ಏನೇನನ್ನು ಪ್ರಶ್ನಿಸುವುದು?

Date: 13-03-2023

Location: ಬೆಂಗಳೂರು


''ಸಾಮಾನ್ಯವಾಗಿ ಕನ್ನಡದಲ್ಲಿ ಒಂದು ಪ್ರಶ್ನಪದ ಒಂದು ಕೆಲಸವನ್ನು ನಿಬಾಯಿಸುತ್ತದೆ, ಅದು ಸಾಮಾನ್ಯವಾಗಿ ನಿರ‍್ದಿಶ್ಟಗೊಂಡಿರುತ್ತದೆ, ಅದು ವಾಕ್ಯದ ಒಂದು ಗಟಕವನ್ನು ಪ್ರಶ್ನಿಸುತ್ತದೆ. ಆದರೆ ಏನು ಎಂಬ ಒಂದು ಪ್ರಶ್ನೆಪದಕ್ಕೆ ಮಾತ್ರ ತುಸು ವಿಸ್ತರವಾದ ಜವಾಬ್ದಾರಿ ಇದೆ,'' ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಏನೇನನ್ನು ಪ್ರಶ್ನಿಸುವುದು?’ ಎಂಬ ವಿಚಾರಗಳ ಕುರಿತು ಬರೆದಿದ್ದಾರೆ.

ಏನನ್ನು ಪ್ರಶ್ನಿಸುವುದು ಎಂಬುದು ಮುಕ್ಯವಾದ ವಿಚಾರ. ಕನ್ನಡದಾಗ ಬಳಕೆಯಲ್ಲಿರುವ ಪ್ರತಿಯೊಂದು ಪ್ರಶ್ನೆಪದ ವಿಬಿನ್ನವಾದ ವ್ಯಾಕರಣ ಗಟಕಗಳನ್ನು ಪ್ರಶ್ನಿಸುತ್ತವೆ. ಇವನ್ನು ಇಲ್ಲಿ ತುಸು ಅವಗಾಹಿಸಬಹುದು. ಈ ಹಿಂದಿನ ಬರಹದಲ್ಲಿ ಗಮನಿಸದಂತೆ ಹಲವು ಪ್ರಶ್ನೆಪದಗಳು ಕನ್ನಡದಲ್ಲಿ ಇವೆ. ಅವುಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ.

ಏನು, ಏಕೆ/ಯಾಕೆ, ಎಲ್ಲಿ, ಎಂದು, ಎಶ್ಟು, ಎಂತಾ, ಯಾರು, ಯಾಕೆ, ಯಾವಾಗ, ಯಾವನು, ಯಾವಳು, ಯಾವುದು, ಯಾರು, ಯಾವು/ಯಾವುವು, ಹೇಗೆ ಮೊದಲಾದವು. ಈ ಶಬ್ದಗಳ ಮೊದಲ ಅಕ್ಶರದ ಆದಾರದ ಮೇಲೆ ಇವುಗಳನ್ನು ಈ ಅನುಕ್ರಮದಲ್ಲಿ ಹೊಂದಿಸಿದೆ.

ಸಾಮಾನ್ಯವಾಗಿ ಕನ್ನಡದಲ್ಲಿ ಒಂದು ಪ್ರಶ್ನಪದ ಒಂದು ಕೆಲಸವನ್ನು ನಿಬಾಯಿಸುತ್ತದೆ, ಅದು ಸಾಮಾನ್ಯವಾಗಿ ನಿರ‍್ದಿಶ್ಟಗೊಂಡಿರುತ್ತದೆ, ಅದು ವಾಕ್ಯದ ಒಂದು ಗಟಕವನ್ನು ಪ್ರಶ್ನಿಸುತ್ತದೆ. ಆದರೆ ಏನು ಎಂಬ ಒಂದು ಪ್ರಶ್ನೆಪದಕ್ಕೆ ಮಾತ್ರ ತುಸು ವಿಸ್ತರವಾದ ಜವಾಬ್ದಾರಿ ಇದೆ. ಇನ್ನು, ಒಂದೊಂದು ಪ್ರಶ್ನೆಪದವನ್ನು ಇಟ್ಟುಕೊಂಡು ಅದು ಏನನ್ನು ಪ್ರಶ್ನಿಸುತ್ತದೆ ಎಂದು ಮಾತಾಡೋಣ, ಇಲ್ಲಿ, ಸಾಮಾನ್ಯವಾಗಿ ಒಂದು ವಾಕ್ಯದಲ್ಲಿ ಒಂದು ಕ್ರಿಯೆ ಇರುತ್ತದೆ, ಆ ಕ್ರಿಯೆಯನ್ನು ಮಾಡುವ ಮಾಡುಗ ಇರುತ್ತದೆ, ಒಂದಶ್ಟು ಮಾಹಿತಿ ಇರುತ್ತದೆ ಎಂಬುದು ಸ್ಪಶ್ಟ. ವಾಕ್ಯದಲ್ಲಿ ಇರುವ ಮಾಹಿತಿಯನ್ನು ಮತ್ತು ಅದರೊಟ್ಟಿಗೆ ವಾಕ್ಯದಲ್ಲಿ ಇಲ್ಲದ ಮಾಹಿತಿಯನ್ನು ಪ್ರಶ್ನಿಸಲು ಸಾದ್ಯವಿದೆ. ಪ್ರತಿಯೊಂದು ಪ್ರಶ್ನೆಪದಕ್ಕೂ ಒಂದು ಸಣ್ಣ ವಾಕ್ಯದ ಉದಾಹರಣೆಯನ್ನು ತೆಗೆದುಕೊಂಡು ಅವು ಹೇಗೆ ಪ್ರಶ್ನಿಸುತ್ತವೆ ಎಂಬುದನ್ನು ತೋರಿಸಿದೆ.

ಏನು: ಏನು ಎನ್ನುವುದು ವಾಕ್ಯದ ಒಂದು ಗಟಕವನ್ನು ಅದರಂತೆ ಇಡಿಯ ವಾಕ್ಯವನ್ನು ಪ್ರಶ್ನಿಸಬಹುದು. ಮೊದಲಿಗೆ ಒಂದು ಗಟಕವನ್ನು ಪ್ರಶ್ನಿಸುವುದಕ್ಕೆ ಉದಾಹರಣೆ ಕೊಟ್ಟಿದೆ.

ವಾಕ್ಯ: ಅವಳು ಕಚೇರಿಯಲ್ಲಿ ಕೆಲಸ ಮಾಡುವಳು ಪ್ರಶ್ನೆ: ಅವಳು ಕಚೇರಿಯಲ್ಲಿ ಕೆಲಸ ಏನು ಮಾಡುವಳು?
ಇಡಿಯ ವಾಕ್ಯವನ್ನು ಪ್ರಶ್ನಿಸುವುದಕ್ಕೆ ಈ ಕೆಳಗೆ ಕೊಟ್ಟ ವಾಕ್ಯವನ್ನು ಗಮನಿಸಿ.
ವಾಕ್ಯ: ಅವಳು ಕಚೇರಿಯಲ್ಲಿ ಕೆಲಸ ಮಾಡುವಳು ಪ್ರಶ್ನೆ: ಏನು?

ಏಕೆ/ಯಾಕೆ: ಸಾಮಾನ್ಯವಾಗಿ ಪ್ರತಿಯೊಂದು ಪ್ರಶ್ನಪದ ಒಂದೊಂದು ರೂಪವನ್ನು ಹೊಂದಿರುತ್ತದೆ. ಏಕೆ/ಯಾಕೆ ಇದು ಮಾತ್ರ ಎರಡು ರೂಪಗಳನ್ನು ಹೊಂದಿದೆ. ದ್ರಾವಿಡದಲ್ಲಿ ಮೂಲದಲ್ಲಿ ಇದ್ದ ಎ ಮತ್ತು ಯ ಈ ಎರಡರಿಂದ ಎರಡು ಬಿನ್ನ ರೂಪಗಳು ಬೆಳೆದಿವೆ. ಏಕೆ/ಯಾಕೆ ಇದು ಗಟಕವೊಂದರ ಕಾರಣವನ್ನು ಪ್ರಶ್ನಿಸುತ್ತದೆ.

ವಾಕ್ಯ: ಅವಳು ಕಚೇರಿಯಲ್ಲಿ ಕೆಲಸ ಮಾಡುವಳು ಪ್ರಶ್ನೆ: ಅವಳು ಕಚೇರಿಯಲ್ಲಿ ಏಕೆ/ಯಾಕೆ ಕೆಲಸ ಮಾಡುವಳು?
ಎಲ್ಲಿ: ಎಲ್ಲಿ ಎಂಬ ಪ್ರಶ್ನೆಪದವು ವಾಕ್ಯದಲ್ಲಿ ಇರುವ ಕ್ರಿಯೆಯ ಜಾಗವನ್ನು ಪ್ರಶ್ನಿಸುತ್ತದೆ.
ವಾಕ್ಯ: ಅವಳು ಕಚೇರಿಯಲ್ಲಿ ಕೆಲಸ ಮಾಡುವಳು ಪ್ರಶ್ನೆ: ಅವಳು ಎಲ್ಲಿ ಕೆಲಸ ಮಾಡುವಳು?

ಎಂದು, ಯಾವಾಗ, ಯಾವತ್ತು/ಯಾವೊತ್ತು: ಸಮಯವನ್ನು ಪ್ರಶ್ನಿಸುವ ಮೂರು ಬಿನ್ನ ರೂಪಗಳು ಕನ್ನಡದಲ್ಲಿ ಇವೆ. ಇವುಗಳಲ್ಲಿ ಮೊದಲನೆಯದು ಎ ಎಂಬ ಮೂಲರೂಪಕ್ಕೆ -ಅಲ್ ಎಂಬ ನೆಲೆಯನ್ನು ಹೇಳುವ ರೂಪವೊಂದು ಸೇರಿ ಬೆಳೆದಿದೆ. ಇನ್ನೆರಡು ರೂಪಗಳು ಯಾ ಎಂಬ ರೂಪಕ್ಕೆ ಕ್ರಮವಾಗಿ ಆಗ ಮತ್ತು ಹೊತ್ತು ಎಂಬ ನೆಲೆಯನ್ನು, ಸಮಯವನ್ನು ಸೂಚಿಸುವ ರೂಪಗಳು ಸೇರಿಕೊಂಡು ಬೆಳೆದಿವೆ.

ವಾಕ್ಯ: ಅವಳು ಕಚೇರಿಯಲ್ಲಿ ಕೆಲಸ ಮಾಡುವಳು ಪ್ರಶ್ನೆ: ಅವಳು ಕಚೇರಿಯಲ್ಲಿ ಕೆಲಸ ಯಾವಾಗ ಮಾಡುವಳು?
ಎಶ್ಟು: ಪ್ರಮಾಣವನ್ನು ಎಶ್ಟು ಎಂಬ ರೂಪ ಪ್ರಶ್ನಿಸುತ್ತದೆ. ಅಂದರೆ, ಅಳತೆಯನ್ನು ಮತ್ತು ಎಣಿಕೆಯನ್ನು ಈ ಎರಡನ್ನೂ ಇದು ಪ್ರಶ್ನಿಸುತ್ತದೆ. ಈ ಎರಡೂ ಪ್ರಶ್ನೆಗಳನ್ನು ತೋರಿಸುವುದಕ್ಕೆ ಕೆಳಗಿನ ವಾಕ್ಯಕ್ಕೆ ಎರಡು ಉತ್ತರಗಳನ್ನು ತೋರಿಸಿದೆ.
ವಾಕ್ಯ: ಅವಳು ಕಚೇರಿಯಲ್ಲಿ ಕೆಲಸ ಮಾಡುವಳು
ಪ್ರಶ್ನೆ: ಅವಳು ಕಚೇರಿಯಲ್ಲಿ ಎಶ್ಟು ಕೆಲಸ ಮಾಡುವಳು? ಉತ್ತರ: ಅಳತೆ: ಅವಳು ಕಚೇರಿಯಲ್ಲಿ ತುಂಬಾ ಕೆಲಸ ಮಾಡುವಳು
ಎಣಿಕೆ: ಅವಳು ಕಚೇರಿಯಲ್ಲಿ ನಾಲ್ಕು ಕೆಲಸ ಮಾಡುವಳು

ಈ ರೂಪಕ್ಕೆ ಸಂಬಂದಿಸಿದ ಬಡಗನ್ನಡದ ಕುತೂಹಲದ ಬೆಳವಣಿಗೆಯೊಂದನ್ನು ಇಲ್ಲಿ ಉಲ್ಲೇಕಿಸಬೇಕು. ಬಡಗನ್ನಡಗಳು ಎಶ್ಟು ಎಂಬ ಈ ರೂಪವನ್ನು ಅದರ ಎರಡು ಕೆಲಸಗಳನ್ನು ಆದರಿಸಿ ಒಡೆದುಕೊಂಡು ಎರಡು ರೂಪಗಳಾಗಿಸಿಕೊಂಡು ಆ ಎರಡಕ್ಕೆ ಬಿನ್ನವಾದ ಕೆಲಸಗಳನ್ನು ವಹಿಸಿವೆ. ಅಳತೆಯನ್ನು ಪ್ರಶ್ನಿಸುವುದಕ್ಕೆ ಏಟು (ಮಸ್ಕಿ ಕನ್ನಡ), ಎಟ್ಟು (ಕಲಬುರಗಿ ಕನ್ನಡ), ಮತ್ತು ಎಣಿಕೆಯನ್ನು ಪ್ರಶ್ನಿಸುವುದಕ್ಕೆ ಏಸು (ಮಸ್ಕಿ ಕನ್ನಡ), ಎಸ್ಸು (ಕಲಬುರಗಿ ಕನ್ನಡ) ಎಂಬ ರೂಪಗಳನ್ನು ಮತ್ತು ಅವುಗಳಿಗೆ ನಿರ‍್ದಿಶ್ಟ ಕೆಲಸವನ್ನು ಬೆಳೆಸಿಕೊಂಡಿವೆ. ಇವುಗಳಿಗೆ ಎರಡು ಬೇರೆ ವಾಕ್ಯಗಳ ಉದಾಹರಣೆ ತೋರಿಸಿದೆ,

ವಾಕ್ಯ (ಮಸ್ಕಿ ಕನ್ನಡ): ಅಕಿ ಆಲ್ ತರ‍್ತಾಳ ಪ್ರಶ್ನೆ: ಅಕಿ ಏಟಾಲ್ ತರ‍್ತಾಳ? ಉತ್ತರ: ಅಕಿ ಜಗ್ಗೆ ಆಲ್ ತರ‍್ತಾಳ
ಆಕೆ ಹಾಲು ತರುತ್ತಾಳೆ ಅವಳು ಎಶ್ಟು ಹಾಲು ತರುವಳು? ಅವಳು ತುಂಬಾ ಹಾಲು ತರುವಳು
ವಾಕ್ಯ (ಮಸ್ಕಿ ಕನ್ನಡ): ಅಕಿ ಬಾಳ್ಯಣ್ಣು ತರ‍್ತಾಳ ಪ್ರಶ್ನೆ: ಅಕಿ ಏಸ್ ಬಾಳ್ಯಣ್ಣು ತರ‍್ತಾಳ? ಉತ್ತರ: ಅಕಿ ನಾಕ್ ಬಾಳ್ಯಣ್ಣು ತರ‍್ತಾಳ
ಅವಳು ಬಾಳೆಹಣ್ಣು ತರುವಳು ಅವಳು ಎಶ್ಟು ಬಾಳೆಹಣ್ಣು ತರುವಳು? ಅವಳು ತುಂಬಾ ಬಾಳೆಹಣ್ಣು ತರುವಳು?
ಎಂತ/ಎಂತಾ/ಎಂತಹ: ಗಟಕವೊಂದರ ಸ್ವರೂಪವನ್ನು ತಿಳಿದುಕೊಳ್ಳುವ ಕೆಲಸವನ್ನು ಈ ಪ್ರಶ್ನೆಪದ ಮಾಡುತ್ತದೆ.
ವಾಕ್ಯ: ಅವಳು ಕಚೇರಿಯಲ್ಲಿ ಕೆಲಸ ಮಾಡುವಳು ಪ್ರಶ್ನೆ: ಅವಳು ಕಚೇರಿಯಲ್ಲಿ ಎಂತಾ ಕೆಲಸ ಮಾಡುವಳು?
ಯಾರು: ಯಾರು ಎನ್ನುವುದು ಸಾಮಾನ್ಯವಾಗಿ ವ್ಯಕ್ತಿಯನ್ನು ಪ್ರಶ್ನಿಸುತ್ತದೆ. ಅದು ಮಾಡುಗವೊ, ಆಗುಗವೊ, ಕಾರಣವೊ ಯಾವುದಾದರೂ ಆಗಿರಬಹುದು. ಇದು ಏಕವಚನವನ್ನೂ ಬಹುವಚನವನ್ನೂ ಪ್ರಶ್ನಿಸಬಹುದು.
ಏಕವಚನ: ವಾಕ್ಯ: ಕಚೇರಿಯಲ್ಲಿ ಕೆಲಸ ಮಾಡುವಳು ಪ್ರಶ್ನೆ: ಯಾರು ಕಚೇರಿಯಲ್ಲಿ ಕೆಲಸ ಮಾಡುವರು?
ಬಹುವಚನ: ವಾಕ್ಯ: ಕಚೇರಿಯಲ್ಲಿ ಕೆಲಸ ಮಾಡುವಳು ಪ್ರಶ್ನೆ: ಯಾರು ಕಚೇರಿಯಲ್ಲಿ ಕೆಲಸ ಮಾಡುವರು?

ಈ ಮೇಲಿನ ವಾಕ್ಯದಲ್ಲಿ ಮಾಡುಗದ ಲಿಂಗ-ವಚನಗಳು ಸ್ಪಶ್ಟವಾಗಿದ್ದರೂ ಪ್ರಶ್ನವಾಕ್ಯವು ಆ ಮಾಹಿತಿಯನ್ನು ಪ್ರಶ್ನಿಸುತ್ತಿಲ್ಲ, ಮತ್ತು ಆ ಮಾಹಿತಿಯನ್ನು ಮುಚ್ಚಿಡುತ್ತಿದೆ. ಯಾರು ಎಂಬ ಪ್ರಶ್ನೆಪದವು ವ್ಯಕ್ತಿಯನ್ನು ಪ್ರಶ್ನಿಸುತ್ತದೆ ಮತ್ತು ಕನ್ನಡದಲ್ಲಿ ವ್ಯಕ್ತಿಗೆ ಆರೋಪಿಸುವ ವ್ಯಾಕರಣ ವಿಚಾರಗಳನ್ನು ಪ್ರಶ್ನಿಸುವುದಿಲ್ಲ. ಅಂದರೆ, ವ್ಯಕ್ತಿ ಏಕವಚನವೊ, ಬಹುವಚನವೊ ಆಗಿರಬಹುದು, ಸ್ತ್ರೀಲಿಂಗವೊ, ಪುಲ್ಲಿಂಗವೊ ಆಗಿರಬಹುದು. ಆದರೆ ಒಂದು ಮುಕ್ಯವಾದ ವಿಚಾರವೆಂದರೆ, ಇದು ಮನುಶ್ಯರನ್ನು ಪ್ರಶ್ನಿಸುತ್ತದೆ. ಮನುಶ್ಯರಲ್ಲದವರನ್ನು ಪ್ರಶ್ನಿಸುವ ಕೆಲಸವನ್ನು ಯಾವುದು ಎಂಬುದು ಮಾಡುತ್ತದೆ. ಮುಂದುವರೆದು ಲಿಂಗ-ವಚನವನ್ನು ಪ್ರಶ್ನಿಸುವ ಕೆಲಸವನ್ನು ಯಾ ಎಂಬ ರೂಪವು ಆಯಾ ಲಿಂಗ-ವಚನದ ರೂಪಗಳನ್ನು ಪಡೆದುಕೊಂಡು ಬೆಳೆದಿರುವ ಯಾವನು, ಯಾವಳು ಎಂಬ ರೂಪಗಳು ಮಾಡುತ್ತವೆ. ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬಹುದು. ಗವುರವ ತುಸು ಹೆಚ್ಚಿದ್ದಾಗ, ಇಲ್ಲವೆ ಸಹಜವಾಗಿದ್ದಾಗ ಸಾಮಾನ್ಯವಾಗಿ ಯಾರು ಎಂಬ ರೂಪವನ್ನು ಬಳಸಲಾಗುವುದು. ಲಿಂಗ-ವಚನವನ್ನು ಪಡೆದುಕೊಂಡು ಯಾವಳು, ಯಾವನು ಎಂಬ ರೂಪಗಳು ತುಸು ಕಡಿಮೆ ಗವುರವಕ್ಕೆ ಬಳಕೆಯಾಗಬಹುದು.

ಯಾವಳು: ಇದು ಸ್ತ್ರೀಲಿಂಗ-ಏಕವಚನವನ್ನು ಪ್ರಶ್ನಿಸುತ್ತದೆ.
ವಾಕ್ಯ: ಕಚೇರಿಯಲ್ಲಿ ಕೆಲಸ ಮಾಡುವವರು ಪ್ರಶ್ನೆ: ಯಾವಳು ಕಚೇರಿಯಲ್ಲಿ ಕೆಲಸ ಮಾಡುವವಳು?
ಯಾವನು: ಇದು ಪುಲ್ಲಿಂಗ-ಏಕವಚನವನ್ನು ಪ್ರಶ್ನಿಸುತ್ತದೆ.
ವಾಕ್ಯ: ಕಚೇರಿಯಲ್ಲಿ ಕೆಲಸ ಮಾಡುವವರು ಪ್ರಶ್ನೆ: ಯಾವನು ಕಚೇರಿಯಲ್ಲಿ ಕೆಲಸ ಮಾಡುವವನು?
ಯಾವುದು: ಯಾವುದು ಎಂಬ ರೂಪವು ಮಾನವವಲ್ಲದ ಮಾಡುಗ, ಆಗುಗ ಇಲ್ಲವೆ ಕಾರಣ ಹೀಗೆ ಯಾವುದಾದರೂ ಗಟಕವನ್ನು ಪ್ರಶ್ನಿಸುವುದಕ್ಕೆ ಬಳಕೆಯಾಗುತ್ತದೆ. ಇದು ಸಾಮಾನ್ಯವಾಗಿ ಏಕವಚನ ನಪುಂಸಕವನ್ನು ಪ್ರಶ್ನಿಸುತ್ತದೆ.
ವಾಕ್ಯ: ಕಚೇರಿಯಲ್ಲಿ ಕೆಲಸ ಮಾಡುವದು ಪ್ರಶ್ನೆ: ಯಾವುದು ಕಚೇರಿಯಲ್ಲಿ ಕೆಲಸ ಮಾಡುವದು?
ಯಾವು/ಯಾವುವು: ಈ ಮೇಲೆ ಮಾತಾಡಿದ ಯಾವುದು ಎಂಬುದರ ಬಹುವಚನ ರೂಪವಾಗಿ ಯಾವು ಇಲ್ಲವೆ ಈ ರೂಪದ ಮೇಲೆ ಅವು ಎಂಬ ಬಹುವಚನ ರೂಪವನ್ನು ಮತ್ತೊಮ್ಮೆ ಪಡೆದುಕೊಂಡಿರುವ ಯಾವುವು ಎಂಬ ರೂಪಗಳು ಬರುತ್ತವೆ.
ವಾಕ್ಯ: ಕಚೇರಿಯಲ್ಲಿ ಕೆಲಸ ಮಾಡುವವು ಪ್ರಶ್ನೆ: ಯಾವು/ಯಾವುವು ಕಚೇರಿಯಲ್ಲಿ ಕೆಲಸ ಮಾಡುವವು?
ಹೇಗೆ: ಈ ಪ್ರಶ್ನೆರೂಪವು ವಾಕ್ಯದ ಕ್ರಿಯೆಯ ರೀತಿಯನ್ನು, ಸ್ವರೂಪವನ್ನು ಪ್ರಶ್ನಿಸುತ್ತದೆ. ಹೇಗೆ ಎಂಬ ರೂಪವು ಕನ್ನಡದ ಉಳಿದೆಲ್ಲ ಪ್ರಶ್ನರೂಪಗಳಿಗಿಂತ ತುಂಬ ಬಿನ್ನವಾಗಿದೆ. ಇದು ಹಳಗನ್ನಡದಲ್ಲಿ ಎಹಗೆ ಎಂದಿದ್ದಿತು, ಆನಂತರ ಪದಮೊದಲಲ್ಲಿ ಇದ್ದ ಎ ಸ್ವರವು ಪದನಡುವೆ ಜಾರಿಕೊಂಡು, ಅಲ್ಲಿದ್ದ ಗಿಡ್ಡಸ್ವರ ಉದ್ದಸ್ವರವಾಗಿ ಬೆಳೆದು ಹೇಗೆ ಎಂಬ ರೂಪವು ಸಿದ್ದಿಸಿದೆ.
ವಾಕ್ಯ: ಅವಳು ಕಚೇರಿಯಲ್ಲಿ ಕೆಲಸ ಮಾಡುವಳು ಪ್ರಶ್ನೆ: ಅವಳು ಕಚೇರಿಯಲ್ಲಿ ಹೇಗೆ ಕೆಲಸ ಮಾಡುವಳು?
ಹೀಗೆ ಒಂದು ಪ್ರಶ್ನೆಪದ ವಾಕ್ಯದ ಒಂದು ನಿರ‍್ದಿಶ್ಟ ಗಟಕವನ್ನು ಪ್ರಶ್ನಿಸುತ್ತದೆ. ಆದರೆ, ಕೆಲವು ಪ್ರಶ್ನೆಪದಗಳು ವಾಕ್ಯದ ವಿವಿದ ಗಟಕಗಳನ್ನು ಪ್ರಶ್ನಿಸುವ ಸಾದ್ಯತೆಯನ್ನು ಹೊಂದಿರುತ್ತವೆ. ಇಲ್ಲಿ ಕೆಳಗೆ, ಅಂತದೊಂದಕ್ಕೆ ಏಕೆ/ಯಾಕೆ ಎಂಬ ಪ್ರಶ್ನೆಪದದ ಉದಾಹರಣೆಯನ್ನು ಕೊಟ್ಟಿದೆ.
ವಾಕ್ಯ: ಅವಳು ಕಚೇರಿಯಲ್ಲಿ ಕೆಲಸ ಮಾಡುವಳು ಪ್ರಶ್ನೆ: ಅವಳು ಕಚೇರಿಯಲ್ಲಿ ಏಕೆ/ಯಾಕೆ ಕೆಲಸ ಮಾಡುವಳು?
ಪ್ರಶ್ನೆ: ಅವಳು ಏಕೆ/ಯಾಕೆ ಕಚೇರಿಯಲ್ಲಿ ಕೆಲಸ ಮಾಡುವಳು?
ಪ್ರಶ್ನೆ: ಅವಳೆ ಏಕೆ/ಯಾಕೆ ಕಚೇರಿಯಲ್ಲಿ ಕೆಲಸ ಮಾಡುವಳು?
ಇವತ್ತಿನ ಬರಹದಲ್ಲಿ ಕನ್ನಡದಲ್ಲಿ ಪ್ರಶ್ನಿಸುವ ಬಗೆಯ ಕುರಿತು ತುಸು ಮಾತಾಡಲಾಯಿತು. ಇದು ಬಹು ಸ್ತೂಲವಾದ ವಿಚಾರ. ಒಳಪೊಕ್ಕು ನೋಡಲು, ಪ್ರಶ್ನಿಸುವ ವಿಸ್ತಾರ, ವಿಚಿತ್ರತೆ ಏನೆಲ್ಲವು ಎದುರಾಗುತ್ತವೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಬನಶಂಕರಿಯ ನಾಟಕಗಳ ಜಾತ್ರೆ : ವೃತ್ತಿ ರಂಗಭೂಮಿಯ ಕುಂಭಮೇಳ

27-01-2025 ಬೆಂಗಳೂರು

"ಬನಶಂಕರಿಯ ಮೈತುಂಬಾ ತೀಡಿದ ತಂಗಾಳಿಭರಿತ ಹಿತವಾದ ಚುರುಕು ಬಿಸಿಲು. ಜನಜಂಗುಳಿಯ ಬಾದಾಮಿಯ ಬನಶಂಕರಿ ಮಹಾಜಾತ್ರೆಯೊಳ...

ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ವಿಶಯದಲ್ಲಿ ಸೋಲು

26-01-2025 ಬೆಂಗಳೂರು

"ಬಾಶೆಯ ಮೂಲಕ ಕೊಡುವುದರ ಕಡೆಗೆ ಅವರ ಗಮನ ಹರಿಯುವುದು ಕಶ್ಟವಾಗುತ್ತದೆ. ಇದರಿಂದ ಮಕ್ಕಳು ವಿಶಯವನ್ನು ಅನುಬವಿಸಲು ಸ...

ಕನ್ನಡ ವಿಮರ್ಶೆ 4 (ಮುಂದುವರೆದ 4ನೆ ಭಾಗ)  

24-01-2025 ಬೆಂಗಳೂರು

"ನಾಡು ಕಟ್ಟುವ, ಸಂಸ್ಕೃತಿಯನ್ನು ಪುನರುಜ್ಜೀವಿಸುವ ಕೆಲಸವನ್ನು ಕೈಗೆತ್ತಿಗೊಂಡ ಬರಹಗಾರರಲ್ಲಿ ನಾವೆಲ್ಲರು ಒಂದಾಗಿ ...