ಕುವೆಂಪು ಅವರನ್ನ ಬಿಟ್ಟರೆ ಅಷ್ಟೊಂದು ನಿಕಟವಾಗಿ ಕೃತಿಯನ್ನು ಓದುವವರು ಅನುವಾದಕರೇ; ನಾರಾಯಣ

Date: 20-10-2024

Location: ಬೆಂಗಳೂರು


ಬೆಂಗಳೂರು: ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ(ರಿ)ದಿಂದ ಕುವೆಂಪು ಅವರ ‘ಹೆಸರಾಂತ ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಇಂಗ್ಲಿಷ್‌ ಅನುವಾದ ವನಮಾಲಾ ವಿಶ್ವನಾಥ ಅವರ 'Bride in the Hills' ಕೃತಿ ಲೋಕಾರ್ಪಣೆ ಕಾರ್ಯಕ್ರಮವು 2024 ಅ.19 ಶನಿವಾರದಂದು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ನಡೆಯಿತು.

ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ವಿಮರ್ಶಕ, ಭಾಷಾಶಾಸ್ತ್ರಜ್ಞ ಡಾ. ಕೆ.ವಿ. ನಾರಾಯಣ, "ನಿರಂತರವಾಗಿ ಕನ್ನಡ ಸಾಹಿತ್ಯದ ಬೇರೆ ಬೇರೆ ಪ್ರಕಾರದ ಮಜಲುಗಳ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿಕೊಟ್ಟು ಕನ್ನಡದ ಬಗೆಗೆ ಇಂಗ್ಲಿಷಿಗೆ ಒಂದು ಅಧಿಕೃತ ಧ್ವನಿಯಾಗಿದ್ದಾರೆ. ಇನ್ನು ಇಂತಹ ಅನುವಾದ ಕೃತಿಗಳ ಓದುಗರು ಯಾರು ಅನ್ನುವ ಪ್ರಶ್ನೆ ಮೂಡುತ್ತದೆ. ನನ್ನ ಬಳಿ ಇದಕ್ಕೆ ಇರುವಂತಹ ಉತ್ತರ ನನ್ನಂತವರು ಇಂತಹ ಕೃತಿಗಳಿಗೆ ಓದುಗರಾಗಲು ಸಾಧ್ಯವಿಲ್ಲ ಎಂಬುವುದು. ಕಾರಣ ಇಂಗ್ಲಿಷ್ ಕೃತಿಯನ್ನು ಓದುತ್ತಾ ಹೋದ ಹಾಗೆ ನನ್ನಲ್ಲಿರುವ ಕನ್ನಡ ಆವೃತಿ, 50 ವರ್ಷಗಳಿಂದ ಓದಿಕೊಂಡು ಬಂದಿರುವುದರಿಂದ ನನ್ನಲ್ಲಿ ಕೃತಿಯಲ್ಲಿನ ಪ್ರತಿಯೊಂದು ಪುಟದ ನೆನಪು ಆವರಿಸುತ್ತದೆ. ಅದನ್ನು ಬಿಟ್ಟು ನನಗೆ ಇಂಗ್ಲಿಷ್ ಆವೃತಿಯನ್ನು ಓದಲು ಕಷ್ಟ. ಆದರಿಂದ ವೇಗ ಕಡಿಮೆಯಾಗಿ ಅನುಭವವು ಕೂಡ ಬೇರೆ ತರವೇ ಆಗುತ್ತದೆ. ಆದ್ದರಿಂದ ಈ ಕೃತಿಗೆ ಒಳ್ಳೆಯ ಹಾಗು ಸರಿಯಾದ ಓದುಗರು ಬೇಕು. ಕನ್ನಡವನ್ನು ಮಾತನಾಡಬಲ್ಲ, ಕನ್ನಡವನ್ನು ಓದಲು ಆಗದಂತಹ ಓದುಗರು ನಮ್ಮಲ್ಲಿದ್ದಾರೆ. ಹಾಗೆಯೇ ಭಾರತೀಯ ಭಾಷೆಗಳನ್ನು ಬಲ್ಲವರಾಗಿದ್ದು, ಕನ್ನಡದ ಕೃತಿಯನ್ನು ಓದುವಂತಹ ಅವಕಾಶವನ್ನು ಪಡೆಯದೇ ಇರುವಂತವರು ಈ ಕೃತಿಯನ್ನು ಓದಬಹುದು. ಅವರೇ ಇಂಗ್ಲಿಷ್ ಆವೃತಿ ಕೃತಿಯ ಮುಖ್ಯ ಓದುಗರು. ಅವರಲ್ಲಿ ಕನ್ನಡ ಸಾಹಿತ್ಯದ ಬಗೆ ಬಹಳಷ್ಟು ಆಸಕ್ತಿಯಿ, ಒಲವಿದೆ" ಎಂದು ತಿಳಿಸಿದರು.

"ಕುವೆಂಪು ಅವರನ್ನ ಬಿಟ್ಟರೆ ಈ ಕೃತಿಯನ್ನು ಅಷ್ಟೊಂದು ನಿಕಟವಾಗಿ ಕೃತಿಯನ್ನು ಓದುವವರು ಅನುವಾದಕರೇ. ಪ್ರತಿಯೊಂದು ಪದವನ್ನು ಕೂಡ ಅರ್ಥೈಸಿ ಓದಬೇಕು. ನಿಜಕ್ಕೂ ವನಮಾಲಾ ಅವರಿಗೆ ಇದೊಂದು ಸವಾಲಿನ ಕಾರ್ಯವಾಗಿತ್ತು ಎಂದು ತಿಳಿಸಿದರು.

ಕೃತಿ ಕುರಿತು ಮಾತನಾಡಿದ ವಿಮರ್ಶಕ ಡಾ. ಬಸವರಾಜ ಕಲ್ಗುಡಿ ಅವರು, "ಕುವೆಂಪು ಅವರ ಕಾದಂಬರಿ, ನಾಟಕಗಳಲ್ಲಿ ತಾತ್ವಿಕವಾದ ಸೂತ್ರವಿದೆ. ಅದೇ ಹೊಸ ಮನುಷ್ಯ ಉದ್ಗೋಷ. ಇದುವರೆಗೂ ಸಂಪ್ರದಾಯಿಕ ಚೌಕಟ್ಟಿನಲ್ಲಿದ್ದಂತಹ ಮನುಷ್ಯನ ವಿವರಣೆಗಳೇನಿದ್ದವು, ಮನುಷ್ಯನ ಜೀವನ ವಿಧಾನ ಏನಿತ್ತು, ಆ ಜೀವನ ವಿಧಾನ ಕಂದಾಚಾರ, ಕಟ್ಟುಪಾಡು, ವರ್ಣ ಸಮಾಜ ಇವುಗಳು ಕುವೆಂಪು ಅವರ ಅನುಭವಕ್ಕೂ ಬಂದಿತ್ತು. ಅದರ ವಿರುದ್ಧ ಕುವೆಂಪು ಅವರ ಹೊಸದರ್ಶನವನ್ನು ಕಟ್ಟಲು ಪ್ರಯತ್ನಪಟ್ಟರು. ಈಗಾಗಿ ಅವರ ಸಾಹಿತ್ಯದ ಸೌಂದರ್ಯ ಪ್ರಜ್ಞೆ ಇಲ್ಲಿದೆ ಎನ್ನುವ ಪ್ರಶ್ನೆ ಕೇಳಿದರೆ, ಸೌಂದರ್ಯವೇ ಅವರ ಸಾಹಿತ್ಯ ಸೌಂದರ್ಯದ ಪ್ರಜ್ಞೆಯಾಗಿತ್ತು ಎಂಬುವುದು ನನ್ನ ಉತ್ತರ. ಇವೆಲ್ಲವನ್ನೂ ಅವರ ಕೃತಿಗಳಲ್ಲಿ ಕಾಣಬಹುದು," ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ. ಬಿ.ಎಲ್‌. ಶಂಕರ್‌ ಅವರು ವಹಿಸಿದ್ದರು. ವೇದಿಕೆಯಲ್ಲಿ ಕುವೆಂಪು ಅವರ ಮಗಳು, ಲೇಖಕಿ ತಾರಿಣಿ ಚಿದಾನಂದ, ಇತಿಹಾಸ ತಜ್ಞ ಡಾ. ಪೃಥ್ವೀದತ್ತ ಚಂದ್ರಶೋಭಿ, ತೌಲನಿಕ ಅಧ್ಯಯನ ತಜ್ಞ ಡಾ. ಚಿತ್ರಾ ಪಣಿಕ್ಕರ್‌, ಅನುವಾದಕ ಡಾ. ವನಮಾಲಾ ವಿಶ್ವನಾಥ ಅವರು ವಹಿಸಿದ್ದರು.

ಕಾರ್ಯಕ್ರಮವನ್ನು ಬುಕ್ ಬ್ರಹ್ಮ ಯುಟ್ಯೂಬ್ ಚಾನೆಲ್ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ..

MORE NEWS

‘ಸಾಹಿತ್ಯ ಬಂಗಾರ ಪ್ರಶಸ್ತಿ’ ಗೆ ಕುಂ.ವಿ, ಸುಶೀಲಮ್ಮ, ಪ್ರತಿಭಾ ಆಯ್ಕೆ

22-10-2024 ಬೆಂಗಳೂರು

ಬೆಂಗಳೂರು: ಎಸ್. ಬಂಗಾರಪ್ಪ ವಿಚಾರ ವೇದಿಕೆಯಿಂದ ಕೊಡಮಾಡುವ 2024ನೇ ಸಾಲಿನ ’ಸೇವಾ ಬಂಗಾರ ಪ್ರಶಸ್ತಿ’ ಗೆ ...

ಆಮೂರ ಅವರು ಬರವಣಿಗೆಯ ಬದುಕನ್ನು ತಪಸ್ಸಿನಂತೆ ಸಾಗಿಸಿದರು; ರಾಘವೇಂದ್ರ

21-10-2024 ಬೆಂಗಳೂರು

ಧಾರವಾಡ: ಜಿ.ಬಿ. ಜೋಶಿ ಮೆಮೊರಿಯಲ್‌ ಟ್ರಸ್ಟ್‌ ಹಾಗೂ ಡಾ.ಜಿ.ಎಸ್ ಆಮೂರ ಜನ್ಮ ಶತಮಾನೋತ್ಸವ ಸಮಿತಿಯಿಂದ &lsq...

‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಸಮಾರಂಭ

21-10-2024 ಬೆಂಗಳೂರು

ಬೆಂಗಳೂರು: ಶ್ರೀಮಧ್ವ ಜಯಂತಿ ಅಂಗವಾಗಿ ವ್ಯಾಸ-ದಾಸ ಸಾಹಿತ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದ್ವನ್ಮಣಿಗಳಿಗೆ ...