ಮಲೆನಾಡಿನವಳೇ ಆದರೂ ಬಾಲ್ಯದ ಅಲ್ಪ ಸಮಯವನ್ನಷ್ಟೇ ಅಲ್ಲಿ ಕಳೆದ ನನಗೆ ಶಾಂತಲಾ ಅವರ ಕತೆಗಳಲ್ಲಿ ಮಸುಕಾಗಿ ಹಲವಾರು ಪಾತ್ರಗಳು ನೆನಪಾದುವು. ಶಾಂತಲಾ ವಿದೇಶದಲ್ಲಿ ನೆಲೆಸಿದ್ದರೂ ಹುಟ್ಟೂರಿನ ಪರಿಸರದಲ್ಲೇ ಉಸಿರಾಡುತ್ತಿರುವಂತೆ, ಹಲವು ಕಥೆಗಳಲ್ಲಿ ಅವರ ಊರಿಗೆ ನಮ್ಮನ್ನು ಟ್ರಾನ್ಸ್ಪೋರ್ಟ್ ಮಾಡಿಬಿಡುತ್ತಾರೆ ಎಂಬುದು ಲೇಖಕಿ ಪೂರ್ಣಿಮಾ ಮಾಳಗಿಮನಿ ಮಾತು. ಅವರು ಶಾಂತಲಾ ಭಂಡಿ ಅವರ ‘ಚಂದಮಾಮ ಮಲಗಿದ್ದಾನೆ’ ಕೃತಿಯ ಬಗ್ಗೆ ಬರೆದ ಲೇಖನ ನಿಮ್ಮ ಓದಿಗಾಗಿ..
ಕೃತಿ: ಚಂದಮಾಮ ಮಲಗಿದ್ದಾನೆ
ಲೇಖಕರು: ಶಾಂತಲಾ ಭಂಡಿ
ಬೆಲೆ: 115
ಮುದ್ರಣ: 2021
ಪ್ರಕಾಶನ: ಸಪ್ನ ಬುಕ್ ಹೌಸ್
ಈ ಪುಸ್ತಕದ ಒಂದು ವಿಶೇಷತೆಯೆಂದರೆ 27 ನವೆಂಬರ್ 2021 ರಂದು ಕನ್ನಡ ಪುಸ್ತಕಗಳ ಲೋಕದಲ್ಲೇ ಮೊದಲ ಬಾರಿಗೆ ಎನಿಸುವಂಥ ಕಾರ್ಯಕ್ರಮ, ಒಂದೇ ವೇದಿಕೆಯಲ್ಲಿ, ಅದೂ ಕರ್ನಾಟಕದ ಮುಖ್ಯ ಮಂತ್ರಿಗಳಾದ ಬೊಮ್ಮಾಯಿಯವರಿಂದ ಬಿಡುಗಡೆಯಾದ ಅಮೋಘ 66 ಪುಸ್ತಕಗಳಲ್ಲಿ ಇದೂ ಒಂದು ಎನ್ನುವುದು.
ಕನ್ನಡ ಪ್ರಭದ ಪ್ರಧಾನ ಸಂಪಾದಕರಾದ ರವಿ ಹೆಗ್ಡೆಯವರ ಚೆಂದದ ಮುನ್ನುಡಿಯಿದೆ. ಶಾಂತಲಾ ಭಂಡಿಯವರಂತೆಯೇ ಅದೇ ಹಳ್ಳಿಯ ಅಂದ್ರೆ ಸಿರ್ಸಿ ಯ ಆಸುಪಾಸಿನವರಾದ ರವಿ ಹೆಗಡೆ ಹೇಳುವಂತೆ ಕತೆಗಳನ್ನು ಮನೋರಂಜನೆ, ಸಾಮಾಜಿಕ ಬದಲಾವಣೆ, ಮನೋವಿಕಾರ, ಕಲ್ಪನಾಶಕ್ತಿಯ ವಿಸ್ತಾರ ಇತ್ಯಾದಿ ಯುಟಿಲಿಟೇರಿಯನ್ ದೃಷ್ಟಿಯಿಂದ ನೋಡಬಾರದು ಎಂದರೂ ಒಬ್ಬ ಸಾಮಾನ್ಯ ಓದುಗಳಾಗಿ ನನಗೆ ಇಲ್ಲಿ ಮನೋರಂಜನೆಯೊಂದಿಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರಗಳ ದೃಷ್ಟಿಯಿಂದ ವಿಭಿನ್ನವಾದ ಚಿತ್ರಣಗಳು ಸಿಕ್ಕವು.
ಈ ಪುಸ್ತಕವನ್ನು ಶಾಂತಲಾ ಕನ್ನಡದ ಜನಪ್ರಿಯ ಕತೆಗಾರ, ಕಾದಂಬರಿಕಾರ, ಜೋಗಿಯವರಿಗೆ ಅರ್ಪಣೆ ಮಾಡಿದ್ದಾರೆ. ದಿನದಲ್ಲಿ ಮೂರು ತಾಸು ಮಾತ್ರ ಮಲಗುವ, ಉಳಿದೆಲ್ಲಾ ಸಮಯವನ್ನು ಪುಸ್ತಕಗಳ ಓದು ಬರಹಕ್ಕಾಗಿ ಮೀಸಲಿಟ್ಟಿರುವ, ಹೊಸ ಬರಹಗಾರರನ್ನು ಗುರುತಿಸಿ, ಓದಿಸಿ, ಬರೆಯಿಸುವ ಮಹತ್ವದ ಕೆಲಸವನ್ನು ಮಾಡುತ್ತಿರುವ ಜೋಗಿಯವರೇ ಒಂದು ವಿಸ್ಮಯ! ಅವರೂ ಕೂಡ ಒಂದೆರಡು ಮಾತುಗಳನ್ನು ಬರೆದಿದ್ದಾರೆ. ಮಕ್ಕಳ ಕತೆಗಳನ್ನು ಬರೆಯುವುದು ಸುಲಭ ಏಕೆಂದರೆ ಅವರು ಕತೆಗಳಲ್ಲಿ ತಮ್ಮನ್ನು ಹುಡುಕುವುದಿಲ್ಲ, ಎನ್ನುವ ಐಸಾಕ್ ಭಾಷೆವಿಸ್ ಅವರ ಚೆಂದದ ಮಾತನ್ನು ಉಲ್ಲೇಖಿಸಿದ್ದಾರೆ.
ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರ ಸಾಂದರ್ಭಿಕ ಬೆನ್ನುಡಿಯಿದೆ.
ಮಲೆನಾಡಿನವಳೇ ಆದರೂ ಬಾಲ್ಯದ ಅಲ್ಪ ಸಮಯವನ್ನಷ್ಟೇ ಅಲ್ಲಿ ಕಳೆದ ನನಗೆ ಶಾಂತಲಾ ಅವರ ಕತೆಗಳಲ್ಲಿ ಮಸುಕಾಗಿ ಹಲವಾರು ಪಾತ್ರಗಳು ನೆನಪಾದುವು. ಕಥೆಕೂಟದಲ್ಲಿರುವ ಬಹಳಷ್ಟು ಮಂದಿ ತಮ್ಮ ಹುಟ್ಟೂರಿನ ಭಾಷೆಯ ಸೊಗಡಿನೊಂದಿಗೆ ಕಟ್ಟಿ ಕೊಡುವ ಆಪ್ತವೆನಿಸುವ ಮಲೆನಾಡಿನ ಮಣ್ಣಿನ ಕಥೆಗಳು ಬಹಳ ವಿಶೇಷವಾಗಿರುತ್ತವೆ. ಅಂತೆಯೇ ಇಲ್ಲಿ ಶಾಂತಲಾ ವಿದೇಶದಲ್ಲಿ ನೆಲೆಸಿದ್ದರೂ ಹುಟ್ಟೂರಿನ ಪರಿಸರದಲ್ಲೇ ಉಸಿರಾಡುತ್ತಿರುವಂತೆ, ಹಲವು ಕಥೆಗಳಲ್ಲಿ ಅವರ ಊರಿಗೆ ನಮ್ಮನ್ನು ಟ್ರಾನ್ಸ್ಪೋರ್ಟ್ ಮಾಡಿಬಿಡುತ್ತಾರೆ.
ಒಟ್ಟು ಹತ್ತು ಚೆಂದದ ಕತೆಗಳಿರುವ ಈ ಸಂಕಲನದಲ್ಲಿ ನನಗೆ ಬಹಳ ಇಷ್ಟವಾದ ಕೆಲವು ಕತೆಗಳ ಬಗ್ಗೆ ಹೇಳಲೇ ಬೇಕು.
ಕೊನೆ ಕೊಯಿಲು: ಇಬ್ಬರೂ ಗಂಡುಮಕ್ಕಳು ನಗರ ಸೇರಿದ ಮೇಲೆ, ಗಂಡನನ್ನೂ ಕಳೆದುಕೊಂಡು ಒಂಟಿಯಾಗಿ ಹಳ್ಳಿಯಲ್ಲಿ ಜೀವನ ನಡೆಸುತ್ತಿರುವ ನಿರೂಪಕಿ; ನಮ್ಮೊಂದಿಗೆ ಬಂದು ಇದ್ದುಬಿಡು ಎನ್ನುವ ಮಗ, ತನ್ನ ಮುಂದಿನ ಜೀವನದ ಕುರಿತು ಗೊಂದಲಕ್ಕೊಳಗಾಗುವ ನಿರೂಪಕಿ. ಮನೆ, ತೋಟ, ಆಳು ಮಗ ಬಾಳ, ಅವನ ಮಗಳು ಹೊನ್ನಿ ಎಲ್ಲರೂ ತನ್ನ ಬದುಕೇ ಆಗಿಬಿಟ್ಟಿದ್ದಾರೆ. ಹೊನ್ನಿಯ ಸಾವು ಹೇಗೆ ಅವಳ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.
ಆ ತೀರಕೆ ಆತ್ಮಯಾನ - ನಗರದಲ್ಲಿ ನೆಲೆಸಿರುವ ನಿರೂಪಕಿ ಬಾಲ್ಯ ಸ್ನೇಹಿತೆಯ ಮಗಳನ್ನು ತಮ್ಮ ಮನೆಯೊಳಗೆ ಇರಲು ಒಪ್ಪಿಕೊಂಡು ಮುಂದೆ ಆಗುವ ಅನಾಹುತಗಳಿಂದ ಒದ್ದಾಡುವ ಕತೆ ವಿಶೇಷವಾಗಿದೆ. ಬಹಳ ಪ್ರಾಕ್ಟಿಕಲ್ ಅನಿಸಿದ ನಿರೂಪಕಿ ಒಂದು ಭಾವೋದ್ವೇಗದಿಂದ ಬೇರೆಯದೇ ಪ್ರಪಂಚದಲ್ಲಿ ಉಳಿದುಬಿಡುವುದು ವಿಸ್ಮಯ ಅನಿಸಿತು. ಒಮ್ಮೆಯೂ ಸ್ನೇಹಿತೆ ಜಲಜಳೊಂದಿಗೆ ಮಾತನಾಡದಿರುವುದು ಇಂಪ್ರಾಕ್ಟಿಕಲ್ ಅನಿಸಿತು ಕೂಡ.
ಪಾಪಾ ಬರೆಸಿದ ಕತೆಗಳು - ಒಂದೇ ಜಾಗದಲ್ಲಿ ಬಾಲ್ಯದಿಂದ ಕಾಲೇಜು ಸೇರುವ ತನಕವೂ ನೆಲೆಸಿದ ಒಂದು ಹುಡುಗಿಯ ಮನದಲ್ಲಿ ಅದೆಷ್ಟು ಮುಗ್ದ ಕತೆಗಳಿರಬಹುದು ಎನ್ನುವುದಕ್ಕೆ ಇದು ಒಂದು ನಿದರ್ಶನ. ಅಪ್ಪ, ಅಮ್ಮ, ಗದ್ದೆ, ಗಿಡ ಮರಗಳು, ದಿಬ್ಬ, ಹೊಳೆ, ನಾಯಿ ಮುಂತಾದ ಸಾಮಾನ್ಯ ವಿಚಾರಗಳೂ ಒಂದು ಪುಟ್ಟ ಹುಡುಗಿಯ ಮನದಲ್ಲಿ ವಿಶೇಷವಾದ ಕತೆಗಳಾಗುವುದು, ಅವನ್ನು ಹೇಳಲು ಒಬ್ಬ ಕಾಲ್ಪನಿಕ ಸ್ನೇಹಿತ ಪಾಪಾ ನನ್ನ ಅವಳು ಕಾಣುವುದು ಸುಂದರವಾಗಿದೆ. "ನಾವು ಬೆಳ್ದಿದ್ದ ಹತ್ತಿ ಮಣ್ಣು ಹತ್ತಿ ಹೋಗಿದ್ದುವು" ಎನ್ನುವ ಒಂದು ಸಾಲು ತಣ್ಣಗೆ ವಿಷಾದವನ್ನು ತಟ್ಟಿಸಿ ಹೋಗುತ್ತದೆ.
ಹೀಗೆ ತಮ್ಮ ಕತೆಗಳ ಮೂಲಕ ಇಲ್ಲಿನ ಮಣ್ಣಿನ ಕಂಪನ್ನು ಹೀರುತ್ತಾ, ಇಲ್ಲಿನ ಬದುಕನ್ನು ಹಚ್ಚಿಕೊಂಡೇ ಇರುವ ಶಾಂತಲಾ ಒಂದೊಳ್ಳೆ ಸಂಕಲನವನ್ನು ಕೊಟ್ಟಿದ್ದಾರೆ. ನನಗೆ ಕೆಲವು ಕತೆಗಳು ಸ್ವಲ್ಪ ಸ್ಲೋ ಅನಿಸಿದುವು, ಆದರೆ ಅದು ಕತೆ ಕಟ್ಟಿಕೊಡುವಾಗ ಅವರು ತೋರಿರುವ ಸಮಾಧಾನ, ಶ್ರದ್ಧೆಯೂ ಹೌದು.
ಅಭಿನಂದನೆಗಳು ಶಾಂತಲಾ!
ಶಾಂತಲಾ ಭಂಡಿ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ..
ಚಂದಮಾಮ ಮಲಗಿದ್ದಾನೆ ಕೃತಿಯ ಹೆಚ್ಚಿನ ಮಾಹಿತಿ
ಪೂರ್ಣಿಮಾ ಮಾಳಗಿಮನಿ ಅವರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
©2024 Book Brahma Private Limited.