Date: 10-11-2024
Location: ಬೆಂಗಳೂರು
ಬೆಂಗಳೂರು: ಸಾಹಿತ್ಯದ ತಾಯಿಬೇರು ಎಂದರೆ ಜನಪದ ಸಾಹಿತ್ಯ. ಇಂತಹ ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಸಚ್ಚಿದಾನಂದ ಅವರು ಹೇಳಿದರು.
ಅವರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಡವನಹಳ್ಳಿ, ಲುಂಬಿನಿ ಪ್ರಕಾಶನ ಚಳಕೆರೆ ಇವರ ಸಹಯೋಗದಲ್ಲಿ ಮೋದೂರು ತೇಜ ಅವರು ಸಂಪಾದಿಸಿರುವ "ಗಿಲಿಗಿಲಿಯಾ ಮತ್ತು ಇತರ ಜನಪದ ಕಥೆಗಳು" ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
"ನಾವು ಬಾಲ್ಯದಲ್ಲಿದ್ದಾಗ ರಾತ್ರಿ ಹೊತ್ತಲ್ಲಿ ಮನೆಯ ಹಿರಿಯರಾದ ಅಜ್ಜ ಅಜ್ಜಿಯರು ಮೊಮ್ಮಕ್ಕಳಿಗೆ ಕಥೆ ಹೇಳುತ್ತಿದ್ದರು,ಹಾಡು ಹೇಳುತ್ತಿದ್ದರು. ಈಗ ಆ ವಾತಾವರಣ ಕಣ್ಮರೆಯಾಗಿದೆ. ಟಿ.ವಿ. ಮೊಬೈಲ್ ನೋಡುವ ಚಟಕ್ಕೆ ದಾಸರಾಗುತ್ತಿರುವ ಮಕ್ಕಳನ್ನು ಮತ್ತೆ ಓದಿನ ಕಡೆ ಮುಖ ಮಾಡಿಸಬೇಕೆಂದರೆ ಇಂತಹ ಕೃತಿಗಳನ್ನು ಮಕ್ಕಳ ಓದಬೇಕು ಎಂದು ಹೇಳಿದರು. ಜನಪದ ಸಾಹಿತ್ಯ ಬದುಕಿನ ಅನುಭವಗಳಿಂದ ಒಡಮೂಡಿರುವುದರಿಂದ ಅದು ನಮಗೆ ಬೇಗ ಹತ್ತಿರವಾಗುತ್ತದೆ, ಆಪ್ತವಾಗುತ್ತದೆ. ಬದುಕಿನಲ್ಲಿ ಎದುರಾಗುವ ಕಷ್ಟ ಸುಖಗಳನ್ನು ನಿಭಾಯಿಸುವ ಧೈರ್ಯ ಬೆಳೆಸುತ್ತದೆ," ಎಂದು ಹೇಳಿದರು.
ಕೃತಿ ಕುರಿತು ಮಾತನಾಡಿದ ಕಾಂತರಾಜು ಗುಪ್ಪಟ್ಣ, "ಅವರು ಆಧುನಿಕ ಬದುಕಿನ ಭರಾಟೆಯಲ್ಲಿ ಎಷ್ಟೋ ದೇಸಿ ನುಡಿಗಳು ಕಣ್ಮರೆಯಾಗುತ್ತಿವೆ. ಅಂತಹ ನುಡಿ ಸಂಪತ್ತನ್ನು ಇಂದಿನ ತಲೆಮಾರಿಗೆ ದಾಟಿಸಬೇಕು. ಆ ಕೆಲಸವನ್ನು ಕತೆಗಾರರಾದ ಮೋದೂರು ತೇಜ ಅವರು ಮಾಡಿದ್ದಾರೆ. ಇಲ್ಲಿನ ಒಂದೊಂದು ಕಥೆಯು ಒಂದೊಂದು ಆಶಯವನ್ನು ಹೊಂದಿದೆ. ಇಂತಹ ಜನಪದ ಸಾಹಿತ್ಯದ ಸಂಗ್ರಹ ಕಾರ್ಯ ಇನ್ನು ಹೆಚ್ಚು ಹೆಚ್ಚು ನಡೆಯಬೇಕು," ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಡಾ. ಮಲ್ಲೇಕಾವು ಮುಕುಂದರಾಜು ಅವರು ಮಾತನಾಡಿ, "ಇದು ಮಕ್ಕಳ ಮಕ್ಕಳು ಓದಲೇಬೇಕಾದ ಕೃತಿ. ಇಲ್ಲಿನ ಕಥೆಗಳು ಮಕ್ಕಳ ಕಲ್ಪನೆ, ಆಲೋಚನೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ನಮ್ಮಲ್ಲಿ ವಿಫುಲವಾಗಿರುವ ಜನಪದ ಸಾಹಿತ್ಯ ಇನ್ನೂ ಹೆಚ್ಚಿನ ರೀತಿಯಲ್ಲಿ ದಾಖಲಾಗಬೇಕು," ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಿ ಆರ್ ರಮೇಶ್ ಅವರು ಮಾತನಾಡಿ, "ಜನಪದ ಸಾಹಿತ್ಯ, ಕಲೆಗಳು ಹಿನ್ನೆಲೆಗೆ ಸರಿಯುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಅದೇ ರೀತಿ ನಾವು ಬಾಲ್ಯದಲ್ಲಿ ಕೇಳಿಸಿಕೊಳ್ಳುತ್ತಿದ್ದ ಸೋಬಾನೆ ಹಾಡುಗಳೇ ಹೇಳುವವರು ಇಲ್ಲವಾಗಿದ್ದಾರೆ. ಅಂತಹ ಸೋಬಾನೆ ಹಾಡುಗಳನ್ನು ಸಂಗ್ರಹಿಸುವ ಕಾರ್ಯವೂ ನಡೆಯಲಿ," ಎಂದು ಹೇಳಿದರು.
ಕೃತಿಯ ಸಂಪಾದಕರಾದ ಮೋದೂರು ತೇಜ ಮಾತನಾಡಿ, "ಕರೋನಕಾಲದಲ್ಲಿ ಯಾರ ಮೇಲೆ ಯಾವ ಪರಿಣಾಮ ಬೀರಿತೊ ಗೊತ್ತಿಲ್ಲ. ಆದರೆ ವಿದ್ಯಾರ್ಥಿಗಳ ಮೇಲೆ ತುಂಬಾ ಪರಿಣಾಮ ಬೀರಿತು. ಆನ್‌ಲೈನ್ ಕ್ಲಾಸ್ ಗಾಗಿ ಮೊಬೈಲ್ ನೋಡುವ ಅನಿವಾರ್ಯತೆ ಉಂಟಾಯಿತು. ಅದರ ಪರಿಣಾಮದಿಂದ ಅವರಲ್ಲಿ ಓದಿನ ಆಸಕ್ತಿ ಕಡಿಮೆಯಾಯಿತು. ಇದರಿಂದ ಬಹಳಷ್ಟು ವಿದ್ಯಾರ್ಥಿಗಳು ಮೊಬೈಲ್ ನೋಡುವ ಚಟದಿಂದ ಹೊರಬರಲಾಗಿಲ್ಲ. ಅಂತಹ ವಿದ್ಯಾರ್ಥಿಗಳ ಏಕಾಗ್ರತೆಯನ್ನು, ಓದಿನಲ್ಲಿ ಆಸಕ್ತಿಯನ್ನು ಸ್ವಲ್ಪಮಟ್ಟಿಗಾದರೂ ಈ ಕೃತಿ ಉಂಟು ಮಾಡಿದರೆ ನನ್ನ ಶ್ರಮ ಸಾರ್ಥಕ," ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಚ್. ಹನುಮಂತರಾಯಪ್ಪ ಸ್ವಾಗತಿಸಿದರು ಪಿ. ಶಿವಮ್ಮ ನಿರೂಪಿಸಿದರು.
ಗಗನ ಜಿ. ಅವರು ವಂದಿಸಿದರು. ಯುವಕವಿ ಅಶೋಕ್ ಅಗಿಲ್, ಶಿಕ್ಷಕರಾದ ರಾಜಣ್ಣ, ನಾಗರತ್ನಮ್ಮ, ಪವಿತ್ರ ಉಪಸ್ಥಿತರಿದ್ದರು.
ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...
ಬೆಂಗಳೂರು: ನಮ್ಮನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...
ಬೆಂಗಳೂರು: ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ...
©2024 Book Brahma Private Limited.