Poem

ಬಿಕ್ಕಳಿಕೆ

ನನ್ನೆದೆಯ ಮೌನ
ವೃಕ್ಷದ ಪೊಟರೆಯೊಳಗೆ
ಕುಳಿತ ಬಣ್ಣದ ಹಕ್ಕಿ
ಕಣ್ಣುಗಳಲಿ ಸಡಗರದ ಲಾಂದರ
ಮನಸ್ಸು ಸಂಭ್ರಮದ ಹೂಕುಂಡ
ಮುಡಿದ ಮಲ್ಲಿಗೆ ಬಾಡುವಂತೆ
ದಿಟ್ಟಿಸಿದ್ದ ಜಗತ್ತನ್ನೇ
ಗೆದ್ದಂತೆ ಬಿಗಿದ್ದೆ

ದಟ್ಟಡವಿಯ ಮೆಳೆಯೊಳಗೆ
ಆನೆ ನುಗ್ಗಿ
ಮೋಡದ ಬಸಿರಿನಲಿ
ಕಾಮನಬಿಲ್ಲು ಮೂಡಿ
ಮನೆ ಹಿತ್ತಲಿಗೆ ಬೆಳದಿಂಗಳ
ಚಂದಿರ ನಡೆದು ಬಂದ...!

ಕಣ್ಣ ತಿರುವಿನಲಿ ಬೆಳಕು ಸಿಕ್ಕಂತೆ
ಜಾತಿ ಧರ್ಮಗಳ ಕೋಣೆಗೆ
ಬಿಗ ಜಡಿದು ನಿನ್ನೆದುರು
ನಿಂತು ಬಿಟ್ಟೆ
ಲಕ್ಷ ದೀಪಗಳ ಜಾತ್ರೆ ನೆರೆದಿತ್ತು
ಆಕಾಶದಲಿ ರಂಗಿನ
ಸಂಜೆ ಸಾಯುತಲಿತ್ತು

ನಿನ್ನ ನವಿರಾದ ವಂಚನೆ
ಆತ್ಮಕ್ಕಿಂತ ತೆಳುವಾಗಿ
ನಿಟ್ಟುಸಿರಿನಂತೆ ಕ್ಷೀಣವಾಗಿ
ದೂರದಲಿ ಗಂಟೆ ಮೊಳಗಿ
ಕರ್ಪೂರದಂತೆ ಹೃದಯ ಉರಿಯಿತು

ಒಂಟಿತನದ ಕಣ್ಣುಗಳಲಿ
ಹಚ್ಚಿಟ್ಟ ಕಂದೀಲು ಮಂಕು ಮಂಕು
ನಕ್ಷತ್ರಕ್ಕೆ ಮಾತು ಬರದು
ಕತ್ತಲೆಗೆ ಅರ್ಥವಾಗದು
ಅಂಗೈ ಹೆಗಲಲಿ
ಅತ್ತು ಹಗುರಾದೆ

ನಿರೀಕ್ಷೆಯ ಮೆರವಣಿಗೆಯಲಿ
ನಾನೀಗ ಬಿಕ್ಕಳಿಸುವುದಿಲ್ಲ
ಬಿಟ್ಟು ಹೋದ ಜಾಗದಲ್ಲೇ
ಬೆಳಕಾಗುವುದ ಮರೆತಿಲ್ಲ...!!

- ಮುಮ್ತಾಜ್ ಬೇಗಂ

ವಿಡಿಯೋ
ವಿಡಿಯೋ

ಮುಮ್ತಾಜ್ ಬೇಗಂ, ಗಂಗಾವತಿ

ಡಾ. ಮಮ್ತಾಜ್ ಬೇಗಂ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ತಂದೆ ಹುಸೇನಸಾಬ, ತಾಯಿ ಕಾಸಿಂಬಿ ಮುಧೋಳ. ಗಂಗಾವತಿಯಲ್ಲೇ ಪದವಿವರೆಗೂ ಶಿಕ್ಷಣ ಪೂರ್ಣಗೊಳಿಸಿ, ಗುಲಬಗಾ ವಿ.ವಿ.ಯಿಂದ ಎಂ.ಎ ಹಾಗೂ 'ಪಿಂಜಾರರು: ಒಂದು ಜಾನಪದೀಯ ಅಧ್ಯಯನ' ವಿಷಯವಾಗಿ ಮಹಾಪ್ರಬಂಧ ಸಲ್ಲಿಸಿ ಪಿಎಚ್ ಡಿ ಪಡೆದರು. ಸದ್ಯ, ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. 

ಕಾವ್ಯ, ಸಂಶೋಧನೆ, ಜಾನಪದ, ವಚನ, ದಲಿತ ಸಾಹಿತ್ಯ, ಸ್ತ್ರೀವಾದಿ ಚಿಂತನೆಗಳ ಬರವಣಿಗೆ ಇವರ ಆಸಕ್ತಿಯ ಕ್ಷೇತ್ರಗಳು. ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ, ಕನ್ನಡ ವಿಶ್ವವಿದ್ಯಾಲಯ ದೂರಶಿಕ್ಷಣ ಪಠ್ಯಪುಸ್ತಕ ಸಮಿತಿಯ ಸದಸ್ಯರಾದ್ಗಿದಾರೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದ್ದಾರೆ. ಗಂಗಾವತಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ 'ಕಳವೆ'ಯ ಸಂಪಾದನಾ ಮಂಡಳಿಯ ಸದಸ್ಯರಾಗಿದ್ದರು. ಸಂಶೋಧನಾ ವಿದ್ಯಾರ್ಥಿಗಳಿಗೆ ಇವರು ಮಾರ್ಗದರ್ಶಕರು. .

ಕೃತಿಗಳು: ಕಬಂಧ ಬಾಹುಗಳು ಬೇಕಿಲ್ಲ (ಕವನ ಸಂಕಲನ), ಬರದ ಭೂಮಿಯ ಚಿಗುರು (ಸಂಪಾದನೆ),ಜನಪದ ಸಾಹಿತ್ಯದಲ್ಲಿತವರುಮನೆ (ಸಂಶೋಧನೆ), ಕೃತಿಬಿಂಬ (ವಿಮರ್ಶೆ), ಕನ್ನಡ ವಾಣಿಜ್ಯ ಸಂವಹನ (ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಬಿಕಾಂ, ಬಿಬಿಎಂ ದ್ವಿತೀಯ ಸೆಮಿಸ್ಟರ್ ಪಠ್ಯ ಪುಸ್ತಕ), ವ್ಯವಹಾರಿಕ ಕನ್ನಡ (ಗುಲ್ಬರ್ಗ ವಿಶ್ವವಿದ್ಯಾಲಯ  ವ್ಯಾಪ್ತಿಯ ಬಿಬಿಎಂ ಪ್ರಥಮ ಸೆಮಿಸ್ಟರ್ ಪಠ್ಯ ಪುಸ್ತಕ), ಪಿಂಜಾರರು:  ಒಂದು ಜಾನಪದೀಯ ಅಧ್ಯಯನ ಇವರ ಸಂಶೋಧನಾ ಕೃತಿ.

More About Author