“ಹೆಚ್ಚು ಹೆಚ್ಚು ಇಂತಹ ಪುಸ್ತಕಗಳನ್ನು ಓದುವುದರಿಂದ; ಸಕಾರಾತ್ಮಕ ಭಾವ ಮೂಡುವುದರ ಜೊತೆಗೆ ವ್ಯಕ್ತಿತ್ವ ಪ್ರಜ್ವಲಿಸುತ್ತದೆ, ಬದುಕಿನಲ್ಲಿ ಹೊಸ ದಿಶೆಯ ಬೆಳಕ ಮೂಡುತ್ತದೆ” ಎನ್ನುತ್ತಾರೆ ನೀಲಾವರ ಸುರೇಂದ್ರ ಅಡಿಗ. ಅವರು ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅವರ ’ಸಾರ್ಥಕ ಜೀವನಕ್ಕೆ ಕಗ್ಗೋಪದೇಶ’ ಕೃತಿಗೆ ಬರೆದ ಮುನ್ನುಡಿ.
ಆತ್ಮೀಯ ಮಿತ್ರ ಶ್ರೀ ಕೊಂಡಳ್ಳಿ ಪ್ರಭಾಕರ ಶೆಟ್ರು ಅವರ 'ಸಾರ್ಥಕ ಜೀವನಕ್ಕೆ ಕಗ್ಗೋಪದೇಶ' ಕೃತಿಗೆ ಮುನ್ನುಡಿ ಬರೆಯುತ್ತೀರಾ ಎಂದು ಕೇಳಿದಾಗ ತುಂಬಾ ಸಂತಸದಿಂದ ಒಪ್ಪಿಕೊಂಡೆ. ಕಾರ್ಕಳ ತಾಲೂಕಿನಲ್ಲಿ ಕನ್ನಡಪರ ವಾತಾವರಣ ಮೂಡಿಸಿ ಸಾಹಿತ್ಯ ಪರಿಷತ್ತಿನ ಮೂಲ ಉದ್ದೇಶವನ್ನು ಈಡೇರಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಶ್ರೀಯುತರ ಬಗ್ಗೆ ನನಗೆ ಅತೀವ ಹೆಮ್ಮೆ. ಅತ್ಯುತ್ತಮ ಸಂಘಟಕರಾಗಿ, ಶ್ರೇಷ್ಠ ಅಧ್ಯಾಪಕರಾಗಿ, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಾಗಿ, ಜೇಸಿ ತರಬೇತುದಾರರಾಗಿ, ಕೊಂಡಳ್ಳಿಯವರದ್ದು ಬೆಲೆಕಟ್ಟಲಾಗದ ಸಾಧನೆ. ಮಂಕುತಿಮ್ಮನ ಕಗ್ಗವನ್ನು ಕಂಠಸ್ಯ ಮಾಡಿಕೊಂಡಿದ್ದಾರೆ. ಅವರ ಮಂಕುತಿಮ್ಮನ ಕಗ್ಗದ ವ್ಯಾಖ್ಯಾನ ವಾಚನ ಕೇಳುವುದೇ ಮಹಾದಾನಂದ. ಉಡುಪಿ ಜಿಲ್ಲಾ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಕಾರ್ಕಳ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಬಿಡುವಿಲ್ಲದ ಸಂದರ್ಭದಲ್ಲೂ ಬಿಡುವು ಮಾಡಿಕೊಂಡು 'ಸಾರ್ಥಕ ಜೀವನಕ್ಕೆ ಕಗ್ಗೋಪದೇಶ' ಎಂಬ ಕೃತಿ ರಚಿಸಿ ನಿಮ್ಮ ಮುಂದೆ ಇಟ್ಟಿದ್ದಾರೆ. ಇದೊಂದು ಸಂಗ್ರಹ ಯೋಗ್ಯಕೃತಿ. ಎಲ್ಲಾ ಗ್ರಂಥಾಲಯಗಳಲ್ಲೂ, ಮನೆ ಮನೆಗಳಲ್ಲೂ ಇರಲೇಬೇಕಾದ ಕೃತಿ. ತಾರ್ಕಿಕವಾಗಿ ಯೋಚಿಸಿ ಯಾವುದು ಸರಿ, ಯಾವುದು ತಪ್ಪು ಎಂದು ಗ್ರಹಿಸಿ ಜ್ಞಾನ ಕಟ್ಟುವ ಕೆಲಸಕ್ಕೆ ಈ ಗ್ರಂಥ ಸಹಕಾರಿಯಾಗಿದೆ. ಸಕಾರಾತ್ಮಕ ಮನಸ್ಸುಗಳನ್ನು ಬಲಪಡಿಸುವ, ಮಾನವೀಯ ಮೌಲ್ಯಗಳಿಗೆ ಉತ್ತೇಜನ ನೀಡುವ ಬರೆಹಗಳಿಂದ ಕೂಡಿದ್ದು, ಎಲ್ಲಾ ಸಹೃದಯ ಓದುಗರಿಗೆ ಮೆಚ್ಚುಗೆಯಾಗುವುದರಲ್ಲಿ ಯಾವುದೇ ಸಂಶಯ ಇಲ್ಲ.
ನಾನೊಬ್ಬ ಉತ್ತಮ ಓದುಗ. ಇದು ನನಗೆ ಹೆಮ್ಮೆಯ ವಿಷಯ. ಈಗಾಗಲೇ ಸಾವಿರಾರು ಪುಸ್ತಕಗಳನ್ನು ಓದಿದ್ದೇನೆ. ಆದರೆ ಈ ಪುಸ್ತಕ ಓದುವಾಗ ನನಗಾದ ಖುಷಿ ವರ್ಣನಾತೀತ. ಶ್ರೀ ಪ್ರಭಾಕರ ಶೆಟ್ರು ತುಂಬಾ ಪುಸ್ತಕ ಓದಿದ್ದಾರೆ. ಅವುಗಳಲ್ಲಿನ ಒಳ್ಳೆಯ ಅಂಶಗಳನ್ನು ಸಂದರ್ಭೋಚಿತವಾಗಿ ಬಳಸುವ ಕಲೆ ಅವರಿಗೆ ಕರಗತವಾಗಿದೆ. ಈ ಹೊತ್ತಗೆಯಲ್ಲಿ ಸರ್ವಜ್ಞ, ಜಿ.ಎಸ್. ಶಿವರುದ್ರಪ್ಪ, ವಸಂತ ಕುಷ್ಟಗಿ, ನಿಜಗುಣ, ಸಂತ ಕಬೀರ, ಗೋಪಾಲಕೃಷ್ಣ ಅಡಿಗ, ರಾಷ್ಟ್ರಕವಿ ಕುವೆಂಪು, ಕೆ.ಎ. ಲಕ್ಷ್ಮೀನಾರಾಯಣ ಭಟ್, ಕನಕದಾಸ, ಪುರಂದರದಾಸ-ಇವರು ವಚನಗಳಲ್ಲಿ, ಕೀರ್ತನೆಗಳಲ್ಲಿ ಕವನಗಳಲ್ಲಿ ಹೇಳಿದ ಮಾತುಗಳನ್ನು ಸೂಕ್ತ ಸಂದರ್ಭಗಳಲ್ಲಿ ಉಲ್ಲೇಖಿಸಿ ಕಗ್ಗದ ಮಾತುಗಳಿಗೆ ಜೀವ ತುಂಬಿದ್ದಾರೆ.
ಕೆ. ಶಿವಪ್ಪನವರ ಮುಕ್ತಕಗಳನ್ನು ಹೆಚ್ಚು ಕಡೆ ಬಳಸಿದ್ದಾರೆ. ಇದು ತುಂಬಾ ಸೂಕ್ತವಾಗಿದೆ. ಮಹಾಭಾರತ, ರಾಮಾಯಣದ ಉದಾಹರಣೆಗಳು, ಆಂಗ್ಲ ಭಾಷಾ ಸಾಹಿತ್ಯದಲ್ಲಿ ಬಂದ ಉತ್ತಮ ಮಾತುಗಳನ್ನು ಸಹ ಬಳಸಿದ್ದಾರೆ. ಹೀಗಾಗಿ ಈ ಕೃತಿಯನ್ನು ಓದುತ್ತಿದ್ದಂತೆ ನಮಗರಿವಿಲ್ಲದಂತೆ ನಮ್ಮ ಮನ ಪ್ರಶಾಂತದೆಡೆಗೆ ಸಾಗುತ್ತದೆ. ಸಕರಾತ್ಮಕವಾಗಿ ಯೋಚಿಸಬೇಕು. ಅವರಂತೆ ನಡೆಯಬೇಕೆಂಬ ಸಂದೇಶ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಒಂದು ಒಳ್ಳೆಯ ಪುಸ್ತಕ ಒಬ್ಬ ವ್ಯಕ್ತಿಯ ಬದುಕನ್ನೇ ಬದಲಾಯಿಸಬಹುದು ಎಂಬ ಮಾತು ಇಂತಹ ಪುಸ್ತಕಗಳಿಗೆ ಸೂಕ್ತವಾಗಿದೆ ಎಂದು ನನಗನಿಸಿದೆ. ಹೆಚ್ಚು ಹೆಚ್ಚು ಇಂತಹ ಪುಸ್ತಕಗಳನ್ನು ಓದುವುದರಿಂದ; ಸಕಾರಾತ್ಮಕ ಭಾವ ಮೂಡುವುದರ ಜೊತೆಗೆ ವ್ಯಕ್ತಿತ್ವ ಪ್ರಜ್ವಲಿಸುತ್ತದೆ, ಬದುಕಿನಲ್ಲಿ ಹೊಸ ದಿಶೆಯ ಬೆಳಕ ಮೂಡುತ್ತದೆ.
ಕೃತಿ ಓದಿದಾಗ ನನಗಿಷ್ಟವಾದ ಕೆಲವು ಉಕ್ತಿಗಳು ಈ ಕೆಳಗಿನಂತಿವೆ. ಇದು ನಿಮಗೆಲ್ಲರಿಗೂ ಇಷ್ಟವಾಗಬಹುದು. ಈ ರೀತಿಯ ನೂರಾರು ಉಕ್ತಿಗಳು ಈ ಪುಸ್ತಕದಲ್ಲಿದೆ. ಕೆಲವೊಂದು ಮಾತ್ರ ಇಲ್ಲಿ ಉಲ್ಲೇಖಿಸಿದ್ದೇನೆ.
ಇನ್ನೊಬ್ಬರನ್ನು ಕೆಣಕುವುದು ಮತ್ತು ಅಣಕವಾಡುವುದು ಎಂದೂ ಒಳ್ಳೆಯತನದ ಲಕ್ಷಣಗಳಲ್ಲ.
ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುವುದು ಮಾತಿನಿಂದಲ್ಲ ನಡವಳಿಕೆಯಿಂದ, ಆದರ್ಶದ ನಡವಳಿಕೆಯನ್ನು ಹೊಂದಿದವನು ಲೋಕದ ಜನರಿಗೆ ಮಾರ್ಗದರ್ಶನದ ಗುರು ಆಗುತ್ತಾರೆ.
ಕೆಲಸದಲ್ಲಿ ಮೇಲು ಕೀಳೆಂಬುದಿಲ್ಲ. ಪ್ರತಿಯೊಂದು ಕೆಲಸವು ಪವಿತ್ರ ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಇದರೊಂದಿಗೆ ನಮ್ಮ ಬಗ್ಗೆ ನಮಗೆ ಕೀಳರಿಮೆ ಇರಬಾರದು.
ಎಷ್ಟೊಂದು ಅರ್ಥಪೂರ್ಣವಾದ ಸಾಲುಗಳು ಈ ರೀತಿಯ ಸಾಕಷ್ಟು ಉದಾಹರಣೆಯ ಮೂಲಕ ಕೊಂಡಳ್ಳಿ ಪ್ರಭಾಕರ ಶೆಟ್ಟು ಮಂಕುತಿಮ್ಮನ ಕಗ್ಗಕ್ಕೆ ಅರ್ಥಪೂರ್ಣವಾದ ವ್ಯಾಖ್ಯಾನ ಬರೆದು ಜೀವ ತುಂಬಿದ್ದಾರೆ.
ನಾನು ಎರಡು ಮೂರು ಬಾರಿ ಓದಿ ಖುಷಿಪಟ್ಟಿದ್ದೇನೆ. ಇದೊಂದು ಅತ್ಯುತ್ತಮ ಕೃತಿರತ್ನ ಎಂದು ನನಗನಿಸಿದೆ. ನೀವು ಓದಿದಾಗ ಇದರ ಸತ್ಯದ ಅರಿವು ನಿಮಗಾಗುತ್ತದೆ.
'ಸಾರ್ಥಕ ಜೀವನಕ್ಕೆ ಕಗ್ಗೋಪದೇಶ' ಕೃತಿಯ ಮೂಲಕ ಪ್ರಭಾಕರ ಶೆಟ್ಟು ಸಾಹಿತ್ಯ ಕ್ಷೇತ್ರಕ್ಕೆ ಆಮೂಲ್ಯವಾದ ಕೊಡುಗೆ ನೀಡಿದ್ದಾರೆ. ಈ ಕೃತಿಗೆ ಪ್ರಶಸ್ತಿ ಆಧಾರಗಳು ಬರಲಿ. ಗೆಳೆಯ ಕೊಂಡಳ್ಳಿ ಪ್ರಭಾಕರ ಶೆಟ್ಟಿಗೆ ಸದಾ ಕಾಲ ಶುಭವಾಗಲಿ ಇದು ನನ್ನ ಹರಕೆ ಹಾರೈಕೆಯಾಗಿದೆ.
- ನೀಲಾವರ ಸುರೇಂದ್ರ ಅಡಿಗ
"ಬರಹಗಾರ ತಾನು ಎದ್ದು ಕಾಣೋದಕ್ಕಿಂತ ಹಿಂದಿನವರು ಸೃಷ್ಟಿಸಿದ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಬರೆಯುವುದೇ ಮುಖ...
ಬೆಂಗಳೂರು: ಕನ್ನಡ ಸಂಘರ್ಷ ಸಮಿತಿ ನೀಡುವ 2024ನೇ ಸಾಲಿನ ವಿವಿಧ ಪ್ರಶಸ್ತಿಗಳ ಪಟ್ಟಿ ಪ್ರಕಟವಾಗಿದೆ. 'ಕುವೆಂಪು ...
"ಈ ಕಾದಂಬರಿಯ ಪ್ರತಿ ಪಾತ್ರಗಳು ನನ್ನೊಳಗಿನ ಮನುಷ್ಯಳನ್ನು ಹೆಚ್ಚು ಹೆಚ್ಚು ತಿದ್ದಿದೆ, ತೀಡಿದೆ, ಪ್ರಶ್ನೆ ಮಾಡುವಂ...
©2025 Book Brahma Private Limited.