಾದ ರೂಪದ ಪುಣ್ಯ ಸಂಕಲ್ಪವಾಗಿ ಜೀವದೊಳಗೆ ಚೈತ್ಯನವಾಗಿ ಸಂಚರಿಸಿತು. ಜತೆಗೆ ಜಮೀನಿನ ವಿಷಯಕ್ಕೆ ಏನೇನೊ ಸುತ್ತಿಕೊಳ್ಳುತ್ತ ಜಟಿಲವಾಗುತ್ತಿರುವುದು ಕಿರಿಕಿರಿಯಾಯಿತು. ಜಿನುಗಿದ ಉತ್ಸಾಹದಲ್ಲೆ ದಂಪತಿ ತೋಟ ಸುತ್ತಿದರು; ಕೆರೆಯ ನೀರು ಹನಿಸಿ, ತೋಟದ ನೆರಳಲ್ಲಿ ನಿಂತು ರತಿ, “ನಾಳೆ ಊರಿಗೆ ಹೋಗಿ ಅಣ್ಣನ ಮಾತಾಡಸ್ತೇನೆ” ಎಂದಳು. ಅಣ್ಣಪ್ಪ ಹೆಂಡತಿಯ ಕಣ್ಣೊಳಗೆ ಭರವಸೆಯ ಹೊಳಪು ಕಂಡು ಹಿಗ್ಗಿದ.
ಮಡಿಕೇರಿಯಿಂದ ರತಿ ಮೂರೇ ದಿನಕ್ಕೆ ಮರಳಿದಳು. ನಡೆದದ್ದನ್ನು ನುಡಿ ಮಾಡಿ ಹೇಳದಿದ್ದನ್ನು ನೋಡಿ ಅಣ್ಣಪ್ಪ ನಿರಾಸೆಯ ಸುದ್ದಿ ಇದ್ದಿರಬಹುದೆಂದು ಸುಮ್ಮನುಳಿದ. ಹೋಗುವಾಗಿದ್ದ ಉತ್ಸಾಹವಿರಲಿಲ್ಲ; ಮರುದಿನ ಹೆಮ್ಮಾಡಿಗೆ ಹೋಗಲು ಅಣ್ಣಪ್ಪನ ಜತೆಯಾದಳು. “ಸ್ಕೂಟಿ ನೀನು ತಗಾ” ಎಂದು ತಾನು ಹಿಂದಿನ ಸೀಟಿನಲ್ಲಿ ವೈರಾಗ್ಯ ತಾಳಿ ಕೂತಳು. “ನಾವಿಂದು ಇಲ್ಲೆ ಊಟ ಮಾಡೋದು” ಎಂದು ಅವನೊಬ್ಬನನ್ನೆ ತೋಟಕ್ಕೆ ಕಳುಹಿಸಿದಳು. ಅಣ್ಣಪ್ಪ ತೋಟ ಸುತ್ತಿ, ಕೆರೆಯ ನೀರು ಹಾಯಿಸಿ ಬಂದ. ರತಿ ಜಗಲಿ, ಅಡಿಗೆ ಒಳವನ್ನು ಗುಡಿಸಿ, ಬಳಿದು ಶುಭ್ರಗೊಳಿಸಿದ್ದಳು. ಟೇಬಲ್ ಮೇಲೆ ಮುಚಿಟ್ಟ ಅಡಿಗೆ ಇತ್ತು. ಮನೆ ತುಂಬಿದ ಶಿರಾದ ಸಿಹಿಯಾದ ಪರಿಮಳ; ಒಲೆಯ ಮೇಲೆ ಉಕ್ಕಿದ ಹಾಲಿನ ಪಾತ್ರೆ; ತಲೆ ಸ್ನಾನ ಮಾಡಿ, ಒದ್ದೆ ಕೂದಲನ್ನು ಟವೆಲ್ಲಿಂದ ಗಂಟು ಬಿಗಿದು ಕಟ್ಟಿದ್ದಾಳೆ; ಅವಳು ನಡೆದಲ್ಲೆಲ್ಲ ಸಾಬೂನಿನ ಕಂಪು; ಒಪ್ಪಾಗಿ ಉಟ್ಟ ತಿಳಿ ಹಸುರು ಹೂವಿನ ಸೀರೆ; ಗಲ್ಲಕ್ಕೆ ಅರಿಷಣ ಹಚ್ಚಿದ ಸುಮಂಗಲೆ; ಹೆಂಡತಿಯ ಚೆಲುವಿಗೆ ಚಿತ್ರವಾದ ಅಣ್ಣಪ್ಪ, “ಏನೆ ಇದು ನಿನ್ನ ಅವತಾರ!” ಎಂದ. “ಎಲ್ಲ ಹೇಳ್ತೇನೆ; ನೀರು ಕಾದಿದೆ; ಮಿಂದು ಬಾ” ಎಂದು ಅವನ ತೋಳು ಹಿಡಿದು ಬಚ್ಚಲತ್ತ ಎಳೆದಳು. ಸ್ನಾನದ ನಡುವೆ ಬಂದು ಬೆನ್ನುಜ್ಜಿ ನೀರು ಸೋಕಿ ತುಂಟಾಗಿ ಕಿಚಾಯಿಸಿದಳು. “ದೇವರಿಗೆ ಕಾಯಿಟ್ಟು ಬರುವಾ” ಎಂದು ಕೊಯ್ದ ಹೂಗಳನ್ನು ಬೊಗಸೆಯಲ್ಲಿ ಹಿಡಿದು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿಬಂದಳು. “ನಿನ್ನ ಬರ್ಥಡೆಯಾ ಇಂದು?” ಅಣ್ಣಪ್ಪನಿನ್ನೂ ಅಚ್ಚರಿಯಲ್ಲಿದ್ದ. ಎದುರು ಬದರು ಕೂತು ಊಟ ಮಾಡಿದರು; ಒತ್ತಾಯದಿಂದ ಶಿರಾ ಬಡಿಸಿದಳು. ಎಂಜಲು ಬಳಿದು, ಹಸುವಿಗೆ ಅಕ್ಕಚ್ಚು ಕೊಟ್ಟು, ಬಾರದ ಬೆಕ್ಕಿಗೆ ಒಲೆಯ ಮೂಲೆಯಲ್ಲಿ ಹಾಲಿಟ್ಟು ಬಂದವಳು ಮಂಚದ ಮೇಲೆ ಕುಳಿತಿದ್ದ ಅಣ್ಣಪ್ಪನನ್ನು ಎಬ್ಬಿಸಿ ಅಟ್ಟಕ್ಕೆ ಎಳೆದೊಯ್ದಳು. ಅಟ್ಟದ ಕೋಣೆಯಲ್ಲಿ ಗಾದಿ ಹಾಸಿಗೆ ಬಿಡಿಸಿದೆ; ಕೋಣೆಗಿದ್ದ ಒಂದೇ ಕಿಟಕಿಯನ್ನು ಮುಚ್ಚಿ ಕತ್ತಲೊಂದಿಗೆ ಧುಮುಕಿ ಅವನನ್ನು ಬೆಚ್ಚಗೆ ತಬ್ಬಿಕೊಂಡಳು.
ಅಣ್ಣಪ್ಪನಿಗೆ ಎಚ್ಚರಾದಾಗ ಅಂಗಳದಲ್ಲಿ ಅರಿಷಣ ಸಂಜೆ ನೆರಳ ಕಾಲೂರಿ ಅಸ್ತಕ್ಕೆ ಹೊರಟಿತ್ತು; ಪಕ್ಕದಲ್ಲಿ ಮಲಗಿದ್ದ ರತಿ ಮುಡಿದಿದ್ದ ಮಲ್ಲಿಗೆಯ ಕಂಪನ್ನು ಬಿಟ್ಟು ಎದ್ದು ಹೋಗಿದ್ದಳು; ಅಣ್ಣಪ್ಪ ಅಪರಾಹ್ನ ಜರುಗಿ ಹೋದದ್ದು ಕನಸೊ ನಿಜವೊ ಎಂದು ತಿಳಿಯದ ಗೊಂದಲದಲ್ಲಿದ್ದ. ಅಣ್ಣಪ್ಪ ಏಣಿ ಇಳಿದು ಬಂದ; ರತಿ ಮಂಕಾಗಿ ಮಂಚದ ಮೇಲೆ ಕೂತಿದ್ದಳು. ಬೇಸರದ ಸಂಜೆಯನ್ನು ನೋಡಿ ಅವಳೊಮ್ಮೆ ಬಿಕ್ಕಿದಳು. ಅವನ ಸಂತೈಕೆಯ ಬೆರಳುಗಳು ಅವಳ ಹೆರಳನ್ನು ಸವರಿದವು; “ಏನಾಯ್ತೆ ನಿನಗೆ?” ಅಣ್ಣಪ್ಪನೂ ಗದ್ಗಿತನಾದ.
“ನನಗೊಂದು ಆಸೆಯಿತ್ತು; ಇಂಥಾದ್ದೊಂದು ಮನೆಯ ಮುತೈದೆ ಆಗ್ಬೇಕು; ನನ್ನ ಗಂಡ ತೋಟದ ಯಜಮಾನನಾಗಿರ್ಬೇಕು ಎಂದು! ಇಂದು ಅದು ನಿಜ ಆಯ್ತು. ಮುದ್ದಪ್ಪನೋರು ನಲವತ್ತು ವರ್ಷಗಳಿಂದ ಮಾಡಿದ ಸಂಸಾರ ಇಷ್ಟೇ ಅಲ್ವಾ? ಒಂದು ಸಲ ಮಾಡಿದ್ದನ್ನೇ ಸಾವಿರ ಸಲ ಮಾಡ್ತೇವೆ. ನಮ್ಮ ಒಂದಿನದ ಸಂಸಾರ ಭ್ರಮೆಯಾದ್ರೆ ಮುದ್ದಪ್ಪನೋರದ್ದು ಭ್ರಮೆ ಯಾಕಾಗೋದಿಲ್ಲ?”
ರತಿಯ ಮಾತು ಹರಿದಾಸರ ಕೀರ್ತನೆಯ ವೇದಾಂತದಂತೆ ಕೇಳಿಸಿಕೊಂಡ ಅಣ್ಣಪ್ಪ, ಎರಡು ಬೆರಳುಗಳನ್ನು ಅವಳಿಗೆ ತೋರಿಸಿ, “ಇದೆಷ್ಟು ಹೇಳು” ಎಂದ. “ನನಗೆ ಹುಚ್ಚು ಹಿಡಿತಾ ಅಂತ ಪರೀಕ್ಷೆ ಮಾಡ್ತೀಯೆನೊ ನನ್ನ ರಾಜಾ” ಎನ್ನುತ್ತ ಅವನ ಕಂಕುಳಿಗೆ ಕಚಗುಳಿಯಿಟ್ಟು ಕುಣಿಸಿದಳು. ಅವನ ಭುಜ ಹಿಡಿದು, “ಮಧ್ಯಾಹ್ನ ಮಲಗಿದ್ದಾಗ ನನಗೊಂದು ಕನಸು; ಮಜಾ ಇತ್ತು; ಹಕ್ಕಿ ನರಸಣ್ಣ ಮನೆ ಮೆಟ್ಟಿಲ ಮೇಲೆ ನಿಂತು ತಂತಿ ನುಡಿಸುತ್ತ “ನೂರ್ಗಾಲ ಸುಖದ ಬದುಕೈತೆ. ಮುದ್ದು ಮಕ್ಕಳ ನಗು ಕೇಳ್ತೈತೆ; ಬಹು ದಿನದ ಕನಸು ನನಸಾಗತೈತೆ; ದಾರಿ ಮುಗಿದಲ್ಲೆ ದಾರಿಯೇ ನೀವಾಗುವ ಯೋಗ ಬಂದೈತೆ ಎಂದು ಶಕುನ ನುಡಿತೈತೆ; ಪರಪಂಚ ನಿಮ್ಮ ಮೂಲಕ ನಡೆದು ಹೋಗತೈತೆ; ಸಾಕ್ಷಾತ್ ಶಿವ-ಪಾರ್ವತಿಯ ಜೋಡಿ.....ಎಂದು ಹಾಡಿದ” ಎನ್ನುತ್ತ ಚಿಮ್ಮಿದಳು. “ ಯಾರು ಬರ್ತಿದ್ದಾರೆ ನೋಡು” ಅಣ್ಣಪ್ಪ ತೋರಿದ ದಾರಿ ಗುಂಟ ಸುಬ್ಬಮ್ಮ ಬಟವೆ ಹಿಡಿದು ಬರುತ್ತಿರುವುದು ಕಂಡಿತು. ಅಂಗಳದಲ್ಲಿ ನಡೆದು ಬರುತ್ತಿದ್ದಂತೆ ಸುಬ್ಬಮ್ಮ, “ನಾನಿಲ್ಲೆ ಉಳಿಯೋದು ಎಂದು ಗಟ್ಟಿ ಮನಸು ಮಾಡ್ದೆ; ರತಿಯಕ್ಕ ಹೇಳಿದ್ರಲ್ಲಿ ಸತ್ಯ ಇದೆ ಅಂದಳು ಭಾಗಿ; ತನ್ನ ಮನೆಗೆ ಹೋಗ್ತೇನೆ ಅಂದ್ಳು. ಕಳ್ಸಿ ಬಂದೆ” ಎಂದು ತಳಿ ಹಿಡಿದು ನಿಟ್ಟುಸಿರು ಬಿಟ್ಟು ಮಂಚದ ಮೇಲೆ ಕೂತಳು.
“ಇದ್ದಕಿದ್ದಂತೆ ನೀವಿಬ್ರು ಹೊರಟು ಹೋದದ್ದು ನೋಡಿ ನನ್ನ ಮಾತಿಗೆ ಬೇಸರ ಆಯ್ತು ಅಂದ್ಕಂಡೆ. ಹಕ್ಕು, ಸ್ವಂತದ್ದು ಎಂದೆಲ್ಲ ಹೇಳೋದಕ್ಕೆ ಚೆಂದ; ಪ್ರೀತಿ, ವಿಶ್ವಾಸದ ಹಂಗು, ಋಣವಾಗಿ ಕಾಡ್ತದೆ; ಅದನ್ನು ಹಕ್ಕಿನಿಂದ ಪಡೆಯೋದಕ್ಕೆ ಆಗೋದಿಲ್ಲ; ಸಂಬಂಧದ ಸಂಕ ಮುರಿದು ಸಂಪತ್ತನ್ನು ಅನುಭವಿಸೋದು ಹ್ಯಾಂಗೆ? ನಾನಾಡಿದ್ದ ಮಾತು ನನಗೇ ತಿರುಗಿ ಬಂದಾಗ ನಿಮ್ಮ ಕಷ್ಟ ನನಗೆ ಅರ್ಥ ಆಯ್ತು. ಗಟ್ಟಿ ಹಾಲುಂಟು. ಚಲೊ ಚಾ ಮಾಡಿ ತರ್ತೇನೆ, ಕೂತಿರಿ” ರತಿ ಪುಟಿಯುತ್ತ ಒಲೆಯತ್ತ ಓಡಿದಳು. ಅವಳ ಒಗಟಿನಂತಹ ಮಾತು ನಿನಗಾದರೂ ಅರ್ಥವಾಯಿತೆ ಎಂಬಂತೆ ಸುಬ್ಬಮ್ಮ ಅಣ್ಣಪ್ಪನ ಮುಖ ನೋಡಿದಳು.
ಕಲೆ:ಎಸ್. ವಿ. ಹೂಗಾರ
ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ 'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ.
ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಎರಡು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಯು.ಆರ್. ಅನಂತಮೂರ್ತಿ ಕಥಾ ಪ್ರಶಸ್ತಿ, ದ.ರಾ. ಬೇಂದ್ರೆ ಸ್ಮಾರಕ ಸಾಹಿತ್ಯ ಪುರಸ್ಕಾರ, ವಾರಂಬಳ್ಳಿ ಪ್ರತಿಷ್ಠಾನ ಕಥಾ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಡಾ. ಬೆಸಗರಹಳ್ಳಿ ರಾಮಣ್ಣ ಸಂಸ್ಕರಣಾ ಸಾಹಿತ್ಯ ಪ್ರಶಸ್ತಿ, ಅಜೂರ ಪುಸ್ತಕ ಪ್ರತಿಷ್ಠಾನ ಪ್ರಶಸ್ತಿ ಮತ್ತು 'ಅಮ್ಮ' ಪ್ರಶಸ್ತಿ ಸೇರಿದಂತೆ ಹಲವು ಗೌರನ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
More About Author