ನನಗೆ ಅಪ್ಪನನ್ನು ನೆನೆದಾಗಲೆಲ್ಲ ಆತನ 'ಜಂಗಮ' ಗುಣ ನೆನಪಾಗುತ್ತದೆ : ದರ್ಶನ್ ಜಯಣ್ಣ


ನನಗನಿಸುವುದು ನಮ್ಮೂರಿನಲ್ಲಿಅಪ್ಪನಿಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲ. ಅದು ಅವರನ್ನು ಸ್ವಲ್ಪ ಮಟ್ಟಿಗೆ ಕಾಡಿತ್ತು. ಅದಕ್ಕೆ ಕಾರಣ " ಕಾಣಿಸಿಕೊಳ್ಳಲು ಬಯಸದಿರುವಿಕೆ" ಎಂದು ಅವರಿಗೂ ಗೊತ್ತಿತ್ತು. He was ok with it! ಎನ್ನುತ್ತಾರೆ ಲೇಖಕ ದರ್ಶನ್ ಜಯಣ್ಣ. ತಮ್ಮ ಅಪ್ಪನ ರ್‍ಯಾಲೀಸ್ ಸೈಕಲ್ ಎಂಬ ಪ್ರಬಂಧ ಸಂಕಲದಲ್ಲಿ ಅವರು ಬರೆದಿರುವ ಅರಿಕೆ ನಿಮ್ಮ ಓದಿಗಾಗಿ..

ಅರಕೆ

ಅಪ್ಪ ಹುಟ್ಟಿದ್ದು, ಬೆಳೆದದ್ದು, ಬದುಕಿದ್ದು, ಕಡೆಗೆ ತೀರಿಹೋಗಿದ್ದೂ ತುಮಕೂರಿನ ಹೃದಯಭಾಗದ ಅರಳೆಪೇಟೆ ಮತ್ತು ಹೊರಪೇಟೆಗಳಲ್ಲೇ. ಇವುಗಳಾಚೆಗೆ ಅಪ್ಪನಿಗೆ ವ್ಯವಹಾರವಿತ್ತೇ ಹೊರತು ಸೆಳೆತವಿರಲಿಲ್ಲ.

ಹೀಗಿದ್ದೂ ಅಪ್ಪನಿಗೆ ಐದಾರು ಭಾಷೆಗಳು ನಿರರ್ಗಳವಾಗಿ ಮಾತನಾಡಲು ಬರುತ್ತಿತ್ತು. ಹತ್ತಾರು ಕಸುಬುಗಳು ಗೊತ್ತಿದ್ದವು. ಅದಕ್ಕೆ ಕೆಲವರು ಅಪ್ಪನನ್ನು ಕುರಿತು "ನಿಂದು ಭುಜಂಗಯ್ಯನ ದಶವತಾರ " ಎನ್ನುತ್ತಿದ್ದರು. ಅಪ್ಪನಿಗೆ ನಮ್ಮ ರಾಜ್ಯದ ಸುಮಾರು ಬುಡಕಟ್ಟುಗಳ ಮತ್ತು ಅವರ ಜೀವನೋಪಾಯ, ತಾಪತ್ರಯದ ಬಗ್ಗೆ ಗೊತ್ತಿತ್ತು. ರಾಜಕೀಯ, ಸಾಂಸ್ಕೃತಿಕ ಮತ್ತು ಎಲ್ಲಕ್ಕಿಂತಾ ಹೆಚ್ಚಾಗಿ ಸಾಮಾಜಿಕ ಪ್ರಜ್ಞೆ ಮತ್ತು ಕಾಳಜಿ ಇತ್ತು.

ಹೀಗಾಗಿಯೇ ನನಗೆ ಅಪ್ಪನನ್ನು ನೆನೆದಾಗಲೆಲ್ಲ ಆತನ 'ಜಂಗಮ' ಗುಣ ನೆನಪಾಗುತ್ತದೆ. ಆತ ತನ್ನ 62 ವರ್ಷಗಳ ಬದುಕಿನಲ್ಲಿ ಒಂದೇ ಪ್ರದೇಶದ ಒಂದೇ ಭಾಗದಲ್ಲಿದ್ದರೂ ಮನಸ್ಸು, ಆಚಾರ, ಕನಸುಗಳು ಮತ್ತು ಆಸಕ್ತಿಗಳು ಜಂಗಮವಾಗಿದ್ದವು.

ಅಪ್ಪ ಯಾವ ಸಂಶೋಧನೆಯ ವಿದ್ಯಾರ್ಥಿಯಾಗಿರದಿದ್ದರೂ ಕೂಡ, ಗಿಡಮೂಲಿಕೆಗಳ ಆಧಾರಗಳನ್ನು ಮತ್ತು ಅವುಗಳ ಉಪಯುಕ್ತತೆಗಳನ್ನು ಹಳೆಯ ಗ್ರಂಥಗಳಲ್ಲಿ ಹುಡುಕುತ್ತಿದ್ದ ಪರಿ ನನ್ನನ್ನು ಹಲವು ಬಾರಿ ಆಶ್ಚರ್ಯಚಕಿತನನ್ನಾಗಿ ಮಾಡಿದೆ. ಪುಟ್ಟ ಊರೊಂದರ ಗ್ರಂಥಿಗೆ ಅಂಗಡಿಯ ಅಪ್ಪ ಕೆಲವೊಮ್ಮೆ ರಾತ್ರಿ ಎಲ್ಲಾ ಟೇಬಲ್ ಲ್ಯಾಂಪ್ನ ಅಡಿಯಲ್ಲಿ ಆಧಾರ ಹುಡುಕುತ್ತಿದ್ದೂ, ಬೆಳಿಗ್ಗೆ ಅದರ ಬಗ್ಗೆ ತನ್ನನ್ನು ಅರಸಿ ವಾತ, ಪಿತ್ತ, ಕಫ ಮುಂತಾದವುಗಳ ನಿವಾರಣೆಗೆ ಬಂದ ಹಳ್ಳಿಯವರಿಗೆ ಕುತೂಹಲದಿಂದ ಹೇಳುತ್ತಿದ್ದದ್ದು ಕಣ್ಣಿಗೆ ಕಟ್ಟಿದ ಹಾಗಿದೆ.

ಅಪ್ಪ ತನ್ನಂತೆಯೇ ಬದುಕಿ, ತನಗೇನು ಅನಿಸುವುದೋ ಅದನ್ನೇ ಮಾಡಿ, ಯಾರ ಮರ್ಜಿಗೂ ಮುಲಾಜಿಗೂ ಬೀಳದೆ, ಯಾರಿಗೂ ತಲೆಬಾಗದೆ, ಪೂಜಾ ಸಾಮಗ್ರಿ ಅಂಗಡಿ ಮತ್ತು ಮಠಗಳ ಊರಿನಲ್ಲಿ ಇದ್ದರೂ ಸ್ವಾಮಿಗಳ ಹಿಂದೆ ಬೀಳದೆ, ಐನೋರುಗಳಿಗೆ ಒಂದು ರೂಪಾಯಿಯೂ ಕಮಿಷನ್ ಕೊಡದೆ ತನ್ನಷ್ಟಕ್ಕೆ ತಾನು ಎಂಬಂತೆ ಇದ್ದುಬಿಟ್ಟ ಆಸಾಮಿ.

ಇದರ ಜೊತೆ ಜೊತೆಗೆ ತನ್ನ ಆರೋಗ್ಯದ ಕಡೆಗೆ ಸರಿಯಾಗಿ ಗಮನಕೊಡದೆ ತಿನ್ನುವಾಗ ತಿನ್ನದೆ, ತೊಡುವಾಗ ತೊಡದೆ, ಆದರೂ ವಿಲಾಸಿಯಾಗದೆ ಹೆಂಡತಿ ಮಕ್ಕಳ ಕಾಳಜಿಗೆ ಎಂದೂ ಕಿವಿಗೊಡದೆ ಬದುಕಿದ ಸೀದಾ ಸಾದಾ ಮನುಷ್ಯ.He was a very complex character!

ಒಟ್ಟಿನಲ್ಲಿ ನನಗನಿಸುವುದು ನಮ್ಮೂರಿನಲ್ಲಿಅಪ್ಪನಿಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲ. ಅದು ಅವರನ್ನು ಸ್ವಲ್ಪ ಮಟ್ಟಿಗೆ ಕಾಡಿತ್ತು. ಅದಕ್ಕೆ ಕಾರಣ " ಕಾಣಿಸಿಕೊಳ್ಳಲು ಬಯಸದಿರುವಿಕೆ" ಎಂದು ಅವರಿಗೂ ಗೊತ್ತಿತ್ತು. He was ok with it!

ಇವೆಲ್ಲವನ್ನೂ ಮೀರಿ ಅಪ್ಪನಿಗೆ ಪ್ರಾಣಿ, ಪಕ್ಷಿ, ಪಶು, ಕೀಟ, ಕಾಡು, ಮೂಲಿಕೆ, ಮರ ಗಿಡ, ತೊರೆ ಹಳ್ಳ, ಬುಡಕಟ್ಟು ಬವಣೆ, ಭಾಷೆ ಇವೆಲ್ಲದರ ಬಗ್ಗೆ ಮಗುವಿನ ಬೆರಗು ಹಾಗು ಸಂಶೋಧಕನ ಕುತೂಹಲವಿತ್ತು.ಇದು ಅವರ ಮಾತಿನಲ್ಲಿ ಪ್ರತಿನಿತ್ಯ ಅನಾವರಣಗೊಳ್ಳುತ್ತಿತ್ತು.

ಅಂದ ಹಾಗೆ ಆತ ಒಬ್ಬ ಅದ್ಭುತ ಮಾತುಗರ, He was a great narrator.

- ದರ್ಶನ್ ಜಯಣ್ಣ
ದರ್ಶನ್ ಜಯಣ್ಣ ಅವರ ಲೇಖಕ ಪರಿಚಯ...

MORE FEATURES

ಮನಶಾಸ್ತ್ರದ ಹೊಸ ಹೊಸ ಟರ್ಮಿನಾಲಾಜಿಯ ಪರಿಚಯ ನಮಗಿಲ್ಲಿ ಆಗುತ್ತದೆ

18-02-2025 ಬೆಂಗಳೂರು

“ಈ ಪುಸ್ತಕವು ಮನಸ್ಸಿನ ವರ್ತನೆಗೆ ಸಂಬಂದಿಸಿದಂತೆ ತುಂಬ ತರ್ಕ ಬದ್ದ ವಿಷಯಗಳನ್ನು ಒದಗಿಸಿದೆ. ಮಕ್ಕಳು-ಪೋಷಕರು, ಪ...

ನನ್ನ ಜೀವನದಲ್ಲಾದ ಅನುಭವಳಿಂದಾಗಿ ಈ ನಕಲಿ ಗಿರಾಕಿಗಳ ಬಣ್ಣ ಬಯಲಾಯಿತು

18-02-2025 ಬೆಂಗಳೂರು

“ಚಿಕ್ಕಮಗಳೂರಿನಲ್ಲಿ ಸೃಷ್ಟಿಸಿದ ಮತೀಯವಾದ, ಕೋಮುಸೌಹಾರ್ದವನ್ನು ಹಾಳುಮಾಡಲು ಮಾಡಿದ ಪ್ರಯತ್ನ, ಅದರಿಂದ ಕೆಲ ನಕಲಿ...

ಸಂವೇದನೆಗೆ ಒಳಪಡಿಸುವ ಕತೆಗಳಿವು

18-02-2025 ಬೆಂಗಳೂರು

“ಇದರಲ್ಲಿ ಸುಮಾರು 25 ಚಿಕ್ಕ ಕಥೆಗಳಿವೆ. ಇವೆಲ್ಲ ಸರಳ ಭಾಷೆಯ ಮೂಲಕ ಸುಲಭದಲ್ಲಿ ಅರ್ಥವಾಗುವಂತಹ ಸರಳ ಕತೆಗಳು. ಜೊ...