"ಕೇವಲ ಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲ, ಕನ್ನಡ ಕಾದಂಬರಿಗಳ ಪರಂಪರೆಯ ಅವಗಾಹನೆಗೆ ಇದೊಂದು ಆಕರ ಕೃತಿ. ಇದಕ್ಕೆ ಕಾರಣಗಳು ಹಲವು. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಕೊಡಲಾಗಿದೆ," ಎನ್ನುತ್ತಾರೆ ಡಿ ಡಾ. ಕೆ. ರಘುನಾಥ್. ಅವರು ಡಾ. ಬಿ. ಜನಾರ್ದನ ಭಟ್ ಅವರ ‘ಕನ್ನಡ ಕಾದಂಬರಿ ಮಾಲೆ’ ಕೃತಿ ಕುರಿತು ಬರೆದ ವಿಮರ್ಶೆ.
ಡಿ ಡಾ. ಕೆ. ರಘುನಾಥ್
ಕನ್ನಡ ಕಾದಂಬರಿ ಮಾಲೆ
(ನೂರು ಕಾದಂಬರಿಗಳ ವಿಶ್ಲೇಷಣೆ)
ಲೇ.: ಡಾ. ಬಿ. ಜನಾರ್ದನ ಭಟ್
ಶ್ರೀರಾಮ ಪ್ರಕಾಶನ, ಬೆಂಗಳೂರು.
ಮೊದಲ ಮುದ್ರಣ: 2024
ಬೆಲೆ: ರೂ. 650
ನೂರು ಕೃತಿಗಳ ಸರದಾರರು ಕನ್ನಡದಲ್ಲಿ ವಿರಳ. ಅಂತಹ ವಿರಳರಲ್ಲಿ ಗೆಳೆಯರಾದ ಡಾ. ಬಿ. ಜನಾರ್ದನ ಭಟ್ ಕೂಡ ಒಬ್ಬರು. ಅವರ ಈಚಿನ ಮೇಲಿನ ಶೀರ್ಷಿಕೆಯ ಕೃತಿ ಅವರ ವಿಸ್ತೃತ ಓದಿಗೆ ಸಾಕ್ಷಿ. ಮೊದಲ ಬಾರಿಗೆ ಕನ್ನಡದಲ್ಲಿ ಇಂತಹ ಸಾಹಸ ಮಾಡಿದವರು ಇವರೊಬ್ಬರೇ ಎಂದರೆ ಅದು ಉತ್ಪೇಕ್ಷೆಯಲ್ಲ.
ಕೇವಲ ಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲ, ಕನ್ನಡ ಕಾದಂಬರಿಗಳ ಪರಂಪರೆಯ ಅವಗಾಹನೆಗೆ ಇದೊಂದು ಆಕರ ಕೃತಿ. ಇದಕ್ಕೆ ಕಾರಣಗಳು ಹಲವು. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಕೊಡಲಾಗಿದೆ.
ಮೊದಲನೆಯದಾಗಿ, ಲೇಖನಗಳ ಜೋಡಣೆಯಲ್ಲಿ ಕನ್ನಡದ ಮುಖ್ಯ ಕಾದಂಬರಿಗಳು ಪ್ರಕಟವಾದ ಕಾಲಾನುಕ್ರಮಣಿಕೆಯನ್ನು ಅನುಸರಿಸಲಾಗಿದೆ. ಇದರ ಪರಿಣಾಮವಾಗಿ ಕನ್ನಡ ಕಾದಂಬರಿ ಬೆಳೆದು ಬಂದ ದಾರಿಯ ಮೇಲೆ ಇದು ಬೆಳಕು ಚೆಲ್ಲುತ್ತದೆ. ಯಾವ ಕಾಲಘಟ್ಟದಲ್ಲಿ ಯಾವ ಬಗೆಯ ಕಾದಂಬರಿಗಳು ಬಂದವು, ಯಾವ ವಸ್ತುಗಳಿಗೆ ಪ್ರಾಧಾನ್ಯ ಸಿಕ್ಕಿತು ಎನ್ನುವುದನ್ನು ಇದರಿಂದ ತಿಳಿಯಬಹುದಾಗಿದೆ. ಸುಮಾರು ಇನ್ನೂರು ವರ್ಷಗಳ ಕನ್ನಡ ಕಾದಂಬರಿಗಳ ಅವಲೋಕನ ಇಲ್ಲಿದೆ. ಇದರ ಪ್ರಾರಂಭ 1823 ರಲ್ಲಿ ಪ್ರಕಟವಾದ `ಮುದ್ರಾಮಂಜೂಷ' ದೊಂದಿಗೆ. ಇಲ್ಲಿನ ಕೊನೆಯ ಕಾದಂಬರಿ ಕೆ. ಪಿ. ರಾವ್ ಅವರ ಅವರ ವರ್ಣಕ 2021 ರಲ್ಲಿ ಪ್ರಕಟವಾದ ಕೃತಿ. ಈ ನಡುವಿನ ಅವಧಿಯಲ್ಲಿ ಪ್ರಕಟವಾದ ಬಹುತೇಕ ವಿಶಿಷ್ಟ ಕಾದಂಬರಿಗಳ ಅವಲೋಕನವನ್ನು ಈ ಕೃತಿ ಒಳಗೊಂಡಿದೆ.
ಎರಡನೆಯದಾಗಿ, ಕೆಲವು ಪ್ರಸಿದ್ಧ ಕೃತಿಗಳೊಂದಿಗೆ ಇಲ್ಲಿಯವರೆಗೆ ಬಹುತೇಕ ಯಾರ ಗಮನಕ್ಕೂ ಬಾರದೆ ಹೋದ ಚಾರಿತ್ರಿಕ ಮಹತ್ವದ ಕೃತಿಗಳ ಕುರಿತು ಇಲ್ಲಿ, ಮೊದಲ ಬಾರಿಗೆ ಬರೆದಿದ್ದಾರೆ. ಹರ್ಮನ್ ಮೊಗ್ಲಿಂಗ್ ಅವರ `ಈರಾರು ಪತ್ರಿಕೆ'; ಕನ್ನಡದ ಆದ್ಯ ಕಾದಂಬರಿಗಳಲ್ಲಿ ಒಂದೆಂದು ಗುರುತಿಸಲ್ಪಡಬೇಕಾದ ಗೋ. ನ. ಸವಣೂರ್ ಅವರ 1906 ರ ಕಾದಂಬರಿ, `ಹೇಮಲತೆ ಪ್ರಭಾಕರ', `ಸದ್ಗುಣಿ ಕೃಷ್ಣಾಬಾಯಿ' (ಕನ್ನಡದ ಮೊದಲ ಮಹಿಳಾ ಕಾದಂಬರಿ), ಬಿ.ಎಸ್ ತಲ್ವಾಡಿಯವರ `ಕೆಂಪಿ ಮತ್ತು ಕೋರ್ಟಿ', ಕಂಪ್ಯೂಟರ್ ವಿಜ್ಞಾನಿ ಕೆ. ಪಿ. ರಾವ್ ಅವರ `ವರ್ಣಕ' ಕಾದಂಬರಿ, ಇವುಗಳ ಬಗ್ಗೆ ಬರೆಯುವ ಮೂಲಕ ಇಲ್ಲಿಯವರೆಗೆ ಇದ್ದ ಅರಕೆಯನ್ನು ತುಂಬಿದ್ದಾರೆ.
ಮೂರನೆಯದಾಗಿ, ಇವರ ಕಾದಂಬರಿಗಳ ವಿಶ್ಲೇಷಣೆಯಲ್ಲಿ ಎದ್ದು ಕಾಣುವ ವಸ್ತುನಿಷ್ಠತೆ. ಯಾವುದು ಕಾದಂಬರಿ ಯಾವುದು ಅಲ್ಲ ಎಂದು ಇವರಿಗೆ ಸ್ಪಷ್ಟ ಕಲ್ಪನೆ ಇದೆ. ಆದ್ದರಿಂದ ಅದನ್ನು ಅವರು ಹೇಳಲು ಹಿಂಜರಿಯುವುದಿಲ್ಲ. ಇದಕ್ಕೆ ನಿದರ್ಶನ ಮೇಲೆ ಉಲ್ಲೇಖಿಸಿದ `ಕೆಂಪಿ ಮತ್ತು ಕೋರ್ಟಿ' ಕಾದಂಬರಿಯಲ್ಲಿ ಬರುವ, ದಕ್ಷಿಣ ಕನ್ನಡ ಸಂಸ್ಕೃತಿಯ ಆಚರಣೆಗಳು, ತಪ್ಪು ಮಾಹಿತಿಗಳನ್ನು ಹೊಂದಿರುವುದನ್ನು ನಿರ್ಭಿಡೆಯಿಂದ ಸೂಚಿಸಿರುವುದು.
ನವಚಾರಿತ್ರಕ ಕೃತಿಗಳ ಕುರಿತು ಇವರ ಒಲವು ಎದ್ದು ಕಾಣುತ್ತದೆ. ಅದನ್ನು ಅವರು ಪ್ರಸ್ತಾವನೆಯಲ್ಲಿ ಹೇಳಿದ್ದಾರೆ ಕೂಡ. ಈ ಪುಸ್ತಕದ ಪ್ರಸ್ತಾವನೆಯು ಕನ್ನಡ ಕಾದಂಬರಿ ಪ್ರಕಾರದ ಒಂದು ಉತ್ತಮ ಸಮೀಕ್ಷೆಯಾಗಿದೆ.
ಮುಂದಿನ ಅಧ್ಯಯನಗಳಿಗೆ ಬೇಕಾದ ಆಕರಗಳು ಇಲ್ಲಿ ಎರಡು ರೀತಿಯಲ್ಲಿ ಪ್ರಕಟವಾಗಿದೆ. ಅದೇ ವಸ್ತುವನ್ನು ಹೊಂದಿದ ಇತರ ಕೃತಿಗಳ ಉಲ್ಲೇಖ ಮತ್ತು ಲೇಖಕರ ಕುರಿತಾದ ಟಿಪ್ಪಣಿಗಳನ್ನು ಒದಗಿಸಿರುವುದು. ಉದಾಹರಣೆಗೆ ತ.ರಾ.ಸು ಅವರ `ಹಂಸಗೀತೆ' ಕಾದಂಬರಿ ಕುರಿತು ಬರೆದಿರುವಲ್ಲಿ, ಮಾಸ್ತಿ ಮತ್ತು ಅನಕೃ ಅವರ ಸಂಗೀತಗಾರರ ಬದುಕಿನ ಕುರಿತಾದ ಕಾದಂಬರಿಗಳ ಉಲ್ಲೇಖವಿದೆ.
ನಾಲ್ಕನೆಯದಾಗಿ, ಇವರು ಕಾದಂಬರಿ ಪ್ರಕಾರಕ್ಕೆ ಮಾತ್ರ ಕಟ್ಟು ಬೀಳದೆ ಇರುವುದಕ್ಕೆ ನಿದರ್ಶನಗಳಿವೆ. ಅವುಗಳಲ್ಲಿ ಕನ್ನಡ ಗದ್ಯ ಶಿಲ್ಪಿಗಳಲ್ಲಿ ಒಬ್ಬರಾದ ಡಿ.ವಿ.ಜಿ.ಯವರ ಅನನ್ಯ ಕೃತಿ `ಜ್ಞಾಪಕ ಚಿತ್ರಶಾಲೆ'ಯ ಅವಲೋಕನವನ್ನು ಇದು ಒಳಗೊಂಡಿದೆ.
ಇಷ್ಟಾದರೂ ಅವರೇ ಒಪ್ಪಿಕೊಂಡಿರುವಂತೆ, ಇಲ್ಲಿ ಕನ್ನಡದ ಎಲ್ಲ ಕಾದಂಬರಿಕಾರರಾಗಲಿ, ಅವರ ಕೃತಿಗಳನ್ನಾಗಲಿ ಈ ಕಾದಂಬರಿ ಮಾಲೆ ಒಳಗೊಂಡಿಲ್ಲ. ಅನುಬಂಧದಲ್ಲಿ ಅವರ `ಬೂಬರಾಜ ಸಾಮ್ರಾಜ್ಯ' ಕಾದಂಬರಿ ಕುರಿತು ಜಿ.ಕೆ. ರವಿಶಂಕರ್ ಅವರ ಲೇಖನವಿರುವುದು ಇವರ ಔಚಿತ್ಯ ಜ್ಞಾನಕ್ಕೆ ನಿದರ್ಶನ. ಆ ಕಾದಂಬರಿಯ ಚರಿತ್ರೆ ಮತ್ತು ವರ್ತಮಾನದ ಬೆಸುಗೆ ಕುರಿತು ರವಿಶಂಕರ್ ಅವರ ಲೇಖನ ಬೆಳಕು ಚೆಲ್ಲುತ್ತದೆ. ಇದರೊಂದಿಗೆ ಇನ್ನೂ ಮೂರು ಅನುಬಂಧಗಳಿವೆ - ಸಾಮಾಜಿಕ ಕಾದಂಬರಿಗಳಿಗಿಂತ ಮುಂಚೆ ಬಂದ ಕಾದಂಬರಿಗಳೆಂದು ಗುರುತಿಸಬೇಕು ಎಂದು ಕೆಲವರು ವಾದಿಸುವ ಯಾದವನ `ಕಲಾವತಿ ಪರಿಣಯ', ಮುಮ್ಮಡಿ ಕೃಷ್ಣರಾಜ ಒಡೆಯರ `ಸೌಗಂಧಿಕಾ ಪರಿಣಯ' ಮತ್ತು ಮುದ್ದಣನ `ರಾಮಾಶ್ವಮೇಧ' ಕುರಿತು ಡಾ. ಭಟ್ ಅವರು ಲೇಖನಗಳನ್ನು ಬರೆದು ಅವು ಯಾಕೆ ಕಾದಂಬರಿ ಪ್ರಕಾರಕ್ಕೆ ಸೇರುವುದಿಲ್ಲವೆಂದು ಚರ್ಚಿಸಿದ್ದಾರೆ.
"ಈ ಕೃತಿಯ ವಸ್ತು ಈಗ ನಮ್ಮ ಪರಿಸರಕ್ಕೂ ಒಗ್ಗುವಂಥದು.ನೀವು ಇದನ್ನು ಮೂಲದಷ್ಟೇ ಸೊಗಸಾಗಿ ಅನುವಾದಿಸಿದ್ದೀರ.ನಾನು ಮೂ...
"ಜಗದೀ ಸಂತೆಯೊಳಲೆಯುವ ಮನುಜ ನಿಲ್ಲೋ ಒಂದು ಕ್ಷಣ! ತಾಯಿಯ ನೆನೆಯಲು ಬಂದಿದೆ ಶುಭದಿನ ಹಾಡೋ ತುಂಬಿ ಮನ!!," ಎನ...
"ಅರಳಿದ ಹೆಣ್ಣು ಗರ್ಭಧರಿಸಬೇಕು. ಗಂಡು ಪಾಲಿಸಿ, ಲಾಲಿಸಬೇಕು. ಅವಳ ಹೆರುವ ಭಾವನಾತ್ಮಕ, ದೈಹಿಕ ಕಾರ್ಯಕ್ಕೆ ಈತ ಹೆಗ...
©2025 Book Brahma Private Limited.