ಮಾತಾಗದ ಸಂಕಟಕ್ಕೆ ಮದ್ದು ಕೊಟ್ಟ ಗಜಲ್ಕಾರ


"ರಮಿಸುವ ನೈಜ ಸಂಗಾತಿಯ ಹುಡುಕಾಟವಾದ ಇದು ಇದೊಂದು ವಿಧದ ಕುಶಲ ಹೆಣಿಕೆ. ಅರ್ಥಾತ್ ಸುಂದರ ನೇಯ್ಗೆ. ಈ ನೇಯ್ಗೆಯ ಕಣ್ಬೆಳಕಿನಲಿ ಅದೆಷ್ಟು ಹೃದಯ ಬೆಸವ ಹಾಡುಗಳು ನೇಯ್ಯಲ್ಪಟ್ಟವೋ... ಹಾಗೆ ನೇಯಲ್ಪಟ್ಟ ಕನ್ನಡ ಸಾಹಿತ್ಯ ಚರಿತ್ರೆ ಇಂದು ಅನೇಕ ಹೊಸ ನೋಟಗಳ ಕಾಣ್ಕೆಯಾಗಿ ಕಂಗೊಳಿಸುತ್ತಿದೆ," ಎನ್ನುತ್ತಾರೆ ಅಬ್ದುಲ್ ಹೈ. ತೋರಣಗಲ್ಲು. ಅವರು ಆನಂದ ಭೋವಿ ಅವರ ‘ಹೇಗೆ ಬಿಡಿಸಿಕೊಳ್ಳಲಿ’ ಗಜಲ್ ಸಂಕಲನ ಕೃತಿಗೆ ಬರೆದ ಮುನ್ನುಡಿ.

ಗಜಲೆಂದರೆ ಅನನ್ಯ ಆರಾಧನೆˌ ಉತ್ಕಟ ಪ್ರೇಮದ ಸಮಾರಾಧನೆˌ ಸಹನೀಯ ಭಾವದೊದಿಕೆˌ ಸಖ್ಯದ ಹಂಬಲಕ್ಕಾಗಿ ತವಕಿಸುವ ಮನೋಭೂಮಿಕೆ. ಹಗಲಲ್ಲಿ ಅರಳಿ ಸಂಜೆ ಸಾಯುವ ಸೇವಂತಿಗೆಯೂ ಹೌದುˌ ರಾತ್ರಿ ಅರಳಿ ಬೆಳಗಿನಲಿ ಬಾಡುವ ಆಕಾಶ ಮಲ್ಲಿಗೆಯೂ... ಪ್ರೀತಿ ಜೇನೊಳಗಿನ ಮುಗ್ಧ ನಗುವಿನ ಜೊತೆ ಭಾವನೆಗಳನ್ನು ಬಡಿದೆಬ್ಬಿಸುವ ಉತ್ಕರ್ಷ ಭಾವದ ಕಾರಣಕ್ಕಾಗಿ ಗಜಲ್ ಓದಿನ ವರ್ಣಮಾಲೆ ಗೊತ್ತಿರದ ಮನಗಳನ್ನು ಅದು ತನ್ನೆಡೆಗೆ ಸೆಳೆದುಕೊಂಡು ಕನಸ ಚುಕ್ಕೆಯ ನಾಡಬಾನಿಗೆ ಕರೆದುಕೊಂಡು ಬಿಡುತ್ತದೆ. ಇಂಥಹ ಸಮೃದ್ಧ ಭಾವದ ಈ ಕಾವ್ಯದ ಕಡೆ ಸೆಳೆಯಲ್ಪಟ್ಟು ಈ ಕ್ಷೇತ್ರದಲಿ ನೆಲೆ ನಿಂತ ಕೆ.ಇ.ಎಸ್. ಅಧಿಕಾರಿ ಆನಂದ ಭೋವಿಯವರು ಕಥೆˌ ಕಾವ್ಯˌ ನಾಟಕˌ ಕಾದಂಬರಿ ಲೋಕದಲ್ಲಿ ಸಂಚರಿಸಿದ್ದಲ್ಲದೇ ಈಗಾಗಲೇ ಎರೆಡು ಗಜಲ್ ಸಂಕಲನವನ್ನು ನಾಡಿಗೆ ಸಮರ್ಪಿಸಿದ್ದಾರೆ. ಮಮತೆಯ ಭಾವಕ್ಕೆ ಬದುಕಗೀತೆ ಹಾಡುವ ಇವರು ಹೇಗೆ ಬಿಡಿಸಿಕೊಳ್ಳಲಿ... ಎಂಬ ಮೂರನೇ ಗಜಲ್ ಸಂಕಲವನ್ನು ನಾಡಿಗೆ ಸಮರ್ಪಿಸುತ್ತಿರುವುದು ಪ್ರೀತಿ ಹಂದರ ಹೊಸೆದ ಬೆಳ್ಳಿ ಬೆಡಗಿನ ಮಾತೆಂದು ಭಾವಿಸಬೇಕಿದೆ. ರಮಿಸುವ ನೈಜ ಸಂಗಾತಿಯ ಹುಡುಕಾಟವಾದ ಇದು ಇದೊಂದು ವಿಧದ ಕುಶಲ ಹೆಣಿಕೆ. ಅರ್ಥಾತ್ ಸುಂದರ ನೇಯ್ಗೆ. ಈ ನೇಯ್ಗೆಯ ಕಣ್ಬೆಳಕಿನಲಿ ಅದೆಷ್ಟು ಹೃದಯ ಬೆಸವ ಹಾಡುಗಳು ನೇಯ್ಯಲ್ಪಟ್ಟವೋ... ಹಾಗೆ ನೇಯಲ್ಪಟ್ಟ ಕನ್ನಡ ಸಾಹಿತ್ಯ ಚರಿತ್ರೆ ಇಂದು ಅನೇಕ ಹೊಸ ನೋಟಗಳ ಕಾಣ್ಕೆಯಾಗಿ ಕಂಗೊಳಿಸುತ್ತಿದೆ. ಅನ್ಯದೇಶೀಯ ಸಾಹಿತ್ಯ ಸರಕುಗಳುˌ ಪರದೇಶಿ ಸಾಹಿತ್ಯ ಪ್ರಕಾರಗಳು ಕನ್ನಡ ಸಾಹಿತ್ಯದಲ್ಲಿ ಸೇರಿ ನೆಲದ ಭಾವವಾಗಿ ಬೆಳೆಯುತ್ತಿದೆ. ಉದಾ ಹಾಯ್ಕು... ಟಂಕಾ... ತನಗಾ... ಅಬಾಬಿ... ಹೀಗೆ. ಇವೆಲ್ಲಕ್ಕೂ ಉರ್ದುವಿನ ಕೆನೆಪದರುˌ ಮಾಧೂರ್ಯಪೂರ್ಣ ಉತ್ಕೃಷ್ಟ ಕಾವ್ಯವಾದ ಕಾವ್ಯರಾಣಿ ಗಜಲ್ ಕೂಡ ಆಮದು ಸರಕಿನ ಸಾಹಿತ್ಯವೇ ಹೌದಾದರೂ ಅದು ಕನ್ನಡ ನೆಲದ ಅನನ್ಯತೆಯೊಳಗೆ ಮಿಳಿತಗೊಂಡು ನಾಲ್ಕು ದಶಕಗಳೇ ಸಂದಿವೆ. ಗಜಲ್ ಗಾರುಡಿಗ ಶಾಂತರಸ ಹೆಂಬರಾಳ್ ರವರಿಂದ ಇಂದಿನ ಯುವ ಪೀಳಿಗೆಯವರಿಗೂ ಕನ್ನಡ ಗಜಲ್ಗಳು ಓದುಗರೆಯಾಳುತ್ತಿರುವುದು ಕಾಣುತ್ತಿದ್ದೇವೆ. ಅದು ಗಜಲ್ ಕಾವ್ಯಕ್ಕಿರುವ ದಿವ್ಯ ಶಕ್ತಿ. ಹೀಗಾಗಿ ಗಜಲೆಂದರೆ ಅನನ್ಯ ಆರಾಧನೆಯೆಂದು ಹೇಳಿದ್ದು. ಅಪರಮಿತ ಆರಾಧನೆಯ ಭಾವಹೊತ್ತ ಇವರ ಗಜಲ್ ಸಂಕಲನದ ಮೊದಲ ಗಜಲಿನ ಮೊದಲ ಶೇರ್

ಆ ಚಂದಿರನ ಕದ್ದು ತಂದಿರುವೆ ಬಾ ಒಳಗೆ
ಎದೆಕದವ ತೆರೆದು ಕಾದಿರುವೆ ಬಾ ಒಳಗೆ

ಮೇಲಿನ ಮತ್ಲಾ ಓದಿದಂತೆ ಓದುಗನಿಗೆ ಹಾಲಸವಿ ಕೊಳದಲಿ ಮಿಂದೆದ್ದ ಸುಕೂನ್ ಸಿಗುತ್ತದೆ.. ಅದಮ್ಯ ಆನಂದ ಹೊತ್ತ ಪ್ರೇಮ ಪ್ರಲಾಪದ ಜೊತೆಗೆˌ ಪ್ರೀತಿ ಜೇನೊಳಗಿನ ಮುಗ್ಧ ನಗುವೇ ಮೈದಾಳಿ ಮೆರೆದ ಭಾವವು ಈ ಶೇರ್ ಸ್ಪುರಿಸುತ್ತಿದೆ. ಚಂದಿರನನ್ನು ತಂದು ಪ್ರಿಯತಮೆಯ ಮುಡಿಯಲ್ಲಿ ಮೆರೆಸುವ ಅನೇಕ ಪ್ರಯೋಗಗಳು ಈಗಾಗಲೇ ನಡೆದಿವೆಯಾದರೂ; ಇವರ ಭಾವದ ಭಿನ್ನತೆ ಬೇರೆಯೇಯಿದೆ. ಅದು ಬಿಸಿಲ ಝಳದ ಬದುಕಿಗೆ ನೆರಳ ನಾಟಿದ ಮಾಯೆಯಂತೆ ಮೃದುತ್ವ ಹೊಂದಿದೆ. ಗಜಲೆಂದರೆ ಭಾವ ತೀವ್ರತೆಯ ಬಿಗಿತ. ಮೃದು ಮಾತುಗಳ ಮೊರೆತ. ಏಕೆಂದದರೆ ಅದು ಬರೀ ಉಸುರುವ ಉವಾಚವಲ್ಲ ˌ ಹಾಡಿ ಆನಂದಿಸುವ ಹಾಡುಗಬ್ಬ. ಈ ಅರಿವು ಗಜಲ್ಕಾರನಿಗಿದೆ. ಹೀಗೆಂದೇ ಛೋಟಾ ಬೆಹರ್ ಬಳಸಿ ಹೆಣೆದ ಈ ಗಜಲ್ ರಾಗ ಹೊಸೆದು ಹಾಡಬಹುದು ಅಷ್ಟೊಂದು ಕೋಮಲ ಭಾವಹೊಂದಿದೆ.

ಗಜಲ್ 08 ರ ನಾಲ್ಕನೇ ಶೇರ್ ಹೀಗಿದೆ.
ನಾನು ನೀನು ಭಿನ್ನ ಬಗೆಯದ ನೆಲಮುಗಿಲ ಸಂಗಮ
ನಾನೀಗ ಸಮಸ್ತ; ನಿನ್ನ ಬೆರಳಿನ ತುಣುಕು ಕಾಡುತಿದೆ
ಇಡೀ ಗಜಲ್ ಮಧ್ಯ ಪ್ರಾಸದ ಪದಗಳಿಂದ ಕಂಗೊಳಿಸಿ ಕಾಫಿಯಾಗಳ ಕುಶಲತೆಯಿಂದ ಗಮನ ಸೆಳೆಯುತ್ತಿದೆ. ಆರಂಭಿಕ ಪದಗಳು ಧ್ಯಾನಸ್ತ - ವಿರಕ್ತ... ಅನುರಕ್ತ -ಸಂಯುಕ್ತ... ಸಮಸ್ತ - ಅವ್ಯಕ್ತ... ಹೀಗೆ ಮೂರಕ್ಷರಗಳುಳ್ಳ ಕಾಫಿಯಾಗಳು ಶುದ್ಧ ಗಜಲ್ ನಿರ್ಮಾಣಕ್ಕೆ ಅಳತೆಗೋಲಾಗಿ ನೋಡಬಹುದು. ಈ ರೀತಿಯ ಲಿಖಿಸಲ್ಪಡುವ ಪ್ರಯತ್ನವು ಒಳ್ಳೆಯ ಗಜಲ್ಕಾರನ ಲಕ್ಷಣವಾಗಿದೆ. ಇದು ಎಷ್ಟೊಂದು ಛಂದಸ್ಸುಮಯವಾಗಿದೆಯೆಂದರೆ... ಗುಬ್ಬಚ್ಚಿ ಗೂಡಿನ ಬಿಗುತನದ ಬಂಧವ ಹೊತ್ತು ನೋವಯಾತನೆ ಮರೆತ ಬೆವರ ಭಾವದ ಗಂಧವನು ಸೂಸುತಿದೆ. ಈ ತೆರನಾದ ಮಿಠಾಸ್ ನಿಂದ ಈ ಶೇರ್ ಓದುಗರ ಮನದಲ್ಲುಳಿಯುವು ದಿಟ.

ಗಜಲ್ 09 ಮತ್ಲಾ

ಬತ್ತಿದ ಒಳಗಣ್ಣಿಂದ ಕಣ್ಣೀರು ಬಸಿಯುತ್ತಿದ್ದಾರೆ ಇದು ಯುದ್ಧಭೂಮಿ
ಬಿರಿದ ಮಾಂಸ ಖಂಡಗಳ ರಕ್ತ ಹೀರುತ್ತಿದ್ದಾರೆ ಇದು ಯುದ್ಧಭೂಮಿ

ಯುದ್ಧ ಅಂದರೆ ಅಲ್ಲಿ ಸಾವುನೋವುಗಳದೇ ಕಾರಬಾರು. ಯುದ್ಧ ಭೂಮಿಯ ಹೃದಯ ವಿದ್ರಾವಕ ಚಿತ್ರಾವಳಿಯಲ್ಲಿ ತಂದೆಯನು ಕಳಕೊಂಡ ಕರಳುಗಳ ಕಥೆಯಿರುತ್ತೆ. ಮಗನ ಹೆಣಕ್ಕೆ ಹೆಗಲುಕೊಟ್ಟ ತಂದೆ ತಾಯಂದಿರ ಪುತ್ರಶೋಕದ ಕರುಣಾಜನಕ ಚಿತ್ರಣವಿರುತ್ತದೆ. ಇವುಗಳನ್ನು ಚಿತ್ರಿಸುವಾಗ ಗಜಲ್ಕಾರ ಎದೆಯಾಳದ ಬೆಚ್ಚನೆಯ ಶೋಕತಪ್ತಭಾವವನು ತಂದುˌ ಯುದ್ಧ ಉಳಿಸಿಹೋಗುವ ಶತಮಾನಗಳ ಕರಾಳತೆಯನ್ನು ಅತ್ಯಂತ ಮಾನವಿಯ ಸ್ಥರದಲ್ಲಿ ನಿಂತು ಈ ಗಜಲನು ಕಟ್ಟಿದ್ದಾರೆ. ಇದು ಹೃದಯಂಗಮ ವೇದನೆಯ ಗಜಲ್. ಮನದ ಉಮ್ಮಳಿಕೆˌ ತನ್ನತನದ ಅಳಲುˌ ತುಟಿಸೋಕದ ಸುಖˌ ತಬ್ಬಲಿಗೊಂಡ ನಿರೀಕ್ಷೆಯ ಕಣ್ಣುಗಳುˌ ಘಾಸಿಗೊಂಡ ಹೃದಯ... ಇವುಗಳ ಮಾನವೀಯ ಹೆಜ್ಜೆಗಳನು ಕಸಿಗೊಳಿಸಿದ ಕವಿ ವರ್ತಮಾನದ ಘಟನಾವಳಿಗೆ ಸ್ಪಂದಿಸಬೇಕೆಂಬ ಕಾಳಜಿಯ ಕೂಸಾಗಿ ಈ ಗಜಲ್ ಹೆಣಿದಿದ್ದು ಎಂಥವರನ್ನೂ ಕಾಡದೇ ಇರದು. ಯುದ್ಧಕ್ಕೆ ಹೊರಟ ಪತಿಯ ನೆನದು ಆಕೆಯ ಕಣ್ಣಂಚು ತೇವಗೊಳ್ಳುವ ದುಗುಡ... ಆತನ ಮರಳಿ ಬರುವಿಕೆಗಾಗಿ ಹಂಬಲಿಸುವುದನ್ನು ಇಡೀ ಗಜಲ್ ಕಟ್ಟಿಕೊಟ್ಟು ಓದುಗರೆದೆ ಒದ್ದೆಮಾಡಿದ್ದಾರೆ.

12 ನೇ ಗಜಲಿನ ಈ ಶೇರ್ ಹೀಗಿದೆ...
ನೀನು ಉಳಿಸಿಹೋದ ಕನಸುಗಳನ್ನಾರಿಸಿ ಹಾರವಾಗಿಸಿದೆ
ಆನಂದನ ಕಾಯುತ್ತಿದ್ದೆ ನಿನ್ನ ಕಾಂತಿಯ ದರ್ಶನವಾಯಿತು

ಈ ಶೇರ್ ಬಿತ್ತರಿಸಿದ ಭಾವವನು ಒಡೆದಾಗ ದಕ್ಕುವ ಎರೆಡು ಧಾತುಗಳೆಂದರೆ ಒಂದು ಪ್ರತಿಮೆ ಮತ್ತು ಆ ಪ್ರತಿಮೆ ಒಡಮೂಡಿದ ವಿಧ. ಕಸುಗಳೆಂಬ ಅಮೂರ್ತಭಾವವನು ಹೆಣೆದು ಹಾರವಾಗಿಸುವ ಪ್ರತಿಮಾವಿಧಾನ ಒಬ್ಬ ನುರಿತ ಗಜಲ್ಕಾರನಿಗೆ ಸಾಧ್ಯವಾಗುತ್ತೆ. ಇದು ಆತ್ಮದ ಜೊತೆಗಿನ ವ್ಯಾಯಾಮದ ಅನುಭವ. ಕನಸುಗಳ ಹೆಣೆದು ಹಾರವಾಗಿಸುವ ಆ ಅಮೋದಪ್ರಿಯ ಕ್ಷಣಗಳ ಜೀವ ಭಾವಗಳಿಗೆ ಮರುಜೀವ ತುಂಬಿ ಅದಕ್ಕೊಂದು ಹೆಸರು ಕೊಡುವ ಕವಿˌ ಕಾಯುವಿಕೆಯೊಳಗಣ ಜೇನಸವಿ ತವಕಿಸುವ ಪ್ರೀತಿಯ ಪ್ರತೀಕವಾಗಿಸಿರುವುದು ಕಾಣುತ್ತೇವೆ. ಇದು ವಸಂತ ಸುಖವನು ಕೊಡುವ ಶೇರಾಗಿದೆ. ಹೀಗೆ ಬರೆಯುತ್ತಾ ಎದೆ ಸವರುತ್ತಾ
29 ನೇ ಗಜಲಿನ 4ನೇ ಶೇರೆಡೆಗೆ ಸಾಗೋಣ.

ಕೈಗೆರೆಯ ತುಂಬ ಮದರಂಗಿಯ ಹಚ್ಚ ಹಸಿರ ಶಕುನ
ನಯನ ನೋಟ ಕಸಿಯುತಿರುವೆ ಎಳ್ಳು ಬೆಲ್ಲದ ಸುಗ್ಗಿ

ಮದರಂಗಿಯು ಹರುಷದ ಸಂಕೇತ. ಈ ಹರುಷದಲಿ ಉದಯ ರವಿಯ ಹುರುಪನು ಬೆಸೆದು ಹೃದಯ ರಸ ಹೀರುವ ಏರುಯಾನದ ಅಮಿತ ಭಾವವನ್ನು ಹೆಣೆದು ಕಥನಗೊಳಿಸುವ ಕೈಚಳಕ ಈ ಕವಿಯ ಮಾಗಿದ ಅನುಭವದ ಹೂರಣವೆಂದು ನಾ ಭಾವಿಸುವೆ.
ಇಲ್ಲಿ ವ್ಯಾಕುಲತೆˌ ಕಕ್ಕುಲಾತಿ ಅತಿವಿನಯ ವ್ಯಕ್ತಿಸಿತ್ತಾ ನಯನಗಳ ನೋಟದ ಸವಿ ಉಣಿಸಿ ಉನ್ಮೀಲಿತಗೊಳಿಸುವ ಭಾವಬೆಸೆದದ್ದು ಕರೀಷ್ಮಾಯೆ ಖುದರತ್ ಎಂದು ಭಾವಿಸುವೆ.

62
ಪಯಣದ ದಾರಿಗಳು ಹೂವಾಗಿವೆ
ಹಕ್ಕಿಯಾಗು ತೆನೆಯಾಗಿ ಬಳಕುವೆ

ಇದು ಪ್ರಣಯ ಪಸಂದ ಭಾವದ ಶೇರಾಗಿ ಆತ್ಮ ಸಂಗಾತರಾಗುವ ಮೈತ್ರಿಪೂರ್ಣ ಪ್ರೇಮದ ಹೂರಣವಾಗಿದೆ. ಪ್ರೇಮದಲಿ ಮಧುರ ಭಾವಗಳ ಮಿಲನವಾದಾಗ ಅದು ಉತ್ಕರ್ಷ ಉಕ್ಕಿಸುವ ಬದುಕ ಮೆಟ್ಟಲಾಗುತ್ತದೆ. ಪಯಣದ ದಾರಿ ಹೂವಾದಾಗ ಹೂವಿನ ಮಕರಂದದ ಜೇನ ಸವಿ ಹದವಾಗಿ ಭಾವಬಿರಿದು ಹಟ್ಟು ಹಾಕುವ ಸಹ ಸಂಬಂಧಗಳು ಶಾಶ್ವತವಾಗಿ ಉಳಿಯುತ್ತವೆ. ತನ್ನಿಯ ಹಕ್ಕಿಯಾದರೆ ತೆನೆಯಾಗಿ ಬಳಕುವೆ ಅನ್ನುವ ರೂಪಕದ ಮೂಲಕ ನಂಬುಗೆಯ ಬೇರುಗಳು ಆಳಕ್ಕಿಳಿಸಿ ಪ್ರೀತಿಯನು ಗಟ್ಟಿಗೊಳಿಸುವುದು. ಚದುರಿದ ಮಾನವೀಯ ಸಂಬಂಧಗಳ ಹಳಸನ್ನು ಅಳಿಸಿ ˌಅಪನಂಬುಗೆಯನು ಗುಡಿಸಿ ಪ್ರೀತಿಯ ಹಾಡ ಹಾಡಿ ವಸಂತವನು ತಬ್ಬಿ ಸುಖಿಸುವ ಸುಖವನು ಸಾರುತ್ತಾ ಸಾಂಗತ್ಯವಿಲ್ಲದೇ ಸೊರಗಿದ ಸಹಸಂಬಂಧಗಳನ್ನು ಗಟ್ಟಿಗೊಳಿಸುತ್ತಾ ಈ ಗಜಲನು ಮತ್ಸರದ ಮೊರೆತದಿಂದ ಬಿಡುಗಡೆಗೊಳಿಸಿದ್ದಾರೆ. ಇದು ಗಜಲ್ಕಾರ ತಾನು ತನ್ನ ಕಾವ್ಯ ಬದುಕಿನ ಲಂಬನೆಯ ಯಾನದಲಿ ತನಗೆ ದಕ್ಕಿದ ಅನುಭವವನ್ನು ಗಜಲಾಗಿ ಪಳಗಿಸುವ ಪರಿಗೆ ಎಂಥವರು ಫಿದಾ ಆಗಬೇಕು.

ಗಜಲ್ 74
ಎಲ್ಲಿ ಹುಡುಕಲಿ ನಿನ್ನ ಬಯಲಲ್ಲೇ ಕಳೆದಿರುವೆ
ದೀಪವ ಹಚ್ಚುವೆ ಏಕೆ ಕತ್ತಲಲ್ಲೇ ಕಳೆದಿರುವೆ

ತನ್ನ ಅಂತರಾತ್ಮವನು ತಾನೇ ತೆರೆದಿಡುವುದೆಂದರೆ ಇದೇ ಇರಬೇಕು. ಬಯಲೆಂದರೆ ಎಲ್ಲವನ್ನು ಮುಕ್ತರಾಗಿಸುವುದು. ಅಕ್ಕˌ ಮೀರಾಳಂತೆ ಹಂಗನು ಹರಿದುಕೊಂಡು ಹಗುರಾಗಿ ಬಾಳುವುದು. ಜಗವೆಲ್ಲಾ ಕತ್ತಲೆ ಆಳುತ್ತಿದೆ. ಕತ್ತಲೆಯೆಂದರೆ ಮೋಸˌ ವಂಚನೆˌ ದಗಲುಬಾಜಿತನˌ ಅನ್ಯಾಯˌ ಅಕ್ರಮˌ ಸ್ವಜನಪಕ್ಷಪಾತ... ಇವುಗಳ ಮೇಲುಗೈಯಾಗಿˌ ಸತ್ಯವು ಸುಳ್ಳಿನೆದರು ಸೋಲುವ ಶೋಚನೀಯ ಮತ್ತು ದಯನೀಯತನವನ್ನು ದೀಪದ ಬೆಳಕಿಗೆ ಆರೋಪಿಸಿರುವ ಕವಿ ಇಲ್ಲಿ ದೂರದ ಆಶಾಭಾವವನ್ನು ಹೊತ್ತಿರುವಂತೆ ಭಾಸವಾಗುತ್ತಾನೆ. ಆದರೆ ದೀಪದ ಬೆಳಕಿಗೆ ಬೆಲೆಯೆಲ್ಲಿದೆ. ಆದರೂ ಕವಿ ಆಶಾಜೀವಿ. ಎಲ್ಲವನು ಕಳಚಿಕೊಂಡ ಎದೆಮಿಡಿತಕ್ಕೆ ಬಾಗಿˌ ಜಗದ ಹುಸಿ ನುಡಿಹಾಡು ಧಿಕ್ಕರಿಸಿˌ ಮೊದಲು ಮಾನವವೆಂಬ ವಿಶ್ವ ಮಾನವತೆಯ ಸಾರವನ್ನು ಕವಿ ಕಟ್ಟಿಕೊಡುವ ಪ್ರಯತ್ನ ಈ ಗಜಲ್ ಮೂಲಕ ಮಾಡಿರುವುದು ಮೆಚ್ಚುವ ಸಂಗತಿ. ಇದು ಎದೆಮಿಡಿತದ ಹಾಡು. ಅಷ್ಟೇಯಲ್ಲ ಇದರೊಳಗೆ ಹೃದಯ ಮಥಿಸಿ ಪ್ರೀತಿಯ ಹಾಲುಕ್ಕಿಸುವ ಭಾವವಿದೆ. ಆ ಭಾವ ಅಂತರಂಗ ತೆರೆದು ಓದುಗರೊಳಗೆ ಬೆರೆಯುವಂತೆ ಆನಂದ ಭೋವಿಯವರು ಭೋದಿಸಿದ್ದು ಆಪ್ತ ಅನಿಸುತ್ತಿದೆ. ಜಾತಿ ಮತದ ಹರಿತದೆದರುˌ ಧರ್ಮಗಳ ತಿಕ್ಕಾಟ ನಡೆಯುತಿದೆ. ಇಂಥಹ ಸಂದರ್ಭದಲ್ಲಿ ಈ ರೀತಿಯ ಗಜಲ್ ಗಳು ಮನುಷ್ಯತ್ವದ ಬೇರುಗಳನ್ನು ಗಟ್ಟಿಗೊಳಿಸುತ್ತಾ ಸಾಗುತ್ತದೆಂದು ಕವಿ ನಂಬದ ಕಾರಣಕ್ಕೆ ಮೇಲಿನ ಗಜಲ್ ಹುಟ್ಟಿದೆಯೆಬುದು ನನ್ನ ಭಾವನೆ. ಕವಿಗೆ ಸಮಾಜಮುಖಿಯಾದಾಗ ಜೀವಕಾರುಣ್ಯವು ಜಿನುಗು ಜೀವಪರ ಕಾವ್ಯ ಹುಟ್ಟುತ್ತದೆ. ಇಲ್ಲಿ ಕವಿಯು ಜಗತ್ತನ್ನು ಹೃದಯದ ಕಣ್ಣಿಂದ ನೋಡಿದ ಕಾರಣವೇ ಇಲ್ಲಿನ ಗಜಲ್ ಗಳಾಗಿವೆ. ಕವಿ ಸದಾ ಸಮಾಜದ ಶ್ರೇಯಸ್ಸನ್ನು ಬಯಸುತ್ತಾನೆ. ಬಯಸಬೇಕು ಕೂಡ. ಹಾಗಿರದಿರೆ ಅವ ಕವಿಯಾಗಲಾರ. ಈ ಎಚ್ಚರಿಗೆ ಆನಂದರವರಿಗಿರುವುದು ಅವರ ಈ ಸಂಕಲನ ಸಾಕ್ಷೀಕರಿಸಾದೆ. ಆದರೂ ಕವಿ ಕುಲಕ್ಕೆ ಅಂಟಿದ ಆಪಾದನೆಯೆಂದರೆ ಇಂದು ಕವಿ ಸ್ವಾರ್ಥಿಯಾಗುತ್ತಿದ್ದಾನೆಂಬುದು. ಏಕೆಂದರೆ ಈ ಭೂವಿಯ ಬಯಲಿಂದು ಬೇಯುತಿದೆ. ಬರೀ ಬೆಂಕಿಯ ಝಳದಿಂದಲ್ಲ ಕೋಮು ಕಾವಿನಿಂದ. ಈ ಕಾಲದ ಈ ಕಂಪನವನು ಕತ್ತರಿಸಿˌ ಪ್ರೀತಿಯ ಭಾವ ಬಿತ್ತಿ ಯಾತನೆಯ ಯಜ್ಞಗುಂಡದಿಂದ ಮನುಜರನ್ನು ಹೊರ ತರುವ ಜವಾಬ್ದಾರಿ ಕವಿಗಿದೆ. ಇದನ್ನ ಇಲ್ಲಿನ ಗಜಲ್ ಗಳು ಉತ್ತರದಾಯಿತ್ವವನ್ನು ಪಡೆದುˌ ಪ್ರೀತಿಯನ್ನು ಪೋಷಿಸುತ್ತಾ... ಸಮಾಜಮುಖಿಯಾಗಿ ಸಾಗಿವೆ. ಇಂಥಹ ಉತ್ಕೃಷ್ಟ ಭಾವವನು ಧರಿಸಿಕೊಂಡು ಕೋಮಲ ಗಜಲುಗಳನು ಬರೆದ ಶ್ರೀಯುತ ಆನಂದ ಭೋವಿಯವರು ಪ್ರಚಾರದ ಮುಂಬೆಳಕಿನಿಂದ ದೂರ ಉಳಿದದ್ದು ಕನ್ನಡ ಗಜಲ್ ಲೋಕಕ್ಕಾದ ನಷ್ಟವೇ ಸರಿ. ಇಡೀ ಸಂಕಲನ ಭೂತ ಭವಿಷ್ಯ ವರ್ತಮಾನದ ಪ್ರರಧಿಯೊಳಗೆ ಪ್ರವೇಶಿಸಿ ಅಂತಃಕರಣದ ಮಂದ ಬೆಳಕಿನ ಹಣತೆಯ ಹರಿವನ್ನು ಪ್ರಖರಗೊಳಿಸುವ ಪ್ರಯತ್ನ ಮಾಡಿದ್ದಾರೆ. ಧರ್ಮದುರಿ ಬೇಗೆಯಲಿ ದಯೆತಂಪನು ಅರಸುವ ಇಲ್ಲಿನ ಗಜಲ್ ಗಳು ನೀಡುವ ಸೊಬಗು... ಜೀವನ ದರ್ಶನ... ತುಮಲಗಳಿಗೆ ಟಂಕಿಸಿದ ಕಾವ್ಯದ ದನಿ. ಆ ದನಿಗೆ ಒದಗಿಸಿದ ಭಾಷೆಯ ಚೆಲವು... ಭಾವದ ಗೆಲವು... ಈ ಗೆಲವನು ರಮಿಸುವ ಇಲ್ಲಿನ ಗಜಲ್ ಗಳು ಸದಾ ಕಾಲ ಭರವಸೆಯ ಬುಗ್ಗೆಯಾಗಿ ಉಳಿಯುತ್ತವೆ ಎಂಬುದು ನನ್ನ ಬಲವಾದ ನಂಬುಗೆ. ಅಷ್ಟೇಯಲ್ಲ ಅನೇಕ ಗಜಲ್ ಗಳು ಹಾಡಿಗೆ ಅಳವಡಿಸಿದರೆ ಹಾಡುತ್ತಾ ಹಾಡುತ್ತಾ ಭಾವ ಸಮಾದಿಯನ್ನು ಸೇರಬಹುದೆಂಬುದು ನನ್ನ ಅಭಿಮತ. ಹೀಗಾದರೆ ಇದು ಕಾವ್ಯ ಸಂಪ್ರೀತ ವಿಧಾನವಾಗಬಹುದು. ಆ ದಿಶೆಯಲ್ಲಿನ ಆನಂದರವರ ಪ್ರಯತ್ನ ಹೀಗೆಯೇ ಸಾಗಲಿ. ಅವರು ಇನ್ನೂ ಹೆಚ್ಚಾಗಿ ಬರೆಯುವಂತಾಗಲೆಂದು ಹರಸುವ

MORE FEATURES

ಇಲ್ಲಿನ ಕೆಲವು ಪ್ರಸಂಗಗಳೇ ರೋಚಕ

05-05-2025 ಬೆಂಗಳೂರು

"ಭುಜಂಗಾಚಾರ್ಯ ಎನ್ನುವುದು ಒಂದು ಶಕ್ತಿಯಾಗಿ ಆ ಕುಟುಂಬವನ್ನು ಕಾಪಾಡುತ್ತದೆ. ಒಂದು ಆದರ್ಶವಾಗಿ ಮನೆಯ ಹಿರಿ ಮಗನ ಕ...

ಬದುಕಿನ ಬೇಗೆಯ ಉದರದಲಿ ಹುಟ್ಟಿದ ಕಾವಿನ ಕತೆಗಳು

04-05-2025 ಬೆಂಗಳೂರು

"ನಂಬಿಕೆಯ ನೆಲೆಯಲ್ಲಿ ಕೌಟುಂಬಿಕವಾಗಿ ಯೋಚಿಸುವಂತೆ ಮಾಡುವ "ಅಪ್ಪ ಬರ್ತಾನ" ಕತೆಯು ಮಕ್ಕಳ ಮನೊಬಲವನ್ನು...

ಕಥಾ ಪಾತ್ರವಾದರೂ ಜನರ ಭಾವುಕತೆಯ ಭಾವವಾಗಿದ್ದವನು ಆತ

04-05-2025 ಬೆಂಗಳೂರು

"ಅದೊಂದು ಕಾಲ್ಪನಿಕ ಪಾತ್ರವೇ ಆಗಿದ್ದರೂ ಜನ ಅವನಿಗಾಗಿ ಹುಡುಕಾಡಿಬಿಟ್ಟಿದ್ದರಂತೆ. ಅವನ ಅಡ್ರೆಸ್ ಹುಡುಕ ಹೋಗಿ ನಿರ...