Date: 28-01-2025
Location: ಬೆಂಗಳೂರು
"ಉತ್ಕಟ ಸಾಹಿತ್ಯ ಪ್ರೇಮಿಯಾದ ಕೃಷ್ಣಪ್ಪನವರ ನೀಡುತ್ತಿದ್ದ ಹೊಳಹುಗಳು ಅದ್ಭುತ. ಅಕಾಡಮಿಕ್ ಜಾರ್ಗನ್ ಗಳನ್ನು ಮುರಿದು ಅವರು ವಿಮರ್ಶೆಯನ್ನು ಹೊಸ ರೂಪದಲ್ಲಿ ಕಟ್ಟಿದರು. ಅವರ ಮಾತುಗಳನ್ನು ಏಕಾಂತದಲ್ಲಿ ಹಲವು ಗಂಟೆಗಳನ್ನು ಕೇಳುವ ಅದೃಷ್ಟ ನನಗೆ ಸಿಕ್ಕಿತ್ತು. ಅವರ ಹಲವು ಕೃತಿಗಳನ್ನು ಹಸ್ತಪ್ರತಿಯಲ್ಲಿಯೇ ಓದುವ ಸೌಭಾಗ್ಯ ನನಗೆ ದೊರಕಿತ್ತು ಎನ್ನುತ್ತಾರೆ ಎನ್.ಎಸ್.ಶ್ರೀಧರ ಮೂರ್ತಿ. ಅವರು ಜಿ. ಕೃಷ್ಣಪ್ಪ ಅವರ ಅಗಲಿಕೆಗೆ ಬರೆದ ನುಡಿ ನಮನ.
ಹಿರಿಯರಾದ ಬೇಂದ್ರೆ ಕೃಷ್ಣಪ್ಪನವರ ಸಾವಿನ ಸುದ್ದಿ ನಿಜಕ್ಕೂ ಬರಸಿಡಿಲಿನಂತೆ ಎರಗಿದೆ.
ಕಳೆದ ವಾರವಷ್ಟೇ ಅವರ ಜೊತೆ ಮಾತನಾಡಿ ಮನೆಗೆ ಬರುತ್ತೇನೆ ಎಂದು ಹೇಳಿದ್ದೆ. ಅಷ್ಟರಲ್ಲಿ ಅವರು ನಿಜದ ಮನೆಗೆ ತರಳಿದ್ದಾರೆ. ನನಗೆ ಅವರ ಜೊತೆಗೆ ಮೂವತ್ತು ವರ್ಷಗಳ ಒಡನಾಟ. ನನ್ನ ಮಾವನ ಮಿತ್ರರೊಬ್ಬರು ರಾಜ್ಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಮೂಲಕ ನನಗೆ ಕೃಷ್ಣಪ್ಪನವರ ಪರಿಚಯವಾಯಿತು. ಚಿ.ಶ್ರೀನಿವಾಸ ರಾಜು ಅವರ ಮೂಲಕ ನಿಕಟವಾದರು. ಯಾವಗಲೆಂದರೆ ಆಗ ಪೋನು, ಯಾವಗೆಂದರೆ ಆಗ ಹುಡುಕಿ ಕೊಂಡು ಬರುತ್ತಿದ್ದರು. ಈಗ ಎರಡು ತಿಂಗಳುಗಳ ಕೆಳಗೆ ನಾವೆಲ್ಲ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ತೀವ್ರವಾಗಿ ತೊಡಗಿಸಿ ಕೊಂಡಿದ್ದಾಗ ಕೃಷ್ಣಪ್ಪನವರು ನನ್ನನ್ನು ಹುಡುಕಿ ಕೊಂಡು ಬಂದರು. ಒಂದು ಗಂಟೆಗಳಿಗೂ ಹೆಚ್ಚು ಕಾಲ ಜೊತೆಯಾಗಿ ಕಳೆದರು. ‘ನಾಕುತಂತಿ’ಯಲ್ಲಿನ ‘ಹಡಗದ ಹುಡುಗಿ’ ರೂಪಕಕ್ಕೆ ಹೊಸ ಅರ್ಥವನ್ನು ಹೇಳಿದರು. “ ಈ ‘ನೀನು’ ಎಂಬ ಶರೀರದಲ್ಲಿನ ‘ನಾನು’ ಎಂಬ ಅಹಂಕಾರ’ ಸಂಕುಚಿತ ಸ್ವಾರ್ಥವನ್ನು ಹೊಂದಿದೆ. ಇಂದ್ರಿಯ ಸೇವಕನಾಗಿದ್ದ ‘ನೀನು’ ಎಂಬ ಶರೀರ ಹೊಂದಿದ್ದ ವ್ಯಕ್ತಿಯ ಬುದ್ಧಿಯ ಉಪಾಸಕನಾಗಿ ‘ತಾನು’ ಎಂಬ ಆತ್ಮದ ಆಧಾರದಿಂದ ‘ಅನು’ ಎಂಬ ಪರಮಾತ್ಮನ ಶೋಧಕ್ಕೆ ತೊಡುಗುತ್ತಾನೆ. ಆಗ ‘ಅನು’ವಿನ ನಿಜರೂಪ ಅರಿವಾಗಿ ಆನಂದವನ್ನು ಹೊಂದುತ್ತಾನೆ, ಈ ಆನಂದವೇ ‘ತಾನು’ ಎಂದು ಅವರು ವಿವರವಾಗಿ ‘ನಾಕುತಂತಿ’ ವಿವರಿಸುವಾಗ ಅದು ಸ್ವರ್ಗಸದೃಶ್ಯ ಅನುಭವವೇ ಸರಿ. ಅವರ ‘ನಾಕುತಂತಿ ಒಂದು ಟಿಪ್ಪಣಿ’ ಮತ್ತು ‘ಬೇಂದ್ರ ಕಂಡ ಬೆಳಗು’ ಎರಡೂ ಪುಸ್ತಕಗಳು ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದವು. ‘ನಾಕುತಂತಿ-50’ ರ ಕುರಿತು ಸಾಹಿತ್ಯ ಸಮ್ಮೇಳನದಲ್ಲಿ ಅವರೇ ಮಾತನಾಡ ಬೇಕು ಎನ್ನುವುದು ನನ್ನ ಆಸೆ. ಆದರೆ ಆರೋಗ್ಯದ ಸಮಸ್ಯೆ ಅವರನ್ನು ಮಂಡ್ಯಕ್ಕೆ ಬರದಂತೆ ತಡೆಯಿತು. ‘ನಿಮ್ಮ ಮಾತುಗಳ ವಿಡಿಯೋ ಕಳುಹಿಸಿ’ ಎಂದು ವಿನಂತಿಸಿ ಕೊಂಡೆ. ಮಗನ ಸಹಾಯ ಪಡೆದು ಹದಿಮೂರು ನಿಮಿಷಗಳ ವಿಡಿಯೋ ಅವರು ಕಳುಹಿಸಿದರು. ಅದನ್ನು ಸಮ್ಮೇಳನದಲ್ಲಿ ಪ್ಲೇ ಮಾಡಿದವು.(ಇಂತಹ ಪ್ರಯತ್ನ ಸಾಹಿತ್ಯ ಸಮ್ಮೇಳನಗಳಲ್ಲಿ ನಡೆದಿದ್ದು ನನಗೆ ಗೊತ್ತಿದ್ದ ಹಾಗೆ ಇದೇ ಪ್ರಥಮ) ಇದು ಅವರಿಗೆ ಬಹಳ ಸಂತೋಷವನ್ನು ಕೊಟ್ಟಿತ್ತು. ಬಹಳ ವಿವರವಾಗಿ ನಂತರದ ದಿನಗಳಲ್ಲಿ ಬೇಂದ್ರೆ ಕುರಿತು ನನ್ನ ಜೊತೆಯಲ್ಲಿ ಮಾತನಾಡಿದ್ದರು. ಬೇಂದ್ರೆ ಕಾವ್ಯದ ಮಾಂತ್ರಿಕತೆ ಹಿಡಿಯ ಬಲ್ಲ ಜಾದೂಗಾರ ಎನ್ನಿಸಿ ಕೊಂಡ ಅವರಿಗೆ ಇತ್ತಿಚಿನ ದಿನಗಳಲ್ಲಿ ಬೇಂದ್ರೆಯವರನ್ನು ಯಾವ್ಯಾವುದೋ ಪಂಥದವರು ಹೈಜಾಕ್ ಮಾಡಲು ಪ್ರಯತ್ನಿಸುತ್ತಿರುವುದು ಅಪಾರ ನೋವನ್ನು ಕೊಟ್ಟಿತ್ತು.
ಬೇಂದ್ರೆಯವರಂತೆ ಕುವೆಂಪು ಅವರನ್ನು ಆಳವಾಗಿ ಕೃಷ್ಣಪ್ಪ ಓದಿ ಕೊಂಡಿದ್ದರು. ಕುವೆಂಪು ಪದಸಂಪತ್ತಿನ ಕುರಿತ ಅವರ ಅಂಕಣ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗುತ್ತಿತ್ತು. ಜೈಮುನಿ ಭಾರತ, ಗಿರಿಜಾ ಕಲ್ಯಾಣಗಳನ್ನು ಹೊಸಗನ್ನಡಕ್ಕೆ ತಂದಿದ್ದ ಕೃಷ್ಣಪ್ಪನವರು ‘ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ- ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಡಾಕ್ಟೊರೇಟ್ ಪಡೆದಿದ್ದರು.
ಉತ್ಕಟ ಸಾಹಿತ್ಯ ಪ್ರೇಮಿಯಾದ ಕೃಷ್ಣಪ್ಪನವರ ನೀಡುತ್ತಿದ್ದ ಹೊಳಹುಗಳು ಅದ್ಭುತ. ಅಕಾಡಮಿಕ್ ಜಾರ್ಗನ್ ಗಳನ್ನು ಮುರಿದು ಅವರು ವಿಮರ್ಶೆಯನ್ನು ಹೊಸ ರೂಪದಲ್ಲಿ ಕಟ್ಟಿದರು. ಅವರ ಮಾತುಗಳನ್ನು ಏಕಾಂತದಲ್ಲಿ ಹಲವು ಗಂಟೆಗಳನ್ನು ಕೇಳುವ ಅದೃಷ್ಟ ನನಗೆ ಸಿಕ್ಕಿತ್ತು. ಅವರ ಹಲವು ಕೃತಿಗಳನ್ನು ಹಸ್ತಪ್ರತಿಯಲ್ಲಿಯೇ ಓದುವ ಸೌಭಾಗ್ಯ ನನಗೆ ದೊರಕಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಅವರ ತುಂಬು ಪ್ರೀತಿ ನನಗೆ ಅಖಂಡವಾಗಿ ಮೂವತ್ತು ವರ್ಷಗಳ ಕಾಲ ದೊರಕಿತ್ತು ಎನ್ನುವುದು ಈಗ ‘ಭುವನದ ಭಾಗ್ಯ’ ಎನ್ನಿಸುತ್ತದೆ.
ಹೋಗಿ ಬನ್ನಿ ಸಾರ್..
ಕೊಡುವುದೇನು? ಕೊಂಬುದೇನು?
ಒಲವು, ಸ್ನೇಹ, ಪ್ರೇಮ,
ಹೊರಗೆ ಬರಿದು, ಒಳಗೆ ಬಲಿದು
ಇದ್ದವರಿಗೆ ನೇಮ..
ಬೆಂಗಳೂರು: ಪ್ರಸಿದ್ಧ ಪುಸ್ತಕ ಮಾರಾಟ ಸಂಸ್ಥೆಯಾದ ಸೆಲೆಕ್ಟ್ ಬುಕ್ ಶಾಪ್ ನ ಮಾಲೀಕ ಕೆಕೆಎಸ್ ಮೂರ್ತಿ (95) ಅವರು ಸೋಮವಾರ...
ಕಲಬುರಗಿ: ಕಲ್ಯಾಣ ಕರ್ನಾಟಕ ರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಅನುಭವ ಮಂಟಪ ಸಭಾಂಗಣದಲ್ಲಿ ನಡೆದ ಎರಡನೇ ಗೋಷ್ಠಿಯಲ್ಲಿ ಕವ...
ಕಲಬುರಗಿ: ರಂಗಭೂಮಿಯ ಚರಿತ್ರೆಯಲ್ಲಿ ಸ್ವಾತಂತ್ರ್ಯಪೂರ್ವದಿಂದ ಹಿಡಿದು ಸ್ವಾತಂತ್ರ್ಯೋತ್ತರ ಕಾಲಘಟ್ಟದವರೆಗೂ ನಾಟಕಗಳ ಹರವ...
©2025 Book Brahma Private Limited.