ಇಡೀ ಜಗ ಅಮಾನತ್ತಿನಲ್ಲಿದೆ
ಎಲ್ಲರೂ ಸಾಲಾಗಿಯೇ ಚಲಿಸಬೇಕು
ತಲೆಯೆತ್ತಿ ನೋಡಬೇಡಿ
ಯಾರಿಗೂ ಕಣ್ಣು ಕಾಣಿಸುತ್ತಿಲ್ಲ ಇಲ್ಲಿ
ನೆನಪಿಡಿ
ಭಾರಹೊತ್ತ ಕತ್ತೆಯಂತೆಯೇ ಚಲಿಸಬೇಕು
ಬರಿ ಕಿವಿಗಳ ಅಲುಗಾಡಿಸುತ್ತ
ನೋವಾದರೆ ಕಂಡುಕಂಡಲ್ಲಿ ಅಳಬೇಡಿ
ಶೋಕಿಸಲು ಈ ತಾಯ್ನೆಲ ನಿಮ್ಮದಾಗಿ ಉಳಿದಿಲ್ಲ
ಕಣ್ಣೀರ ಒರೆಸುವ ಮಳೆಹನಿಗಳು
ಮಾರ್ಗ ಮಧ್ಯದಲ್ಲಿ ದಿಕ್ಕು ಬದಲಿಸಿವೆ
ಛಿದ್ರಗೊಂಡ ನೂರಾರು ಭರವಸೆಗಳು
ನಿನ್ನ ಸಹಾಯಕ್ಕೆ ಮತ್ತೆ ಬರವು
ಸಾಗರದ ಅಲೆಗಾಗಿ ಸತ್ತು ಬಿದ್ದ ನೀಲಿ ಮೀನಿಗಾಗಿ
ಮೀನಾರ ಕೆಳಗೆ ಬಸಿರು ಬಿದ್ದ ಹೆಣ್ಣಿಗಾಗಿ
ನೆಲದ ಧ್ಯೇಯವಾಕ್ಯ ಸೋತಿದ್ದಕ್ಕಾಗಿ ಅಳುವುದಾದರೆ
ನಾನೊಂದು ಜಾಗ ತೋರಿಸುತ್ತೇನೆ ಅಳುವ ಬಗೆ ಹೇಳುತ್ತೇನೆ
ಅಲ್ಲೇ ಹಾಗೇಯೇ ಅತ್ತುಬಿಡಿ
ಈ ಜಗಮಗಿಸುವ ದೀಪ ರಾತ್ರಿಯಲಿ
ಕತ್ತಲು ಹುಡುಕಿ
ಉತ್ತರ ಹೇಳದೆ ಅಳಬೇಕು
ಏಕೆಂದರೆ ಯಾತನೆಗಳನು
ಚರಿತ್ರೆಯ ಪುಟ ಸೇರಿಸುವ
ಪೆನ್ನು ಈಗ ಗಡಿಪಾರಾಗಿದೆ
ಹೆದರಬೇಡ
ಮೊದಲು ಅತ್ತು ಹಗುರಾಗು
ದೂರವೂ ಚಲಿಸದ ಹತ್ತಿರವೂ ಸುಳಿಯದ
ಅಂತರಂತರ ತಿರುಗುವ ಭರವಸೆಗಳನು
ಕೂಡಿ ಹಾಕಿ
ಗಾಳಿಗೆ ತೊಟ್ಟಿಲು ಕಟ್ಟಿ ತೂಗುತ್ತೇನೆ
ಮುಕ್ತವಾಗಿ ಹಾರಾಡಿಸುತ್ತೇನೆ
ಅಳುವಿಗೂ ಒಂದು ದಿನ
ಗೌರವದ ಮರಣ ಬರುತ್ತದೆ
ಅಲ್ಲಿ ನಿನ್ನ ಉಪಸ್ಥಿತಿ ಅವರ ಅನುಪಸ್ಥಿತಿ
ಒಡಲು ಗೀತೆ ಹಾಡಲು
ನಾನು ನೀನು ಒಂದಾಗುತ್ತೇವೆ
ಸರ್ವ ಋತುವಿನ ತೇವನೋವ ತೂಗಲು
ಜೊತೆಯಾಗುತ್ತೇವೆ
ಚಿತ್ರ : ಎಸ್. ವಿಷ್ಣುಕುಮಾರ್
ದೇವು ಮಾಕೊಂಡ
ಯುವ ಬರಹಗಾರ ದೇವು ಮಾಕೊಂಡ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದವರು. ಸಿಂದಗಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದಾರೆ. ‘ಬಿಕರಿಗಿಟ್ಟ ಕನಸು, ಹೆಗ್ಗೇರಿಸಿದ್ದ ಚರಿತೆ’ ಅವರ ಪ್ರಕಟಿತ ಕವನ ಸಂಕಲನಗಳು. ಹಲವಾರು ಲೇಖನಗಳು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಗುರುರತ್ನ, ವಿದ್ಯಾಸಿರಿ ವಿಷಾರದ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಸ್ತಪ್ರತಿ ಬಹುಮಾನ, ಆಕಾಶವಾಣಿ ಭದ್ರಾವತಿಯಿಂದ ಪ್ರತಿಭಾ ಪ್ರಶಂಸಾ ಪ್ರಶಸ್ತಿಗಳು ಲಭಿಸಿವೆ. ಅಲ್ಲದೇ ವಿಜಯಪುರ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮೀರವಾಡಿ ದತ್ತಿ ಪ್ರಶಸ್ತಿಯೂ ದೊರೆತಿದೆ.
More About Author