'ಪುನರ್ನವ': ಸರಳ ಕನ್ನಡದಲ್ಲಿ ಬೆರಗುಗೊಳಿಸುವ ಕಥನ


ಸರಳ ಭಾಷೆಯಲ್ಲಿ ಓದುಗರನ್ನು ಮುಟ್ಟುವ ಬಲಂಧರೆಯಂತಹ ಮಹಾಭಾರತ  ನಿತ್ಯ ಓದುಗರಿಗೂ ಅಪರಿಚಿತವೆ ಎನ್ನಬಹುದಾದ ಆಕೆಯ ಪಾತ್ರದ ಸುತ್ತ ಕಥೆಯನ್ನು ವಿಶದೀಕರಿಸುವ ಲೇಖಕರ ತಾಕತ್ತು ಬೆರಗುಗೊಳಿಸುತ್ತದೆ.ಎನ್ನುತ್ತಾರೆ ಲೇಖಕಿ ಚೇತನ ಭಾರ್ಗವ. ಅವರು ಲೇಖಕ ಸಚಿನ್ ನಾಯಕ್ ಬರೆದ 'ಪುನರ್ನವ' ಕೃತಿಗೆ ಬರೆದ ಅನಿಸಿಕೆ ಹೀಗಿದೆ ; 

ಮಹಾಭಾರತ ಮಹಾಕಾವ್ಯದಲ್ಲಿ ಬರುವ ಪ್ರತಿಯೊಂದು ಪಾತ್ರಕ್ಕೂ ವೈಶಿಷ್ಟ್ಯತೆ ಇದೆ. ಆದರೆ ಕೆಲವೊಂದು ಪಾತ್ರಗಳು ಎಲೆಮರೆ ಕಾಯಿಯಂತೆ ಉಳಿದು ಹೋಗುತ್ತದೆ. ಪುನರ್ನವ ಕಾದಂಬರಿಯಲ್ಲಿ ಲೇಖಕರು ಕಾಶಿಯ ರಾಜಕುಮಾರಿಯಾದ ಬಲಂಧರೆಯ ಸುತ್ತಾ ಕಥೆಯನ್ನು ಹೆಣೆದಿದ್ದಾರೆ.

ಗಂಗೆಯ ತಟದಲ್ಲಿ ಹುಟ್ಟಿ, ಬೆಳೆದು, ಜೀವನದ ಬಹುಭಾಗವನ್ನು ಗಂಗಾಸಖಿಯಾಗಿಯೇ ಕಳೆದ ಕಾಶಿ ಮಹಾರಾಜ ಸುಬಾಹುವಿನ ಮಗಳು, ಭೀಮನ ಪತ್ನಿ ಬಲಂಧರೆಯ ಕಥೆಯನ್ನು ಲೇಖಕರು ತಮ್ಮ ಕೈ ಕುಂಚದಲ್ಲಿ ಅರಳಿದ ಚಿತ್ರದೊಂದಿಗೆ ಮನೋಜ್ಞವಾಗಿ ಪರಿಚಯಿಸಿದ್ದಾರೆ.  

ಮುಂಜಾನೆಯ ಹೊಂಬೆಳಕಿನಲ್ಲಿ ಬಂಗಾರದ ಹೊಳಪಿನಿಂದ ಕಂಗೊಳಿಸಿ, ಮಧ್ಯಾಹ್ನದ ಬಿಸಿಲಿಗೆ ರಜತ ಫಲಕದಂತೆ ಕಾಣುತ್ತಾ, ಸೂರ್ಯಾಸ್ತದ ಸಮಯಕ್ಕೆ ತಾಮ್ರವರ್ಣೆಯಾಗಿ ಶಾಂತ ಭಾವದಿಂದ ಹೇಗೆ ಗಂಗೆ ಹರಿಯುತ್ತಾಳೋ ಹಾಗೆಯೇ ಬಲಂಧರೆಯ ವ್ಯಕ್ತಿತ್ವವೂ ಕಂಗೊಳಿಸುತ್ತದೆ. ಅವಳ ಬದುಕಿನಲ್ಲಿ ನಡೆದ ಘಟನೆಗಳನ್ನು ಲೇಖಕರು ಸೂಕ್ಷ್ಮವಾಗಿ ಗ್ರಹಿಸಿ ಅವಲೋಕಿಸಿದ್ದಾರೆ. ಗಂಗೆಯ ದಡದಲ್ಲಿ ಕುಳಿತು ಹರಿಯುವ ನೀರಿನ ಜೊತೆ ತನ್ನ ಜೀವನವನ್ನು ಎಳೆ ಎಳೆಯಾಗಿ ತೆರೆದಿಡುವ ಆಕೆಯ ಮನೋಗತವನ್ನು ಸುಂದರವಾಗಿ ಬಿಂಬಿಸಿದ್ದಾರೆ.

ಬಲಂಧರೆ ತನ್ನ ತಂದೆಯನ್ನು ಕಳೆದುಕೊಂಡು ಪಟ್ಟ ನೋವು, ಅಣ್ಣ ಸೇನೇಶನ ಮಮತೆ , ಅಕ್ಕರೆ ಸಾಂತ್ವಾನ ನಂತರ ಆಕೆಯ ಸ್ವಯಂವರ , ದ್ವೀತಿಯ ಪಾಂಡವ ಭೀಮನಿಗೆ ಮನಸೋತ ರೀತಿ , ಜಗತ್ತೇ ನಡುಗುವ ಬಲ ಭೀಮನ ಮೈಕಟ್ಟಿನ ವರ್ಣನೆ , ಅವರ ವಿವಾಹ ಮಹೋತ್ಸವ , ಭೀಮನ ಒಡನಾಟ , ಆತ ರಾಕ್ಷಸರನ್ನು ಕೊಂದ ಪರಿ, ಅವರ ವಿಚಿತ್ರ ರೀತಿ ನೀತಿಗಳು , ಭೀಮನ ಜೀವನಾನುಭವ , ಖಾಂಡವ ಪ್ರಸ್ಥದ ಎಡೆಗೆ ಪಯಣ , ವಿಶೋಕನನ್ನು ಭೇಟಿಯಾದ ಪ್ರಸಂಗ , ಉಳಿದ ಪಾಂಡವ ಮೈದುನರು , ಕುಂತಿ , ದ್ರೌಪದಿ ಹಾಗೂ ಸುಭದ್ರೆ ಸೇರಿದಂತೆ ಎಲ್ಲರೂ ಆಕೆಯನ್ನು ಬರಮಾಡಿಕೊಂಡ ರೀತಿ , ಇಂದ್ರಪ್ರಸ್ತದ ವೈಭವದ ವರ್ಣನೆ ಇವೆಲ್ಲವೂ ಕಣ್ಣಿಗೆ ಕಟ್ಟುವ ಹಾಗೆ ಲೇಖಕರ ಪದಪುಂಜಗಳಲ್ಲಿ ಮೂಡಿ ಬಂದಿದೆ.

ಬಲಂಧರೆ ಗರ್ಭಿಣಿಯಾಗಿ ಈ ವಿಷಯವನ್ನು ಭೀಮನಿಗೆ ಅರುಹಲು ಸಮಯ ನೋಡುತ್ತಿದ್ದಾಗ ರಾಜಸೂಯದ ದಿಗ್ವಿಜಯದ ಮೆಟ್ಟಿಲಾಗಿ ಜರಾಸಂಧವಧೆಗೆ ಭೀಮ ತೆರೆಳಿರುವುದನ್ನು ತಿಳಿದು ಆಕೆ ಪಡುವ ಸಂಕಟ ನೋವು . ಧರ್ಮರಾಜನ ಕೀರ್ತಿ, ರಾಜ್ಯಭೌಮತ್ವಕ್ಕಾಗಿ ತನ್ನ ಪ್ರಾಣವನ್ನೇ ಪಣಕ್ಕೋಡ್ಡಿರುವ ಗಂಡನ ಬಗೆಗಿನ ಅಭಿಮಾನ , ರಾಜ್ಯ ಕೀರ್ತಿಗೆ ತನ್ನ ಪತಿಯನ್ನು ಅಪಾಯಕೊಡ್ಡಿರುವ ಧರ್ಮರಾಯನ ಮೇಲೆ ಸಹಜ ನಾರಿಯಂತೆ ಪಡುವ ಮುನಿಸು, ಈ ಮಾನುಷಿ ದ್ವಂದ್ವಭಾವಗಳಲ್ಲಿ ತೊಳಲುವ ಆಕೆಯ ಮನೋಸ್ಥಿತಿ ಇದನ್ನು ಓದಿಯೇ ಅನುಭವಿಸಬೇಕು. ಭೀಮನ ಮೈ ಬೆವರಿನ ಗಂಧವಿರುವ ಉತ್ತರೀಯವನ್ನು ಪ್ರೀತಿಯಿಂದ ಜೋಪಾನ ಮಾಡುವ ಮುಗ್ಧತೆ ಸ್ತ್ರೀ ಸಂವೇದನೆ ಹೀಗೆ ಹಲವು ಹತ್ತು ಭಾವಗಳನ್ನು ಬಲಂಧರೆಯ ಪಾತ್ರದಲ್ಲಿ ಕಟ್ಟಿಕೊಡುವ ಲೇಖಕರು ಓದುಗರ ಮನಸೂರೆಗೊಳ್ಳುವುದು ಸುಳ್ಳಲ್ಲ.

ಮಗ ಸರ್ವಗನ ಜನನ , ಸೋದರ ಮಾವನ ಗರಡಿಯಲ್ಲಿ ಬೆಳೆದು ಕಾಶಿಯ ಯುವರಾಜನಾಗಿ ಬೆಳೆಯುವ ಕಥೆ, ದ್ಯೂತದಲ್ಲಿ ಸೋತು ವನವಾಸ ಅಜ್ಞಾತವಾಸ ಅನುಭವಿಸುವ ಪಾಂಡವರ ಕಷ್ಟಕೋಟಲೆಗಳು , ನಂತರ ಯುದ್ಧದ ಪ್ರಸಂಗ , ಯುದ್ಧ ಸನ್ನಿವೇಶಗಳು ರಣರಂಗದಲ್ಲೇ ಇರುವಂತಹ ಅನುಭವ ಕಟ್ಟಿ ಕೊಡುವುದು ಸುಳ್ಳಲ್ಲ. 18 ನೆಯ ದಿನದ ರಾತ್ರಿ ಅಶ್ವತ್ಥಾಮನಿಂದ ಕೊಲೆಗೀಡಾಗುವ ಉಪಾಪಾಂಡವರ ಜೊತೆ ಮಗ ಸರ್ವಗನ ಹತ್ಯೆ , ಕಾಡುವ ಪುತ್ರಶೋಕ ಇದರೊಂದಿಗೆ ಬಲಂಧರೆಯ ನಡೆಯೇನು , ಭೀಮ ಬಲಂಧರೆಯ ಪುನರ್ನವ ಮಿಲನ ಸಂಧಿಸುತ್ತದೆಯೇ ? ಇದಕ್ಕಾಗಿ ಇನ್ನೊಂದು ಮನ್ವಂತರ ಕಾಯಬೇಕೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಈ ಹೊತ್ತಗೆಯನ್ನು ಓದಲೇಬೇಕು.

ಸರಳ ಭಾಷೆಯಲ್ಲಿ ಓದುಗರನ್ನು ಮುಟ್ಟುವ ಬಲಂಧರೆಯಂತಹ ಮಹಾಭಾರತ  ನಿತ್ಯ ಓದುಗರಿಗೂ ಅಪರಿಚಿತವೆ ಎನ್ನಬಹುದಾದ ಆಕೆಯ ಪಾತ್ರದ ಸುತ್ತ ಕಥೆಯನ್ನು ವಿಶದೀಕರಿಸುವ ಲೇಖಕರ ತಾಕತ್ತು ಬೆರಗುಗೊಳಿಸುತ್ತದೆ. ಆಕೆಯ ಕಣ್ಣಲ್ಲಿ , ಮನಸ್ಸಿನ ಭಾವದ ಕನ್ನಡಿಯಲ್ಲಿ ಮಹಾಭಾರತದ ಘಟನೆಗಳನ್ನು ವಿಮರ್ಶಾತ್ಮಕವಾಗಿ ನೋಡುವ ಅನೂಹ್ಯ ನೋಟ ಓದುಗರಿಗೆ ತೆರೆದಿಡುವ ಪುನರ್ನವ ಕಾದಂಬರಿ ಓದುಗರೆಲ್ಲರ ಹೃನ್ಮನ ತಣಿಸುವುದು ದಿಟ. ಈ ರೀತಿಯ ಕಥಾವಸ್ತು ರಚಿಸಿ ತಮ್ಮ ಪ್ರತಿಭೆಯ ಪರಿಚಯಗೈದಿರುವ ಲೇಖಕರಾದ ಶ್ರೀಯುತ ಸಚಿನ್ ನಾಯಕ್ ಅವರಿಂದ ಕನ್ನಡ ಸಾರಸ್ವತ ಲೋಕ ಇನ್ನಷ್ಟು ಬೆಳಗಲಿ ,  ಇನ್ನಷ್ಟು ಒಳ್ಳೆಯ ಪುಸ್ತಕಗಳು ಅವರಿಂದ ರಚಿಸಲ್ಪಟ್ಟು ಕನ್ನಡಾಂಬೆಯ ಮುಡಿಗೆ ಹೂವಾಗಿ ಸೇರಲಿ.

ಪುಸ್ತಕ: ಪುನರ್ನವ
ಲೇಖಕರು: ಸಚಿನ್ ನಾಯಕ್
ಪ್ರಕಾಶಕರು: BFC ಪಬ್ಲಿಕೇಶನ್
ಬೆಲೆ: 280
ಪುಟ: 174

 

MORE FEATURES

'ಕೃಷ್ಣಯ್ಯನ ಕೊಳಲು': ಆಧುನಿಕ ರಾಜಕೀಯದ ಕನ್ನಡಿ!

04-12-2025 ಬೆಂಗಳೂರು

ಪುರಾಣದ ಕೃಷ್ಣನ ಕಥೆಯನ್ನು ನಮ್ಮ ಕಾಲದ ದೈನಂದಿನ ರಾಜಕೀಯದಿಂದ ಬಳಲುವ ಜನರ ಕಥೆಯಾಗಿಸಿ ಹೇಳುವ ಪ್ರಯೋಗವನ್ನು ಹಿರಿಯ ಲೇಖಕ...

ರಂಗದ ಮೇಲೆ ಪ್ರಯೋಗ ಕಂಡರೆ ಅತ್ಯಂತ ಸಂತೋಷ

04-12-2025 ಬೆಂಗಳೂರು

"ಈ ನಾಟಕ ಬರೆಸಿಕೊಳ್ಳುವಾಗ ಅತ್ಯಂತ ಖುಷಿ ಕೊಟ್ಟಿದೆ ಹಾಗೇ ಓದುಗರಾದ ನಿಮಗೂ ನೆಮ್ಮದಿ ಕೊಡಲೆಂಬ ಆಶಯ. ರಂಗದ ಮೇಲೆ ಪ...

ಬದುಕಿನ ಬಹುದೊಡ್ಡ ಆಯಾಮ ಪರಿಚಯವಾಗುವುದು ಇಂತಹ ಕಥೆಗಳಿಂದಲೇ!

04-12-2025 ಬೆಂಗಳೂರು

'ಕಾಡು ಕಾಯುವವರು' ಮತ್ತು 'ಅವನತಿ' ತುಂಬಾ ಕಾಡಿದ ಕಥೆಗಳು. ನೌಶಾದ್ ಪ್ರಪಂಚವನ್ನು ನೋಡುವ ರೀತಿಯೇ ಅವ...