"ಮಹಿಳಾ ನಾಗಾ ಸಾಧುಗಳು ಜೀವಿಸಿರುವಾಗಲೇ ಸ್ವತಃ ತನ್ನ ಪಿಂಡದಾನವನ್ನು ಕೊಡಬೇಕು. ಮುಂಡನ ಮಾಡಿಸಿಕೊಳ್ಳಬೇಕು. ನದಿಯಲ್ಲಿ ಸ್ನಾನ ಮಾಡಿದ ನಂತರ ಸದಾ ಭಗವಂತನ ನಾಮಸ್ಮರಣೆ ಮಾಡುತ್ತಿರಬೇಕು. ಬೆಳಗ್ಗೆ ಬ್ರಾಹ್ಮಮುಹೂರ್ತದಲ್ಲಿ ಎದ್ದು ಶಿವ ಜಪ ಮಾಡಬೇಕು ಸಂಜೆ ದತ್ತಾತ್ರೇಯ ಭಗವಂತನನ್ನು ಪೂಜಿಸಬೇಕು," ಎನ್ನುತ್ತಾರೆ ಡಾ ಎಂ.ವಿ. ನಾಗರಾಜರಾವ್ ಅವರು ತಮ್ಮ ‘ನಾಗಾ ಸಾಧುಳ ರಹಸ್ಯ ಪ್ರಪಂಚ’ ಕಾದಂಬರಿಗೆ ಬರೆದ ಲೇಖಕರ ನುಡಿ.
ಪ್ರಾರಂಭದಲ್ಲಿ ವೇದವ್ಯಾಸರು ಸಂಘಟಿಸಿದ ವನರೂಪಿ ಸನ್ಯಾಸಿ ಪರಂಪರೆಯನ್ನು ನಂತರದಲ್ಲೂ ಮುಂದುವರಿಸಲಾಯಿತು. ಅನಂತರ ಶುಕದೇವ, ಋಷಿ-ಮುನಿಗಳು ಮತ್ತು ಸಂತರು ಈ ಪರಂಪರೆಯನ್ನು ತಮಗೆ ಅನಿಸಿದಂತೆ ಹೊಸ ರೂಪವನ್ನು ಕೊಟ್ಟು ಬೆಳೆಸಿದರು.
ಆದಿಗುರು ಶಂಕರಾಚಾರ್ಯರು ಅಧ್ಯಾತ್ಮಿಕ ಶಕ್ತಿಯ ಜೊತೆಗೆ ಆಕ್ರಮಣಕಾರರನ್ನು ಎದುರಿಸಲು ಸಂಘಟನೆಯಲ್ಲಿ ತೊಡಗಿದರು. ವ್ಯಾಯಾಮಗಳಿಂದ ಶರೀರವನ್ನು ಸದೃಢ ಗೊಳಿಸಲು ಶಸ್ತ್ರ ಸಂಚಾಲನೆಯನ್ನು ಕರಗತ ಮಾಡಿಕೊಳ್ಳಲು ಸಾಧುಗಳಿಗೆ ಸೂಚಿಸಿದರು.
ಭಾರತೀಯ ಸಂಸ್ಕೃತಿ ಮತ್ತು ದರ್ಶನದ ಸನಾತನ ಮೌಲ್ಯಗಳನ್ನು ಅಧ್ಯಯನ ಮಾಡಿ ಅದನ್ನು ಎಲ್ಲರೂ ಅನುಸರಿಸಲು ಶ್ರಮಿಸಿದರು. ನಾಲ್ಕು ಮಠಗಳನ್ನು ಸ್ಥಾಪಿಸಿದರು. ದಶನಾಮ ಸಂಪ್ರದಾಯವನ್ನು ಚಾಲನೆಗೊಳಿಸಿದರು. ಮುಂದೆ ಮಠಗಳು 'ಅಖಾಡ' ಎಂದು ಕರೆಯಲ್ಪಟ್ಟವು. ಮೊದಲ ಅಖಾಡ "ಆಹ್ವಾನ ಅಖಾಡ”, ಸನ್ 547ರಲ್ಲಿ ಪ್ರಾರಂಭವಾಯಿತು.
ನಾಗಾಪಂಥ, ನಾಥ ಮತ್ತು ನಾಗಾ ಪರಂಪರೆ ಗುರು ದತ್ತಾತ್ರೇಯರ ಪರಂಪರೆಯ ಶಾಖೆ ಎನ್ನಲಾಗಿದೆ. ನವನಾಥ ಪರಂಪರೆಯನ್ನು ಸಿದ್ದರ ಮಹತ್ವದ ಪರಂಪರೆ ಎನ್ನ ಲಾಗಿದೆ. ಗುರು ಮತ್ಯೇಂದ್ರನಾಥ, ಗುರು ಗೋರಖನಾಥ, ಸಾಯಿನಾಥ ಬಾಬಾ, ಮಹಾನನ ಮಹಾರಾಜ, ಕನೀಫನಾಥ, ಬಾಬಾ ರಾಮದೇವ, ತೇಜಾಜಿ ಮಹಾರಾಜ್, ಔರಂಗೀನಾಥ, ಗೋಹಿನಾಥ, ಚುಣಕರನಾಥ, ಭರ್ತೃಹರಿ, ಜಾಲಂಧೀಕಾರ ಮುಂತಾದವರು ಈ ಪರಂಪರೆಯಲ್ಲಿ ಪ್ರಮುಖರು. ಇವರಲ್ಲಿ ತಿರುಗಾಟದವರೇ ಹೆಚ್ಚಾಗಿದ್ದಾರೆ.
ಈ ಪರಂಪರೆ ಆದಿಶಂಕರಾಚಾರ್ಯರಿಂದ ಬಂದಿರುವ ಭಾರತೀಯ ಸಂಸ್ಕೃತಿ ಮತ್ತು ದರ್ಶನದ ಸನಾತನ ಮೌಲ್ಯವನ್ನು ಅಧ್ಯಯನ ಮಾಡಿ ಅದನ್ನು ಅನುಸರಿಸುತ್ತದೆ.
ನಾಗಾಸಾಧುಗಳು ಹಿಂದೂಧರ್ಮಾವಲಂಬಿ ಸಾಧುಗಳು. ನಗ್ನರಾಗಿರುವ ಇವರು ಯುದ್ಧ ಕಲೆಯಲ್ಲಿ ನಿಪುಣರು. ಇವರು ಬೇರೆ ಬೇರೆ ಅಖಾಡಗಳಲ್ಲಿರುತ್ತಾರೆ. ಸನ್ಯಾಸಿ ಯಾಗುವ ಈ ಪರಂಪರೆಯಲ್ಲಿ ಸೇರಿಕೊಳ್ಳುವುದು ತುಂಬ ಕಷ್ಟ, ಅಖಾಡದಲ್ಲಿ ಯಾರನ್ನೂ ಸುಲಭವಾಗಿ ಸೇರಿಸಿಕೊಳ್ಳುವುದಿಲ್ಲ. ತಪ, ಬ್ರಹ್ಮಚರ್ಯ, ವೈರಾಗ್ಯ, ಧ್ಯಾನ, ಸನ್ಯಾಸ ಮತ್ತು ಧರ್ಮಕ್ಕೆ ಅನುಸಾರವಾಗಿ ನಿಷ್ಠೆ, ಶ್ರದ್ಧೆ ಇತ್ಯಾದಿ ವಿಷಯವನ್ನು ಅನೇಕ ವರ್ಷಗಳ ವರೆಗೆ ಪರೀಕ್ಷಿಸಲಾಗುವುದು. ಅವರು ತಮ್ಮ ಮುಂಡನ ಮತ್ತು ಪಿಂಡದಾನದ ನಂತರ ಗುರುಮಂತ್ರ ಪಡೆದು ಸನಾತನ ಧರ್ಮದಲ್ಲಿ ದೀಕ್ಷಿತರಾಗುತ್ತಾರೆ.
ಸಾಂಸಾರಿಕ ಜೀವನದಿಂದ ವಿರಕ್ತರಾಗಿದ್ದು ಇಂದ್ರಿಯ ನಿಯಂತ್ರಣದಲ್ಲಿರಬೇಕು. ಎಲ್ಲ ಆಸೆ. ಮಾಯೆ - ಮೋಹಗಳಿಂದ ದೂರವಿರಬೇಕು. ಜೀವನದ ನಿಸ್ಸಾರತೆ, ಅನಿಶ್ಚತತೆಯ ವಿಷಯ ಅವರಿಗೆ ತಿಳಿದಿರಬೇಕು.
ನಾಗಾ ಸಾಧುಗಳಿಗೆ ಮೊದಲು ಬ್ರಹ್ಮಚಾರಿಯಾಗಿರುವಂತೆ ಶಿಕ್ಷಣ ನೀಡಲಾಗುತ್ತದೆ. ಈ ಪರೀಕ್ಷೆ ಮುಗಿದ ನಂತರ ಮಹಾಪುರುಷ ಹಾಗೂ ಅವಧೂತ ದೀಕ್ಷೆ ನೀಡಲಾಗುವುದು. ಆನಂತರದ ಪರೀಕ್ಷೆಯಲ್ಲಿ ಸ್ವಯಂ ಪಿಂಡದಾನವಾಗುತ್ತದೆ. ಅನಂತರ ದಂಡೀ ಸಂಸ್ಕಾರ ನಡೆಯುತ್ತದೆ. ಇದನ್ನು 'ಬಿಜವಾನ್' ಎನ್ನಲಾಗುತ್ತದೆ. ಲಿಂಗ ಭಗ್ನವೇ ದಂಡೀ ಸಂಸ್ಕಾರ.
ನಾಗಾ ಸಾಧುವಾಗಲು ಕನಿಷ್ಠ 12 ವರ್ಷ ಬೇಕು. ನಾಗಾ ಪಂಥವನ್ನು ಸೇರಲು ವ್ಯಕ್ತಿಯ ಬಗ್ಗೆ ಅಗತ್ಯ ಮಾಹಿತಿಯನ್ನು ಸಂಗ್ರಹಿಸಲು ಸುಮಾರು ಆರು ವರ್ಷ ಹಿಡಿಯುತ್ತದೆ. ಈ ಸಮಯದಲ್ಲಿ ಅವನು ಒಂದು ಲಂಗೋಟಿ ಮಾತ್ರ ಧರಿಸುತ್ತಾನೆ. ಬೇರೆ ವಸ್ತ್ರವನ್ನು ಅವನು ಧರಿಸುವಂತಿಲ್ಲ.
ಅಂತಿಮ ಪರೀಕ್ಷೆ ದಿಗಂಬರ ಮತ್ತು ಶ್ರೀದಿಗಂಬರ. ದಿಗಂಬರ ಒಂದು ಲಂಗೋಟಿ ಯಲ್ಲಿರುತ್ತಾನೆ. ಆದರೆ ಶ್ರೀದಿಗಂಬರ ಯಾವುದೇ ವಸ್ತ್ರವಿಲ್ಲದೆ ನಗ್ನ ಆಗಿರುತ್ತಾನೆ. ಶ್ರೀದಿಗಂಬರ ನಾಗಾನ ಲಿಂಗವನ್ನು ಭಗ್ನ ಮಾಡಲಾಗುವುದು. ಶಾರೀರಿಕ ರೂಪದಲ್ಲಿ ನಾಗಾ ಸಾಧುವನ್ನು ವಿರಕ್ತನನ್ನಾಗಿಸಲಾಗುತ್ತದೆ. ಆದರೆ ಅವನ ಮಾನಸಿಕ ಸ್ಥಿತಿ ಅವನ ಬಲದ ಮೇಲೆ ನಿರ್ಧಾರವಾಗುತ್ತದೆ.
ಕುಂಭಮೇಳದಲ್ಲಿ ಅಂತಿಮ ಪ್ರತಿಜ್ಞೆ ಸ್ವೀಕರಿಸಿದ ನಂತರ ಲಂಗೋಟಿಯನ್ನು ವರ್ಜಿಸಬೇಕು. ಜೀವನ ಪರ್ಯಂತ ಅವನು ಇದೇ ಸ್ಥಿತಿಯಲ್ಲಿರಬೇಕು.
ನಾಗಾಗಳು ಅಖಾಡದ ಆಶ್ರಮ ಮತ್ತು ಮಂದಿರಗಳಲ್ಲಿ ಇರುತ್ತಾರೆ. ಕೆಲವರು ತಪಸ್ಸು ಮಾಡಲು ಹಿಮಾಲಯ ಮತ್ತು ಎತ್ತರದ ಪರ್ವತದ ಗುಹೆಗಳಲ್ಲಿ ಜೀವನ ನಡೆಸುತ್ತಾರೆ. ಅಖಾಡದ ಆದೇಶದಂತೆ ನಾಗಾ ಸಾಧು ಕೇವಲ ಬರಿಗಾಲಿನಲ್ಲಿಯೇ ಸುತ್ತಾಡುತ್ತಾರೆ. ಈ ಸಮಯದಲ್ಲಿ ಯಾವುದಾದರೂ ಹಳ್ಳಿಯಲ್ಲಿ ಅನುಕೂಲವಾದ ಜಾಗದಲ್ಲಿ ಜೋಪಡಿ ಕಟ್ಟಿಕೊಂಡು ಅಗ್ನಿಕುಂಡ ನಿರ್ಮಿಸಿ ಚಿಲುಮೆ ಎಳೆಯುತ್ತಿರುತ್ತಾರೆ.
ಕುಂಭಮೇಳದ ಸಮಯದಲ್ಲಿ ಸಾಧುಗಳು ಹೊರಗೆ ಕಾಣಿಸಿಕೊಳ್ಳುತ್ತಾರೆ. ನಂತರ ಒಂದು ರೀತಿಯಲ್ಲಿ ಅದೃಶ್ಯರಾಗಿರುತ್ತಾರೆ. ವಸ್ತ್ರವಿಲ್ಲದೆ ಕೇವಲ ಭಸ್ಮ ಲೇಪಿಸಿಕೊಂಡು, ಅಗ್ನಿಕುಂಡದ ಭಸ್ಮವನ್ನು ಹಣೆಯಲ್ಲಿ ಧರಿಸಿ ಕುಂಭಮೇಳದ ಪವಿತ್ರ ಸ್ನಾನದ ನಂತರ ಶ್ರದ್ಧಾವಂತರೆದುರು ಮಾತ್ರ ನಿಲ್ಲುತ್ತಾರೆ.
ನಾಗಾ ಸಾಧುಗಳ ಕೋಪ ಭಯಂಕರ. ಸ್ವತಃ ಅವರು ಯಾರಿಗೂ ತೊಂದರೆ ಕೊಡುವುದಿಲ್ಲ. ಯಾವುದೇ ಕಾರಣವಿಲ್ಲದೆ ಇವರನ್ನು ಕೆಣಕಿದರೆ, ತೊಂದರೆ ಕೊಟ್ಟರೆ, ಉತ್ಸಾಹಿಸಿದರೆ ಇವರ ಕೋಪ ಮುಗಿಲು ಮುಟ್ಟುತ್ತದೆ.
ನಾಗಾ ಸಾಧುಗಳು ಹೆಚ್ಚಾಗಿ ಪುರುಷರು. ಕೆಲವು ಮಹಿಳಾ ನಾಗಾ ಸಾಧುಗಳಿದ್ದಾರೆ. ನಾಗಾ ಸಾಧುಗಳು ದಿಗಂಬರರಾಗಿದ್ದರೆ ಮಹಿಳಾ ಸಾಧುಗಳು ಕಾವಿ ವಸ್ತ್ರವನ್ನು ಸುತ್ತಿಕೊಂಡಿರುತ್ತಾರೆ.
ನಾಗಾಗಳ ಅಭಿವಾದನ ಮಂತ್ರ “ಓಂ ನಮಃ ಶಿವಾಯ". ನಾಗಾಗಳು ಶಿವಭಕ್ತರು. ಶಿವನಲ್ಲದೆ ಅವರು ಬೇರೆ ದೇವರನ್ನು ಒಪ್ಪುವುದಿಲ್ಲ.
ತ್ರಿಶೂಲ, ಡಮರು, ರುದ್ರಾಕ್ಷಿ, ಕತ್ತಿ, ಶಂಖು, ಕುಂಡಲ, ಕಮಂಡಲ, ಚಿಮಟಿಗೆ, ಕೈಕಡಗ, ಸೊಂಟವಟ್ಟಿ ಅಥವಾ ಕೌಪೀನ, ಚಿಲುಮೆ, ಅಗ್ನಿಕುಂಡ ಮತ್ತು ವಿಭೂತಿ - ಇವು ಸಾಮಾನ್ಯವಾಗಿ ನಾಗಾ ಸಾಧುಗಳ ಪ್ರಮುಖ ವಸ್ತುಗಳು.
ಗುರುಸೇವೆ, ಆಶ್ರಮದ ಕೆಲಸ, ಪ್ರಾರ್ಥನೆ, ತಪ ಮತ್ತು ಯೋಗಕ್ರಿಯೆಗಳು ಅವರ ದೈನಂದಿನ ಕೆಲಸ-ಕಾರ್ಯಗಳು. ನಾಗಾ ಸಾಧುಗಳು ಮುಖ್ಯವಾಗಿ 13 ಅಖಾಡಗಳಲ್ಲಿ ಚದುರಿಹೋಗಿದ್ದಾರೆ.
ನಾಗಾ ಸಾಧುಗಳು ಪವಿತ್ರ ಸ್ನಾನದ ಸಮಯದಲ್ಲಿ ಹದಿನೇಳು ಶೃಂಗಾರ ಮಾಡಿಕೊಳ್ಳುತ್ತಾರೆ. ಶೃಂಗಾರದ ನಂತರ ತಮ್ಮ ಇಷ್ಟದೈವವನ್ನು ಪ್ರಾರ್ಥಿಸುತ್ತಾರೆ... ಹದಿನೇಳು ಶೃಂಗಾರಗಳು - ಲಂಗೋಟಿ, ವಿಭೂತಿ, ಚಂದನ, ಸೊಂಟದಲ್ಲಿ ಹೂಮಾಲೆ, ಹಣೆಯಲ್ಲಿ ಶ್ರೀಚೂರ್ಣ, ತಿಲಕ, ಕುಂಡಲ, ಚಿಮಟಿಗೆ, ಡಮರು ಅಥವಾ ಕಮಂಡಲ, ಕಾಲಿಗೆ ಕಬ್ಬಿಣ ಅಥವಾ ಬೆಳ್ಳಿಯ ಕಡಗ, ಉಂಗುರ, ಪಂಚಕೇಶ, ಗಂಟು ಹಾಕಿದ ಜಟೆ, ಕಣ್ಣು ಕಪ್ಪು, ಕೈಯಲ್ಲಿ ಬಳೆ ಅಥವಾ ಕಡಗ, ವಿಭೂತಿ ಲೇಪನ ಮತ್ತು ತೋಳುಗಳಿಗೆ ರುದ್ರಾಕ್ಷಿ ಮಾಲೆ ಇರುತ್ತದೆ.
ನಾಲ್ಕು ಸ್ಥಳಗಳಲ್ಲಿ ಕುಂಭಗಳು ನಡೆಯುತ್ತವೆ. ಇಲ್ಲಿ ನಾಗಾಗಳಿಗೆ ಬೇರೆ ಬೇರೆ ಹೆಸರುಗಳಿವೆ.
ಅಲಹಾಬಾದ್ ಕುಂಭದಲ್ಲಿ - ನಾಗಾ, ಉಜ್ಜಿನಿ ಕುಂಭದಲ್ಲಿ- ಖೂನೀ ನಾಗಾ, ಹರಿದ್ವಾರ ಕುಂಭದಲ್ಲಿ - ಬರ್ಫಾನಿ ನಾಗಾ, ನಾಸಿಕದಲ್ಲಿನ ಕುಂಭದಲ್ಲಿ ಖಿಚಡಿ ನಾಗಾ - ನಾಗಾಗಳು ಯಾವುದೇ ಕುಂಭದಲ್ಲಿ ದೀಕ್ಷೆ ಪಡೆಯಬಹುದು.
ನಾಗಾಗಳಿಗೆ ಅವರ ಈ ಶ್ರೇಣಿಗೆ ತಕ್ಕಂತೆ ಹುದ್ದೆ ಅಥವಾ ಪದವಿಯಿರುತ್ತದೆ ಕೊತವಾಲ, ಪೂಜಾರಿ, ಹಿರಿಯ ಕೊತವಾಲ, ಭಂಡಾರಿ, ಕೊಠಾರಿ, ಹಿರಿಯ ಕೊಠಾರಿ, ಮಹಂತ ಮತ್ತು ಮಂತ್ರಿ ಅಥವಾ ಮಹಾಮಹಂತ.
ಸನಾತನ ಧರ್ಮ, ಯೋಗ, ಧ್ಯಾನ ಮತ್ತು ಸಮಾಧಿ - ಕಾರಣದಿಂದ ನಾಗಾ ಸಾಧುಗಳು ಸದಾ ವಿದೇಶಿಯರನ್ನು ಆಕರ್ಷಿಸುತ್ತಾರೆ. ವಿಶೇಷವಾಗಿ ಯೂರೋಪು ಮಹಿಳೆಯರು ನಾಗಾ ಸಾಧು ಆಗಲು ಅಪೇಕ್ಷಿಸುತ್ತಾರೆ. ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಯಮುನಾ, ಗಂಗಾ ಮತ್ತು ಅದೃಶ್ಯ ಸರಸ್ವತಿಯ ಸಂಗಮದಲ್ಲಿ ನಡೆಯುವ ಮಹಾಕುಂಭ ಮೇಳದಲ್ಲಿ ವಿದೇಶಿ ಮಹಿಳೆಯರು ನಾಗಾ ಸಾಧುಗಳನ್ನು ಕಾಣಲು ಇಷ್ಟಪಡುತ್ತಾರೆ. ನಾಗಾ ಆಗಲು ಕಠಿಣ ಪ್ರಕ್ರಿಯೆ ಮತ್ತು ತಪಸ್ಸು ಮಾಡುವುದರ ಅರಿವಿದ್ದರೂ ವಿದೇಶಿ ಮಹಿಳೆಯರಿಗೆ ನಾಗಾ ಸಾಧು ಆಗುವ ಆಕರ್ಷಣೆಯೇನೂ ಕಮ್ಮಿಯಾಗಿಲ್ಲ.
ಗೃಹಜೀವನದಿಂದ ದೂರವಾದ ಮಹಿಳಾ ಸಾಧುಗಳು ದಿನದ ಪ್ರಾರಂಭ ಮತ್ತು ಅಂತ್ಯವನ್ನು ಪೂಜೆ-ಅರ್ಚನೆಯಿಂದ ಕಳೆಯುತ್ತಾರೆ. ಇವರ ಬದುಕು ಸುಖದ ಸುಪ್ಪತ್ತಿಗೆಯಲ್ಲ. ಪ್ರತಿಹಂತದಲ್ಲಿ ಕಠಿಣ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಜೀವನ ಸರಳವಲ್ಲ.
ಮಹಿಳಾ ನಾಗಾ ಸಾಧುಗಳನ್ನು ಮಾಯಿ, ಅವಧೂತನೀ ಅಥವಾ ನಾಗಿನಿ ಎಂದು ಕರೆಯುತ್ತಾರೆ. ಮಹಿಳಾ ನಾಗಾ ಸಾಧುಗಳಿಗೆ ಅಖಾಡದಲ್ಲಿ ಪೂರಾ ಗೌರವವನ್ನು ಕೊಡಲಾಗುತ್ತದೆ. ಆದರೆ ಇವರಿಗೆ ಅಖಾಡದಲ್ಲಿ ಯಾವುದೇ ಪ್ರಮುಖ ಹುದ್ದೆಯನ್ನು ಕೊಡಲಾಗುವುದಿಲ್ಲ. ಅವರಿಗೆ ವಿಸ್ತ್ರತ ದಶನಾಮ ಸನ್ಯಾಸಿನಿ ಅಖಾಡದ ಹೆಸರನ್ನು ಕೊಡಲಾಗುತ್ತದೆ.
ಮಹಿಳಾ ನಾಗಾ ಸಾಧುವಾಗಲು ಕಠಿಣ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಮಹಿಳಾ ನಾಗಾ ಸಾಧುವಾಗಲು 10 ರಿಂದ 15 ವರ್ಷ ಕಠಿಣ ಬ್ರಹ್ಮಚರ್ಯ ಪಾಲನೆ ಮಾಡಬೇಕು. ಗುರುವಿಗೆ ತಾನು ಯೋಗ್ಯಳು, ಈಶ್ವರನಿಗೆ ಸಮರ್ಪಿತಳು ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ. ಗ
ಮಹಿಳಾ ನಾಗಾ ಸಾಧುವಾಗುವ ಮುನ್ನ ತನ್ನ ಗತ ಜೀವನದ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಬೇಕಾಗುತ್ತದೆ. ತಾನು ಕಠಿಣ ಸಾಧನೆ ಮಾಡಲು ಅರ್ಹಳೇ ಎಂದು ಖಚಿತ ಪಡಿಸಬೇಕಾಗುತ್ತದೆ. e baale mood
ಪುರುಷ ನಾಗಾ ಸಾಧುಗಳು ನಗ್ನರಾಗಿರುತ್ತಾರೆ. ಆದರೆ ಮಹಿಳಾ ನಾಗಾ ಸಾಧುಗಳು ಕಾವಿ ವಸ್ತ್ರವನ್ನು ಸುತ್ತಿಕೊಂಡಿರುತ್ತಾರೆ. ಈ ವಸ್ತ್ರದಲ್ಲಿ ಎಲ್ಲಿಯೂ ಹೊಲಿಗೆ ಯಿರುವುದಿಲ್ಲ. ಈ ವಸ್ತ್ರವನ್ನು "ದಂತಿ" ಎಂದು ಕರೆಯುತ್ತಾರೆ. ಮಹಿಳಾ ಸಾಧುಗಳು ಹಣೆಯಲ್ಲಿ ತಿಲಕವನ್ನು ಧರಿಸುತ್ತಾರೆ.
ಮಹಿಳಾ ನಾಗಾ ಸಾಧುಗಳು ಜೀವಿಸಿರುವಾಗಲೇ ಸ್ವತಃ ತನ್ನ ಪಿಂಡದಾನವನ್ನು ಕೊಡಬೇಕು. ಮುಂಡನ ಮಾಡಿಸಿಕೊಳ್ಳಬೇಕು. ನದಿಯಲ್ಲಿ ಸ್ನಾನ ಮಾಡಿದ ನಂತರ ಸದಾ ಭಗವಂತನ ನಾಮಸ್ಮರಣೆ ಮಾಡುತ್ತಿರಬೇಕು. ಬೆಳಗ್ಗೆ ಬ್ರಾಹ್ಮಮುಹೂರ್ತದಲ್ಲಿ ಎದ್ದು ಶಿವ ಜಪ ಮಾಡಬೇಕು. ಸಂಜೆ ದತ್ತಾತ್ರೇಯ ಭಗವಂತನನ್ನು ಪೂಜಿಸಬೇಕು.
ಪುರುಷ ನಾಗಾ ಸಾಧುಗಳಂತೆಯೇ ಇವರಿಗೂ ದೀಕ್ಷೆಯಾಗುತ್ತದೆ. ಕುಂಭ ಮೇಳದ ಸಮಯದಲ್ಲಿ ಪುರುಷ ನಾಗಾ ಸಾಧುಗಳ ಪವಿತ್ರ ಸ್ನಾನವಾದ ನಂತರ ಇವರು ಪವಿತ್ರ ಸ್ನಾನ ಮಾಡುತ್ತಾರೆ. ಇವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತುಂಬ ಅಪರೂಪ.
"ನಾಗಾ ಸಾಧುಗಳ ರಹಸ್ಯ ಪ್ರಪಂಚವನ್ನು ಆಧರಿಸಿದ ಈ ಕಾದಂಬರಿಯನ್ನು ಶ್ರೀಮತಿ ಸಂತೋಷ ವಾತ್ಸವ್ ಹೃದಯಂಗಮವಾಗಿ ಹಿಂದಿಯಲ್ಲಿ ಬರೆದಿದ್ದಾರೆ. ಇದರ ಕನ್ನಡ ಅವತರಣಿಕೆಯನ್ನು ಕನ್ನಡ ಓದುಗರಲ್ಲಿ ಹಂಚಿಕೊಳ್ಳಲು ಆಶೀರ್ವದಿಸಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ.
ಪ್ರಾರಂಭದಲ್ಲಿ ಕಾದಂಬರಿಗೆ ಪೂರಕವಾಗಿ ನಾಗಾ ಸಾಧುಗಳ ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ಕೊಡಲು ಪ್ರಯತ್ನಿಸಿದ್ದೇನೆ. ಮಹಿಳಾ ನಾಗಾ ಸಾಧುಗಳ ಬದುಕನ್ನು ಕಿಂಚಿತ್ತು ಕೊಟ್ಟಿದ್ದೇನೆ. ಈ ಎಲ್ಲ ಮಾಹಿತಿಯನ್ನು ಗೂಗಲ್ ಮುಖೇನ ಪಡೆದುಕೊಂಡಿದ್ದೇನೆ. ಇದಕ್ಕಾಗಿ ನಾನು ಕೃತಜ್ಞ
ನಾಗಾ ಸಾಧುಗಳ ಬಗ್ಗೆ ಬರೆಯಲು 'ಅಂಕಿತ ಪುಸ್ತಕ'ದ ಶ್ರೀ ಪ್ರಕಾಶ್ ಕಂಬತ್ತಳ್ಳಿ ಯವರ ಪ್ರೇರಣೆ ಮುಖ್ಯವಾಗಿದೆ. ಈಗಾಗಲೇ ಅವರು ತಮ್ಮ ಪ್ರಕಾಶನದಲ್ಲಿ “ಅಘೋರಿಗಳನಡುವೆ" ಪುಸ್ತಕವನ್ನು ಐದಾರು ಬಾರಿ ಮುದ್ರಿಸಿ ಉಪಕರಿಸಿದ್ದಾರೆ. ನಾನು ಶ್ರೀ ಪ್ರಕಾಶ್ ಕಂಬತ್ತಳ್ಳಿ ದಂಪತಿಗಳಿಗೆ ಆಭಾರಿಯಾಗಿದ್ದೇನೆ.
ಕಾಲಕಾಲಕ್ಕೆ ಮಾಹಿತಿಯನ್ನು ಒದಗಿಸಿ ಕೊಟ್ಟು ಸಹಕರಿಸಿದ ರೋಟರಿ ಸ್ಕೂಲಿನ ಶ್ರೀ ರವೀಶ್‌ರ ಉಪಕಾರವನ್ನು ಮರೆಯಲಾರೆ. ಅವರಿಗೆ ನಮನಗಳು.ಪುಸ್ತಕ ಸುಂದರವಾಗಿ ಹೊರಬರಲು ಕಾರಣರಾದ ಎಲ್ಲ ಆತ್ಮೀಯರಿಗೆ ವಂದನೆಗಳು. ಎಂದಿನಂತೆ ನನ್ನ ಹಿರಿಯ ಮಗ ಎಂ.ಎನ್. ರಾಘವೇಂದ್ರರಾವ್ ಮತ್ತು ಪತ್ನಿ ಶ್ರೀಮತಿ ನಾಗರತ್ನರಾವ್ ಅವರಿಗೆ ನನ್ನ ಶುಭ ಹಾರೈಕೆಗಳು.
- ಡಾ ಎಂ.ವಿ. ನಾಗರಾಜರಾವ್
ನಿವೃತ್ತ ಪ್ರಾಚಾರ್ಯರು
"ಆತ್ಮ-ಪರಮಾತ್ಮ, ಭೂತ-ಪ್ರೇತ, ಧರ್ಮ-ಅಧರ್ಮಗಳಿಗೆ ಹೆದರಿ ಬದುಕುವುದು ಸರಿಯಲ್ಲ ಎನ್ನುತ್ತಾರೆ. ಅಂಧಶ್ರದ್ಧೆಯಿಂದ ಮ...
"ಪ್ರಪಂಚದಾದಂತ್ಯ ರೈತರು, ಸಾಮಾನ್ಯ ಜನರು, ಹೆಂಗಸರು, ಮಕ್ಕಳು ಹೇಗೆ ತಮ್ಮದಲ್ಲದ ಯುದ್ಧದಂತಹ, ಕ್ಷಾಮದಂತಹ ಸದಾ ಕಾಡ...
"ಈ ಕೃತಿಯಲ್ಲಿ ವಿಜಯನಗರ ಸಾಮ್ರಾಜ್ಯದ ಶಂಕುಸ್ಥಾಪನೆಯ ವಿವರ, ವಿದ್ಯಾರಣ್ಯರ ಪ್ರಶಂಸೆ, ಕೃಷ್ಣರಾಯ ನಿಗೆ ಮಂತ್ರಿಗಳ ...
©2024 Book Brahma Private Limited.