"ಗೆಳೆಯ ಜೋಗಿ ಬರೆದ ಇಪ್ಪತ್ತನೇ ಕಾದಂಬರಿ “ನಿರ್ಗಮನ”. ಇಲ್ಲಿಗೆ ಅವನ ಒಟ್ಟು ಕೃತಿಗಳ ಸಂಖ್ಯೆ ಏಳು ಕಮ್ಮಿ ನೂರು. ಈ ಕಾದಂಬರಿಯನ್ನು ಓದುವ ಮುನ್ನ ನೀವು ಅವನೇ ಬರೆದ ಮುಂಬರಹವನ್ನು ಓದಿಕೊಂಡರೆ ಕಾದಂಬರಿಯ ಆಳ ತಲುಪಲು ಸಾಧ್ಯವಾಗುತ್ತದೆ." ಎನ್ನುತ್ತಾರೆ ಲೇಖಕ ಗೋಪಾಲಕೃಷ್ಣ ಕುಂಟಿನಿ. ಅವರು ಜೋಗಿ ಅವರ ‘ನಿರ್ಗಮನ’ ಕೃತಿ ಕುರಿತು ಬರೆದ ವಿಮರ್ಶೆ.
ಗೆಳೆಯ ಜೋಗಿ ಬರೆದ ಇಪ್ಪತ್ತನೇ ಕಾದಂಬರಿ “ನಿರ್ಗಮನ”. ಇಲ್ಲಿಗೆ ಅವನ ಒಟ್ಟು ಕೃತಿಗಳ ಸಂಖ್ಯೆ ಏಳು ಕಮ್ಮಿ ನೂರು. ಈ ಕಾದಂಬರಿಯನ್ನು ಓದುವ ಮುನ್ನ ನೀವು ಅವನೇ ಬರೆದ ಮುಂಬರಹವನ್ನು ಓದಿಕೊಂಡರೆ ಕಾದಂಬರಿಯ ಆಳ ತಲುಪಲು ಸಾಧ್ಯವಾಗುತ್ತದೆ.
“ನಿರ್ಗಮನ” ಅವನ ಬೆಂಗಳೂರು ಸೀರೀಸ್ ಗೆ ಸೇರ್ಪಡೆಯಾಗುವ ಕಾದಂಬರಿ. ಇದೂ ಮಹಾನಗರದ ಕಥನ. ಇಲ್ಲಿ ಸುದ್ದಿ ಮಾಧ್ಯಮದ ಓರ್ವನಿದ್ದಾನೆ. ಅವನನ್ನು ಸಂಪಾದಕ ಅಂತಾರೆ.
ಅವನ ಪ್ರಕಾರ ಜಗತ್ತಲ್ಲಿ ಎರಡೇ ಸುದ್ದಿಗಳಿರುವುದು. ಓಡುವ ಸುದ್ದಿ, ಓಡದೇ ಇರುವ ಸುದ್ದಿ.
ಶುದ್ಧ ಸುದ್ದಿ ಎನ್ನುವುದೇ ಈ ಜಗತ್ತಿನಲ್ಲಿಲ್ಲ. ಯಾರಾದರೂ ಮತ್ತೊಬ್ಬರಿಗೆ ಏನಾದರೂ ಹೇಳುತ್ತಾರೆ ಅಂದರೆ ಅದರಿಂದ ಯಾರೋ ಒಬ್ಬರಿಗೆ ಲಾಭ ಆಗಿಯೇ ಆಗುತ್ತದೆ ಎಂದು ನಂಬಿ ಅದರಂತೆ ನಡೆಯುವ ಸಂಪಾದಕ ಅವನು.
ಆ ಸಂಪಾದಕ ತನ್ನ ಬೆಂಗಳೂರನ್ನು ನೋಡುತ್ತಿದ್ದಾನೆ. ಬೆಂಗಳೂರು ಕೊಲೆಗಡುಕರ, ಕಳ್ಳರ, ಆತ್ಮಹತ್ಯೆ ಮಾಡಿಕೊಳ್ಳುವವರ, ಅಪಘಾತಗಳ, ಮಕ್ಕಳನ್ನು ಓದುವಂತೆ ಪೀಡಿಸುವ ಪೋಷಕರ, ಸಿಇಟಿ ಪರೀಕ್ಷೆ ಬರೆಯುವುದೇ ಪರಮ ಉದ್ದೇಶ ಎಂಬುದನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಹೆತ್ತವರ, ರಸ್ತೆ ನಿಯಮಗಳನ್ನು ಮೀರುವವರ, ಬಿರಿಯಾನಿ ಸಿಗಲಿಲ್ಲ ಎಂದು ಕೊಲೆ ಮಾಡುವವರ, ರಾತ್ರಿಯೆಲ್ಲ ಫುಡ್ ಆಪ್ ಮೂಲಕ ಊಟ ತರಿಸಿಕೊಂಡು ತಿನ್ನುವ ನಿಶಾಚರಿಗಳ, ಫ್ರೀಡಮ್ ಪಾರ್ಕಿನ ಮುಂದೆ ಧರಣಿ ಕುಳಿತುಕೊಳ್ಳುವ ರೈತರು, ಅಂಗನವಾಡಿ ಶಿಕ್ಷಕಿಯರು, ಅರೆಕಾಲಿಕ ಉಪನ್ಯಾಸಕರ, ವಾರಾಂತ್ಯದಲ್ಲಿ ಬಿಡುಗಡೆಗಾಗಿ ಹಾತೊರೆಯುತ್ತಾ ಊರಾಚೆಗಿನ ಕಾಡು, ಬೆಟ್ಟ, ಹಳ್ಳಕೊಳ್ಳಗಳಿಗೆ ಧಾವಿಸುವ ತರುಣ ತರುಣಿಯರ ಊರು ಎಂಬಂತೆ ಅವನಿಗೆ ಕಾಣುತ್ತಿದೆ.
ಹೀಗೇ ಕಾಣುತ್ತಿದ್ದವನಿಗೆ ಆ ಒಂದು ದಿನ ತನ್ನ ಅಪ್ಪ ಕಾಣೆಯಾದ ಸುದ್ದಿ ಬರುತ್ತದೆ.
ಅಮೇರಿಕಾದಲ್ಲಿರುವ ತಂಗಿ ಬೆಂಗಳೂರಿನ ಜನ ವಿರಳ ಪ್ರದೇಶದಲ್ಲಿ ಕಟ್ಟಿಸಿದ ಮನೆಯಲ್ಲಿ ಏಕಾಏಕಿ ಏಕಾಂತದ ಕಾರಣ ಹೇಳಿ ಹೋಗಿ ವಾಸಿಸತೊಡಗಿದ ಅಪ್ಪ ಅದೇ ಮನೆಯಿಂದ ಒಂದು ಹಾಡಾಹಗಲೇ ಕಣ್ಮರೆಯಾಗುತ್ತಾನೆ.
ಅಲ್ಲಿಂದ ಕಣ್ಮರೆ ಮತ್ತು ಹುಡುಕಾಟದ ಕಣ್ಣುಮುಚ್ಚಾಲೆ ಆಟ ಶುರುವಾಗುತ್ತದೆ.
ಆ ಹುಡುಕಾಟ ಕೊನೆಯಲ್ಲಿ ಮಗನ ಅಂತರಂಗ ತಿಳಿದ ಅಪ್ಪ ಮತ್ತು ಆ ಅಪ್ಪ ಮಗನ ನಡುವಿದ್ದ ಸೇತುವೆ, ಆ ಸೇತುವೆ ಯಾವಾಗ ಮುರಿದುಬಿತ್ತು ಎಂದು ಗೊತ್ತೇ ಮಾಡದ ಕಾಲ, ಅಥವಾ ಸೇತುವೆ ಇದ್ದಿದ್ದೇ ಸುಳ್ಳು ಎಂಬ ಮಟ್ಟಿಗೆ ಕೊಂಡೊಯ್ದ ತಲೆಮಾರಿನ ಸತ್ಯದತ್ತ ಸಾಗುತ್ತದೆ.
ಉಳಿದಂತೆ ನೀವು ಓದಿಕೊಳ್ಳಿ.
*********
ಕಾದಂಬರಿಯ ಕೆಲವು ಸಾಲುಗಳು ಹೀಗೇ ನಿಮ್ಮ ಓದಿನ ರುಚಿ ಹೆಚ್ಚಿಸಲಿ ಅಂತ..
“ಎಲ್ಲಾ ಮುದುಕರೂ ಒಂದೇ ಥರ ಕಾಣ್ತಾರೆ ನೋಡೋದಕ್ಕೆ. ದಾರೀಲಿ ಹೋಗ್ತಿದ್ರೆ ಯಾವನೂ ಮುದುಕರ ಕಡೆ ತಿರುಗಿಯೂ ನೋಡಲ್ಲ. ಹಾದೀಲಿ ಎಮ್ಮೆಯೋ ಹಸುವೋ ನಡ್ಕೊಂಡು ಹೋಗ್ತಿವೆ ಅನ್ನುವಷ್ಟು ನಿರ್ಲಕ್ಷ್ಯ ನಮಗೆ.”
‘ಮನೇಲಿದ್ದಾಗ ಚೆನ್ನಾಗಿ ನೋಡ್ಕೊಂಡಿರಲ್ಲ. ಕಾಣೆಯಾದಾಗ ಎಲ್ಲಿಲ್ಲದ ಪ್ರೀತಿ ಉಕ್ಕುಕ್ಕಿ ಬರುತ್ತೆ.’
‘ನಾವು ಹೇಗಿದ್ದೀವಿ ಅನ್ನೋದಕ್ಕಿಂತ ಇನ್ನೊಬ್ಬರ ಮನಸ್ಸಲ್ಲಿ ಹೇಗೆ ಉಳೀತೀವಿ ಅನ್ನೋದು ಮುಖ್ಯ’.
‘ಈ ಜಗತ್ತನ್ನು ಗೆಲ್ಲುವುದಕ್ಕೆ ಸೈನ್ಯ ಬೇಕಿಲ್ಲ, ಅಪ್ಪ ಮಗ ಇಬ್ಬರಿದ್ದರೆ ಸಾಕು. ಅಪ್ಪ ಅಂದರೆ ವರ್ತಮಾನ, ಮಗ ಎಂದರೆ ಭವಿಷ್ಯ. ಮಗನ ಕಾಲವನ್ನು ಅಪ್ಪ ನೋಡಬೇಕು. ಅಪ್ಪನ ಕಾಲದ ಬಗ್ಗೆ ಮಗನಿಗೆ ಗೊತ್ತಿರಬೇಕು.’
‘ಈ ದೇಶವನ್ನು ಕಟ್ಟಿದ್ದು ರಾಜಕಾರಣಿಗಳಲ್ಲ. ಈ ದೇಶದ ಜನ. ರಾಜಕಾರಣಿಗಳು ಆಮೇಲೆ ಬಂದರು. ಅವರಿಂದ ಈ ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ.’
‘ನಿನ್ನಿಂದ ಈ ದೇಶಕ್ಕೆ ಯಾವ ಲಾಭವೂ ಇಲ್ಲ. ನೀನಿಲ್ಲದೇ ಹೋದರೂ ನಿನ್ನ ಮನೆ ನಡೆಯುತ್ತದೆ. ಅನಿವಾರ್ಯವಾಗದ ಯಾವುದನ್ನೂ ಈ ಪ್ರಕೃತಿ ಉಳಿಸಿಕೊಳ್ಳುವುದಿಲ್ಲ, ನೆನಪಿಟ್ಟುಕೋ’.
"'ಹವೇಲಿ ದೊರೆಸಾನಿ 'ಕಥಾ ಸಂಕಲನದ ಮೊದಲ ಕಥೆ,'ಅನ್ಪಡ ಕಂಟೆವ್ವ ', ಊರಿಗೆ ಶಾಲೆ ಬರಬೇಕೆಂದು ಊರ...
"ಜಮ್ಮು-ಕಾಶ್ಮೀರದ ಬೇಸಿಗೆ ತಂಗು ಧಾಮವಾದ ದಲ್ ಲೇಕ್ ಶ್ರೀನಗರದ ಒಳಗಿರುವ ಒಂದು ಸಿಹಿನೀರಿನ ಸರೋವರ. ಪ್ರವಾಸಿಗರು ಮ...
"ಭುಜಂಗಾಚಾರ್ಯ ಎನ್ನುವುದು ಒಂದು ಶಕ್ತಿಯಾಗಿ ಆ ಕುಟುಂಬವನ್ನು ಕಾಪಾಡುತ್ತದೆ. ಒಂದು ಆದರ್ಶವಾಗಿ ಮನೆಯ ಹಿರಿ ಮಗನ ಕ...
©2025 Book Brahma Private Limited.