Date: 08-11-2024
Location: ಬೆಂಗಳೂರು
ಬೆಂಗಳೂರು: ಕೊಂಕಣಿಯ ಗೌರವಾನ್ವಿತ ಪ್ರಮುಖ ಸಾಹಿತಿ ಮೀನಾ ಕಾಕೊಡಕಾರ ಅವರು 2024 ನಂ. 08 ಶುಕ್ರವಾರದಂದು ಅಗಲಿದ್ದಾರೆ.
ಅವರ ನಿಧನದ ಬಗ್ಗೆ ಲೇಖಕಿ ಗೀತಾ ಶೆಣೈ ಅವರು ಸಂತಾಪ ಸೂಚಿಸಿರುವ ಲೇಖನವಿದು..
ವೈಯಕ್ತಿಕವಾಗಿ ಅವರ ಅಗಲಿಕೆ ನನಗೆ ಬಹಳ ದುಃಖವನ್ನುಂಟು ಮಾಡಿದೆ. ಇದೇ ವರ್ಷ ಗೋವಾದಲ್ಲಿ ನಡೆದ ಸಾಹಿತ್ಯಕ ಕಾರ್ಯಕ್ರಮವೊಂದರಲ್ಲಿ ಅವರನ್ನು ಭೇಟಿಯಾಗಿದ್ದೆ. ಕೆಲವು ದಿನಗಳ ಹಿಂದೆ ಅವರು ಕರೆ ಮಾಡಿ ನನ್ನೊಂದಿಗೆ ಮಾತನಾಡಿದ್ದರು. ಅವರ ಸಮಗ್ರ ಸಾಹಿತ್ಯವನ್ನು (55 ಸಣ್ಣಕಥೆಗಳು ಮತ್ತು 1 ಕಾದಂಬರಿ) ಕನ್ನಡಕ್ಕೆ ಅನುವಾದಿಸಿದ ಅದೃಷ್ಟ ನನ್ನದು. ಕೇಂದ್ರ ಸಾಹಿತ್ಯ ಅಕಾದೆಮಿಯ ಪ್ರಶಸ್ತಿ ಪುರಸ್ಕೃತ ಅವರ ಕಥಾಸಂಕಲನದ (ಸಪನ ಫುಲಾಂ) ಕನ್ನಡ ಅನುವಾದಕ್ಕೆ (ಕನಸಿನ ಹೂಗಳು-ಪ್ರಕಟಣೆ ಕೇಂದ್ರ ಸಾಹಿತ್ಯ ಅಕಾದೆಮಿ) ನನಗೆ ಲೇಖಕಿಯರ ಸಂಘದ ದತ್ತಿ ಬಹುಮಾನ ದೊರೆತಿದೆ. ವಿಶ್ವ ಕೊಂಕಣಿ ಕೇಂದ್ರದ ವಿಮಲಾ ವಿ. ಪೈ ಪ್ರಶಸ್ತಿ ಪುರಸ್ಕೃತ ಕಾದಂಬರಿ ‘ವಾಸ್ತು’ ವನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದು ಅದನ್ನು ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನದವರು ಪ್ರಕಟಿಸಿದ್ದಾರೆ.
ಮೀನಾ ಕಾಕೊಡಕಾರರ ಸಾಹಿತ್ಯದ ವೈಶಿಷ್ಟ್ಯ- ವೈವಿಧ್ಯಪೂರ್ಣ ವಸ್ತುವಿನ ಆಯ್ಕೆ ಮತ್ತು ವೈಚಾರಿಕತೆಯ ಭಾರವಿಲ್ಲದೆ ಶೈಲಿ, ತಂತ್ರಗಳ ಗೋಜಿಗೆ ಹೋಗದೆ ಹೇಳಬೇಕಾಗಿರುವುದನ್ನು ನೇರವಾಗಿ ಹೇಳುವ ವಿಧಾನ. ಅವರ ಬಹುತೇಕ ಕಥೆಗಳು ಗ್ರಾಮೀಣ ಹಿನ್ನೆಲೆಯನ್ನು ಹೊಂದಿದ್ದು ಸ್ತ್ರೀಪಾತ್ರ ಕೇಂದ್ರಿತವಾಗಿವೆ. ಅವರು ತಮ್ಮ ಸಾಹಿತ್ಯದಲ್ಲಿ ಗೋವೆಯ ಸ್ಥಳೀಯ ಸಂಸ್ಕೃತಿ, ಕೃಷಿಕರ ಬದುಕು, ಬಡ ಜನರ ತೊಳಲಾಟ ಮತ್ತು ವಲಸಿಗ ಕಾರ್ಮಿಕ ವರ್ಗದ ಅಸ್ಥಿರತೆಗೆ ಪ್ರಾಮುಖ್ಯತೆ ನೀಡಿದ್ದಾರೆ. ಅವರ ಕಥಾಸಾಹಿತ್ಯ ಕನ್ನಡವೂ ಸೇರಿದಂತೆ ಇಂಗ್ಲಿಶ್, ಜರ್ಮನ್ ಹಾಗೂ ಇತರ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ.
ಮೀನಾ ಕಾಕೊಡಕಾರರಿಗೆ ಶೃದ್ಧಾಪೂರ್ವಕ ನಮನಗಳು.
ಬೆಂಗಳೂರು: ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ 'ಸಾರ್ಥಕ ಸಾಧಕ' ಪ್ರಶಸ್ತಿಗೆ ಭಾ...
ಹೊಸಪೇಟೆ: ಕರ್ನಾಟಕ ಇತಿಹಾಸ ಅಕಾಡೆಮಿಯ 'ಇತಿಹಾಸ ಸಂಸ್ಕೃತಿಶ್ರೀ' ಪ್ರಶಸ್ತಿಗೆ ಸಂಶೋಧಕ ಪ್ರೊ. ಕೆ.ಆರ್....
ಬೆಂಗಳೂರು : ಗಾಯನ ಸಮಾಜ ನೀಡುವ ಶ್ರೀ ಕಲಾಜ್ಯೋತಿ ಪ್ರಶಸ್ತಿಗೆ ವಿದುಷಿ ಶಂಕರಿಮೂರ್ತಿ ಆಯ್ಕೆಯಾಗಿದ್ದಾರೆ. \ ಕೆ ಆರ್...
©2024 Book Brahma Private Limited.