‘ರೌದ್ರಾವರಣಂ’ ಹಲವಾರು ಭಾವಗಳನ್ನು ಹೊರ ಹೊಮ್ಮಿಸುವಲ್ಲಿ ಶಕ್ತವಾಗಿದೆ


‘ಸಮಾಜದಲ್ಲಿ ಅಸಹಾಯಕರನ್ನು ಹೇಗೆಲ್ಲ ಉಚ್ಚ ವರ್ಗ ಕುಣಿಸಬಲ್ಲುದು ಎಂಬುದಕ್ಕೆ ಹಲವಾರು ಸನ್ನಿವೇಶಗಳು ಸಾಕ್ಷಿಯಾಗಿವೆ’ ಎನ್ನುತ್ತಾರೆ ರಶ್ಮಿ ಉಳಿಯಾರು. ಅವರು ಅನಂತ ಕುಣಿಗಲ್ ಅವರ ‘ರೌದ್ರಾವರಣಂ’ ಕಾದಂಬರಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಕೃತಿ: ರೌದ್ರಾವರಣಂ
ಲೇಖಕ: ಅನಂತ ಕುಣಿಗಲ್
ಪ್ರಕಾಶನ: ಅವ್ವ ಪುಸ್ತಕಾಲಯ
ಪುಟಗಳು: 160

ಈ ಪುಸ್ತಕ ಕೊಂಡು ಒಂದು ವರ್ಷವೇ ಆಗಿರಬಹುದು. ಇದರ ಎರಡನೇ ಭಾಗ ಬರುತ್ತಿದೆ ಎಂದು ಗೊತ್ತಾದಾಗ ಒಟ್ಟಿಗೇ ಓದುವಾ ಅಂತ ಇಟ್ಟಿದ್ದೆ. ಏಕೆಂದರೆ ಯಾವುದಾದರೂ ಓದಿದ ಪುಸ್ತಕ ಮುಕ್ತಾಯವಾಗದಿದ್ದರೆ ಆಗಾಗ ನೆನಪಾಗಿ ಕನಸಲ್ಲೂ ಬಂದು ಕಾಡುತ್ತದೆ! ಮತ್ತೀಗ ಎರಡನೆಯ ಭಾಗವೂ ಮುಂದುವರೆದು ಮತ್ತೊಂದು ಭಾಗದ ಸೃಷ್ಟಿಗೆ ಕಾರಣವಾಗಲಿದೆ ಎಂದಾಗ ಸದ್ಯಕ್ಕೆ ಇವೆರಡನ್ನು ಓದೋಣವೆಂದು ಕೈಗೆತ್ತಿಕೊಂಡದ್ದು. ಪುರುಸೊತ್ತು ಇದ್ದರೆ ಪಟ್ಟಾಗಿ ಕುಳಿತು ಎರಡು ಮೂರು ಗಂಟೆಗಳಲ್ಲಿ ಮುಗಿಸಬಹುದಾದ ಕಾದಂಬರಿ ಇದು. ಬಿಗಿಯೆನಿಸುವ ನಿರೂಪಣೆ ಮತ್ತು ವೇಗದಿಂದ ಬದಲಾಗುವ ಸನ್ನಿವೇಶಗಳು ತುಂಬ ಬೇಗ ಓದಿಸಿಕೊಂಡು ಹೋಗುತ್ತವೆ.

ಹೀಗೆ ಸುಮಾರು ಇಪ್ಪತ್ನಾಲ್ಕು ವರ್ಷಗಳ ಹಿಂದಿನ ನರಸೀಪುರ ಎಂಬ ಹಳ್ಳಿಯ ವಾತಾವರಣ, ಅಲ್ಲಿನ ಜನರು, ಒಂದಿಷ್ಟು ಪದ್ಧತಿಗಳನ್ನು ಸೆರೆಹಿಡಿಯಲಾಗಿದೆ. ಕಾದಂಬರಿಯ ಮುಖ್ಯ ಪಾತ್ರ ಬಾಬಣ್ಣನೆಂಬ ಕುಲುಮೆಯವ. ಹಳ್ಳಿಯಿಂದ ದೂರದಲ್ಲಿ ಅವನದು ಗುಡಿಸಲಿನ ಬದುಕು. ಅವನ ಪ್ರೀತಿಯ ನಾಯಿ ಚಂದ್ರ. ಬಾಬಣ್ಣನಿಗೆ ನಾಯಿಯಷ್ಟೇ ಪಕ್ಕದ ಕರಿಗುಡ್ಡ ಎಂಬಲ್ಲಿ ಬೇಟೆ ಸಹ ಪ್ರಿಯ. ಅದು ಕಾನೂನುಬಾಹಿರವಾಗಿರುವ ಕಾರಣ ತುಂಬಾ ಎಚ್ಚರಿಕೆಯಿಂದಲೂ ಇರುತ್ತಾನೆ. ಆ ಕರಿಗುಡ್ಡ ಮತ್ತು ಅವನ‌ ಗುಡಿಸಲಿನಲ್ಲಿ ಬಾಬಣ್ಣನಿಗೆ ಮಾತ್ರ ತಿಳಿದ‌ ಆದರೆ ಹೊರ ಜಗತ್ತು ಅರಿಯದ ಹಲವು ವಾಸ್ತವಗಳು ಸಹ ಹೂತುಹೋಗಿವೆ. ಇಂತಹ ಬಾಬಣ್ಣನಿಗೆ ತುಂಬ ಅನಿರೀಕ್ಷಿತ ಸಂದರ್ಭದಲ್ಲಿ ಮಗನ ರೂಪದಲ್ಲಿ ಅಗಸ್ತ್ಯ ದೊರೆಯುತ್ತಾನೆ. ಊರಿನವರ ಕೈಯಲ್ಲಿ ಸಿಲುಕಿದ ಈ ಮೂರು ಜೀವಗಳ ಬದುಕು ಮುಂದೆ ಹೇಗೆಲ್ಲಾ ಬದಲಾಗುತ್ತಾ ಹೋಗುತ್ತದೆ ಎಂಬುದನ್ನು ಕಾದಂಬರಿ ಚಿತ್ರಿಸುತ್ತದೆ.

ಜಾತಿಗಳ ನಡುವಣ ಮೇಲಾಟ, ಅಸ್ಪೃಶ್ಯತೆ, ಡಂಭಾಚಾರ, ಲಂಪಟತನ, ವೈಯಕ್ತಿಕ ಸ್ವಾರ್ಥವೇ ಊರಿನ ಶ್ರೇಯಕ್ಕಿಂತ ಹೆಚ್ಚಾಗಿರುವುದನ್ನು ವಿಷಕಂಠ ಐನೋರು ಮತ್ತು ಊರಿನ ಪಂಚಾಯತ್ ಅಧ್ಯಕ್ಷರಾದ ಗೌಡರ ಪಾತ್ರಗಳು ನಿರೂಪಿಸಿದರೆ, ಊರ ಶಾಲೆಗೆ ಹಾಗೂ ಮಕ್ಕಳಿಗೆ ಒಳ್ಳೆಯದಾಗಲೆಂದು ಬಯಸಿ ಹಲವಾರು ಕೆಲಸ ಮಾಡಿ ಒಳ್ಳೆಯ ಹೆಸರು ಪಡೆದರೂ ಮತ್ತೆ ಅಜ್ಜ ಹಾಕಿದ ಆಲದ ಮರಕ್ಕೇ ನೇಣು ಹಾಕಿಕೊಳ್ಳುವ ಜನರ ಪೂರ್ವಾಗ್ರಹಪೀಡಿತ ಬುದ್ಧಿಗೆ ಬಲಿಪಶುವಾದ ಅಭಿಮನ್ಯು ಎಂಬ ಮೇಷ್ಟ್ರು ಮರುಕ ಮೂಡಿಸುವರು.

ಮೊದಲಾರ್ಧದಲ್ಲಿ ಬಾಬಣ್ಙನಿಗೆ ಒಂದು ಬಗೆಯ ನಿಗೂಢ ವಿಲಕ್ಷಣತೆ ಇದ್ದರೆ ಆಮೇಲಾಮೇಲೆ ಅಗಸ್ತ್ಯನ ಸಾಕು ತಂದೆಯೆನ್ನಿಸಿಕೊಂಡು ಮೃದುತ್ವ ಬಂದಿದೆ. ತಂದೆ ಮಗ ಇಬ್ಬರ ಆಪತ್ಭಾಂದವನಾಗಿ ನಾಯಿ ಚಂದ್ರ ಕಾದಂಬರಿಯಲ್ಲಿ ಆವರಿಸಿದ್ದಾನೆ. ಸಮಾಜದಲ್ಲಿ ಅಸಹಾಯಕರನ್ನು ಹೇಗೆಲ್ಲ ಉಚ್ಚ ವರ್ಗ ಕುಣಿಸಬಲ್ಲುದು ಎಂಬುದಕ್ಕೆ ಹಲವಾರು ಸನ್ನಿವೇಶಗಳು ಸಾಕ್ಷಿಯಾಗಿವೆ.

ಕಾದಂಬರಿಯು ಭೀಬತ್ಸ, ಕರುಣೆ, ರೋಷ, ಅಸಹ್ಯ, ಸಂತೋಷ ಹೀಗೆ ಹಲವಾರು ಭಾವಗಳನ್ನು ಹೊರ ಹೊಮ್ಮಿಸುವಲ್ಲಿ ಶಕ್ತವಾಗಿದೆ. ನಿಮಗೂ ಇಷ್ಟವಾಗಬಹುದು. ಓದಿ ನೋಡಿ.

ಧನ್ಯವಾದಗಳು

-ರಶ್ಮಿ ಉಳಿಯಾರು

MORE FEATURES

ಇರುವುದೆಲ್ಲವ ಬಿಟ್ಟು ಇರದಿರುವುದರೆಡೆಗೆ ತುಡಿವುದೆ ಜೀವನ

14-03-2025 ಬೆಂಗಳೂರು

“ಈ ಕನ್ನಡದ ಮಟ್ಟಿಗಿನ ಮಾಡರ್ನ್ ಕಾದಂಬರಿ ಮತ್ತದರ ವಸ್ತು ಹೊಸತೇನಲ್ಲ. ಆದರೆ ಲೇಖಕಿಯ ನಿರೂಪಣಾ ಶೈಲಿ ಬಹಳ ಚೆನ್ನಾ...

ಗಜಲ್ ಗಳು ನಿತ್ಯ ನೂತನ ಭಾವದಿ ಮೆರೆದು ಗಜಲ್ ಕ್ಷೇತ್ರವನ್ನು ಆಳುತ್ತಿವೆ

13-03-2025 ಬೆಂಗಳೂರು

“ಪ್ರೇಮವನ್ನು ಕಟ್ಟಿಕೊಡುವ ಒಂದಕ್ಕಿಂತ ಒಂದು ಶ್ರೇಷ್ಠ ಆದರ್ಶ ಪ್ರೇಮದ ಅನುಭೂತಿಯನ್ನು ಈ ಪ್ರೇಮಮಹಲ್ ಸಂಕಲನದ ನೂರ...

ನೀ ಎಲ್ಲರೆ ಸಿಕ್ಕರ ಸಮುದ್ರ್ಹಂಗ ಸಿಗೂನು...

13-03-2025 ಬೆಂಗಳೂರು

"ಮೊದಲಿಗೆ ರೇಣುಕಾ ನಿಡಗುಂದಿ ಅವರು ಅನುವಾದ ಮಾಡಿದ ಅಮೃತಾ ಪ್ರೀತಂ ಕವಿತೆ ಓದಿದೆ. ಅದರ ಧಾಟಿ ಶೈಲಿ ಭಾವ ಬೇರೆ. ನಿ...