ಒಂದು ಶಾಲೆಯಿಂದ ಒಬ್ಬ ಓದುಗ ಬಂದರೆ ಸಾಕು ಎಂಬ ಕಾಲ ಬಂದಿದೆ: ಜೋಗಿ

Date: 07-03-2024

Location: ಬೆಂಗಳೂರು


ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ ಆಶ್ರಯದಲ್ಲಿ ನಡೆದ ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಮತ್ತು ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಮಾರ್ಚ್ 6 ಬುಧವಾರದಂದು ನಯನ ಸಭಾಂಗಣದಲ್ಲಿ ನಡೆಯಿತು.

ಉಚಿತ ಪುಸ್ತಕ ವಿತರಣೆ ಮಾಡಿ ಮಾತನಾಡಿದ ಜೋಗಿ, "ಓದುಗರನ್ನು ಸೃಷ್ಟಿಸುವ ಅಗತ್ಯವಿದೆ. ಗ್ರಾಮೀಣ ಮತ್ತು ಜಿಲ್ಲಾ ಮಟ್ಟದಲ್ಲಿ ಓದುಗರಿದ್ದಾರೆ. ಆದರೆ ನಗರದಲ್ಲಿ 5ಜಿಗೆ ಅಂಟಿಕೊಂಡು ಸ್ಕ್ರೀನ್ ಟೈಮಿಂಗ್ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರವಣಿಗೆಗೆ ಅವಕಾಶ ಇದೆ ಎಂದಾಗ ನಾನು ಅದರಲ್ಲಿ ವಿಶ್ವಾಸ ಇಟ್ಟಿದ್ದೆ. ಆದರೆ ಅದರಲ್ಲಿ ಜೀವನ ಮೌಲ್ಯಗಳು ಇಲ್ಲ," ಎಂದು ಬೇಸರ ಹೊರಹಾಕಿದರು.

ಪ್ರತಿಯೊಬ್ಬ ಲೇಖಕನು ಹುಡುಕಬೇಕಾದ್ದು ಸರಿಯಾದ ವಿಮರ್ಶಕನನ್ನು. ಸರಿಯಾಗಿ ವಿಮರ್ಶೆ ಮಾಡುವವರನ್ನು ಹುಡುಕಬೇಕು. ಆಗ ಮಾತ್ರ ಬರವಣಿಗೆ ಉತ್ತಮ ಗೊಳ್ಳುತ್ತದೆ. ನಾವು ಬರೆಯುವ ಕಾಲದಲ್ಲಿ ವೈಎನ್ಕೆ ಅವರು ಐದು ಬಾರಿ ಒಂದು ಲೇಖನವನ್ನು ತಿದ್ದಿಸಿದ್ದರು ಎಂದು ನೆನಪನ್ನು ಹಂಚಿಕೊಂಡರು. ಒಂದು ಶಾಲೆಯಿಂದ ಒಬ್ಬ ಸಾಹಿತಿ ಬಂದರೆ ಸಂತಸ ಎಂದು ಮೊದಲು ನಾನು ಹೇಳುತ್ತಿದ್ದೆ. ಈಗ ಒಂದು ಶಾಲೆಯಿಂದ ಒಬ್ಬ ಲೇಖಕ ಬರಲಿ ಎಂದೆನ್ನಿಸುತ್ತದೆ ಎಂದರು.

ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, "ಕನ್ನಡ ಸಂಸ್ಕೃತಿ ಇಲಾಖೆ ಎಂದರೆ ಎಲ್ಲರೂ ಒಲ್ಲೆ ಒಲ್ಲೆ ಅಂತಾರೆ. ಶಿವರಾಜ ತಂಗಡಗಿ ಅವರು ಸಹ ಆರಂಭದಲ್ಲಿ ಒಲ್ಲೆ ಒಲ್ಲೆ ಎಂದವರೇ. ಆದರೆ ಈಗ ಬಲ್ಲೆ ಬಲ್ಲೆ ಎಂಬಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ," ಎಂದು ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

"ಮಾಧ್ಯಮಗಳೆಲ್ಲ ಉದ್ಯಮ ಆಗಿದೆ. ಪುಸ್ತಕ ಮಾಧ್ಯಮ ಇದ್ದದ್ದು ಈಗ ಉದ್ಯಮ ಆಗಿದೆ. ಆದರೆ ಅದು ಸಂವೇದನೆಯಾಗಿರ ಬೇಕು. ಉಚಿತವಾಗಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡುವ ಮೂಲಕ ಪುಸ್ತಕ ಪ್ರಾಧಿಕಾರ ಸಂವೇದನೆಯನ್ನು ಸೃಷ್ಟಿಸುತ್ತಿದೆ. ಕನ್ನಡ ಸಾಹಿತ್ಯ ಪರಂಪರೆಯ ಓದು ಮುಖ್ಯ. ಈ ಪರಂಪರೆಯನ್ನು ಮುಂದುವರೆಸಬೇಕು. ಇದಕ್ಕೆ ಬರವಣಿಗೆಯ ಜೊತೆಗೇ ಓದನ್ನು ರೂಡಿಸಿಕೊಳ್ಳಬೇಕು," ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ ಅವರು ಮಾತನಾಡಿ, "ಪುಸ್ತಕ ಬಿಡುಗಡೆ ಎಂದರೆ ಹೆರಿಗೆಯ ರೀತಿಯೇ. ಅದಕ್ಕೆ ಚೊಚ್ಚಲ ಕೃತಿ ಅಂದಾಗ ವಿಶೇಷ. ಬರವಣಿಗೆ ಅಂದರೆ ಪದಗಳ ಮೆರವಣಿಗೆ ಆಗಬಾರದು, ಸಮಾಜದ ಅರಿವು ಇರಬೇಕು. ಕವಿತೆ ಏಕಾಂತಕ್ಕೆ ಕಥೆ ಲೋಕಾಂತಕ್ಕೆ ಅಂತ. ಸಾಹಿತ್ಯ ಕೇವಲ ರಸಾನುಭವವಾಗಿರಬಾರದು. ಸಮಾಜ ಸಂವೇದನೆಯನ್ನು ಒಳಗೊಂಡಿರಬೇಕು," ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ಎಸ್. ತಂಗಡಿ ಮಾತನಾಡಿ, "33 ಉತ್ತರ ಕರ್ನಾಟಕದ ಯುವ ಲೇಖಕರು ಇದ್ದಾರೆ ಎನ್ನುವುದೇ ಸಂತಸದ ವಿಷಯ. ಇದಕ್ಕೆ 200ಕ್ಕೂ ಹೆಚ್ಚು ಲೇಖಕರು ಅರ್ಜಿಹಾಕಿದ್ದರು ಎಂದು ತಿಳಿಯಿತು ಇದು ಹೆಮ್ಮೆಯ ವಿಷಯ. ಇಲಾಖೆಯ ಜವಾಬ್ದಾರಿ ಮುಖ್ಯಮಂತ್ರಿ ಕೊಟ್ಟಾಗ ನನ್ನ ಮೇಲೆ ಸಿಟ್ಟಿದೆಯಾ ಎಂದು ಕೇಳಿದ್ದೆ. ನನಗೆ ಸಾಹಿತ್ಯ ಓದಿನ ಬಗ್ಗೆಯೂ ಗೊತ್ತಿಲ್ಲ. ಪೇಪರ್ ಓದುವ ಅಭ್ಯಾಸ ಇದೆ ಅಷ್ಟೇ. ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಹಿರಿಯ ಸಾಹಿತಿಗಳ ಜೊತೆ ಮಾತನಾಡಿ ತಿಳಿದುಕೊಂಡು ಸಲಹೆಯಂತೆ ನಡೆಯುತ್ತಿದ್ದೇನೆ. ಮುಂದೆ ಖಾತೆ ಬದಲಾವಣೆ ಮಾಡ್ತಾರೆ ಅಂದ್ರು ಬೇಡ ಅಂತೀನಿ. ಈಗ ಸಾಹಿತ್ಯ ಮತ್ತು ಸಾಹಿತಿಗಳ ಜೊತೆಗಿನ ಒಡನಾಟದಿಂದ ನಾನು ಮುಂದೆ ಪುಸ್ತಕ ಬರೆಯವ ಮನಸ್ಸಾಗಿದೆ," ಹೇಳಿದರು.

ಶ್ರೀ ಕೆಬಿ ಕಿರಣ್ ಸಿಂಗ್ ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಚೊಚ್ಚಲ ಬರಹಗಾರರನ್ನು ಗೌರವಿಸಲಾಯಿತು.

MORE NEWS

ಮಾಲತಿ ಪಟ್ಟಣಶೆಟ್ಟಿ, ಎಸ್.ಜಿ.ಸಿದ್ದರಾಮಯ್ಯ ಅವರಿಗೆ `ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ'

27-03-2025 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಗುರುಲಿಂಗ ಕಾಪಸೆ ದತ್ತಿಯಡಿ ನೀಡಲಾಗುವ ಗುರುಲಿಂಗ ಕಾಪಸೆ ಸಾಹಿತ್ಯ ಪ್ರ...

ಭಾನುಪ್ರಕಾಶ್ ಶರ್ಮ ಮತ್ತು ಶ್ರೀಧರ ದೀಕ್ಷಿತ್ ಗೆ ವಾಸುದೇವ ಮಹಾರಾಜ್ ಸದ್ಭಾವನಾ ಪ್ರಶಸ್ತಿ ಪ್ರದಾನ 

25-03-2025 ಬೆಂಗಳೂರು

ಮೈಸೂರಿನ ಶ್ರೀ ವಾಸುದೇವ ಮಹಾರಾಜ್ ಫೌಂಡೇಶನ್ ವತಿಯಿಂದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಶ್ರೀ ವಾಸುದೇವ ಮಹಾರಾಜ 88...

ಪ್ರಶಸ್ತಿಯನ್ನು ಅರ್ಜಿ ಹಾಕಿ ಪಡೆಯುವುದಕ್ಕಿಂತ, ಸಾಧಕರನ್ನು ಗುರುತಿಸಿ ಕೊಡುವುದು ಶ್ರೇಷ್ಠ; ಶಿವರಾಜ ತಂಗಡಗಿ

24-03-2025 ಬೆಂಗಳೂರು

ಬೆಂಗಳೂರು: "ಯಾವುದೇ ಒಂದು ಪ್ರಶಸ್ತಿಯನ್ನು ಅರ್ಜಿ ಹಾಕಿ ಪಡೆಯುವುದಕ್ಕಿಂತ, ವ್ಯಕ್ತಿಯ ಸಾಧನೆಯನ್ನು ಗುರುತಿಸಿ ಪ್...