ನೆಲದಿಂದ ಮುಗಿಲಿಗೇರಿದ ಒಂದು ವೃತ್ತಿ ಪಯಣ, ಪತ್ರಿಕೆಯ ಪಯಣ..


"ನಾವೆಲ್ಲ ಮನಸಿನಲ್ಲಿ ಅಂದುಕೊಳ್ಳುತ್ತಿದ್ದ ಒಂದು ಅಭಿಪ್ರಾಯಕ್ಕೆ ಲೇಖಕರು ಇಲ್ಲಿ ಅಧಿಕೃತ ಮುದ್ರೆ ಒತ್ತಿದ್ದಾರೆ. ಏನಂದರೆ ಪ್ರಜಾವಾಣಿ ಎಡಪಂಥೀಯ ಎಂಬ ಲೇಬಲ್ ಅಂಟಿಸಿಕೊಂಡು, ಕ್ರಮೇಣ ಓದುಗರು ವಿಮುಖರಾಗಿ, ಪ್ರಸಾರದಲ್ಲಿ ನಂಬರ್ ಒನ್ ಸ್ಥಾನದಿಂದ ಕೆಳಗೆ ಇಳಿಯಬೇಕಾಯಿತೆಂದೂ, ಅದನ್ನು ಸರಿದೂಗಿಸಲು ಮುಖ್ಯ ಸಂಪಾದಕರಾದ ಶಾಂತಕುಮಾರ್ ಪ್ರಜ್ಞಾಪೂರ್ವಕವಾಗಿ ಪತ್ರಿಕೆಗೆ ಅಂಟಿರುವ ಈ ಲೇಬಲ್ ಕಳಚುವ ಪ್ರಯತ್ನ ಮಾಡಿರುವುದಾಗಿಯೂ ತಿಳಿಸಿದ್ದಾರೆ," ಎನ್ನುತ್ತಾರೆ ಮಧು ವೈ.ಎನ್. ಅವರು ಪದ್ಮರಾಜ್ ದಂಡಾವತಿ ಅವರ 'ಉಳಿದಾವ ನೆನಪು' ಕೃತಿ ಕುರಿತು ಬರೆದ ವಿಮರ್ಶೆ.

'ಉಳಿದಾವ ನೆನಪು' ಪ್ರಜಾವಾಣಿಯ ನಿವೃತ್ತ ಸಂಪಾದಕರಾಗಿರುವ ಪದ್ಮರಾಜ್ ದಂಡಾವತಿಯವರ ಆತ್ಮಚರಿತೆಯ 'ಉದ್ಯೋಗಪರ್ವ'ದ ಭಾಗವೆನ್ನಬಹುದು. ಮೊದಲ ಅಧ್ಯಾಯ ಕೆಲಸಕ್ಕೆ ಸೇರಿದ ದಿನಗಳಿಗೆ, ಕಡೆಯ ಅಧ್ಯಾಯ ನಿವೃತ್ತಿ ಹೊಂದಿದ ದಿನಗಳಿಗೆ ಮೀಸಲು. ನಡುವೆ ಏನೇನಾಯ್ತು, ಯಾರು ಯಾರು ಬಂದುಹೋದರು ಎಂಬುದಕ್ಕೆ ಮೀಸಲಾದ ಕುತೂಹಲಕಾರಿ ಸಂಗತಿಗಳು. ಹಾಗಾಗಿ ಇದು ಲೇಖಕರೊಂದಿಗೆ ಪತ್ರಿಕೆಯ ಆತ್ಮಚರಿತೆಯೂ ಹೌದು. ನಮಗೆ ತಿಳಿದಿರದ ಅನೇಕ ವಿಷಯಗಳು, ಒಳ ಸಂಗತಿಗಳು ಇಲ್ಲಿವೆ. ಹಾಗಾಗಿ ಮನುಷ್ಯ ಸಹಜ ಕುತೂಹಲದಿಂದ ಒಂದೇ ಉಸಿರಿಗೆ ಓದಬಹುದಾಗಿದೆ.

ಪತ್ರಕರ್ತರದ್ದು ವಿಚಿತ್ರ ಉದ್ಯೋಗ. ಒಂದು ಕಡೆ ಸುದ್ದಿಗಾಗಿ ಎಲ್ಲರ ಹಿಂದೆ ಅಲೆಯಬೇಕಾದಂತಹ ದರ್ದು. ಅಪರಾಧಿಯಿಂದ ಹಿಡಿದು ಮಿನಿಸ್ಟರವರೆಗೆ ಅವರು ಬರುವವರೆಗೆ ಒಂಟಿಕಾಲಲ್ಲಿ ಕಾದು ಕೇಳಿಸಿಕೊಂಡು ಬರೆದುಕೊಳ್ಳಬೇಕಾದ ಮರ್ಜಿ(ಈಗ ಮೈಕು ಹಿಡಿದು ಅಲೆಯುವವರನ್ನು ನೋಡಿದರಂತೂ ಇವರಿಗೆ ಸ್ವಂತದ್ದೊಂದು ಘನತೆ ಇರೋಲ್ಲವೇ ಅನಿಸುತ್ತದೆ). ಇನ್ನೊಂದು ಕಡೆ ಪತ್ರಕರ್ತನಾದ ಕೂಡಲೆ ಅವ್ಯಕ್ತವಾಗಿ ದೊರಕುವ 'ಪ್ರೆಸ್ ಅಧಿಕಾರ'. ಶಾಸಕರು, ಸೆಲೆಬ್ರಿಟಿಗಳ ಒಳ-ಹೊರಗಿನ ಗುಸು ಗುಸು, ಅಧಿಕಾರ ವಲಯದೊಂದಿಗೆ ಸದಾ ಸ್ನೇಹ ಸಂಪರ್ಕ, ಬೆನಿಫಿಟ್ಟುಗಳು. ಪೋಲೀಸರದೂ ಹೀಗೇ ಅಲ್ಲವೇ. ಮೇಲಿನವರ ಬೂಟು ಒರೆಸುತ್ತಲೇ ಸಾರ್ವಜನಿಕ ವಲಯದಲ್ಲಿ ತಾವೆಂದರೆ ಭಯ, ಹಣ, ಹೆಣ್ಣು ಇತ್ಯಾದಿ. ಇರಲಿ,

ಸರ್ ಕೆಳಮಟ್ಟದ ವರದಿಗಾರನಿಂದ ಪತ್ರಿಕೆಯ ಮುಖ್ಯಸ್ಥ ಹಂತದವರೆಗೆ ಏರಿರುವುದರಿಂದ ಎಲ್ಲವನ್ನೂ ನಿರ್ಲಿಪ್ತರಾಗಿ ನೋಡುವ ಅವಕಾಶ ಒದಗಿದೆ. ಆರಂಭದಿಂದಲೂ ಘನತೆಯಿಂದ ನಡೆದುಕೊಂಡಿರುವುದು ತಿಳಿಯುತ್ತದೆ. ಬಹುಶಃ ಅದೇ ಅವರು ಆ ಮಟ್ಟಕ್ಕೆ ಏರಲು ಸಾಧ್ಯವಾಗಿರಬಹುದು. ನಿವೃತ್ತಿ ಹೊಂದುವವರೆಗೂ ಸಿಂಗಲ್-ಬಿಹೆಚ್ಕೆ ಮನೆಯಲ್ಲಿ ಕುಟುಂಬ ಸಮೇತ ಇದ್ದರು ಎಂದರೆ ಅವರ ಪಾರದರ್ಶಕತೆಯನ್ನು ಊಹಿಸಬಹುದಾಗಿದೆ. ಕೆಲಸಕ್ಕೆ ಸೇರಿದ ಹದಿನೈದು ದಿವಸಕ್ಕೆ, ಹುಟ್ಟಿದ ದಿನದಂದೇ ಮಗ ತೀರಿಕೊಂಡದ್ದು, ಎರಡು ದಿವಸಗಳ ನಂತರ ಇವರಿಗೆ ಹೋಗಿ ಮಡದಿ ನೋಡಲು ಸಾಧ್ಯವಾಗಿದ್ದು ಮುಂತಾಗಿ ವೈಯುಕ್ತಿಕ ಕಷ್ಟ ಸುಖ ದುಃಖಗಳನ್ನು ವೈಭವೀಕರಣವಿಲ್ಲದೇ ಹೇಳಿಕೊಂಡಿದ್ದಾರೆ.

ಮುಖ್ಯವಾಗಿ ಒಂದು ಪತ್ರಿಕೆ ಹೇಗೆ ನಡೆಯುತ್ತದೆ, ಅಲ್ಲಿ ಏನೆಲ್ಲ ಜರುಗುತ್ತದೆ, ಅದನ್ನು ಹೇಗೆಲ್ಲ ನಿಭಾಯಿಸಲಾಗುತ್ತದೆ ಎಂಬಂತಹ ಆಸಕ್ತಿಕರ ಸಂಗತಿಗಳುಂಟು. ಅಂತೆಯೇ 70-80sನ ಜನಜೀವನ, ಬೆಂಗಳೂರಿನ ಬೀದಿಗಳು, ಬಸ್ಸುಗಳು, ಆಗಿನ ಸಂಬಳ, ಬಾಡಿಗೆ, ಖರ್ಚುಗಳು, ಆಗಿನ ತಂತ್ರಜ್ಞಾನ, ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳ ವಿವರಗಳು ಬಹಳ ಆಸಕ್ತಿದಾಯಕ. ಆಗಿನ ಟೆಲಿಪ್ರಿಂಟರ್, ಫ್ಯಾಕ್ಸ್, ಫೋಟೋಗಳನ್ನು ಬಸ್ಸಿನಲ್ಲಿಟ್ಟು ಕಳಿಸುವುದು, ಆಗಿನ ರೌಡಿಗಳು, ಅಪರಾಧಗಳು.. ಇವು ಕೌತುಕವನ್ನು ತಣಿಸುತ್ತವೆ. ನನಗನ್ಸುತ್ತೆ ಪ್ರತಿಯೊಬ್ಬ ಹಿರಿಯ ಪತ್ರಕರ್ತನೂ ನಡೆದಾಡುವ ಆರ್ಕೈವ್ ಲೈಬ್ರರಿ. ಸುಮ್ಮನೇ ಮಾತಾಡಿಸಿದರೆ ಹಳೆಯದೊಂದು ಘಟನೆ ನೈಜವಾಗಿ ನಮ್ಮೆದುರು ಬಿತ್ತರವಾಗುತ್ತದೆ. ಎಲ್ಲಾ ಹಿರಿಯ ಪತ್ರಕರ್ತರೂ ತಮ್ಮದೊಂದು ಇಂಥದೊಂದು ದಾಖಲೀಕರಣ ಮಾಡಬೇಕು.

ಸಹೋದ್ಯೋಗಿಯೊಬ್ಬರು ಕೆಲಸಕ್ಕೆ ಸೇರಿದ ಕೂಡಲೇ ಪ್ರೆಗ್ನೆನ್ಸಿ ರಜೆ ತೆಗೆದುಕೊಳ್ಳುವ, ಆಗ ಇವರು ಕಠಿಣ ನಿರ್ಧಾರ ಪ್ರಕಟಿಸುವ ಒಂದು ಘಟನೆ ಬರುತ್ತದೆ. ಇದು ನಮ್ಮಲ್ಲಿಯೂ ಆಗುತ್ತದೆ. ಮೌಲ್ಯಗಳು ಏನೇ ಇದ್ದರೂ ಒಂದು ಪ್ರಾಜೆಕ್ಟು, ಅದಕ್ಕೆ ನಿಗಧಿಯಾಗುವ ಬಜ್ಜೆಟ್ಟು, ಒಬ್ಬರು ಬಿಟ್ಟರೆ ಬಜೆಟ್ಟಿಗೆ ತಕ್ಕನಾಗಿ ಇನ್ನೊಬ್ಬರನ್ನು ಸೇರಿಸಿಕೊಳ್ಳುವುದು ನಮ್ಮಲ್ಲಿಯೂ ಆಗುತ್ತದೆ. ಹೀಗಿರುವಾಗ ಸೇರಿಕೊಂಡ ಕೂಡಲೇ ಹನಿಮೂನ್ ರಜೆ ಬಾಣಂತನ ರಜೆ ಅಂತ ಹೋಗಿಬಿಟ್ಟರೆ ಉಳಿದ ಒಂಭತ್ತು ಜನರ ಬದುಕು ತಿಥಿಯಾಗಿರುತ್ತದೆ! ಇಂತಹ ರಜೆಯ ನಿರ್ಧಾರಗಳಲ್ಲಿ ಮುಂದೆ ಹುಡುಗಿಯರಿದ್ದರೂ ಹಿಂದೆ ಅವರ ಗಂಡ ಅತ್ತೆ-ಮಾವಗಳೂ ಇರುತ್ತರಾದ್ದರಿಂದ ಇದನ್ನೊಂದು ಒಟ್ಟು ಸಾಮಾಜಿಕ ಹೊಣೆಯನ್ನಾಗಿ ನೋಡಬೇಕು.

ಆಗಿನ ಕಾಲದಲ್ಲಿ ಪ್ರಜಾವಾಣಿ ಸೆಕ್ಯುಲರ್, ಎಡಪಂಥೀಯ ಎಂದೆಲ್ಲ ಜನಜನಿತವಾದ ಮಾತು. ಹೀಗಿದ್ದೂ ಅದೇ ಪತ್ರಿಕೆ ಮುಸ್ಲಿಮರ ಧಾರ್ಮಿಕ ಕುರುಡುತನದಿಂದ ದಾಳಿಗೊಳಗಾಗಿ ಗೋಲಿಬಾರ್ ಆಗುವ ಮಟ್ಟಕ್ಕೆ, ಹೆಣಗಳು ಉರುಳುವ ಮಟ್ಟಕ್ಕೆ ನೋವು ಅನುಭವಿಸಿರುವುದು ದುರಂತ! ಹೀಗಾಯ್ತು ಎಂದು ಪತ್ರಿಕೆ ತನ್ನ ಮೌಲ್ಯಗಳಲ್ಲಿ ರಾಜಿಯಾಗದೇ ಮುಂದುವರೆದಿರುವುದು ವಿಶೇಷ. ಮುಂದೆ ಇನ್ನೆರಡು ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ಯಾವುದೋ ದೇಶದಲ್ಲಿ ಯಾವುದೋ ಮಹಿಳೆ ಬೆತ್ತಲೆ ಮೈಮೇಲೆ ಉರ್ದುವಿನಲ್ಲಿ ಏನೊ ಬರೆಸಿಕೊಂಡಿದ್ದ ಫೋಟೋವನ್ನು ಪ್ರಕಟಿಸಿದ್ದಕ್ಕೆ ಮುಸ್ಲಿಂ ಧಾರ್ಮಿಕರು ಕಛೇರಿಗೆ ನುಗ್ಗಿದ್ದೂ, ಅಂಕಣಕಾರರೊಬ್ಬರು ವಿವೇಕಾನಂದರ ಮೇಲೆ ಕೀಳಾಗಿ ಬರೆದ ಲೇಖನದ ವಿರುದ್ಧ ಶತಾವಧಾನಿ ಗಣೇಶ್ ಮುಂತಾದವರು ಕಛೇರಿ ನುಗ್ಗಿದ್ದೂ, ಪತ್ರಿಕೆ ಪ್ರಾಯಶ್ಚಿತವಾಗಿ ವಿವೇಕಾನಂದರ ಸಂದೇಶಗಳ ಅಂಕಣ ಆರಂಭಿಸಿದ್ದೂ ಮುಂತಾಗಿ ಬರೆದಿದ್ದಾರೆ. ಪತ್ರಿಕೆಗಳು ಆಯಾ ಧರ್ಮಗಳು ಹೇರುವ ಒತ್ತಡದ ಮೇರೆಗೆ ಒಂದೊಂದು ಧರ್ಮಕ್ಕೆ ಒಂದೊಂದು ಮಾನದಂಡ ಇಟ್ಟುಕೊಂಡಿರುವ ವಿಪರ್ಯಾಸದ ಬಗ್ಗೆ ಸರ್ ಪ್ರಾಮಾಣಿಕವಾಗಿ ಬರೆದಿದ್ದಾರೆ.

ಸರ್ ಬೆಳಗಾವಿಯಲ್ಲಿ ಪತ್ರಕರ್ತರಾಗಿದ್ದರಿಂದ ನಮಗೆ ಅಲ್ಲಿನ ಕನ್ನಡ-ಮರಾಠಿ ರಾಜಕೀಯದ ನೈಜ ಸ್ಥಿತಿಯ ವಿವರಣೆಗಳು ಸಿಗುತ್ತವೆ. ಅಲ್ಲಿನ ವಾಸ್ತವ ಬೇರೆಯೇ ಇದೆ ಎಂದು ನಮ್ಮ ಕಣ್ಣು ತೆರೆಸುತ್ತದೆ. ಭಾರತೀಯ ಪತ್ರಿಕೆಗಳ ವಿನ್ಯಾಸವನ್ನು ವಿದೇಶಿಯರು ಮಾಡುತ್ತಾರೆ ಎಂಬುದು ಅಚ್ಛರಿಯ ಸಂಗತಿ. ಬಹುತೇಕ ಪತ್ರಿಕೆಗಳು ಲಾಭಕ್ಕಾಗಿ ಮೌಲ್ಯಗಳೊಂದಿಗೆ ರಾಜಿಯಾಗಿರುವುದನ್ನೂ ಒಪ್ಪಿಕೊಳ್ಳುತ್ತಾರೆ. ಈ ಭಾಗ ಆಸಕ್ತಿದಾಯವಾಗಿದೆ, ಓದಿ. ಕೆಲವೇ ವರ್ಷಗಳ ಹಿಂದೆ, ಮುಖ್ಯಮಂತ್ರಿ ಕಛೇರಿಯಿಂದ ಸಿಹಿ ತಿನಿಸು, ದುಡ್ಡು, ಚಿನ್ನಗಳಿದ್ದ ಬಾಕ್ಸುಗಳು ಪತ್ರಕರ್ತರ ಕಛೇರಿ ತಲುಪಿದ್ದು ನೆನಪಿದೆಯಲ್ಲವೇ, ಅದೂ ಇಲ್ಲಿ ಪ್ರಸ್ತಾಪಗೊಂಡಿದೆ.

ನಾವೆಲ್ಲ ಮನಸಿನಲ್ಲಿ ಅಂದುಕೊಳ್ಳುತ್ತಿದ್ದ ಒಂದು ಅಭಿಪ್ರಾಯಕ್ಕೆ ಲೇಖಕರು ಇಲ್ಲಿ ಅಧಿಕೃತ ಮುದ್ರೆ ಒತ್ತಿದ್ದಾರೆ. ಏನಂದರೆ ಪ್ರಜಾವಾಣಿ ಎಡಪಂಥೀಯ ಎಂಬ ಲೇಬಲ್ ಅಂಟಿಸಿಕೊಂಡು, ಕ್ರಮೇಣ ಓದುಗರು ವಿಮುಖರಾಗಿ, ಪ್ರಸಾರದಲ್ಲಿ ನಂಬರ್ ಒನ್ ಸ್ಥಾನದಿಂದ ಕೆಳಗೆ ಇಳಿಯಬೇಕಾಯಿತೆಂದೂ, ಅದನ್ನು ಸರಿದೂಗಿಸಲು ಮುಖ್ಯ ಸಂಪಾದಕರಾದ ಶಾಂತಕುಮಾರ್ ಪ್ರಜ್ಞಾಪೂರ್ವಕವಾಗಿ ಪತ್ರಿಕೆಗೆ ಅಂಟಿರುವ ಈ ಲೇಬಲ್ ಕಳಚುವ ಪ್ರಯತ್ನ ಮಾಡಿರುವುದಾಗಿಯೂ ತಿಳಿಸಿದ್ದಾರೆ. ಸಹಜವಾಗಿ 70s-80sನ ರಾಜಕೀಯ ಸ್ಥಿತಿಗತಿಗನುಗುಣವಾಗಿ ಪತ್ರಿಕೆ ಒಂದು ದಿಕ್ಕಿಗೆ ಜಾರಿದ್ದಿರಬಹುದು. ಆದ್ದರಿಂದ ಆ ದಿಕ್ಕಿನಲ್ಲಿದ್ದವರು ಇದು ನಮ್ಮ ಪತ್ರಿಕೆ ಎಂದು ಆತುಕೊಂಡಿದ್ದಿರಬಹುದು. ಬದಲಾದ ಸನ್ನಿವೇಶಗಳಿಂದಾಗಿ ಹಳಬರಿಗೆ ಹೊಸ ನಿರ್ಧಾರಗಳು ಕಲ್ಚರಲ್ ಶಾಕ್ ಆಗಿದ್ದಿರಬಹುದು. 1999ರಲ್ಲಿ ವಿಜಯಕರ್ನಾಟಕದ ಆಗಮನದಿಂದ ಇನ್ನೊಂದು ಪಂಥಕ್ಕೆ ವೇದಿಕೆ ಸಿಕ್ಕಿತು ಎಂದು ಭೈರಪ್ಪನವರೇ ಹೇಳಿಕೊಂಡಿರುವುದನ್ನು ಲೇಖಕರು ಸ್ಮರಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಪತ್ರಿಕೆ ಈಗ ಎಲ್ಲಾ ಬಗೆಯ ಧ್ವನಿಗಳಿಗೂ ಒಂದು ಕಾಮನ್ ಪ್ಲಾಟ್ ಫಾರ್ಮಾಗಿರಲು ನಿರ್ಧರಿಸಿದಂತಿದೆ. ನಾನು ಗಮನಿಸಿದಂತೆ ಈಗ ವಿಜಯಕರ್ನಾಟಕವೂ ಹಾಗೆ ಪಂಥಗಳ ಲೇಬಲ್ ಇಲ್ಲದೇ ಪತ್ರಿಕೋದ್ಯಮವನ್ನು ನೈತಿಕ ಲಾಭೋಧ್ಯಮವೆಂದು ಸ್ವೀಕರಿಸಿದಂತಿದೆ.

ಸಾಮಾನ್ಯವಾಗಿ ಯಾವುದೇ ಪುಸ್ತಕದ ಹಣೆಬರಹ ನಿರ್ಧಾರವಾಗುವುದು ಅದು ಕಡೆಯ ಪುಟಗಳಲ್ಲಿ ಎಷ್ಟು ಮಾತ್ರ ಓದುಗರನ್ನು ಹಿಡಿದು ನಿಲ್ಲಿಸುತ್ತದೆ ಎಂದು. ನನಗೆ ಈ ಪುಸ್ತಕ ಆ ದೃಷ್ಟಿಯಿಂದ ಪ್ರಜ್ಞಾಪೂರ್ವಕವಾಗಿ ಗೆದ್ದಿದೆ ಅನಿಸಿತು. ಮುಖ್ಯವಾದ ಚರ್ಚೆಗಳು ಅಂತ್ಯದಲ್ಲಿಯೇ ಇರುವವು. ಪತ್ರಿಕೆಗಳ ಪಂಥಗಳ ಒಲವು, ಅಲ್ಲಿನ ಬ್ರಷ್ಟಾಚಾರ ಮುಂತಾಗಿ.

ಕಡೆಯದಾಗಿ-

ಪತ್ರಕರ್ತರಾಗಿರುವ ಇನ್ನೊಂದು ಅಡ್ವಾಂಟೇಜ್ ಏನಂದರೆ ಅವರಿಗೆ ಯಾರ ಬಗ್ಗೆಯಾದರೂ ಹೇಳುವಾಗ ಅವರ ಒಳ್ಳೆಯದು ಕೆಟ್ಟದು ಎಲ್ಲವನ್ನೂ ಹಂಗಂಗೇ ತೆರೆದಿಡುವ ಸ್ವಾತಂತ್ರ್ಯ ಮತ್ತು ಮಾನಸಿಕ ತರಬೇತಿ ವೃತ್ತಿಸಹಜವಾಗಿ ಬಂದುಬಿಟ್ಟಿರುತ್ತದೆ. ಆದ್ದರಿಂದ ಇಲ್ಲಿ ಲೇಖಕರು ಅನೇಕರನ್ನು ಗೆಳೆಯರು ಆಪ್ತರು ಅನ್ನುತ್ತಲೇ ಅವರಿಂದಾಗಿರಬಹುದಾದ ಇರುಸು ಮುರುಸು ಪ್ರಕರಣಗಳನ್ನು ದಾಖಲಿಸಿದ್ದಾರೆ. ಅನೇಕರ ಬ್ರಷ್ಟ ಮನೋಸ್ಥಿತಿಯನ್ನು, ಕೆಲವರ ಸಣ್ಣತನಗಳನ್ನು, ವೃತ್ತಿ ವೈಷಮ್ಯಗಳನ್ನು ದಾಖಲಿಸಿದ್ದಾರೆ. ಇಲ್ಲಿ ಎರಡು ಅಂಶಗಳನ್ನು ಹೇಳಬೇಕು. ಒಂದು- ಹೀಗೆ ಮಾಡಿದಾಗ ಲೇಖಕ ಓದುಗನನ್ನು ತಾನಾಗೇ ವಾದ ಪ್ರತಿವಾದ ಆಲಿಸಲು ಆಹ್ವಾನಿಸಿದಂತಾಗುತ್ತದೆ. ಓದುಗ ವಾದವನ್ನು ಸಂಯಮದಿಂದ ಓದಿ ಮನಃಪೂರ್ವಕವಾಗಿ ಸ್ವೀಕರಿಸುತ್ತಾನೆ. ಆದರೆ ಪ್ರತಿವಾದ ಆಲಿಸದೇ ನಿರ್ಧಾರಕ್ಕೆ ಬರಲಾರ. ಅದೊಂದು ಆ ಕಡೆ ಏನಾಗಿತ್ತು ಎಂಬ ಅಪೂರ್ಣ ಕುತೂಹಲ ಉಳಿದು ಬಿಡುತ್ತದೆ. ಎರಡನೆಯದು ಘಟನೆಗಳನ್ನು ಅನಾಮಧೇಯವಾಗಿ ಪ್ರಸ್ತಾಪಿಸಿದಾಗ ಈ ವಲಯದ ಸುತ್ತಮುತ್ತಲೇ ಇದ್ದವರ ಹೊರತಾಗಿ ನಮ್ಮಂತ ಬಹುದೂರ ಇರುವವರಿಗೆ ಇದ್ಯಾರು ಇದೇನು ಎಂಬ ಲವಲೇಶದ ಮಾಹಿತಿಯೂ ಇರದೆ ಅತೃಪ್ತ ಕುತೂಹಲ ಉಳಿದಿಬಿಡುತ್ತದೆ. ಈ ಎರಡು ಅಂಶಗಳು ಪುಸ್ತಕಕ್ಕೆ ಲಾಭ ನಷ್ಟ ಎರಡೂ. ಲಾಭ ಏನೆಂದರೆ ಪುಸ್ತಕ ಎತ್ತಿಕೊಂಡು ಓದುವ ಹಂಬಲ ಹುಟ್ಟಿಸುತ್ತದೆ. ಓದಿಸಿಕೊಳ್ಳುತ್ತದೆ. ನಷ್ಟ ಏನಂದರೆ ಕಡೆಯಲ್ಲಿ ಸ್ವಲ್ಪ ಮಟ್ಟಿಗೆ ಅತೃಪ್ತಿ ಉಳಿಸುತ್ತದೆ.

ಏನಿದ್ದರೂ ಕನ್ನಡದ ಪ್ರಮುಖ ಪತ್ರಿಕೆಯೊಂದರಲ್ಲಿ ಸುದೀರ್ಘ 36 ವರುಷ ದುಡಿದ, ನೆಲದಿಂದ ಮುಗಿಲಿಗೇರಿದ ಒಂದು ವೃತ್ತಿ ಪಯಣ, ಪತ್ರಿಕೆಯ ಪಯಣ, ಕರ್ನಾಟಕದ ದಾಖಲೀಕರಣ ದೃಷ್ಟಿಯಿಂದ ಇದೊಂದು ಮುಖ್ಯ ಪುಸ್ತಕ.

MORE FEATURES

ವಾರದ ಲೇಖಕ ವಿಶೇಷದಲ್ಲಿ ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚಾರ್ಯ

29-09-2024 ಬೆಂಗಳೂರು

ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಕವಿ, ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚ...

ಕೃತಕ ಬುದ್ಧಿಮತ್ತೆ ಪತ್ರಿಕಾಲೋಕ ಪ್ರವೇಶ ಮಾಡಿದೆ...

29-09-2024 ಬೆಂಗಳೂರು

“ದೇಶದ ಮಾಧ್ಯಮ ಕ್ಷೇತ್ರ ಇಂದು ವಿಸ್ತ್ರತವಾಗಿ ಬೆಳವಣಿಗೆ ಕಂಡಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರದ ಬೆಳವಣಿಗೆ...

ಪ್ರತಿಯೊಬ್ಬನಿಗೂ ತನ್ನ ನಿರ್ಧಾರವೇ ಸರಿ ಕಾಣುವುದು ಅವನ ತಪ್ಪಲ್ಲ

29-09-2024 ಬೆಂಗಳೂರು

"ಜೀವನವನ್ನೇ ನರಕ ಮಾಡಿದ ತಂದೆಗೆ ತನ್ನ ಕಿಡ್ನಿ ಕೊಡದಿರಲು ಮಗನಿಗೆ ಅವನದೇ ಆದ ಕಾರಣಗಳು ! ಕಿಡ್ನಿ ಬಯಸಿದವ ,ಅದನ್ನ...