ಮಕ್ಕಳು ಜಗತ್ತಿನ ಅತ್ಯಂತ ಸೂಕ್ಷ್ಮ ಸೃಷ್ಟಿ ಎಂಬುದು ಬಲ್ಲವರ ಅಭಿಮತ


"ಪ್ರಬಂಧ ಪ್ರಕಾರದಲ್ಲಿ ಮಕ್ಕಳ ಪ್ರಬಂಧಗಳನ್ನು ಬರೆಯುವದು ತುಸು ಕಠಿಣವೇ ಈ ಗಂಭೀರವಾದ ಕಾರ್ಯದಲ್ಲಿ ಯಶಸ್ವಿಯಾದವರು ತಮ್ಮಣ್ಣ ಬೀಗಾರ ಅವರು. ಕೋಲ್ಜೇನು ಕೃತಿಯ ಮೂಲಕ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾ ಮಲೆನಾಡಿನ ಮಕ್ಕಳ ಬಾಲ್ಯದ ಭಾವಲೋಕವನ್ನು ತೆರೆದಿಟ್ಟಿದ್ದಾರೆ," ಎನ್ನುತ್ತಾರೆ ಅರುಣಾ ನರೇಂದ್ರ. ಅವರು ತಮ್ಮಣ್ಣ ಬೀಗಾರ ಅವರ ‘ಕೋಲ್ಜೇನು’ ಕೃತಿ ಕುರಿತು ಬರೆದ ಅನಿಸಿಕೆ.

ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯ ಲೋಕವೇ ವಿಶಿಷ್ಟವಾದದ್ದು. ಮಕ್ಕಳು ಜಗತ್ತಿನ ಅತ್ಯಂತ ಸೂಕ್ಷ್ಮ ಸೃಷ್ಟಿ ಎಂಬುದು ಬಲ್ಲವರ ಅಭಿಮತ. ಮಕ್ಕಳ ಸಾಹಿತ್ಯದಲ್ಲಿ ಮಕ್ಕಳ ಕಥೆಗಳದೂ ಒಂದು ಪ್ರಮುಖ ಪ್ರಕಾರ. ನಮ್ಮ ಕವಿಗಳು "ಮಕ್ಕಳೊಳಮಾದ‌ಮೋಹಂ ಎಲ್ಲಾ ಜೀವಕ್ಕಂ ಸಮಾನಂ" ಎನ್ನುತ್ತಾರೆ. ಆದರೆ ಆ ಮೋಹ ಮಕ್ಕಳ ಸಾಹಿತಿಗೆ ತುಸು ಹೆಚ್ಚು ಅನಿಸುತ್ತದೆ. ಮಕ್ಕಳ ಲೋಕವನ್ನು ಅಳಿಸುವ, ನಗಿಸುವ, ತಿಳಿ ಹೇಳುವ ಕೆಲಸ ಮಕ್ಕಳ ಸಾಹಿತಿಯದೇ ಆಗಿದೆ. ಮಗುವಿನ ಮುಗ್ದಲೋಕವೇ ತುಂಬಾ ರೋಚಕವಾದುದು. ಅವರನ್ನು ಲಾಲಿಸುವ ಪಾಲಿಸುವ ಗುಣ ಮಕ್ಕಳ ಸಾಹಿತ್ಯಕ್ಕಿದೆ. ಅದರಲ್ಲಿಯೂ ತಮ್ಮಣ್ಣ ಬೀಗಾರ ಅವರ ಈ ಪ್ರಬಂಧ ಮಾದರಿಯಂತೂ ಮಕ್ಕಳನ್ನು ತೀವ್ರವಾಗಿ ಹಿಡಿದಿಡುತ್ತದೆ.

ಪ್ರಬಂಧ ಪ್ರಕಾರದಲ್ಲಿ ಮಕ್ಕಳ ಪ್ರಬಂಧಗಳನ್ನು ಬರೆಯುವದು ತುಸು ಕಠಿಣವೇ ಈ ಗಂಭೀರವಾದ ಕಾರ್ಯದಲ್ಲಿ ಯಶಸ್ವಿಯಾದವರು ತಮ್ಮಣ್ಣ ಬೀಗಾರ ಅವರು. ಕೋಲ್ಜೇನು ಕೃತಿಯ ಮೂಲಕ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾ ಮಲೆನಾಡಿನ ಮಕ್ಕಳ ಬಾಲ್ಯದ ಭಾವಲೋಕವನ್ನು ತೆರೆದಿಟ್ಟಿದ್ದಾರೆ. ಕಥೆ ಕೇಳುವ ಖುಷಿ ಜಗತ್ತಿನಲ್ಲಿ ಎಲ್ಲರಿಗಿಂತ ಮಕ್ಕಳಿಗೆ ಹೆಚ್ಚು .ಕಥೆ ಹೇಳುವ‌ ಮೂಲಕವೇ ವ್ಯಕ್ತಿಯ ವ್ಯಕ್ತಿತ್ವವವನ್ನು ಸುಂದರವಾಗಿ ರೂಪಿಸಿದ ಕಥಾ ಪರಂಪರೆ ನಮ್ಮ ಪಂಚತಂತ್ರ ಕಥೆಗಳದು. ಅಂದರೆ ಮಕ್ಕಳ ಮನಸನ್ನು ತಿದ್ದಿ ಅವರನ್ನು ಬೆಳೆಸುವ ಮಹತ್ವದ ಗುಣ ಕಥೆಗಳಿಗಿದೆ. ಇಂದಿನ ಮಕ್ಕಳು ಟಿವಿ ಚಾನಲ್ ಗಳಾದ ಪೋಗೋ ಮೊದಲಾದ ವುಗಳಿಗೆ ಮುಗಿ ಬೀಳುವದರ ಹಿಂದೆ ಈ ಅಂಶವೇ ಇರುವದನ್ನು ನಾವು ಅರಿತಿದ್ದೇವೆ. ಮಕ್ಕಳ ಸಾಹಿತ್ಯ‌ಲೋಕದಲ್ಲಿ ಪ್ರಸಿದ್ಧರಾದ ತಮ್ಮಣ್ಣ ಬೀಗಾರ ಅವರ ಈ ಕೃತಿ ಹೆಸರೇ ಹೇಳುವಂತೆ ಇದೊಂದು‌ ಕೋಲ್ಜೇನು ಸಂಪುಟವೇ. ಉತ್ತರ‌ ಕನ್ನಡದಲ್ಲಿ ಹೇಗೋ ಏನೊ? ನಮ್ಮ ಭಾಗದಲ್ಲಿ ಮಾತ್ರ ಶಾಲೆಗೆ ಹೋಗುವ ಧೀರ ಹುಡುಗರು, ದನಕಾಯುವ ಹುಡುಗರು ಜೇನು ಕುಳಿತ ಗಿಡದ ಭಾಗವನ್ನು ಕತ್ತರಿಸಿ ಜೇನು ಗೂಡು ಸಮೇತ ಹಿಡಿದು ತಂದು ಬಿಡುತ್ತಾರೆ. ಇದು ಕೋಲ್ಜೇನು. ಇದು ನಮ್ಮ ಕಡೆಯ ಮಾತಾಯಿತು ಆದರೆ ಉತ್ತರ ಕನ್ನಡ ಭಾಗದಲ್ಲಿ ಕೋಲ್ಜೇನು ಎಂಬ ಪ್ರಕಾರದ ಜೇನು ಹುಟ್ಟು ಇರುತ್ತವಂತೆ.ಏನೇ ಇರಲಿ ಗಿಡದಿಂದ ಜೇನು ಬಿಡಿಸಿ ಅದನು ಸವಿಯುವ ಮಜವೇ ಬೇರೆ.

ಇಲ್ಲಿಯೂ ಹಾಗೆ ಸವಿಯಾಗಿ ಸವಿಯುವಂತಹ 17 ಲಹರಿಗಳಿವೆ. ಇವೆಲ್ಲವೂ ಮಕ್ಕಳ‌ ಮನೋಲೋಕದ ಚಿತ್ರಗಳು. ವಿಚಿತ್ರವೆಂದರೆ ತಮ್ಮಣ್ಣ ಬೀಗಾರ ಅವರು ತಮ್ಮ ಬಾಲ್ಯಕ್ಕೆ ಮರಳಿ ಅದನ್ನು ಚಿತ್ರಿಸುವ ಪರಿಯೇ ಅದ್ಭುತ. ಮೊದಲ ಲಹರಿಯನ್ನೇ ತಗೆದುಕೊಳ್ಳಿ ಅಜ್ಜಿ ಗುಂಡಿ ಎಂಬಲ್ಲಿ ಲೇಖಕರು ಅಜ್ಜಿಯರ ಕುರಿತು ಹೇಳುತ್ತಾರೇನೊ ಎಂದರೆ ಅವರು ಹೇಳ ಹೊರಟದ್ದು ಶಾಲೆಯಿಂದ ದೂರವಿರುವ ಒಂದು ಗುಂಡಿಯ ಬಗ್ಗೆ. ಗುಂಡಿಯೆಂದರೆ ನೀರು ನಿಂತ ಜಾಗ.ತಾವು ಪ್ರಾಥಮಿಕ ಶಾಲೆಯಲ್ಲಿದ್ದಾಗ ತಾವು ಶಾಲೆಗೆ ಚಕ್ಕರ್ ಹಾಕಿ ಆ ಗುಂಡಿಯಲ್ಲಿ ಬಿಸಿಲಿನಲ್ಲಿ ಮುಳುಗೇಳುವ ಸುಖವನ್ನು ಲೇಖಕರು ತುಂಬಾ ರಮ್ಯವಾಗಿ ಚಿತ್ರಿಸುತ್ತಾರೆ. ಆರಂಭದಲ್ಲಿ ಬರುವ ಅಜ್ಜಿಯರನ್ನು ವರ್ಣಿಸುವ ಪರಿಯೇ ಅದ್ಭುತ.. ಎಷ್ಟು ಜನ ಅಜ್ಜಿಯರು!.. ತುಂಗಜ್ಜಿ ನಾಗಜ್ಜಿ, ಬೆಳ್ಳಜ್ಜಿ, ಪುಟ್ಟಜ್ಜಿ, ಸಣ್ಣಜ್ಜಿ ಹೀಗೆ ಅವರನ್ನೆಲ್ಲ ಅವರ ವಿಶೇಷತೆಗಳ ಸಮೇತ ವಿವರಿಸಿರುವದು, ಆ ಅಜ್ಜಿಯರೋ ಬಾಲ್ಯದಲ್ಲಿಯೇ ಮದುವೆಯಾಗಿ ತಮಗೆ ವಯಾಸ್ಸಾಗುವ ಮೊದಲೇ ತಮ್ಮ ವಯಸ್ಸಾದ ಗಂಡಂದಿರನ್ನು ಕಳೆದುಕೊಂಡು‌ ಮನೆತನಗಳನ್ನು ರೂಪಿಸುವ ಚಿತ್ರವಂತು ಎಲ್ಲ ಕಾಲದ ಅಜ್ಜಿಯರ ಬಗ್ಗೆ ಗೌರವ ತರುವಂತಿದೆ. ಲಹರಿಯ ಕೊನೆ ವಿಷಾದವನ್ನು ವ್ಯಕ್ತ ಮಾಡುತ್ತದೆ‌. ಬಾಲ್ಯದ ಆ ಚಂದದ ಗುಂಡಿ ಈಗ ಊರಿಗೆ ಹೋಗಿ ನೋಡಿದರೆ ಸಪಾಟಾಗಿದೆ. ಗುಂಡಿಯನ್ನು ನಿರ್ಮಿಸಿದ್ದ ಬಂಡೆಯನ್ನು ಒಡೆದು ರಸ್ತೆ ಮಾಡಿದ ಜಾಗತಿಕತೆಯ ಆಧುನಿಕ ಕಾಲದ ನಿರ್ಜೀವ ಬದುಕು ಬಾಲ್ಯದ ಆ ಸುಂದರ ಗುಂಡಿಯ ಪರಿಸರದೊಂದಿಗೆ ಮುಖಾಮುಖಿಯಾಗಿ ನಾವು ಕಳೆದುಕೊಂಡ ನಿಸರ್ಗ ವೈಭವವನ್ನು ನೆನಪಿಸುತ್ತದೆ.

ಎರಡನೆಯ ಲಹರಿ ಸೂಡಿ ಹಿಡಿದು ಕೂಡಾ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿಗೆ ಸುಮಾರು ಅರ್ದ ಶತಮಾನ, ಕಾಲು ಶತಮಾನದ ಹಿಂದೆ ಇದ್ದ ಚಿತ್ರಣ. ಆಗ ನಡೆಯುತ್ತಿದ್ದ ಭಜನೆಗಳೂ ಅವುಗಳನ್ನು ಇಡೀ ರಾತ್ರಿ ಕುಳಿತು ಕೇಳುತ್ತಿದ್ದ ಹುಡುಗರೂ ಇಂದು ಅಲ್ಲಿ ಇರಲಾರರು.

ಸೂಡಿ ಎಂದರೆ ಕರೆಂಟ್ ಇಲ್ಲದ ಆ ಕಾಲದಲ್ಲಿ,ಅಡಿಕೆ ಮರದ ಕಾಂಡದಿಂದ ತಯಾರಿಸಿದ ಕಟ್ಟಿಗೆ ತುದಿಗೆ ಬೆಂಕಿ ಹಚ್ಚಿ ಬೆಳಕು‌ ಮಾಡಿಕೊಳ್ಳುತ್ತಿದ್ದ ಸಾಧನ. ಅದನ್ನು ಹಿಡಿದು ಅಲ್ಲಿಯ ಬಾಲಕರು ಕಾಡಿನಲ್ಲಿ ಬೇರೆಲ್ಲೊ ದೇವಾಲಯದಲ್ಲಿ ನಡೆಯುತ್ತಿದ್ದ ಭಜನೆಗಾಗಿ ಹೋಗುತ್ತಿದ್ದ ಚಿತ್ರ ಇಲ್ಲಿದೆ. ದೇವಸ್ಥಾನದಲ್ಲಿ ನಡೆಯುವ ಭಜನೆ ಮತ್ತು ಅದು ಮುಗಿದ ನಂತರದಲ್ಲಿ ಪ್ರಸಾದ ವಿತರಣೆಯಂತೂ ಭಜನೆಗೆ ಬಂದ ಮಕ್ಕಳ ಪ್ರಮುಖ ಅಕರ್ಷಣೆಯೂ ಹೌದು. ದೊಡ್ಡ ಧ್ವನಿಯಲ್ಲಿ ಹಾಡು ಹಾಡುತ್ತಿದ್ದ ಶಂಕ್ರಣ್ಣ,‌ ಮತ್ತೆ ಮರಳಿ ಹೋಗಲು ರಾತ್ರಿಗೆ ಇರಲಿ ಎಂದು ತಗೆದಿಡುತ್ತಿದ್ದ ಸೂಡಿ, ಕತ್ತಲಲ್ಲಿ ತಗೆದಿಟ್ಟ ಸೂಡಿ ಕಳವು ಮಾಡುವವರು ಹೀಗೆ ಅರೆ ಶತಮಾನದ ಹಿಂದಿನ ಬಾಲಕರ ಓಡಾಟಗಳಲ್ಲಿ‌ ಸೂಡಿ ಹಿಡಿಯುವದೂ ಒಂದು ಎಂದು ಲೇಖಕರು ಪರಿಚಯಿಸಿದ್ದಾರೆ.
ಈ ಸಂಕಲನದ ಹೆಸರನ್ನು ಸೂಚಿಸುವ ಲಹರಿ ಕೋಲ್ಜೇನು ಬಾಲಕರಾಗಿದ್ದಾಗ ದನ‌ಕಾಯಲು‌ ಹೋಗುತ್ತಿದ್ದ ಲೇಖಕರು ಸಾಲು ಸಾಲು ಕೋಲ್ಜೇನು ನೋಡಿ ತಮ್ಮ ಅಣ್ಣ ಮತ್ತು ತಾಯಿಯನ್ನು ಕರೆದುಕೊಂಡು ಬಂದು ಜೇನು ಬಿಡಿಸಿದ ಪ್ರಸಂಗವನ್ನು ಸ್ವಾರಸ್ಯಕರವಾಗಿ ವಿವರಿಸಿದೆ. ಜೇನು ಬಿಡಿಸುವ ಕೌಶಲ, ಜೇನಿನ ವಿಧಗಳ‌ ಕುರಿತು ಬರುವ ವಿವರಗಳು ಕುತೂಹಲ ಹುಟ್ಟಿಸುತ್ತವೆ. 6 ಕೋಲ್ಜೇನುಗಳನ್ನು ನೋಡಿದ್ದು ತಾನೇ. ತಮ್ಮ ಮನೆಯಲ್ಲಿ ಇದುವರೆಗೂ ಯಾರಿಗೂ 3 ಕೋಲ್ಜೇನು ಕೂಡಾ ಸಿಕ್ಕಿರಲಿಲ್ಲ ಎಂಬ ಹೆಮ್ಮೆಯಲ್ಲಿ ತುಂಬಿದ ಜೇನಿನ ಗಿಂಡಿಯನ್ನು ಹಿಡಿದುಕೊಂಡು ಮನೆಗೆ ಬಂದು ಬಾಗಿಲು ದಾಟುವಾಗ ಬಾಗಿಲ ಪಟ್ಟಿಗೆ ಕಾಲು ತಾಗಿ ಮುಗ್ಗರಿಸಿ ಬಿದ್ದಾಗ ಒಂದು ಲೋಟದಷ್ಟು ಜೇನು ತುಪ್ಪ ನೆಲಕ್ಕೆ ಚಲ್ಲಿಹೋಯಿತು. ಲೇಖಕರಿಗೆ ಬಹಳ ಬೇಜಾರಾಯಿತು. ನಮಗೆ ಇಷ್ಟವಾದದ್ದು ಕೈತಪ್ಪಿ ಹೋದರೆ, ಕಳೆದು ಹೋದರೆ ಅದು ದೇವರಿಗೆ ಮುಟ್ಟಿತು ಕೃಷ್ಣಾರ್ಪಣಮಸ್ತು ಎಂದು ಹಿರಿಯರು ಸಮಾಧಾನ ಮಾಡುವುದು ಇಂದಿಗೂ ರೂಢಿಯಲ್ಲಿದೆ. ಅಂತೆಯೇ ಇಲ್ಲಿ ಅಮ್ಮನ ಔದಾರ್ಯದ ನುಡಿ ಜೀವ ಉಕ್ಕಿಸುವ ಸೆಲೆಯಂತೆ ತೋರುತ್ತದೆ.

ತಿಮ್ಮಜ್ಜನ ಕೋವಿ

ಹೊಲದಲ್ಲಿಯ ಬೆಳೆಗಳನ್ನು ಹಂದಿಗಳಿಂದ ಕಾಪಾಡಲು ತಿಮ್ಮಜ್ಜ ಕೋವಿಯನ್ನಿಟ್ಟುಕೊಂಡಿದ್ದ. ಹಂದಿಗಳನ್ನು ಬೆನ್ನಟ್ಟಿ ಭೇಟೆಯಾಡುವ ಶಕ್ತಿ ತಿಮ್ಮಜ್ಜನಿಗಿರಲಿಲ್ಲ ಆದರೆ ಉಪಾಯದಿಂದ ಹಂದಿ ಬರಬಹುದಾದ ದಾರಿಗೆ ಎತ್ತರದಲ್ಲಿ ಗೂಟ ಹೊಡೆದು ಅಲ್ಲಿ ಕೋವಿಯನ್ನು ಕಟ್ಟಿದ್ದ. ಕೋವಿಯನ್ನು ಹಾರಿಸಲು ಎಳೆಯುವ ಮಳೆಯನ್ನು ಎಳೆದು ದಾರದಿಂದ ಕಟ್ಟಿದ್ದ ಹಂದಿ ಬಂದಾಗ ಈ ದಾರ ಎಳೆಯುಲ್ಪಟ್ಟು ಮಳೆಯಿಂದ ದಾರ ತಪ್ಪಿ ಮೊಳೆ ಒತ್ತಲ್ಪಟ್ಟು ತಕ್ಷಣ ದಾರದ ನೇರದಲ್ಲಿ ಗುಂಡು ಹಾರಲ್ಪಟ್ಟು ಹಂದಿಗೆ ತಾಗುತ್ತದೆ. ಹಂದಿ ಸಾಯುತ್ತದೆ. ತಿಮ್ಮಜ್ಜ ತೀರಿ ಹೋಗಿದ್ದರೂ ಅವನ ನೆನಪು ಕೋವಿಯೊಂದಿಗೆ ಸೇರಿಕೊಂಡು ಲೇಖಕರ ಮನಸ್ಸಿನಲ್ಲಿ ಸದ್ದು ಮಾಡುತ್ತಲೇ ಇದ್ದಿರಬಹುದು ಸನಿಸುತ್ತದೆ.

ಲೇಖಕರ ಬಾಲ್ಯದ ಸಂಭ್ರಮವು ಜೇನಿನೊಂದಿಗೆ ಬೆರೆತಿರುವುದನ್ನು ನಾವು ಈ ಕೃತಿಯಲ್ಲಿ ಕಾಣುತ್ತೇವೆ. ಈ ಪುಟ್ಟ ಬಾಲಕನ ಅಣ್ಣ ಜೇನು ಹುಡುಕಿ ಅದನ್ನು ಬಿಡಿಸಿ ತುಪ್ಪ ತೆಗೆಯುವಲ್ಲಿ ನಿಪುಣನಾಗಿದ್ದ. ಅಂತೆಯೇ ತಾನೂ ಕಾಡಿಗೆ ಹೋಗಿ ಜೇನು ಹುಡುಕಬೇಕೆಂದು ಬಯಸುತ್ತಾನೆ. ತನ್ನ ಜೊತೆಗೆ ಬರುವಂತೆ ಪುಟ್ಟುವನ್ನು ರಮಿಸುತ್ತಾನೆ. ಜೊತೆಗೆ ತಮ್ಮ ಮನೆಯ ಕುಚ್ಚ ಹೆಸರಿನ ನಾಯಿಯನ್ನೂ ಕರೆದುಕೊಂಡು ಕಾಡಿಗೆ ಹೋಗಿ ಅಲ್ಲಿ ಜೇನನ್ನು ಹುಡುಕುವ ಹುಡುಗನ ಸಾಹಸ ನಿಜಕ್ಕೂ ಮೆಚ್ಚಬೇಕು.ಜೇನನ್ನು ಹುಡುಕಿ ಹುಡುಕಿ ಸಾಕಾಗಿ ಇನ್ನೇನು ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ತೊಡವೇ ಜೇನು ಕಾಣಿಸುತ್ತದೆ. ಹುಳುಗಳನ್ನು ಓಡಿಸಿ ಧೈರ್ಯ ಮಾಡಿ ಗೂಡಿನೊಳಗೆ ಕೈ ಹಾಕಿ ಜೇನು ತೆಗೆಯುವಾಗ ಜೇನು ಹುಳುಗಳಿಂದ ಕಚ್ಚಿಸಿಕೊಂಡರೂ ಸಂಭ್ರಮದಿಂದ ಜೇನನ್ನು ಮನೆಗೆ ತಂದು ಅಬ್ಬೆಯನ್ನು ಖುಷಿಗೊಳಿಸಿದ. ಅಷ್ಟರಲ್ಲಿ ಅವನ ಮುಖ ಹನುಮಂತನ ಮುಖದ ಹಾಗೆ ಉಬ್ಬಿತ್ತು ನೋಡಿದವರೆಲ್ಲ ಏನಾಯ್ತು ಎಂದು ಕೇಳಿದಾಗ ನೋವಿನಲ್ಲೂ ತಾನು ಜೇನು ಬಿಡಿಸಿದೆ ಎಂದು ಹೆಮ್ಮೆಯಿಂದ ಹೇಳಿದ ಆ ಬಾಲ್ಯದ ನೆನಪು ಜೇನಿನಷ್ಟೇ ಸವಿಯಾಗಿ ಜೀವನದಲ್ಲಿ ಉಳಿಯುತ್ತದೆ.

ಶಾಲೆಗೆ ರಜೆ ಇದ್ದಾಗ ಬೇರೆಯವರ ಹೊಲದಲ್ಲಿ ಕೂಲಿ ಮಾಡಿ ಬಂದ ಹಣದಿಂದ ತಮ್ಮ ಓದು ಬರಹಕ್ಕೆ ಬೇಕಾಗುವ ಸಾಮಗ್ರಿಗಳನ್ನು ಹೊಂದಿಸಿಕೊಳ್ಳುವ ಹಳ್ಳಿಗಾಡಿನ ಮಕ್ಕಳನ್ನು ನಾವು ನೋಡಿದ್ದೇವೆ. ಬೇರೆಯವರ ಮನೆಯಲ್ಲಿದ್ದು ಶಾಲೆ ಕಲಿಯುವ ಇಂತಹ ಹುಡುಗನಿಗೆ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್, ಬಟ್ಟೆ ತೊಳೆಯುವ ಸೋಪು ಎಲ್ಲ ಬೇಕಾಗುತ್ತದೆ ಇದಕ್ಕಾಗಿ ಹಣ ಕೇಳಿ ಅಪ್ಪನ ಹತ್ತಿರ ಹಠ ಮಾಡುವುದಕ್ಕಿಂತ ಮಾವ ಹೇಳಿದ ಹಾಗೆ ಗೇರುಬೀಜ ಸಂಗ್ರಹಿಸಿದರೆ ಮಾವ ಹಣ ಕೊಡುತ್ತಾನೆ ಹೀಗೆ ತಾನೇ ದುಡ್ಡು ಮಾಡಿದರೆ ಅವ್ವನೂ ಖುಷಿ ಪಡುತ್ತಾಳೆ ಎಂದು ಆಲೋಚಿಸಿ ರಜೆ ದಿನಗಳಲ್ಲಿ ಗೇರು ಹಣ್ಣಿನ ಗಿಡದಿಂದ ಹಣ್ಣು ಬೀಳಿಸಿ ಬೀಜವನ್ನು ತೆಗೆದು ಸಂಗ್ರಹಿಸುವ ಕೆಲಸಕ್ಕೆ ಹೋಗುತ್ತಾನೆ. ಈ ಕೆಲಸ ಸುಲಭವಾದದ್ದಲ್ಲ. ಮರ ಹತ್ತಿ ಹಣ್ಣು ಇರುವ ಕೊಂಬೆಯನ್ನ ಜಗ್ಗುತ್ತಿದ್ದಾಗ ಜರ್ರ ನೇ ಜಾರಿ ದೊಪ್ಪೆಂದು ಕೆಳಗೆ ಬಿದ್ದ. ಬಲವಾದ ಪೆಟ್ಟಾಯಿತು. ಕಣ್ಣಲ್ಲಿ ನೀರು ಇಳಿಯತೊಡಗಿತು. ಎದ್ದು ನಿಂತ ನಡೆಯಲಾಗದಷ್ಟು ಬೆನ್ನು ನೋವಾಗಿತ್ತು. ಆದರೂ ನೋವಿನಲ್ಲಿ ಗೇರು ಬೀಜಗಳನ್ನೆಲ್ಲ ಸಂಗ್ರಹಿಸಿಕೊಂಡು ಮನೆಗೆ ತಂದ. ಯಾರ ಮುಂದೆಯೂ ಹೇಳಲು ಮನಸಾಗಲಿಲ್ಲ ಅವ್ವನ ನೆನಪಾಯ್ತು. ಯಾರಿಗೂ ಕಾಣದಂತೆ ಕತ್ತಲೆ ಕೋಣೆಯಲ್ಲಿ ಹೋಗಿ ಕುಳಿತು ಅತ್ತು ಸಮಾಧಾನ ಮಾಡಿಕೊಂಡು ಹೊರಗೆ ಬರುತ್ತಾನೆ. ಈ ಸನ್ನಿವೇಶ ನಿಜವಾಗಲೂ ಕರುಳು ಚುರ್ ಎನಿಸಿಬಿಡುತ್ತದೆ. 'ಸುಮಾರು ಬೀಜ ಒಟ್ಟು ಮಾಡಿದ್ದೀಯ' ಎಂದು ಹೇಳಿ ಮಾವ ನಗತ್ತಿದ್ದರೆ ಈ ಹುಡುಗ ತಾನು ಬಿದ್ದ ನೋವನ್ನ ಮರೆತು ಸಪ್ಪೆ ಮುಖದಲ್ಲಿ ನಗುವನ್ನು ತಂದುಕೊಂಡ.

ಮಾವಿನ ಹಣ್ಣಿನೊಂದಿಗೆ ಈ ಲಹರಿಯಲ್ಲಿ ಲೇಖಕರು ಹಲವಾರು ವಿಧದ ಮಾವಿನ ಹಣ್ಣಿನ ಪರಿಚಯವನ್ನು ಮಾಡಿದ್ದಾರೆ. ರಾತ್ರಿ ಗಾಳಿ ಬೀಸಿ ಮಳೆ ಬಂದಿದ್ದರೆ ಮಾವಿನ ಮರದಡಿ ಹಣ್ಣುಗಳು ರಾಶಿ ರಾಶಿ ಬಿದ್ದಿರುತ್ತವೆ ಎಂದು ಮಕ್ಕಳಿಗೆ ಗೊತ್ತು ಅಂತಹ ರಾತ್ರಿಗಳಲ್ಲಿ ನಾಳೆ ಬೆಳಗ್ಗೆ ಬೇಗನೆ ಎದ್ದು ಮಾವಿನ ಹಣ್ಣು ತರಬೇಕು ಎನ್ನುತ್ತಾ ಮಲಗುತ್ತಿದ್ದರು. ಮಕ್ಕಳೆಲ್ಲಾ ಬೆಳಗಾದರೂ ಏಳದೆ ಗೊರಕೆ ಹೊಡೆದು ನಿದ್ರಿಸುತ್ತಿದ್ದರು. ರಾತ್ರಿ ಮಕ್ಕಳ ಮಾತು ಕೇಳಿಸಿಕೊಂಡ ಅಜ್ಜಿ ಬೆಳಗಾಗುವುದರೊಳಗೆ ಎದ್ದು ಸಣ್ಣ ಸೀಮೆಎಣ್ಣೆ ಬುರುಡೆ ದೀಪ ತೆಗೆದುಕೊಂಡು ಮಾವಿನ ಮರದ ಅಡಿಗೆ ಹೋಗಿ ಮಾವಿನ ಹಣ್ಣುಗಳನ್ನು ಹೆಕ್ಕಿ ತರುತ್ತಿದ್ದಳು. ಅಜ್ಜಿ ಅಷ್ಟು ಮುದುಕಿಯಾದರೂ ಚಳಿಯಲ್ಲಿ ಎದ್ದು ಮಕ್ಕಳಿಗಾಗಿ ಹಣ್ಣು ತರುತ್ತಿದ್ದ ಇಂತಹ ಕಾರಣಗಳಿಂದ ಮಕ್ಕಳಿಗೆ ಅಜ್ಜಿಯ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತಿತ್ತು.

ಹೀಗೇ ಒಂದು ದಿನ ಮೂರು ನಾಲ್ಕು ಹುಡುಗರು ಹಳ್ಳದ ಮಾವಿನ ಮರದ ಹತ್ತಿರ ಹಣ್ಣು ಹುಡುಕಲು ಬಂದಿದ್ದರು. ತಿಮ್ಮ ಹಣ್ಣು ಹುಡಕಲು ಎಲ್ಲರಿಗಿಂತ ಚುರುಕು. ಆದರೆ ಆದಿನ ಎಲ್ಲರೂ ಸೇರಿ ಮಾತಾಡಿಕೊಂಡು ತಿಮ್ಮನಿಗೆ ಒಂದು ಹಣ್ಣೂ ಸಿಗದಂತೆ ಮಾಡಿದ್ದರು. ತಿಮ್ಮನಿಗೆ ಸಿಟ್ಟು ಬಂದಿತ್ತು.ಈ ಬಾರಿ ಗಾಳಿ ಬೀಸಿದ ಕೂಡಲೇ ಐದಾರು ಹಣ್ಣು ಉದುರಿದವು.ತಿಮ್ಮ ಎಲ್ಲರನ್ನೂ ಹಿಂದೆ ಹಾಕಿ ಓಡಿದ. ಕಲ್ಲು ಬಂಡೆಯನ್ನು ದಾಟಿ ಮುಂದೆ ಜಿಗಿದಿದ್ದ. ತಿಮ್ಮ ಸೀದಾ ಹಳ್ಳದಲ್ಲಿ ಬಿದ್ದ. ಒಮ್ಮೆಲೇ ಗುಳುಂ ಎಂಬ ಧ್ವನಿ ಕೇಳಿ ಎಲ್ಲರಿಗೂ ಹೆದರಿಕೆಯಾಯಿತು. ಇಳಿದು ಹಳ್ಳಕ್ಕೆ ಹೋಗಿ ನೋಡಿದರೆ ತಿಮ್ಮ ನಿಧಾನವಾಗಿ ಮೇಲೆ ಬರಲು ಪ್ರಯತ್ನಿಸುತ್ತಿದ್ದ. ಹುಡುಗರು ಅವನ ಕೈ ಹಿಡಿದು ನಡೆಸಿದರು. ಅವನ ಕಾಲಿಗೆ ಕಲ್ಲು ತಾಗಿ ರಕ್ತ ಬರುತ್ತಿತ್ತು. ಆಗ ತಿಮ್ಮ ಕೈಯಲ್ಲಿ ಹಿಡಿದುಕೊಂಡ ಹಣ್ಣುಗಳನ್ನು ಗೆಳೆಯರಿಗೆ ಕೊಡಲು ಮುಂದಾದ. ಆದರೂ ಗೆಳೆಯರಿಗೆ ನಂಬಲಾಗಲಿಲ್ಲ. ಮಕ್ಕಳ ಇಂಥ ಸಾಹಸದ ಪ್ರಸಂಗಗಳೂ ನಗುವನ್ನು ತರಿಸಿ ಬಾಲ್ಯವನ್ನು ಮತ್ತೆ ಮತ್ತೆ ಮರುಕಳಿಸುವಂತೆ ಮಾಡುತ್ತವೆ.

ಮಾವನ ಸೈಕಲ್ ಈ ಲಹರಿಯಲ್ಲಿ ಮಾವ ಮತ್ತು ಮಾವನ ಗೆಳೆಯರು ಸೈಕಲ್ ಓಡಿಸಿ ಅಭ್ಯಾಸ ಮಾಡಿ ಅದನ್ನು ಮೂಲೆಯಲ್ಲಿ ಇಟ್ಟು ಹೋಗಿರುತ್ತಾರೆ. ಈ ಪುಟ್ಟ ಹುಡುಗ ನಿಧಾನವಾಗಿ ಸೈಕಲ್ ದೂಡತೊಡಗಿದ. ಬಹಳ ಅಭ್ಯಾಸ ಮಾಡಿ ಮಾಡಿ ಪೆಡಲ್ ಮೇಲೆ ನಿಂತು ಮುಂದೆ ಹೋಗಲು ಕಲಿತ. ಯಾರಿಗೂ ಗೊತ್ತಾಗದಂತೆ ಸೈಕಲ್ ಹೊಡೆಯುತ್ತಿರುವಾಗ ಬಹಳ ಖುಷಿಯಲ್ಲಿದ್ದ. ಅರೆ ಹುಡುಗ ನೀನು ಸೈಕಲ್ ಯಾವಾಗ ಕಲಿತೆ.. ಅಜ್ಜಿಯ ಮಾತನ್ನು ಕೇಳಿ ಸೈಕಲ್ ತಂದು ಅದರ ಜಾಗದಲ್ಲಿ ಇಟ್ಟು ಬಂದ್ಬಿಟ್ಟ. ಯಾರಿಗೂ ಗೊತ್ತಿಲ್ಲದಂತೆ ಸೈಕಲ್ ಹೊಡೆಯಲು ಕಲಿತಿದ್ದೀಯ ಕಳ್ಳ ಹುಡುಗ ಅಂತ ಅಜ್ಜಿ ಹೇಳುತ್ತಿದ್ದಾಗ ಹುಡುಗನಿಗೆ ಭಯ ಆಯಿತು. ಮಾವನಿಗೆ ಗೊತ್ತಾದರೆ ಏನು ಮಾಡ್ತಾನೋ ಏನೋ ಎಂದು. ಸ್ವಲ್ಪ ಹೊತ್ತಿನಲ್ಲಿಯೇ ಮಾವ ಬಂದಾಗ ಅಜ್ಜಿ ತಡ ಮಾಡದೆ ಈ ಹುಡುಗ ಸೈಕಲ್ ಕಲಿತಿರುವ ವಿಷಯ ತಿಳಿಸಿದಳು. ಮಾವನಿಗೆ ಕೋಪ ಬರಲಿಲ್ಲ ಅಚ್ಚರಿಯಾಯಿತು. ಹೌದಾ ತೋರಿಸು ನೋಡೋಣ ಎಂದ. ಹುಡುಗನಿಗೆ ಖುಷಿಯಾಗಿ ಸೈಕಲ್ ಒಳ ಪೆಡಿಲ್ಲಿನಲ್ಲಿ ಓಡಿಸಿ ತೋರಿಸಿದ. ಇಷ್ಟು ಬಂದ ಮೇಲೆ ಸೀಟು ಬರುವುದೇನು ಆಗಾದಲ್ಲವೆಂದು ಹುಡುಗನನ್ನು ಸೀಟ್ ಮೇಲೆ ಹತ್ತಿಸಿದ ಹಿಂದಿನ ಕ್ಯಾರಿಯರ್ ಹಿಡಿದು ಪೆಡಲ್ ತಿರುಗಿಸಲು ಹೇಳುತ್ತಾ ದೂಡಿಬಿಟ್ಟ. ಬ್ರೇಕ್ ಹಿಡಿದು ನಿಲ್ಲಿಸಲು ಇವನಿಗೆ ಹೊಳೆಯಲಿಲ್ಲ ಅಂಗಳದ ಕೆಳಗಿನ ತೋಟಕ್ಕೆ ಹಾರಿದ ಸೈಕಲ್ ಅಡಿಕೆ ಮರಕ್ಕೆ ಡಿಕ್ಕಿ ಹೊಡೆದು ಬಿದ್ದುಬಿಟ್ಟಿತ್ತು ನೋವಿಲ್ಲದೆ ಸೈಕಲ್ ಕಲಿತಿದ್ದರೂ ಇದು ಮಾತ್ರ ನೆನಪಿನಲ್ಲಿ ಉಳಿಯುವ ನೋವಾಯಿತು.

ಹಳ್ಳಕ್ಕೆ ಬಂದ ಜಿಂಕೆ ಒಂದು ಸ್ವಾರಸ್ಯಕರವಾದ ಲಹರಿ ಪ್ರಬಂಧ ಜೊತೆಗೆ ಮಲೆನಾಡಿನ ಬಾಲಕರ ಪ್ರಾಣಿ ಪ್ರೀತಿಯು ಇಲ್ಲಿ ವ್ಯಕ್ತವಾಗಿದೆ. ರಜೆಯ ದಿನಗಳಲ್ಲಿ ಮಾವಿನಹಣ್ಣು ಹುಡುಕುತ್ತಾ ಹೋದ ಹುಡುಗರು ಮಧ್ಯಾಹ್ನದ ಬಿಸಿಲಿಗೆ ಹಳ್ಳದ ನೆನಪಾಗಿ ಹಳ್ಳಕ್ಕೆ ಜಿಗಿಯುತ್ತಾರೆ.ಅವರಿಗೆ ಅರಿವಿಲ್ಲದೆ ಒಂದು ಜಿಂಕೆ ಅಲ್ಲಿ ಬಂದು ನಿಂತದ್ದು ಅಚ್ಚರಿ ಮೂಡಿಸುತ್ತದೆ. ಅದನ್ನ ಅಟ್ಟಿಸಿಕೊಂಡು ಬಂದದ್ದು ಕಾಡು ನಾಯಿಗಳು ಎಂದು ಗೊತ್ತಾದಾಗ ಹುಡುಗರೆಲ್ಲ ಸೇರಿ ಕಲ್ಲು ಹೊಡೆದು ನಾಯಿಗಳನ್ನು ಓಡಿಸುತ್ತಾರೆ. ಜಿಂಕೆಯನ್ನು ಇನ್ನಷ್ಟು ನೋಡೋಣ ಎಂದು ತಿರುಗಿ ಬಂದರೆ ಜಿಂಕೆ ಹಳ್ಳದಾಟಿ ಕಾಡಿನ ಕಡೆಗೆ ಹೊರಟಿರುತ್ತದೆ. ಹುಡುಗರೆಲ್ಲ ಜಿಂಕೆ ಬದುಕಿತು ಎಂದು ಚಪ್ಪಾಳೆ ತಟ್ಟಿ ನಗುತ್ತಾರೆ. ಇಲ್ಲಿ ಇಡೀ ಪ್ರಬಂಧದ ವಿಶೇಷವೆಂದರೆ ಲೇಖಕರು ನೀಡುವ ಕಾಡಿನ ಚಿತ್ರಣ, ಆಗಾಗ ತೋಟಕ್ಕೆ ಬಂದು ಕಾಡುವ ಪ್ರಾಣಿಗಳನ್ನು ರೈತರು ಕೊಂದಾಗ ಅವರಿಗೆ ನೋವಾದದ್ದನ್ನು ಹೇಳುತ್ತಾರೆ. ಇಲ್ಲಿನ ಸಹಜ ವರ್ತನೆಗೆ ಒಂದು ಉದಾಹರಣೆ ಹುಡುಗರೆಲ್ಲ ನೀರಿಗೆ ಜಿಗಿದದ್ದು ಒಬ್ಬರ ಹಿಂದೆ ಒಬ್ಬರು ಮಾವಿನಹಣ್ಣು ಡುಬು ಡುಬು ಉದುರಿದ ಹಾಗೆ ಹಳ್ಳಕ್ಕೆ ಜಿಗಿದೆವು. ಇಂತಹ ವರ್ಣನೆಗಳು ಇಡೀ ಪ್ರಬಂಧ ಸಂಕಲನದ ತುಂಬಾ ದಂಡಿ ದಂಡಿಯಾಗಿ ಸಿಗುತ್ತವೆ.

 

MORE FEATURES

ನಿತ್ಯ ಬದುಕಿನ ವ್ಯವಹಾರದೊಂದಿಗಿನ ಕೌಟುಂಬಿಕ ಚಿತ್ರಣವನ್ನು ಇಲ್ಲಿ ಕಾಣಬಹುದು

18-05-2025 ಬೆಂಗಳೂರು

"ಕಂಪನಿ ಸರಕಾರ ಈ ನರಗುಂದ ದಂಗೆಯನ್ನು ಎಷ್ಟು ನಿರ್ದಯವಾಗಿ ಹೊಸಕಿ ಹಾಕಿತು ಎನ್ನುವುದರ ಬರ್ಬರ ಹಿಂಸೆಯ ಚಿತ್ರಣವಿದೆ...

ಸಾಂಪ್ರದಾಯಿಕ ಕುಟುಂಬದ ಕಟ್ಟುಪಾಡುಗಳ ನಡುವೆ ತನ್ನದೇ ಬಂಡಾಯ ಹೂಡುವ ಹೆಣ್ಣಿನ ಕತೆಯಿದು

18-05-2025 ಬೆಂಗಳೂರು

"'ಎಲ್ಲೆಗಳ ದಾಟಿದವಳು' ಯಶಸ್ವಿಯಾದ ಕತೆಯಾಗಿದೆ. ಕತೆಯ ಪ್ರವೇಶದ ಭಾಗವು ಅಜ್ಜಿ ಮತ್ತು ಮೊಮ್ಮಗಳ ಪ್ರೀತಿ ...

ಚೆನ್ನಿಗನ ಪಾತ್ರವು ಭೈರಪ್ಪನವರ ‌ತಂದೆಯನ್ನು ಹೋಲುತ್ತದೆ‌

17-05-2025 ಬೆಂಗಳೂರು

“ಈ ಕಾದಂಬರಿ ನಿಮ್ಮನ್ನು ನಾಗಾಲೋಟ‌ ಓಡಿಸಿಕೊಂಡು ಹೋಗದಿರಬಹುದು. ಆದರೆ ಜೀವನವನ್ನು ನಿರ್ವಿಕಾರ ದೃಷ್ಟಿಯಿಂದ...