ಕರ್ನಾಟಕದಲ್ಲಿ ಮೌರ್ಯ ಚಕ್ರಚರ್ತಿ ಅಶೋಕನ ಆಳ್ವಿಕೆಯ ನಗರಗಳು


ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ (ICHR) ದಕ್ಷಿಣ ಪ್ರಾದೇಶಿಕ ಕೇಂದ್ರದ ಉಪ-ನಿರ್ದೇಶಕರಾಗಿರುವ ಡಾ. ಶಿವಶರಣ ಅರುಣಿ ಅವರು ಪ್ರಾಗೈತಿಹಾಸಿಕ ಇತಿಹಾಸ ಮತ್ತು ಕಲಾ ಇತಿಹಾಸದಲ್ಲಿ ಆಸಕ್ತರು. ಕರ್ನಾಟಕದಲ್ಲಿ ನಗರೀಕರಣ ಪ್ರಕ್ರಿಯೆಯ ಸ್ವರೂಪ ಹಾಗೂ ನಗರಗಳು ರೂಪುಗೊಂಡ ಬಗೆಯನ್ನು ವಿವರಿಸುವ ಈ ಸರಣಿಯ ಈ ಬರೆಹದಲ್ಲಿ ಮೌರ್ಯ ಅಶೋಕನ ಕಾಲದ ಕರ್ನಾಟಕದ ನಗರಗಳ ಸ್ವರೂಪದ ಬಗ್ಗೆ ಚರ್ಚಿಸಿದ್ದಾರೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಈ ವಿಶೇಷ ಬರವಣಿಗೆ ನಿಮ್ಮ ಓದಿಗಾಗಿ..

ಕರ್ನಾಟಕದಲ್ಲಿ ನಗರೀಕರಣದ ಪ್ರಕ್ರಿಯೆ ಆರಂಭ ಕಾಲವನ್ನು ಗುರುತಿಸುವುದು ತುಸು ಕಷ್ಟದ ಕೆಲಸ. ಮಹಾರಾಷ್ಟ್ರದ ಗೋದಾವರಿ ನದಿಯಿಂದಾಚೆ ಗಂಗಾ ನದಿ ಬಯಲು ಪ್ರದೇಶದವರೆಗೂ ಮೌರ್ಯರ ಪೂರ್ವ ಕಾಲಾವಧಿಯಲ್ಲಿಯೇ ಅಂದರೆ ಕಿ.ಪೂ. 5ನೇ ಶತಮಾನದಲ್ಲಿಯೇ ನಗರಗಳು ನಿರ್ಮಾಣ ಪ್ರಕ್ರಿಯೆಯ ಆರಂಭವನ್ನು ಗುರುತಿಸುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ಕರ್ನಾಟಕದಲ್ಲಿ ಮೌರ್ಯರ ಆಳ್ವಿಕೆಯ ಕಾಲದವರೆಗೂ ನಗರಗಳು ನಿರ್ಮಿಸುವ ಪ್ರಕ್ರಿಯೆಯನ್ನು ಗುರುತಿಸಲಾಗಿಲ್ಲ. ಕರ್ನಾಟಕದಲ್ಲಿ ಮೌರ್ಯರ ಕಾಲದವರೆಗಿನ (ಕಿ.ಪೂ. 3ನೇ ಶತಮಾನ) ಪ್ರಾಕ್ತನ ಅವಶೇಷಗಳನ್ನುಇತಿಹಾಸ-ಪೂರ್ವ ಕಾಲವೆಂದು ಪರಿಗಣಿಸಿ ಅವುಗಳನ್ನು ಸ್ಥಳೀಯ ಬುಡಕಟ್ಟು ಜನಾಂಗದವರು ಕಟ್ಟಿಕೊಂಡಿದ್ದ ದೇಸಿ ಹಿನ್ನೆಲೆಯ ಸಂಸ್ಕೃತಿಗಳೆಂದು ಹಾಗೂ ಅವರು ನಗರ ಕೇಂದ್ರಿತ ವ್ಯವಸ್ಥೆಯನ್ನು ರೂಪಿಸಿಕೊಂಡಿರದ ಸಂಸ್ಕೃತಿಯೆಂದು ಗುರುತಿಸಲಾಗುತ್ತದೆ. ಅಶೋಕ ಚಕ್ರವರ್ತಿಯು ದಕ್ಷಿಣ ಭಾರತದಲ್ಲಿ ಹಾಕಿಸಿದ ಶಿಲಾಶಾಸನಗಳು ಮೂಲತಃ ಇಲ್ಲಿಯ ಸ್ಥಳೀಯ ಸಂಸ್ಕೃತಿಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಸ್ಥಳೀಯರೊಂದಿಗೆ ಸಂವಾದಿಸಿದ್ದಾನೆಂದು ವಿದ್ವಾಂಸರ ಅಭಿಪ್ರಾಯ. ದಕ್ಷಿಣದಲ್ಲಿ ಅಶೋಕನ ಸಮಕಾಲೀನ ಜನಾಂಗದ ಜನರು ದೊರೆಯುವ ಕಬ್ಬಿಣ ಅದಿರಿನಿಂದ ಗುಣಮಟ್ಟದ ಕಬ್ಬಿಣ ಆಯುಧಗಳು, ಕೃಷಿ ಉಪಕರಣಗಳನ್ನು ತಯಾರಿಸುತ್ತಿದ್ದರೆಂದು ಅಲ್ಲದೇ ಇವರ ಲೋಹ ತಯಾರಿಕೆಯಲ್ಲಿ ನಿಪುಣತೆ ಪಡೆದಿದ್ದರೆಂದು ಹೇಳಲಾಗುತ್ತದೆ. ಮೌರ್ಯ ಸಾಮ್ರಾಜ್ಯದ ವಿಸ್ತಾರತೆಯು ಬಲವಾದ ಸೈನ್ಯಪಡೆ ಮತ್ತು ಅವರು ಬಳಸುವ ಆಯುಧಗಳ ಮೇಲೆ ಅವಲಂಬಿತವಾಗಿತ್ತು. ಮೌರ್ಯ ಸಾಮ್ರಾಜ್ಯಕ್ಕೆ ಕಬ್ಬಿಣದ ಉತ್ತಮ ಗುಣಮಟ್ಟದ ಆಯಧಗಳ ಪೂರೈಕೆಯನ್ನು ದಕ್ಷಿಣದ ಹಗರಿ ನದಿಯ ಕಣಿವೆಯಾದ ಬಳ್ಳಾರಿ- ಚಿತ್ರದುರ್ಗ ಪ್ರದೇಶಗಳಿಂದ ಆಗುತ್ತಿತ್ತೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕಾಗಿ ತುಂಗಾಭದ್ರ ಒಳಗೊಂಡಂತೆ, ಹಗರಿ (ವೇದಾವತಿ) ನದಿಯ ಸೀಮೆಯವರೆಗೂ ಮೌರ್ಯ ಸಾಮ್ರಾಜ್ಯ ತನ್ನ ಗಡಿಯನ್ನು ಗುರುತಿಸಿಕೊಂಡಿತ್ತು.

ಕರ್ನಾಟಕದಲ್ಲಿ ಮೌರ್ಯರ ಸಮಕಾಲೀನ ಜನಾಂಗದ ಬಗ್ಗೆ ಅವಲೋಕಿಸಿದರೆ ನಿಕರವಾದ ಮಾಹಿತಿಗಳು ದೊರೆಯುವುದಿಲ್ಲ. ಬ್ರಹ್ಮಗಿರಿ, ಮಸ್ಕಿ, ಮುಂತಾದೆಡೆಗಳಲ್ಲಿ ಅಶೋಕನ ಶಾಸನಗಳು ದೊರೆತ ಸ್ಥಳಗಳಲ್ಲಿ ಕಬ್ಬಿಣಯುಗ ಕಾಲವೆಂದು ಗುರುತಿಸಲ್ಪಡುವ ಬೃಹತ್ ಶಿಲಾ-ಸಮಾಧಿ ಸಂಸ್ಕೃತಿಯ ಅವಶೇಷಗಳಾದ ಶವದ ಕುಣಿಗಳು ಅಥವಾ ಸಮಾಧಿಗಳು ದೊರೆಯುತ್ತವೆ. ಶವ ಸಂಸ್ಕಾರ ಪದ್ದತಿಯ ಭಾಗವಾಗಿ ಶವಗಳ ಕುಣಿಗಳಲ್ಲಿ ಮೃತನಾದವರಿಗೆ ಮುಂದಿನ ಜನ್ಮದಲ್ಲಿ ಉಪಯೋಗವಾಗಲಿ ಎಂಬ ಕಲ್ಪನೆಯಾಗಿ ಬಳಸಲು ಮಡಿಕೆಗಳು ಮತ್ತು ವಿವಿಧ ಉಪಕರಣಗಳನ್ನು ಪಕ್ಕದಲ್ಲಿಟ್ಟು ಹೂಳುತ್ತಿದ್ದರು. ಈ ಜನಾಂಗದವರು ಬೆಟ್ಟ-ಕಣಿವೆಗಳ ತಪ್ಪಲು ಪ್ರದೇಶಗಳಲ್ಲಿ ಗುಂಪಾಗಿ ನೆಲೆಯೂರಿ ವಾಸಿಸುತ್ತಿದ್ದರು ಮತ್ತು ಕಬ್ಬಿಣ ಒಳಗೊಂಡಂತೆ ವಿವಿಧ ಲೋಹ ತಯಾರಿಕೆಯಲ್ಲಿ ಪರಿಣಿತರಾಗಿದ್ದರು ಎಂಬುದು ದೊರೆಯುವ ಅವರ ಅವಶೇಷಗಳಿಂದ ತಿಳಿದುಬರುತ್ತದೆ. ಈ ಜನಾಂಗದವರನ್ನು ಉದ್ದೇಶಿಸಿಯೇ ಅಶೋಕನು ತನ್ನ ಅನುಭಾವದ ತತ್ವಗಳನ್ನು ತಿಳಿಗೊಳಿಸಿ ಶಿಲಾಶಾಸನಗಳ ಮೂಲಕ ವ್ಯಕ್ತಪಡಿಸಿದ್ದಾನೆಂದು ವಿದ್ವಾಂಸರ ಅಭಿಪ್ರಾಯ. ಲಿಪಿ ಮತ್ತು ಭಾಷೆಗಳು ನಗರೀಕರಣ ಪ್ರಕ್ರಿಯೆಗೆ ಒಂದು ಮುಖ್ಯ ಕಾರಣವೆಂದು ಗುರುತಿಸಲಾಗುತ್ತದೆ. ಬೆಟ್ಟಗಳ ಕಣಿವೆಗಳಲ್ಲಿ ದೇಸಿ ಉದ್ಯಮಗಳಲ್ಲಿ ತೊಡಗಿಕೊಂಡಿದ್ದ ಜನಾಂಗದವರಿಗೆ ಅಶೋಕನು ಒದಗಿಸಿದ ಲಿಪಿ ಮತ್ತು ವಾಣಿಜ್ಯ ಸೌಕರ್ಯಗಳಿಂದಾಗಿ ಈ ಪ್ರದೇಶಗಳಲ್ಲಿ ನಗರೀಕರಣ ಪ್ರಕ್ರಿಯೆ ಚಿಗುರಲು ಪ್ರಾರಂಭಿಸಿತು ಎಂದು ಸ್ಪಷ್ಟವಾಗಿ ಹೇಳಬಹುದು. ಈ ಹಿನ್ನೆಲೆಯಲ್ಲಿ ಬ್ರಹ್ಮಗಿರಿಯ ಬಂಡೆಯ ಮೇಲಿನ ಕಿ.ಪೂ. 3ನೇ ಶತಮಾನದ ಅಶೋಕನ ಶಾಸನದಲ್ಲಿ ಸುವರ್ಣಗಿರಿಯಿಂದ ಆರ್ಯಪುತ್ರನ ಮತ್ತು ಮಹಾಮಾತ್ರರ ವಚನಾನುಸಾರ ಇಸಿಲದ ಮಹಾಮಾತ್ರರಿಗೆ ಆರೋಗ್ಯವನ್ನು ಹೇಳುವುದು ಮತ್ತು ಹೀಗೆಂದು ತಿಳಿಸುವುದು ಎಂಬ ವಿಷಯದ ಪ್ರಸ್ತಾಪ ಮುಖ್ಯವೆನಿಸುತ್ತದೆ. ಇದರಲ್ಲಿ ಇಸಿಲ ಮತ್ತು ಸುವರ್ಣಗಿರಿ ಎಂಬ ಎರಡು ಮುಖ್ಯ ಪಟ್ಟಣಗಳು ಉಲ್ಲೇಖವಾಗಿವೆ. ದಕ್ಷಿಣದಲ್ಲಿ ಮುಖ್ಯವಾಗಿ ಕರ್ನಾಟಕದಲ್ಲಿ ಮೌರ್ಯರ ಕಾಲದಲ್ಲಿ ಈ ಎರಡು ನಗರಗಳು ಅಥವಾ ಪಟ್ಟಣಗಳು ಇದ್ದವೆಂದು ಗುರುತಿಸಬಹುದು.

ಸುವರ್ಣಗಿರಿಯಲ್ಲಿ ಮೌರ್ಯರ ಪ್ರತಿನಿಧಿ ಆರ್ಯಪುತ್ರರು ನೆಲೆಸುತ್ತಿದ್ದರು ಅವರ ಆಧೀನದಲ್ಲಿ ಮಹಾಮಾತ್ರರು ಇಸಿಲ ಪಟ್ಟಣದಲ್ಲಿರುತ್ತಿದ್ದರೆಂದು ತಿಳಿದು ಬರುತ್ತದೆ. ಸುವರ್ಣಗಿರಿಯು ಇಸಿಲ ಪಟ್ಟಣಕಿಂತಲೂ ಪ್ರಮುಖವೂ ಮತ್ತು ವಿಸ್ತಾರತೆಯಲ್ಲಿ ದೊಡ್ಡದಾಗಿತ್ತೆಂದು ಶಾಸನದ ಉಲ್ಲೇಖನದಿಂದ ವ್ಯಕ್ತವಾಗುತ್ತದೆ. ಆದರೆ ಈ ಎರಡು ನಗರಗಳ ಸ್ವರೂಪ ಮತ್ತು ನಗರ ವ್ಯವಸ್ಥೆ ಹಾಗೂ ಅವುಗಳ ವಿಶೇಷತೆಗಳು ಯಾವವು ಎಂಬುದು ಶಾಸನಗಳಿಂದ ತಿಳಿಯುವುದಿಲ್ಲ. ಪ್ರಸ್ತುತ ಲೇಖನದಲ್ಲಿ ಮೌರ್ಯರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ನಗರಗಳ ಸ್ವರೂಪ, ನಗರಗಳ ನಿರ್ಮಾಣದ ವಿಧಾನ ಮತ್ತು ಅವುಗಳ ವಿಶೇಷ ಗುರುತಿಸುವ ಪ್ರಯತ್ನವಿದು.

ಮೌರ್ಯರ ಪಟ್ಟಣಗಳ ಗುರುತಿಸುವಿಕೆ :
ಸುವರ್ಣಗಿರಿ ಮತ್ತು ಇಸಿಲ ಹೊರತಾಗಿ ಮೌರ್ಯರ ಕಾಲದ ಪಟ್ಟಣ ಅಥವಾ ನಗರಗಳು ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದ್ದವು ಎಂಬುದು ಸಮಕಾಲೀನ ಸಾಹಿತ್ಯ ಮಾಹಿತಿ ಒದಗಿಸುತ್ತವೆ. ಮುಖ್ಯವಾಗಿ ಶ್ರೀಲಂಕಾದ ಬೌದ್ಧ ಸಾಹಿತ್ಯಕ ಗ್ರಂಥಗಳಾದ ಮಹಾವಂಶ ಮತ್ತು ದೀಪವಂಶ ಕೃತಿಗಳಲ್ಲಿ ವೈಜಯಂತಿ ಎಂದು ಕರೆಯಲಾಗುತ್ತಿದ್ದ ಬನವಾಸಿಯ ಉಲ್ಲೇಖವಿದೆ. ಅದರಂತೆ ಮೌರ್ಯ ಅರಸ ಚಂದ್ರಗುಪ್ತ ಮೌರ್ಯ ಜೈನ ಮುನಿಗಳ ಜೊತೆಗೂಡಿ ಮಗಧ ರಾಜ್ಯವನ್ನು ತೊರೆದು ಜೈನ ವ್ರತವನ್ನು ಕೈಕೊಂಡು ದಕ್ಷಿಣದಲ್ಲಿಯ ಶ್ರವಣಬೆಳಗೊಳಕ್ಕೆ ಬಂದು ನೆಲೆಯೂರಿದನು ಎಂದು ಐತಿಹ್ಯ ಮತ್ತು ಕೆಲವು ಚಾರಿತ್ರಿಕ ದಾಖಲೆಗಳು ಹೇಳುತ್ತವೆ. ಈ ಎಲ್ಲಾ ಸ್ಥಳಗಳ ಉಲ್ಲೇಖಗಳನ್ನು ಗಣನೆಗೆ ತೆಗೆದುಕೊಂಡು ಮೌರ್ಯರ ಆಳ್ವಿಕೆಯ ನಗರಗಳ ನಿರ್ಮಾಣ ವ್ಯವಸ್ಥೆ ಮತ್ತು ಅವುಗಳ ಗುರುತಿಸುವಿಕೆ ಮಾಡಲಾಗಿದೆ.
ಅಶೋಕನ ಶಿಲಾಶಾಸನಗಳು:
ಕರ್ನಾಟಕ ಮತ್ತು ಆಂಧ್ರದ ಕರ್ನೂಲ ಜಿಲ್ಲೆಯಲ್ಲಿ ಎರ್ರಗುಡಿ ಮತ್ತು ರಾಜಲು ಮಂದಗಿರಿ ಎಂಬ ಸ್ಥಳಗಳಲ್ಲಿ ಅಶೋಕನ ಶಿಲಾಶಾಸನಗಳು ದೊರಕಿವೆ. ಮೌರ್ಯರ ಆಳ್ವಿಕೆಯನ್ನು ಸೂಚಿಸುವ ಈ ಶಾಸನಗಳು ಅಂದಿನ ನಗರಗಳನ್ನು ಗುರುತಿಸಲು ಬಹು ಮುಖ್ಯಪಾತ್ರ ವಹಿಸುತ್ತವೆ. ಈ ಶಾಸನಗಳನ್ನು ಕ್ರಿ.ಪೂ. 258ರ ಅವಧಿಯಲ್ಲಿ ಅಶೋಕನು ತನ್ನ ಆಳ್ವಿಕೆಯ 11ನೇ ವರ್ಷದಲ್ಲಿ ಹಾಕಿಸಿದನೆಂದು ಹೇಳಲಾಗುತ್ತದೆ. ಕರ್ನಾಟಕದಲ್ಲಿ ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಶಾಸನಗಳು ದೊರೆತಿವೆ. ಚಿತ್ರದುರ್ಗ ಜಿಲ್ಲೆಯ ಸಿದ್ದಾಪುರ, ಬ್ರಹ್ಮಗಿರಿ, ಜಟ್ಟಿಂಗ-ರಾಮೇಶ್ವರ ಗುಡ್ಡಗಳಲ್ಲಿ; ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ; ಕೊಪ್ಪಳದ ಹತ್ತಿರದ ಗವಿಮಠ ಮತ್ತು ಪಾಲ್ಕಿಗುಂಡು ಬೆಟ್ಟಗಳಲ್ಲಿ ಅಲ್ಲದೇ, ಬಳ್ಳಾರಿಯ ಜಿಲ್ಲೆಯ ನಿಟ್ಟೂರು ಮತ್ತು ಉದೇಗೊಳಂ ಬೆಟ್ಟಗಳಲ್ಲಿ ಹಾಗೂ ಕಲಬುರ್ಗಿ ಜಿಲ್ಲೆಯ ಸನ್ನತಿಯಲ್ಲಿ ಒಟ್ಟು 17 ಶಿಲಾಶಾಸನಗಳು ದೊರೆಕಿವೆ. ಇವುಗಳಲ್ಲಿ ಸನ್ನತಿಯ ಶಾಸನವನ್ನು ಹೊರತುಪಡಿಸಿ ಉಳಿದವುಗಳು ಬೆಟ್ಟಗಳ ಬಂಡೆಗಳ ಮೇಲೆ ಬರೆಯಲಾಗಿದೆ. ಸನ್ನತಿಯ ಶಾಸನವು ಗ್ರಾನೈಟ್ ಶಿಲೆಯ ಫಲಕದ ಮೇಲೆ ಬರೆಯಲಾಗಿದೆ. ಈ ಶಾಸನಗಳಲ್ಲದೆ ಬೆರೆಡೆ ದೊರೆತ ಶಾಸನಗಳಲ್ಲಿಯೂ ದಕ್ಷಿಣದಲ್ಲಿದ್ದ ಪಟ್ಟಣಗಳ ಉಲ್ಲೇಖಗಳಿದ್ದವು ಅವುಗಳನ್ನು ಗಣನೆಗೆ ತೆಗೆದುಕೊಂಡು ಮೌರ್ಯರ ಕಾಲದ ನಗರಗಳನ್ನು ಗುರುತಿಸಬಹುದಾಗಿದೆ.

ಇಸಿಲ ಸ್ಥಳದ ಹೆಸರಿನ ಬಗ್ಗೆ ಅನೇಕ ವಿದ್ವಾಂಸರು ಚರ್ಚೆಯನ್ನು ಮಾಡಿದ್ದಾರೆ. ದ್ರಾವಿಡ ಅಥವಾ ಆರ್ಯೇತರ ಪದವೆಂದು ಅದು ಕೋಟೆಯನ್ನು ಸೂಚಿಸುತ್ತದೆ ಎಂದು ಡಿ.ಎಲ್. ನರಸಿಂಹಾಚಾರ್ ಅವರು ಅಭಿಪ್ರಾಯ ಪಟ್ಟಿದ್ದಾರಲ್ಲದೆ, ಅದು ಪ್ರಾಯಶಃ ಕನ್ನಡ ಪದವಿರುಬಹುದಾದ ಸಾಧ್ಯತೆಯನ್ನು ಅವರು ಹೇಳಿದ್ದಾರೆ. ಪ್ರೊ|| ಎಸ್. ಶೆಟ್ಟರ್ ಅವರು ಕೂಡ ಸ್ಥಳೀಯ ಪದವೆಂದು ಗುರುತಿಸಿದ್ದಾರೆ. ಆದರೆ ಶಾಸನದಲ್ಲಿ ಉಲ್ಲೇಖಿತವಾದ ಸ್ಥಳಕ್ಕೂ ಅಲ್ಲಿ ದೊರೆಯು ಮೌರ್ಯರ ಕಾಲದ ಪ್ರಾಕ್ತನ ಅವಶೇಷಗಳಿಗೂ ಸಂಬಂಧಗಳೇನು ಎಂಬುದರ ಆಧಾರದ ಮೇಲೆ ಮೌರ್ಯರ ಕಾಲದ ನಗರಗಳ ಸ್ವರೂಪಗಳನ್ನು ಕಂಡುಕೊಳ್ಳಬಹುದಾಗಿದೆ ಎಂಬುದು ಪ್ರೊ|| ಲಕ್ಷ್ಮಣ ತೆಲಗಾವಿ ಅವರ ಅಭಿಪ್ರಾಯ. ಈ ಹಿನ್ನೆಲೆಯಿಂದ ಬ್ರಹ್ಮಗಿರಿಯ ಬೆಟ್ಟದಲ್ಲಿ ದೊರೆತ ಶಾಸನದ ಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದ ಇಸಿಲ ಪಟ್ಟಣದ ಬಗ್ಗೆ ಅವಲೋಕಿಸುವುದು ಮುಖ್ಯವಾಗಿದೆ.

ಅಶೋಕನ ಶಾಸನದಲ್ಲಿ ಉಲ್ಲೇಖವಾದ ಇನ್ನೊಂದು ಪಟ್ಟಣವೆಂದರೆ ಸುವರ್ಣಗಿರಿ. ಇಲ್ಲಿ ಮೌರ್ಯ ಸಾಮ್ರಾಜ್ಯದ ಆರ್ಯಪುತ್ರರು ಅಂದರೆ ಪ್ರಾಂತ್ಯದ ಆಧಿಕಾರಿಗಳು ನೆಲೆಸುತ್ತಿದ್ದರು. ಇವರು ಮಹಾಮಾತ್ರರಿಗಿಂತಲೂ ಉನ್ನತ ಶ್ರೇಣಿಯವರು. ಅಂದರೆ ಸುವರ್ಣಗಿರಿಯು ಆಯಕಟ್ಟಿನ ಸ್ಥಳವಾಗಿದ್ದು ಪ್ರಾಂತ್ಯದ ಆಡಳಿತ ಕೇಂದ್ರವಾಗಿತ್ತು. ಉಲ್ಲೇಖವಾದ ಸುವರ್ಣಗಿರಿಯ ಸ್ಥಳದ ಬಗ್ಗೆಯೂ ಹಲವಾರು ವಾದಗಳಿವೆ. ರಾಯಚೂರು ಜಿಲ್ಲೆಯ ಕನಕಗಿರಿ ಎಂಬ ಸ್ಥಳವು (ಸುವರ್ಣ= ಚಿನ್ನ ಅಥವಾ ಕನಕ) ಎಂದು ಕೆಲವರ ವಾದ. ಚಿನ್ನದ ನಿಕ್ಷೇಪಗಳು ಇರುವ ಮತ್ತು ಅಶೋಕನ ಹೆಸರು ಉಲ್ಲೇಖವಾಗಿರುವ ಮಸ್ಕಿ ಊರು ಮೌರ್ಯರ ಕಾಲದ ಸುವರ್ಣಗಿರಿಯೆಂದು ಹೈದರಾಬಾದ ರಾಜ್ಯದ ಅಂದಿನ ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಗುಲಾಮ್ ಯಜ್ದಾನಿಯವರು ಗುರುತಿಸುತ್ತಾರೆ. ಆದರೆ ಸಿ. ಆರ್. ಕೃಷ್ಣಮಾಚಾರ್ಯರು ಅಶೋಕನ ಮುಖ್ಯ ಮತ್ತು ಲಘು ಶಿಲಾಶಾಸನಗಳು ಒಂದೆಡೆ ದೊರಕಿದ ಆಂಧ್ರದ ಕರ್ನೂಲ ಜಿಲ್ಲೆಯ ಎರ್ರಗುಡಿ ಅಥವಾ ಅದರ ಬಳಿಯಲ್ಲಿರುವ ಜೋನ್ನಗಿರಿ ಬೆಟ್ಟದ ಪರಿಸರವೇ ಅಶೋಕನು ಸೂಚಿಸಿದ ಸುವರ್ಣಗಿರಿ ಪಟ್ಟಣವೆಂದು ಗುರುತಿಸುತ್ತಾರೆ. ಆದರೆ, ಈ ಎಲ್ಲಾ ಸ್ಥಳಗಳಲ್ಲಿ ಗುರುತಿಸುವಂತಹ ಮೌರ್ಯರ ಕಾಲದ ಪ್ರಾಚೀನ ಅವಶೇಷಗಳಾದ ಕೋಟೆ ಇಲ್ಲಿ ಎಲ್ಲಿಯೂ ಇಲ್ಲ. ಅಲ್ಲದೇ ಮೌರ್ಯರ ಕಾಲದ ಪ್ರಾಚೀನತಮ ಎನ್ನುವ ಅವಶೇಷಗಳಾದ ಮೃತ್ಪಾತ್ರೆ, ಅಥವಾ ನಾಣ್ಯಗಳು ಈ ಹೇಳಿದ ಸ್ಥಳಗಳಲ್ಲಿ ದೊರೆತಿಲ್ಲ. ಆದ್ದರಿಂದ ಇವುಗಳನ್ನು ಮೌರ್ಯರ ಕಾಲದ ಸುವರ್ಣಗಿರಿ ಪಟ್ಟಣವೆಂದು ಗುರುತಿಸುವುದು ಕಷ್ಟದ ಕೆಲಸ. ಕಲಬುರ್ಗಿ ಜಿಲ್ಲೆಯ ಚಿತಾಪೂರ ತಾಲೂಕಿನ ಭೀಮಾ ನದಿ ದಡದಲ್ಲಿರುವ ಸನ್ನತಿ ಗ್ರಾಮದಲ್ಲಿ ಪ್ರಾಚೀನ ಕೋಟೆಯುಕ್ತ ಹಳೆಯ ಪಟ್ಟಣ ಗುರುತಿಸಲಾಗಿದೆ, ಇಲ್ಲಿ ಅಶೋಕನ ಮುಖ್ಯ ಅಥವಾ ಬೃಹತ್-ಶಾಸನ ಮತ್ತು ವಿಶೇಷ ಕಳಿಂಗ ಶಾಸನಗಳು ದೊರಕಿವೆ. ಅಲ್ಲದೇ, ಅಶೋಕನ ಭಾವಶಿಲ್ಪ ಕೂಡ ಇಲ್ಲಿಯ ಸ್ಥೂಪದಲ್ಲಿ ದೊರಕಿದ್ದು ವಿಶೇಷ. ಈ ಹಿನ್ನೆಲೆಯಲ್ಲಿ ಸನ್ನತಿಯು ಮೌರ್ಯರ ಕಾಲದ ಸುವರ್ಣಗಿರಿಯಾಗಿರುವ ಸಾಧ್ಯತೆ ಇದೆ.

ಅಶೋಕನ ಶಾಸನದಲ್ಲಿ ಉಲ್ಲೇಖವಾದ ಇಸಿಲ ಪಟ್ಟಣದ ಗುರುತಿಸುವುದು ಕಷ್ಟಕರವಾಗಿಲ್ಲ. ಬ್ರಹ್ಮಗಿರಿಯ ಶಾಸನದಲ್ಲಿಯೇ ಇದರ ಉಲ್ಲೇಖವಿದೆ. .....ಇಸಿಲದ ಮಹಾಮಾತ್ರರಿಗೆ ಆರೋಗ್ಯವನ್ನು ಹೇಳುವುದು ಮತ್ತು ಹೀಗೆಂದು ತಿಳಿಸುವುದು ಎಂದು ಉಲ್ಲೇಖವಾಗಿದ್ದರಿಂದ ಶಾಸನ ದೊರಕಿದ ಸ್ಥಳವೇ ಇಸಿಲವಾಗಿರುವುದು ಸ್ಪಷ್ಟವಾಗುತ್ತದೆ. ಇವುಗಳ ಹೊರತಾಗಿ ಮೌರ್ಯರ ಕಾಲದ ಮತ್ತೊಂದು ಪಟ್ಟಣವೆಂದರೆ, ಬನವಾಸಿ. ಮೌರ್ಯರ ರಾಜಧಾನಿಯಲ್ಲಿ ಅಶೋಕ ಚಕ್ರವರ್ತಿಯ ನೇತೃತ್ವದಲ್ಲಿ ನಡೆದ ಬೌದ್ಧ ಮಹಾಸಮ್ಮೇಳನದ ನಂತರ ರಖ್ಖಿತ ಎಂಬ ಬೌದ್ಧ ಮುನಿಯನ್ನು ಬೌದ್ಧ ಧರ್ಮ ಪ್ರಚಾರ ಮಾಡುವುದಕ್ಕೆ ದಕ್ಷಿಣಾಪಥದ ವೈಜಯಂತಿ (ಬನವಾಸಿ) ಪಟ್ಟಣಕ್ಕೆ ಕಳುಹಿಸಿಕೊಟ್ಟರೆಂದು ಶ್ರೀಲಂಕಾದ ಬೌದ್ಧ ಪವಿತ್ರ ಕೃತಿಗಳಾದ ಮಹಾವಂಶ ಮತ್ತು ದೀಪವಂಶಗಳಲ್ಲಿ ಉಲ್ಲೇಖಿಸಲಾಗಿದೆ. ಈ ಬೌದ್ಧಮುನಿಯು ಬನವಾಸಿಯ ಪಟ್ಟಣದಲ್ಲಿ ನೆಲೆ ನಿಂತು ಧರ್ಮ ಪ್ರಚಾರ ಮಾಡಿದನೆಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಕನ್ನಡ ನಾಡಿನ ಪ್ರದೇಶದಲ್ಲಿ ಗುರುತಿಸಬಹುದಾದ ಮೌರ್ಯರ ಕಾಲದ ಮುಖ್ಯ ಪಟ್ಟಣಗಳೆಂದರೆ ಇಸಿಲ (ಬ್ರಹ್ಮಗಿರಿ), ಸುವರ್ಣಗಿರಿ (ಸನ್ನತಿ) ಮತ್ತು ವೈಜಯಂತಿ (ಬನವಾಸಿ). ಈ ಮೂರು ಪ್ರಾಚೀನ ಪಟ್ಟಣಗಳ ರಚನೆ ಮತ್ತು ಅವುಗಳ ವಿಶೇಷತೆಗಳನ್ನು ಕಂಡುಕೊಳ್ಳಬಹುದಾಗಿದೆ.

ಮೌರ್ಯರ ಕಾಲದ ಪಟ್ಟಣದ ಲಕ್ಷಣಗಳು:
ಮೌರ್ಯರ ಇತಿಹಾಸ ರಚನೆಗೆ ಅವರ ಶಿಲಾಶಾಸನಗಳು ಮತ್ತು ಸಾಹಿತ್ಯ ಬಹುಮಹತ್ವದ ಆಕರಗಳಾಗಿದ್ದರೂ, ಪ್ರಾಕ್ತನ ಅವಶೇಷಗಳು ಕೂಡ ಇವರ ಇತಿಹಾಸ ರಚನೆಗೆ ಬಹುಮುಖ ಆಕರಗಳಾಗಿ ಪರಿಗಣಿಸಲಾಗುತ್ತವೆ. ಉತ್ತರ ಮತ್ತು ಮಧ್ಯ ಭಾರತದ ಪ್ರದೇಶಗಳಲ್ಲಿ ಮೌರ್ಯರ ಕಾಲದ ಹಲವಾರು ಪ್ರಾಚೀನ ನಗರಗಳಾದ ತಕ್ಷಶಿಲೆ, ಸಾಂಚಿ, ರಾಜಗಿರ ಇತ್ಯಾದಿಗಳಲ್ಲಿ ಮೌರ್ಯರ ಕಾಲದ ಮಡಿಕೆಗಳು, ನಾಣ್ಯಗಳು, ಶಿಲ್ಪಗಳು ಮುಂತಾದವುಗಳನ್ನು ಆಧರಿಸಿ ಮೌರ್ಯರ ಸಮಕಾಲಿನ ನಗರಗಳೆಂದು ಗುರುತಿಸಲಾಗುತ್ತದೆ. ಅದರಂತೆ ಕರ್ನಾಟಕದಲ್ಲಿಯೂ ಅಶೋಕನ ಶಾಸನಗಳು ದೊರೆತ ಮತ್ತು ಸಾಹಿತ್ಯದಲ್ಲಿ ಉಲ್ಲೇಖವಾದ ಸ್ಥಳಗಳಲ್ಲಿ ಶೋಧಿಸಲಾದ ಅವಶೇಷಗಳನ್ನು ಆಧರಿಸಿ ನಗರಗಳನ್ನು ಪತ್ತೆಹಚ್ಚಲು ಪ್ರಯತ್ನಪಡಬಹುದು.
ಮೌರ್ಯರ ಕಾಲದ ಪಟ್ಟಣ ಅಥವಾ ನಗರಗಳು ಸಾಮಾನ್ಯವಾಗಿ ರಕ್ಷಣೆಗಾಗಿ ಕೋಟೆ ಗೋಡೆಗಳಿಂದ ಸುತ್ತುವರೆದಿರುತ್ತವೆ. ಕೋಟೆಯುಕ್ತ ನಗರಗಳು ಮೌರ್ಯರ ಕಾಲದ ಲಕ್ಷಣಗಳಲ್ಲಿ ಒಂದು. ಇದಕ್ಕೆ ಪೂರಕವೆಂಬಂತೆ ಗ್ರೀಕರ ರಾಯಭಾರಿ ಮೆಗಸ್ತಾನೀಸನು ರಚಿಸಿದ ಇಂಡಿಕಾ ಕೃತಿಯಲ್ಲಿ ಮೌರ್ಯರ ಕಾಲದಲ್ಲಿ ದಕ್ಷಿಣದಲ್ಲಿ ಸು. 30ಕ್ಕೂ ಅಧಿಕ ಕೋಟೆಯುಕ್ತ ನಗರಗಳು ಇದ್ದವೆಂದು ಉಲ್ಲೇಖಿಸಿದ್ದನ್ನು ಗಮನಿಸಿಬಹುದು. ಮೌರ್ಯರ ಈ ನಗರಗಳು ಭದ್ರವಾದ ಕೋಟೆಯಿಂದ ಕೂಡಿದ್ದರೂ ಕೋಟೆಯ ಒಳಭಾಗದಲ್ಲಿ ಪ್ರತ್ಯೇಕವಾದ ರಾಜವಾಡೆಯೊಂದನ್ನು ನಿರ್ಮಿಸಿ ಅಲ್ಲಿ ಅಧಿಕಾರಿ ವರ್ಗದವನ್ನು ನೆಲೆಗೊಳಿಸಲಾಗುತ್ತಿತ್ತು. ಕರ್ನಾಟಕದಲ್ಲಿ ಮೌರ್ಯರ ಶಾಸನಗಳು ದೊರೆತ ಸ್ಥಳಗಳಾದ ಸನ್ನತಿಯಲ್ಲಿ ಪುರಾತನ ಕೋಟೆಯನ್ನು ಕಾಣಬಹುದು. ಅದರಂತೆ ಬೌದ್ಧ ಸಾಹಿತ್ಯದಲ್ಲಿ ಉಲ್ಲೇಖವಾದ ವೈಜಯಂತಿ ಅಥವಾ ಬನವಾಸಿಯಲ್ಲಿಯೂ ಪ್ರಾಚೀನ ಕೋಟೆಯೊಂದನ್ನು ಕಾಣಬಹುದು. ಉಳಿದಂತೆ ಇಸಿಲವು ಕೂಡ ಪ್ರಾಚೀನ ಸ್ಥಳವಾಗಿದ್ದು ಬ್ರಹ್ಮಗಿರಿ ಬೆಟ್ಟದ ಬುಡದಲ್ಲಿ ನಿರ್ಮಿಸಲಾಗಿದೆ. ಈ ಬೆಟ್ಟದ ಮೆಲ್ಭಾಗದಲ್ಲಿ ಹಳೆಯ ಕೋಟೆಯೊಂದನ್ನು ಕಟ್ಟಲಾಗಿದೆ. ಕೋಟೆಯ ರಚನೆಯು ಮಧ್ಯಕಾಲೀನ ಶೈಲಿಯಲ್ಲಿದೆ. ಆದರೆ ಇಸಿಲ ಎಂಬ ಪದ ಅರ್ಥವೇ ಸೂಚಿಸುವಂತೆ ಇದೊಂದು ಪ್ರಾಚೀನ ಕೋಟೆಯುಕ್ತ ಸ್ಥಳ.

ಮೌರ್ಯರ ಕಾಲದಲ್ಲಿ ವಿಶೇಷವಾದ ಮಡಿಕೆಗಳು ರಚಿಸಲಾಗುತ್ತಿದ್ದವು. ಅವುಗಳನ್ನು ಔತ್ತರೇಯ ಕಪ್ಪು ಬಣ್ಣದ ಹೊಳಪಿನ ಮೃತ್ಪಾತ್ರೆಗಳು. (Northern Black Polished Ware) ಇವು ಉತ್ತರ ಭಾರತದಲ್ಲಿ ಇತಿಹಾಸ ಆರಂಭಿಕ ಕಾಲದ ಬಹುತೇಕ ಪ್ರಾಚೀನ ನೆಲೆಗಳಲ್ಲಿ ಕಂಡುಬರುತ್ತವೆ. ಈ ಮಡಿಕಗೆಗಳು ಮೌರ್ಯರ ಆಳ್ವಿಕೆಯ ಸಮಕಾಲೀನ ಎಂದು ಗುರುತಿಸಲಾಗುತ್ತದೆ. ಕರ್ನಾಟಕದಲ್ಲಿ ಬನವಾಸಿ ಮತ್ತು ಸನ್ನತಿಯಲ್ಲಿ ಈ ಮಾದರಿಯ ಮಡಿಕೆಗಳು ದೊರೆತಿವೆ. ಈ ಮಡಿಕೆಗಳು ಅತ್ಯಂತ ನಾಜುಕಾಗಿದ್ದು, ತಾಮ್ರದಂತೆ ಮಿನುಗುತ್ತವೆ. ವಿಶೇಷ ಸಂದರ್ಭದಲ್ಲಿ ಮಾತ್ರ ಇವುಗಳನ್ನು ಬಳಸುತ್ತಿದ್ದರೆಂದು ಹೇಳಲಾಗುತ್ತದೆ. ಇವು ಮೌರ್ಯರರು ಸಂಪರ್ಕಿಸಿದ ಅಥವಾ ಅವರ ಆಳ್ವಿಕೆಗೆ ಒಳಪಟ್ಟ ಸ್ಥಳಗಳಲ್ಲಿ ಮಾತ್ರ ದೊರೆಯುತ್ತವೆ ಎಂಬ ಅಭಿಪ್ರಾಯವೂ ಇದೆ. ಕರ್ನಾಟಕ ಹೊರತಾಗಿ ಪಕ್ಕದ ತಮಿಳುನಾಡಿನಲ್ಲಿ ಈ ಮಾದರಿಯ ಮಡಿಕೆಗಳು ದೊರೆಕಿಲ್ಲ ಎಂಬುದು ಗಮನಿಬೇಕು. ಆದ್ದರಿಂದ ಅಲ್ಲದೇ ಇವುಗಳನ್ನು ಸಾಮಾನ್ಯವಾಗಿ ಈ ದೊರಕಿದ ಮಡಿಕೆಗಳಿಂದ ಈ ಪ್ರಾಚೀನ ನೆಲೆಗಳ ಕಾಲವನ್ನು ಸುಲಭವಾಗಿ ಗುರುತಿಸಬಹುದು. ಔತ್ತರೇಯ ಹೊಳಪಿನ ಕಪ್ಪು ಬಣ್ಣದ ಮೃತ್ಪಾತ್ರೆಗಳು ದೊರೆಯುವ ಸ್ಥಳಗಳು ಮೌರ್ಯರ ಕಾಲದ ಪ್ರಾಚೀನ ನೆಲೆಗಳು ಹಾಗೂ ಆ ಕಾಲದ ಪಟ್ಟಣಗಳೆಂದು ಸುಲಭವಾಗಿ ಗುರುತಿಸಬಹುದಾದ ಲಕ್ಷಣವೆಂದು ಹೇಳಬಹುದು.

ಮೌರ್ಯರ ಕಾಲದಲ್ಲಿ ಮುದ್ರಾಂಕಿತ ನಾಣ್ಯಗಳು (Punch-marked coins) ಚಲಾವಣೆಯಲ್ಲಿದ್ದವು.ಇವು ಮೌರ್ಯರ ಆಳ್ವಿಕೆಯ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುರುತ್ತವೆ. ಬನವಾಸಿಯಲ್ಲಿ, ಸನ್ನತಿಯಲ್ಲಿ ಮುದ್ರಾಂಕಿತ ನಾಣ್ಯಗಳು ದೊರೆತಿವೆ. ಇವು ಮೌರ್ಯರ ಕಾಲದ ನಗರಗಳನ್ನು ಗುರುತಿಸಬಹುದಾದ ಮತ್ತೊಂದು ಆಧಾರಗಳೆಂದು ಹೇಳಬಹುದು.

ಅಶೋಕ ಚಕ್ರವರ್ತಿಯು ಬೌದ್ಧ ಧರ್ಮದ ಅನುಯಾಯಿ ಆಗಿದ್ದನು. ಅಲ್ಲದೇ ಆ ಧರ್ಮ ಪ್ರಚಾರಕ್ಕೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದನು. ದಕ್ಷಿಣ ಭಾರತದಲ್ಲಿ ಅಶೋಕನು ಬೌದ್ಧ ಸ್ಥೂಪಗಳನ್ನು ನಿರ್ಮಿಸಿ ಅವುಗಳಿಗೆ ಆಶ್ರಯ ನೀಡಿದ್ದಾನೆ. ಅವುಗಳಲ್ಲಿ ಮುಖ್ಯವಾಗಿ ಆಂಧ್ರದ ಅಮರಾವತಿ ಬೌದ್ಧ ಸ್ಥೂಪವಾಗಿದೆ. ಸನ್ನತಿಯಲ್ಲಿಯೂ ಅಶೋಕನು ಸ್ಥೂಪವೊಂದನ್ನು ನಿರ್ಮಿಸಿದ ಬಗ್ಗೆ ಇತ್ತೀಚಿಗೆ ಸನ್ನತಿಯ ಹೊರ ವಲಯದಲ್ಲಿರುವ ಕನಗನಹಳ್ಳಿಯಲ್ಲಿ ಕೈಕೊಂಡ ಉತ್ಖನನದಲ್ಲಿ ಕಂಡುಕೊಳ್ಳಲಾಗಿದೆ. ಬೌದ್ಧ ಧರ್ಮದ ಮಹಾಗ್ರಂಥಗಳಾದ ಮಹಾವಂಶವು ಅಶೋಕ ಚಕ್ರವರ್ತಿಯು ಇಂದಿನ ಬನವಾಸಿಗೆ ಬೌದ್ಧ ಮುನಿ ರಖ್ಖಿತನನ್ನು ಹಲವು ಅನುಯಾಯಿಗಳ ಸಮೇತ ಕಳುಹಿಸಿದನೆಂದು ತಿಳಿದುಬರುತ್ತದೆ. ಅಶೋಕನ ಆಶ್ರಯದಲ್ಲಿ ಬನವಾಸಿಯಲ್ಲಿಯೂ ಬೌದ್ಧ ಧರ್ಮ ನೆಲೆಯೂರಲು ಕಾರಣವಾಯಿತು ಎಂದು ಇದರಿಂದ ವ್ಯಕ್ತವಾಗುತ್ತದೆ. ಅದರಂತೆ ಬ್ರಹ್ಮಗಿರಿಯಲ್ಲಿಯೂ ಪ್ರಾಚೀನ ಕಾಲದ ಗಜಪೃಷ್ಟಾಕಾರದ ಬೌದ್ಧ ಚೈತ್ಯ ದೇಗುಲವನ್ನು ಶೋಧಿಸಲಾಗಿದೆ. ಇದರ ನಿರ್ಮಾಣದ ಕಾಲವು ಮೌರ್ಯರ ಕಾಲದ ನಂತರದೆಂದು ಹೇಳಲಾಗುತ್ತದೆ ಆದರೂ ಇದರ ನಿರ್ಮಾಣದ ಕಾಲದ ಮೌರ್ಯರ ಕಾಲಕ್ಕೆ ಸೇರಬಹುದೆಂಬ ಅಭಿಪ್ರಾಯವಿದೆ. ಒಟ್ಟಿನಲ್ಲಿ ಮೌರ್ಯರ ಕಾಲದ ನಗರಗಳು ಬೌದ್ಧ ಧರ್ಮದ ಹಿನ್ನೆಲೆಯನ್ನು ಹೊಂದಿದ್ದವು ಅಲ್ಲದೆ ಆ ಪ್ರಾಚೀನ ನಗರಗಳಲ್ಲಿ ಬೌದ್ಧ ಸ್ಥೂಪಗಳು ಅಥವಾ ಚೈತ್ಯ ದೇಗುಲಗಳು ನಿರ್ಮಾಣವಾಗಿರುತ್ತಿದ್ದವು ಎಂದು ಹೇಳಬಹುದಾಗಿದೆ. ಈ ಮೇಲೆ ಗುರುತಿಸಿದ ಲಕ್ಷಣಗಳನ್ನು ಆಧರಿಸಿ ಮೌರ್ಯರ ಕಾಲದ ನಗರಗಳನ್ನು ಗುರುತಿಸಬಹುದಾಗಿದೆ. ಇವುಗಳನ್ನು ಆಧರಿಸಿ ಕರ್ನಾಟಕದಲ್ಲಿ ಮೌರ್ಯರ ಆಳ್ವಿಕೆಯಲ್ಲಿದ್ದ ನಗರಗಳ ರಚನೆಯ ಸ್ವರೂಪ ಹಾಗೂ ಅವುಗಳ ವಿಶೇಷತೆಗಳನ್ನು ಈ ಕೆಳಗಿನಂತೆ ಗುರುತಿಸಬಹುದಾಗಿದೆ.
ಸುವರ್ಣಗಿರಿ ಅಥವಾ ಪ್ರಾಚೀನ ಸನ್ನತಿ ಪಟ್ಟಣದ ರಚನೆ:
ಸುವರ್ಣಗಿರಿಯೆನ್ನುವುದು ಮೌರ್ಯರ ಪ್ರಾಂತ್ಯದ ರಾಜಧಾನಿ. ಇದು ಈ ಮೇಲೆ ಹೇಳಿದಂತೆ ಇಂದಿನ ಸನ್ನತಿ ಪ್ರಾಚೀನ ನೆಲೆಯೇ ಆಗಿತ್ತು. ಮೌರ್ಯರ ಕುಲಗುರು ವಿಷ್ಣುಗುಪ್ತ ಅಥವಾ ಚಾಣಕ್ಯನು ನಗರಗಳ ರಚನೆಯ ವಿಧಾನಗಳನ್ನು ಮತ್ತು ಅವುಗಳ ನಿರ್ಮಾಣದ ತಂತ್ರಗಳ ಕುರಿತು ಆತನು ರಚಿಸಿದ ಅರ್ಥಶಾಸ್ತ್ರ ಕೃತಿಯಲ್ಲಿ ಹೇಳಿದ್ದಾನೆ. ಸನ್ನತಿ ಪ್ರಾಚೀನ ಪಟ್ಟಣವು ಕೂಡ ಚಾಣಕ್ಯ ಸೂಚಿಸುವ ಕೆಲವು ಲಕ್ಷಣಗಳಿಂದ ರಚಿತವಾದ ಪಟ್ಟಣವೆಂದು ಹೇಳಬಹುದು. ಈ ಪ್ರಾಚೀನ ಸನ್ನತಿಯು ಭೀಮಾ ನದಿಯ ಎಡದಂಡೆಯ ಮೇಲೆ ನಿರ್ಮಿತವಾಗಿದೆ. ನದಿಯು ದಕ್ಷಿಣಾಭಿಮುಖವಾಗಿ ಹರಿಯುತ್ತಾ ಸನ್ನತಿ ಗ್ರಾಮದ ಹತ್ತಿರ ತಿಕ್ಷ್ಣವಾಗಿ ತಿರುವುವನ್ನು ಪಡೆದು ಉತ್ತರಾಭಿಮುಖವಾಗಿ ಚಲಿಸುತ್ತದೆ. ಇದರಿಂದಾಗಿ ನೈಸರ್ಗಿಕ ರಕ್ಷಣೆಯನ್ನು ಒದಗಿಸುವ ನದಿ ಈ ಊರಿಗೆ ವರದಾನವಾಗಿದೆ. ಈ ನೈಸರ್ಗಿಕ ರಕ್ಷಣೆಯನ್ನು ಗಮನಿಸಿದ ಪ್ರಾಚೀನ ನಗರ ನಿರ್ಮಾಪಕರು ವ್ಯವಸ್ಥಿತವಾದ ನಗರವೊಂದನ್ನು ಇಲ್ಲಿ ನಿರ್ಮಿಸಿದ್ದಾರೆ.

ನದಿಯು ತಿರುವು ಪಡೆದುಕೊಳ್ಳುವ ಪ್ರದೇಶದಲ್ಲಿ ಪಟ್ಟಣವನ್ನು ನಿರ್ಮಿಸಿ ಅದಕ್ಕೆ ನದಿಯ ಪಶ್ಚಿಮ ದಂಡೆಯಿಂದ ಪೂರ್ವ ದಂಡೆಯವರೆಗೆ ದೊಡ್ಡ ಗಾತ್ರದ ಇಟ್ಟಿಗೆಗಳಿಂದ ಕೋಟೆಯನ್ನು ನಿರ್ಮಿಸಲಾಗಿದೆ. ಕೋಟೆಯ ಒಳಭಾಗದಲ್ಲಿ ನದಿಗೆ ಹೊಂದಿಕೊಂಡಂತೆ ವ್ಯವಸ್ಥಿತವಾದ ನಗರವನ್ನು ನಿರ್ಮಿಸಲಾಗಿದೆ. ಇದರ ದಕ್ಷಿಣಕ್ಕೆ ಹರಿಯುವ ನದಿಯು ರಕ್ಷಣೆ ಒದಗಿಸಿದರೆ; ಉತ್ತರದ ಅಂಚಿನಲ್ಲಿ ಬದ್ರವಾದ ಕೋಟೆಯ ಗೋಡೆಯನ್ನು ನಿರ್ಮಿಸಲಾಗಿದೆ. ಈ ನಗರದ ಪ್ರವೇಶಕ್ಕಾಗಿ ಉತ್ತರದ ಕೋಟೆಯ ಗೋಡೆಯಲ್ಲಿ ಎರಡು ಮುಖ್ಯ ಪ್ರವೇಶದ್ವಾರಗಳನ್ನು ನಿರ್ಮಿಸಲಾಗಿತ್ತು. ಈ ದ್ವಾರಗಳು ಪ್ರಾಯಶಃ ಮರದಿಂದ ಮಾಡಿದ ಬಾಗಿಲು ಮತ್ತು ದ್ವಾರಬಂಧಗಳಿಂದ ಕೂಡಿದ್ದವು. ಕೋಟೆ ಗೋಡೆಯು ಸುಮಾರು 12ಮಿ. ಅಗಲವಾದ ತಳಪಾಯದಿಂದ ಕೂಡಿದ್ದು ಮೆಲ್ಭಾಗದಲ್ಲಿ ಗೋಡೆಯ ದಪ್ಪ ಸುಮಾರು 6ಮಿ. ಇದೆ. ಅದರಂತೆ ಗೋಡೆಯ ಎತ್ತರ ಸುಮಾರು 12 ಮೀಟರ್ ಇದ್ದು ಸೈನಿಕರ ಪಹರೆಗಾಗಿ ಅಲ್ಲಲ್ಲಿ ಚೌಕಾಕಾರದ ಕೊತ್ತಳಗಳನ್ನು ನಿರ್ಮಿಸಲಾಗಿತ್ತು. ಕೋಟೆಯ ಒಳಭಾಗದಲ್ಲಿ ನದಿಗೆ ಹೊಂದಿಕೊಂಡಂತೆ ವಿಶೇಷವಾದ ಪ್ರದೇಶವಿದ್ದು ಇದನ್ನು ಸ್ಥಳೀಯವಾಗಿ ರಣಮಂಡಲ ಎಂದು ಕರೆಯುತ್ತಾರೆ. ಇದು ಸುಮಾರು 80 ಹೆಕ್ಟರ್ ವಿಸ್ತಾರವಾದ ಉಪ-ಕೋಟೆ ಎಂದು ಕರೆಯಬಹುದು. ಆಥವಾ ಮೌರ್ಯ ಸಾಮ್ರಾಜ್ಯದ ಪ್ರಾಂತ್ಯದ ಅಧಿಕಾರಿ ವರ್ಗದವರು ನೆಲೆಸುವ ರಾಜವಾಡೆ ಎಂದು ಗುರುತಿಸಬಹುದು. ಅಲ್ಲಿ ವಾಸಿಸುವ ವಿಶೇಷ ಅಧಿಕಾರಿ ವರ್ಗದವರ ರಕ್ಷಣೆಗೆ ಪ್ರತ್ಯೇಕವಾದ ಕೋಟೆಯೊಂದನ್ನು ನಿರ್ಮಿಸಿ ಅವರಿಗೆ ವಾಸಿಸಲು ವಿವಿಧ ಅರಮನೆ ಮತ್ತು ಕಛೇರಿಗಳನ್ನು ರಚಿಸಲಾಗಿತ್ತೆಂದು ಹೇಳಬಹುದು. ಈ ರಾಜವಾಡೆಯು ನದಿಯ ದಡದಲ್ಲಿ ವಿಶಾಲವಾಗಿ ಹರಡಿಕೊಂಡಿತ್ತಲ್ಲದೆ, ಅಲ್ಲಿಯ ನಿವಾಸಿಗಳ ಅನುಕೂಲಕ್ಕಾಗಿ ಉಗ್ರಾಣಗಳನ್ನು ಸಿಹಿ ನೀರಿನ ಭಾವಿಗಳನ್ನು ನಿರ್ಮಿಸಲಾಗಿತ್ತು. 1984-85 ಮತ್ತು 1993-95ರಲ್ಲಿ ಕರ್ನಾಟಕ ಪುರಾತತ್ವ ಇಲಾಖೆಯವರು ನಡೆಸಿದ ಭೂ-ಉತ್ಖನನದಲ್ಲಿ ಇಟ್ಟಿಗೆಗಳಿಂದ ಕಟ್ಟಿದ ಒಂದು ದೊಡ್ಡ ಸರಕು ಕೋಣೆ ಅಥವಾ ಉಗ್ರಾಣ, ವೃತ್ತಾಕಾರದ ಬಾವಿ, ಅಲ್ಲದೇ ಪ್ರಾಚೀನ ಕಾಲದ ವಾಸಿಸುವ ಮನೆಗಳು ಶೋಧಿಸಲಾಗಿವೆ. 2006ರಲ್ಲಿ ಕೇಂದ್ರ ಪುರಾತತ್ವ ಇಲಾಖೆಯವರು ಕೈಕೊಂಡ ಭೂ-ಉತ್ಖನನದಲ್ಲಿ ಕೋಟೆಯ ನಿರ್ಮಾಣದ ಕಾಲವನ್ನು ನಿಖರವಾಗಿ ಗುರುತಿಸಿದ್ದಾರೆ. ರಣಮಂಡಲದ ರಕ್ಷಣೆಗಾಗಿ ನಿರ್ಮಿಸಿದ ಕೋಟೆಯು ಎರಡು ಹಂತಗಳಲ್ಲಿ ನಿರ್ಮಿಸಲಾಗಿದೆ ಎಂದು ಕಂಡುಬಂದಿದೆ. ಕೋಟೆಯ ನಿಮಾಣವು ಮೌರ್ಯರ ಕಾಲದಲ್ಲಿ ಆರಂಭವಾಗಿತ್ತು ಎಂಬುದು ಉತ್ಖನನದಲ್ಲಿ ದೊರೆತ ಮೌರ್ಯರ ಕಾಲದ ಪ್ರಾಚೀನ ಅವಶೇಷಗಳ ಆಧಾರದಿಂದ ಗುರುತಿಸಲಾಗಿದೆ. ಸುಮಾರು 2 ಕಿ.ಮೀ ಸುತ್ತಳತೆಯ ಈ ರಣಮಂಡಲದ ಕೋಟೆಯು ಆಯತಾಕಾರದಲ್ಲಿದ್ದು ನದಿಯ ತಿರುವು ಪಡೆದು ಕೊಳ್ಳುವ ಸ್ಥಳದವರೆಗೆ ನಿರ್ಮಿಸಲಾಗಿದೆ. ಈ ರಣಮಂಡಲಕ್ಕೆ ಪ್ರವೇಶಿಸಲು ಮೂರು ಪ್ರವೇಶ ದ್ವಾರಗಳನ್ನು ರಚಿಸಲಾಗಿತ್ತು ಎಂದು ಗುರುತಿಸಲಾಗಿದೆ. ರಣಮಂಡಲದ ಉತ್ತರಕ್ಕೆ ಬಯಲು ಪ್ರದೇಶವಿದೆ. ಇದು ಕೂಡ ಪ್ರಾಚೀನದಲ್ಲಿ ಜನರಿಂದ ಕೂಡಿದ ಪಟ್ಟಣವಾಗಿತ್ತು. ಸಮಾಜದ ವಿವಿಧ ವರ್ಗದ ಕರಕುಶಲ ಕರ್ಮಿಗಳು, ವ್ಯಾಪಾರಿ ಶ್ರೇಷ್ಟಿಗಳು, ಮತ್ತಿತರ ಸಮುದಾಯದವರು ಇಲ್ಲಿ ನೆಲೆಸಿದ್ದರು. ಪ್ರಾಚೀನದಲ್ಲಿದ್ದ ನಗರದ ವಿನ್ಯಾಸವು ಇಂದಿಗೂ ಈ ಪ್ರದೇಶದಲ್ಲಿ ಗುರುತಿಸಬಹುದಾಗಿದೆ. ನಗರವಾಸಿಗಳ ಈ ಪಟ್ಟಣವು ಸುಮಾರು 160 ಹೆಕ್ಟೇರ ವ್ಯಾಪ್ತಿಯುಳ್ಳದ್ದಾಗಿತ್ತು. ಇದಕ್ಕೆ ಕಟ್ಟಲಾದ ಕೋಟೆಯು ಸುಮಾರು 3.5 ಕಿ.ಮೀ ಸುತ್ತಳತೆಯಿಂದ ಕೂಡಿದೆ.

ಸ್ಥೂಪಗಳ/ಚೈತ್ಯಗಳ ಪ್ರದಕ್ಷಿಣೆ :
ಬೌದ್ಧ ನಗರಗಳ ರಚನೆಯು ಬಹಳ ವಿಶೇಷತೆಯಿಂದ ಕೂಡಿರುತ್ತದೆ. ಬೌದ್ಧ ಧರ್ಮದ ಮುನಿಗಳು ಊರಿನ ಆಚೆ ನೆಲೆಸುವುದು ವಾಡಿಕೆ. ಜನರಿಂದ ದೂರದಲ್ಲಿ ಧಾರ್ಮಿಕ ಆಚರಣೆಗಳನ್ನು ಕೈಕೊಳ್ಳುವುದಕ್ಕೆ ಸೂಕ್ತ ಸ್ಥಳಗಳಾದ ನದಿಯ ತಟ ಅಥವಾ ಬೆಟ್ಟಗಳ ಗವಿಗಳಲ್ಲಿ ಬೌದ್ಧಮುನಿಗಳು ವಾಸಿಸುವದು ಸಾಮಾನ್ಯ. ಇವು ಊರಿನ ಆಚೆ ನಿರ್ದಿಷ್ಟ ದೂರದಲ್ಲಿರುತ್ತಿದ್ದವು. ನಗರ ರಚನೆಯ ಭಾಗವಾಗಿ ಇವುಗಳನ್ನು ಕಾಣಬಹುದು. ಇವು ಒಂದು ರೀತಿಯಲ್ಲಿ ನಗರಕ್ಕೆ ಪ್ರದಕ್ಷಿಣೆ ರೂಪದಲ್ಲಿ ಕಂಡುಬರುತ್ತವೆ. ಒಂದು ಸ್ಥೂಪದಿಂದ ಇನ್ನೊಂದರಂತೆ ನಡೆದರೆ ನಗರದ ಒಂದು ಪ್ರದಕ್ಷಿಣೆ ಮಾಡಿದಂತೆ ಆಗುತ್ತದೆ. ಊರಿಗೆ ಹತ್ತಿರದಲ್ಲಿರುವುದರಿಂದ ನಗರ ನಿವಾಸಿಗಳ ಸಂಪರ್ಕ ಸುಲಭವಾಗಿತ್ತು. ಸನ್ನತಿಯ ನಗರ ನಿರ್ಮಾಣದಲ್ಲಿಯೂ ನಗರದ ಆಚೆಗೆ ಸುತ್ತಲೂ ಸ್ಥೂಪಗಳನ್ನು ನಿರ್ಮಿಸಿರುವುದನ್ನು ಕಾಣಬಹುದು. ಊರಿನ ಹೊರವಲಯದಲ್ಲಿ ಆನೆಗುತ್ತಿ, ಬೆನಗುತ್ತಿ, ಕನಗನಹಳ್ಳಿ, ಹುರಸಗುಂಡಗಿ ಮತ್ತು ಚಂದ್ರಾಲಾಂಬ ದೇಗುಲದ ಬಳಿ ಬೌದ್ಧ ಸ್ಥೂಪಗಳನ್ನು ನಿರ್ಮಿಸಿರುವುದು ಅಲ್ಲಿಯ ಅವಶೇಷಗಳಿಂದ ಗುರುತಿಸಬಹುದಾಗಿದೆ. ಅವುಗಳಲ್ಲಿ ಆನೆಗುತ್ತಿ ಸ್ಥೂಪ ಮತ್ತು ಕನಗನಹಳ್ಳಿ ಸ್ಥೂಪಗಳು ಅತಿ ಕಲಾತ್ಮಕ ಶಿಲ್ಪಗಳಿಂದ ಕೂಡಿದ ನಿರ್ಮಿತಿಯಾಗಿದ್ದರೆ, ಉಳಿದವು ಅವಶೇಷಗಳ ರೂಪದಲ್ಲಿ ಕಂಡುಬರುತ್ತವೆ.

ಆನೆಗುತ್ತಿ ಸ್ಥೂಪ: ಇದು ಊರಿನಿಂದ ಉತ್ತರಕ್ಕೆ ಸುಮಾರು 4 ಕಿ.ಮೀ ದೂರದಲ್ಲಿದೆ. 1986ರಿಂದ 1989ರವರೆಗೆ ಕೇಂದ್ರ ಪುರಾತತ್ವ ಇಲಾಖೆ ಇಂಗ್ಲೆಂಡಿನ ಸೋಸೈಟಿ ಫಾರ್ ಸೌಥ ಏಶಿಯನ್ ಸ್ಟಡೀಸ್ ಸಹಯೋಗದೊಂದಿಗೆ ಈ ದೊಡ್ಡ ಸ್ಥೂಪದ ಉತ್ಖನನವನ್ನು ಕೈಕೊಂಡಿದ್ದಾರೆ. ಪ್ರಾಚೀನ ಕಾಲದ ಬೌದ್ಧ ಛಾಯಾಪ್ರತಿಮೆ, ಬ್ರಾಹ್ಮಿ ಶಾಸನಗಳು ಮತ್ತು ಪ್ರಾಚೀನ ಇತರ ಅವಶೇಷಗಳನ್ನು ಇಲ್ಲಿ ಶೋಧಿಸಲಾಯಿತು. ಈ ಸ್ಥೂಪದ ಪೂರ್ವ ದಿಕ್ಕಿನಲ್ಲಿ ಕನಗನಹಳ್ಳಿ ಸ್ಥೂಪವಿದೆ.

ಕನಗನಹಳ್ಳಿ ಸ್ಥೂಪ : ಈ ಸ್ಥೂಪವು ಸನ್ನತಿಯಲ್ಲಿ ದೊರೆತ ಬಹು ದೊಡ್ಡ ಹಾಗೂ ಪುರಾತನ ಸ್ಥೂಪವಾಗಿದೆ. ಇದು ಭೂಮಿಯ ಆಳದಲ್ಲಿತ್ತು. ಚಂದ್ರಾಲಾಂಬ ದೇವಾಲಯದಿಂದ ಉತ್ತರಕ್ಕೆ ಸು. 3.5 ಕಿ.ಮೀ ದೂರದಲ್ಲಿದೆ. ನದಿಯ ದಂಡೆಗೆ ಹೊಂದಿಕೊಂಡಂತೆ ನಿರ್ಮಿಸಲಾದ ಈ ಸ್ಥೂಪದ ಉತ್ಖನವು ಕೇಂದ್ರ ಪುರಾತತ್ವ ಇಲಾಖೆಯು 1996ರಿಂದ 2006 ವರೆಗೆ ಕೈಕೊಂಡಿದೆ. ಇದು ಸುಮಾರು 26ಮಿ. ಸುತ್ತಳತೆಯ ದುಂಡಾಕಾರದ ಸ್ಥೂಪವಿದ್ದು ಇದಕ್ಕೆ ಸು. 95 ಮೀ ಸುತ್ತಳತೆಯ ಶಿಲ್ಪಗಳಿಂದ ಅಲಂಕೃತಗೊಂಡ ಅಂಚಿನ ಅಂಗಳವಿತ್ತು. ಸ್ಥೂಪದ ನಾಲ್ಕು ದಿಕ್ಕಿನಲ್ಲಿ ಚಂದ್ರಶಿಲಾ ಎಂಬ ಹೊಸಿಲುಗಳಿರುವ ಪ್ರವೇಶ ದ್ವಾರಗಳು ಹಾಗೆಯೇ ಒಳಕಟ್ಟೆಯ ನಾಲ್ಕು ದಿಕ್ಕಿನಲ್ಲಿ ಆಯಕ-ಕಂಬಗಳು ಜೊತೆಗೆ ಬೃಹತ್ ಗಾತ್ರದ ಬುದ್ಧನ ಶಿಲ್ಪಗಳು ಇದ್ದವು. ಸ್ಥೂಪದ ನೈರುತ್ಯ ದಿಕ್ಕಿನಲ್ಲಿ ಮೌರ್ಯ ಕಾಲದ ನಯಗೊಳಿಸಿ ರಚಿಸಿದ ಸಿಂಹದ ಶಿಲ್ಪವೊಂದನ್ನು ಉತ್ಖನನದಲ್ಲಿ ಶೋಧಿಸಲಾಗಿದೆ. ಉಜ್ಜಿ ಹೊಳಪು ಗೊಳಸಿ ರಚಿಸಿದ ಶಿಲ್ಪ ರಚನೆ ಮೌರ್ಯರ ಶಿಲ್ಪಕಲೆಯಲ್ಲಿ ಕಾಣುತ್ತೇವೆ. ಇದೇ ಮಾದರಿಯ ಸಿಂಹದ ಶಿಲ್ಪವು ಮೌರ್ಯರ ಕಾಲದಲ್ಲಿ ರಚನೆಯಾದ ಮಧ್ಯಪ್ರದೇಶದ ಸಾಂಚಿ ಸ್ಥೂಪದ ಪಕ್ಕದ ಕಂಬದ ಮೇಲೆ ಕಾಣುಬಹುದು. ಗೌತಮ ಬುದ್ಧನ ಜೀವನಕ್ಕೆ ಸಂಬಂದಿಸಿದ ಪ್ರಮುಖ ಸ್ಥಳಗಳಲ್ಲಿ ಬೌದ್ಧ ಧರ್ಮದ ಸಂಕೇತಗಳಾದ ಸಿಂಹ ಇತ್ಯಾದಿಗಳ ಶಿಲ್ಪಗಳನ್ನು ಹೊಂದಿದ ಎತ್ತರದ ಕಂಬಗಳನ್ನು ಮೌರ್ಯ ಅಶೋಕನು ಹಾಕಿಸಿದ್ದನು. ಅದರಂತೆ ಸನ್ನತಿಯಲ್ಲಿ ದೊರೆತ ಉಜ್ಜಿ ನಯಗೊಳಿಸಿದ ಸಿಂಹದ ಶಿಲ್ಪದ ಶೈಲಿ ಮತ್ತು ರಚನೆಯ ಹಿನ್ನೆಲೆಯಿಂದ ಈ ಶಿಲ್ಪವು ಮೌರ್ಯರ ಕಾಲದೆಂದು ನಿಖರವಾಗಿ ಹೇಳಬಹುದು. ಅಲ್ಲದೇ ಈ ಸ್ಥೂಪದ ತಳಪಾಯದಲ್ಲಿ ದೊರೆತ ಅವಶೇಷಗಳು ಮೌರ್ಯರ ಕಾಲಕ್ಕೆ ಸಂಬಂಧಿಸಿದಂತಿವೆ. ಉತ್ಖನನ ಕೈಕೊಂಡ ಪುರಾತತ್ವಜ್ಞ ಕೆ.ಪಿ. ಪೂಣಚ್ಛ ಅವರು ಈ ಸ್ಥೂಪದ ರಚನೆಯ ಪ್ರಾರಂಭ ಮೌರ್ಯ ಚಕ್ರವರ್ತಿ ಅಶೋಕನ ಕಾಲಕ್ಕೆ ಸೇರುತ್ತದೆ ಎಂದು ದೊರೆತ ಅವಶೇಷಗಳನ್ನು ಆಧರಿಸಿ ವಿವರಿಸಿದ್ದಾರೆ.

ಮೂಲತಃ ಅಶೋಕನ ಕಾಲದಲ್ಲಿ ಮಣ್ಣಿನಿಂದ ದುಂಡಾಕಾರವಾದ ಕಿರುದಾದ ಸ್ಥೂಪವೊಂದನ್ನು ನಿರ್ಮಾಣವಾಗಿತ್ತು. ಅದರ ಪಕ್ಕದಲ್ಲಿ ಸಿಂಹದ ಶಿಲ್ಪವಿರುವ ಎತ್ತರವಾದ ಕಂಬವನ್ನು ಹಾಕಲಾಗಿತ್ತು. ಸರಳ ಮತ್ತು ಸ್ಥೂಪದ ಮೂಲಭೂತ ರಚನೆಯುಳ್ಳ ಬೌದ್ಧ ಸ್ಥೂಪವನ್ನು ಅಶೋಕನ ಕಾಲದಲ್ಲಿ ಇಲ್ಲಿ ನಿರ್ಮಾಣವಾಗಿತ್ತೆಂದು ಇದರಿಂದ ತಿಳಿದುಬರುತ್ತದೆ. ಮೌರ್ಯರ ಆಳ್ವಿಕೆಯ ನಂತರ ಅಧಿಕಾರಕ್ಕೆ ಬಂದ ಶಾತವಾಹನರು ಈ ಸ್ಥೂಪವನ್ನು ಮತ್ತಷ್ಟು ಶಿಲಾ-ಫಲಕಗಳು, ಪ್ರದಕ್ಷಿಣಾಪಥ, ಬೃಹತ್ ಗಾತ್ರದ ಬುದ್ಧನ ಶಿಲ್ಪಗಳು, ಅರಸರ ಶಿಲ್ಪಗಳು, ಸ್ಥೂಪದ ಮೇಲ್ಭಾಗದಲ್ಲಿ ಹರ್‍ಮಿಕಾ, ಛತ್ರಾವಳಿ, ಆಯಕಸ್ಥಂಭಗಳು, ತೋರಣಗಳು ಇತ್ಯಾದಿಗಳಿಂದ ವಿಸ್ತರಿಸಿದ್ದಲ್ಲದೇ ಅತ್ಯಂತ ಸುಂದರ ಸ್ಥೂಪದ ರಚನೆ ಮಾಡಿದರು. ಈ ಸ್ಥೂಪದ ಶಿಲ್ಪಗಳಲ್ಲಿ ಮೌರ್ಯ ಅರಸ ಅಶೋಕ ಮತ್ತು ಆತನ ಧರ್ಮಪತ್ನಿಯ ಭಾವಶಿಲ್ಪಗಳನ್ನು ಕೂಡ ಶೋಧಿಸಲಾಗಿದೆ. ’ರಾಯಾ ಅಸೋಕ’ ಎಂದು ಬ್ರಾಹ್ಮಿ ಲಿಪಿಯಲ್ಲಿ ಬರಹ ಇರುವ ಎರಡು ಭಾವಶಿಲ್ಪಗಳು ಇದರಲ್ಲಿ ದೊರೆತಿವೆ. ಆದರಿಂದ ಸನ್ನತಿಯು ಮೌರ್ಯರ ಕಾಲದ ಪ್ರಮುಖ ನಗರವೆಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಚಂದ್ರಾಲಾಂಬ ದೇಗುಲ ಪರಿಸರ: ಅದರಂತೆ ಇಲ್ಲಿಯ ಚಂದ್ರಾಲಾಂಬ ದೇವಾಲಯದ ಸಮುಚ್ಛಯದಲ್ಲಿ ಮೌರ್ಯ ಚಕ್ರವರ್ತಿಯ ಬೃಹತ್ ಶಿಲಾಶಾಸನವಿರುವ ಗ್ರಾನೈಟ್ ಶಿಲೆಯೊಂದನ್ನು ದೊರೆತಿದೆ. ಈ ಶಿಲಾಶಾಸನವು ಅಶೋಕನು ಹಾಕಿಸಿದ ವಿಶೇಷ ಶಾಸನ ಇದಾಗಿದೆ. ಇದನ್ನು ಪ್ರತ್ಯೇಕ ಶಾಸನವೆಂದು ವಿದ್ವಾಂಸರು ವಿಭಾಗಿಸಿ ಗುರುತಿಸುತ್ತಾರೆ. ಅಲ್ಲದೇ, ಈ ದೇವಾಲಯದ ರಚನೆಯ ಮೂಲವನ್ನು ಕೂಡ ಪ್ರಾಚೀನವೆಂದು ಪ್ರಾಯಶಃ ಮೌರ್ಯರ ಕಾಲದಲ್ಲಿ ಇಲ್ಲೊಂದು ಅಶೋಕನ ಶಿಲಾಶಾಸನವಿದ್ದ ಸ್ಥೂಪ ರಚನೆಯಾಗಿತ್ತೆಂದು ವಿದ್ವಾಂಸರು ಊಹಿಸುತ್ತಾರೆ. ಈ ದೇವಾಲಯದ ಗೋಪುರದ ಹೊರಗಡೆ ಬನ್ನಿ ಮರದ ಕಟ್ಟೆ ಮೇಲೆ ಬುದ್ಧನ ಪಾದದ ಶಿಲ್ಪದ ಫಲಕವಿದೆ ಅದರಂತೆ ಇದರ ಪಕ್ಕದಲ್ಲಿ ಬೌದ್ಧರ ಛಾಯಾಪ್ರತಿಮೆಯ ಶಿಲ್ಪವೂ ಕೂಡ ಇರುವುದು. ಇವುಗಳಲ್ಲದೆ ದೇವಾಲಯದ ಕಂಪೌಂಡ ಗೋಡೆಯಲ್ಲಿ ಅಲ್ಲಲ್ಲಿ ಬ್ರಾಹ್ಮಿ ಲಿಪಿ ಇರುವ ಶಿಲಾ ಲೇಖಗಳ ಕಲ್ಲುಗಳು ದೊರೆಯುತ್ತವೆ. ಇವು ಮೂಲತಃ ಈ ಸ್ಥಳದಲ್ಲಿದ್ದ ಪ್ರಾಚೀನ ಬೌದ್ಧ ಅವಶೇಷಗಳಾಗಿವೆ.

ಬೆನಗುತ್ತಿ ಮತ್ತು ಹುರಸಗುಂಡಗಿ: ಸನ್ನತಿ ಗ್ರಾಮದ ಪಶ್ಚಿಮದ ಅಂಚಿನಲ್ಲಿ ಬೆನಗುತ್ತಿ ಎಂಬ ದಿಬ್ಬವಿದೆ. ಇಲ್ಲಿಯೂ ಕೂಡ ಬೌದ್ಧ ಸ್ಥೂಪದ ಅವಶೇಷಗಳನ್ನು ಶೋಧಿಸಲಾಗಿದೆ. ಸನ್ನತಿಯ ದಕ್ಷಿಣಕ್ಕೆ ಎದುರಾಗಿ ನದಿಯ ಬಲ ದಂಡೆಯಲ್ಲಿ ಹುರಸಗುಂಡಗಿ ಎಂಬ ಗ್ರಾಮವಿದೆ. ಇಲ್ಲೊಂದು ಬೌದ್ಧ ಸ್ಥೂಪವನ್ನು ಶೋಧಿಸಲಾಗಿದೆ. ಇದು ಕೂಡ ಪ್ರಾಚೀನ ಬೌದ್ಧ ನಗರದ ಆಚೆಯಲ್ಲಿರುವ ಕನಗನಹಳ್ಳಿ, ಅಥವಾ ಆನೆಗುತ್ತಿ ಸ್ಥೂಪಗಳಂತೆ ಇದನ್ನು ಕೂಡ ನಗರದ ಆಚೆಯ ಸ್ಥೂಪವೆಂದು ಗುರುತಿಸಬಹುದು. ಈ ಸ್ಥಳದಲ್ಲಿ ದೊಡ್ಡ ಗಾತ್ರದ ಬೌದ್ಧ ಯಕ್ಷನ ಶಿಲ್ಪವನ್ನು ಶೋಧಿಸಲಾಗಿದೆ. ಇದು ಕರ್ನಾಟಕದಲ್ಲಿಯೇ ದೊರೆತ ಪ್ರಾಚೀನ ಯಕ್ಷ ಶಿಲ್ಪವೆಂದು ಗುರುತಿಸಲಾಗುತ್ತದೆ. ಒಟ್ಟಿನಲ್ಲಿ ಸನ್ನತಿಯು ಮೌರ್ಯರ ಆಳ್ವಿಕೆಯ ಅಶೋಕನ ಶಿಲಾಶಾಸನದಲ್ಲಿ ಉಲ್ಲೇಖಿಸಿದ ಸುವರ್ಣಗಿರಿ ನಗರವಾಗಿರುವ ಎಲ್ಲಾ ಲಕ್ಷಣಗಳು ಹಾಗೂ ಅವಶೇಷಗಳನ್ನು ಹೊಂದಿದೆ ಎಂದು ಹೇಳಬಹುದು.

ವೈಜಯಂತಿ ಅಥವಾ ಬನವಾಸಿ :
ಈ ಹಿಂದೆ ಹೇಳಿದಂತೆ ಬನವಾಸಿವು ಮೌರ್ಯರ ಆಧೀನಕ್ಕೆ ಒಳಪಟ್ಟ ಒಂದು ಪಟ್ಟಣವಾಗಿತ್ತು. ರಖ್ಖಿತ ಎಂಬ ಬೌದ್ಧ ಮುನಿ ಉತ್ತರ ಭಾರತದಿಂದ ತನ್ನ ಅನುಯಾಯಿಯೊಂದಿಗೆ ವೈಜಯಂತಿಗೆ ಬಂದು ಧರ್ಮ ಪ್ರಚಾರ ಮಾಡಿದ್ದನು. ನಂತರ ತನ್ನ ಅನುಯಾಯಿಗಳೊಂದಿಗೆ ಶ್ರೀಲಂಕಾದ ಅನುರಾಧಾಪುರದಲ್ಲಿ ಸ್ಥೂಪ ನಿರ್ಮಾಣದ ಪ್ರಾರಂಭೋತ್ಸೊವದಲ್ಲಿ ಸಮುದ್ರದ ಮೂಲಕ ಪ್ರಯಾಣ ಬೆಳೆಸಿದರೆಂದು ಪ್ರಾಚೀನ ಬೌದ್ಧ ಸಾಹಿತ್ಯ ಹೇಳುತ್ತವೆ. ಮೌರ್ಯರ ಕಾಲದ ಪ್ರಾಕ್ತನ ಅವಶೇಷಗಳಾದ ಔತ್ತರೇಯ ಕಪ್ಪು ಬಣ್ಣದ ಹೊಳಪಿನ ಮೃತ್ಪಾತ್ರೆಗಳು. (Northern Black Polished Ware) ಮತ್ತು ಮುದ್ರಾಂಕಿತ ನಾಣ್ಯಗಳು ಇಲ್ಲಿ ದೊರಕಿವೆ. ಇವೆಲ್ಲವುಗಳ ಹಿನ್ನೆಲೆಯಲ್ಲಿ ಬನವಾಸಿಯು ಕೂಡ ಮೌರ್ಯರ ಕಾಲದಲ್ಲಿ ಬೆಳೆದ ಪಟ್ಟಣವೆಂದು ಗುರುತಿಸಬಹುದು. ಸಹ್ಯಾದ್ರಿ ಬೆಟ್ಟ ಶ್ರೇಣಿಗಳನ್ನು ಬಳಸಿಕೊಂಡು ಕೊಂಕಣ ಕರಾವಳಿ ಮೂಲಕ ದಕ್ಷಿಣದ ಕರಾವಳಿ ಸೀಮೆಗೆ ವ್ಯಾಪಾರ ಸಂಪರ್ಕದ ಮಾರ್ಗಗಳು ಬನವಾಸಿಯನ್ನು ಬಳಸಿಕೊಂಡು ಸಂಚರಿಸುತ್ತಿದ್ದವು. ಆದ್ದರಿಂದ ಪಶ್ಚಿಮ ಕರಾವಳಿಯಿಂದ ಘಟ್ಟ ಪ್ರದೇಶದ ಅಂಚಿನಲ್ಲಿರುವ ಒಂದು ಮುಖ್ಯ ವ್ಯಾಪಾರ ಕೇಂದ್ರವೂ ಆಗಿತ್ತೆಂಬುದು ಪ್ರಾಚೀನ ಶಾಸನಗಳನ್ನು ಅವಲೋಕಿಸಿದರೆ ತಿಳಿದುಬರುತ್ತದೆ.

ನಗರ ರಚನೆ: ಬನವಾಸಿಯು ಸನ್ನತಿಯಂತೆ ನದಿಯ ದಂಡೆಯ ಮೇಲೆ ನಿರ್ಮಿಸಿದ ಪ್ರಾಚೀನ ನಗರವಾಗಿದೆ. ವರದಾ ನದಿಯ ಎಡದಂಡೆಯ ಮೇಲೆ ನಿರ್ಮಿಸಲಾಗಿದೆ. ವರದಾ ನದಿಯು ದಕ್ಷಿಣ ದಿಕ್ಕಿನಿಂದ ಪೂರ್ವ ದಿಕ್ಕಿಗೆ ತಿರುವು ಪಡೆಯುತ್ತದೆ. ಈ ಸ್ಥಳದಲ್ಲಿ ಈ ನಗರ ನಿರ್ಮಾಣ ಮಾಡಲಾಗಿದೆ. ಬನವಾಸಿ ನಗರವು ಕೂಡ ಆಯತಾಕಾರ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಸುತ್ತಲೂ ಕೋಟೆಯನ್ನು ನಿರ್ಮಿಸಲಾಗಿದೆ. ಊರಿಗೆ ಪ್ರವೇಶಕ್ಕಾಗಿ ಕೋಟೆಯ ನಾಲ್ಕು ದಿಕ್ಕಿನಲ್ಲಿ ಪ್ರವೇಶದ್ವಾರಗಳನ್ನು ನಿರ್ಮಿಸಲಾಗಿವೆ. ನಾಲ್ಕು ದಿಕ್ಕಿನ ದ್ವಾರಗಳಿಂದ ಬರುವ ರಸ್ತೆಗಳು ನಗರದ ಕೇಂದ್ರ ಭಾಗದಲ್ಲಿರುವ ಮಧುಕೇಶ್ವರ ದೇವಾಲಯದ ಸಮುಚ್ಛಯಕ್ಕೆ ಬಂದು ಸೇರುತ್ತವೆ. ಕೋಟೆಯ ಸುತ್ತಲೂ ಆಳವಾದ ಕಂದಕವನ್ನು ಮಾಡಲಾಗಿದೆ. ಕರ್ನಾಟಕ ಪುರಾತತ್ವ ಇಲಾಖೆ ಮತ್ತು ಮೈಸೂರು ವಿಶ್ವವಿದ್ಯಾಲಯ ಜಂಟಿಯಾಗಿ 1970ರ ದಶಕದಲ್ಲಿ ಉತ್ಖನನಗಳನ್ನು ಕೈಕೊಂಡು ಪುರಾತನ ಕಾಲದ ಗಜಪೃಷ್ಠಾಕಾರದ ಇಟ್ಟಿಗೆಯಲ್ಲಿ ಕಟ್ಟಲಾದ ದೇಗುಲಗಳನ್ನು ಶೋಧಿಸಿದ್ದಾರೆ. ಇವುಗಳು ಮೌರ್ಯರ ಕಾಲದಷ್ಟು ಪುರಾತನವಲ್ಲದಿದ್ದರೂ ಇವುಗಳ ರಚನೆಯ ಶೈಲಿಯು ಪ್ರಾಚೀನವಾಗಿವೆ. ಅಲ್ಲದೇ ಬೌದ್ಧ ನಗರ ರಚನೆಯಲ್ಲಿ ಕಂಡು ಬರುವಂತೆ ಊರಿನ ಆಚೆಗೆ ಪ್ರದಕ್ಷಿಣೆಯೆಬಂತೆ ಊರಿನ ಸುತ್ತಲೂ ಬೌದ್ಧ ಸ್ಥೂಪಗಳನ್ನು ಅಲ್ಲಲ್ಲಿ ನಿರ್ಮಿಸಿರುವುದನ್ನು ಕಾಣುತ್ತೇವೆ. ಹೂವಿನ ಕೊಪ್ಪಲು, ಮಾರಿಹಿತ್ತಲು, ದೋಣಿಗುಡ್ಡ, ಕಂಚಿನ ಮನೆ ಇತ್ಯಾದಿ ಸ್ಥಳಗಳಲ್ಲಿ ಪ್ರಾಚೀನ ಸ್ಥೂಪಗಳ ಅವಶೇಷಗಳಂತೆ ಕಾಣುವ ಕಿರು ದಿಮ್ಮೆಗಳಿವೆ. ಸನ್ನತಿ ಹಾಗೂ ಬನವಾಸಿ ಪಟ್ಟಣಗಳು ಒಂದೇ ಮಾದರಿಯಲ್ಲಿ ನಿರ್ಮಿಸಿದಂತಿವೆ. ನದಿಗಳನ್ನು ಬಳಸಿಕೊಂಡು ದಂಡೆಯ ಮೇಲೆ ಆಯತಾಕಾರದ ವಿನ್ಯಾಸದಲ್ಲಿ ನಿರ್ಮಾಣಗೊಂಡಿರುವುದು ಗಮನಿಬೇಕಾದ ಅಂಶ.

ಇಸಿಲ ಪಟ್ಟಣ:
ಅಂದಿನ ಮೈಸೂರು ರಾಜ್ಯದ ಶಾಸನತಜ್ಞರಾಗಿದ್ದ ಬಿ.ಎಲ್. ರೈಸ್ ಅವರು 1891ರಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಸಿದ್ದಾಪುರ ಗ್ರಾಮದ ಬಳಿ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಅಶೋಕನ ಬಂಡೆ ಶಾಸನವನ್ನು ಶೋಧಿಸಿದರು. ಇದರ ಪಕ್ಕದಲ್ಲಿಯೇ ಸಿದ್ದಾಪುರ ಗ್ರಾಮಕ್ಕೆ ಸಮೀಪದ ಇನ್ನೊಂದು ಬಂಡೆಯ ಮೇಲು ಅಶೋಕನ ಕಿರು-ಶಾಸನಗಳನ್ನು ಶೋಧಿಸಿ ಪ್ರಕಟಿಸಿದರು. ಆನಂತರ ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಡಾ|| ಎಂ. ಹೆಚ್. ಕೃಷ್ಣ ಅವರು ಶಾಸನಗಳಲ್ಲಿ ಉಲ್ಲೇಖವಾದ ಇಸಿಲ ಪಟ್ಟಣದ ಶೋಧನಗೆ ತೊಡಗಿದರು. 1940ರಲ್ಲಿ ಭೂ-ಉತ್ಖನನಗಳನ್ನು ಕೈಕೊಂಡು ಅಶೋಕನ ಶಾಸನ ಬಂಡೆಯ ಹಿಂಬದಿಯ ಬೆಟ್ಟದ ಬುಡದಲ್ಲಿ ಹರಡಿಕೊಂಡ ವಿಶಾಲವಾದ ಪ್ರದೇಶದಲ್ಲಿ ಅಶೋಕನು ಉಲ್ಲೇಖಿಸಿದ ಇಸಿಲ ಪಟ್ಟಣವೆಂದು ಗುರುತಿಸಿದರು. ನಂತರ ಕೇಂದ್ರ ಪುರಾತತ್ವ ಇಲಾಖೆಯ ಮುಖಸ್ಥರಾಗಿದ್ದ ಮಾರ್ಟಿಮರ್ ವೀಲರ್ ಅವರು ಕೂಡ ಪ್ರಾಚೀನ ಇಸಿಲ ಪಟ್ಟಣದ ಕುರಿತಾಗಿ ಶೋಧನೆಗಾಗಿ ಭೂ-ಉತ್ಖನನಗಳನ್ನು 1947ರಲ್ಲಿ ಕೈಕೊಂಡರು. ಇಸಿಲ ಕುರಿತಂತೆ ಹಲವಾರು ವಿದ್ವಾಂಸರು ಅಭಿಪ್ರಾಯಗಳನ್ನು ನೀಡಿದ್ದಾರೆ. ಇದು ದ್ರಾವಿಡ ಮತ್ತು ಕನ್ನಡ ಶಬ್ದವೆಂದು ವಿಶ್ಲೇಷಿಸಿದ್ದಾರೆ. ಅಶೋಕನ ಶಿಲಾಶಾಸನ ಈ ಸ್ಥಳದಲ್ಲಿದ್ದರೂ ಮೌರ್ಯರ ಸಮಕಾಲೀನ ಪ್ರಾಕ್ತನ ಅವಶೇಷಗಳನ್ನು ದೊರಕದೆ ಇರುವುದು ಪಟ್ಟಣದ ಕಾಲವನ್ನು ಗುರುತಿಸಲು ತೊಡಕಾಗಿದೆ. ಆದರೆ, ಈ ಪ್ರಾಚೀನ ನೆಲೆಯಲ್ಲಿ ಕಬ್ಬಿಣಯುಗ ಕಾಲದ ಹಲವಾರು ವಿವಿಧ ಮಾದರಿಯ ಕಲ್ಲು-ಕುಣಿಗಳು, ಸಮಾಧಿಗಳು ಶೋಧಿಸಲಾಗಿದೆ. ದೊರೆತ ಪ್ರಾಚೀನ ಅವಶೇಷಗಳ ಆಧಾರದ ಮೇಲೇ ಇಲ್ಲಿಯ ಇಸಿಲ ಪಟ್ಟಣದ ಸ್ಥೂಲ ರಚನೆಯನ್ನು ಗುರುತಿಸಬಹುದಾಗಿದೆ. ಪ್ರಾಚೀನ ಇಸಿಲ ಪಟ್ಟಣವು ಬೆಟ್ಟದ ಬುಡದಲ್ಲಿ ನೆಲಪಟ್ಟಣದಂತೆ ಇಳಿಜಾರಿನ ಪ್ರದೇಶದಲ್ಲಿ ಹರಡಿಕೊಂಡಿತ್ತು. ಇದು ಅಶೋಕನ ಶಿಲಾಶಾಸನದ ಬಂಡೆಯ ಹಿಂಬದಿಯಲ್ಲಿ ರೊಪ್ಪ ಗ್ರಾಮದಿಂದ ಸಿದ್ದಾಪುರ ಗ್ರಾಮಕ್ಕೆ ಇರುವ ರಸ್ತೆಯ ಬದಿಯಲ್ಲಿ ನೆಲೆಗೊಂಡಿತ್ತು. ಪ್ರಾಚೀನವೆನ್ನುವ ಇಟ್ಟಿಗೆಯಲ್ಲಿ ನಿರ್ಮಿಸಿದ ಗಜಪೃಷ್ಠಾಕಾರದ ಚೈತ್ಯ ದೇಗುಲವೊಂದನ್ನು ಇಸಿಲ ನೆಲೆಯಲ್ಲಿ ಶೋಧಿಸಲಾಗಿದೆ. ಅದರಂತೆ, 18 ಅಡಿ ಅಗಲವಾದ ಕಲ್ಲು ಹಾಸಿನ ರಸ್ತೆಯೊಂದನ್ನು ಕೂಡ ಪತ್ತೆ ಮಾಡಲಾಗಿದೆ.

ಈ ಪ್ರಾಚೀನ ರಸ್ತೆಯು ಗ್ರಾನೈಟ್ ಕಲ್ಲುಗಳನ್ನು ಜೋಡಿಸಿ ರಚಿಸಲಾಗಿದೆ. ಈ ಎರಡು ಪ್ರಾಚೀನ ಅವಶೇಷಗಳು ಮೌರ್ಯರ ಸಮಕಾಲೀನ ಇಲ್ಲದಿದ್ದರೂ ರಚನೆಯ ಶೈಲಿ ಮತ್ತು ಅಶೋಕನ ಶಾಸನದ ಹಿನ್ನೆಲೆಯಲ್ಲಿ ಇಲ್ಲೊಂದು ಪ್ರಾಚೀನತಮ ಪಟ್ಟಣವಿತ್ತೆಂಬುದು ಸ್ಪಷ್ಷವಾಗುತ್ತದೆ. ಇದಕ್ಕೆ ಪೂರಕವೆಂಬಂತೆ ಬೆಟ್ಟದಲ್ಲಿ ಅಕ್ಕ-ತಂಗಿ ಗುಡಿಯ ಬಳಿಯ ಬಂಡೆಯಲ್ಲಿ ಆನೆಯ ರೇಖಾಚಿತ್ರವಿದೆ. ಈ ಆನೆಯ ರೇಖಾಚಿತ್ರವೂ ಬಹಳ ಅಪರೂಪವಾಗಿದೆ. ಅಶೋಕನ ಶಿಲಾಶಾಸನಗಳಿರುವ ಕೆಲವು ಸ್ಥಳಗಳಲ್ಲಿ ಆನೆಯ ಶಿಲ್ಪ ಅಥವಾ ರೇಖಾಚಿತ್ರಗಳನ್ನು ಮಾಡಿರುವ ಉದಾಹರಣೆಗಳಿವೆ. ಉತ್ತರ ಪ್ರದೇಶದ ಕಾಲ್ಸೀ ಎಂಬ ಪ್ರದೇಶದಲ್ಲಿ ದೊರೆತ ಅಶೋಕನ ಶಾಸನದ ಮೇಲ್ಭಾಗದಲ್ಲಿ ಸೊಂಡಿಲನ್ನು ದಂತಗಳಿಗೆ ಸುತ್ತಿಕೊಂಡು ನಿಂತಿರುವ ಆನೆಯ ರೇಖಾಚಿತ್ರವಿದೆ. ಇದರ ಕೆಳಭಾಗದಲ್ಲಿ ಗಜತಮೆ ಎಂದು ಬ್ರಾಹ್ಮಿ ಲಿಪಿಯಲ್ಲಿ ಕಿರಿದಾಗಿ ಬರೆಯಲಾಗಿದೆ. ಅದರಂತೆ ಒಡಿಸ್ಸಾದ ಧೌಲಿ ಎಂಬ ಸ್ಥಳದಲ್ಲಿರುವ ಅಶೋಕನ ಕಳಿಂಗ ಶಾಸನದ ಬಂಡೆಯ ಮೇಲ್ಭಾಗದಲ್ಲಿ ಆನೆಯ ಶಿಲ್ಪವನ್ನು ಕೊರೆಯಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಅಶೋಕನ ಶಿಲಾಶಾಸನಗಳು ದೊರೆಯುವ ಸ್ಥಳಗಳಲ್ಲಿ ಆನೆಗಳ ರೇಖಾಚಿತ್ರ ಅಥವಾ ಶಿಲ್ಪಗಳನ್ನು ರಚಿಸುವುದು ಸಂಪ್ರದಾಯವಾಗಿತ್ತೆಂದು ಅಲ್ಲದೇ ಆನೆಯು ಗೌತಮ ಬುದ್ಧನ ಜನನದ ಸಂಕೇತವಾಗಿಯೂ ಗುರುತಿಸಲಾಗುತ್ತದೆ. ಆದ್ದರಿಂದ ಬ್ರಹ್ಮಗಿರಿಯಲ್ಲಿ ದೊರೆಯುವ ಆನೆಯ ರೇಖಾಚಿತ್ರವು ಮೌರ್ಯರ ಕಾಲದ ಅವಶೇಷವೆಂದು ಇತಿಹಾಸಕಾರರಾದ ಪ್ರೊ|| ಲಕ್ಷ್ಮಣ ತೆಲಗಾವಿ ಅವರ ಅಭಿಪ್ರಾಯ ಸೂಕ್ತವೆನಿಸುತ್ತದೆ. ಇಲ್ಲಿ ಕೈಕೊಂಡ ಭೂ-ಉತ್ಖನನಗಳಲ್ಲಿ ಹೆಚ್ಚಿನ ಸಂಖ್ಯೆಯ ಕಬ್ಬಿಣದ ಆಯುಧಗಳು, ಕೃಷಿ ಉಪಕರಣಗಳು ಇತ್ಯಾದಿಗಳು ದೊರೆಕಿವೆ. ಈ ಪ್ರದೇಶದ ಪರಿಸರದಲ್ಲಿ ಕಬ್ಬಿಣದ ಅದಿರು ಹೇರಳವಾಗಿ ಸಿಗುವುದರಿಂದ ಮೌರ್ಯರ ಕಾಲದಲ್ಲಿ ಕಬ್ಬಿಣದ ಉಪಕರಣ ತಯಾರಿಕೆಯ ಕೇಂದ್ರಗಳು ಇಲ್ಲಿದ್ದವೆಂದು ಗುರುತಿಬಹುದು. ಅದಕ್ಕಾಗಿಯೇ ಮೌರ್ಯರು ಮುಖ್ಯವಾಗಿ ಅಶೋಕ ಈ ಪ್ರದೇಶಗಳನ್ನು ತನ್ನ ನೇರ ಆಳ್ವಿಕೆಗೆ ಒಳಪಡಿಸಿದ್ದರು ಎಂದು ಹೇಳಲಾಗುತ್ತದೆ. ಇಸಿಲ ಪಟ್ಟಣವು ಮೌರ್ಯ ಸಾಮ್ರಾಜ್ಯದ ಅಂಚಿನಲ್ಲಿದ್ದ ಒಂದು ಮುಖ್ಯ ಪಟ್ಟಣ ಮುಖ್ಯವಾಗಿ ಲೋಹ ಉದ್ಧಿಮೆಯ ಕೇಂದ್ರ ಪಟ್ಟಣವೆಂದು ಹೇಳಬಹುದು. ಒಟ್ಟಿನಲ್ಲಿ ಬ್ರಹ್ಮಗಿರಿಯ ಬೆಟ್ಟದ ತಪ್ಪಲಿನಲ್ಲಿ ರೂಪಗೊಂಡಿದ್ದ ಇಸಿಲ ಪಟ್ಟಣವು ಮೌರ್ಯರ ಕಾಲದೊಂದಿಗೆ ಗುರುತಿಸಬಹುದಾದ ಪಟ್ಟಣವಾಗಿದ್ದು ಅದು ಮೌರ್ಯರ ನಂತರ ಕ್ರಮೇಣವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು ಎಂದು ಹೇಳಬಹುದು.

ಕ್ರಿ.ಪೂ. 3ನೇ ಶತಮಾನದಲ್ಲಿ ಅಂದರೆ ಇಂದಿಗೆ 2250 ವರ್ಷಗಳ ಹಿಂದೆ ಮೌರ್ಯರು ನಡೆಸಿದ ಆಳ್ವಿಕೆಯ ಕಾಲವು ಕನ್ನಡ ನಾಡಿನ ಪರಿಸರದಲ್ಲಿ ಕಬ್ಬಿಣ ಯುಗ ಸಂಸ್ಕೃತಿಯಿಂದ ನಗರೀಕರಣ ಸಂಸ್ಕೃತಿ ರೂಪುಗೊಂಡ ಕಾಲವೆಂದು ಗುರುತಿಸಬಹುದು. ಈ ಸಂಕ್ರಮಣದ ಕಾಲದಲ್ಲಿ ಮೂಡಿಬಂದ ನಗರೀಕರಣ ಪ್ರಕ್ರಿಯೆಯು ನಾಡಿನ ಪ್ರಥಮ ಹಂತದ ನಗರೀಕರಣ ಪ್ರಕ್ರಿಯೆ ಎಂದು ಕರೆಯಬಹುದು. ಈ ಹಂತವು ಆರಂಭಕಾಲವೆಂದು ಗುರುತಿಸಬಹುದಾದರೂ ನಗರೀಕರಣದ ಎಲ್ಲಾ ಮುಖ್ಯ ಲಕ್ಷಣಗಳನ್ನು ಮೈಗೂಡಿಸಿಕೊಂಡಿತ್ತೆಂದು ಹೇಳಬಹುದು. ಕ್ರಮೇಣವಾಗಿ ಪರಿಪೂರ್ಣತೆಯ ಹಂತವನ್ನು ತಲುಪುವತ್ತ ಹೆಜ್ಜೆ ಹಾಕಲಾರಂಭಿಸಿತು. ಮುಂದೆ ಆಳ್ವಕೆಗೆ ಬಂದ ಶಾತವಾಹನರ, ಚುಟುಗಳ, ಮಹಾರತಿ, ರಟ್ಟರ ನಂತರ ಕದಂಬರ ಮತ್ತು ಚಾಲುಕ್ಯರ ಆಳ್ವಿಕೆಯಲ್ಲಿ ಸಮೃದ್ಧವಾಗಿ ಬೆಳೆದು ಪ್ರಸಿದ್ಧವಾದ ನಗರಗಳ ನಿರ್ಮಾಣಕ್ಕೆ ನಾಂದಿ ಹಾಡಿದವು ಎಂದು ಹೇಳಬಹುದು.

ಆಧಾರಗಳು:
* ಲಕ್ಷ್ಮಣ ತೆಲಗಾವಿ. 2004. ಮೌರ್ಯ ಮತ್ತು ಶಾತವಾಹನ ಯುಗ. ಕನ್ನಡ ವಿ.ವಿ. ಹಂಪಿ.
* ಷ. ಶೆಟ್ಟರ್. 2007. ಶಂಗಂ ತಮಿಳಳಗಂ ಮತ್ತು ಕನ್ನಡ ನಾಡು-ನುಡಿ ಆರಂಭ ಕಾಲದ ದ್ರಾವಿಡ ಸಂಬಂಧದ ಚಿಂತನೆ. ಅಭಿನವ ಪ್ರಕಾಶನ. ಬೆಂಗಳೂರು.

* Annual Report of the Mysore Archaeological Survey for the year 1940 (edited by MH Krishna).

* D. Sundara. 1986-87. “Excavations at Sannati” 1986-87”. Puratattva- Bulletin of the Indian Archaeological Society, Number 17. Pp. 22-25.

* A.V. Narasimha Murthy. 1995. Excavations at Banavasi. Directorate of Archaeology & Museums. Mysore.

* K.P. Poonacha. 2011. Excavations at Kanaganahalli. ASI, New Delhi.

* R.E. Morimer Wheeler. 1947-48. “Brahmagiri and Chandravalli” Ancient India- Bulletin of the ASI Vol. 4. Pp. 180-310.

* Uthara Suvrathan. 2013. Complexity on the Periphery: A Study of Regional Organization at Banavasi c.1st – 18th Century A.D. [Unpublished Ph.D. Thesis] University of Michigan

 

MORE FEATURES

ಜನಸಾಮಾನ್ಯರಿಗೆ ಸಂಕೀರ್ಣ ಶೈಲಿಯಲ್ಲಿ ಬರೆದ ಸಾಹಿತ್ಯ ಬೇಡ

01-11-2024 ಬೆಂಗಳೂರು

"ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯ ಮತ್ತು ಗಂಭೀರ ಎಂಬ ಎರಡು ವರ್ಗಗಳ ನಡುವೆ ಇರುವ ಚರ್ಚೆ-ಭಿನ್ನಾಭಿಪ್ರಾಯಗಳು ಇಂದ...

ನಾವೆಲ್ಲರೂ ಅಂದರೆ ಕನ್ನಡಿಗರು, ಕನ್ನಡ ನೆಲದಲ್ಲಿ ವಾಸಿಸುವವರು...

01-11-2024 ಬೆಂಗಳೂರು

"ನಾವೆಲ್ಲರೂ ಅಂದರೆ ಕನ್ನಡಿಗರು, ಕನ್ನಡ ನೆಲದಲ್ಲಿ ವಾಸಿಸುವವರು... ನಮ್ಮ ನದಿಯ ಹೆಸರು 'ಕನ್ನಡಿಗ'. ನಮ್...

ಕಾದಂಬರಿಯಲ್ಲಿ ಮೂರು ತಲೆಮಾರುಗಳ ಕತೆಯಿದೆ..

31-10-2024 ಬೆಂಗಳೂರು

“ಕಾಲ ಕಾಲದಲ್ಲಿ ಆಗುತ್ತ ಬರೋ ಬದುಕು, ಶೈಲಿ, ನಡವಳಿಕೆ, ಹವ್ಯಾಸ, ವಾತಾವರಣಗಳ ಬದಲಾವಣೆ ಈ ಕಾದಂಬರಿಯ ಮೂರು ತಲೆಮಾ...