Kerala literature festival; ಮಾತಾಡಿ, ಪ್ಲೀಸ್ ಮಾತಾಡಿ: ಕೇರಳದಲ್ಲಿ ಮೊಳಗಿನದ ಕನ್ನಡದ ಕಾವ್ಯಸಿರಿ  

Date: 27-01-2025

Location: ಬೆಂಗಳೂರು


`ಬುಕ್ ಬ್ರಹ್ಮ’ ವಿಶೇಷ ವರದಿ

ಕಲ್ಲಿಕೋಟೆ: `ಬುಕ್ ಬ್ರಹ್ಮ ಸಾಹಿತ್ಯೋತ್ಸವ 2024’ ಕ್ಕೆಂದೇ ಕನ್ನಡದ ನಟ ಪ್ರಕಾಶ್ ರಾಜ್, ಹಿರಿಯ ರಂಗ ನಿರ್ದೇಶಕ ಬಿ.ಶ್ರೀಪಾದ ಭಟ್ ಮತ್ತು ಅವರ ತಂಡ ’ನಿರ್ದಿಗಂತ’ ನಿರ್ಮಿಸಿದ್ದ ’ಭಾಷೆಗಳು ಹಲವು: ಭಾವವೊಂದೇ’ ರಂಗಪ್ರಸ್ತುತಿಯ ಅಭಿವೃದ್ಧಿ ಪಡಿಸಿದ ಪ್ರದರ್ಶನ ‘ಜಸ್ಟ್ ಆಸ್ಕಿಂಗ್: ವೈ ಆರ್ ವಿ ನಾಟ್ ಸ್ಪೀಕಿಂಗ್’ ಇಲ್ಲಿನ ಕಡಲ ತಡಿಯಲ್ಲಿ ಸಾಹಿತ್ಯಾಸಕ್ತರ ಮನಸೂರೆಗೊಂಡಿತು.

‘ಕೇರಳ ಲಿಟರೇಚರ್‍ ಫೆಸ್ಟ್ – 2025’ ಕೊನೆಯ ದಿನ ಭಾನುವಾರ ಸಂಜೆ ಆರರಿಂದ ಏಳಕ್ಕೆ ಕೆಎಲ್ಎಫ್ ಅತಿ ದೊಡ್ಡ ತೆರೆದ ಸಭಾಂಗಣ `ಎಜುತೊಲಾ’ದಲ್ಲಿ ’ಜಸ್ಟ್ ಆಸ್ಕಿಂಗ್’ ರಂಗ ಪ್ರಸ್ತುತಿ ಏರ್ಪಡಿಸಲಾಗಿತ್ತು. ರಂಗದ ಮೇಲಿನ ತಾಂತ್ರಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸಮಯ ಬೇಕಿದ್ದರಿಂದ, ಆಯೋಜಕರು ಅದನ್ನು ಒಂದು ಗಂಟೆ ಮುಂದೂಡಿದರು.

ಆದರೆ, ಆರು ಗಂಟೆಯ ಹೊತ್ತಿಗೇ ಸಂಭಾಗಣ ತುಂಬಿ ಹೋಗಿತ್ತು. ಆಯೋಜಕರು, ಪದೇ ಪದೇ “ಕಾರ್ಯಕ್ರಮವನ್ನು ಏಳು ಗಂಟೆಗೆ ಮುಂದೂಡಲಾಗಿದೆ. ವೇದಿಕೆ ಮತ್ತು ಸಭಾಂಗಣವನ್ನು ಸಿದ್ಧಗೊಳಿಸಬೇಕು. ದಯವಿಟ್ಟು ಅದಕ್ಕೆ ಅವಕಾಶ ನೀಡಲು ಸಭಾಂಗಣದಿಂಧ ಹೊರ ಹೋಗಿ” ಎಂದು ಎಷ್ಟೇ ಮನವಿ ಮಾಡಿಕೊಂಡರೂ, ಯಾರೂ ಸಂಭಾಗಣ ಬಿಟ್ಟು ಕದಲಿಲ್ಲ.

ಏಳಕ್ಕಿಂತ ಸ್ವಲ್ಪ ಮೊದಲು ಪ್ರಕಾಶ್ ರಾಜ್ ವೇದಿಕೆ ಏರಿದಾಗ ಸಿಕ್ಕಿದ್ದು ಪ್ರೇಕ್ಷಕರ ಅಭೂತಪೂರ್ವ ಸ್ವಾಗತ. ನಂತರ ಸುಮಾರು 50 ನಿಮಿಷಗಳ ಕಾಲ ಕನ್ನಡ, ಮಲಯಾಳಂ, ತೆಲುಗು, ತಮಿಳು ಮತ್ತು ಇಂಗ್ಲಿಷ್ ಭಾಷೆಯ ಕವಿತೆಗಳನ್ನು ಒಳಗೊಂಡ ರಂಗಪ್ರಸ್ತುತಿಗೆ ಜನ ನೀಡಿದ್ದು ಅಭೂತಪೂರ್ವ ಸ್ಪಂದನೆ. ಪ್ರಸ್ತುತಿಯ ಉದ್ದಕ್ಕೂ ಪ್ರಜ್ವಲಿಸಿದ್ದು ಲಂಕೇಶ್, ತೇಜಸ್ವಿ, ಸುಧಾ ಆಡುಕಳ ಹಾಗೂ ಇನ್ನೂ ಅನೇಕ ಕನ್ನಡದ ಕವಿಗಳು. ಇವರೆಲ್ಲರ ಜೊತೆ ಕೈ ಹಿಡಿದಿದ್ದರು ಉಳಿದ ನಾಲ್ಕು ಭಾಷೆಗಳ ಅನೇಕ ಕವಿಗಳು, ಲೇಖಕರು.

A person standing on a stageDescription automatically generated ನಿರಂಕುಶಪ್ರಭುತ್ವ, ಮುಸ್ಲಿಂ ದ್ವೇಷ, ಧರ್ಮದ ಅಫೀಮು ಬೆರೆಸಿದ ರಾಜಕೀಯ, ಪ್ಯಾಲೆಸ್ತೀನ್ ಮತ್ತು ವಿಶ್ವದಾದ್ಯಂತ ಪ್ರಜಾಪ್ರಭುತ್ವಕ್ಕೆ ಇರುವ ಅಪಾಯಗಳ ಕುರಿತು ಪ್ರಕಾಶ್ ವಿವಿಧ ಭಾಷೆಗಳ ಕಾವ್ಯ ಓದುತ್ತಾ, ನಟಿಸುತ್ತಾ ನೆರೆದಿದ್ದವರ ಮನಸ್ಸಲ್ಲಿ ಕಿಚ್ಚೆಬ್ಬಿಸಿದರು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ನಿಜವಾದ ಪ್ರಭುಗಳು. ವಿವಿಧತೆಯೇ ಅದರ ಆಧಾರಸ್ತಂಭ ಎಂದು ಮನನ ಮಾಡಿಕೊಟ್ಟ ಅವರು, ಅದರ ಉಳಿವಿಗೆ ಈಗ ಪ್ರಜೆಗಳೇ ದನಿಯೆತ್ತಬೇಕು ಎಂದು ಪ್ರತಿಪಾದಿಸಿದರು. ಪ್ರಜಾಪ್ರಭುತ್ವದ ಸೋಲು ಪ್ರಜೆಗಳು ಸೋಲು. ಪ್ರಜೆಗಳು ಮಾತನಾಡದಿದ್ದರೆ, ಪ್ರಶ್ನಿಸದಿದ್ದರೆ, ಅವರಿಂದಲೇ ಅಧಿಕಾರಕ್ಕೆ ಬಂದ ಪ್ರಜಾಸೇವಕರು, ನಿರಂಕುಶಪ್ರಭುಗಳಾಗಿ ರಾಕ್ಷಸನ ಸ್ವರೂಪ ಪಡೆದು ಬಿಡುತ್ತಾರೆ. ಯಾವುದೇ ಕಾರಣಕ್ಕೆ ದೇಶ ಮತ್ತು ಪ್ರಜಾಪ್ರಭುತ್ವಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕಾದ ಕರ್ತವ್ಯ ಪ್ರಜೆಗಳದ್ದು ಎಂದು ’ನಿರ್ದಿಗಂತ’ ತಂಡ ಪ್ರತಿಪಾದಿಸಿತು.

ಪ್ರಕಾಶ್ ರಾಜ್, ಅನೂಷ್ ಶೆಟ್ಟಿ, ಮುನ್ನಾ ಮೈಸೂರು, ಶಾಲೊಮ್ ಸನ್ನುತ, ಶಖೀಲ್ ಅಹಮದ್ ಮತ್ತು ಉಳಿದ ಸದಸ್ಯರು ರಂಗ ಪ್ರಸ್ತುತಿಯ ಕೊನೆಯಲ್ಲಿ ’ವೈ ಆರ್‍ ವಿ ನಾಟ್ ಸ್ಪೀಕಿಂಗ್? ಮಾತಾಡಿ, ಪ್ಲೀಸ್ ಮಾತಾಡಿ’ ಎಂಬ ಉದ್ಘೋಷದ ಮೂಲಕ ಪ್ರದರ್ಶನಕ್ಕೆ ಕೊನೆ ಹಾಡಿದರು. ಆ ಸಂದರ್ಭದಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರ ಜೊತೆ ಮಲಯಾಳಂ ರಂಗಭೂಮಿ, ಚಲನಚಿತ್ರ, ಸಾಹಿತ್ಯ ಲೋಕದ ಅನೇಕ ಗಣ್ಯರು ಎದ್ದು ನಿಂತು ಗೌರವ ಸಲ್ಲಿಸಿದರು.

’ಕೇರಳ ಲಿಟರೇಚರ್‍ ಫೆಸ್ಟಿವಲ್’ ಉದ್ದಕ್ಕೂ ಕನ್ನಡದ ನುಡಿಗಳು, ಭಾವನೆಗಳು, ಕವಿಗಳು ಇಲ್ಲಿನ ಕಡಲ ತಡಿಯಲ್ಲಿ ಪದೇ – ಪದೇ ಉದ್ಭವಿಸಲು ಕಾರಣರಾಗಿದ್ದು ಪ್ರಕಾಶ್ ರಾಜ್ ಮತ್ತವರ ತಂಡ.

MORE NEWS

ಸೆಲೆಕ್ಟ್ ಬುಕ್ ಶಾಪ್ ನ ಮಾಲೀಕ ಕೆಕೆಎಸ್ ಮೂರ್ತಿ ಇನ್ನಿಲ್ಲ

18-02-2025 ಬೆಂಗಳೂರು

ಬೆಂಗಳೂರು: ಪ್ರಸಿದ್ಧ ಪುಸ್ತಕ ಮಾರಾಟ ಸಂಸ್ಥೆಯಾದ ಸೆಲೆಕ್ಟ್ ಬುಕ್ ಶಾಪ್ ನ ಮಾಲೀಕ ಕೆಕೆಎಸ್ ಮೂರ್ತಿ (95) ಅವರು ಸೋಮವಾರ...

ಕವಿತೆ ವಾಚನ - ಕವಿ ಸ್ಪಂದನ

18-02-2025 ಕಲಬುರಗಿ

ಕಲಬುರಗಿ: ಕಲ್ಯಾಣ ಕರ್ನಾಟಕ ರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಅನುಭವ ಮಂಟಪ ಸಭಾಂಗಣದಲ್ಲಿ ನಡೆದ ಎರಡನೇ ಗೋಷ್ಠಿಯಲ್ಲಿ ಕವ...

ನಾಟಕ ಸಾಹಿತ್ಯ ಹೊರಳು ಹಾದಿಯಲ್ಲಿದೆ: ಚೌಗಲೆ

18-02-2025 ಕಲಬುರಗಿ

ಕಲಬುರಗಿ: ರಂಗಭೂಮಿಯ ಚರಿತ್ರೆಯಲ್ಲಿ ಸ್ವಾತಂತ್ರ್ಯಪೂರ್ವದಿಂದ ಹಿಡಿದು ಸ್ವಾತಂತ್ರ್ಯೋತ್ತರ ಕಾಲಘಟ್ಟದವರೆಗೂ ನಾಟಕಗಳ ಹರವ...