ಸದಾ ಚಟುವಟಿಕೆಯಿಂದ ಇರುತ್ತಾ, ಮಕ್ಕಳೊಂದಿಗೆ ಮಗುವಾಗಿ ಯುವಜನರೊಂದಿಗೆ ಯುವಕರಾಗಿರುವ ಸ್ಫೂರ್ತಿ ಚಿಲುಮೆ ಪುರುಷೋತ್ತಮ ಬಿಳಿಮಲೆ ಅವರ ಆತ್ಮಚರಿತ್ರೆ ‘ಕಾಗೆ ಮುಟ್ಟಿದ ನೀರು’ ಕೃತಿಗೆ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಬರೆದ ಮುನ್ನುಡಿ ಇಲ್ಲಿದೆ.
ಆತ್ಮಚರಿತ್ರೆಗೆ ಮುನ್ನುಡಿಯ ಮುಂಭಾರ ಬೇಕೇ ಎನ್ನುವುದು ಮೊದಲ ಪ್ರಶ್ನೆ. ಈ ಮುನ್ನುಡಿಯನ್ನು ನನಗಿಂತ ಅನುಭವಿಗಳು, ಹಿರಿಯರು, ಪರಸ್ಪರ ಹೆಚ್ಚು ಬಲ್ಲವರು ಬರೆಯಬಹುದಿತ್ತಲ್ಲವೇ ಎನ್ನುವುದು ಎರಡನೆ ಪ್ರಶ್ನೆ. ಈ ಪ್ರಶ್ನೆಗಳನ್ನು ಕೇಳಲು ಅವಕಾಶವನ್ನೂ ಕೊಡದೆ ಮುನ್ನುಡಿ ಬರೆದುದಕ್ಕಾಗಿ ನನಗೆ ಕೃತಜ್ಞತೆಯನ್ನು ಮುಂಗಡವಾಗಿಯೇ ಬರೆದಿದ್ದ ಲಿಖಿತ ಪ್ರತಿಯನ್ನು ಡಾ.ಪುರುಷೋತ್ತಮ ಬಿಳಿಮಲೆಯವರು ಕಳಿಸಿಕೊಟ್ಟಿದ್ದರು.
ನಾಲ್ಕು ದಿಕ್ಕುಗಳಲ್ಲಿಯೂ ದುರ್ಜನರೇ ವಿಜೃಂಭಿಸುತ್ತಿದ್ದಾರೋ ಏನೋ ಎಂಬ ಆತಂಕದ ದಿನಗಳಲ್ಲಿ ನಮ್ಮ ಸಮಯ-ಶಕ್ತಿಗಳೆಲ್ಲ ಅಂತಹವರ ಬಗೆಗಿನ ಟೀಕೆ-ಟಿಪ್ಪಣಿ,ಆರೋಪ,ಪ್ರತ್ಯಾರೋಪಗಳಲ್ಲಿಯೇ ವ್ಯಯವಾಗುತ್ತಿರುವಾಗ ಸಜ್ಜನರ ಬಗ್ಗೆ ನಾಲ್ಕು ನಲ್ನುಡಿಗಳನ್ನಾಡುವ ಅವಕಾಶ ಸಿಗುವುದೇ ಅಪರೂಪ. ಒದಗಿಬಂದಿರುವ ಈ ಅವಕಾಶ ಬಳಸಿಕೊಂಡು ಒಳ್ಳೆಯವರ ಬಗ್ಗೆ, ಒಳ್ಳೆಯ ಮಾತುಗಳನ್ನಾಡಿ ನಾನೂ ಯಾಕೆ ಸ್ವಲ್ಪ ಒಳ್ಳೆಯವನಾಗಬಾರದೆಂಬ ಸ್ವಾರ್ಥವೂ ಬಿಳಿಮಲೆಯವರ ಆದೇಶಕ್ಕೆ ತಲೆಬಾಗಲು ಕಾರಣ.
ಕಡುಕಷ್ಟದಲ್ಲಿ ಹುಟ್ಟಿ ಸ್ವಪ್ರಯತ್ನದಿಂದ ಸಾಧನೆಯ ಶಿಖರವನ್ನೇರಿ ಜೀವನವನ್ನು ಗೆದ್ದು ನಿಂತವರು ನಮ್ಮ ನಡುವೆ ಹಲವರಿದ್ದಾರೆ. ಸಾವನ್ನು ಹೊಸ್ತಿಲಲ್ಲಿ ನಿಲ್ಲಿಸಿ ಜೀವವನ್ನು ಗೆದ್ದವರೂ ನಮ್ಮ ನಡುವೆ ಕೆಲವರಿದ್ದಾರೆ. ಆದರೆ ಜೀವನ ಮತ್ತು ಜೀವಗಳೆರಡನ್ನು ಗೆದ್ದು ನಿಂತವರು ಬಹಳ ಅಪರೂಪ. ಅಂತಹ ವಿರಳರಲ್ಲಿ ಒಬ್ಬರು ಡಾ.ಪುರುಷೋತ್ತಮ ಬಿಳಿಮಲೆ. ಜೀವನದ ಹೋರಾಟದಲ್ಲಿ ಇನ್ನೇನು ಗೆದ್ದೆ ಎನ್ನುವಾಗ ಸವಾಲೊಡ್ಡಿದ ಜೀವದ ಜೊತೆಯಲ್ಲಿಯೂ ಹೋರಾಡಿ ಗೆದ್ದವರು ಬಿಳಿಮಲೆ. ಈ ಎರಡು ಹೋರಾಟಗಳನ್ನು ಒಟ್ಟಾಗಿ ನೋಡದೆ ಪ್ರತ್ಯೇಕವಾಗಿ ನೋಡಿದರೂ ಅವರ ಬದುಕು ಅರ್ಥಪೂರ್ಣ, ಸ್ಪೂರ್ತಿದಾಯಕ.
ಜೀವನವನ್ನು ರೂಪಕಾತ್ಮಕವಾಗಿ ಪಯಣ ಅನ್ನುತ್ತೇವೆ. ಬಿಳಿಮಲೆಯವರ ಬದುಕಲ್ಲಿ ಪಯಣ ಎನ್ನುವುದು ರೂಪಕವೂ ಹೌದು, ವಾಸ್ತವವೂ ಹೌದು. ಬಿಳಿಮಲೆಯವರು ನಿಂತಲ್ಲಿ ನಿಲ್ಲುವವರು, ಕೂತಲ್ಲಿ ಕೂರುವವರಲ್ಲ, ಅವರು ಹುಟ್ಟು ಜಂಗಮ. ಎಲ್ಲಿಯೂ ಸ್ಥಾವರವಾದವರೇ ಅಲ್ಲ. ಬಂಟಮಲೆಯಿಂದ ಹೊರಟು ಪುತ್ತೂರು,ಮಂಗಳೂರು,ಮದ್ರಾಸ್, ಹಂಪಿ ಮಾರ್ಗವಾಗಿ ದೆಹಲಿ ತಲುಪಿ ಅಲ್ಲಿಂದ ನಡುನಡುವೆ ಅಮೆರಿಕ,ಜಪಾನ್,ಇಸ್ರೇಲ್ ಗಳಿಗೆ ಜಿಗಿಯುತ್ತಲೇ ಇರುವ ಬಿಳಿಮಲೆಯವರ ಜೀವನ ಪಯಣ ಹೊಸ ಪಥಿಕರಿಗೆ ಟೂರಿಸ್ಟ್ ಗೈಡ್ ನಂತಿದೆ. ಈ ಆತ್ಮಚರಿತ್ರೆಯಲ್ಲಿ ಬಿಳಿಮಲೆಯವರು ಏಕಾಂಗಿ ಅಲ್ಲ, ನಮ್ಮನ್ನು ಸಹಪಥಿಕರನ್ನಾಗಿ ಕರೆದೊಯ್ಯುತ್ತಾರೆ.
“…ಮನೆಗೆ ಬಂದವರು ನೆಲದಲ್ಲಿ ಮಲಗಿದವನನ್ನು ದಾಟಿಕೊಂಡು ಹೋಗುತ್ತಿದ್ದ… ಕರ್ರಗೆ, ಕುಳ್ಳಗೆ, ಕುರೂಪಿ… ವಾಮನಮೂರ್ತಿ ಹುಡುಗ ತ್ರಿವಿಕ್ರಮನಾಗಿ ಬೆಳೆಯುತ್ತಾ ಬೆಳೆಯುತ್ತಾ ಬಂಟಮಲೆ,ಬಿಳಿಮಲೆಯನ್ನು ಹಿಂದಕ್ಕೆ ಬಿಟ್ಟು ರಾಜ್ಯ,ದೇಶದ ಗಡಿದಾಟಿ ಆಗಾಗ ವಿದೇಶಕ್ಕೂ ಹಾರಿ ಎಲ್ಲರೂ ತಿರುಗಿನೋಡುವಂತೆ ಬೆಳೆದ ಕತೆಯೇ ಹಳೆಕಾಲದ ಸಲೀಂ-ಜಾವೇದ್ ಅವರ ಹಿಂದಿ ಥ್ರಿಲ್ಲರ್ ಸಿನೆಮಾದ ಕತೆಯಂತಿದೆ.
ಇತಿಹಾಸದ ಪುಟದಲ್ಲಿ ದಾಖಲಾದವರಲ್ಲಿ ಹೆಚ್ಚಿನವರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಂಡದ್ದನ್ನು ಕಾಣಬಹುದು. ಇದನ್ನೇ ಇನ್ನೊಂದು ಬಗೆಯಲ್ಲಿ ವರ್ತಮಾನದ ಕ್ರೌರ್ಯಕ್ಕೆ ಬಲಿಯಾದವರೇ ಇತಿಹಾಸದ ಪುಟದಲ್ಲಿ ಉಳಿಯಲು ಸಾಧ್ಯ ಎಂದೂ ಹೇಳಬಹುದು. ಬಿಳಿಮಲೆಯವರು ವರ್ತಮಾನದ ಕ್ರೌರ್ಯವನ್ನು ಉಂಡು ಬೆಳೆದಿದ್ದರೂ ಅವೆಲ್ಲವನ್ನೂ ಬಿಚ್ಚಿಡಲು ಹೋಗಿಲ್ಲ. ಹಾಗೆ ಮಾಡಿದ್ದರೆ ಮಂಗಳೂರು,ಹಂಪಿ ಮತ್ತು ದೆಹಲಿಗಳಲ್ಲಿ ಅವರ ಆತ್ಮದ ಮೇಲೆ ಆಗಿರುವ ಗಾಯಗಳ ಗುರುತುಗಳು ನಮ್ಮನ್ನು ಬೆಚ್ಚಿಬೀಳಿಸುತ್ತಿತ್ತು. ತಾನು ತೊಟ್ಟುಕೊಂಡಿರುವ ಸಜ್ಜನಿಕೆಯ ಪೋಷಾಕನ್ನು ಕಳಚಲು ಹೋಗದೆ ಬಹಳ ಮಂದಿಯನ್ನು ಬತ್ತಲೆಯಾಗುವ ಮುಜುಗರದಿಂದ ಅವರು ಪಾರು ಮಾಡಿದ್ದಾರೆ. ಹಂಪಿಯಲ್ಲಿ ಉಂಡ ಕಹಿಯನ್ನೊಂದಿಷ್ಟು ಹೊರಹಾಕಿದ್ದು ಬಿಟ್ಟರೆ ಉಳಿದುದೆಲ್ಲವನ್ನು ನುಂಗಿ ವಿಷಕಂಠರಾಗಿದ್ದಾರೆ.
ಈ ಆತ್ಮಕತೆಯನ್ನು ಸ್ಥೂಲವಾಗಿ ಪೂರ್ವಾರ್ಧ ಮತ್ತು ಉತ್ತರಾರ್ಧ ಎಂದು ಎರಡು ಭಾಗಗಳನ್ನಾಗಿ ಮಾಡಬಹುದು. ಇದರಲ್ಲಿ ನನ್ನನ್ನು ಸೆಳೆದದ್ದು, ಬಹುಷ: ಓದುಗರನ್ನು ಕೂಡಾ ಹೆಚ್ಚು ಸೆಳೆಯುವುದು ಬಿಳಿಮಲೆಯವರ ಪೂರ್ವಾರ್ಧದ ಬದುಕು. ಆ ಬದುಕನ್ನು ಬಿಳಿಮಲೆಯವರು ಬದುಕದೆ ಹೋಗಿದ್ದರೆ ಅವರ ಉತ್ತರಾರ್ಧದ ಬದುಕಿಗೆ ಇಷ್ಟೊಂದು ಮಹತ್ವವೂ ಇರುತ್ತಿರಲಿಲ್ಲ, ಅದನ್ನು ಎದುರಿಸಲು ಬೇಕಾದ ಆತ್ಮಬಲವು ಅವರಿಗೆ ದಕ್ಕುತ್ತಿರಲಿಲ್ಲ.
ಬಾಲ್ಯದಲ್ಲಿ ಅವರಿಗೆ ಜೊತೆಯಾಗಿದ್ದ “…ಏಡಿ,ಎಟ್ಟಿ,ಮೀನು,ಹಕ್ಕಿ,ಪ್ರಾಣಿ,ಇಲಿ,ಹಾವು ಭೂತಪ್ರೇತ” ಗಳೆಲ್ಲವೂ ಉತ್ತರಾರ್ಧದ ಅವರ ಬದುಕಿನ ಬೇರೆ ಬೇರೆ ಘಟ್ಟಗಳಲ್ಲಿ ರೂಪಕಗಳಾಗಿ ಮನುಷ್ಯ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಬಾಲ್ಯದಲ್ಲಿ ಕಾಡಿನ ಸಂಗಾತಿಗಳನ್ನು ಎದುರಿಸಲು ಕಲಿತ ಬದುಕಿನ ಕುಸ್ತಿಯ ಪಟ್ಟುಗಳು ಈ “ಬಿಳಿಮಲೆಯ ಬಂಟ”ನಿಗೆ ನಂತರದ ದಿನಗಳಲ್ಲಿ ಕಾಂಕ್ರೀಟ್ ಕಾಡಿನ ಸಂಗಾತಿಗಳನ್ನು ಕೂಡಾ ಎದುರಿಸಲು ನೆರವಾದ ಹಾಗಿದೆ. ಬಿಳಿಮಲೆಯವರು ಬಂಡಾಯಗಾರರಾಗಿ, ವಿಶ್ವವಿದ್ಯಾಲಯದ ಪ್ರೊಪೆಸರ್ ಆಗಿ, ಜನಪ್ರಿಯ ಲೇಖಕರಾಗಿ ಮಿಂಚುತ್ತಿದ್ದಾಗ ಅದೇ ತಾನೆ ಮುಂಗಾರು ಪತ್ರಿಕೆಗೆ ಸೇರಿದ್ದ ನಾನು ಬೆರಗು ಕಣ್ಣುಗಳಿಂದ ಅವರನ್ನು ನೋಡುತ್ತಾ ಬಂದವನು. ಇಬ್ಬರೂ ಮಂಗಳೂರು ಬಿಟ್ಟ ನಂತರ ಎಷ್ಟೋ ಸಮಯ ಮುಖಾಮುಖಿಯೇ ಆಗಿರಲಿಲ್ಲ. ನನಗೆ ದೆಹಲಿಗೆ ವರ್ಗಾವಣೆಯಾದಾಗ ಮತ್ತೆ ಇವರನ್ನು ಕಂಡೆ. ದೆಹಲಿ ಕರ್ನಾಟಕ ಸಂಘದ ಪದಾಧಿಕಾರಿಗಳ ಪಟ್ಟಿಯಲ್ಲಿ ಅವರ ಹೆಸರು ಕೊನೆಯಲ್ಲಿ ನೋಡಿದ್ದಾಗ ಪಿಚ್ಚೆನಿಸಿತ್ತು. ಕ್ಯಾಪ್ಟನ್ ಆಗಬೇಕಾಗಿದ್ದವರು ಎಕ್ಸ್ ಟ್ರಾ ಪ್ಲೇಯರ್ ತರ ಇದ್ದರಲ್ಲಾ ಎಂದು ಅನಿಸಿತ್ತು.
ಆಗಿನ ದಿನಗಳಲ್ಲಿ ಕರ್ನಾಟಕ ಸಂಘದ ಬಗ್ಗೆ ಬಗೆಬಗೆಯ ಆರೋಪಗಳು ಹರಿದಾಡುತ್ತಿದ್ದವು. ಒಂದು ದಿನ ಬಿಳಿಮಲೆಯವರನ್ನು ನೊಡಿದಾಗ ದು:ಖವಾಗಿತ್ತು. ಅವರು ಸೊರಗಿಹೋಗಿದ್ದರು, ಕಾಲುಗಳಲ್ಲಿ ಊತ ಇತ್ತು, ನಡೆಯಲು ಕಷ್ಟವಾಗುತ್ತಿತ್ತು. ಆದರೆ ಕೆಲವು ಸಮಯದ ನಂತರ ನೋಡಿದರೆ ಅವರು ಇನ್ನೊಂದು ಧಿಗಣ ಹಾಕಿ ಕರ್ನಾಟಕ ಸಂಘದ ಚುನಾವಣಾ ರಂಗಸ್ಥಳ ಪ್ರವೇಶಿಸಿಯೇ ಬಿಟ್ಟಿದ್ದರು. ಜೀವನುದ್ದಕ್ಕೂ ಬಿಳಿಮಲೆಯವರು ಇಂತಹ ಅಚ್ಚರಿಗಳನ್ನು ಕೊಡುತ್ತಲೇ ಬಂದಿದ್ದಾರೆ.
ಬಿಳಿಮಲೆಯವರ ಪ್ರೀತಿಯ ಕಾಯಕವೆಂದರೆ ಕಟ್ಟುವುದು. ಕೆಡವುವವರು ಒಮ್ಮೊಮ್ಮೆ ವರ್ತಮಾನದಲ್ಲಿ ವಿಜೃಂಭಿಸಿ ಬಿಡುತ್ತಾರೆ, ಕಟ್ಟುವವರ ಪಾಲಿಗೆ ವರ್ತಮಾನ ಕ್ರೂರವಾಗಿದ್ದರೂ ಇತಿಹಾಸ ನೆನಪಲ್ಲಿಟ್ಟುಕೊಳ್ಳುತ್ತದೆ. ಬಿಳಿಮಲೆಯವರು ಮೊದಲು ಹಂಪಿ ವಿಶ್ವವಿದ್ಯಾಲಯವನ್ನು, ನಂತರ ದೆಹಲಿ ಕರ್ನಾಟಕ ಸಂಘವನ್ನು, ಅದರ ನಂತರ ಅಮೆರಿಕನ್ ಅಧ್ಯಯನ ಸಂಸ್ಥೆಯನ್ನು ಇತ್ತೀಚೆಗೆ ಜೆ.ಎನ್.ಯುವಿನ ಕನ್ನಡ ಪೀಠವನ್ನು ಕಟ್ಟಿದರು. ಇದರ ನಡುವೆ ಸಣ್ಣಪುಟ್ಟ ಸುಮಾರು ಕಟ್ಟೋಣಗಳನ್ನು ಕಟ್ಟಿದ್ದಾರೆ.
ಬಿಳಿಮಲೆಯವರು ಮೂಲತ: ಒಬ್ಬ ಮೇಸ್ಟ್ರು, ನಂತರ ಸಾಹಿತಿ,ಸಂಶೋಧಕ, ಭಾಷಣಕಾರ, ಸಂಘಟಕ, ಹೋರಾಟಗಾರ ಎಲ್ಲವೂ ಆದವರು. ಈ ಬಹುರೂಪಗಳ ಅವತಾರಗಳಲ್ಲಿ ಅವರು ಸಂಘಟನಕಾರರಾಗಿಯೇ ಹೆಚ್ಚು ಕೆಲಸಮಾಡಿದ ಕಾರಣದಿಂದಾಗಿ ಅವರೊಳಗಿನ ಬರಹಗಾರನಿಗೆ ಸಮಯ ಕೊಡಲು ಸಾಧ್ಯವಾಗಲಿಲ್ಲ. ಈ ಕೊರಗು ಅವರಲ್ಲಿಯೂ ಇದೆ. ಆದರೆ ಬರವಣಿಗೆಗಾಗಿಯೇ ತಮ್ಮನ್ನು ಪೂರ್ಣವಾಗಿ ಅರ್ಪಿಸಿಕೊಂಡಿದ್ದರೆ ನಮಗೆ ಓದಲು ಇನ್ನಷ್ಟು ಪುಸ್ತಕಗಳು, ಅವರಿಗೆ ಇನ್ನಷ್ಟು ಪ್ರಶಸ್ತಿಗಳು ಬರುತ್ತಿದ್ದವೋ ಏನೋ? ಅಷ್ಟರಮಟ್ಟಿಗೆ ನಮಗೆ ಮತ್ತು ಅವರಿಗೆ ನಷ್ಟ.
ಆದರೆ ಸಂಘಟನಕಾರ ಬಿಳಿಮಲೆಯವರು ಇಲ್ಲದೆ ಇದ್ದಿದ್ದರೆ ಅವರು ಕಟ್ಟಿರುವ ಅನೇಕ ಸಂಸ್ಥೆಗಳು ಈಗಿನ ರೂಪದಲ್ಲಿ ಖಂಡಿತ ಇರುತ್ತಿರಲಿಲ್ಲ. ಕರ್ನಾಟಕದ ರಾಯಭಾರಿ ರೀತಿಯಲ್ಲಿ ಮೋತಿಭಾಗ್ ನಲ್ಲಿ ಕರ್ನಾಟಕ ಸಂಘದ ಬೃಹತ್ ಕಟ್ಟಡ ತಲೆ ಎತ್ತಿ ಮೆರೆಯುತ್ತಿದ್ದರೆ, ಅದಕ್ಕೆ ರಾ
ಷ್ಟ್ರಮಟ್ಟದಲ್ಲಿ ಸಾಂಸ್ಕೃತಿಕ ಮಹತ್ವ ದಕ್ಕಿದ್ದರೆ ಅದಕ್ಕೆ ಕಾರಣಕರ್ತರು ಬಿಳಿಮಲೆಯವರು. ಆ ಕಾಲದಲ್ಲಿ ಬಿಳಿಮಲೆ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಿ ಹಗಲುರಾತ್ರಿ ಪಟ್ಟ ಶ್ರಮಕ್ಕೆ ನಾನು ಸಾಕ್ಷಿ. ಆ ನಿರ್ಲಕ್ಷ್ಯದ ಫಲವನ್ನು ಅವರು ಇಂದು ಅನುಭವಿಸುತ್ತಿದ್ದಾರೆ. ಅದೇ ರೀತಿ ಜವಾಹರಲಾಲ ವಿಶ್ವವಿದ್ಯಾಲಯದ ಕನ್ನಡ ಪೀಠ. ಅಲ್ಪಾವಧಿಯಲ್ಲಿಯೇ ತನ್ನೆಲ್ಲ ಅನುಭವ, ಸಂಪರ್ಕ ಮತ್ತು ವಿದ್ವತ್ತನ್ನು ಬಳಸಿಕೊಂಡು ದೇಶದ ಎಲ್ಲ ಭಾಷಿಕರು ಕನ್ನಡದ ದನಿಗೆ ಕಿವಿಗೊಡುವಂತೆ ಮಾಡಿದವರು ಬಿಳಿಮಲೆಯವರು. ಈ ಸಂಸ್ಥೆಯ ಮೇಲೆ ಫ್ಯಾಸಿಸ್ಟ್ ಶಕ್ತಿಗಳು ಎರಗಿಬಿದ್ದಾಗ ಕನ್ನಡದ ಸಾಕ್ಷಿಪ್ರಜ್ಷೆಯ ರೂಪದಲ್ಲಿ ನಮ್ಮೆಲ್ಲರ ಪ್ರತಿನಿಧಿಯಾಗಿ ಅಲ್ಲಿದ್ದು ನಮ್ಮ ಬೆಂಬಲವನ್ನು ಧಾರೆಯೆರೆದು ನಮಗೆ ನಾವೇ ಹೆಮ್ಮೆ ಪಡುವಂತೆ ಮಾಡಿದವರು. ಈರೀತಿ ದೇಶದ ರಾಜಧಾನಿಯಲ್ಲಿ ಕಳೆದುಹೋಗಿದ್ದ ಕನ್ನಡಿಗನಿಗೆ ಗುರುತು ತಂದುಕೊಟ್ಟ ಕೀರ್ತಿ ಬಿಳಿಮಲೆಯವರಿಗೆ ಸಲ್ಲಬೇಕು.
ಸಾರ್ವಜನಿಕ ಜೀವನದಲ್ಲಿರುವವರ ಬಗ್ಗೆ ಸುಲಭದಲ್ಲಿ ಒಂದಷ್ಟು ಆರೋಪಗಳು ಕೇಳಿಬರುತ್ತವೆ. ಇದು ಪ್ರಾಮಾಣಿಕರನ್ನು ಹಣಿಯುವ ಜನಪ್ರಿಯ ಹುನ್ನಾರ ಕೂಡಾ ಹೌದು. ಹಂಪಿಯಲ್ಲಿ ನಡೆದಿರುವ ಕೆಲವು ಘಟನೆಗಳು ಓದಿದಾಗ ನೋವಾಗುತ್ತದೆ.
ಬಿಳಿಮಲೆಯವರು ಕಡುಸ್ವಾಭಿಮಾನಿ, ಅಷ್ಟೇ ಪ್ರಾಮಾಣಿಕ. ಇದಕ್ಕೆ ಸಂಬಂಧಿಸಿದ ನನ್ನ ಅನುಭವವನ್ನು ಇಲ್ಲಿ ದಾಖಲಿಸಲೇಬೇಕಾಗಿದೆ. ಬಿಳಿಮಲೆಯವರಿಗೆ ಕಿಡ್ನಿ ಕಸಿ ನಡೆದಾಗ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಒಂದಷ್ಟು ದುಡ್ಡು ಕೊಡಿಸಬಹುದೆಂಬ ಆಲೋಚನೆ ನನಗೆ ಬಂದಿತ್ತು. ಇದನ್ನು ಬಿಳಿಮಲೆಯವರ ಜೀವದ ಗೆಳೆಯರಾದ ಶ್ರೀನಿವಾಸ ಕಾರ್ಕಳ ಅವರ ಜೊತೆ ಪ್ರಸ್ತಾಪಿಸಿದ್ದೆ. ಅವರು ‘ಕೇಳಿನೋಡಿ’ ಎಂದರು. ನಾನು ಕೇಳಿದೆ, ಬಿಳಿಮಲೆಯವರು ಒಂದೇ ಮಾತಿನಲ್ಲಿ ಬೇಡ ಎಂದು ಬಿಟ್ಟರು. ಬಿಳಿಮಲೆಯವರಿಗಿಂತ ಆರ್ಥಿಕವಾಗಿ ಸ್ಥಿತಿವಂತರಾಗಿದ್ದ ಕೆಲವು ಸಾಹಿತಿಗಳು ಈ ನೆರವಿಗಾಗಿ ಹೇರಿದ್ದ ಒತ್ತಡವನ್ನು ನಾನು ಅನುಭವಿಸಿರುವ ಕಾರಣ ಬಿಳಿಮಲೆಯವರ ನಿರಾಕರಣೆಯ ಮಹತ್ವ ಏನೆಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.
ಈ ಆತ್ಮಚರಿತ್ರೆಯಲ್ಲಿ ನಮ್ಮ ಮನಸನ್ನು ತೇವಗೊಳಿಸುವ ಸಣ್ಣ ಪ್ರೇಮಕತೆಯೊಂದಿದೆ. ಸಾವಿನ ಮನೆಯಿಂದ ಸಾಸಿವೆ ತಂದವರು ಮತ್ತು ‘ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ’ ಎಂದು ಹೇಳದೆ ಇದ್ದ ಪ್ರೇಮಿಗಳು ಈ ಜಗತ್ತಿನಲ್ಲಿ ಎಲ್ಲೂ ಸಿಗಲಾರರು. ಈ ಭಾಷೆಯನ್ನು ಉಳಿಸಿಕೊಂಡವರೆಷ್ಟು ಎನ್ನುವುದನ್ನು ಹುಡುಕಲು ಹೋದರೆ ಅದಕ್ಕೆ ಕೊನೆಯಿರಲಾರದು. ಶೋಭನಾ ಮತ್ತು ಬಿಳಿಮಲೆಯವರು ಖಂಡಿತ ಇಂತಹ ಭಾಷೆ ಕೊಟ್ಟುಕೊಂಡೇ ಒಂದಾಗಿರುತ್ತಾರೆ. ಆದರೆ ಆ ಭಾಷೆಯನ್ನು ನಡೆಸಿಕೊಡುವ ಗಳಿಗೆ ಎದುರಾದಾಗ ತನ್ನ ‘ಸತ್ಯವಾನ’ನನ್ನು ಉಳಿಸಲು ‘ಸಾವಿತ್ರಿ’ ಯಮಧರ್ಮರಾಯನನ್ನು ಹುಡುಕಿಕೊಂಡು ಹೋಗಿ ಪ್ರಾಣಭಿಕ್ಷೆ ಕೇಳುವುದಿಲ್ಲ, ತನ್ನನ್ನು ಅರ್ಪಿಸಿಕೊಂಡುಬಿಡುತ್ತಾರೆ. ‘ಅಂದು ಹೃದಯ ಕೊಟ್ಟಿದ್ದಳು,ಇಂದು ಕಿಡ್ನಿ ಕೊಟ್ಟಳು’ ಎಂದು ಬಿಳಿಮಲೆಯವರು ಇದನ್ನು ತಮಾಷೆಯಾಗಿ ಹೇಳಿದರೂ ಅವರಿಗೆ ಗೊತ್ತಿದೆ ತನ್ನ ಹೆಂಡತಿ ಕೊಟ್ಟಿರುವುದು ಕಿಡ್ನಿ ಅಲ್ಲ ಜೀವವನ್ನು ಎಂದು.
ಸದಾ ಚಿಮ್ಮುತ್ತಿರುವ ಎಂದೂ ಬತ್ತದ ಜೀವನಾಸಕ್ತಿ ಮತ್ತು ಹೋರಾಟದ ಛಲದ ಗುಟ್ಟೇನು ಎನ್ನುವುದನ್ನು ಬಿಳಿಮಲೆಯವರು ಬಿಡಿಸಿಹೇಳದೆ ಇದ್ದರೂ ಅವರ ಬದುಕಿನ ಕಥನದಲ್ಲಿಯೇ ಅದಕ್ಕೆ ಉತ್ತರ ಇದೆ. ಹೆತ್ತ ತಂದೆತಾಯಿ, ಒಡಹುಟ್ಟಿದ ಸೋದರ-ಸೋದರಿಯರಿಂದ ಹಿಡಿದು ಕೈಹಿಡಿದ ಪತ್ನಿವರೆಗೆ ಬಿಳಿಮಲೆಯವರ ಬದುಕಿನುದ್ದಕ್ಕೂ ಜೊತೆಯಾಗಿ ನಿಂತ ಜೀವಗಳಿಲ್ಲದೆ ಹೋಗಿದ್ದರೆ ಇಷ್ಟೊಂದು ದುರ್ಗಮವಾದ ಹಾದಿಯನ್ನು ಕ್ರಮಿಸಲು ಅವರಿಗೆ ಕಷ್ಟವಾಗುತ್ತಿತ್ತು.
ಬಿಳಿಮಲೆಯವರು ನೆಲಮೂಲದಿಂದ ಬಂದವರಾದ ಕಾರಣ ಅವರ ಕಾಲುಗಳು ಸದಾ ನೆಲಕ್ಕಂಟಿಕೊಂಡಿವೆ. ಚಿಂತಕ,ವಿದ್ವಾಂಸ ಮೊದಲಾದ ಕೀರ್ತಿಕಿರೀಟಗಳನ್ನು ತೊಟ್ಟುಕೊಂಡು ಅವರು ಅಡ್ಡಾಡಿದವರಲ್ಲ, ಮಕ್ಕಳಲ್ಲಿ ಮಕ್ಕಳಾಗಿ,ಯುವಜನರಲ್ಲಿ ಯುವಕರಾಗಿ ಬೆರೆಯುವ ಸಂವಾದಿಸುವ ಅವರ ಗುಣದಿಂದಾಗಿಯೇ ಇಂದು ನಾಡಿನಾದ್ಯಂತ ಬಿಳಿಮಲೆಯವರಿಗೆ ಅಪಾರ ಸಂಖ್ಯೆಯ ಯುವ ಅಭಿಮಾನಿಗಳಿದ್ದಾರೆ.
ಇತ್ತೀಚೆಗೆ ದೆಹಲಿಯ ಪತ್ರಕರ್ತರೊಬ್ಬರು ಕನ್ನಡದ ಬುದ್ದಿಜೀವಿಗಳ ಬಗ್ಗೆ ನನ್ನೊಡನೆ ಕೇಳಿದ್ದರು. ನಾನು ಬಿಳಿಮಲೆಯವರ ಹೆಸರು ಪ್ರಸ್ತಾಪಿಸಿ “..He is most underrated intellectual of Karnataka ಎಂದು ಹೇಳಿದ್ದೆ. ಕಳೆದ ಐದಾರುವರ್ಷಗಳಿಂದ ದೇಶವನ್ನು ಆವರಿಸಿಕೊಂಡಿರುವ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ನಡೆಯುತ್ತಿರುವ ಹೋರಾಟದ ಕುಲುಮೆಯಲ್ಲಿನ ಬೆಂಕಿ ಆರದಂತೆ ಪ್ರತಿಭಟನೆಯ ಕಿಡಿಯನ್ನು ಸಿಡಿಸುತ್ತಲೇ ಇರುವವರು ಬಿಳಿಮಲೆಯವರು.
ಸಾಂಸ್ಕೃತಿಕ ರಾಜಕೀಯವೇ ನಮ್ಮ ವರ್ತಮಾನ-ಭವಿಷ್ಯವನ್ನು ನಿರ್ಧರಿಸುತ್ತಿರುವ ಇಂದಿನ ದಿನಗಳಲ್ಲಿ ಸಂಸ್ಕೃತಿಯನ್ನು ಜೊತೆಯಲ್ಲಿಟ್ಟುಕೊಂಡು ಪ್ರಸಕ್ತ ಪರಿಸ‍್ಥಿತಿಯನ್ನು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ವಿಶ್ಲೇಷಿಸುತ್ತಾ ಹೊಸ ತಲೆಮಾರಿನ ಅರಿವಿನ ಪರಿಧಿಯನ್ನು ವಿಸ್ತರಿಸುವ ಮತ್ತು ಚಿಂತನೆಗೆ ಸ್ಷಷ್ಟತೆಯನ್ನು ಕೊಡುವ ಚಿಂತಕರು ನಮಗೆ ಬೇಕಾಗಿದೆ. ಅಂತಹವರ ಸಾಲಿನಲ್ಲಿ ಮೊದಲ ವ್ಯಕ್ತಿಯಾಗಿ ಬಿಳಿಮಲೆಯವರು ನಮಗೆ ಕಾಣಿಸುತ್ತಾರೆ.
ಬಹಳ ಮುಖ್ಯವಾಗಿ ನಮ್ಮ ಯುವಜನರು ಈ ಆತ್ಮಕತೆಯನ್ನು ತಪ್ಪದೆ ಓದಬೇಕು.. ವರ್ತಮಾನದ ರಾಜಕೀಯ,ಸಾಮಾಜಿಕ,ಸಾಂಸ್ಕೃತಿಕ ವಿದ್ಯಮಾನಗಳು ಹೊಸತಲೆಮಾರಿಗೆ ಸ್ಪೂರ್ತಿದಾಯಕವಾಗಿಲ್ಲ. ಇದರಿಂದಾಗಿ ಒಂದು ಬಗೆಯ ನಿರಾಶೆ,ಹತಾಶೆಗೊಳಗಾದ ಅವರು, ಸಿನಿಕತನ, ಉಡಾಫೆಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಯುವಮಿತ್ರರ ಆತಂಕ-ಸಂಕಟಗಳು ತಳ್ಳಿಹಾಕುವಂತಹದ್ದಲ್ಲ. “ ಈ ಆದರ್ಶಗಳೆಲ್ಲ ಮಣ್ಣಂಗಟ್ಟಿ ಸಾರ್” ಎಂದು ರಾಗ ಎಳೆಯುವ ಅವರು ಯಶಸ್ಸಿಗಾಗಿ ಸುಲಭದ ಮಾರ್ಗದ ಹುಡುಕಾಟಕ್ಕೆ ಹೊರಟು ದಾರಿ ತಪ್ಪಿಬಿಡುತ್ತಾರೆ. ಅವರು ಅಂದುಕೊಂಡದ್ದಕ್ಕಿಂತ ಭಿನ್ನವಾದ ದಾರಿ ತುಳಿದು, ಬದುಕು ಗೆದ್ದವರ ಜೀವನ ಕಥನ ಅವರಿಗೆ ಸರಿಯಾದ ದಾರಿಯನ್ನು ಆಯ್ದುಕೊಳ್ಳಲು ನೆರವಾಗಬಹುದು.
ಒಬ್ಬರು ಇಬ್ಬರು ಅಲ್ಲ, ವಾಟೆಕಜೆಯಂತಹ ಕುಗ್ರಾಮಗಳಲ್ಲಿ ‘ರೋಯ್ತಾ’ ನಂತಹ ಕೋಟ್ಯಂತರ ಮಕ್ಕಳು ಇಂದಿಗೂ ಬಡತನ,ಅನಾರೋಗ್ಯ, ಜಾತೀಯತೆ,ಕೀಳರಿಮೆಗಳಿಂದ ನರಳುತ್ತಿದ್ದಾರೆ. ಅವರಲ್ಲೊಬ್ಬರಾಗಿಬಿಡುತ್ತಿದ್ದ ‘ರೋಯ್ತಾ’ ಹೇಗೆ ಡಾ.ಪುರುಷೋತ್ತಮ ಬಿಳಿಮಲೆ’ ಆಗಿಬಿಟ್ಟರು ಎನ್ನುವ ಸರಳ ಪ್ರಶ್ನೆಯೊಂದಿಗೆ ನಮ್ಮ ಯುವಜನರು ಈ ಆತ್ಮಚರಿತ್ರೆಯ ಓದಿಗೆ ತೊಡಗಿದರೆ ಅವರಿಗೆ ಬದುಕಿನ ದಾರಿ ಕಂಡುಕೊಳ್ಳಲು ಇದು ಬೆಳಕಾಗಬಹುದು.
ಪುರುಷೋತ್ತಮ ಬಿಳಿಮಲೆಯವರ ಮಾತು ಮತ್ತು ಬರವಣಿಗೆಯನ್ನು ಇಡೀ ಕರ್ನಾಟಕ ಕಂಡಿದೆ. ವಿದ್ವತ್ ಉಳ್ಳವರೆಲ್ಲರೂ ಒಳ್ಳೆಯ ಸಂವಹನಕಾರರಾಗಿ ಇರಬೇಕಾಗಿಲ್ಲ. ಬಿಳಿಮಲೆಯವರು ಒಬ್ಬ ಅದ್ಭುತ ಸಂವಹನಕಾರ, ಬಹುಷ: ಈ ಸಂವಹನದ ಕಲೆಯನ್ನು ಅವರು ರೂಢಿಸಿಕೊಂಡಿರುವುದು ಬಾಲ್ಯದಿಂದಲೇ ಬೆಳೆಸಿಕೊಂಡು ಬಂದ ಯಕ್ಷಗಾನ-ತಾಳಮದ್ದಲೆಯ ನಂಟಿನಿಂದ. ಯಕ್ಷಗಾನದಲ್ಲಿ ಪಾತ್ರದಾರಿಗಳನ್ನು ಅರ್ಥಧಾರಿಗಳೆಂದೂ ಕರೆಯುತ್ತಾರೆ. ಪಾತ್ರಧಾರಿ ಕೇವಲ ಪಾಂಡಿತ್ಯ ಪ್ರದರ್ಶನ ಮಾಡದೆ ವೀಕ್ಷಕರಿಗೆ ಕತೆಯನ್ನು ಅದರ ಒಳನೋಟಗಳನ್ನು ಅರ್ಥಮಾಡಿಕೊಡುತ್ತಾನೆ.
ಈ ಆತ್ಮಚರಿತ್ರೆಯ ಸೊಗಸೆಂದರೆ ಇಡೀ ಆತ್ಮಚರಿತ್ರೆಯನ್ನು ಓದಿ ಮುಗಿಸಿದಾಗ ರಾತ್ರಿಯಿಡೀ ಕೂತು ಒಂದು ಯಕ್ಷಗಾನ ನೋಡಿ ಮುಗಿಸಿದ ಹಾಗಾಗುತ್ತದೆ. ಸಾಮಾನ್ಯವಾಗಿ ಯಕ್ಷಗಾನ ಮುಗಿದ ಮೇಲೂ ಭಾಗವತರ ಪದ, ಪಾತ್ರಧಾರಿಯ ಅರ್ಥ, ಚಂಡೆ-ಮದ್ದಲೆಯ ನಾದ ಕೇಳುತ್ತಲೇ ಇರುತ್ತದೆ. ಹಾಗೆಯೇ ಬಿಳಿಮಲೆಯವರ ಆತ್ಮದ ತುಣುಕುಗಳು ನಮ್ಮನ್ನು ಕಾಡುತ್ತಲೇ ಇರುತ್ತದೆ. ಇಂತಹದ್ದೊಂದು ಬದುಕು ಬದುಕಿದ್ದಕ್ಕಾಗಿ ಪುರುಷೋತ್ತಮ ಬಿಳಿಮಲೆಯವರಿಗೆ ನಾವು ಕೃತಜ್ಞರಾಗಿರಬೇಕು.
*
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.