ಬೋದಿಲೇರ್ ಹೇಳಿದ:
'ಫ್ರಾನ್ಸ್ಗೆ ಕಾವ್ಯವೆಂದರೆ ಭಯ,
ಫ್ರಾನ್ಸ್ ಕವಿಯಿಂದ ನಿರೀಕ್ಷಿಸುವುದು
ವ್ಯಾಕರಣ ಮತ್ತು ಕಾಗುಣಿತದ ಪರಿಶುದ್ಧತೆಯನ್ನು ಮಾತ್ರ'
ಸೂಳೆಗೇರಿಯಲ್ಲಿ
ಅಲೆಯುತ್ತಿದ್ದ ಬೋದಿಲೇರ್ಗೆ
ಜೀನ್ ದುವಾಲ್ ಸಿಕ್ಕಳು
ಅವಳ ಎದೆ ನಿತಂಬ ತೊಡೆ ತೋಳಲ್ಲಿ
ಪಾಪದ ಹೂಗಳು
ಬಿರಿಯುವುದ ಕಂಡ
ಬೋದಿಲೇರ್ನ
ವ್ಯಾಮೋಹವನ್ನು
ಜೀನ್ ದ್ವೇಷಿಸಿದಳು
ಕನ್ನಡಿಯನ್ನು ಒರೆಸುತ್ತಾ
ಕುಂತ ಬೋದಿಲೇರ್ನ
ಮುಖ ಅಳಿಸಿ ಹೋಯಿತು
ಸತ್ಯದ ಹೊಗೆಯಲ್ಲಿ
ಅವನ ಉಸಿರು ಬಿಗಿಯಿತು
ಫ್ರಾನ್ಸ್ ಮತ್ತು ಜೀನ್
ಇಬ್ಬರಿಗೂ
ಬೋದಿಲೇರ್ ಅರ್ಥವಾಗಲೇ ಇಲ್ಲ.
- ದಯಾನಂದ
ವಿಡಿಯೋ
ವಿಡಿಯೋ
ದಯಾನಂದ
ಹುಟ್ಟಿದ್ದು 1988ರ ಅಂಬೇಡ್ಕರ್ ಜಯಂತಿಯಂದು ನಾಗಮಂಗಲ ತಾಲ್ಲೂಕಿನ ಬೆಳ್ಳೂರು, ಓದಿ ಬೆಳೆದಿದ್ದು ಬೆಂಗಳೂರಿನಲ್ಲಿ. ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ‘ಸಮಯ ಟಿವಿ’, ‘ಪ್ರಜಾವಾಣಿ’ ಮತ್ತು ‘ಸಮಾಚಾರ.ಕಾಂ’ ಸುದ್ದಿಸಂಸ್ಥೆಗಳಲ್ಲಿ ಒಂದು ದಶಕದ ಪತ್ರಿಕೋದ್ಯಮದ ಅನುಭವ. ಸದ್ಯ ಬೆಂಗಳೂರಿನಲ್ಲಿ ಮಾಧ್ಯಮ ಅಧ್ಯಾಪಕ.
ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹಧನ ಪಡೆದು 2005ರಲ್ಲಿ ಪ್ರಕಟಗೊಂಡ ನಾಟಕ ‘ಬಾಳಪೂರ್ಣ’. ಛಂದ ಪುಸ್ತಕ ಬಹುಮಾನ ಪಡೆದು 2017ರಲ್ಲಿ ಪ್ರಕಟಗೊಂಡ ಕಥಾ ಸಂಕಲನ ‘ದೇವರು ಕಚ್ಚಿದ ಸೇಬು’. ‘ಬುದ್ಧನ ಕಿವಿ’ ಇವರ ಎರಡನೇ ಕಥಾ ಸಂಕಲನ.
ಇವರ ಕತೆಗಳಿಗೆ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ, ಗುಲಬರ್ಗಾ ವಿಶ್ವವಿದ್ಯಾಲಯದ ಚಿನ್ನದ ಪದಕ, ಸಂಕ್ರಮಣ ಕಥಾ ಪುರಸ್ಕಾರ, ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ ಬಹುಮಾನ, ಸಮಾಜಮುಖಿ ಕಥಾ ಪುರಸ್ಕಾರ ಲಭಿಸಿದೆ.
ಇವರ ಕತೆಗಳು ಎರಡು ಬಾರಿ ಟೋಟೋ ಸಾಹಿತ್ಯ ಪುರಸ್ಕಾರದ ಲಾಂಗ್ ಲಿಸ್ಟ್ನಲ್ಲಿ ಇದ್ದವು. ಇವರ ಕತೆಯೊಂದು ವಿಜಯ ಕರ್ನಾಟಕ ಕಥಾಸ್ಪರ್ಧೆಯ ಅಂತಿಮ 15ರಲ್ಲಿತ್ತು.
ಓದುಗರ ಪ್ರೀತಿ ಮತ್ತು ವಿಮರ್ಶಕರ ಮೆಚ್ಚುಗೆ ಎರಡನ್ನೂ ಸಮನಾಗಿ ಪಡೆದ ಹೆಗ್ಗಳಿಕೆ ಇವರ ಕತೆಗಳದ್ದು.