ಒಂದು ಒಂಟಿತನದ ನಿಟ್ಟುಸಿರು ಅದೆಷ್ಟು ದೀರ್ಘವಾಗಿರಬಹುದು?


"ಒಂದು ಒಂಟಿತನದ ನಿಟ್ಟುಸಿರು ಅದೆಷ್ಟು ದೀರ್ಘವಾಗಿರಬಹುದು? ಸುಮಾರು 215 ಪುಟಗಳ ಈ ನಿಟ್ಟುಸಿರಿನ ಅನನ್ಯತೆ ಎಂದರೆ ಅದು ಎಲ್ಲೂ ಗೋಳಾಟ ಆಗಿಲ್ಲ. ಅದನ್ನೇ ಮತ್ತೆಮತ್ತೆ ಬೇರೆಬೇರೆ ಪದಗಳಲ್ಲಿ ಹೇಳುವ ಪ್ರಲಾಪ ಅಲ್ಲ ಇದು. ಅಪ್ಪನೊಡನೆ ಬದುಕುತ್ತಿರುವ ಮಾಗ್ಡಾಗೆ ಸ್ನೇಹಿತರಿಲ್ಲ, ಸಂಗಾತಿ ಇಲ್ಲ, ಸುತ್ತಲೂ ಯಾವುದೇ ಬಗೆಯ ಸಪೋರ್ಟ್ ಸಿಸ್ಟಮ್ ಇಲ್ಲ, ಅಪ್ಪನೊಡನೆ ಅವಳ ಸಂಬಂಧವೂ ಅಷ್ಟೇ ಸಂಕೀರ್ಣ," ಎನ್ನುತ್ತಾರೆ ಸಂಧ್ಯಾರಾಣಿ. ಅವರು ಎಚ್.ಎಸ್. ರಾಘವೇಂದ್ರ ರಾವ್ ಅವರ ‘‘ಕಲ್ಲು ನೆಲದ ಹಾಡುಪಾಡು’ ಅನುವಾದ ಕೃತಿ ಕುರಿತು ಬರೆದ ಅನಿಸಿಕೆ.

‘ಕಲ್ಲು ನೆಲದ ಹಾಡುಪಾಡು’ – JM Coetzee ಬರೆದ In the heart of the Country ಪುಸ್ತಕವನ್ನು ಎಚ್ ಎಸ್ ರಾಘವೇಂದ್ರ ರಾವ್ ಅವರು ಕನ್ನಡಕ್ಕೆ ತಂದಿದ್ದಾರೆ. ನುಡಿ ಪ್ರಕಾಶನ ಅದನ್ನು ಪ್ರಕಟಿಸಿದೆ. ಇಡೀ ಪುಸ್ತಕ ಓದಿದ ಮೇಲೆ, ಅದಕ್ಕೆ ಎಚ್‌ಎಸ್‌ಆರ್ ಕೊಟ್ಟ ಕನ್ನಡದ ಹೆಸರು ಪುಸ್ತಕಕ್ಕೆ ಮತ್ತೊಂದು ಆಯಾಮ ಕೊಟ್ಟಿದೆ ಅನ್ನಿಸುತ್ತದೆ. ಪುಸ್ತಕವನ್ನು ಓದುವಾಗ ಅಲ್ಲಲ್ಲಿ ನಿಲ್ಲಿಸಿದ್ದೇನೆ, ಯೋಚಿಸಿದ್ದೇನೆ, ಮುಂದೆ ಓದಲಾಗದ ಸಂಕಟ ಅನುಭವಿಸಿದ್ದೇನೆ.

ಒಂದು ಒಂಟಿತನದ ನಿಟ್ಟುಸಿರು ಅದೆಷ್ಟು ದೀರ್ಘವಾಗಿರಬಹುದು? ಸುಮಾರು 215 ಪುಟಗಳ ಈ ನಿಟ್ಟುಸಿರಿನ ಅನನ್ಯತೆ ಎಂದರೆ ಅದು ಎಲ್ಲೂ ಗೋಳಾಟ ಆಗಿಲ್ಲ. ಅದನ್ನೇ ಮತ್ತೆಮತ್ತೆ ಬೇರೆಬೇರೆ ಪದಗಳಲ್ಲಿ ಹೇಳುವ ಪ್ರಲಾಪ ಅಲ್ಲ ಇದು. ಅಪ್ಪನೊಡನೆ ಬದುಕುತ್ತಿರುವ ಮಾಗ್ಡಾಗೆ ಸ್ನೇಹಿತರಿಲ್ಲ, ಸಂಗಾತಿ ಇಲ್ಲ, ಸುತ್ತಲೂ ಯಾವುದೇ ಬಗೆಯ ಸಪೋರ್ಟ್ ಸಿಸ್ಟಮ್ ಇಲ್ಲ, ಅಪ್ಪನೊಡನೆ ಅವಳ ಸಂಬಂಧವೂ ಅಷ್ಟೇ ಸಂಕೀರ್ಣ.

ದಕ್ಷಿಣ ಅಮೇರಿಕಾದ ವರ್ಣಬೇಧ ಬದುಕಿನ ಸಮಾಜದಲ್ಲಿ, ಎಲ್ಲರಿಂದ ಪ್ರತ್ಯೇಕವಾದ ಎಸ್ಟೇಟ್ ಒಂದರಲ್ಲಿ ಅವರ ವಾಸ. ‘ಇಲ್ಲ’, ‘ಕೂಡದು’ ಎನ್ನುವುದನ್ನೇ ಅವಳು ಅಪ್ಪನಿಂದ ಹೆಚ್ಚಾಗಿ ಕೇಳಿರುತ್ತಾಳೆ. ಇದೆಲ್ಲಾ ಹೇಗೋ ನಡೆಯುತ್ತಿರುವಾಗ ಅವಳ ಅಪ್ಪ, ಎಳೆಯ ಹೆಣ್ಣಿನೊಡನೆ ಸಂಬಂಧ ಬೆಳೆಸುತ್ತಾನೆ, ಅದರ ಬಗ್ಗೆ ಹೇಳುತ್ತಾ ಮಾಗ್ಡಾ, ‘ನಾನು ಸಂತೃಪ್ತಳಾದ ಈ ಹೆಂಗಸಿನ ತುಂಬುತುಟಿಗಳನ್ನು ನೋಡುತ್ತೇನೆ,’ ಎಂದು ಹೇಳುತ್ತಾಳೆ. ಭಾವರಹಿತವಾಗಿ ಕಾಣುವ ಈ ವಾಕ್ಯದ ಹಿಂದಿನ ಅವಳ ತಲ್ಲಣಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಆ ಕ್ಷಣದಿಂದ ಅವಳಿಗೆ ಅಪ್ಪ ಮತ್ತು ಆ ಹೆಂಗಸು ಇಬ್ಬರೂ ಪ್ರತಿಸ್ಪರ್ಧಿಗಳಂತೆ ಕಾಣತೊಡಗುತ್ತಾರೆ. ಇಲ್ಲಿ ಅದಷ್ಟೇ ಇಲ್ಲ, ಅವಳ ಮನೆಯಲ್ಲಿ ಅಥವಾ ಅವಳ ಅಪ್ಪನ ಮನೆಯಲ್ಲಿ ಕೆಲಸಕ್ಕಿರುವ ಇಬ್ಬರು ಆನಾಗಳು, ಹೆಂಡ್ರಿಕ್, ಜೇಕಬ್ ಅವರನ್ನೂ ಕಥೆ ಒಳಗೊಳ್ಳುತ್ತದೆ.

ಅವರನ್ನು ಕೇವಲ disposable ಗಳಾಗಿ ನೋಡುವ ಸಮಾಜ ಮತ್ತು ಅದರ ಫಲವಾಗಿ ಬೆಳೆದುಬಂದ ಮನೋಭಾವ ಕಾಣುತ್ತದೆ. ಸಣ್ಣಹುಡುಗಿ ಆನಾ ಒಲಿದಳು ಎನ್ನುವುದು ಮಾಗ್ಡಾ ತಂದೆಯ ಪಾಲಿಗೆ, ಮಾಗ್ಡಾಳ ನೋಟಕ್ಕೆ ಗೆಲುವಿನಂತೆ ಕಂಡರೆ ಹೆಂಡ್ರಿಕ್ ಜೊತೆಗೆ ನಡೆದ ಅಥವಾ ನಡೆಯದ ಸಂಬಂಧ ಮಾಗ್ಡಾಗೆ ಕತ್ತಲಿನ ಅವಸರದ ಕ್ರಿಯೆ ಮಾತ್ರವಾಗಿರುತ್ತದೆ. ಇಲ್ಲಿ ವರ್ಣಬೇಧ ಇದೆ, ಲಿಂಗಬೇಧವೂ ಇದೆ. ನನ್ನನ್ನು ಬೆರಗಾಗಿಸಿಕೊಂಡು ಓದಿಸಿಕೊಂಡು ಹೋಗಿದ್ದೆಂದರೆ ಕಲ್ಪನೆ – ವಾಸ್ತವಗಳ ನಡುವಿನ ಗೆರೆ ಕಲಸಿದಂತೆ ಸಾಗುವ ನಿರೂಪಣೆ, ಕಥೆ. ಇಡೀ ಪುಸ್ತಕವೇ ಒಂದು ಸ್ವಗತ. ಕೆಲವು ಪುಟಗಳಾದ ಮೇಲೆ ಅದು ಕಲ್ಪನೆಯೋ, ವಾಸ್ತವವೋ ಎನ್ನುವುದು ಮುಖ್ಯವಾಗುವುದೇ ಇಲ್ಲ. ನಿರೂಪಣೆಗೆ ಅನುಗುಣವಾಗಿ ಕಥೆ ಬೆಳೆಯುತ್ತಾ ಹೋಗುತ್ತದೆ.

ನಾನು ಓದಿದ ಅಪರೂಪದ ಕಾದಂಬರಿಗಳಲ್ಲಿ ಇದೂ ಒಂದು. ಕನ್ನಡಕ್ಕೆ ತಂದು ಆ ಮೂಲಕ ಓದಿಗೆ ದಕ್ಕಿಸಿದ ಎಚ್‌ಎಸ್‌ಆರ್ ಗೆ ಮತ್ತು ನುಡಿ ಪ್ರಕಾಶನಕ್ಕೆ ಧನ್ಯವಾದಗಳು

MORE FEATURES

ಕನ್ನಡದ ಅಪರೂಪದ ಚಿಂತಕ ಜಿ.ಎಸ್.ಸಿದ್ದಲಿಂಗಯ್ಯ

07-05-2025 ಬೆಂಗಳೂರು

"ಸಾಹಿತ್ಯ ಲೋಕದ ಯಾವ ಗುಂಪುಗಾರಿಕೆಗೂ ಸೇರದ ಜಿ.ಎಸ್.ಸಿದ್ದಲಿಂಗಯ್ಯ ಒಬ್ಬಂಟಿಯಾಗಿಯೇ ಸಾಗಿದರು. ಅವರಿಗಿಂತ ಕಿರಿಯರ...

ಅಪರೂಪದ ಕವಿ-ವಾಗ್ಮಿ ನಮ್ಮ ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ

07-05-2025 ಬೆಂಗಳೂರು

"ಸಾಹಿತ್ಯ ವಲಯದ ಗುಂಪುಗಾರಿಕೆಯಿಂದ ಬಲುದೂರ ಉಳಿದಿರುವ ಸಿದ್ಧಲಿಂಗಯ್ಯನವರದು ಬಹುತೇಕ ಒಂಟಿ ಪಯಣವೇ. ಇವರಿಗೆ ಆಪ್ತರ...

ಓದಿನ ಸುಖ ಕೊಡುವುದು ಅನುವಾದ ಸರಾಗವಾಗಿ ಓದಿಸಿಕೊಂಡು ಹೋದಾಗ ಮಾತ್ರ!

07-05-2025 ಬೆಂಗಳೂರು

"ಅಣುವೊಂದು ಬ್ರಹ್ಮಾಂಡವನ್ನು ಅರಿಯುವ ತಹ ತಹ, ಅದರೊಳಗೆ ಲೀನವಾಗಬೇಕೆನ್ನುವ ಹಂಬಲ ಟಾಗೋರರ ಈ ಕವಿತೆಗಳಲ್ಲಿದೆ. ಭೌತ...