"'ಬುದ್ಧಯಾನ' ಕಾದಂಬರಿಯು ಬುದ್ಧನನ್ನು ನೆಲದ ವಿವೇಕದಿಂದ ಚಿತ್ರಿಸುತ್ತದೆ. ಆತನನ್ನು ಅವತಾರ ಪುರುಷನೆಂಬ ಪೌರಾಣಿಕ ಚೌಕಟ್ಟಿನಿಂದ ಹೊರತಂದು, ಸಾಮಾನ್ಯ ಮನುಷ್ಯನೊಬ್ಬನ ಜ್ಞಾನದಾಹದ ಸಂಕೇತದಂತೆ ಚಿತ್ರಿಸುವ ಉಮೇದನ್ನು ಲೇಖಕರು ಎಲ್ಲ ಹಂತದಲ್ಲಿಯೂ ಪ್ರಕಟಿಸಿದ್ದಾರೆ," ಎನ್ನುತ್ತಾರೆ ಡಾ.ಎಚ್.ಎಸ್. ಸತ್ಯನಾರಾಯಣ. ಅವರು ಕಂನಾಡಿಗಾ ನಾರಾಯಣ ಅವರ 'ಬುದ್ಧಯಾನ' ಕಾದಂಬರಿ ಕುರಿತು ಬರೆದ ವಿಮರ್ಶೆ.
ಕಂನಾಡಿಗಾ ನಾರಾಯಣ ಅವರ 'ಬುದ್ಧಯಾನ' ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಿತ್ತರಗೊಂಡು ಅಪಾರವಾದ ಓದುಗ ಪ್ರೀತಿಯನ್ನು ಸಂಪಾದಿಸಿದ ಕಾದಂಬರಿ. ಇದೀಗ ಕೃತಿ ರೂಪದಲ್ಲಿ ಓದುಗರ ಕೈ ಸೇರುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಈ ಸಂತೋಷಕ್ಕೆ ಎರಡು ಮುಖ್ಯ ಕಾರಣಗಳೆಂದರೆ; ಒಂದು,ಕಂನಾಡಿಗಾ ನಾರಾಯಣ ಅವರು 'ಬುದ್ಧ'ನ ಕಥೆಯನ್ನು ತಮ್ಮದೇ ವಿಶಿಷ್ಟ ಗದ್ಯಶೈಲಿಯಲ್ಲಿ ಸೊಗಸಾಗಿ ನಿರೂಪಿಸಿರುವುದು. ಮತ್ತೊಂದು ಕನ್ನಡದಲ್ಲಿ ಬುದ್ಧನ ಬಗೆಗಿನ ಕಥನ ತೀರಾ ಕಡಿಮೆಯಿರುವ ಕೊರತೆಯನ್ನು ಈ ಮೂಲಕ ಕೊಂಚಮಟ್ಟಿಗಾದರೂ ನೀಗಿಸಲು ಯತ್ನಿಸಿರುವುದು. ಈ ಕಾರಣಗಳಿಗಾಗಿ ಮೊದಲಿಗೆ ಲೇಖಕರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಮನುಕುಲದ ಮಹಾವ್ಯಕ್ತಿಗಳಲ್ಲಿ ಗೌತಮಬುದ್ಧನ ಸ್ಥಾನ ಅತ್ಯಂತ ಎತ್ತರದ್ದು, ಹಿರಿದಾದುದು. ಅವನ ಉನ್ನತ ವ್ಯಕ್ತಿತ್ವವು ಯಾವ ಹಂತಕ್ಕೇರಿದೆಯೆಂದರೆ ಆತ ಅವತಾರ ಪುರುಷನೆಂದು ಬಲವಾಗಿ ನಂಬುವಷ್ಟರಮಟ್ಟಿಗೆ! ಈಗಲೂ ಅನೇಕರಲ್ಲಿ ದಶಾವತಾರಗಳಲ್ಲಿ ಬುದ್ಧಾವತಾರವೂ ಒಂದೆಂಬ ನಂಬುಗೆ ಬಲವಾಗಿ ನೆಲೆಯೂರಿದೆ. ಆದರೂ ಬುದ್ಧನನ್ನು ಒಳಗೊಂಡು ರಚಿತವಾದ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ತೀರಾ ಕಡಿಮೆ. ಲೆಕ್ಕಮಾಡಿದರೆ ಸುಮಾರು ಮುವತ್ತೈದು ಪ್ರಕಟಣೆಗಳ ಶೀರ್ಷಿಕೆಯನ್ನು ಪಟ್ಟಿ ಮಾಡಬಹುದೇ ಹೊರತು ಓದುಗರ ನೆನಪಿನಲ್ಲುಳಿಯುವ ಗಟ್ಟಿ ಕೃತಿಗಳು ಕೆಲವು ಮಾತ್ರ! ಅದರಲ್ಲಿಯೂ ಬುದ್ಧನಿಗೆ ಸಂಬಂಧಿಸಿದ ವೈಚಾರಿಕ ಕೃತಿಗಳೂ, ಅನುವಾದಗಳೂ ಪಾಲು ಪಡೆದಿವೆ. ಬುದ್ಧನ ಜೀವನದ ಪ್ರಸಂಗಗಳನ್ನು ಆಧರಿಸಿದ ಕೆಲವು ಕವಿತೆಗಳು, ಸಣ್ಣಕತೆಗಳು ಮತ್ತು ನಾಟಕಗಳು ನವೋದಯ ಸಂದರ್ಭದಲ್ಲಿ ಪ್ರಕಟವಾದವು. ತೊಂಬತ್ತರ ದಶಕದಿಂದೀಚೆಗೆ ಬುದ್ಧನನ್ನು ಕುರಿತ ಮಹಾಕಾವ್ಯಗಳು ಪ್ರಕಟವಾಗಿವೆ. ಮಹಾವ್ಯಕ್ತಿತ್ವದ, ಸಮೃದ್ಧ ಜೀವನಾನುಭವದ, ತಿಳಿವಳಿಕೆಯ ವ್ಯಕ್ತಿತ್ವವನ್ನು ಗಮನಿಸಿದಾಗ ಕನ್ನಡದಲ್ಲಿ ಪ್ರಕಟವಾದ ಪುಸ್ತಕಗಳು ಕಡಿಮೆಯೇ. ಕನ್ನಡದಲ್ಲಿ ಬುದ್ಧನ ಬಗ್ಗೆ ಮೊಟ್ಟಮೊದಲು ಕೃತಿ ಪ್ರಕಟಿಸಿದ ಕೀರ್ತಿ ಬಿದಿರೆ ಅಶ್ವತ್ಥನಾರಾಯಣಶಾಸ್ತ್ರೀಯವರಿಗೆ ಸಲ್ಲುತ್ತದೆ. ಅವರು ೧೯೦೭ರಲ್ಲಿ 'ಬೌದ್ಧಾವತಾರ' ಎಂಬ ಕೃತಿಯನ್ನು ಹೊರತಂದಿದ್ದು ಐತಿಹಾಸಿಕವಾಗಿ ಮೊದಲ ದಾಖಲೆಯಾಗಿದೆ. ೧೯೩೮ರಲ್ಲಿ ಎಸ್. ನರಸಿಂಹಶಾಸ್ತ್ರಿಯವರ 'ಬುದ್ಧ ಗೀತಾವಳಿ' ಎಂಬ ಕೃತಿ ಪ್ರಕಟವಾಯಿತು. ಬುದ್ಧನ ಬೋಧನೆಯ ಸಾರವನ್ನು ಗೀತೆಯ ರೂಪದಲ್ಲಿ ಕಾಣಿಸಿದ ಕೃತಿಯಿದು. ರಾಜರತ್ನಂ ಅವರು ಬುದ್ಧನ ವಿಷಯವನ್ನು ಕುರಿತ ಸುಮಾರು ಮೂವತ್ತೈದು ಕೃತಿಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಅನುವಾದದ ಪಾಲು ಹೆಚ್ಚು. ೧೯೫೬ರಲ್ಲಿ ಕಡವ ಶಂಭುವರ್ಮರ 'ಸೌಂದರಾನಂದ', ೧೯೭೪ರಲ್ಲಿ ಪ್ರಕಟವಾದ ಎಸ್. ವಿ. ಪರಮೇಶ್ವರಭಟ್ಟರ 'ಕನ್ನಡ ಬುದ್ಧ ಚರಿತೆ', ೧೯೯೯ರಲ್ಲಿ ಎಲ್. ಬಸವರಾಜು ಅವರ 'ಬುದ್ಧಚರಿತೆ' ಗಮನಾರ್ಹವಾದ ಕೃತಿಗಳು. ಗೋವಿಂದ ಪೈ ಅವರ ವೈಶಾಖಿ, ಶಿವರಾಮ ಕಾರಂತರ 'ಕಿಸಾಗೋತಮಿ', ಮಾಸ್ತಿಯವರ 'ಯಶೋಧರಾ' ಕುವೆಂಪು ಅವರ 'ಮಹಾರಾತ್ರಿ' ಹೆಚ್ಚು ಚರ್ಚೆಗೊಳಗಾದ ನಾಟಕಗಳು. ಇದರ ನಡುವೆ ಹಿರಿಯ ವಿದ್ವಾಂಸರಾದ ಆರ್.ಸಿ. ಹಿರೇಮಠ ಅವರು 'ತಥಾಗತ ಚಾರಿತ್ರ'ವನ್ನು ಬುದ್ಧನನ್ನು ಕುರಿತ ಮಹಾಕಾವ್ಯವೆಂದು ಬಣ್ಣಿಸಿಕೊಂಡರು. ಚಿಕ್ಕಮಗಳೂರಿನ ಕಾಶಿ ವಿಶ್ವನಾಥಶೆಟ್ಟರು ಆರು ಸಾವಿರ ಪದ್ಯಗಳ, ಇಪ್ಪತ್ತನಾಲ್ಕು ಸಾಲುಗಳ ಮಹಾಕಾವ್ಯ 'ಬುದ್ಧಚರಿತ ಮಹಾಮಧು' ಮತ್ತೊಂದು ದಾಖಲೆಯಾಯಿತು. ಹಿರಿಯರಾದ ಬಿ. ಪುಟ್ಟಸ್ವಾಮಯ್ಯನವರ 'ಗೌತಮಬುದ್ಧ' ಮತ್ತು ಪ್ರಭುಶಂಕರರ 'ಅಂಗುಲಿಮಾಲಾ', 'ಆಮ್ರಪಾಲಿ' 'ಸುಜಾತ ಮತ್ತು ಗಾಳಿಯೆಂಬ ಕುದುರೆಯೇರಿ' ಪ್ರಮುಖ ಕೃತಿಗಳೆನಿಸಿವೆ. ಲತಾ ರಾಜಶೇಖರ ಅವರು ಬರೆದಿರುವ ಮಹಾಕಾವ್ಯಗಳಲ್ಲಿ ಬುದ್ಧನನ್ನು ಕುರಿತ ಮಹಾಕಾವ್ಯವೂ ಇದೆ. ತೀರಾ ಇತ್ತೀಚೆಗೆ ಹೆಚ್ಚು ಚರ್ಚೆಗೊಳಗಾದ ಹಿರಿಯಕವಿ ಎಚ್.ಎಸ್. ವೆಂಕಟೇಶಮೂರ್ತಿಯವರ 'ಬುದ್ಧಚರಣ' ಮಹಾಕಾವ್ಯ ಓದುಗರ ಗಮನ ಸೆಳೆದು ಮೂರ್ನಾಲ್ಕು ಮರುಮುದ್ರಣಗಳ ಭಾಗ್ಯವನೂ ಕಂಡಿತು. ನನ್ನ ಗಮನಕ್ಕೆ ಬಾರದಿರುವ ಇನ್ನು ಕೆಲವು ಕೃತಿಗಳಿರಬಹುದು. ಒಟ್ಟಿನಲ್ಲಿ ಈ ಪಕ್ಷಿನೋಟವನ್ನು ಗಮನಿಸಿದರೆ ಬುದ್ಧನನ್ನು ಕುರಿತ ಸಾಹಿತ್ಯ ಕನ್ನಡದಲ್ಲಿ ಪ್ರಕಟವಾಗಿರುವುದು ಸ್ವಲ್ಪವೇ. ಹೀಗಾಗಿ ಕಂನಾಡಿಗಾ ಅವರ 'ಬುದ್ಧಯಾನ'ದ ಸೇರ್ಪಡೆ ಕನ್ನಡ ಸಾಹಿತ್ಯಕ್ಕೆ ಸಲ್ಲುತ್ತಿರುವ ಬೆಲೆಯುಳ್ಳ ಕೊಡುಗೆ.
ಕಂನಾಡಿಗಾ ಅವರ ಈ ಕಿರುಕಾದಂಬರಿಯು ತನ್ನ ಆಕರ್ಷಕವಾದ ಗದ್ಯಶೈಲಿಯಿಂದ ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಇವರ ಗದ್ಯಕ್ಕೊಂದು ಹದ ಸಿದ್ಧಿಸಿದೆ. ಅದು ಪಂಡಿತರಿಂದ ಹಿಡಿದು ಪಾಮರರವರೆಗೆ ಎಲ್ಲ ವರ್ಗದ ಓದುಗರ ಹೃದಯ ಗೆಲ್ಲುವಷ್ಟು ಶಕ್ತವಾದ ಸಿದ್ಧಿಯಾಗಿದೆ. ತಾವು ಆಯ್ದುಕೊಂಡ ಯಾವುದೇ ವಸ್ತುವನ್ನು ಸರಾಗವಾಗಿ ಕಥೆಯಾಗಿಸಬಲ್ಲ ಕೈಗುಣ ಕಂನಾಡಿಗಾ ಅವರದು. ಇದಕ್ಕೆ ಉದಾಹರಣೆಯಾಗಿ ಇವರು ಬರೆದ 'ದ್ವಾಪರ' ಮತ್ತು 'ಕಾಂಡ' ಎಂಬ ಮಹಾಭಾರತ ಮತ್ತು ರಾಮಾಯಣದ ವಸ್ತು ನಿರೂಪಣೆಯ ಕೃತಿಗಳು ಸಾಧಿಸಿದ ಯಶಸ್ಸು ನಮ್ಮ ಮುಂದಿದೆ. ಜೊತೆಗೆ ಇವರು ಬರೆದ 'ಮಹಾವೃಕ್ಷ' ಮತ್ತು ನೂರಾರು ಸಣ್ಣಕಥೆಗಳೂ ನಮ್ಮೆದುರಿಗಿವೆ.
ಈಗ ಗೌತಮಬುದ್ಧನ ಸರದಿ. ಅನೇಕ ಭಾರತೀಯ ಭಾಷೆಗಳಲ್ಲಿ ಪ್ರಕಟವಾಗಿರುವ ಬುದ್ಧ ಸಾಹಿತ್ಯ, ಸಂಶೋಧನೆಗಳು ಮತ್ತು ಬುದ್ಧನನ್ನು ಕುರಿತ ಜನಮಾನಸದ ನಂಬಿಕೆಗಳ ಬೆಟ್ಟದಷ್ಟು ಆಕರಗಳ ಒಟ್ಟಿಲು ಬುದ್ಧನನ್ನು ಕುರಿತು ಬರೆಯ ಹೊರಡುವ ಯಾವುದೇ ಲೇಖಕರ ಎದುರು ಸವಾಲು ಎಸೆಯುವಂತೆ ನಿಂತಿರುತ್ತವೆ. ಅವುಗಳನ್ನು ಪರಾಮರ್ಶಿಸಿಯೋ ಅಥವಾ ಬದಿಗೆ ಸರಿಸಿಯೋ ತನ್ನ ಕಥೆಯನ್ನು ರಚಿಸುವ ಸ್ವಾತಂತ್ರ್ಯವಂತೂ ಇದ್ದೇ ಇರುತ್ತದೆ. ಕಂನಾಡಿಗಾ ನಾರಾಯಣ ಅವರ ಮನದಲ್ಲಿ ಬುದ್ಧ ಬಹುಕಾಲದಿಂದಲೂ ನೆಲೆಯೂರಿದ್ದಾನೆ. ಬುದ್ಧನ ಕುರಿತ ಲಭ್ಯ ಪ್ರಕಟಿತ ಕೃತಿಗಳ ವಿಸ್ತಾರವಾದ ಆವಗಾಹನೆಯ ಫಲಿತವಾಗಿ ಮನದಲ್ಲಿ ಬೇರೂರಿದ ಬುದ್ಧನ ಕಥೆಗೆ ಕೃತಿರೂಪ ಕೊಡಲು ಮಾಡಿರುವ ಪ್ರಯತ್ನವೇ ನಮ್ಮ ಮುಂದಿರುವ 'ಬುದ್ಧಯಾನ' ಕೃತಿಯಾಗಿದೆ.
'ಬುದ್ಧಯಾನ' ಕಾದಂಬರಿಯು ಬುದ್ಧನನ್ನು ನೆಲದ ವಿವೇಕದಿಂದ ಚಿತ್ರಿಸುತ್ತದೆ. ಆತನನ್ನು ಅವತಾರ ಪುರುಷನೆಂಬ ಪೌರಾಣಿಕ ಚೌಕಟ್ಟಿನಿಂದ ಹೊರತಂದು, ಸಾಮಾನ್ಯ ಮನುಷ್ಯನೊಬ್ಬನ ಜ್ಞಾನದಾಹದ ಸಂಕೇತದಂತೆ ಚಿತ್ರಿಸುವ ಉಮೇದನ್ನು ಲೇಖಕರು ಎಲ್ಲ ಹಂತದಲ್ಲಿಯೂ ಪ್ರಕಟಿಸಿದ್ದಾರೆ. ಹುಟ್ಟಿದಾಗ ಅಸಿತ ಮುನಿಗಳು " ಇವನು ಮಹಾಜ್ಞಾನಿಯಾಗಿ ತನ್ನ ಅರಿವಿನ ಬೆಳಕಿನಿಂದ ಇಡೀ ಜಗತ್ತಿನ ಕತ್ತಲೆಯನ್ನು ತೊಳೆಯುತ್ತಾನೆ" ಎಂದು ಹೇಳುವುದರೊಂದಿಗೆ, ಮಗುವಿನ ಕಾಲಿಗೆರಗಿ, ಈತ ಜ್ಞಾನಹೊಂದಿ ಮಹಾಪುರುಷನಾಗುವ ಹೊತ್ತಿಗೆ ನಾನು ಬದುಕುಳಿದಿರುವುದಿಲ್ಲವಾದ್ದರಿಂದ ಈಗಲೇ ಪಾದಗಳಿಗೆರಗುತ್ತೇನೆ ಎನ್ನುತ್ತಾರೆ. ಇದು ಬುದ್ಧ ಕಾರಣಪುರುಷನೆಂಬುದನ್ನು ಸಂಕೇತಿಸುವಮಟ್ಟದ ಕಾಲಜ್ಞಾನಿಯ ನುಡಿಯಂತಿದೆಯೇ ಹೊರತು, ದಿವ್ಯಜ್ಞಾನಿಯ ಭವಿಷ್ಯದ್ವಾಣಿಯಂತೆ ಬಿಂಬಿತವಾಗಿಲ್ಲ. ಇದರ ಹೊರತಾಗಿ ಮನುಷ್ಯ ಪ್ರಯತ್ನದ ಫಲವಾಗಿ ಬುದ್ಧನ ಜ್ಞಾನಾಕಾಂಕ್ಷೆಯ ಪಯಣವಿದೆ. ಶುದ್ಧೋದನನಿಗೆ ಒಂದೆರಡು ಬಾರಿ ಆ ಗುರುಗಳ ಮಾತು ನೆನಪಾಗುವುದು ಕೂಡ ತುಂಬ ಸಹಜವಾಗಿದೆ. ಮಾಯಾದೇವಿಗೆ ಬೀಳುವ ಕನಸಿನಲ್ಲಿ ಬಿಳಿಯ ಆನೆಯೊಂದು ಅವಳನ್ನು ಹರಸಿ, ಗರ್ಭದಲ್ಲಿ ಸೇರುವುದನ್ನು ಮನೋವೈಜ್ಞಾನಿಕ ನೆಲೆಯಲ್ಲಿ ವಿಶ್ಲೇಷಿಸಿಕೊಂಡಾಗ, ಗರ್ಭಿಣಿಯರ ಬಯಕೆ ಮತ್ತು ಕನಸಿನ ಸಂಬಂಧಾಂತರಗಳ ಮೇಳೈಕೆ ಕೂಡ ಬುದ್ಧನ ಜನನಕ್ಕೊಂದು ಆವರಣ ರೂಪಿಸಿಕೊಳ್ಳುವ ಹತಾರವಾಗಿ ಕಾಣುತ್ತದೆ. ಬೆಳೆದಂತೆಲ್ಲಾ ಸಾಮಾನ್ಯತೆಯ ಪ್ರತಿರೂಪದಂತೆ ಭಾಸವಾಗುತ್ತಾ ವಿಕಾಸಗೊಳ್ಳುವ ಬುದ್ಧನ ವ್ಯಕ್ತಿತ್ವದಿಂದ ಮಾಯಾದೇವಿಯ ಕನಸು-ನನಸು ಮತ್ತು ಅಸಿತ ಮಹರ್ಷಿಗಳ ಭವಿಷ್ಯದ್ವಾಣಿಯ ಆವರಣ ಕಥಾ ಹಂದರಕ್ಕೊಂದು ಸೈದ್ಧಾಂತಿಕ ಚೌಕಟ್ಟನ್ನು ಸೃಷ್ಟಿಸಿಕೊಡುವಲ್ಲಿ ಸಫಲವಾಗುತ್ತವೆ. ಮಗುವನ್ನು ಹೆತ್ತು ತನ್ನ ಕರ್ತವ್ಯ ಮುಗಿಯಿತೆಂಬಂತೆ ಮಿಂಚಿನಂತೆ ನಿರ್ಗಮಿಸುವ ಮಾಯಾದೇವಿ ಮತ್ತು ಹೆತ್ತ ಮಗನಿಗಿಂತಲೂ ಹೆಚ್ಚಾಗಿ ಪೊರೆವ ಗೌತಮಿ ಹಾಗೂ ಗೌತಮನ ಪತ್ನಿ ಯಶೋಧರೆ, ಮುಂದೆ ಬರುವ ಕಿಸಾಗೋತಮಿ, ಆಮ್ರಪಾಲಿ ಮುಂತಾದ ಸ್ತ್ರೀಪಾತ್ರಗಳ ಪೋಷಣೆ ದೀರ್ಘಕಾಲ ಮನಸ್ಸನ್ನು ಆವರಿಸಿಕೊಳ್ಳುವಷ್ಟು ಶಕ್ತವಾಗಿ ಮೂಡಿಬಂದಿದೆ. ಶುದ್ಧೋದನ, ಆನಂದ ಮುಂತಾದ ಪುರುಷ ಪಾತ್ರ ಚಿತ್ರಣಕ್ಕಿಂತಲೂ ಹೆಚ್ಚು ತೀವ್ರವಾಗಿ ಲೇಖಕರು ಹೆಣ್ಣುಜೀವದ ಒಳತೋಟಿಯನ್ನು ಹಿಡಿದಿಡಬಲ್ಲರೆಂಬುದಕ್ಕೆ ಮಾಯಾದೇವಿ, ಪ್ರಜಾಪತಿದೇವಿ, ಯಶೋಧರೆ, ಆಮ್ರಪಾಲಿ, ಕಿಸಾಗೋತಮಿಯರ ಅಂತರಂಗ ತೆರೆದುಕೊಳ್ಳುವ ಅಧ್ಯಾಯಗಳನ್ನು ಉದಾಹರಣೆಯಾಗಿ ಗಮನಿಸಬಹುದು.
ಕಥೆಯ ಕೇಂದ್ರವಾದ ಸಿದ್ಧಾರ್ಥನನ್ನು ಅಸಾಮಾನ್ಯತೆಯ ಚೌಕಟ್ಟಿನಿಂದ ಬಿಡಿಸಿ, ಸಾಮಾನ್ಯತೆಯೊಂದಿಗೇ ಜ್ಞಾನದತ್ತ ಸಾಗುವ ಪಯಣಿಗನಂತೆ ಕಾದಂಬರಿ ಚಿತ್ರಿಸುತ್ತದೆ. ದಾಯಾದಿ ಮಾತ್ಸರ್ಯವನ್ನು ಸಿದ್ಧಾರ್ಥ ಎದುರಿಸುವ ಬಗೆ, ನದಿ ನೀರಿನ ಗಲಭೆಯು ಕದನಕ್ಕೆ ಹೊರಳುವ ಸಂದರ್ಭದಲ್ಲಿ ಯುದ್ಧವಿರೋಧಿ ನಿಲುವಿನಿಂದ ಅದನ್ನು ನಿವಾರಿಸುವ ಬಗೆ, ಮಡದಿ-ಮಗನ ಮೋಹವು ಆವರಿಸಿಕೊಂಡು ತನ್ನ ಧ್ಯೇಯೋದ್ದೇಶಕ್ಕೆ ಅಡ್ಡಿಯಾಗದಂತೆ ವಹಿಸುವ ಎಚ್ಚರ, ಅರಮನೆಯನ್ನು ಬಿಟ್ಟು ಹೊರಡುವಾಗಲೂ ಕಟು ವಾಸ್ತವದ ಆಲೋಚನೆಗಳಿಂದ ದೂರಾಗದಿರುವುದು, ವರ್ಷಗಟ್ಟಲೆ ಮಾಡುವ ದೇಹದಂಡನೆ ಮತ್ತು ಮನೋನಿಗ್ರಹಗಳ ತಪಸ್ಸು ಎಲ್ಲೆಡೆಯೂ ಸಿದ್ಧಾರ್ಥ ಮನುಷ್ಯ ಪ್ರಯತ್ನದ ಪ್ರತಿರೂಪದಂತೆಯೇ ಕಾಣುತ್ತಾನೆ. ಪುರಾಣದ ಚೌಕಟ್ಟನ್ನು ಕಳಚಿಕೊಂಡು ಸಾಮಾನ್ಯತೆಯ ಚೌಕಟ್ಟಿನೊಳಗೆ ಚಿತ್ರಿತನಾಗುವ ಸಿದ್ಧಾರ್ಥ ಓದುಗರಿಗೆ ಹೆಚ್ಚು ಆಪ್ತನಾಗುತ್ತಾ ಹೋಗುತ್ತಾನೆ ಮತ್ತು ಸಂಕಲ್ಪಶಕ್ತಿ, ಮನೋಸ್ಥೈರ್ಯ, ಆತ್ಮವಿಶ್ವಾಸಗಳಿದ್ದರೆ ಯಾರು ಬೇಕಾದರೂ ಈ ದಾರಿಯಲ್ಲಿ ಸಾಗಬಹುದೆಂಬುದಕ್ಕೆ ಮೇಲ್ಪಂಕ್ತಿಯಾಗುತ್ತಾನೆ. ಬುದ್ಧನಿಗೆ ಇದೆಲ್ಲವೂ ತಾನು ಸಂಪಾದಿಸಿದ ಜ್ಞಾನವೆಂಬ ತಿಳಿವಳಿಕೆಯ ಮೇಲರಿಮೆ ಇಲ್ಲ. ಬದಲಿಗೆ ಅನುಭವಜನ್ಯವಾದ ಜ್ಞಾನದ ಪಾಕವನ್ನು ಶಿಷ್ಯರಿಗೆ ಹಂಚಿಕೊಟ್ಟು, ಅದರ ಪ್ರಸರಣ ನದಿಯ ನೀರಂತೆ ಎಲ್ಲೆಡೆ ಹರಿಯುವುದಕ್ಕೆ ಪ್ರೇರೇಪಿಸುವ ಶಕ್ತಿಯಾಗುತ್ತಾನೆ. ಆತ ನೀಡುವ ಯಾವುದೇ ಉದಾಹರಣೆಯೂ ಅತಾರ್ಕಿಕವೆನಿಸುವುದಿಲ್ಲ. ವಿವೇಚನೆ ಮತ್ತು ವಿವೇಕದ ಜೀವ ಪ್ರೀತಿಯ ಕಣ್ಣು ಕಾಣಿಸಿದ ದರ್ಶನದ ಸಾರವೆಂಬಂತೆ ಲೇಖಕರು ಬುದ್ಧನ ಉಪದೇಶಗಳನ್ನು ಸಾಂದರ್ಭಿಕವಾಗಿಯೂ, ಸಾಮಾನ್ಯರ ಹೃದಯಕ್ಕೆ ಮುಟ್ಟುವ ಸರಳತೆಯಿಂದಲೂ ದಾಖಲಿಸಿರುವುದು ಗಮನಾರ್ಹ ಮತ್ತು ಮೆಚ್ಚಿಕೊಳ್ಳಬೇಕಾದ ವಿಚಾರ. ಸ್ವಲ್ಪ ಎಚ್ಚರ ತಪ್ಪಿದರೂ ಶುಷ್ಕ ವೇದಾಂತವಾಗಿಬಿಡುವ ತತ್ತ್ವ ಬೋಧನೆಯ ನಿರ್ವಹಣೆ ಲೇಖಕರ ನಿರೂಪಣಾ ಶಕ್ತಿಯ ಫಲವೆನ್ನಬಹುದು.
ಇದೊಂದು ಕಿರು ಕಾದಂಬರಿಯಾಗಿರುವುದರಿಂದ ಕಥನದ ವೇಗ ಹೆಚ್ಚು ತೀವ್ರ ಮತ್ತು ಚುರುಕಾಗಿರುವುದನ್ನು ಗಮನಿಸಬೇಕು. ಮುಖ್ಯ ಪಾತ್ರಗಳ ಮನೋಗತದಂತೆ ವೇದ್ಯವಾಗುವ ಪ್ರತಿ ಅಧ್ಯಾಯಗಳಲ್ಲೂ ಆಯಾ ಪಾತ್ರಗಳ ಬುದ್ಧಿ ಮತ್ತು ಭಾವಗಳು ಒಟ್ಟೊಟ್ಟಿಗೇ ಅನಾವರಣಗೊಳ್ಳವ ತಂತ್ರಗಾರಿಕೆಯನ್ನು ಲೇಖಕರು ಸೊಗಸಾಗಿ ಮಾಡಿದ್ದಾರೆ. ಪ್ರತಿ ವಿವರಗಳಲ್ಲೂ ಇಣುಕುವ ಸೂಕ್ಷ್ಮತೆ ಅಪೂರ್ವವಾದ ಓದಿನ ಸುಖಕ್ಕೆ ಆಸ್ಪದವಿತ್ತಿದೆ. ಬೆಟ್ಟದಷ್ಟು ವಿವರಗಳ ಸರಕಿದ್ದರೂ ಸಾಗರದಂತಹ ಪುರುಷಪ್ರಜ್ಞೆಯ ಚಿತ್ರಣವಿದ್ದರೂ ಎಲ್ಲಿಯೂ ಕಥನದ ಘನತೆಗೆ ಭಂಗವೊದಗದಂತೆ ಅಡಕವಾಗಿ ಹೇಳುವ ಜಾಣ್ಮೆಯನ್ನು ಮೆಚ್ಚದಿರಲಾಗದು. ಕಂನಾಡಿಗಾ ಅವರ ಗದ್ಯಕ್ಕೊಂದು ಸೌಂದರ್ಯವಿದೆ. ಹದವರಿತ ಸುಕೋಮಲ ಪದ ಬಳಕೆ ಮತ್ತು ಸಂಕ್ಷಿಪ್ತವಾದ ವಾಕ್ಯ ರಚನೆ, ಬಿಗಿ ಬಿಟ್ಟುಕೊಡದ ನಿರೂಪಣೆ, ಸಂಗ್ರಾಹ್ಯ ಗುಣದ ಕೌಶಲತೆಗಳೆಲ್ಲವೂ ಲೇಖಕರಿಗೆ ಸಿದ್ಧಿಸಿದ ಪರಿಣಾಮ ಇವರ ಕಥನಕ್ಕೆ ಓದುಗರ ಮನಸ್ಸನ್ನು ಆವರಿಸಿಕೊಂಡು ಕಾಡುವ ಗುಣವಿದೆ. 'ಬುದ್ಧಯಾನ'ದ ಎಲ್ಲ ಪಾತ್ರಗಳೂ ನಮ್ಮನ್ನು ಸಿದ್ಧಾರ್ಥನಷ್ಟೇ ಕಾಡುವುದು ಈ ಕಾರಣದಿಂದಲೇ.
ಕಿಸಾಗೋತಮಿ, ಆಮ್ರಪಾಲಿ, ಆನಂದರ ವಿವರಗಳು ತುಸು ಹೆಚ್ಚೆನಿಸುವ ವೇಗ ಪಡೆದಿವೆ. ಬುದ್ಧನ ಮತ್ತಷ್ಟು ಆಪ್ತವರ್ಗದ ಪಾತ್ರ ಚಿತ್ರಣಕ್ಕೆ ಇದ್ದ ಅವಕಾಶವನ್ನು ಬಳಸಿಕೊಳ್ಳಬಹುದಿತ್ತು ಹಾಗೂ ಬುದ್ಧ ಮತ್ತವನ ಧಮ್ಮ ಬೋಧೆಗಳ ವಿಸ್ತರಣೆಗೂ ವ್ಯಪಾಕ ಅವಕಾಶವಿತ್ತು. ಕಿರುಕಾದಂಬರಿ ಎಂಬ ಚೌಕಟ್ಟನ್ನು ಲೇಖಕರು ಹಾಕಿಕೊಂಡಿರುವುದರಿಂದ ಇಂತಹ ಮಿತಿಯನ್ನು ಹಾಕಿಕೊಳ್ಳುವುದೂ ಅನಿವಾರ್ಯವಿರಬಹುದು. ಆದರೆ ಕಾದಂಬರಿಯ ಸ್ವರೂಪಕ್ಕೆ ಧಕ್ಕೆಬಾರದಂತೆ ಬುದ್ಧನ ಕಥೆಯನ್ನು ಲೇಖಕರು ನಿರೂಪಿಸಿದ್ದಾರೆ. ಮನುಷ್ಯ ಸಹಜ ಮನಸ್ಸಿನ ನಿರೂಪಣೆಯಿಂದ, ಇಹದ ಬದುಕನ್ನು ನಿರಾಕರಿಸದ ಅಧ್ಯಾತ್ಮದ ಪರಿಭಾಷೆಯಿಂದ ನಿರೂಪಿತನಾಗಿರುವ ಬುದ್ಧ ನಮ್ಮ ಮನಸ್ಸಿನಲ್ಲಿ ಉಳಿದುಬಿಡುತ್ತಾನೆ. ಇಂತಜ ಸೊಗಸಾದ ಕಥನ ಮತ್ತು ಸುಖದ ಓದೊಂದನ್ನು ಪ್ರಾಪ್ತವಾಗಿಸಿದ ಹಿರಿಯ ಲೇಖಕರಾದ ಕಂನಾಡಿಗಾ ನಾರಾಯಣ ಅವರನ್ನು ಕನ್ನಡದ ಓದುಗರೆಲ್ಲರ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.