ಮಕ್ಕಳನ್ನು ಕ್ರಮವಾಗಿ ರೂಪಿಸಬೇಕಾದ ಜವಾಬ್ದಾರಿಯನ್ನು ನೆನಪಿಸುವ ನಾಟಕ 'ಚಿಟ್ಟೆ' : ಬೇಲೂರು ರಘುನಂದನ್


“ಚಿಟ್ಟೆ ಹತ್ತು ವರ್ಷದ ಬಾಲಕನೊಬ್ಬ ಒಂದು ಗಂಟೆ ರಂಗದಲ್ಲಿ ಬಣ್ಣಗಳೊಡನೆ, ಹಾಡು ಕುಣಿತಗಳೊಂದಿಗೆ, ಎಲ್ಲಕ್ಕೂ ಮಿಗಿಲಾಗಿ ಮುಗ್ಧ ಮನಸ್ಸಿನೊಂದಿಗೆ ಒಬ್ಬನೇ ಅಭಿನಯಿಸುವ ಏಕವ್ಯಕ್ತಿ ರಂಗಪ್ರಯೋಗ, 'ಚಿಟ್ಟೆ'ಯ ಅಭಿವ್ಯಕ್ತಿಯನ್ನು 'ಸಹೃದಯ' ಪ್ರಪಂಚ ಮುತ್ತಿಟ್ಟು ಮುದ್ದಾಡುವ, ಬಣ್ಣಗಳನ್ನು ಬಣ್ಣಗಳಾಗಿಯೇ ನೋಡುವ, ಮೈದಡವಿ ಮಾತಾಡಿಸುವುದಷ್ಟೇ ಬಾಕಿಯಿದೆ. ಇದು ಎಲ್ಲರ ಬಾಲ್ಯವನ್ನು ಒಂದಿಲ್ಲೊಂದು ರೀತಿಯಲ್ಲಿ ಅನಾವರಣ ಮಾಡುವ ಕಥಾಹಂದರ,” ಎನ್ನುತ್ತಾರೆ ಲೇಖಕ ಬೇಲೂರು ರಘುನಂದನ್. ಅವರು ತಮ್ಮ ಚಿಟ್ಟೆ’ ಏಕವ್ಯಕ್ತಿ ಮಕ್ಕಳ ನಾಟಕ ಕೃತಿಗೆ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ...

ಮಕ್ಕಳಿಗಾಗಿ ಬರೆಯದ, ಓದದ, ಸಮಯ ಕೊಡದೇ ಇದ್ದರ ಅಪೂರ್ಣವೆಂಬ ಭಾವನೆ ಸದಾ ಕಾಡುತ್ತದೆ. ಅಂದರೆ ಪೂರ್ಣನಾಗಬೇಕೆಂದು ಮಕ್ಕಳ ಸಾಹಿತ್ಯ ಬರೆಯಬೇಕೆಂದೇನೂ ಅಲ್ಲ. ಮಕ್ಕಳು ಪ್ರಕೃತಿಯ ನಡುವಿಂದ ಎದ್ದು ಬಂದ ಸದ್ದು, ಕಾಣುವ ಬಣ್ಣ, ಸ್ಪರ್ಶಕ್ಕೆ ಬರುವ ಅನುಭವ ಎಲ್ಲವುಗಳನ್ನು ಅಭಿವೃದ್ಧಿ, ಜಾಗತೀಕತೆ ಮತ್ತು ಮಾರುಕಟ್ಟೆ ಎಂಬ ಇತ್ಯಾದಿ ಅಂಶಗಳು ತನ್ನೊಳಗೆ ಸೇರಿಸಿಕೊಂಡು ಬಿಟ್ಟಿದೆ. ಈ ನಡುವೆ ಮಕ್ಕಳಿಗಾಗಿ ಓದುವ, ಬರೆಯುವ ಮತ್ತು ಪ್ರತಿಕ್ರಿಯಿಸುವ ಅಂಶ ನನಗೆ ಸವಾಲೆಂದೇ ತೋರುತ್ತದೆ. ಈ ದೃಷ್ಟಿಯಲ್ಲಿ ಅನಿವಾರ್ಯಕ್ಕಾದರೂ ಅಗತ್ಯವಾಗಿ ಮಕ್ಕಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮನೋಧರ್ಮವನ್ನು ಕುರಿತು ಬರೆಯಲೇಬೇಕಿದೆ. ಹೀಗೆ ಮಕ್ಕಳಿಗಾಗಿ ಬರೆಯುವ ಹಾದಿಯಲ್ಲಿ ಹಾರುವ ಆನೆ, ನಿಸರ್ಗ ಮತ್ತು ಗುಬ್ಬಚ್ಚಿ, ಚಿನ್ನಾರಿಯ ಚಿತ್ರ ಸೇರಿದಂತೆ ಚಿಟ್ಟೆ ಎನ್ನುವ ಏಕವ್ಯಕ್ತಿ ನಾಟಕದ ತನಕ ಸರದಿ ಸಾಗಿ ಬಂದಿದೆ.

ಪಾಪಣ್ಣಿಯ ಬೆರಗಿನ ಕಣ್ಣುಗಳಲ್ಲಿ ಜಗತ್ತನ್ನು ನೋಡುವ ಮತ್ತು ಆ ಜಗತ್ತಿನಲ್ಲಿ ಪ್ರೀತಿಯನ್ನು ಹುಡುಕುವ ಮಗುವಿನ ಮನಸಿನ ಕಥನವಿದು. ಕೆರೆ, ಚಿಟ್ಟೆ, ಹೂವು, ಶಾಲೆ, ಮನೆ, ಅಪ್ಪ, ಅಮ್ಮ ಹಾಗೂ ಸಕಲವನ್ನೂ ಒಳಗೊಂಡ ಸಮಾಜ ಪಾಪಣ್ಣಿಯನ್ನು ಒಳಗೊಳ್ಳಬೇಕಾದ ಬಗೆ ಯಾವುದು? ಎಂಬ ವಿವೇಕದ ಅನಾವರಣವೇ ನಾಟಕ. ಮಗುವನ್ನು, ಮಗುವಿನ ಮನಸ್ಸುನ್ನು ಮಗುವಾಗಿಯೇ ನೋಡಲಾಗದ ಅಸಾಮರ್ಥ್ಯ ಸ್ಥಿತಿ ಖಂಡಿತವಾಗಿಯೂ ನಾಟಕವನ್ನು ನೋಡುವ ಪ್ರತಿಯೊಬ್ಬರನ್ನೂ ಕಾಡುತ್ತದೆ. ಪ್ರೀತಿಯ ಹಾಗೂ ಹಸಿವಿನ ಹಂಬಲ ಒಟ್ಟು ನಾಟಕದ ಮೂಲಭಿತ್ತಿಯಾಗಿ ಪ್ರಕೃತಿ ಹೇಗೆ ಮಕ್ಕಳ ಅನೇಕ ಅಭದ್ರತೆಗಳಿಗೆ ಸಾಂತ್ವನ ನೀಡುತ್ತದೆ ಎಂಬುದಕ್ಕೆ ನಾಟಕದ ಮೂಲಕ ಅವರವರ ನೆಲೆಯಲ್ಲಿ ಉತ್ತರ ಕಂಡು ಕೊಳ್ಳಬಹುದು.

'ಚಿಟ್ಟೆ' ಕೇವಲ ಮಕ್ಕಳ ನಾಟಕವಲ್ಲ, ಮಕ್ಕಳನ್ನು ಸಾಕಿ, ಸಲಹಿ ಮತ್ತು ರೂಪಿಸಬೇಕಾದ ಎಲ್ಲರದ್ದೂ ಎಂಬ ಜವಾಬ್ದಾರಿಯನ್ನು ನೆನಪಿಸುವ ನಾಟಕ. ಈ ನಾಟಕದ ಮೂಲಕ ಮರೆತ ಜವಾಬ್ದಾರಿಗಳು ನೆನಪಾಗುತ್ತವೆ. ಮಕ್ಕಳ ಮನೋಲೋಕವನ್ನು ಹಾಳುಗೆಡವುತ್ತಿರುವ ಪಾಪ ಪ್ರಜ್ಞೆ ಕಾಡುತ್ತದೆ. ಮಕ್ಕಳನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದರೆ ಮಗುವಿನ ಮನಸ್ಸು ನಲುಗಿ ಹೋಗುತ್ತದೆ ಎಂಬ ಎಚ್ಚರ ಅಲುಗಾಡಿಸುತ್ತಿದೆ. ಕುಟುಂಬ, ಶಾಲೆ ಮತ್ತು ಸಮಾಜ ಹೇಳಿರುವ ಶಿಕ್ಷಣವೆನ್ನುವ ವ್ಯಾಖ್ಯಾನಕ್ಕೂ ಮಕ್ಕಳ ಮನದಲ್ಲಿ ಅಡಗಿರುವ ವಿವೇಕಕ್ಕೂ ಇರುವ ಭಿನ್ನತೆಗಳನ್ನು ನಾಟಕದಲ್ಲಿ ಕಾಣಬಹುದಾಗಿದೆ. ಮಗುವಿನ ಮನಸು, ಸಮಾಜದ ಸ್ವಾಸ್ಥ್ಯ ಎಂಬ ಸತ್ಯವನ್ನು ನಾಟಕ ಹೇಳುವ ಪ್ರಯತ್ನ ಮಾಡಿದೆ. ಮಕ್ಕಳ ನಿರೀಕ್ಷೆ ಹಂಬಲಗಳು ಒಂದು ಕಡೆಯಾದರೆ ಮನೆ, ಸಮಾಜ, ವ್ಯವಸ್ಥೆಯು ಮಕ್ಕಳ ಅಂತರಂಗವನ್ನು ಘಾಸಿಗೊಳಿಸಿ ಕದಡುತ್ತಿರುವ ಅನೇಕ ಆಯಾಮಗಳನ್ನು ನಾಟಕ ತನ್ನ ಕಥಾಹಂದರದಲ್ಲಿ ಹಿಡಿದಿಟ್ಟುಕೊಂಡಿದೆ. ಚಿಟ್ಟೆಯ ಮೂಲಕ ಅನೇಕಾನೇಕ ಬಣ್ಣ ಬಣ್ಣದ ಭರವಸೆಗಳು ನಾಟಕದ ಇಡೀ ಕಥನದಲ್ಲಿ ಹರಡಿಕೊಳ್ಳುತ್ತವೆ.

'ಚಿಟ್ಟೆ' ಹತ್ತು ವರ್ಷದ ಬಾಲಕನೊಬ್ಬ ಒಂದು ಗಂಟೆ ರಂಗದಲ್ಲಿ ಬಣ್ಣಗಳೊಡನೆ, ಹಾಡು ಕುಣಿತಗಳೊಂದಿಗೆ, ಎಲ್ಲಕ್ಕೂ ಮಿಗಿಲಾಗಿ ಮುಗ್ಧ ಮನಸಿನೊಂದಿಗೆ ಒಬ್ಬನೇ ಅಭಿನಯಿಸುವ ಏಕವ್ಯಕ್ತಿ ರಂಗಪ್ರಯೋಗ, 'ಚಿಟ್ಟೆ'ಯ ಅಭಿವ್ಯಕ್ತಿಯನ್ನು ಸಹೃದಯ ಪ್ರಪಂಚ ಮುತ್ತಿಟ್ಟು ಮುದ್ದಾಡುವ, ಬಣ್ಣಗಳನ್ನು ಬಣ್ಣಗಳಾಗಿಯೇ ನೋಡುವ, ಮೈದಡವಿ ಮಾತಾಡಿಸುವುದಷ್ಟೇ ಬಾಕಿಯಿದೆ. ಇದು ಎಲ್ಲರ ಬಾಲ್ಯವನ್ನು ಒಂದಿಲ್ಲೊಂದು ರೀತಿಯಲ್ಲಿ ಅನಾವರಣ ಮಾಡುವ ಕಥಾಹಂದರ.

ಸಹೃದಯನಲ್ಲಿದ್ದ ಅಂತಃಕರಣ ಬಹುವಾಗಿ ನನ್ನನ್ನು ಕಾಡತೊಡಗಿತು. ಒಬ್ಬ ಕಲಾವಿದನಿಗೆ ಲೋಕದೃಷ್ಟಿ ದೊರಕುತ್ತಾ ಹೋದಂತೆ ವಾತ್ಸಲ್ಯ ಮತ್ತು ಅಂತಃಕರಣಗಳು ಮಡುಗಟ್ಟುತ್ತಾ ಹೋಗುತ್ತದೆ ಎಂಬ ಸತ್ಯವನ್ನೇ ಪುಟ್ಟ ಪೋರ ಸಹೃದಯ ಅರ್ಥ ಮಾಡಿಸಿದ್ದ. ಇದೇ ಬಗೆಯ ಹಲವು ಬಿಡಿ ದೃಷ್ಟಾಂತಗಳನ್ನು ನಾನು ನನ್ನ ಪ್ರವಾಸ ಕಥನವಾದ ಜೀವನ್ಮುಖಿ ತೀಸ್ತದಲ್ಲಿ ಬರೆದಿದ್ದೇನೆ.ಸಹೃದಯ ಕಟ್ಟಿಕೊಟ್ಟ ಈ ಬಗೆಯ ಅನೇಕ ಬಿಡಿಬಿಡಿ ಕಥನಗಳು ಅವನಲ್ಲಿದ್ದ ಕಲಾವಿದನನ್ನೆ ನನಗೆ ಕಾಣಿಸುವಂತೆ ಮಾಡುತ್ತಿತ್ತು. ಹಾಗಾಗಿ ಚಿಟ್ಟೆ ಎನ್ನುವ ಏಕವ್ಯಕ್ತಿ ನಾಟಕವನ್ನು ಸಹೃದಯನಿಗಾಗಿಯೇ ಬರೆದೆ. ಅವನು 'ನಾಟಕ ಇರುವುದು ತನಗಾಗಿಯೇ' ಎಂದು ಅನುಭವಿಸಿದ, ಅಭಿನಯಿಸಿದ. ಒಂದರಿಂದ 50ನೇ ಪ್ರಯೋಗದ ತನಕ ಹೆಜ್ಜೆ ಇಟ್ಟ, ಈ ಚಲನೆಯ ಹಾದಿಯಲ್ಲಿ ತನ್ನ ನಾಲ್ಕನೇ ವಯಸ್ಸಿನಲ್ಲಿ ಸಹೃದಯ ಮೊದಲು ವಿಜಯನಗರದ ಬಿಂಬದಲ್ಲಿ ಕಾಗೆ ಪಾತ್ರವೊಂದಕ್ಕೆ ಬಣ್ಣ ಹಚ್ಚಿ 'ಕಾಕ' ಎಂದು ಸಂಭಾಷಣೆ ಇಲ್ಲದ ಪಾತ್ರವನ್ನು ಕೊಕ್ಕನ್ನು ಮುಂದು ಮಾಡಿಕೊಂಡು ಮುದ್ದು ಮುದ್ದಾಗಿ ಅಭಿನಯಿಸಿದ.

ಆ ಪುಟ್ಟ ಮಗುವಿನಲ್ಲಿ ಕಂಡ ಅಪ್ರತಿಮ ಕಲಾವಿದನ ಪೋಷಣೆ ಮಾಡುವುದು ತಂದೆ ತಾಯಿಗಳಾದ ನಮ್ಮ ಜವಾಬ್ದಾರಿ ಎಂದು ನಾನು ನನ್ನ ಮಡದಿ ತೀರ್ಮಾನಿಸಿದೆವು. ಅಂದಿನಿಂದ ಇಂದಿನವರೆಗೂ ಹಲವು ನಾಟಕಗಳಲ್ಲಿ ಅಭಿನಯಿಸಿ, ಚಿಟ್ಟೆ ಎಂಬ ಏಕವ್ಯಕ್ತಿ ನಾಟಕದಲ್ಲಿ ತನ್ನ ಅಭಿನಯ ಕೌಶಲ್ಯವನ್ನು ಮತ್ತೆ ಮತ್ತೆ ಸಹೃದಯರ ಎದುರ ಸಾಬೀತು ಪಡಿಸಿದ. ಈ ಪುಟ್ಟ ಮಗುವಿನೊಳಗೆ ಅದೆಷ್ಟು ದೊಡ್ಡ ಕಲ್ಪನಾ ಜಗತ್ತಿದೆ, ಅನುಭವಕ್ಕೆ ಮೀರಿದ ಅನುಭಾವದ ಲೋಕವಿದೆ, ದೇಹ ಭಾಷೆಗೊಂದು ಅರ್ಥವಿದೆ, ಮಾತಿಗೆ ಸ್ಪಷ್ಟತೆಯಿದೆ. ಒಟ್ಟು ಪಾಪಣ್ಣಿ ಪಾತ್ರದ ಮೂಲಕ ಸಹೃದಯ ಮುಗ್ಧತೆಯೊಳಗೆ ಪ್ರಬುದ್ಧತೆಯನ್ನು ತೋರುತ್ತಲೇ ಒಬ್ಬ ಕಲಾವಿದನಾಗಿ ಉಳಿಯುವ ಸೂಚನೆ ಇದೆ ಎಂಬುದನ್ನು ಇಡೀ ಕುಟುಂಬ ಕಂಡುಕೊಂಡಿದೆ. ಇದೀಗ ಸಹೃದಯ ನಮ್ಮ ಮನೆ ಮಗ ಮಾತ್ರವಲ್ಲ, ರಂಗಭೂಮಿ ಎನ್ನುವ ತಾಯಿಯ ವಿಶಾಲವಾದ ಮಡಿಲಿನಲ್ಲಿ ಆಡುವ ಕೂಸು. ರಂಗಭೂಮಿಯಲ್ಲಿ ದುಡಿಯುವ ಅನೇಕರ ಮುದ್ದು ಕಲಾವಿದ. ಮತ್ತೊಂದು ಮಾತು, ಚಿಟ್ಟೆ ನನ್ನ ವೈಯಕ್ತಿಕ ಬದುಕಿನ ಪ್ರತಿಫಲನ ಕೂಡ.

ಚಿಟ್ಟೆ ನಾಟಕವನ್ನು ವಿನ್ಯಾಸ ಮಾಡಿ ನಿರ್ದೇಶಿಸಿದ ಕೃಷ್ಣಮೂರ್ತಿ ಕವತ್ತಾರ್ ರವರಿಗೆ, ಹಿನ್ನೆಲೆ ಗಾಯಕರಾದ ಜನಪದ ಗಾಯಕಿ ಸವಿತಕ್ಕ, ಬಸಂತ್.ಜಿ.ಪ್ರಸಾದ್ ಮತ್ತು ಪವನ್ ಕುಮಾರ್ ರವರಿಗೆ, ಧ್ವನಿಮುದ್ರಿತ ಸಂಗೀತ ಮಾಡಿದ ಸರ್ವೇಶ್ ಅವರಿಗೆ ಮತ್ತು ಅದರ ನಿರ್ವಹಣೆ ಹೊತ್ತ ಕೌಶಿಕ್ ಭಾಗ್ಯ ರವರಿಗೆ, ಬೆಳಕು ವಿನ್ಯಾಸ ಮಾಡಿದ ಮಂಜುನಾರಾಯಣ್ ಮತ್ತು ರವಿಶಂಕರ್ ಬೆಳಕು ಅವರಿಗೆ ತಂಡದ ಒಟ್ಟು ನಿರ್ವಹಣೆಯನ್ನು ಪ್ರೀತಿ ಮತ್ತು ಜವಾಬ್ದಾರಿಯುತವಾಗಿ ನಿರ್ವಹಿಸಿದ ತನುಜ್ ಆರಾಧ್ಯ ಅವರಿಗೆ ಹಾಗೂ ನಾಟಕದ ನೇಪಥ್ಯದಲ್ಲಿ ರಂಗ ಬದ್ಧತೆಯಿಂದ ದುಡಿದ ನನ್ನ ವಿದ್ಯಾರ್ಥಿ ಮಿತ್ರರಾದ ಪುನೀತ ವಾಣಿ, ಭೂಮಿಕ ಗುಡೇನಕಟ್ಟಿ, ಹರ್ಷವರ್ಧನ ಚಂದ್ರಶಂಕರಿ ಮತ್ತು ಶ್ರೀನಿ ಸಂಪತ್ ಲಕ್ಷ್ಮಿ ಹಾಗೂ ಕಾಜಾಣ ತಂಡದ ಸದಸ್ಯರುಗಳಿಗೆ, ಮೊದಲ ಪ್ರಯೋಗದಿಂದ ಶುರುವಾಗಿ ಇಂದಿನ ಐವತ್ತರ ರಂಗ ಸಂಭ್ರಮದವರೆಗೂ ಪ್ರಯೋಗಕ್ಕೆ ಸಹಕಾರ ನೀಡಿದ ಎಲ್ಲ ರಂಗ ತಂಡಗಳ ರೂವಾರಿಗಳಿಗೆ ಸಾವಿರದ ಶರಣು.

- ಬೇಲೂರು ರಘುನಂದನ್

ಬೇಲೂರು ರಘುನಂದನ್ ಅವರ ಲೇಖಕರ ಪರಿಚಯವನ್ನು ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

MORE FEATURES

ನಿವೃತ್ತರಾದಮೇಲೂ ಅದೇ ಕಾರ್ಯಗಳಲ್ಲಿ ನಿರತರಾಗಿದ್ದಾರೆ

10-03-2025 ಬೆಂಗಳೂರು

"ಎರಡನೆಯವರು ಅನ್ವಯಿಕ ಮನೋವಿಜ್ಞಾನದ ಪ್ರವರ್ತಕರು. ಇವೆರಡು ಮನೋವಿಜ್ಞಾನದ ಎರಡು ಕಣ್ಣುಗಳಿದ್ದಂತೆ. ಪ್ರಸ್ತುತ ಗ್ರ...

ಹುಲಿ ಪತ್ರಿಕೆ ಒಂದು ಪತ್ರಿಕೆಯ ಸುತ್ತ ಸುತ್ತುವ ಪತ್ತೆದಾರಿ ದಾಟಿಯಲ್ಲಿರುವ ಕಾದಂಬರಿ

10-03-2025 ಬೆಂಗಳೂರು

“ಈ ರೀತಿಯ ಪ್ರಯೋಗ ಕನ್ನಡ ಸಾಹಿತ್ಯದಲ್ಲಿ ಅತೀ ವಿರಳವಾಗಿರುವಾಗ ಈ ಪ್ರಯೋಗಕ್ಕೆ ಒಂದು ಚಪ್ಪಾಳೆ ಕೊಡಲೇಬೇಕು,&rdq...

ಮೊದಲ ಪುಟದಿಂದಲೇ ಕುತೂಹಲದಿಂದ ಸಾಗುವ ಕಥೆ

10-03-2025 ಬೆಂಗಳೂರು

“ಪ್ರಣೀತ್, ಪ್ರತೀಕ್ಷಾ ದಕ್ಷ ಆಡಳಿತ ಸೇವೆ, ಜಯ ಚಂದ್ರ ಸಾಗರ್ ಕುಟುಂಬ ಪರಿಚಯ, ರಾಜಕೀಯ ಹಿನ್ನಲೆ, ಮುಂತಾದ ವಿಷಯಗ...