ಅವ್ವ,
ನೀನು ಅದೆಷ್ಟು ವಾಚಾಳಿ ಎಂದರೆ
ನಾನೇ ಮೌನಿಯಾಗುವಷ್ಟು!
ಹಾಗಾಗಿ ನಿನ್ನೆದರು ವಾಚಿಸಲಾರೆ
ಕೇವಲ ನಿನ್ನ ಮಾತುಗಳನ್ನಷ್ಟೇ
ನಾನು ಸಂಭ್ರಮಿಸುತ್ತೇನೆ;
ತುಸು ನೆನಪಿಸಿಕೋ ಹೀಗೊಮ್ಮೆ,
ವಾರದ ಮುನ್ನವೇ ಭೇಟಿಯಾಗುವ
ಸ್ಥಳವೊಂದ ನಿಗದಿಪಡಿಸಿ, ಅಲ್ಲಿ
ಏಕಾಂತತೆಗಾಗಿ ಖಾಯಂ ಜಾಗ ಗೊತ್ತುಪಡಿಸಿ
ಬರಿ ಕಣ್ಗಳಿಗಷ್ಟೇ ಮಾತಿನ ರಾಯಭಾರಿತನ;
ನಿನ್ನೆದರು ನಾ ಸೋತೆನೆಂದರೆ
ಗೆದ್ದ ಸಡಗರ ಇಬ್ಬರಲ್ಲೂ! ಮತ್ತು,
ತುಸು ಮಗುವಿನಂತೆ ರಚ್ಚೆ ಹಿಡಿದು
ನನ್ನನ್ನು ಅಮ್ಮನಾಗಿಸಿ ಮಡಿಲಲ್ಲಿ
ನಿದ್ರೆ ಬಂದಂತೆ ನಟಿಸುವೆಯಲ್ಲಾ ತುಂಟಿ;
ಕ್ಷಣವಾದರೂ ಅಗಲಿ ಇರಲಾರೆ ನೀ
ಮಧ್ಯರಾತ್ರಿಯ ಕನಸಿಗೂ ಕಾವಲು ನಾ
ಇದೆಲ್ಲಾ ಪ್ರೀತಿಯೇ? ಎಂದರೆ, ಊಹೂಂ
ಮುಲಾಜಿಲ್ದೆ ಕೆನ್ನೆಗೆ ಬಾರಿಸಿ ಬಿಗಿದಪ್ಪುವೆ
ನಾನೇ ನಿನ್ನ ಜೀವ ಎಂದು ಕೂಗುವೆ;
ಅದೆಷ್ಟು ಕನಸಿನ ಪಟ್ಟಿ ತಯಾರಿಸಿದ್ದೆ, ಕೇಳು
ಮಾತಿಗಷ್ಟೇ ಅಲ್ಲ ಗುರಿಯ ಬೆನ್ನಟ್ಟಿ ಹೊರಟ
ನನ್ನ ಮೇಲೆ ಇದೀಗ ನಿನ್ನೆಲ್ಲಾ ಹೊಣೆ
ಈಗ ಭೇಟಿ ಮಾಡುವ ಜಾಗ ಒಂದೇ
ಬರುವಾಗೆಲ್ಲಾ ಕೈಯಲ್ಲಿ ದುಂಡು ಮಲ್ಲಿಗೆ
ನಿನಗಾಗಿ ಅಲ್ಲ ನಿನ್ನ ಗೋರಿಗಾಗಿ!
ಮತ್ತೆ ಇದೀಗ ಮಾತಾಗಿದ್ದೀಯ ನೀನು
ನಾನು ಮತ್ತದೇ ಮೌನಿ!
- ದೀಪಿಕಾ ಬಾಬು
ವಿಡಿಯೋ
ವಿಡಿಯೋ
ದೀಪಿಕಾ ಬಾಬು
ಚಿತ್ರದುರ್ಗ ಜಿಲ್ಲೆಯ ಮಾರಘಟ್ಟ ಗ್ರಾಮದವರಾದ ದೀಪಿಕಾ ಬಾಬು ಅವರು ಬಾಲ್ಯದ ದಿನಗಳಿಂದಲೂ ಸಾಹಿತ್ಯದಲ್ಲಿ ಒಲವು ಬೆಳೆಸಿಕೊಂಡವರು. ಹಲವಾರು ಜಿಲ್ಲಾ ಮತ್ತು ರಾಜ್ಯ ಮಟ್ಟದ ದಿನಪತ್ರಿಕೆಗಳಲ್ಲಿ ಕವಿತೆಗಳನ್ನು, ಲೇಖನಗಳನ್ನು, ಸಣ್ಣ ಸಣ್ಣ ಕಥೆಗಳನ್ನು ಬರೆಯುತ್ತಾ ಬಂದ ದೀಪಿಕಾ ಅವರು ಪ್ರಸ್ತುತ 'ವಿನಯವಾಣಿ' ದಿನಪತ್ರಿಕೆಯಲ್ಲಿ 'ಸ್ತ್ರೀ ಲಹರಿ' ಎಂಬ ವಾರದ ಅಂಕಣವನ್ನು ಬರೆಯುತ್ತಿದ್ದಾರೆ.