ಕಥೆಗಳು ಹುಟ್ಟುವುದು ಜೀವನಾನುಭವದಿಂದ


“ಕಥೆಗಳು ಹುಟ್ಟುವುದು ಜೀವನಾನುಭವದಿಂದ ಎಂಬುದನ್ನು ಬಹುತೇಕರು ಒಪ್ಪುತ್ತಾರೆ. ನಾನು ಗಂಭೀರವಾಗಿ ಕಥೆಗಳನ್ನು ಬರೆಯಲು ಶುರುಮಾಡಿದ್ದು 2020ರಲ್ಲಿ. ಇದು ನನ್ನ ಮೂರನೇ ಕಥಾಸಂಕಲನ. ನಾನು ಕಥೆ ಬರೆಯಲು ಶುರುಮಾಡಿದಾಗ ಅವುಗಳಿಗೆ ಯಾವ ಮಾನದಂಡಗಳನ್ನಿಟ್ಟುಕೊಂಡು ಬರೆಯಬೇಕು ಎನ್ನುವ ಗೊಂದಲದಲ್ಲಿದ್ದೆ,''ಎನ್ನುತ್ತಾರೆ ಪ್ರೇಮಲತ ಬಿ. ಅವರು ತಮ್ಮ ‘ನಂಬಿಕೆಯೆಂಬ ಗಾಳಿಕೊಡೆ’ ಕೃತಿಗೆ ಬರೆದ ಲೇಖಕರ ನುಡಿ ನಿಮ್ಮ ಓದಿಗಾಗಿ.

ನಾನಿರುವುದು ಇಂಗ್ಲೆಂಡಿನಲ್ಲಿ, ಅದೂ ಎರಡು ದಶಕಗಳಿಂದ, ಈ ಎರಡು ದಶಕಗಳಲ್ಲಿ ಹಲವಾರು ಜನಾಂಗಗಳ ಜನರ ಬದುಕುಗಳನ್ನು ಹತ್ತಿರದಿಂದ ನೋಡಿದ್ದೇನೆ. ನಮ್ಮದೇ ನೆಲೆಗಳಲ್ಲಿ ನಿಂತು ಇನ್ನೊಬ್ಬರನ್ನು ಗಮನಿಸುವುದಕ್ಕೂ, ಅನಿವಾಸಿಗಳಾಗಿ ಬದುಕುತ್ತ ಇತರರು ಬದುಕನ್ನು ಗ್ರಹಿಸುವುದಕ್ಕೂ ವ್ಯತ್ಯಾಸಗಳಿವೆ ಎಂದು ಬಲವಾಗಿ ನಂಬುತ್ತೇನೆ.

ಕಥೆಗಳು ಹುಟ್ಟುವುದು ಜೀವನಾನುಭವದಿಂದ ಎಂಬುದನ್ನು ಬಹುತೇಕರು ಒಪ್ಪುತ್ತಾರೆ. ನಾನು ಗಂಭೀರವಾಗಿ ಕಥೆಗಳನ್ನು ಬರೆಯಲು ಶುರುಮಾಡಿದ್ದು 2020ರಲ್ಲಿ. ಇದು ನನ್ನ ಮೂರನೇ ಕಥಾಸಂಕಲನ. ನಾನು ಕಥೆ ಬರೆಯಲು ಶುರುಮಾಡಿದಾಗ ಅವುಗಳಿಗೆ ಯಾವ ಮಾನದಂಡಗಳನ್ನಿಟ್ಟುಕೊಂಡು ಬರೆಯಬೇಕು ಎನ್ನುವ ಗೊಂದಲದಲ್ಲಿದ್ದೆ. ಅಂದರೆ, ಇಂಗ್ಲೆಂಡಿನ ನನ್ನ ಸಮಕಾಲೀನ ಅನುಭಗಳನ್ನು ಆಧರಿಸಿಯೇ? ಅದಕ್ಕೂ ಹಿಂದಿನ ಭಾರತದಲ್ಲಿನ ಅನುಭವಗಳ ಮೂಲಕವೇ? ಸೃಜನಶೀಲ ಕಲ್ಪನೆಗಳನ್ನು ಆಧರಿಸಿಯೇ? ಎನ್ನುವ ಪ್ರಶ್ನೆಗಳು ಒಂದೆಡೆಯಾದರೆ, ಯಾವ ಬಗೆಯ ಓದುಗರಿಗಾಗಿ ಎನ್ನುವ ಮತ್ತೊಂದು ಪ್ರಶ್ನೆಯನ್ನು ಎದುರಿಸಿದೆ.

ನನ್ನ ಕಥಾ ಮಾಧ್ಯಮ ಕನ್ನಡ ಭಾಷೆಯದಾದ್ದರಿಂದ, ಕನ್ನಡದ ಓದುಗರಿಗೆ ಇತರೆ ದೇಶಗಳ ಜನರ ಕಥೆಗಳನ್ನು ಬರೆಯುವುದೇ? ಎಷ್ಟು ಜನರು ಅಂತಹ ಕಥೆಗಳಿಗೆ ಸ್ಪಂದಿಸಬಲ್ಲರು? ಅಥವಾ ವಿದೇಶಿ ಜನರ ಜೀವನದ ಕಥೆಗಳನ್ನು ಕನ್ನಡದ ಓದುಗರಿಗೆ ಅವರ ದೃಷ್ಟಿಗೆ ನಿಲುಕುವಂತೆ ಪರಿವರ್ತಿಸಿ ಬರೆಯುವುದೇ? ಅಥವಾ ಬಹುತೇಕ ಅನಿವಾಸಿ ಬರಹಗಾರರು ಮಾಡುವಂತೆ ಅನಿವಾಸಿಗಳ ವಿದೇಶದ ಬದುಕನ್ನು ಭಾರತೀಯ ಪಾತ್ರಗಳ ಮೂಲಕ ಉಣಬಡಿಸುವುದೇ? ಎಂದು ಯೋಚಿಸುತ್ತಿದ್ದೆ.

ಜಯಂತ 'ಕಾಯ್ಕಿಣಿಯವರು ಕಥೆಗಾರರು ಎಲ್ಲೇ ಇದ್ದರು ಅವರ ಪರಿಧಿಗಳಲ್ಲೇ ಕಥೆಗಳನ್ನು ರಚಿಸಬಹುದು' ಎಂಬ ಹೇಳಿಕೆಯ ಹರಿಕಾರರು. ಆದರೆ ಅವರಿದ್ದುದು ಮುಂಬೈನಲ್ಲಿ. ಅಲ್ಲಿಯ ಭಾಷೆ, ಆಚಾರಗಳು ಬದಲಾದರೂ ಸಮಾಜ ಭಾರತೀಯವೇ ಆಗಿದೆ ಎಂಬುದನ್ನು ಕಡೆಗಣಿಸಲಾಗುವುದಿಲ್ಲ.

ಓದುಗರನ್ನು ಸುಲಭವಾಗಿ ತಟ್ಟುವುದೆಂದರೆ, ಅವರಲ್ಲಿ ಈಗಾಗಲೇ ಭದ್ರವಾಗಿ ಬೇರೂರಿರುವ ಸಂವೇದನೆಗಳನ್ನು ಪ್ರಚೋದಿಸುವ ಎಳೆಗಳಿರುವ ಕಥೆಗಳು ಮಾತ್ರ. ಅದಕ್ಕೆ ಹೊರತಾಗಿ ವಿದೇಶೀ ಪಾತ್ರಗಳ ಮೂಲಕ, ವಿದೇಶೀ ಕಥೆಗಳನ್ನು ಕಟ್ಟಿಕೊಡುವ ಕೆಲಸವನ್ನು ಮಾಡಬೇಕೆಂದರೆ ಕಥೆಗಾರ ಬಹಳ ಶಕ್ತನಾಗಿರಬೇಕಾಗುತ್ತದೆ; ಇಲ್ಲವೇ ಖ್ಯಾತನಾಮನಾಗಿರಬೇಕಾಗುತ್ತದೆ. ಅದ್ಯಾವುದೂ ಅಲ್ಲದಿದ್ದರೆ, ಸಣ್ಣ ಓದುಗ ವರ್ಗಕ್ಕೆ ಸೀಮಿತವಾಗಲು ಸಿದ್ಧರಿರಬೇಕಾಗುತ್ತದೆ. ಬೇರೊಂದು ಸಮಾಜದ ಕಥೆಗಳಿಗೆ ಓದುಗರು ಸಮೀಕರಿಸಿಕೊಂಡು ಮಿಡಿಯುವುದು ಒಂದು ಅಂತರದಿಂದ ಮಾತ್ರ ಎಂದು ನನಗನಿಸುತ್ತದೆ.

ನನ್ನ ಕಥೆಗಳು ಮಯೂರ, ಸುಧಾ, ತರಂಗಗಳಲ್ಲಿ ಪ್ರಕಟವಾಗಲು ಶುರುವಾದಾಗ ಅವು ಮುದ್ರಿತ ಮಾಧ್ಯಮದ ಓದುಗರಿಗೆ ಓದಗುವಂತಿರಬೇಕು ಎನ್ನುವುದನ್ನು ಆಯಾ ಮಾಧ್ಯಮಗಳು ಬಯಸುತ್ತವೆ ಎಂದು ಗಮನದಲ್ಲಿಟ್ಟುಕೊಂಡೇ ಬರೆಯಬೇಕಾಯಿತು. ಅಂತಹ ಒಂದು ಪೂರ್ವಾಗ್ರಹ ನನಗಿರಬೇಕಾದ ಅಗತ್ಯ ಇದೆಯೋ ಇಲ್ಲವೋ ಎಂದು ನನಗೆ ತಿಳಿದಿಲ್ಲ. ಆದರೆ, ಸುಧಾ ವಾರಪತ್ರಿಕೆ ಹೊಸ ಬಗೆಯ ಕಥೆಗಳಿಗೂ ಅವಕಾಶ ನೀಡಿತು. ಆದರೆ, ಪದ ಮಿತಿಗಳ ಚೌಕಟ್ಟು ಕೂಡ ಒಮ್ಮೊಮ್ಮೆ ಸೃಜನಶೀಲತೆಗೆ ಮಾರಕವಾಗಬಹುದು. ಈ ಬಗೆಯ ಎಲ್ಲ ಕಟ್ಟಳೆಗಳನ್ನು ಮೀರಿ ಬರೆಯಬೇಕೆಂದರೆ ಅದು ಪುಸ್ತಕ ಮಾತ್ರವೇ ಎಂದು ಕೂಡ ಮನದಟ್ಟಾಗತೊಡಗಿತು. ಆದರೆ ಎಲ್ಲೋ, ಯಾವುದೋ ಒಂದು ಆಳವಾದ ಸೃಜನಶೀಲ ಅಸಮಾಧಾನ ನನ್ನಲ್ಲಿದೆ ಎನ್ನಬಹುದು. ಆ ಬಗ್ಗೆ ನನಗೆ ಚಿಂತೆಯಿಲ್ಲ. ಅದೊಂದು ದಿನ, ನನ್ನಿಂದ ಇನ್ನೇನನ್ನೋ ಬರೆಸಬಹುದು ಎಂದು ಕಾಯುತ್ತಿದ್ದೇನೆ.

ಕಥೆ ಬರೆಯುವಾಗ ಎಲ್ಲಕ್ಕಿಂತ ಹೆಚ್ಚಾಗಿ ನನಗೊಂದು ವೈಚಾರಿಕ ಎಳೆ ಬೇಕಾಗುತ್ತದೆ. ಅದರ ಸುತ್ತ ಕಥೆ ಹೆಣೆದುಕೊಳ್ಳುತ್ತದೆ. ಮಧ್ಯಮ ವರ್ಗದ ಬವಣೆಗಳೇ ನನ್ನ ಕಥೆಗಳ ಭೂಮಿಕೆ, ಮೊದಲಿಗೆ ಬರೆದದ್ದು ಜೀವನಾನುಭವದ ಕಥನಗಳನ್ನೇ, ಅದರಲ್ಲಿ ಸಹಜವಾಗೇ ಹಲವಾರು ದೇಸೀ ಮತ್ತು ವಿದೇಶಿ ನೆಲದ ಕಥೆಗಳಿವೆ. ಔದ್ಯೋಗಿಕ ಜಗತ್ತಿನ ಸಾಮಾಜಿಕ ತಲ್ಲಣಗಳು ಕೂಡ ನನ್ನ ಕಥೆಗಳಲ್ಲಿವೆ. ಕಥೆಯನ್ನು ಹೇಳುವ ಒಂದು ಶುದ್ಧ ಪ್ರೀತಿಯಿಂದ, ಕಥನ ಕಲೆಯನ್ನಲ್ಲದೆ ಇನ್ನೇನನ್ನೂ ಬಿಂಬಿಸದ, ತರ್ಕಗಳ ಸಿಕ್ಕಿಗೆ ಸಿಲುಕದ ಕಥೆಗಳನ್ನು ಕೂಡ ಬರೆದಿದ್ದೇನೆ.

ನಮ್ಮ ವೃತ್ತಿಪರ ಜೀವನದಲ್ಲಿ ಜನರೊಡನೆ ಬಹಳ ಬೆರೆಯುತ್ತೇವೆ. ಅದೇ ಬದುಕೆಂದಾಗ ಆ ಬದುಕು, ಕಥೆಗಳಲ್ಲೂ ಹಣಕಿ ಹಾಕುತ್ತದೆ. ಅದರಂತೆಯೇ ಕೆಲವೊಮ್ಮೆ ಸಾಹಿತ್ಯ ರಚನೆ, ವೃತ್ತಿಯ ಜಂಜಡಗಳಿಂದ ಬಿಡುಗಡೆ ಕೊಡಿಸಿ ಮತ್ತೊಂದು ಲೋಕಕ್ಕೆ ಕರೆದೊಯ್ದು ಮನಸ್ಸನ್ನು ನಿರಾಳಮಾಡುತ್ತವೆ. ಒಟ್ಟಿನಲ್ಲಿ ಕಥೆ ಬರೆಯುವ ಹಲವು ಮಧುರ ನರಳಿಕೆಗಳಲ್ಲಿ ನಾನು ಖುಷಿಯನ್ನು ಕಾಣುತ್ತಿದ್ದೇನೆ.

ಇನ್ನು ಈ ಪುಸ್ತಕದ ಶೀರ್ಷಿಕೆಯ 'ನಂಬಿಕೆಯೆಂಬ ಗಾಳಿಕೊಡೆ (ಪ್ಯಾರಾಶೂಟ್)' ಕಥೆಯ ಒಳಮಿಡಿತ ಹಲವು ಇತರೆ ಕಥೆಗಳಿಗೆ ಮತ್ತು ಜೀವನಕ್ಕೆ ಅನ್ವಯವಾಗುವ ವಿಚಾರ. ಬದುಕು ನಂಬಿಕೆಗಳನ್ನು ಅವಲಂಬಿಸಿದ ವಿಚಾರ. ಅವುಗಳ ಗಾಳಿಕೊಡೆಯನ್ನು ಕಟ್ಟಿಕೊಂಡೇ ನಾವು ಜೀವನ ನಡೆಸುತ್ತೇವೆ. ಜೀವನದ ಪ್ರತಿ ಜಿಗಿತದ ಹಿಂದೆ 'ಗುರಿಯೆಡೆಗೆ ಸಾಗುತ್ತೇವೆ, 'ಗುರಿಯನ್ನು ಸುರಕ್ಷಿತವಾಗಿ ತಲುಪುತ್ತೇವೆ' ಎನ್ನುವ ನಂಬಿಕೆಯಿರುತ್ತದೆ. ಕೆಲವರು ಗುರಿ ಮುಟ್ಟಬಹುದು. ಇನ್ನು ಕೆಲವರು ನೆಲ ಕಚ್ಚಬಹುದು. ಮತ್ತೆ ಕೆಲವರು ಗಾಳಿ ತೂರಿದೆಡೆ ನಿಯಂತ್ರಣ ತಪ್ಪಿ ತೇಲುತ್ತಿರಬಹುದು, ಹಲವರು ತಪ್ಪಿದ ಗುರಿಯನ್ನು ಮರೆತು ಗಾಳಿಯ ದಿಕ್ಕಿನಲ್ಲೆ ಸಂಧಾನಗಳನ್ನು ಮಾಡಿಕೊಂಡು ನೆಮ್ಮದಿಯನ್ನು ಕಾಣಲು ಯತ್ನಿಸಬಹುದು. ಮತ್ತೆ ಕೆಲವರು ಯಾವುದೋ ಹಿಂಜರಿಕೆಯಿಂದ, ಜಿಗಿಯದೇ ಇರಬಹುದು. ಗುರಿ ತಲುಪುವುದಿಲ್ಲ ಎಂದು ಗೊತ್ತಿದ್ದರು ಕೆಲವರು ಜಿಗಿದು, ಪ್ರಯತ್ನ ಪಟ್ಟೆವೆಂದು ಸಮಾಧಾನ ಪಟ್ಟುಕೊಳ್ಳಬಹುದು. ಒಟ್ಟಿನಲ್ಲಿ ನಂಬಿಕೆಗಳ ಬೆನ್ನೇರಿ ಸಾಗುವ ಬದುಕಿನಲ್ಲಿ ಏನೂ ಆಗಬಹುದು.

ನಂಬಿಕೆಗಳೇ ಜೀವನಕ್ಕೆ ಆಧಾರ. ಬದುಕೇ ಒಂದು ನಂಬಿಕೆ!
" ದೇವರು, ದೆಯ್ಯ, ಮಾಟ-ಮಂತ್ರ, ಸಂಬಂಧಗಳು, ಸಹಚರ್ಯೆ, ಖುಷಿ, ಖಾಲಿತನ, ಪ್ರೀತಿ, ನಿರಾಸೆ, ನಿರಾಳತೆ, ಭರವಸೆ ಎಲ್ಲವೂ ನಂಬಿಕೆಗಳ ಆಧಾರದ ಮೇಲೆಯೇ ನಡೆಯುವುದು. ನಂಬಿಕೆಯೆನ್ನುವುದು ಅತ್ಯಂತ ಪ್ರಬಲ ನಶೆಯೂ ಹೌದು. ಕೆಲವೊಮ್ಮೆ ದೌರ್ಬಲ್ಯವೂ ಆಗಿಬಿಡಬಹುದು. ನಮ್ಮ ಸರ್ವ ಶಕ್ತಿ ಅಡಗಿರುವುದು ನಮ್ಮ ನಂಬಿಕೆಗಳಲ್ಲೇ.

ಯಾವ ನಂಬಿಕೆಗಳು? ಯಾರ ಜೀವನ? ಯಾವುದು ನಿಜ, ಯಾವುದು ಭ್ರಮೆ?

ನಮ್ಮ ಸಮಾಜದ ಕೆಲವು ನಂಬಿಕೆಗಳು, ಸಾಮಾಜಿಕ ಕಳಕಳಿಗಳು, ಬದುಕಿನ ಹಲವು ಭಾಷೆಗಳು, ಸಂಬಂಧಗಳ ಕ್ಲೀಷೆಗಳು, ಭವಿತವ್ಯದ ಸಂಘರ್ಷಗಳು ಇವನ್ನೆಲ್ಲ ಕಟ್ಟಿಕೊಡುವ ಕಥೆಗಳ ಸಂಕಲನವೇ 'ನಂಬಿಕೆಯೆಂಬ ಗಾಳಿಕೊಡೆ.'

MORE FEATURES

Nigooda; ಕಾದಂಬರಿಗೆ `ನಿಗೂಢ' ಅನ್ನೋ ಶೀರ್ಷಿಕೆ ನೀಡಿದ ಬಗ್ಗೆ ನನ್ನ ತಕರಾರಿದೆ

21-01-2025 ಬೆಂಗಳೂರು

"ಬರಹಗಾರ ತಾನು ಎದ್ದು ಕಾಣೋದಕ್ಕಿಂತ ಹಿಂದಿನವರು ಸೃಷ್ಟಿಸಿದ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಬರೆಯುವುದೇ ಮುಖ...

ವಡ್ಡಗೆರೆ ನಾಗರಾಜಯ್ಯಗೆ 2024ನೇ ಸಾಲಿನ 'ಕುವೆ೦ಪು ಅನಿಕೇತನ' ಪ್ರಶಸ್ತಿ

21-01-2025 ಬೆಂಗಳೂರು

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿ ನೀಡುವ 2024ನೇ ಸಾಲಿನ ವಿವಿಧ ಪ್ರಶಸ್ತಿಗಳ ಪಟ್ಟಿ ಪ್ರಕಟವಾಗಿದೆ. 'ಕುವೆಂಪು ...

Ishtukaala ottigiddu; ಈಗ ನನ್ನ ಕಣ್ಣು ಶುಭ್ರವಾಗಿದೆ, ದಣಿವು ಆರಿ ಹೋಗಿದೆ

21-01-2025 ಬೆಂಗಳೂರು

"ಈ ಕಾದಂಬರಿಯ ಪ್ರತಿ ಪಾತ್ರಗಳು ನನ್ನೊಳಗಿನ ಮನುಷ್ಯಳನ್ನು ಹೆಚ್ಚು ಹೆಚ್ಚು ತಿದ್ದಿದೆ, ತೀಡಿದೆ, ಪ್ರಶ್ನೆ ಮಾಡುವಂ...