ನಾಮಪದಗಳು

Date: 03-11-2022

Location: ಬೆಂಗಳೂರು


“ಪದಗಳ ರಚನೆಯನ್ನು ಗಮನಿಸಿ ನಾಮಪದಗಳನ್ನು ಮೂಲಪದಗಳು ಮತ್ತು ರಚನೆಗಳು ಎಂದು ಎರಡಾಗಿ ಗುಂಪಿಸಬಹುದು. ಮೂಲಪದಗಳು ಯಾವುದೆ ರಚನೆಯನ್ನು ಹೊಂದಿರುವುದಿಲ್ಲ, ಇವು ತಮ್ಮೊಳಗೆ ಒಂದೆ ಗಟಕವನ್ನು ಹೊಂದಿರುತ್ತವೆ. ರಚನೆಗಳನ್ನು ಮತ್ತೆ ಸಾದಿತ ಪದಗಳು ಮತ್ತು ಸಮಾಸಗಳು ಎಂದು ಎರಡಾಗಿ ಗುಂಪಿಸಲು ಸಾದ್ಯ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ನಾಮಪದಗಳ ಬಗ್ಗೆ ಬರೆದಿದ್ದಾರೆ.

ನಾಮಪದಗಳಲ್ಲಿ ಪರಿಚಯಿಸಿಕೊಳ್ಳುವುದೇನಿದೆ? ನಾಮಪದ ಹೆಸರಿಸುತ್ತದೆ, ಅಶ್ಟೆ ಅಲ್ಲವಾ. ಹಾ. ಅದು ನಿಜ. ನಾಮಪದಗಳು ಹೆಸರಿಸುತ್ತವೆ. ನಮಗೆ ಪರಿಚಿತವಿರುವ ಯಾವುದೆ ಪದವನ್ನು ತೆಗೆದುಕೊಂಡರೂ ಇದು ನಾಮಪದವೊ ಅಲ್ಲವೊ ಅಂತ ಗೊತ್ತಾಗುತ್ತದೆ. ಆದರೆ, ಕನ್ನಡದಲ್ಲಿ ನಮಗೆ ಪರಿಚಯವಿಲ್ಲದ ಸಾಕಶ್ಟು ಪದಗಳು ಇವೆಯಲ್ಲವೆ? ಸಾಮಾನ್ಯವಾಗಿ ಇಪ್ಪತ್ತು-ಮೂವತ್ತು ಸಾವಿರ ಪದಗಳನ್ನು ಹೆಚ್ಚಿನ ಮಂದಿ ತಿಳಿದುಕೊಂಡಿರುತ್ತಾರೆ ಮತ್ತು ಬಳಸುತ್ತಿರುತ್ತಾರೆ. ಆದರೆ ಕನ್ನಡದ ವಿಚಾರಕ್ಕೆ ಬಂದರೆ ಲಕ್ಶಾಂತರ ಪದಗಳಿವೆ. ಅವುಗಳನ್ನು ನಾಮಪದ ಹವುದೊ ಅಲ್ಲವೊ ಎಂದು ಹೇಗೆ ಗುರುತಿಸಲು ಸಾದ್ಯವಾಗುತ್ತದೆ?

ಒಂದು ಪದವು ವಿಬಕ್ತಿ ಪ್ರತ್ಯಯಗಳನ್ನು ತೆಗೆದುಕೊಳ್ಳುತ್ತದೆಯಾದರೆ ಮತ್ತು ಬಹುವಚನ ಪ್ರತ್ಯಯವನ್ನು ತೆಗೆದುಕೊಳ್ಳುತ್ತಿದ್ದರೆ ಅದು ಸಾಮಾನ್ಯವಾಗಿ ನಾಮಪದವಾಗಿರುತ್ತದೆ. ಹುಡುಗ ಎಂಬ ಪದವು ಹೇಗೆ ನಾಮಪದ ಎಂಬುದನ್ನು ಈಗ ನೋಡೋಣ. ಸಾಮಾನ್ಯವಾಗಿ ಒಂದು ಪದವು ವಾಕ್ಯದಲ್ಲಿ ಕರ‍್ತ್ರು ಮತ್ತು ಕರ‍್ಮದ ಜಾಗದಲ್ಲಿ ಬಳಕೆಯಾಗುತ್ತದೆ. ಯಾವ ಪದವು ವಿಬಕ್ತಿ ಪ್ರತ್ಯಯಗಳನ್ನು ತೆಗೆದುಕೊಳ್ಳುತ್ತದೆಯೊ, ಯಾವ ಪದವು ಬಹುವಚನ ಪ್ರತ್ಯಯವನ್ನು ಪಡೆದುಕೊಳ್ಳುತ್ತದೆಯೊ ಅದು ನಾಮಪದವಾಗುತ್ತದೆ. ಈ ಮೇಲೆ ಹೇಳಿದ ಹುಡುಗ ಪದಕ್ಕೆ

ಹುಡುಗ+-ನ್-+ಅನ್ನು=ಹುಡುಗನನ್ನು
ಹುಡುಗ+-ನ್-+ಗೆ=ಹುಡುಗನಿಗೆ
ಹುಡುಗ+-ನ್-+ಇಂದ=ಹುಡುಗನಿಂದ
ಹುಡುಗ+-ನ್-+ಅಲ್ಲಿ=ಹುಡುಗನಲ್ಲಿ
ಎಂದು ವಿಬಕ್ತಿ ರೂಪಗಳನ್ನೂ,
ಹುಡುಗ+-ಅರು=ಹುಡುಗರು

ಎಂದು ಬಹುವಚನ ಪ್ರತ್ಯಯವನ್ನೂ ಹಚ್ಚಬಹುದು. ಹಾಗಾಗಿ ಹುಡುಗ ಎಂಬ ಪದವು ನಾಮಪದವಾಗಿದೆ. ಇದಕ್ಕೆದುರಾಗಿ ನಾಮಪದಗಳು ಕಾಲಪ್ರತ್ಯಯವನ್ನು, ಲಿಂಗ-ವಚನ ಪ್ರತ್ಯಯಗಳನ್ನು ತೆಗೆದುಕೊಳ್ಳುವುದಿಲ್ಲ.

ನಾಮಪದದ ಕೆಲವು ಸಾಮಾನ್ಯ ಲಕ್ಶಣಗಳನ್ನು ಇಲ್ಲಿ ಗಮನಿಸೋಣ. ನಾಮಪದ ಈಗಾಗಲೆ ಹೇಳಿದಂತೆ ಹೆಸರಿಸುವ ಕೆಲಸವನ್ನು ಮಾಡುತ್ತವೆ. ಏನನ್ನು ಹೆಸರಿಸುತ್ತವೆ? ಅದು ವ್ಯಕ್ತಿ-ವಸ್ತುವಿನಂತ ಕಣ್ಣಿಗೆ ಕಾಣುವಂತವನ್ನೋ (ಮನೆ, ಹೊಲ, ಅಡುಗೆ, ನರಿ) ಕನಸು, ಕಲ್ಪನೆಯಂತ ಕಾಣದಂತವನ್ನೊ (ನರಕ, ಸಂಕಟ, ತುಡಿತ, ಮನಸು), ಕ್ರಿಯೆಯನ್ನೊ (ಆಟ, ನೋಟ, ಕುಡಿತ, ನೆಗೆತ) ಹೆಸರಿಸಬಹುದು.

ಹೆಸರಿಸುವುದು ಹೇಗೆ ಎಂಬುದರಲ್ಲಿಯೂ ತುಂಬಾ ಬಿನ್ನತೆ ಕಾಣಿಸುತ್ತದೆ. ನಾಮಪದಗಳು ಹೆಸರಿಸುವ ಮತ್ತು ಬಣ್ಣಿಸುವ ಮೂಲಕ ಹೆಸರಿಸುತ್ತಿರುತ್ತವೆ. ನಾಮಪದಗಳು ವಸ್ತುವನ್ನು ನೇರವಾಗಿ ಹೆಸರಿಸಬಹುದು (ಎಲೆ, ಒಲೆ, ಕಲೆ, ಬೆಲೆ) ಇಲ್ಲವೆ ಬಣ್ಣಿಸುವ ಮೂಲಕ ಹೆಸರಿಸಬಹುದು (ಕಿವುಡ, ಕುಂಟಿ, ಸುಂದರ, ಹುಚ್ಚ). ಈ ಎರಡನೆ ಬಗೆಯಲ್ಲಿ ಹೆಸರಿಸುವ ವಸ್ತುವಿನ ಗುಣ-ಸ್ವಬಾವವನ್ನು ಗುರುತಿಸಿ ಆ ಮೂಲಕ ಅದನ್ನು ಹೆಸರಿಸಲಾಗುತ್ತದೆ.

ನಾಮಪದಗಳ ಗುಂಪಿಕೆಯನ್ನು ಇಲ್ಲಿ ತುಸು ಮಾತಾಡೋಣ. ಸಾಮಾನ್ಯವಾಗಿ ನಾಮಪದಗಳನ್ನು ಸಾಂಪ್ರದಾಯಿಕವಾಗಿ ಅಂಕಿತನಾಮ, ರೂಡನಾಮ ಮತ್ತು ಅನ್ವರ‍್ತಕನಾಮ ಎಂದು ಮೂರು ಗುಂಪುಗಳಾಗಿ ಮಾಡಲಾಗುತ್ತದೆ. ಇವುಗಳನ್ನು ಇಟ್ಟ ಹೆಸರುಗಳು, ರೂಡಿಯಿಂದ ಬಂದ ಹೆಸರುಗಳು ಮತ್ತು ಗುಣವಿಶೇಶಣಗಳನ್ನು ಹೇಳುವಂತವು ಎಂದು ವಿವರಿಸಲಾಗಿದೆ. ಆದರೆ ಇವುಗಳಿಗೆ ತುಸು ಸೂಕ್ತವಾದ ವಿವರಣೆ ಕೊಡಬೇಕು.

ಅಂಕಿತನಾಮ (ಕಲ್ಲವ್ವ, ಮಲ್ಲವ್ವ, ಕರಿಯವ್ವ, ಕೆಂಚವ್ವ) ಇವು ಇಟ್ಟ ಹೆಸರಾಗಿರುವಂತೆಯೆ ರೂಡನಾಮವೂ (ಕಲ್ಲು, ಗುಡ್ಡ, ಹೊಳೆ, ಹೂ) ಇಟ್ಟ ಹೆಸರೆ ಆಗಿದೆಯಲ್ಲವೆ? ಇಲ್ಲವೆ ರೂಡನಾಮವು ರೂಡಿಯಿಂದ ಬಂದಿರುವಂತೆಯೆ ಅಂಕಿತನಾಮವೂ ಕೂಡ ರೂಡಿಯಿಂದಲೆ ಬಂದಿವೆಯಲ್ಲವೆ? ಹಾಗಾದರೆ ಇವುಗಳನ್ನು ಹೇಗೆ ಬಿನ್ನವಾಗಿಸಬಹುದು? ಸಾಮಾನ್ಯವಾಗಿ ಅಂಕಿತನಾಮಗಳು ಒಂದನ್ನು ಹೆಸರಿಸಿದರೆ ರೂಡನಾಮ ಸಮಾನ ಗುಣಗಳನ್ನು ಹೊಂದಿರುವ ಕೆಲವು ಬಿಡಿ ಗಟಕಗಳ ಒಂದು ಗುಂಪನ್ನು ಹೆಸರಿಸುತ್ತದೆ. ಬೀಮಾ, ಕ್ರಿಶ್ಣ, ತುಂಗಾ ಇವು ಒಂದೊಂದು ಹೊಳೆಗಳನ್ನು ಹೆಸರಿಸುತ್ತವೆಯಾದರೆ, ಹೊಳೆ, ನದಿ ಇವು ಸಮಾನ ಗುಣಗಳನ್ನು ಹಂಚಿಕೊಂಡಿರುವ ಬೀಮಾ, ಕ್ರಿಶ್ಣ, ತುಂಗಾ ಮೊದಲಾದ ಬಿಡಿಬಿಡಿ ಗಟಕಗಳನ್ನು ಒಟ್ಟಾಗಿ ಹೆಸರಿಸುತ್ತದೆ.

ಅನ್ವರ‍್ತಕನಾಮ ಎನ್ನುವುದು ಸಾಮಾನ್ಯವಾಗಿ ವ್ಯಕ್ತಿ-ವಸ್ತು-ಪರಿಕಲ್ಪನೆ ಮೊದಲಾಗಿ ಗಟಕವೊಂದರ ಗುಣಸ್ವಬಾವವನ್ನು ಬಳಸಿಕೊಂಡು ಆ ಮೂಲಕ ಗಟಕವನ್ನು ಹೆಸರಿಸುತ್ತದೆ. ಉದಾ. ಕುಂಟ, ಕುರುಡ, ಕೆಂಪ, ಕರಿಯ ಮೊ. ಇಲ್ಲಿ ವಾಸ್ತವದಲ್ಲಿ ಹೆಸರುಗಳು ವ್ಯಕ್ತಿಯನ್ನು ಹೆಸರಿಸುತ್ತಿವೆಯಾದರೂ ಆ ವ್ಯಕ್ತಿಯನ್ನು ಹೆಸರಿಸುವುದಕ್ಕೆ ಆ ವ್ಯಕ್ತಿಯ ನಿರ‍್ದಿಶ್ಟ ಗುಣವನ್ನು ಬಳಸಿಕೊಂಡು ಆ ಮೂಲಕ ಅಂದರೆ ಆ ಗುಣದ ಮೂಲಕ ವ್ಯಕ್ತಿಯನ್ನು ಹೆಸರಿಸುತ್ತದೆ.

ಇನ್ನೂ ಕೆಲವು ರೀತಿಯಲ್ಲಿ ನಾಮಪದಗಳನ್ನು ಗುಂಪಿಸಲು ಸಾದ್ಯವಿರುತ್ತದೆ. ಅಂದರೆ ನಾಮಪದಗಳು ಕೆಲಸ ಮಾಡುವ ಬಗೆಯನ್ನು ಬೇರೆ ಬೇರೆ ರೀತಿಯಲ್ಲಿ ಅರ‍್ತ ಮಾಡಿಕೊಳ್ಳಲು ಸಾದ್ಯವಿರುತ್ತದೆ. ಎಣಿಸಲು ಬರುವ ಮತ್ತು ಎಣಿಸಲು ಬಾರದ ಎಂಬ ನಾಮಪದಗಳು ಇರುತ್ತವೆ. ಕಲ್ಲು, ಮಣ್ಣು, ಆಕಾಶ, ಗಾಳಿ ಇವುಗಳನ್ನು ಎಣಿಸಲು ಬಾರದು. ಆದರೆ, ಹಣ್ಣು, ನಾಯಿ, ಪಟ್ಟಣ, ಮನೆ ಇವುಗಳನ್ನು ಎಣಿಸಲು ಬರುತ್ತದೆ. ಈ ವ್ಯತ್ಯಾಸವನ್ನು ಬಳಕೆಯಲ್ಲಿ ಹೀಗೆ ಗುರುತಿಸಬಹುದು. ಹಾಲು ತನ್ನಿ ಮತ್ತು ಹಣ್ಣು ತನ್ನಿ ಎಂಬ ಸಾಲುಗಳಿಗೆ ಎಶ್ಟು ಎಂಬ ಪ್ರಶ್ನೆಯನ್ನು ಹಾಕಿದಾಗ ಅಳತೆ ಮಾಡುವುದು ಉತ್ತರವಾಗಿ ಮೊದಲ ಸಾಲಿಗೆ ಬಂದರೆ ಎಣಿಸುವುದು ಉತ್ತರವಾಗಿ ಎರಡನೆ ಸಾಲಿಗೆ ಬರುತ್ತದೆ. ಜೋಳ, ಅಕ್ಕಿ ಇವುಗಳನ್ನು ಎಣಿಸಲು ಬರುತ್ತವೆಯಾದರೂ ಅವುಗಳನ್ನು ಎಣಿಸಲು ಬಾರದ ನಾಮಪದಗಳೆಂದು ಪರಿಗಣಿಸಲಾಗುತ್ತದೆ. ಗಮನಿಸಿ, ಜೋಳದ ಕಾಳುಗಳನ್ನು ಒಂದೊಂದಾಗಿ ಎಣಿಸುವುದು ಎಶ್ಟುಮಟ್ಟಿಗೆ ಸಾದ್ಯ ಮತ್ತು ಯಾವುದಕ್ಕೆ ಉಪಯೋಗ? ಹಾಗಿಲ್ಲದಿರುವುದರಿಂದ ಇವುಗಳನ್ನು ಕನ್ನಡ ಮಾತುಗ ಸಮುದಾಯ ಎಣಿಸಲು ಬಾರದವು ಎಂದು ಗುಂಪಿಸುತ್ತದೆ.

ಇನ್ನು ಪದಗಳ ರಚನೆಯನ್ನು ಗಮನಿಸಿ ನಾಮಪದಗಳನ್ನು ಮೂಲಪದಗಳು ಮತ್ತು ರಚನೆಗಳು ಎಂದು ಎರಡಾಗಿ ಗುಂಪಿಸಬಹುದು. ಮೂಲಪದಗಳು (ಹಟ, ಹರಿ, ಹಸು) ಯಾವುದೆ ರಚನೆಯನ್ನು ಹೊಂದಿರುವುದಿಲ್ಲ, ಇವು ತಮ್ಮೊಳಗೆ ಒಂದೆ ಗಟಕವನ್ನು ಹೊಂದಿರುತ್ತವೆ. ರಚನೆಗಳನ್ನು ಮತ್ತೆ ಸಾದಿತ ಪದಗಳು ಮತ್ತು ಸಮಾಸಗಳು ಎಂದು ಎರಡಾಗಿ ಗುಂಪಿಸಲು ಸಾದ್ಯ. ಸಾದಿತ ನಾಮಪದಗಳು ಒಂದು ಪದಕ್ಕೆ ಒಂದು ಇಲ್ಲವೆ ಒಂದಕ್ಕಿಂತ ಹೆಚ್ಚಿನ ಪ್ರತ್ಯಯಗಳನ್ನು ಸೇರಿಸುವ ಮೂಲಕ ಸಾದಿಸಿದವು ಆಗಿರುತ್ತವೆ.

ಮನೆ+-ತನ=ಮನೆತನ
ಎದೆ+-ಗಾರ=ಎದೆಗಾರ
ಕುಡಿ+-ತ=ಕುಡಿತ
ಕುಡಿ+-ಕ=ಕುಡುಕ
ಕೆಂಪು+-ಅ=ಕೆಂಪ

ಇಲ್ಲೆಲ್ಲ ಒಂದು ಪದಕ್ಕೆ ಬೇರೊಂದು ಪ್ರತ್ಯಯವನ್ನು ಸೇರಿಸಿ ಹೊಸ ನಾಮಪದಗಳನ್ನು ಸಾದಿಸಿದೆ. ಇನ್ನೊಂದು ಬಗೆಯ ಪ್ರಕಾರವೆಂದರೆ ಸಮಾಸ ಪ್ರಕ್ರಿಯೆಯಲ್ಲಿ ಸಾದಿಸಿದ ರಚನೆಗಳಾದ ನಾಮಪದಗಳು.

ಮನೆ+ಕೆಲಸ=ಮನೆಗೆಲಸ
ಮನೆ+ಮಗಳು=ಮನೆಮಗಳು
ಮನೆ+-ಯ್-+ಆಕೆ=ಮನೆಯಾಕೆ
ಈ ಪದಗಳಲ್ಲಿ ಪದವೊಂದಕ್ಕೆ ಬೇರೆ ಬೇರೆ ಪದಗಳು ಸೇರುವ ಮೂಲಕ ಮತ್ತೆ ಬೇರೆ ನಾಮಪದಗಳು ಬೆಳೆದಿವೆ.

ಹೀಗೆ ನಾಮಪದಗಳನ್ನು ವಿಬಿನ್ನವಾಗಿ ಅರಿತುಕೊಳ್ಳಲು ಸಾದ್ಯವಿರುತ್ತದೆ. ಪದಗಳ ಬಳಕೆಯನ್ನು ಸರಿಯಾಗಿ ಅರಿತುಕೊಂಡಾಗ, ಬಾಶೆಯನ್ನೂ, ಬಾಶೆಯ ಉತ್ಪನ್ನವಾದ ಸಾಹಿತ್ಯವನ್ನೂ, ಬಾಶೆ ಬಳಸುವ ಸಮಾಜವನ್ನೂ ಹೀಗೆ ಎಲ್ಲವನ್ನೂ ಅರಿತುಕೊಳ್ಳುವುದಕ್ಕೆ ಸಹಾಯವಾಗುತ್ತದೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...