ನಾಲ್ವಡಿಯವರನ್ನು ಕೇಂದ್ರವಾಗಿರಿಸಿಕೊಂಡ ಹಲವು ನಿರೂಪಣೆಗಳು

Date: 15-01-2025

Location: ಬೆಂಗಳೂರು


“ಸದ್ಯ ದೊರೆಯುತ್ತಿರುವ ದಾಖಲೆಗಳನ್ನು ಆಧರಿಸಿ ಅವರೂ ಅವರ ಪರಿಸರದಲ್ಲಿದ್ದ ಅವರ ಬಳಗದವರೂ ಮತ್ತು ಹೊರಗಿನಿಂದ ಪ್ರಭಾವ ಬೀರುತ್ತಿದ್ದ ಬ್ರಿಟಿಶ್ ಆಡಳಿತಗಾರರು ಒಟ್ಟಾಗಿ ಆಧುನಿಕ ಮೈಸೂರಿನ ಗತಿಶೀಲತೆಯನ್ನು ರೂಪಿಸಿದ ಬಗೆಯನ್ನು ವಿವರಿಸಿದ್ದಾರೆ,” ಎನ್ನುತ್ತಾರೆ ಡಾ. ಕೆ.ವಿ. ನಾರಾಯಣ ಅವರು ಪ್ರೊ. ಎಸ್. ಚಂದ್ರಶೇಖರ್ ಅವರ “ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಆಧುನಿಕ ಮೈಸೂರು” ಕೃತಿಗೆ ಬರೆದ ಮುನ್ನುಡಿ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿ ಮತ್ತು ಅದರ ಆಸುಪಾಸಿನ ಮೈಸೂರು ದೇಶದ ಚರಿತ್ರೆಯನ್ನು ನಿರೂಪಿಸುವ ಈ ಪುಸ್ತಕಕ್ಕೆ ಪರಿಚಯದ ಕೆಲವು ಮಾತುಗಳನ್ನು ಬರೆಯಲು ಡಾ. ಚಂದ್ರಶೇಖರ್ ಅವರು ನನ್ನನ್ನು ಕೇಳಿರುವುದಕ್ಕೆ ಈ ವಿಷಯದಲ್ಲಿ ನನಗಿರುವ ತಜ್ಞತೆಯಂತೂ ಕಾರಣವಲ್ಲ. ನಿಡುಗಾಲದಿಂದ ಅವರೊಡನೆ ಗೆಳೆತನವನ್ನು ಕಾಯ್ದುಕೊಂಡು ಬಂದಿರುವ ನಾನು ಅವರ ಶೈಕ್ಷಣಿಕ ಬೆಳವಣಿಗೆಯನ್ನು ನಿಕಟವಾಗಿ ಬಲ್ಲೆನೆಂದು ಅವರು ನಂಬಿದ್ದಾರೆ. ಅವರ ಚಿಂತನಾಕ್ರಮವನ್ನು ಹಲವು ಬಾರಿ ಮಾತುಕತೆಗಳಲ್ಲಿ ಹಂಚಿಕೊಂಡಿದ್ದಾರೆ. ಅವರ ಅಧ್ಯಯನ ವಲಯದಲ್ಲಿ ನನಗೆ ತಜ್ಞತೆ ಇಲ್ಲದಿದ್ದರೂ ಆಸಕ್ತಿ ಇದೆಯೆಂಬುದನ್ನು ಅವರು ಬಲ್ಲರು. ಇದೇ ಮುಖ್ಯ ಕಾರಣವಾಗಿ ಈ ಹೊಣೆಯನ್ನು ಅವರು ನನಗೆ ನೀಡಿದ್ದಾರೆ ಎಂದು ತಿಳಿದಿರುವೆ.

ಚರಿತ್ರೆಯ ಪುಸ್ತಕವನ್ನು, ಕೇವಲ ಮಾಹಿತಿಯನ್ನು ಪಡೆದುಕೊಳ್ಳುವ ಕುತೂಹಲಕ್ಕಾಗಿ ಮಾತ್ರವಲ್ಲದೆ, ಅದರ ನಿರೂಪಣೆಯ ಹಿಂದಿನ ತಾತ್ವಿಕತೆಗಾಗಿ ಓದುವವರು ಇರುತ್ತಾರೆ. ಡಾ. ಚಂದ್ರಶೇಖರ್ ಅವರು ಕಳೆದ ಹಲವು ದಶಕಗಳಿಂದ ತಮ್ಮದೆ ಆದ ಒಂದು ತಾತ್ವಿಕ ಚೌಕಟ್ಟನ್ನು ರೂಪಿಸಿಕೊಂಡಿದ್ದಾರೆ. ವ್ಯಕ್ತಿಕೇಂದ್ರಿತ ನಿರೂಪಣೆಗಳನ್ನು ದಾಟಿ ಚಾರಿತ್ರಿಕ ಗತಿಶೀಲತೆಯಲ್ಲಿ ವ್ಯಕ್ತಿಗಳನ್ನು, ಘಟನೆಗಳನ್ನು ಇರಿಸಿ ನೋಡುವುದು ಅವರು ರೂಪಿಸಿಕೊಂಡಿರುವ ಮತ್ತು ಅನುಸರಿಸುತ್ತಿರುವ ಚೌಕಟ್ಟು ಎಂದು ನಾನು ಗ್ರಹಿಸಿದ್ದೇನೆ.

ಮೈಸೂರು ರಾಜ್ಯವು ಸಾಮಾಜಿಕ ಆರ್ಥಿಕ ರಾಜಕೀಯ ನೆಲೆಗಳಲ್ಲಿ ಆಧುನಿಕ ಸ್ವರೂಪವನ್ನು ಪಡೆದುಕೊಂಡ ಕಾಲಾವಧಿಯ ಚರಿತ್ರೆಯನ್ನು ತಮ್ಮ ಹಲವು ಅಧ್ಯಯನಗಳಲ್ಲಿ ಚಂದ್ರಶೇಖರ್ ನಿರೂಪಿದ್ದಾರೆ. ಈ ಬರಹವೂ ಕೂಡ ಅವರ ಅಂತಹ ಪ್ರಯತ್ನಗಳ ಮುಂದುವರಿಕೆಯಾಗಿದೆ. ಇದು ನಾಲ್ವಡಿ ಕೃಷ್ಣರಾಜ ಒಡೆಯ‌ರ್ ಅವರನ್ನು ಕುರಿತಾದ ಬರಹ ಎಂದು ಮೊದಲ ನೋಟಕ್ಕೆ ಅನಿಸಿದರೂ ಕೇವಲ ಅವರನ್ನು ಕೇಂದ್ರದಲ್ಲಿ ಇರಿಸಿಕೊಂಡ ಬರಹವಾಗಿಲ್ಲ. ಬ್ರಿಟಿಶರು ಟಿಪ್ಪುವಿನಿಂದ ಮೈಸೂರನ್ನು ತಮ್ಮ ಅಧಿಕಾರ ವ್ಯಾಪ್ತಿಗೆ ಪಡೆದುಕೊಂಡ ಮೇಲೆ ನಡೆದ ಘಟನಾವಳಿಗಳನ್ನು ಆಧರಿಸಿ ಚಾರಿತ್ರಿಕ ಗತಿಶೀಲತೆಯಲ್ಲಿ ಹಲವು ವ್ಯಕ್ತಿಗಳು ನಿರ್ವಹಿಸಿದ ಪಾತ್ರವನ್ನು ಇಲ್ಲಿ ನಿರೂಪಿಸಲಾಗಿದೆ. ಅಂತಹ ವ್ಯಕ್ತಿಗಳಲ್ಲಿ ನಾಲ್ವಡಿಯವರೂ ಒಬ್ಬರು. ಈ ದೃಷ್ಟಿಕೋನದಿಂದ ಲೇಖಕರು ತಮ್ಮ ನಿರೂಪಣೆಗೆ ಒಂದು ಗತಿಯನ್ನು ರೂಪಿಸಿಕೊಂಡಿದ್ದಾರೆ. ಎಲ್ಲದಕ್ಕೂ ನಾಲ್ವಡಿಯವರೇ ಕಾರಣವೆಂದಾಗಲೀ ಇಲ್ಲವೇ ಅವರು ಕೇವಲ ಸಂದರ್ಭದ ಶಿಶುವಾಗಿದ್ದರೂ ಎಂದಾಗಲೀ ಎರಡೂ ಅತಿಗಳಿಗೆ ಹೋಗದೆ ತಮ್ಮ ನಿರೂಪಣೆಯನ್ನು ಕಟ್ಟಿದ್ದಾರೆ.

ನಾಲ್ವಡಿಯವರನ್ನು ಕೇಂದ್ರವಾಗಿರಿಸಿಕೊಂಡ ಹಲವು ನಿರೂಪಣೆಗಳು ಕನ್ನಡದಲ್ಲಿವೆ. ಅದರಲ್ಲೂ ಕಳೆದ ಕೆಲವು ದಶಕಗಳಲ್ಲಿ ಈ ನಿರೂಪಣೆಗಳು ಮಾಹಿತಿಗಳನ್ನು ಉತ್ತೇಕ್ಷಿಸುವ ನೆಲೆಗಳಿಗೆ ದಾಟಿವೆ. ದಿಟ ಮತ್ತು ಸಟೆಗಳ ನಡುವೆ ಗೆರೆಗಳನ್ನು ಸರಿಯಾಗಿ ಎಳೆಯುವದೂ ಸುಲಭವೆನಿಸದ ನಿರೂಪಣೆಗಳು ನಮ್ಮೆದುರಿಗೆ ಇವೆ. ಅದರಲ್ಲೂ ಆಧಾರವಿಲ್ಲದಿದ್ದರೂ ಸಟೆಯನ್ನೇ ದಿಟವೆಂಬಂತೆ ಪ್ರಸಾರಮಾಡುವ ಇಂದಿನ ದಿನಮಾನಗಳಲ್ಲಿ ನಿರೂಪಣೆಗಳನ್ನು ಜರಡಿಯಾಡುವುದು ತುಂಬಾ ಬಿಕ್ಕಟ್ಟಿನ ಕೆಲಸವಾಗಿದೆ.

ಹಾಗಿದ್ದರೆ ಚಂದ್ರಶೇಖರ್ ಅವರು ಆಯ್ದುಕೊಂಡಿರುವ ದಾರಿ ಯಾವುದು? ಸಾಮಾನ್ಯವಾಗಿ ಸಮಕಾಲೀನ ದಾಖಲೆ ಮತ್ತು ನಿರೂಪಣೆಗಳನ್ನು ಆಧರಿಸಿ ಅವರು ತಮ್ಮ ನಿರೂಪಣೆಗಳಿಗೆ ಬೇಕಾದ ಚೌಕಟ್ಟನ್ನು ರೂಪಿಸಿಕೊಳ್ಳುತ್ತಾರೆ. ಅಂತಹ ದಾಖಲೆಗಳು ಬೇರೆ ಬೇರೆ ಮೂಲಗಳಲ್ಲಿದ್ದು ಅವುಗಳ ನಡುವೆ ಹೊಂದಾಣಿಕೆ ಇಲ್ಲದಿರುವ ಪ್ರಸಂಗಗಳೂ ಇರುತ್ತವೆ. ಅಂತಹ ಸಂದರ್ಭಗಳಲ್ಲಿ ವಾಸ್ತವವನ್ನು ಹೊರಗೆಳೆಯುವ ದಾರಿಯನ್ನು ಹುಡುಕಿಕೊಳ್ಳಬೇಕಾಗುತ್ತದೆ. ಈ ಬರಹದಲ್ಲೂ ಅದೇ ಮಾದರಿಯನ್ನು ಅನುಸರಿಸಿರುವುದು ಕಂಡುಬರುತ್ತದೆ.

ನಿರೂಪಣೆ ಅಧಿಕೃತ (authentic)ವಾಗಿರಬೇಕೋ ಅಥವಾ ಕಳಂಕರಹಿತವಾಗಿರಬೇಕೋ ಎನ್ನುವುದು ಒಂದು ಆಯ್ಕೆಯ ವಿಷಯ. (ಕಳಂಕರಹಿತ ಎನ್ನುವ ಮಾತನ್ನು ನಾನು sincere ಎಂಬುದಕ್ಕೆ ಬದಲಾಗಿ ಬಳಸುತ್ತಿದ್ದೇನೆ. ಸಾಮಾನ್ಯವಾಗಿ sincere ಎನ್ನುವುದಕ್ಕೆ ಪ್ರಾಮಾಣಿಕ ಎಂಬ ಪದವನ್ನು ಬಳಸುವುದುಂಟು. ಆದರೆ ವಾಸ್ತವಾಗಿ sincere ಪದದ ಚರಿತ್ರೆಯನ್ನು ಗಮನಿಸಿದರೆ ಅದಕ್ಕೆ ಪ್ರಾಮಾಣಿಕ ಎಂಬ ಪದದ ಬಳಕೆ ಸರಿಯಾಗದೆಂದು ಗೊತ್ತಾಗುತ್ತದೆ. ಪ್ರಾಚೀನ ಅಥೆನ್ಸ್‌ನಲ್ಲಿ ಶಿಲೆಯ ಬೊಂಬೆಗಳನ್ನು ತಯಾರಿಸಿ ಮಾರಾಟಕ್ಕಿಡುವಾಗ ಆ ಬೊಂಬೆಗಳಲ್ಲಿ ಯಾವ ಕಳಂಕವೂ ಇಲ್ಲ ಎಂಬುದನ್ನು ಗ್ರಾಹಕರಿಗೆ ತಿಳಿಸಲು sincere ಪದವನ್ನು ಬಳಸುತ್ತಿದ್ದರು. ಶಿಲ್ಪವನ್ನು ಸಿದ್ಧಮಾಡುವಾಗ ಏನಾದರೂ ಊನವಾದರೆ, ಗೆರೆಗಳು ಬಂದರೆ ಅದನ್ನು ಮುಚ್ಚಲು ಅರಗಿನ ಲೇಪನವನ್ನು ಮಾಡಿ ಮುಚ್ಚಿಡುವ ಪರಿಪಾಟವಿತ್ತು. ಹಾಗೆ ಅಂತಹ ಲೇಪನ sincere ಇಲ್ಲ ಎಂದು ಹೇಳಲು ಈ ಪದ ಬಳಸುತ್ತಿದ್ದುದುಂಟು. (sin ಅಂದರೆ without) ಹಾಗಾಗಿ ಕಳಂಕರಹಿತ ಎಂಬುದೇ ಸರಿಯಾದ ಪದವೆಂದು ನನ್ನ ಗ್ರಹಿಕೆ) ಚರಿತ್ರೆಯ ನಿರೂಪಣೆಯಲ್ಲಿ ಕಳಂಕರಹಿತವಾಗಿಸುವ ಮಾದರಿಯನ್ನು ಆಯ್ದುಕೊಂಡರೆ ಅದು ತೋರಿಕೆಗೆ ಸರಿಯಾದ ಹಾದಿ ಎನಿಸಿದರೂ ಕಳಂಕಗಳನ್ನು, ಕೊರತೆಗಳನ್ನು ಮುಚ್ಚಿಡಲೂ ಕೂಡ ಬಳಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಅಧಿಕೃತ ನಿರೂಪಣೆಗೆ ತೊಡಗುವುದು ಸರಿಯಾದ ಆದರೆ ತುಂಬಾ ಇಕ್ಕಟ್ಟಿನ ದಾರಿ. ಇಕ್ಕಟ್ಟಿನ ದಾರಿ ಏಕೆಂದರೆ ಸುತ್ತಲೂ ಹರಡಿರುವ ಕಳಂಕರಹಿತ ನಿರೂಪಣೆಗಳನ್ನು ನಿವಾರಿಸಿಕೊಳ್ಳುವುದು ಇಂದಿನ ಸಂದರ್ಭದಲ್ಲಿ ಕಷ್ಟಸಾಧ್ಯವಾಗಿದೆ.

ಚಂದ್ರಶೇಖರ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಧುನಿಕ ಮೈಸೂರಿನ ಬೆಳವಣಿಗೆಯಲ್ಲಿ ವಹಿಸಿದ ಪಾತ್ರವನ್ನು ಕಟ್ಟಿಕೊಡುವಾಗ ಅವರನ್ನು ಅತಿಮಾನವರೆಂದಾಗಲಿ ಕೇವಲ ಚರಿತ್ರೆಯ ಕೈಗೂಸು ಎಂದಾಗಲಿ ಚಿತ್ರಿಸಲು ಹೋಗಿಲ್ಲ. ಸದ್ಯ ದೊರೆಯುತ್ತಿರುವ ದಾಖಲೆಗಳನ್ನು ಆಧರಿಸಿ ಅವರೂ ಅವರ ಪರಿಸರದಲ್ಲಿದ್ದ ಅವರ ಬಳಗದವರೂ ಮತ್ತು ಹೊರಗಿನಿಂದ ಪ್ರಭಾವ ಬೀರುತ್ತಿದ್ದ ಬ್ರಿಟಿಶ್ ಆಡಳಿತಗಾರರು ಒಟ್ಟಾಗಿ ಆಧುನಿಕ ಮೈಸೂರಿನ ಗತಿಶೀಲತೆಯನ್ನು ರೂಪಿಸಿದ ಬಗೆಯನ್ನು ವಿವರಿಸಿದ್ದಾರೆ.

ನಾಲ್ವಡಿಯವರು ಕನ್ನಡಿಗರಿಗೆ ಅವರದೇ ಆದ ಬಣ್ಣದ ಚಿತ್ರದ ಮೂಲಕ ಪರಿಚಿತರು. ಆ ಚಿತ್ರ ಹಳೆಯ ಮೈಸೂರಿನ ಮನೆಮನೆಗಳ ಗೋಡೆಗಳ ಮೇಲೆ ಬಹುಕಾಲ ನೆಲೆ ನಿಂತಿತ್ತು. ಆ ಚಿತ್ರದ ಹಿಂದಿರುವ ವ್ಯಕ್ತಿಯು ಚರಿತ್ರೆಯ ಹರವಿನಲ್ಲಿ ವಹಿಸಿದ ಪಾತ್ರವನ್ನು ಜನಸಾಮಾನ್ಯರು ತಿಳಿಯುವ ಗೋಜಿಗೆ ಹೋಗಲೇ ಇಲ್ಲ. ಅವರಿಗೆ ಆ ಕಾಲದಲ್ಲಿ ಅದು ಅಗತ್ಯವೆಂದು ತೋರಲಿಲ್ಲ. ಆದರೆ ಕಾಲ ಸರಿದಂತೆ ಶತಮಾನ ಸರಿದಂತೆ ಆ ಚಿತ್ರದ ಹಿಂದಿರುವ ನಾಲ್ವಡಿಯವರ ದಿಟವನ್ನು ಈ ಕೃತಿ ಕಟ್ಟಿಕೊಡಲು ಯತ್ನಿಸಿದೆ ಮತ್ತು ಅದನ್ನು ಯಶಸ್ವಿಯಾಗಿ ನಿರ್ವಹಿಸಿದೆ ಎಂದು ತಿಳಿದಿದ್ದೇನೆ.

ಅಭಿವೃದ್ಧಿಯ ದಾರಿಯಲ್ಲಿ ಸಾಮಾನ್ಯರ ಬದುಕು ಹಸನಾಗಲು ಬೇಕಿದ್ದ ದಾರಿಗಳನ್ನು ನಾಲ್ವಡಿಯವರ ಆಡಳಿತ ಹುಡುಕಿ ಅದನ್ನು ಜಾರಿಗೆ ತರಲು ಯತ್ನಿಸಿದೆ. ಜನರು ಅವಕಾಶವಂಚಿತರಾಗದಂತೆ ನೋಡಿಕೊಳ್ಳುವ ಜೊತೆಗೆ ಅವರಿಗೆ ದೊರೆತ ಅವಕಾಶಗಳ ಉಪಯೋಗವನ್ನು ಪಡೆದುಕೊಳ್ಳಲು ಬೇಕಾದ ಕಲಿಕೆಯ ದಾರಿಗಳನ್ನು ತೆರೆದಿಡಲು ಆಡಳಿತ ಮುಂದಾಯಿತು. ಆದರೆ ಅವಕಾಶಗಳ ಸದುಪಯೋಗಕ್ಕೆ ಬೇಕಾಗಿದ್ದ ಸಾಮರ್ಥ್ಯಗಳನ್ನು ಗಳಿಸಿಕೊಳ್ಳಲು ಸಮಾಜದ ಎಲ್ಲ ಸಮುದಾಯಗಳ ಜನರಿಗೂ ಸಮಾನವಾದ ಸಾಧ್ಯತೆಗಳನ್ನು ಹುಟ್ಟಿಹಾಕಿತೋ ಇಲ್ಲವೋ ಎಂಬುದನ್ನು ಮತ್ತಷ್ಟು ಅಧ್ಯಯನಗಳಿಂದ ಅರಿತುಕೊಳ್ಳಬೇಕಾದ ಅಗತ್ಯವಿದೆಯೆಂದು ತೋರುತ್ತದೆ. ಪಾರಂಪರಿಕ ಉತ್ಪಾದನಾ ಮಾರ್ಗಗಳಿಂದ ಪಲ್ಲಟಗೊಳ್ಳುತ್ತಿದ್ದ ಉತ್ಪಾದನಾ ವಲಯ ಮತ್ತು ಪೂರಕವಾಗಿದ್ದ ಸೇವಾವಲಯಗಳು (ಆ ವಲಯಗಳಲ್ಲಿದ್ದ ಹೆಂಗಸರನ್ನೂ ಒಳಗೊಂಡಂತೆ) ಹೊಸ ಬಗೆಯ ಬದುಕಿನ ಸವಾಲುಗಳಿಗೆ ಸನ್ನದ್ಧರಾಗಲು ಬೇಕಿದ್ದ ಸಾಮರ್ಥ್ಯಗಳನ್ನು ಪಡೆದುಕೊಳ್ಳಬೇಕು ಎಂಬುದು ಆಡಳಿತದ ಆಶಯವಾಗಿದ್ದಿರಬಹುದು. ಆದರೆ ಅದು ವಾಸ್ತವದಲ್ಲಿ ನೆರವೇರಿತೇ ಎಂಬುದನ್ನು ನಾವೀಗ ಕಂಡುಕೊಳ್ಳಬೇಕಿದೆ.

ಹಿಂದುಳಿದ ಜಾತಿಗಳನ್ನು ಗಮನದಲ್ಲಿ ಇರಿಸಿಕೊಂಡು ರಾಜ್ಯಾಡಳಿತವು ಕೈಕೊಂಡ ಕ್ರಮಗಳು ಜಾತಿಶ್ರೇಣಿಯ ಯಾವ ಹಂತದವರೆಗೆ ಕ್ರಿಯಾಶೀಲವಾಯಿತು ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿದೆ. ಭೂಮಾಲೀಕರು ಮತ್ತು ವ್ಯಾಪಾರೀ ಸಮುದಾಯದ ಜಾತಿಗಳು ಅವಕಾಶಗಳನ್ನು ಹೆಚ್ಚಿಸಿ ಕೊಂಡದ್ದು ಸ್ಪಷ್ಟವಿದೆ. ಭೂಹಿಡುವಳಿಗಳ ಮಾಲಿಕತ್ವದ ಸ್ವರೂಪದಲ್ಲಿ ಯಾವ ಬದಲಾವಣೆಗಳೂ ಆದಂತೆ ತೋರುವುದಿಲ್ಲ. ಹಾಗಾಗಿ ಜಾತಿ ವ್ಯವಸ್ಥೆಯ ಆರ್ಥಿಕ ಬುನಾದಿಗಳು ಹಾಗೆಯೇ ಉಳಿದುಕೊಂಡಿರುವಂತೆ ತೋರಿತ್ತದೆ.

ಈ ಮಾತುಗಳನ್ನು ಹೇಳಲು ಕಾರಣವಿದೆ. ನಾಲ್ವಡಿಯವರನ್ನು ಕೇಂದ್ರದಲ್ಲಿ ಇರಿಸಿಕೊಂಡ ಈ ಬಗೆಯ ಅಧ್ಯಯನಗಳು ಇನ್ನೂ ಕೊನೆಗೊಂಡಿಲ್ಲ ಎನ್ನುವುದನ್ನು ವಿವರಿಸಲು ಈ ಮಾತನ್ನು ಹೇಳಬೇಕಾಗಿ ಬಂತು. ಇಂತಹ ಅಧ್ಯಯನವನ್ನು ಕೈಗೊಂಡು ಯಶಸ್ವಿಯಾಗಿ ನಿರ್ವಹಿಸಿದ ಗೆಳೆಯ ಚಂದ್ರಶೇಖರ್ ಅವರನ್ನು ಅಭಿನಂದಿಸುತ್ತೇನೆ. ಈ ಕೆಲವು ಮಾತುಗಳನ್ನು ಬರೆಯಲು ಅನುವು ಮಾಡಿಕೊಟ್ಟಿದ್ದಕ್ಕೆ ಅವರಿಗೆ ವಂದನೆಗಳು.

- ಡಾ. ಕೆ.ವಿ. ನಾರಾಯಣ

 

MORE NEWS

Kerala Literature festival- 2025; ಶಾಂತಿ, ಸಮಾನತೆಯ ಜಗತ್ತು: ಗಾಂಧಿ, ಲೂಥರ್ ಕಿಂಗ್ ಕನಸ್ಸಾಗಿತ್ತು 

25-01-2025 ಬೆಂಗಳೂರು

`ಬುಕ್ ಬ್ರಹ್ಮ’ ವಿಶೇಷ ವರದಿ ಕಲ್ಲಿಕೋಟೆ: ಇಲ್ಲಿನ ಕಡಲ ತೀರದಲ್ಲಿ ನಡೆಯತ್ತಿರುವ ಎಂಟನೇ ’ಕೇರಳ ಲಿಟರ...

ಜರ್ಮನ್ ಭಾಷೆಯನ್ನು ಜಗತ್ತಿಗೆ ತಲುಪಿಸುವ ನಿಟ್ಟಿನಲ್ಲಿ ಭಾಷಾಂತರದ ತಪಸ್ಸಿಗೆ ಕೂತೆ: ಮೈಕಲ್ ಹಾಫ್ಮನ್ 

25-01-2025 ಬೆಂಗಳೂರು

`ಬುಕ್ ಬ್ರಹ್ಮ’ ವಿಶೇಷ ವರದಿ ಕಲ್ಲಿಕೋಟೆ: “ಜರ್ಮನ್ ಭಾಷೆಯನ್ನು ಜಗತ್ತಿಗೆ ತಲುಪಿಸುವ ನಿಟ್ಟಿನಲ್ಲಿ ...

Kerala Literature festival- 2025; ಶ್ರೇಷ್ಠ ಸಾಹಿತ್ಯ ಕೃತಿಗಳು ಅಜರಾಮರ - ಕೆ.ಸಚ್ಚಿದಾನಂದನ್ 

25-01-2025 ಬೆಂಗಳೂರು

`ಬುಕ್ ಬ್ರಹ್ಮ’ ವಿಶೇಷ ವರದಿ ಕಲ್ಲಿಕೋಟೆ: “ಜಗತ್ತಿನ ಇತಿಹಾಸವನ್ನು ಗಮನಿಸಿದರೆ ಹಲವಾರು ಸಂದರ್ಭಗಳಲ್...