ನಮ್ಮ ಅಭಿವ್ಯಕ್ತಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದೇ ನಿಜವಾದ ಸ್ವಾತಂತ್ರ್ಯ: ನಾಗರಾಜಮೂರ್ತಿ

Date: 11-11-2024

Location: ಬೆಂಗಳೂರು


ಧಾರವಾಡ: "ಕನ್ನಡ ರಂಗಭೂಮಿಗೆ ಪ್ರಪ್ರಥಮ ನಾಟಕ ಕೊಟ್ಟಂತಹ ಸಕ್ಕರಿ ಬಾಳಚಾರ್ಯ ಹೆಸರಿನಲ್ಲಿಯೇ ನಮ್ಮ ಮೊದಲ ನಾಟಕೋತ್ಸವವನ್ನು ಆಯೋಜಿಸಿದ್ದಕ್ಕೆ ನನಗೆ ಅತ್ಯಂತ ಸಂತೋಷವಾಗುತ್ತಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ," ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಹೇಳಿದರು.

ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಶಾಂತಕವಿಗಳ ಟ್ರಸ್ಟ್ ಸಹಯೋಗದಲ್ಲಿ ಮೂರುದಿನಗಳ ನಾಟಕೋತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ ಅವರು, "ಇವತ್ತಿಗೂ ಕೂಡ ನಮಗೆ ಮರಾಠಿ ನಾಟಕಗಳ ಹಾವಳಿ ಇಲ್ಲದಿದ್ದರೂನೂ, ಬೇರೆ ಬೇರೆಯಾದಂತಹ ಅನೇಕ ತೊಂದರೆಗಳು ನಾಟಕ ಪ್ರದರ್ಶನ ಮಾಡುವುದಕ್ಕೆ ನಮ್ಮಲ್ಲಿ ಇವೆ. ಕನ್ನಡ ರಂಗಭೂಮಿಯನ್ನು ಕಟ್ಟುವಂತಹ ಕೆಲಸವನ್ನು, ಕನ್ನಡಿಗನ ಮನಸ್ಸು ಕಟ್ಟುವಂತಹ, ಕನ್ನಡ ಚಳುವಳಿ ಕಟ್ಟುವಂತಹ ಚಳುವಳಿಯನ್ನು ಮೊಟ್ಟಮೊದಲ ಕವಿ ಅಂದರೆ ಅದು ಸಕ್ಕರಿ ಬಾಳಚಾರ್ಯ. ಅವರು ವೃತ್ತಿ ರಂಗಭೂಮಿಯನ್ನು ಉದ್ಧಾರ ಮಾಡಬೇಕೆಂದುಕೊಂಡಿದ್ದರು. ಕರ್ನಾಟಕದ ಮತ್ತು ಭಾರತೀಯ ರಂಗಭೂಮಿಯ ಇತಿಹಾಸವನ್ನು ದಾಖಲಿಸುವಂತಹ ಯಾರೇ ಆದರೂ ಕೂಡ ಈ ಶಾಂತಕವಿ ಅವರ ಇತಿಹಾಸ ಬಿಟ್ಟು ದಾಖಲೆ ಮಾಡಲು ಸಾಧ್ಯವೇ ಇಲ್ಲ ಅಂತಹ ಮಹಾನ್ ನಾಟಕಕಾರ," ಎಂದು ಅಭಿಪ್ರಾಯಪಟ್ಟರು.

"ಇಂದು ಮರಾಠಿ, ಬಂಗಾಳಿ ರಂಗಭೂಮಿ ಆಗಿರಲಿ ಅದೆಲ್ಲದಕ್ಕಿಂತ ಮೀರಿ ಕನ್ನಡ ರಂಗಭೂಮಿ ಮತ್ತು ಕೇರಳದ ರಂಗಭೂಮಿ ಇದೆ ಅಂತ ಅಂದರೆ ಅದಕ್ಕೆ ಮೂಲ ಕಾರಣ ಯಾರು ಅಂದರೆ ನಮ್ಮ ವೃತ್ತಿ ರಂಗಭೂಮಿಯನ್ನು ಕಟ್ಟಿದಂತಹ ಪುಣ್ಯಾತ್ಮರು. ಅವರು ಹಾಕಿಕೊಟ್ಟಂತಹ ಭದ್ರಬುನಾದಿಯ ಮೇಲೆ ಇವತ್ತು ನಮ್ಮ ಹವ್ಯಾಸಿ ರಂಗಭೂಮಿಯಾಗಿರಲಿ, ಜಾನಪದ ರಂಗಭೂಮಿಯಾಗಿರಲಿ ಮತ್ತು ಮಕ್ಕಳ ರಂಗಭೂಮಿಯಾಗಿರಲಿ ಕ್ರಿಯಾಶೀಲವಾಗಿ ಬೆಳೆಯುವುದಕ್ಕೆ ಸಾಧ್ಯವಾಗಿದೆ. ಆದರೂ ಇಂದು ನಮ್ಮಲ್ಲಿ ಬಹಳ ಮುಖ್ಯವಾಗಿ ಪ್ರಸಿದ್ಧ ನಾಟಕಕಾರ ಡಿ. ಎಸ್ ಚೌಗಲೆ ಇದಾರೆ ವಿನಂತಿ ಮಾಡಿಕೊಳ್ಳುವುದೇನೆಂದರೆ; ಬರುತ್ತಿರುವ ನಾಟಕಗಳಲ್ಲಿ ಬಹಳ ಕೊರತೆ ಇದೆ. ನಮ್ಮಲ್ಲಿ ರೂಪಾಂತರಗಳಂತಹವೇ ಜಾಸ್ತಿ ಆಗುತ್ತಿದ್ದಾವೆ ವಿನಹ ನಿಜವಾದ ಸ್ವತಂತ್ರ ನಾಟಕಗಳ ಸಂಖ್ಯೆ ಬಹಳ ಕಡಿಮೆ ಆಗುತ್ತಾ ಇದೆ. ಇವತ್ತು ಮತ್ತೆಮತ್ತೆ ಪ್ರಯತ್ನ ಮಾಡಿ ನಮ್ಮ ನಾಟಕಕಾರರನ್ನು ಬಳಸಿಕೊಳ್ಳಬೇಕಿದೆ. ನಮ್ಮಲ್ಲಿ ಹಲವಾರು ವಿಷಯಗಳಿವೆ. ಮಹಾಭಾರತ, ರಾಮಾಯಣವೇ ಆಗಬೇಕಂತೇನಿಲ್ಲ," ಎಂದರು.

"ದಿನನಿತ್ಯ ಟಿವಿಗಳಲ್ಲಿ, ಇವತ್ತಿನ ರಾಜಕಾರಣವನ್ನು ನೋಡುತ್ತಿದ್ದರೆ ರಾಮಾಯಣ-ಮಹಾಭಾರತಕ್ಕಿಂತ ದೊಡ್ಡ ದೊಡ್ಡ ಕತೆಗಳು, ವಿಚಾರಗಳು, ವಿಷಯಗಳು ನಮ್ಮ ಮುಂದೆ ಇವೆ. ದಿನನಿತ್ಯ ಅತ್ಯಾಚಾರ ಆಗುತ್ತವೆ. ದಿನನಿತ್ಯ ಭ್ರಷ್ಟಾಚಾರವಾಗುತ್ತಿದೆ. ಒಬ್ಬ ರಾಜಕಾರಣಿ ಸುಳ್ಳು ಹೇಳುತ್ತಿದ್ದರೆ, ಅವನಿಗಿಂತ ಮತ್ತೊಬ್ಬ ರಾಜಕಾರಣಿಗಳು ಮೀರಿಸಿ ಸುಳ್ಳು ಹೇಳುತ್ತಿದ್ದಾರೆ. ಇಂತಹ ಒಳ್ಳೆಯ ನಾಟಕದ ವಸ್ತು ಇವೆ. ನಮ್ಮ ಚೌಗಲೆಯವರು ಪ್ರಯತ್ನಪಟ್ಟು ಈ ದರಿದ್ರ ಭ್ರಷ್ಟ ರಾಜಕಾರಣವನ್ನು ಹತ್ತಿಕ್ಕುವಂತಹ ಒಂದು ಒಳ್ಳೊಳ್ಳೆಯ ನಾಟಕಗಳನ್ನು ಬರೆದರೆ ಬಹುಶಃ ಜನಗಳಿಗೆ ಅರ್ಥವಾಗುವಲ್ಲಿ ಕಾಣಿಸುತ್ತದೆ. ಯಾಕೆಂದರೆ ಇವತ್ತು ಜನರ ಮನಸ್ಸನ್ನು ಕದಡುವಂತಹ, ಮನುಷ್ಯನ ಮನಸ್ಸಿನ ನಡುವೆ ಬೆಂಕಿ ಹಚ್ಚುವಂತಹ ಕೋಮುವಾದ. ಒಂದುವೇಳೆ ನಾವು ಆರ್ಥಿಕ ಭ್ರಷ್ಟಾಚಾರವನ್ನು ಸರ್ಕಾರದ ಮಟ್ಟದಲ್ಲಿ ತಡೆಗಟ್ಟಬಹುದು ಲೋಕಾಯುಕ್ತ ಮೂಲಕನೋ, ಸಿಬಿಐ ಮೂಲಕನೋ, ಇಡಿ ಮೂಲಕನೋ ಆದರೆ ಈ ಮಾನಸಿಕ ಭ್ರಷ್ಟಾಚಾರ ಇದೆಯಲ್ಲಾ? ನೈತಿಕ ಭ್ರಷ್ಟಾಚಾರ ಇದೆಯಲ್ಲಾ? ಅದನ್ನು ತಡೆಗಟ್ಟುವುದಕ್ಕೆ ನಮ್ಮ ಸಾಂಸ್ಕೃತಿಕ ಮಾಧ್ಯಮವೇ ಅತ್ಯಂತ ಮುಖ್ಯವಾಗುತ್ತದೆ," ಎಂದರು.

"ಇವತ್ತು ನೋಡಿ ಒಬ್ಬ ಎಂಪಿಯಾದವನು ಹಾಸನದಲ್ಲಿ ಮಾಡಿರತಕ್ಕಂತಹ ದರಿದ್ರ ಕೆಲಸ. ಅದರಿಂದಾಗಿ ನೂರಾರು ಜನ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾರೆಂದರೆ ಇದಕ್ಕಿಂತ ನಾಚಿಕೆಗೇಡಿನ ವಿಚಾರ ಇದೆಯಾ? ನಾವೆಲ್ಲ ಯೋಚನೆ ಮಾಡಬೇಕಾಗಿದೆ. ಮಣಿಪುರದಲ್ಲಿ ಒಬ್ಬ ಹೆಣ್ಣುಮಗಳನ್ನು ಬೆತ್ತಲೆ ಮಾಡಿ ಓಡಿಸಿಕೊಂಡು ಸಾವಿರಾರು ಜನ ಹೋಗುತ್ತಾರೆ ಅಂದರೆ ಕರ್ನಾಟಕದಲ್ಲಿ ಒಬ್ಬ ದೊಡ್ಡ ಸಿನಿಮಾ ನಟ ಒಬ್ಬನ ಧಾರುಣವಾಗಿ ಕೊಲೆ ಮಾಡಿ ಸಾಯಿಸುತ್ತಾನೆ ಅಂದರೆ ನಾವು ಇಂತಹ ಯೋಚನೆ ಮಾಡುವಂತಹ ಜನರನ್ನು ಎಚ್ಚರಿಸುವಂತಹ ಕಾರ್ಯಕ್ಕೆ ಅವರನ್ನು ಮತ್ತೆ-ಮತ್ತೆ ನಾವು ಸ್ವಾತಂತ್ರ್ಯ ಅಂದರೆ ಕೇವಲ ಯಾವುದೋ ಒಂದು ಬ್ರಿಟಿಷರಿಂದ ಪಡೆದುಕೊಂಡಿದ್ದು ಅಲ್ಲ. ನಿಜವಾದ ಸ್ವಾತಂತ್ರ್ಯ ಅಂದರೆ ನಮ್ಮ ಅಭಿವ್ಯಕ್ತಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದು. ಅಂತಹ ಸ್ವಾತಂತ್ರ್ಯವನ್ನು ಕಟ್ಟಿಕೊಡುವಂತಹ ರಂಗಭೂಮಿ ನಿರ್ಮಾಣ ಆಗಬೇಕು. ನಾಟಕಕಾರರು ಸಿದ್ಧರಾಗಬೇಕು ಎನ್ನುತ್ತಾ, ಪ್ರೇಕ್ಷಕರ ಒತ್ತಾಯದ ಮೇರೆಗೆ ಶಾಂತಕವಿಗಳ ಜನ್ಮದಿನವನ್ನು ಕರ್ನಾಟಕ ರಂಗಭೂಮಿ ದಿನ ಎಂದು ಘೋಷಿಸಲು ಸಕರಾತ್ಮಕವಾಗಿ ಪ್ರಯತ್ನಿಸಲಾಗುವುದು," ಎಂದರು.

ವೇದಿಕೆಯಲ್ಲಿ ರಾಜು ತಾಳಿಕೋಟೆ ನಿರ್ದೇಶಕರು-ರಂಗಾಯಣ ಧಾರವಾಡ, ಡಾ. ಡಿ. ಎಸ್ ಚೌಗಲೆ ಖ್ಯಾತ ನಾಟಕಕಾರರು ಬೆಳಗಾವಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಗಾಯತ್ರಿ ಹೆಗ್ಗೋಡು, ಮಲ್ಲಿಕಾರ್ಜುನ ಕಡಕೋಳ ನಿರ್ದೇಶಕರು-ರಂಗಾಯಣ ದಾವಣಗೆರೆ, ಪ್ರಕಾಶ ಗರುಡ ನಾಟಕ ನಿರ್ದೇಶಕರು ಹಾಗೂ ಕುಮಾರ ಬೆಕ್ಕೇರಿ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರವಾಡ ಇದ್ದರು.

ಸುದ್ದಿ: ಶಿವರಾಜ್ ಮೋತಿ

MORE NEWS

ಪಿ. ಶೇಷಾದ್ರಿ ಸಿನಿಮಾವಲೋಕನಕ್ಕೆ 'ಮುನ್ನುಡಿ'

21-11-2024 ಬೆಂಗಳೂರು

ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...

ವಿಜಯ ರಾಘವೇಂದ್ರ ನಟನೆಯ 'ರುದ್ರಾಭಿಷೇಕಂ' ಚಿತ್ರಕ್ಕೆ ಚಾಲನೆ

21-11-2024 ಬೆಂಗಳೂರು

ಬೆಂಗಳೂರು: ನಮ್ಮ‌ನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...

87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೊ. ರು. ಚನ್ನಬಸಪ್ಪ ಆಯ್ಕೆ

20-11-2024 ಬೆಂಗಳೂರು

ಬೆಂಗಳೂರು: ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ...