Poem

ಬತ್ತಲೆ ಪೆರೇಡ್

ಗಂಡಸರ ಒಂದು ಗುಂಪು
ರಾಜರಸ್ತೆಯಲ್ಲಿ ಮೆರವಣಿಗೆ ಸಾಗಿತ್ತು

ಅದರಲ್ಲಿ ಒಬ್ಬನಿಗೂ
ತಲೆ ಇರಲಿಲ್ಲ,
ಅಲ್ಲೊಂದು ಸಿಡಿಯುವ ಬಾಂಬಿತ್ತು

ತೋಳುಗಳಿರಲ್ಲಿ,
ಎರಡು ತಲವಾರುಗಳು
ಗಾಳಿಯಲ್ಲಿ ಬೀಸುತ್ತಿದ್ದವು

ಎದೆ ಇರಲಿಲ್ಲ,
ಅಲ್ಲೊಂದು ಭೀಕರ ರಣರಂಗವಿತ್ತು

ಕರುಳಂತೂ ಇಲ್ಲವೇ ಇರಲಿಲ್ಲ,
ಅಲ್ಲೊಂದು ಬೇಲಿ ಸುತ್ತುವ
ಮುಳ್ಳುತಂತಿಯ ಮುದ್ದೆ ಇತ್ತು

ಕಾಲುಗಳಿರಲಿಲ್ಲ,
ಅಲ್ಲೆರಡು ಬಂದೂಕುಗಳು ಹಟಕ್ಕೆ ಬಿದ್ದಂತೆ
ನೆಲವನ್ನು ಚುಚ್ಚಿ ಚುಚ್ಚಿ ಅಡಿ ಇಡುತ್ತಿದ್ದವು

ಅವುಗಳ ನಡುವೆ
ಶಿಶ್ನವೂ ಇರಲಿಲ್ಲ, ವೃಷಣಗಳೂ ಇರಲಿಲ್ಲ
ಎರಡು ಗ್ರೆನೇಡುಗಳ ಜೊತೆ
ಒಂದು ಚೂರಿ ನೇತಾಡುತ್ತಿತ್ತು
ಅದರಲ್ಲಿ ನೆತ್ತರು ತೊಟ್ಟಿಕ್ಕುತ್ತಿತ್ತು

ಮತ್ತೆ
ಈ ಗುಂಪಿನ ನಡುವೆ
ಇಬ್ಬರು ಹೆಂಗಸರಿದ್ದರು
ಅವರ ಮೈಮೇಲೆ ಬಟ್ಟೆ ಇರಲಿಲ್ಲ
ಯೋನಿ ಇದ್ದಲ್ಲಿ ಗಾಯವಿತ್ತು
ಉಳಿದಂತೆ
ಮನುಷ್ಯ ಸಹಜವಾದ ಅಂಗಾಂಗಗಳು
ಇರಬೇಕಾದ ಜಾಗದಲ್ಲಿ ಸರಿಯಾಗಿಯೇ ಇದ್ದವು!

**
-ವಿಲ್ಸನ್ ಕಟೀಲ್

ವಿಡಿಯೋ
ವಿಡಿಯೋ

ವಿಲ್ಸನ್ ಕಟೀಲ್

ಕವಿ ವಿಲ್ಸನ್ ಕಟೀಲ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಟೀಲಿನವರು. ಅವರ ಮೂಲ ಹೆಸರು ರೋಶನ್ ಸಿಕ್ವೇರಾ. ‘ಕಾರಣಾಂತರ ಗಳಿಂದ ಇಂಜಿನಿಯರಿಂಗ್ ವ್ಯಾಸಂಗವನ್ನು ತ್ಯಜಿಸಿ ಸಾಹಿತ್ಯದತ್ತ ಆಕರ್ಷಿತರಾದ ವಿಲ್ಸನ್, ತಮಿಳು ಹಾಡುಗಳಿಂದ ಸ್ಫೂರ್ತಿಗೊಂಡು ಕಾವ್ಯ ರಚನೆಯಲ್ಲಿ ತೊಡಗಿಕೊಂಡೆ’ ಎನ್ನುತ್ತಾರೆ. 

ಅವರ ಮಾತೃಭಾಷೆ ಕೊಂಕಣಿ. ಮೊದಲಿನಿಂದಲೂ ಕತೆ, ಕವಿತೆ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ಕೊಂಕಣಿಯಲ್ಲಿ ಅವರು ದೀಕ್ ಆನಿ ಪೀಕ್ ಹಾಗೂ  ಪಾವ್ಳೆ, ಎನ್ ಕೌಂಟರ್ ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ದೂರದರ್ಶನ, ಆಕಾಶವಾಣಿ, ದಸರಾ ಕವಿಗೋಷ್ಠಿ, ಕೇಂದ್ರ ಸಾಹಿತ್ಯ ಅಕಾಡೆಮಿ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದು, ಮೂರು ಬಾರಿ ಅತ್ಯುತ್ತಮ ಗೀತ ರಚನಕಾರು ಎಂಬ ಖ್ಯಾತಿ ಇವರಿಗಿದೆ. ಮಾಂಡ್ ಸೊಭಾಣ್ ಸಂಸ್ಥೆ ಕೊಡಮಾಡುವ ಜಾಗತಿಕ ಸಂಗೀತ ಪುರಸ್ಕಾರಕ್ಕೆ ಭಾಜನರಾಗಿದ್ಡಾರೆ. ’ಕಿಟಾಳ್ ಯುವ ಪುರಸ್ಕಾರ’ವೂ ಲಭಿಸಿದೆ.  “ಎನ್ ಕೌಂಟರ್” ಕವನ ಸಂಕಲನಕ್ಕೆ 2017 ರ ಪ್ರತಿಷ್ಠಿತ ವಿಮಲಾ ವಿ ಪೈ ಕಾವ್ಯ ಪುರಸ್ಕಾರ ದೊರೆತಿದೆ. ಅವರ ಕವಿತೆಗಳು ಪಂಜು ಅಂತರ್ಜಾಲ ಪತ್ರಿಕೆ, ಗೌರಿ ಲಂಕೇಶ್, ಹೊಸತು, ಸುಧಾ ಪತ್ರಿಕೆಗಳಲ್ಲಿ ಹಾಗೂ ಕವಿತೆಗಳ ಸಂಪಾದನಾ ಕೃತಿಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ. 

ಕೈದಿಗಳ ಒಳಿತಿಗಾಗಿ ಶ್ರಮಿಸುವ PRISON MINISTRY OF INDIA ಪುರವಣಿಯಲ್ಲಿ ಇವರ ಕವಿತೆ ಪ್ರಕಟಗೊಂಡಿದೆ. ಇವರ ಮೊದಲ ಕನ್ನಡ ಕವನ ಸಂಕಲನ ’ನಿಷೇಧಕ್ಕೊಳಪಟ್ಟ ಒಂದು ನೋಟು’. ಈ ಸಂಕಲನಕ್ಕೆ  ’ಯುವಕವಿಗಳ ಪ್ರಥಮ ಸಂಕಲನ’ ವಿಭಾಗದ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ. ಪ್ರಸ್ತುತ “ಆರ್ಸೊ’ ಕೊಂಕಣಿ ಮಾಸಿಕ ಪತ್ರಿಕೆಯ ಸಂಪಾದಕ ಹಾಗೂ ’ಕಿಟಾಳ್’ ಸಾಹಿತ್ಯ ಜಾಲತಾಣದ ಉಪ ಸಂಪಾದಕಾರಾಗಿ ಕೆಲಸ ಮಾಡುತ್ತಿದ್ದಾರೆ. 

More About Author