ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ

Date: 14-01-2023

Location: ಬೆಂಗಳೂರು


“ಆದುನಿಕ ಕಾಲದ ಒಂದೆರಡು ಎತ್ತುಗೆಗಳನ್ನು ತೆಗೆದುಕೊಂಡು ಮಾತಾಡಬಹುದು. ತಂತ್ರಗ್ನಾನ ಈ ಕಾಲದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ. ಅದಕ್ಕೆ ತಕ್ಕಂತೆ ಕನ್ನಡವು ಇಪ್ಪತ್ತನೆಯ ಶತಮಾನದಲ್ಲಿ ವ್ಯಾಪಕವಾಗಿ ತನ್ನ ಪದಕೋಶವನ್ನು ಬೆಳೆಸಿಕೊಳ್ಳುತ್ತದೆ. ಹೊಸಗಾಲದಲ್ಲಿ ಬೆಳೆದ ಗ್ನಾನದ ವಿಸ್ತರಣೆಯಿಂದಾಗಿ ಕನ್ನಡದಲ್ಲಿ ದೊಡ್ಡ ಪ್ರಮಾಣದ ಪದಗಳು ಹುಟ್ಟುವುದನ್ನು ಕಾಣಬಹುದು” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ’ ವಿಚಾರದ ಕುರಿತು ಬರೆದಿದ್ದಾರೆ.

ಪದಕೋಶದ ಬೆಳವಣಿಗೆ ಎನ್ನುವುದು ಆ ಬಾಶೆಯನ್ನಾಡುವ ಸಮಾಜದ ಬೆಳವಣಿಗೆಯೆ ಆಗಿರುತ್ತದೆ. ಸಮಾಜ ಯಾವ ರೀತಿಯಲ್ಲಿ, ಯಾವ ಮುಕದಲ್ಲಿ, ಎಶ್ಟು ವೇಗದಲ್ಲಿ ಬದಲಾಗುತ್ತಿರುತ್ತದೆಯೊ ಹಾಗೆ ಪದಕೋಶವೂ ಕೂಡ ಆ ಎಲ್ಲ ಆಯಾಮಗಳೊಂದಿಗೆ ಬೆಳೆಯುತ್ತಿರುತ್ತದೆ. ಹೀಗೆ ನೋಡಿದಾಗ ಒಂದು ಸಮಾಜವನ್ನು ಅರಿತುಕೊಳ್ಳುವುದಕ್ಕೆ ಆ ಸಮಾಜದ ಬಾಶೆಯ ಪದಕೋಶವನ್ನು ಅರಿತುಕೊಳ್ಳುವುದು ದೊಡ್ಡ ಸಹಾಯ ಮಾಡುತ್ತದೆ. ಈ ಸಮಾಜದ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ ಇವುಗಳ ನಡುವಿನ ನಂಟಿನ ವಿವಿದ ಆಯಾಮಗಳ ಕುರಿತು ಇಲ್ಲಿ ತುಸು ಮಾತಾಡಬಹುದು.

ಕನ್ನಡದಲ್ಲಿ ಮೊದಮೊದಲು ಒಕ್ಕಲುತನ ಬೆಳೆದಾಗ ಕೆಯ್ ‘ಮಾಡು’ ಎಂಬ ಪದವೊಂದು ವಿಸ್ತಾರವಾಗಿ ಬೆಳೆಯುತ್ತದೆ. ‘ಮಾಡು’ ಎಂಬ ಅರ‍್ತದ ಈ ಪದವು ಕ್ರಮೇಣ ಒಕ್ಕಲುತನ ಬೆಳೆಯುತ್ತಿದ್ದಂತೆ ‘ಮಾಡಿದ್ದು’, ‘ಮಾಡುವುದು’ ಎಂಬ ಅರ‍್ತವನ್ನು ಪಡೆದುಕೊಂಡು ಮಾಡಿದ್ದು ಕೆಯ್ ಎಂಬರ‍್ತದಲ್ಲಿ ‘ಕೆಲಸ’, ‘ಬೆಳೆ’, ‘ಅಕ್ಕಿ’ ಎಂಬ ಮೊದಲಾದ ಅರ‍್ತಗಳನ್ನು ಪಡೆದುಕೊಳ್ಳುತ್ತದೆ, ಹಾಗೆಯೆ ಮಾಡುವುದು ಕೆಯ್ ಎಂಬರ‍್ತದಲ್ಲಿ ನೆಲ, ಹೊಲ ಎಂಬರ‍್ತವನ್ನು ಪಡೆದುಕೊಳ್ಳುತ್ತದೆ. ಹೀಗೆ ಈ ಪದ ಬೆಳೆಯುತ್ತ ಹೋಗುತ್ತದೆ. ಒಕ್ಕಲುತನದ ವಿಸ್ತರಣೆಯಿಂದ ಸಾಮಾಜಿಕ ರಚನೆಯೊಂದು ರೂಪುಗೊಳ್ಳುತ್ತಿದ್ದಂತೆ ಒಕ್ಕಲುತನದಲ್ಲಿ ಬಳಸುವ ಕೂರಿಗೆ, ಕುಡುಗೋಲು, ಕೊಡಲಿ ಮೊದಲಾದ ಸಾದನಗಳು ಬೆಳೆಯುತ್ತವೆ. ಅಡುಗೆಮನೆಯ ಬೆಳವಣಿಗೆಯನ್ನೂ ಇಲ್ಲಿ ಉಲ್ಲೇಕಿಸಬಹುದು. ಅಡುಗೆಮನೆಯಲ್ಲಿ ಮಾಡುವ ವಿವಿದ ಬಗೆಯ ಅಡುಗೆಗಳು, ಅದಕ್ಕೆ ಬಳಸುವ ವಿವಿದ ಸಾದನ-ಸಲಕರಣೆಗಳು, ಊಟದ ರೀತಿ-ನೀತಿಗಳು ಇವೆಲ್ಲವೂ ವಿಬಿನ್ನವಾಗಿ ಬೆಳೆಯುತ್ತವೆ. ಅದಕ್ಕೆ ತಕ್ಕಹಾಗೆ ಕನ್ನಡ ಪದಕೋಶ ಬೆಳೆದಿರುವುದನ್ನು ಕಾಣಬಹುದು. ಕನ್ನಡದ ಅಡುಗೆಮನೆ ಪದಕೋಶ ಬಹು ವಿವಿದತೆಯಿಂದ ಕೂಡಿದೆ.

ಆನಂತರ ಇತಿಹಾಸ ಕಾಲಕ್ಕೆ ಬರುತ್ತಿದ್ದಂತೆ ಕಲ್ ಪದ ಹೆಚ್ಚಿನ ಬಳಕೆಗೆ ಬರುತ್ತದೆ. ಕಲ್ಲಿನ ಬಳಕೆ ಸಮಾಜದಲ್ಲಿ ಹೆಚ್ಚಾದಂತೆ ಅದಕ್ಕೆ ತಕ್ಕಂತೆ ವಿವಿದ ಪದಗಳೂ ಬೆಳೆಯುತ್ತವೆ. ಕಲ್ಮನೆ ‘ಗುಹೆ’, ಕಲ್ನಾಟ್ಟು ‘ಶಾಸನ’, ಕಲ್ಬರಹ ‘ಶಾಸನ’ ಮೊದಲಾದವು. ಇದರಂತೆಯೆ ಪಂತಗಳ ಬೆಳವಣಿಗೆಯಿಂದ ಪದಕೋಶದ ವಿಸ್ತರಣೆಯನ್ನೂ ಇಲ್ಲಿ ಉಲ್ಲೇಕಿಸಬಹುದು. ವಿವಿದ ಪಂತಗಳಲ್ಲಿ ವಿವಿದ ಬಗೆಯ ಪದಗಳು ಬಳಕೆಯಲ್ಲಿರುವುದು ಕಾಣುತ್ತೇವೆ. ಆಯಾ ಪಂತಗಳ ಬೆಳವಣಿಗೆಯ ಜೊತೆಜೊತೆಗೆ ಆ ಪಂತಗಳ ಆಚರಣೆ, ನಂಬಿಕೆ, ಸಂಪ್ರದಾಯ ಇವೆಲ್ಲವೂ ಹೊಸಹೊಸ ಪದಗಳನ್ನು ಪಡೆದುಕೊಂಡು ಬೆಳೆಯುತ್ತವೆ. ಕನ್ನಡ ಪದಕೋಶದಲ್ಲಿ ಜಯ್ನ, ಶಯಿವ ಮತ್ತು ವಯಿಶ್ಣವ ಮತ್ತು ಇನ್ನಿತರ ಹಲವಾರು ಮತಪಂತಗಳಿಗೆ ಸಂಬಂದಿಸಿದ ಪದಗಳು ಹೆಚ್ಚಿನ ಸಂಕೆಯಲ್ಲಿ ಕಂಡುಬರುತ್ತವೆ. ಅವು ಕಾಲಾನುಕ್ರಮದಲ್ಲಿ ಮತ್ತೆ ವಿಬಿನ್ನವಾಗಿ ಬೆಳೆಯುತ್ತವೆ.

ತೆರಿಗೆ ಕ್ರಮದಲ್ಲಿ ನಿರಂತರ ಆದ ಬದಲಾವಣೆಗಳು ಕಾಲಾನುಕ್ರಮದಲ್ಲಿ ಕನ್ನಡ ಪದಕೋಶಕ್ಕೆ ವಿಬಿನ್ನ ಪದಗಳನ್ನು ತಂದುಕೊಟ್ಟಿವೆ. ವಿವಿದ ಬಗೆಯ ತೆರಿಗೆಗಳು, ತೆರಿಗೆ ಸಂಗ್ರಹದ ವಿದಾನ, ಆ ಕೆಲಸ ಮತ್ತು ಅದನ್ನು ಮಾಡುವವರು ಹೀಗೆ ವಿಬಿನ್ನವಾದ ಆಯಾಮಗಳಲ್ಲಿ ಪದಗಳು ಹುಟ್ಟುವುದನ್ನ ಕಾಣಬಹುದು. ಲೋಹದ ಬಳಕೆ ಬೆಳೆಯುತ್ತಿದ್ದಂತೆ ಕನ್ನಡ ಪದಕೋಶ ವಿವಿದ ಲೋಹಸಂಬಂದಿ ಪದಗಳನ್ನು ಬೆಳೆಸಿಕೊಳ್ಳುತ್ತದೆ. ಲೋಹಗಾರಿಕೆ, ವಿವಿದ ಬಗೆಯ ಲೋಹಗಳು, ಲೋಹದ ಬಳಕೆ, ಅದರಿಂದ ತಯಾರಿಸಿದ ವಸ್ತುಗಳು, ಅವುಗಳ ಬಳಕೆ ಹೀಗೆ ಕ್ರಮೇಣ ಪದಕೋಶ ವ್ಯಾಪಕವಾಗಿ ಬೆಳೆಯುತ್ತದೆ.

ಆದುನಿಕ ಕಾಲದ ಒಂದೆರಡು ಎತ್ತುಗೆಗಳನ್ನು ತೆಗೆದುಕೊಂಡು ಮಾತಾಡಬಹುದು. ತಂತ್ರಗ್ನಾನ ಈ ಕಾಲದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ. ಅದಕ್ಕೆ ತಕ್ಕಂತೆ ಕನ್ನಡವು ಇಪ್ಪತ್ತನೆಯ ಶತಮಾನದಲ್ಲಿ ವ್ಯಾಪಕವಾಗಿ ತನ್ನ ಪದಕೋಶವನ್ನು ಬೆಳೆಸಿಕೊಳ್ಳುತ್ತದೆ. ಹೊಸಗಾಲದಲ್ಲಿ ಬೆಳೆದ ಗ್ನಾನದ ವಿಸ್ತರಣೆಯಿಂದಾಗಿ ಕನ್ನಡದಲ್ಲಿ ದೊಡ್ಡ ಪ್ರಮಾಣದ ಪದಗಳು ಹುಟ್ಟುವುದನ್ನು ಕಾಣಬಹುದು.

ಹಾಗಾದರೆ, ಈ ಪದಗಳನ್ನು ಯಾರು ಹುಟ್ಟಿಸುತ್ತಾರೆ? ಹೇಗೆ ಹುಟ್ಟಿಸುತ್ತಾರೆ? ಎಂಬುದು ಒಂದು ಪ್ರಶ್ನೆಯಾಗಬಹುದು. ವಾಸ್ತವದಲ್ಲಿ ಇದೊಂದು ಪ್ರಶ್ನೆಯೆ ಅಲ್ಲ. ಬದಲಾಗಿ ಇದು ಬಾಶೆಯೊಂದರ ಅತ್ಯಂತ ಸಹಜ ನಡಿಗೆ. ಆ ಬಾಶೆಯ ಯಾವುದೆ ಮಾತುಗ ಸಮುದಾಯ ತನಗೆ ಪದವೊಂದರ ಅವಶ್ಯಕತೆ ಎನಿಸಿದಾಗ ಹೊಸಪದವನ್ನು ಹುಟ್ಟಿಸಿಕೊಂಡು ಬಳಸಿಬಿಡುತ್ತದೆ. ಅದಕ್ಕೆ ಸಮಾಜದಲ್ಲಿ ಒಪ್ಪಿಗೆಯ ಮುದ್ರೆ ಸಿಕ್ಕರೆ ಅದರ ಬಳಕೆ ಮುಂದುವರೆಯುತ್ತದೆ. ಇಲ್ಲದಿದ್ದರೆ ಅದು ಒಂಟಿಪ್ರಯೋಗಕ್ಕೆ ಸೀಮಿತವಾಗಿ ಬಿದ್ದುಹೋಗುತ್ತದೆ. ಸಾಮಾನ್ಯರು ಇಂತ ಸಾಕಶ್ಟು ಪದಗಳನ್ನು ನಿರಂತರ ಹುಟ್ಟಿಸುತ್ತಲೆ ಇರುತ್ತಾರೆ. ಆದರೆ, ಇವುಗಳನ್ನು ವಿದ್ವಾಂಸರು ಗಮನಿಸದೆ ನಿಗಂಟಿಗೆ ಸೇರಿಸಿಕೊಳ್ಳಲಾಗದೆ ರಚನೆ ಮಾಡಿದ ನಿಗಂಟಿನ ಬಾಗವಾಗದೆ ಉಳಿಯುತ್ತವೆ. ಎಶ್ಟೊ ಬಾರಿ ಬಳಕೆಯಾದ ಪದಗಳು ತುಸು ಕಾಲದಲ್ಲಿ ಬಳಕೆಯಿಂದ ಹಿಂದೆ ಸರಿದು ಬಿದ್ದು ಹೋಗಿರಲೂಬಹುದು. ಇಂತ ಪದಗಳು ಹೆಚ್ಚು.

ಇತ್ತೀಚೆಗೆ ಇಂಗ್ಲೀಶಿನಿಂತ ಪರಿಚಯವಾದ ಬೀಟ್ರೋಟ್ ಎಂಬ ತರಕಾರಿಗೆ ವ್ಯಕ್ತಿಯೊಬ್ಬರು ರಗುತಗಡ್ಡಿ ಎಂದು ಸಹಜವಾಗಿ ಬಳಸಿದರು ಮತ್ತು ಅಂದಿನ ವ್ಯವಹಾರ ನಡೆದುಹೋಯಿತು. ಮುಂದೆ ಇದನ್ನು ಉಳಿದವರು ಬಳಸಿದರೆ ಇಂದು ಮುಂದುವರೆಯುತ್ತದೆ ಇಲ್ಲದಿದ್ದರೆ ಬಿದ್ದುಹೋಗಬಹುದು. ಇಲ್ಲಿ ಗಮನಿಸಬೇಕಾದ ವಿಶಯವೆಂದರೆ ಹೊಸಪದಗಳನ್ನು ಹುಟ್ಟಿಸುವುದಕ್ಕೆ ಇರುವ ಎಲ್ಲ ನಿಯಮಗಳು ಮಾತುಗರಲ್ಲಿ ಸುಪ್ತಪ್ರಗ್ನೆಯ ಬಾಗವಾಗಿ ಇದ್ದೆ ಇರುತ್ತವೆ. ಇದರಿಂದಾಗಿಯೆ ಪ್ರತಿಬಾವಂತರಾದ ಯಾವ ಸಾಮಾನ್ಯರೂ ಹೊಸ ಪದಗಳನ್ನು ಹುಟ್ಟಿಸಲು ಸಾದ್ಯ. ಕವಿ-ವಿದ್ವಾಂಸರು ಮಾತ್ರ ಹೊಸ ಪದಗಳನ್ನು ಹುಟ್ಟಿಸುತ್ತಾರೆ ಎಂಬ ತಿಳುವಳಿಕೆ ತಪ್ಪು. ಕುಮಾರವ್ಯಾಸನು ಹನುಮ ಎಂಬ ಪದಕ್ಕೆ ಹಾರುವ ಗುಣವನ್ನು ಆರೋಪಿಸಿ ಇಸು ಎಂಬ ಪ್ರತ್ಯಯವನ್ನು ಅದಕ್ಕೆ ಸೇರಿಸಿ ಹನುಮಿಸು ಎಂದು ಬಳಸಿದ್ದನ್ನು ಕಾಣಬಹುದು. ಇದರಂತದೆ ಪ್ರಯೋಗವನ್ನು ಕೊರಳು ಪದಕ್ಕೆ ದನಿಯನ್ನು ಹುಟ್ಟಿಸುವ ಗುಣ ಇದೆ ಎಂಬುದನ್ನು ಬಳಸಿಕೊಂಡು ದನಿ ಹೊರಡುವುದಕ್ಕೆ ಕೊರಳಿಸು ಎಂಬ ಪದವನ್ನು ಬೇಂದ್ರೆ ಬಳಸುವುದನ್ನೂ ಕಾಣಬಹುದು. ಉಪೇಂದ್ರ ಸಿನಿಮಾದಲ್ಲಿ ಬಳಸಿದ ಓಳು ಪದ, ಯಶ್ ಸಿನಿಮಾದಲ್ಲಿ ಬಳಸಿದ ಅಣ್ತಮ್ಮ ಪದ ಇವು ಕನ್ನಡದ ಪದಕೋಶದ ಬಾಗವಾಗಿ ಬೆಳೆದಿರುವುದನ್ನು ಗಮನಿಸಬಹುದು. ಸಹೋದರತ್ವ ಎಂಬ ಅರ‍್ತಕ್ಕೆ ಕನ್ನಡದಲ್ಲಿ ಬೇರೊಂದು ಪದ ಇಲ್ಲ. ಆದರೆ, ಕಲಬುರಗಿ ಪರಿಸರದಲ್ಲಿ ಇದಕ್ಕೆ ಅಣ್ತಮ್ಕಿ ಎಂಬ ಪದ ಬಳಕೆಯಲ್ಲಿದೆ. ಹಯ್ದರಾಬಾದ ಕರ‍್ನಾಟಕ ಪರಿಸರದಲ್ಲಿ ಮೆಂಬರ್ ಎಂಬ ಇಂಗ್ಲೀಶಿನ ಪದವನ್ನು ಗಣ್ಪದ ಅಂದರೆ ಗಂಡುಸೂಚಕ ಪದ ಎಂದು ತೆಗೆದುಕೊಂಡು ಅದಕ್ಕೆ ಹೆಣ್ಸೂಚಿ ಪ್ರತ್ಯಯ –ತಿ ಇದನ್ನು ಸೇರಿಸಿ ಮೆಂಬರ‍್ತಿ ಎಂಬ ಪದವನ್ನು ಹುಟ್ಟಿಸಿ ಬಳಸಲಾಗುತ್ತಿದೆ. ಹೀಗೆ ಹೊಸಪದಗಳು ನಿರಂತರ ಹುಟ್ಟುತ್ತಲೆ ಇರುತ್ತವೆ. ಸಮಾಜದ ಬೆಳವಣಿಗೆಯ ಜೊತೆಗೆ ಇವು ಬೆಳೆಯುತ್ತಲೆ ಇರುತ್ತವೆ, ಹಾಗೆಯೆ ಸಮಾಜದ ನಡಿಗೆಯಲ್ಲಿ ಕಾಲಾಂತರದಲ್ಲಿ ಪದಗಳು ಬಿದ್ದುಹೋಗುತ್ತವೆ ಕೂಡ.

ಹೀಗೆ ಸಮಾಜದ ಬೆಳವಣಿಗೆ ಪದಕೋಶದ ಬೆಳವಣಿಗೆಯನ್ನು ನಿರಂತರ ನಿಯಂತ್ರಿಸುತ್ತ ಇರುತ್ತದೆ. ಆದ್ದರಿಂದ ಸಮಾಜದ ಇತಿಹಾಸ ಮತ್ತು ಬೆಳವಣಿಗೆಯ ಅದ್ಯಯನ ಸಂದರ‍್ಬದಲ್ಲಿ ಪದಕೋಶ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಮಾಜವು ಮರೆತುಹೋಗಿರಬಹುದಾದ ಹಲವು ಇತಿಹಾಸಿಕ ಅಂಶಗಳನ್ನು ಪದಕೋಶ, ಪದಗಳು ತಮ್ಮೊಡಲಲ್ಲಿ ಉಳಿಸಿಕೊಂಡಿರುತ್ತವೆ, ಕಟ್ಟಿಕೊಂಡಿರುತ್ತವೆ. ಇನ್ನೊಂದು ಬರಹದಲ್ಲಿ ಸಾಮಾಜಿಕ ಇತಿಹಾಸ ಮತ್ತು ಪದಕೋಶ ಎಂಬ ವಿಚಾರವನ್ನು ಮಾತಾಡಬಹುದು.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಬನಶಂಕರಿಯ ನಾಟಕಗಳ ಜಾತ್ರೆ : ವೃತ್ತಿ ರಂಗಭೂಮಿಯ ಕುಂಭಮೇಳ

27-01-2025 ಬೆಂಗಳೂರು

"ಬನಶಂಕರಿಯ ಮೈತುಂಬಾ ತೀಡಿದ ತಂಗಾಳಿಭರಿತ ಹಿತವಾದ ಚುರುಕು ಬಿಸಿಲು. ಜನಜಂಗುಳಿಯ ಬಾದಾಮಿಯ ಬನಶಂಕರಿ ಮಹಾಜಾತ್ರೆಯೊಳ...

ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ವಿಶಯದಲ್ಲಿ ಸೋಲು

26-01-2025 ಬೆಂಗಳೂರು

"ಬಾಶೆಯ ಮೂಲಕ ಕೊಡುವುದರ ಕಡೆಗೆ ಅವರ ಗಮನ ಹರಿಯುವುದು ಕಶ್ಟವಾಗುತ್ತದೆ. ಇದರಿಂದ ಮಕ್ಕಳು ವಿಶಯವನ್ನು ಅನುಬವಿಸಲು ಸ...

ಕನ್ನಡ ವಿಮರ್ಶೆ 4 (ಮುಂದುವರೆದ 4ನೆ ಭಾಗ)  

24-01-2025 ಬೆಂಗಳೂರು

"ನಾಡು ಕಟ್ಟುವ, ಸಂಸ್ಕೃತಿಯನ್ನು ಪುನರುಜ್ಜೀವಿಸುವ ಕೆಲಸವನ್ನು ಕೈಗೆತ್ತಿಗೊಂಡ ಬರಹಗಾರರಲ್ಲಿ ನಾವೆಲ್ಲರು ಒಂದಾಗಿ ...