Date: 30-11-2022
Location: ಬೆಂಗಳೂರು
''ಬದುಕು ಎಂಬ ಪದದ ಹಳಗನ್ನಡ ರೂಪ ಬರ‍್ದುನ್ಕು ಎಂದಾಗಿದೆ. ಅಂದರೆ, ಇದನ್ನು ಬರ‍್ದು+-ನ್ಕು ಎಂದು ಅರ‍್ತ ಮಾಡಿಕೊಳ್ಳಬೇಕು. ಬರ‍್ದು ಎನ್ನುವ ಪದದ ಬಳಕೆಯೂ ಸದ್ಯಕ್ಕೆ ಗಮನಕ್ಕೆ ಇಲ್ಲ. ಹಾಗಾದರೆ, ಈ ರೂಪದ ಇರುವಿಕೆಯನ್ನು ಹೇಗೆ ಅರಿತುಕೊಳ್ಳುವುದು ಎಂಬ ಪ್ರಶ್ನೆ ಬರಬಹುದು'' ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು’ ವಿಚಾರದ ಕುರಿತು ಬರೆದಿದ್ದಾರೆ.
ಬದುಕು ಎಂಬ ಪದದ ಹಳಗನ್ನಡ ರೂಪ ಬರ‍್ದುನ್ಕು ಎಂದಾಗಿದೆ. ಅಂದರೆ, ಇದನ್ನು ಬರ‍್ದು+-ನ್ಕು ಎಂದು ಅರ‍್ತ ಮಾಡಿಕೊಳ್ಳಬೇಕು. ಬರ‍್ದು ಎನ್ನುವ ಪದದ ಬಳಕೆಯೂ ಸದ್ಯಕ್ಕೆ ಗಮನಕ್ಕೆ ಇಲ್ಲ. ಹಾಗಾದರೆ, ಈ ರೂಪದ ಇರುವಿಕೆಯನ್ನು ಹೇಗೆ ಅರಿತುಕೊಳ್ಳುವುದು ಎಂಬ ಪ್ರಶ್ನೆ ಬರಬಹುದು ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು’ ವಿಚಾರದ ಕುರಿತು ಬರೆದಿದ್ದಾರೆ.
ಪದದ ಮೇಲೆ ಪ್ರತ್ಯಯಗಳು ಸೇರುವ ಮೂಲಕ ಹೊಸಪದಗಳು ಹುಟ್ಟುವುದು ಅತ್ಯಂತ ಸಾಮಾನ್ಯವಾದ ಪ್ರಕ್ರಿಯೆ. ಕನ್ನಡದಲ್ಲಿಯೂ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ, ಕೆಲವು ಪ್ರತ್ಯಯಗಳು ಇಂದು ಗುರುತಿಗೆ ಸಿಗದಶ್ಟು ಬೆಸೆದುಕೊಂಡುಬಿಟ್ಟಿವೆ. ಆ ಪ್ರತ್ಯಯಗಳು ಸೇರಿಕೊಂಡು ಬೆಳೆದು ಇಂದು ಬಳಕೆಯಲ್ಲಿರುವ ಪದಗಳಲ್ಲಿ ಪ್ರತ್ಯಯವೊಂದು ಇದೆ ಎಂದು ಗುರುತಿಸಲು ಸಾದ್ಯವಿಲ್ಲದಶ್ಟು ಅವು ಒಂದು ರೂಪದಂತೆ ನಮಗೆ ಕಾಣುತ್ತವೆ. ಇಲ್ಲಿ ಕೆಲವು ಪದಗಳನ್ನು ಪಟ್ಟಿಸಿದೆ.
ಉದುಲು, ಒಡಲು, ಕಡಲು, ಸಿಡಿಲು
ಕಂಡಿಕೆ, ಕಣಿಕೆ, ಕುಣಿಕೆ, ಕುಡಿಕೆ
ಕಂಡಿಗೆ, ಕಾಡಿಗೆ, ಗಡಿಗೆ, ಮಲ್ಲಿಗೆ
ಇಲ್ಲಿ ಮೊದಲ ಸಾಲಿನ ಪದಗಳಲ್ಲಿ –ಲು, ಎರಡನೆ ಸಾಲಿನ ಪದಗಳಲ್ಲಿ –ಕೆ ಮತ್ತು ಮೂರನೆ ಸಾಲಿನಲ್ಲಿ –ಗೆ ರೂಪವು ಆಯಾ ಸಾಲಿನ ಎಲ್ಲ ಪದಗಳಲ್ಲಿಯೂ ಸಾಮಾನ್ಯವಾಗಿ ಕಂಡುಬರುತ್ತದೆ. ಅಂದರೆ, ಈ ಪದಗಳಲ್ಲಿ ಕೊನೆಯಲ್ಲಿ ಬಂದಿರುವ ಅಕ್ಕರವು ಒಂದೆ ಆಗಿದೆ, ಮತ್ತು ಈ ರೂಪವು ಒಂದು ಪ್ರತ್ಯಯವಾಗಿದ್ದು ಬೇರೆ ಪದಗಳ ಮೇಲೆ ಸೇರಿ ಈ ರೂಪಗಳನ್ನು ಸಾದಿಸಲು ಸಾದ್ಯವಾಗಿದೆ. ಇದು ಬಹುಮುಕ್ಯವಾದ ವಿಚಾರ. ಇಂತದೆ ಹಲವಾರು ರೂಪಗಳು ಕನ್ನಡ ಪದಕೋಶದಲ್ಲಿ ಕಾಣಿಸುತ್ತವೆ. ಇನ್ನೂ ಕೆಲವು ಇಂತ ಪದಗಳನ್ನು ಇಲ್ಲಿ ಪಟ್ಟಿಸಬಹುದು.
ಉಸುಗು, ಬುರುಗು, ಬೆಡಗು, ಹಡಗು
ಕರಗು, ನಡುಗು, ಮುಳುಗು, ಸೊರಗು
ಇಂತಾ ಸಾವಿರದಶ್ಟು ಪದಗಳು ಹೀಗೆ ನಿರ‍್ದಿಶ್ಟವಾದ ರೂಪವೊಂದನ್ನು ಪದಕೊನೆಯಲ್ಲಿ ಅಕ್ಶರಗಾತ್ರದಲ್ಲಿ ಹೊಂದಿ ಬರುತ್ತವೆ. ಅಂದರೆ ಪದಕೊನೆಯ ಒಂದು ಅಕ್ಶರ ಎಲ್ಲ ಪದಗಳಲ್ಲಿ ಸಮರೂಪವನ್ನು ಹೊಂದಿದೆ. ಇವುಗಳ ರಚನೆಯನ್ನು ಹೀಗೆ ಒಡೆದು ಅರ‍್ತ ಮಾಡಿಕೊಳ್ಳಬಹುದು.
ಉದು+-ಲು=ಉದುಲು, ಒಡ+-ಲು=ಒಡಲು, ಕಡ+-ಲು=ಕಡಲು, ಸಿಡಿ+-ಲು=ಸಿಡಿಲು
ಕಂಡಿ+-ಕೆ= ಕಂಡಿಕೆ, ಕಣಿ+-ಕೆ=ಕಣಿಕೆ, ಕುಣಿ+-ಕೆ=ಕುಣಿಕೆ, ಕುಡಿ+-ಕೆ=ಕುಡಿಕೆ
ಕಂಡಿ+-ಗೆ=ಕಂಡಿಗೆ, ಕಾಡಿ+-ಗೆ=ಕಾಡಿಗೆ, ಗಡಿ+-ಗೆ=ಗಡಿಗೆ, ಮಲ್ಲಿ+-ಗೆ=ಮಲ್ಲಿಗೆ
ಇವುಗಳಲ್ಲಿ –ಲು, –ಕೆ ಮತ್ತು –ಗೆ ಇವು ಪದಗಳ ಮೇಲೆ ಕ್ರಮವಾಗಿ ಸೇರಿರುವುದು ಕಾಣಿಸುತ್ತದೆ. ಹಾಗಾದರೆ, ಇಲ್ಲಿ ಇನ್ನೊಂದು ಪ್ರಶ್ನೆ ಎದುರಾಗುತ್ತದೆ. ಅದೆಂದರೆ, ಆನಂತರ ಸೇರಿರುವ –ಲು, –ಕೆ, –ಗೆ ಇವುಗಳನ್ನು ತೆಗೆದರೆ ಉಳಿಯುವುದು ಎರಡು ಅಕ್ಶರಗಳ ಪದರೂಪ. ಇಲ್ಲಿ ವಿವರಿಸಿದ ವಿವರಣೆಯನ್ನು ಒಪ್ಪಿಕೊಳ್ಳುವುದಾದರೆ, ಈಗ ಮೂರಕ್ಶರದ ಪದಗಳಾಗಿ ಇರುವವುಗಳು ಮೊದಲಲ್ಲಿ ಎರಡಕ್ಕರದ ಪದಗಳಾಗಿದ್ದವು ಎಂದೆನಿಸುತ್ತದೆ. ಇವುಗಳಲ್ಲಿ ಪ್ರತ್ಯಯರೂಪವಿಲ್ಲದ, ಎರಡಕ್ಕರದ ಕುಣಿ, ಕುಡಿ, ಕಣಿ, ಕಂಡಿ ಮೊದಲಾದ ಪದಗಳು ಇಂದಿಗೂ ಬಳಕೆಯಲ್ಲಿವೆ. ಆದರೆ, ಕಾಡಿ, ಗಡಿ ಮೊದಲಾದ ರೂಪಗಳು ಇಂದು ಬಳಕೆಯಲ್ಲಿ ಕಾಣಿಸುವುದಿಲ್ಲ.
ಇಂದು ಮೂರಕ್ಶರದ ಪದಗಳಾಗಿ ಇರುವವು ಮೂಲದಲ್ಲಿ ಎರಡಕ್ಶರದ ಪದಗಳು ಎಂಬುದನ್ನು ಒಪ್ಪಿಕೊಂಡರೆ ಇನ್ನೊಂದು ಮಹತ್ವದ ಸಮಸ್ಯೆ ಎದುರಾಗುತ್ತದೆ. ಅದೆಂದರೆ, ಈ ಎರಡಕ್ಕರದ ಪದಗಳು ಮೂಲದಲ್ಲಿ ವ್ಯಂಜನಕೊನೆ
ಪದಗಳಾಗಿ ಇದ್ದವೆ ಇಲ್ಲವೆ ಸ್ವರಕೊನೆಗಳಾಗಿ ಇದ್ದವೆ ಎಂಬ ಪ್ರಶ್ನೆ ಬರುತ್ತದೆ. ಇದುವರೆಗೆ ಸಹಜವೆನ್ನುವಂತೆ ತಿಳಿದುಕೊಂಡಿರುವ ವಿಚಾರವೆಂದರೆ, ಕನ್ನಡದ ಬಹುತೇಕ ಪದಗಳು ಮೂಲದಲ್ಲಿ ವ್ಯಂಜನಕೊನೆಯವು ಆಗಿದ್ದವು ಎಂಬುದು. ಹಾಗಾದರೆ, ಈ ಮೇಲೆ ಬಿಡಿಸಿ ತೋರಿಸಿದ ಪದರೂಪಗಳು ವ್ಯಂಜನಕೊನೆಯವು ಆಗಿರಬಹುದೆ ಎಂದು ಅನುಮಾನಿಸಬೇಕು. ಇದು ಒಂದು ಸಿಕ್ಕಿನಂತೆ, ಸುಲಬವಾಗಿ ಅರಿತುಕೊಳ್ಳಲು ಆಗದ ವಿಚಾರ. ಯಾಕೆಂದರೆ, ಈ ಪದದ ಕೊನೆಯಲ್ಲಿ ಸೇರಿದೆ ಎಂದು ಹೇಳುವ ರೂಪವನ್ನು ತೆಗೆದು ನಂತರ ಉಳಿದ ರೂಪವನ್ನು ವ್ಯಂಜನಕೊನೆ ಎಂದು ಪರಿಗಣಿಸಿದರೆ ಆಗ, ಆ ಪದವು ಒಂದಕ್ಕರದ ಪದವಾಗಿಬಿಡುತ್ತದೆ. ಅಂದರೆ, ಕುಣಿ ಎಂಬ ಪದವನ್ನು ಸ್ವರಕೊನೆಯಾಗಿ ಪರಗಣಿಸಿದರೆ ಇದರಲ್ಲಿ ಕು+ಣಿ ಎಂಬ ಎರಡು ಅಕ್ಶರಗಳು ಇರುವುದು ಕಾಣಿಸುತ್ತದೆ. ಒಂದು ವೇಳೆ ಇದನ್ನು ವ್ಯಂಜನಕೊನೆ ಎಂದು ಪರಿಗಣಿಸಿದರೆ ಕುಣನ್ ಎಂದು ಪರಿಗಣಿಸಿದರೆ ಕುಣ್+ಅನ್ ಎಂದು ಎರಡು ಅಕ್ಕರದ ಪದವಾಗುತ್ತದೆ. ಒಂದುವೇಳೆ ಇದನ್ನು ಕುಣ್ ಎಂದು ಅರಿತುಕೊಂಡರೆ ಇದು ಒಂದೆ ಅಕ್ಶರದ ಪದವಾಗುತ್ತದೆ.
ಇದು ಮುಂದುವರೆದು ಮೂಲಬೂತವಾದ ಒಂದು ಪ್ರಶ್ನೆಯ ಇಲ್ಲವೆ ವಿಚಾರದ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತದೆ. ಅದೆಂದರೆ, ಮೂಲಕನ್ನಡದಲ್ಲಿ ಪದಗಳ ರಚನೆ ಹೇಗಿದ್ದಿತು ಎಂಬುದು. ಅಂದರೆ, ಮೂಲಕನ್ನಡದಲ್ಲಿ ಇದುವರೆಗೆ ವಿದ್ವಾಂಸರು ನಂಬಿಕೊಂಡು ಬಂದಿರುವಂತೆ ಪದಗಳು ವ್ಯಂಜನಕೊನೆ ಮಾತ್ರ ಇದ್ದವೆ ಇಲ್ಲವೆ ಸ್ವರಕೊನೆಯೂ ಇದ್ದವೆ ಎಂದು ಯೋಚಿಸಬೇಕಾಗುತ್ತದೆ. ಅದಿರಲಿ. ಈ ವಿಚಾರವನ್ನು ಇಲ್ಲಿ ಮಾತನಾಡುವುದಕ್ಕೆ ಅವಸರವಿಲ್ಲ.
ಈಗ ಇಂತ ಪದಗಳ ಬೆಳವಣಿಗೆಯ ಒಂದೆರಡು ಒಳ್ಳೆ ಎತ್ತುಗೆ ತೆಗೆದುಕೊಂಡು ಮಾತುಕತೆ ಮುಂದುವರೆಸಬಹುದು. ಇವು ಕುತೂಹಲಬರಿತವಂತೂ ಆಗಿವೆ, ಅದರೊಟ್ಟಿಗೆ, ಈ ಪದಗಳ ಬೆಳವಣಿಗೆಯನ್ನು ತಿಳಿದುಕೊಳ್ಳುವುದು ಕನ್ನಡ ಸಮುದಾಯದ ಇತಿಹಾಸ, ಸಮಾಜ, ಸಂಸ್ಕ್ರುತಿ ಇವುಗಳನ್ನು ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡುತ್ತವೆ ಎಂಬುದನ್ನು ಅರಿತುಕೊಳ್ಳಬಹುದು.
ಒಡಲು ‘ದೇಹ’ ಎಂಬ ಮೂರಕ್ಕರದ ಪದ ಇಂದು ಬಳಕೆಯಲ್ಲಿದೆ. ಈ ಮೇಲೆ ಹೇಳಿದಂತೆ ಇದರಲ್ಲಿ ಕೊನೆಯ ಅಕ್ಶರವು ಪ್ರತ್ಯಯರೂಪವಾಗಿರಬಹುದು ಎಂದುಕೊಂಡರೆ, ಇದನ್ನು ಒಡ+-ಲು ಎಂದು ಒಡೆದು ಓದಿಕೊಳ್ಳಬೇಕು. ಒಡ ಎಂಬ ಪದ ಎಲ್ಲೂ ಬಳಕೆಯಾಗಿರುವುದಕ್ಕೆ ಸದ್ಯಕ್ಕೆ ಆದಾರಗಳು ಇಲ್ಲ. ಆದರೆ ಇದರ ಮೂಲ ರೂಪ ಉಡ/ಉಡಿ ಆಗಿದ್ದಿತು. ಕನ್ನಡದಾಗ ಉ>ಒ ದ್ವನಿ ಬದಲಾವಣೆ ವ್ಯಾಪಕವಾಗಿ ನಡೆದಿದೆ. ಈ ದ್ವನಿ ಬದಲಾವಣೆಯಲ್ಲಿ ಮೊದಲು ಇದ್ದ ರೂಪ ಉಡ/ಉಡಿ ಇದ್ದ ರೂಪವು ಒಡ/ಒಡಿ ಎಂದು ಬೆಳೆದಿದೆ. ಆದರೆ, ಇಲ್ಲಿ ಪದಕೊನೆಯಲ್ಲಿ ವ್ಯಂಜನವಿದ್ದಿತೆ, ಸ್ವರವಿದ್ದಿತೆ, ಸ್ವರವಿದ್ದರೆ, ಯಾವ ಸ್ವರವಿದ್ದಿತು ಎಂಬ ಮೊದಲಾದ ಅಂಶಗಳು ಅಸ್ಪಶ್ಟ. ಹಾಗಾಗಿ ಅವುಗಳನ್ನು ಇಲ್ಲಿ ವಿಚಾರಿಸದೆ, ಅಂದಾಜು ರೂಪ ಉಡ/ಉಡಿ>ಒಡ/ಒಡಿ ಎಂದು ಅಂದುಕೊಂಡು ಮಾತು ಮುಂದುವರೆಸಬಹುದು. ಈ ಬೆಳೆಯುವ ಪ್ರಕ್ರಿಯೆಯಲ್ಲಿಯೆ –ಲು ಎಂಬ ರೂಪವೂ ಸೇರಿಕೊಂಡಿದೆ. ಇದರಿಂದ ಒಡಲು ರೂಪವು ಸಿದ್ದಿಸಿದೆ. ಉಡಿ ಎಂಬ ಪದ ಇಂದಿಗೂ ಒಂದು ಸಾಸ್ಕ್ರುತಿಕ ಪದವಾಗಿ ಉಳಿದುಕೊಂಡಿದೆ, ಉಡಿ ತುಂಬುವುದು. ಬಹು ಹಿಂದೆಯೆ ಈ
ಪದ ಈ ರೀತಿಯ ಸಾಂಸ್ಕ್ರುತಿಕ ಅರ‍್ತವನ್ನು ಪಡೆದುಕೊಂಡು ಬೆಳೆದಿದೆ. ಹಾಗಾಗಿ, ಸಹಜ ಬಾಶೆಯಲ್ಲಿ ದ್ವನಿಬದಲಾವಣೆ ಆಗಿ ಉಡ/ಉಡಿ>=ಉಡಲು/ಉಡಿಲು>ಒಡಲು ಎಂದು ಬೆಳೆದಿದ್ದರೂ ಸಾಂಸ್ಕ್ರುತಿಕ ಪದವಾಗಿ ಉಡಿ ಎಂಬುದು ಕೂಡ ಹಾಗೆಯೆ ಮುಂದುವರೆದಿದೆ. ಇಟ್ಟ ಹೆಸರುಗಳು, ಸಾಂಸ್ಕ್ರುತಿಕ ಪದಗಳು ಹೀಗೆ ಸಹಜವಾದ ದ್ವನಿಬದಲಾವಣೆಗೆ ಒಳಗಾಗದೆ ತುಸು ಪಕ್ಕಕ್ಕೆ ಸರಿದು ಹಾಗೆಯೆ ಉಳಿದುಕೊಳ್ಳುವುದು ಸಹಜ.
ಇನ್ನೊಂದು ಕುತೂಹಲಕರ ಉದಾಹರಣೆ ತೆಗೆದುಕೊಳ್ಳುವುದಾದರೆ, ಬದುಕು ಎಂಬ ಪದ ಇಂದು ಬಳಕೆಯಲ್ಲಿದೆ. ಇದನ್ನು ಈ ಮೇಲಿನ ವಿಚಾರದಂತೆ ಬದು+-ಕು ಎಂದು ಒಡೆದುಕೊಳ್ಳಬೇಕು. ಬದುಕು ಎಂಬ ಪದದ ಹಳಗನ್ನಡ ರೂಪ ಬರ‍್ದುನ್ಕು ಎಂದಾಗಿದೆ. ಅಂದರೆ, ಇದನ್ನು ಬರ‍್ದು+-ನ್ಕು ಎಂದು ಅರ‍್ತ ಮಾಡಿಕೊಳ್ಳಬೇಕು. ಬರ‍್ದು ಎನ್ನುವ ಪದದ ಬಳಕೆಯೂ ಸದ್ಯಕ್ಕೆ ಗಮನಕ್ಕೆ ಇಲ್ಲ. ಹಾಗಾದರೆ, ಈ ರೂಪದ ಇರುವಿಕೆಯನ್ನು ಹೇಗೆ ಅರಿತುಕೊಳ್ಳುವುದು ಎಂಬ ಪ್ರಶ್ನೆ ಬರಬಹುದು. ಕೇಶಿರಾಜ ಬರ‍್ದಿಲಮೆಂಬುದು ಸಗ್ಗಕ್ಕೆ ಪೆಸರ್ ಎಂದು ಹೇಳುತ್ತಾನೆ. ಅಂದರೆ, ‘ಬರ‍್ದಿಲ ಎಂದರೆ ಸ್ವರ‍್ಗ’ ಎಂದು. ಈ ಪದದಲ್ಲಿ ಇಲ>ಇಲ್ಲ ಎಂಬ ರೂಪ ಸೇರಿಕೊಂಡಿದೆ. ಹಾಗಾದರೆ ಇದರ ರಚನೆ, ಬರ‍್ದ್+ಇಲ ಎಂದಾಗುತ್ತದೆ. ಇದರ ನೇರ ಅರ‍್ತ ‘ಬದುಕು+ಇಲ್ಲ’ ಅಂದರೆ, ಬದುಕು ಇಲ್ಲದ್ದು ಎಂದಾಗುತ್ತದೆ. ಬದುಕು ಇಲ್ಲದ್ದು ಸ್ವರ‍್ಗ. ಇದು ಸ್ವರ‍್ಗದ ಅದ್ಬುತ ಗ್ರಹಿಕೆ ಎನಿಸುತ್ತದೆ. ಕನ್ನಡ ಸಮಾಜ ಹೀಗೆ ಸ್ವರ‍್ಗವನ್ನು ಪರಿಬಾವಿಸಿಕೊಂಡಿದ್ದಿತು ಎನ್ನುವುದೆ ಬೆರಗಿನ ವಿಚಾರ. ಇರಲಿ. ಹಾಗಾದರೆ ಬದುಕು<ಬರ‍್ದುನ್ಕು=ಬರ‍್ದ್+ನ್ಕು, ಬರ‍್ದಿಲ=<ಬರ‍್ದ್+ಇಲ ಎಂದು ಬೆಳೆದಿವೆ ಎಂದಾಯಿತು. ಹಾಗಾದರೆ, ಬದುಕು ಎಂಬ ಪದ ಮೂಲದಲ್ಲಿ ಬರ‍್ದ್ ಎಂದಾಗಿದ್ದಿತು ಎಂಬುದು ಸ್ಪಶ್ಟವಾಗುತ್ತದೆ.
ಮೇಲಿನ ಕೆಲವು ಮೂರಕ್ಶರದ ಪದಗಳ ಉದಾಹರಣೆಗಳಲ್ಲಿ ಕೆಲವು ಎರಡಕ್ಕರದ ರೂಪದಲ್ಲಿ ಬಳಕೆ ಇರುವವು ನಮಗೆ ಇಂದಿಗೂ ದೊರೆಯುತ್ತವೆ. ಹಾಗಾಗಿ ಈ ಬೆಳವಣಿಗೆಯನ್ನು ಸಹಜವಾಗಿ ಅರಿತುಕೊಳ್ಳಲು ಸಾದ್ಯ. ಇಲ್ಲಿ ಹೀಗೆ ಗಮನಿಸಬಹುದಾದ ಇನ್ನೂ ಕೆಲವು ಇಂತ ಪ್ರತ್ಯಯ ರೂಪಗಳನ್ನು ಪಟ್ಟಿಸಿದೆ.
-ಕು<ನ್ಕು (ಕಲಕು), -ಕೆ (ದಣಿಕೆ), -ಗು (ಮುಸುಗು), –ಗೆ (ಗುಂಡಿಗೆ), -ಚು (ಎರಚು), -ಪು (ಮುಡಿಪು), -ಬು (ಕಡುಬು), -ಲು (ಕೂದಲು), -ಸು (ಕನಸು), -ಹು (ಕುರುಹು)
ಈ ಮತ್ತು ಇಂತ ಇನ್ನೂ ಕೆಲವು ಪ್ರತ್ಯಯಗಳಿಗೆ ಪ್ರತಿಯೊಂದಕ್ಕು ಸಾವಿರದಶ್ಟು ಪದಗಳನ್ನು ಪಟ್ಟಿ ಮಾಡಲಾಗಿದೆ. ಈ ರಚನೆಯ ಅದ್ಯಯನ ಇನ್ನಶ್ಟು ಹೆಚ್ಚು ಆಗಬೇಕಿದೆ. ಇದರಲ್ಲಿ ಪದವರ‍್ಗಗಳಾದ ನಾಮಪದ, ಕ್ರಿಯಾಪದ ಹೀಗೆ ವಿವಿದ ಗುಂಪುಗಳು ಹೇಗೆ ಬೆಳೆದಿವೆ ಎಂಬುದನ್ನೆಲ್ಲ ತಿಳಿದುಕೊಳ್ಳುವುದಕ್ಕೆ ಹೆಚ್ಚಿನ ಅದ್ಯಯನಗಳು ಬೇಕು.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.