ನಮಗೆ ಬಾಲ್ಯದಲ್ಲಿ ಇಂತಹ ಕಠೋರ ನಿರ್ಬಂಧಗಳಿರಲಿಲ್ಲ; ಸವಿತಾ ನಾಗಭೂಷಣ

Date: 11-11-2024

Location: ಬೆಂಗಳೂರು


ಧಾರವಾಡ : 'ಪ್ರತಿಯೊಬ್ಬರ ಜೀವನದಲ್ಲಿ ಬಾಲ್ಯ ಬಹು ಮುಖ್ಯವಾದ ಘಟ್ಟ. ಇಂದಿನ ಮಕ್ಕಳು ಅದರಿಂದ ವಂಚಿತರಾಗುತ್ತಿದ್ದಾರೆ,' ಎಂದು ಕವಯಿತ್ರಿ ಸವಿತಾ ನಾಗಭೂಷಣ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಮಕ್ಕಳ ಸಾಹಿತ್ಯಾಸಕ್ತರ ಗೆಳೆಯರ ಬಳಗ ಮತ್ತು ಚಿಲಿಪಿಲಿ ಪ್ರಕಾಶನ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಕವಿ ರಾಜಶೇಖರ ಕುಕ್ಕುಂದಾ ಅವರ 'ಬಿಸಿ ಬಿಸಿ ಬಾತು' ಮಕ್ಕಳ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

"ಮಕ್ಕಳನ್ನು ಆಟಕ್ಕೆ ಬಿಡದೆ ಪಠ್ಯವನ್ನು ಓದಿಸುವ ಈ ಕಾಲದ ಪರಿ ಅವರನ್ನು ಯಂತ್ರಮಾನವರನ್ನಾಗಿಸುತ್ತಿದೆ. ನಮಗೆ ಬಾಲ್ಯದಲ್ಲಿ ಇಂತಹ ಕಠೋರ ನಿರ್ಬಂಧಗಳಿರಲಿಲ್ಲ. ನಾವು ಬಯಲಿಗೆ ಬೀಳುತ್ತಿದ್ದವು. ಹಕ್ಕಿ ಗೂಡಿನಲ್ಲಿ ತತ್ತಿ, ಕೆರೆಯ ದಂಡೆಯಲಿ ಹಾರುವ ಕಪ್ಪೆ , ಹರಿದಾಡವ ಹಾವನ್ನು ಕಾಣುತ್ತಿದ್ದೆವು. ಇಂದಿನ ಮಕ್ಕಳಿಗೆ ಇಂಥ ಅವಕಾಶಗಳೇ ಇಲ್ಲ; ಅವರು ಮನೆಯಿಂದ ಹೊರಗೆ ಬಂದರೆ ಬೀದಿಯೇ. ಆಟದ ಬಯಲೇ ಇಲ್ಲದಂತಾಗುತ್ತಿದೆ. ಮಗುತನವನ್ನು ಇನ್ನೂ ಹಾಗೆ ಉಳಿಸಿಕೊಂಡು ಬಂದ ರಾಜಶೇಖರ ಕುಕ್ಕುಂದಾ ಅವರ ಕವಿತೆಗಳು ನಮ್ಮ ಬಾಲ್ಯದ ದಿನಗಳನ್ನು ನೆನಪಿಗೆ ತಂದು ಇಂದಿನ ಮಕ್ಕಳಿಗೂ ಸೆಳೆಯುವ ಉತ್ತಮ ರಚನೆಗಳಾಗಿವೆ. ಕವಿತೆಯ ಆಶಯ ಮನೋರಂಜನೆ ಮಾತ್ರ ಆಗದೇ ಅದರಿಂದ ಸಂದೇಶ ರವಾನೆಯೂ ಆಗಲಿ. ಅವರಿಂದ ಇನ್ನೂ ಉತ್ತಮ ಕೃತಿಗಳು ಹೊರಬರಲಿ ಎಂದು ಆಶಿಸುತ್ತೇನೆ," ಎಂದರು.

ಪ್ರಸಕ್ತ ಸಾಲಿನ ಜಿ. ಬಿ. ಹೊಂಬಳ ಪ್ರಶಸ್ತಿಗೆ ಭಾಜನರಾದ ಕವಿ ರಾಜಶೇಖರ ಕುಕ್ಕುಂದಾ ಅವರು ಮಾತನಾಡಿ, "ಪ್ರತಿ ವರ್ಷ ತಮ್ಮ ಜನ್ಮದಿನದಂದು ಒಂದು ಕೃತಿ ಜನ್ಮ ತಾಳುವಂತೆ ಮಾಡುವ ಹೊಸ ಸಂಪ್ರದಾಯವನ್ನು ಹುಟ್ಟು ಹಾಕಿದ ನಿವೃತ್ತ ಗ್ರಂಥಪಾಲಕರಾದ ಜಿ.ಬಿ.ಹೊಂಬಳ ಅವರ ಕಾರ್ಯ ಅತ್ಯಂತ ಶ್ಲಾಘನೀಯ," ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಹಲಗತ್ತಿಯವರು 'ಮಕ್ಕಳ ಸಾಹಿತ್ಯವನ್ನು ಜನಪ್ರಿಯಗೊಳಿಸುವತ್ತ ಆದ್ಯತೆ ನೀಡಬೇಕು. ಪ್ರಕಟಿತ ಪುಸ್ತಕಗಳು ಮಕ್ಕಳಿಗೆ ದೊರೆಯುವಂತಾಗಬೇಕು," ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಚಂದ್ರಕಾಂತ ಬೆಲ್ಲದ ವಹಿಸಿದ್ದರು. ಡಾ. ಆನಂದ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಸಾಹಿತಿಗಳಾದ ಡಾ. ಮಾಲತಿ ಪಟ್ಟಣಶೆಟ್ಟಿ, ಶ್ಯಾಮಸುಂದರ ಬಿದರಕುಂದಿ, ಡಾ. ಸಿ.ಯು. ಬೆಳ್ಳಕ್ಕಿ, ಡಾ. ಬಸು ಬೇವಿನಗಿಡದ, ರಾಜಕುಮಾರ ಕುಲಕರ್ಣಿ, ಅನಿಲ ಗುನ್ನಾಪುರ, ಪ್ರಕಾಶ ಕಡಮೆ, ನಿರ್ಮಲಾ ಶೆಟ್ಟರ್, ಶ್ರೀಧರ ಗಸ್ತಿ, ವಿಶಾಲ ಮ್ಯಾಸರ್ ಮುಂತಾದವರು ಉಪಸ್ಥಿತರಿದ್ದರು.

 

MORE NEWS

ಬ್ರಿಟಿಷ್ ಲೇಖಕಿ ಸಮಂತಾ ಹಾರ್ವೆಗೆ ಪ್ರತಿಷ್ಠಿತ ‘ಬೂಕರ್ ಸಾಹಿತ್ಯ ಪ್ರಶಸ್ತಿ’

14-11-2024 ಬೆಂಗಳೂರು

ಬೆಂಗಳೂರು: ಬ್ರಿಟಿಷ್ ಲೇಖಕಿ ಸಮಂತಾ ಹಾರ್ವೆ ಅವರು 2024ನೇ ಸಾಲಿನ ಪ್ರತಿಷ್ಠಿತ `ಬೂಕರ್ ಸಾಹಿತ್ಯ ಪ್ರಶಸ್ತಿ'ಗೆ ಆಯ...

ಸಮಾಜೋನ್ನತಿಯಲ್ಲಿ ದಾಸವರೇಣ್ಯರ ಕೊಡುಗೆ ಅಪಾರ; ಸುಗುಣೇಂದ್ರ ತೀರ್ಥಶ್ರೀಪಾದರು

13-11-2024 ಬೆಂಗಳೂರು

ಉಡುಪಿ: ಉಡುಪಿಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನ, ಬೆಂಗಳೂರಿನ ಶ್ರೀ ಶ್ರೀನಿವಾಸ...

ಕನ್ನಡ ಭಾಷೆಯನ್ನು ಉಳಿಸುವ ನೈತಿಕ ಹೊಣೆ ನಮ್ಮದಾಗಬೇಕು; ನಾಗತಿಹಳ್ಳಿ

13-11-2024 ಬೆಂಗಳೂರು

ಬೆಂಗಳೂರು: ಎನ್.ಎಂ.ಕೆ.ಆರ್.ವಿ ಮಹಿಳಾ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ -2024 ಸಂಭ್ರಮಾಚರಣೆ,...