Date: 21-10-2025
Location: ಬೆಂಗಳೂರು
"ಮೇಲು, ಕೀಳು, ಶೋಷಣೆ ಭಕ್ತಿಯದಲ್ಲ, ಭಗವಂತನದಲ್ಲ. ಹಿತಾಸಕ್ತ ವರ್ಗದ್ದು. ಆದುದರಿಂದಲೇ ಕ್ರಾಂತಿಕಾರಕ ನಡವಳಿಯ ವಚನಕಾರರಾರೂ ಭಕ್ತಿಯನ್ನು, ದೇವರನ್ನು ನೀರಾಕರಿಸಿದ್ದಿಲ್ಲ. ಅಂದಮೇಲೆ ಭಗವಂತನೇ ಸರ್ವಾಂತರ್ಯಾಮಿ, ಪರಮೋತ್ತಮನೆಂದು ನಂಬಿದ ಭಕ್ತಿಪಂಥ ನಿರಾಕರಿಸುವುದೆಂತು? ವಿಚಾರವಾದಿಗಳಲ್ಲಿ ಕೆಲವರು ವಾದಿಸುವಂತೆ ಇದನ್ನು ಇಡಿಯಾಗಿ ಅವಿಚಾರವೆನ್ನುವುದು ಇದರಾಚೆಗೆ ನೋಡದಿರುವ ಅವಿಚಾರವೇ," ಎನ್ನುತ್ತಾರೆ ಸ. ರಘುನಾಥ. ಅವರು ತಮ್ಮ ʻಬೆರಕೆ ಸೊಪ್ಪುʼ ಅಂಕಣಕ್ಕೆ ಬರೆದ ಲೇಖನ ನಿಮ್ಮ ಓದಿಗಾಗಿ..
ಭಾರತೀಯ ಕೀರ್ತನಾ ಸಾಹಿತ್ಯ ಹಲವು ರೂಪಗಳಲ್ಲಿ, ಹೆಸರುಗಳಲ್ಲಿ ಕಾಣಿಸಿಕೊಂಡು ಭಕ್ತಿಯ ಮಕುಟತೊಟ್ಟು ಮೆರೆದಿದ. ಅಭಂಗ, ಅಷ್ಟಪದಿ, ಭಜನೆ, ಪದ, ವಚನ, ಪಾಶುರ, ಶ್ಲೋಕ, ನಾಮಾವಳಿ, ಸುಪ್ರಭಾತ, ಚಾಟು, ದೋಹೆ ಮೊದಲಾಗಿ. ಇವು ಪ್ರಪತ್ತಿಯನ್ನು ಗುಣದ್ರವ್ಯವಾಗಿ ಸ್ವೀಕರಿಸಿವೆ. ಎಲ್ಲವೂ ಅರಳಿರುವುದು ‘ನಲ್’ ಧಾತುವಿನ ಮೂಲಕ. ಅದು ಪ್ರಕಟವಾಗುವುದು ಭಗವಂತನಲ್ಲಿನ ನಲುಮೆಯಲ್ಲಿ. ಪಂಥ ದೈತವೋ, ಅದ್ವೈತವೋ ವಿಶಿಷ್ಟಾದ್ವೈತವೋ, ವೀರಶೈವವೋ. ಯಾವುದಾದರೂ ಅಷ್ಟೆ. ಇವುಗಳ ಮನೋಭಾವ ಸ್ವೀಕಾರ. ಸ್ವೀಕರಿಸದವ ಭಕ್ತನಲ್ಲ. ಸಮೀಕರಿಸದೆ ಭಕ್ತಿಯಿಲ್ಲ. ದೇವರನ್ನು ರೂಪಿಸಿದ್ದು ಮಾನವನೆಂಬ ವಾದ ನಿರಾಕರಣೆಯಲ್ಲವಾದರೂ ಮನಜನನ್ನು ಕಂಡಿದ್ದು ದೇವರು ಎಂದು ಹೇಳಿದರೆ ಅದೂ ನಿರಾಕರಣೆಯದ್ದಲ್ಲ.
ತಲ್ಲಣಗಳು ಎಲ್ಲ ಜೀವಿಗಳಲ್ಲಿಯೂ ಇದ್ದುದೆ. ಸಂಸಾರಿಯಿಂದ ಸನ್ಯಾಸಿಯವರೆಗೆ. ಈ ತಲ್ಲಣಗಳೇ ಮಾನವ ಸಮುದಾಯದ ಕಲ್ಯಾಣ ಚಿಂತನೆಗೆ ಮೂಲವಾದುದು. ನಾಸ್ತಿಕ ವಾದಿಗಳೂ ತಲ್ಲಣ ಮುಕ್ತರಲ್ಲ. ಅದು ದೇವರ ಅಸ್ತಿತ್ವವಾದ ಅಥವಾ ಪರಬ್ರಹ್ಮವಾದವನ್ನು ನಿರಾಕರಿಸುತ್ತಲೇ ಮಾನವ ಕಲ್ಯಣವನ್ನು ಆಶಿಸುವಲ್ಲಿ ಭಕ್ತಿ ಪಂಥದ ಆಜುಬಾಜಿನಲೇ ಸಂಚರಿಸುತ್ತದೆ. ಅಂದರೆ ಭಿನ್ನ ಮಾರ್ಗದಲ್ಲಿ ಲಕ್ಷ್ಯ ಒಂದಾಗುವುದು ಇಲ್ಲಿಯೇ.
ಮೇಲು, ಕೀಳು, ಶೋಷಣೆ ಭಕ್ತಿಯದಲ್ಲ, ಭಗವಂತನದಲ್ಲ. ಹಿತಾಸಕ್ತ ವರ್ಗದ್ದು. ಆದುದರಿಂದಲೇ ಕ್ರಾಂತಿಕಾರಕ ನಡವಳಿಯ ವಚನಕಾರರಾರೂ ಭಕ್ತಿಯನ್ನು, ದೇವರನ್ನು ನೀರಾಕರಿಸಿದ್ದಿಲ್ಲ. ಅಂದಮೇಲೆ ಭಗವಂತನೇ ಸರ್ವಾಂತರ್ಯಾಮಿ, ಪರಮೋತ್ತಮನೆಂದು ನಂಬಿದ ಭಕ್ತಿಪಂಥ ನಿರಾಕರಿಸುವುದೆಂತು? ವಿಚಾರವಾದಿಗಳಲ್ಲಿ ಕೆಲವರು ವಾದಿಸುವಂತೆ ಇದನ್ನು ಇಡಿಯಾಗಿ ಅವಿಚಾರವೆನ್ನುವುದು ಇದರಾಚೆಗೆ ನೋಡದಿರುವ ಅವಿಚಾರವೇ. ಯಾವುದೇ ವಿಚಾರ(ವಾದ)ವನ್ನು ಅದರ ಆಂತರ್ಯವರಿಯದೆ ಸಾರಾಸಗಟಾಗಿ ತಿರಸ್ಕರಿಸುವುದು ವೈಚಾರಿಕ ಅಸ್ಪುಶ್ಯತೆಯೇ. ಸಮ್ಮತಿ ಅಸಮ್ಮತಿ ಬೇರೆ. ಹಾಗೆಯೇ ವಿರೋಧ, ತಿರಸ್ಕಾರ. ವಿರೋಧವು ಸಖ್ಯದೂರವಲ್ಲ. ತಿರಸ್ಕಾರ ಸಖ್ಯದೂರದ್ದು. ಸಖ್ಯಕ್ಕೆ ದೂರವಿರದೆಯೇ ಎಲ್ಲ ಪಂಥ, ಧರ್ಮಗಳು ಸಾಮಾಜಿಕ ಅಪ್ಪುಗೆಯಲ್ಲಿದ್ದು ಅಸ್ಥಿತ್ವವನ್ನು ಉಳಿಸಿಕೊಂಡವು. ಅರೆಬೆಂದ ಗಡಿಗೆ ಸೋರುತ್ತದೆ; ಪೂರ್ತಿ ಬೆಂದ ಗಡಿಗೆ ಬಾಳುತ್ತದೆ. ಇದಕ್ಕಾಗಿ ಮರ್ತ್ಯಬೇಕು ಎಂಬುದನ್ನು ಬಸವಣ್ಣ ಬಲ್ಲವನಾಗಿದ್ದ. ‘ಮರ್ತ್ಯವ ಕೊಡು’ ಎಂದು ಬೇಡಿದ.
ಬಯಲು ಒಂದು ಬಹುದೊಡ್ಡ ಅರಿವಿನ ಆವಿಷ್ಕಾರ. ಬಯಲಿಂದ ಬಯಲಿಗೆ ಯಾನವಿಲ್ಲ. ಅಂದರೆ ಸಂಚಾರವಿಲ್ಲ, ಜಂಗಮತನವಿಲ್ಲ. ಜಂಗಮ ಅನ್ನುವುದು ಶಿವದರಿವಿನಷ್ಟೇ ಉದ್ದಗಲ ಆಳದ್ದು. ಸ್ಥಾವರದಿಂದ (ವಿವಿಧ ವಿಚಾರ, ಚಿಂತನೆಗಳ ಸಮುದಾಯಗಳ ಬದುಕಿನ ಒಂದೇ ಆದ ನೆಲೆ) ಶ್ರದ್ಧೆ, ಮೈತ್ರಿ, ಮುದಿತದಿಂದ ಹೊರಡುವ ಯಾತ್ರೆಯೇ ಜಂಗಮತ್ವದ ಶೀಲದನುಸಂಧಾನ ಎಂಬುದನ್ನು ವಿಶೇಷವಾಗಿ ವಚಕಾರರ, ಕೀರ್ತನೆಕಾರರ ನಡೆನುಡಿ ಮನವರಿಕೆ ಮಾಡಿಕೊಡುತ್ತದೆ. ‘ಅನ್ಯರಿಗೆ ಅಸಹ್ಯಪಡಬೇಡ’ ಎಂಬುದು ಜಂಗಮದ ಬಹುದೊಡ್ಡ ದರ್ಶನ ಅನ್ನಿಸುವುದು. ಇದು ಭಕ್ತಿ ಸಾಹಿತ್ಯದಲ್ಲಿಯೂ ಅದೃಶ್ಯವಲ್ಲ. ಮಾನವೋನ್ನತಿ ಬಯಸದ್ದು (ತನ್ನ ಅನುಯಾಯಿಗಳಷ್ಟೇ ಅನ್ನುವುದು) ಧರ್ಮವಲ್ಲ, ಧಾಮಿಕತಯಂತೂ ಅಲ್ಲವೆ ಅಲ್ಲ. ‘ಜಂಗಮಗೆ ಜಾತಿಯಿಲ್ಲ, ಲಿಂಗಕ್ಕೆ ಹೊಲೆಯಿಲ್ಲ’ ಎಂಬ ನುಡಿಯನ್ನು ಈ ಕೋನದಿಂದ ಮನದರಿವಿಗೆ ತಂದುಕೊಳ್ಳಬೇಕಾಗುವುದು. ಯಾವುದೇ ನಿಜಧರ್ಮಕ್ಕೆ ಈ ನುಡಿ ಅನ್ವಯಿಸುವುದು. ‘ಮಾನವ ಕುಲ ಒಂದೇ’ ಎಂಬುದು ಸಕಲ ಧರ್ಮಸಾರ ಎಂಬರಿವು ಪಂಪನದಾಗಿರದಿದ್ದರೆ ಅವನು ಹೀಗೆ ಹೇಳುವುದು ಸಾಧ್ಯವಾಗುತ್ತಿರಲಿಲ್ಲ.
‘ದೇವನೊಬ್ಬ ನಾಮ ಹಲವು’ ಎಂದು ಬಸವಣ್ಣ ಹೇಳಿದರೆ, ಅದಕ್ಕೆ ಸಂವಾದಿಯೆಂಬಂತೆ ತ್ಯಾಗರಾಜರ ಧ್ವನಿ ‘ಎವರನಿ ನಿನ್ನೆವರನಿ ಪಿಲಿಚೆದಿರಾ, ಶಿವುಡನೋ ಮಾಧವುಡನೋ, ಕಮಲಾಭವುಡನೋ’ (ಯಾರೆಂದು, ನಿನ್ನಾರೆಂದು ಕರೆವುದೋ, ಶಿವನೆಂದೊ ಮಾಧವನೆಂದೊ ಕಮಲಾಭವನೆಂದೊ) ಕೇಳಿಸುತ್ತದೆ. ಈ ಎಲ್ಲವನ್ನೂ ಅರಿಯೆ ಹೊರಟಾಗ ಅಂತರಂಗ ಬಹಿರಂಗ ಶುದ್ಧರಿರುವ ಚಿಂತಕರ ಮಾರ್ಗಗಳು ಕಡಲಿನೆಲ್ಲ ಮುಖಜಭೂಮಿಗಳಂತೆ ಕಾಣುತ್ತವೆ.
ಅನ್ಯರಿಗೆ ಅಸಹ್ಯ ಪಡಬೇಡ ಎಂಬುದರ ಭಾವಾರ್ಥದಲ್ಲಿರುವುದು ಸಹಿಷ್ಣುತತ್ವ. ಭಕ್ತಿ ಪಂಥಗಳೆಲ್ಲ ಈ ತತ್ವದಲ್ಲಿಯೇ ಉಸಿರಾಡುತ್ತವೆ. ಹಾಗೆಂದ ಮೇಲೆ ಹೊಡೆದಾಟ, ಕಿತ್ತಾಟ, ಅಶಾಂತಿಯೇಕೆ ಎಂಬ ಪ್ರಶ್ನೆ. ಇದಕ್ಕೆ ಉತ್ತರಕ್ಕಾಗಿ ಬಸವಣ್ಣನಲ್ಲಿಗೆ ಹೋದರೆ ಉತ್ತರವಿದೆ. ‘ತನ್ನ ಬಣ್ಣಿಸ’ (ಬೇಡ), ‘ಇದಿರ ಹಳಿಯಲಿ’ (ಬೇಡ). ತಾಳ್ಳಪಾಕ ಅನ್ನಮಾಚಾರ್ಯನೂ ಎಲ್ಲರಿಗೂ ‘ಬ್ರಹ್ಮವೊಂದೇ ಪರಬ್ರಹ್ಮವೊಂದೇ’ ಎಂದರಿದು ಹೇಳಿದ್ದಾನೆ. ಎಲ್ಲವನ್ನು ಅರಿಯಲು ಮೊದಲು ಶಾಂತಿ ಬೇಕು. ಇದರಿಂದ ಸೌಖ್ಯದತ್ತ ಜಂಗಮವಾಗಬೇಕು. ಮುಕ್ತ ಚಿಂತನೆ, ಅದರಂತೆ ನಡೆಯೇ ಸೌಖ್ಯ.
ಅಂತಃಕರಣವಿಲ್ಲದ ಭಕ್ತಿ, ಕ್ರಾಂತಿ, ವೈಚಾರಿಕತೆ, ಹೋರಾಟ ಹಾಗೆಯೆ ಸಾಹಿತ್ಯ, ಕಲೆ, ಸಂಗೀತ, ಭಾಷಣ ಇಂಥವಕ್ಕೆಲ್ಲ ಆಂತರಂಗಿಕ ಆರ್ದ್ರತೆ ಬಾರದು ಮತ್ತು ಇರದು. ಅಂತಃಕರಣ ಈ ಎಲ್ಲದರ ಮೂಲದ್ರವ್ಯ. ಇದು ಬತ್ತಿದ್ದರೆ ಆಚರಣೆಯಿಲ್ಲದ ಶಬ್ದ (ಮಾತು) ಅಷ್ಟೇ ಆಗುತ್ತದೆ. ಅಂತಃಕರಣ ಹಂಚುವ ವಸ್ತುವಲ್ಲ, ಉಪದೇಶದಿಂದ ಮೂಡುವುದಿಲ್ಲ, ಬಿಕರಿಗೆ ಇರುವುದಿಲ್ಲ, ಕ್ರಯಕ್ಕೆ ಸಿಗುವುದಿಲ್ಲ. ಅದಿರುವುದು ಮನೋಧರ್ಮದಲ್ಲಿ.
ಪಾಪ ಅವರು ಹಸಿದಿದ್ದಾರೆ, ಬಾಯಾರಿದ್ದಾರೆ ಅಂದ ಮಾತ್ರಕ್ಕೆ ಅವರ ಹಸಿವೆ ಕಳೆಯದು, ನೀರಡಿಕೆ ಹಿಂಗದು. ಅನ್ನ - ನೀರು ಕೊಡಬೇಕು. ಹಾಗೆಯೇ ಜೀವಿಗಳ ವಿಷಯದಲ್ಲಿಯೂ. ಅಂತಃಕರಣದ ವ್ಯಕ್ತ ಮೌನಕ್ರಿಯೆಯದು, ಮಾತಿನದಲ್ಲ. ಕೊಡುವವರಿಗೆ ಕೊಟ್ಟಿದ್ದರ ಕುರಿತು ಮಾತಿರಬಾರದು. ಪಡೆಯುವವರಿಗೆ ಕೃತಜ್ಞತೆಯ ಮಾತಿರಬಹುದು ಇಲ್ಲವೆ ಅದು ಮನದಲ್ಲೇ ಇರಬಹುದು. ಹೊರ ಮಾತಾಗಿ ಹೇಳಿದರಷ್ಟೇ ಅವರು ಕೃತಜ್ಞರು, ಇಲ್ಲವೆಂದರೆ ಕೃತಘ್ನರು ಅಂದುಕೊಳ್ಳುವುದು ಕೊಟ್ಟಿದ್ದರ ಶೋಭೆಯನ್ನು ಮಸಕಾಗಿಸುತ್ತದೆ. ‘ಬಲಗೈಲಿ ಕೊಟ್ಟಿದ್ದು ಎಡಗೈಗೂ ತಿಳಿಯಬಾರದು’ ಎಂಬುದರ ಮರ್ಮ ಮನಸ್ಸಿಗೆ ತಿಳಿದಿರಬೇಕು.
ಅಂತಃಕರಣ ಇತರರಿಗಿಂತ ಮಕ್ಕಳಲ್ಲಿ ಹೆಚ್ಚಿಗಿರುವುದನ್ನು - ಬೇಕಿದ್ದರೆ - ಪರೀಕ್ಷಿಸಿ ನೋಡಬಹುದು. ಅವರು ಯಾರಿಗಾದರೂ, ಯಾವುದಕ್ಕಾದರೂ (ಪ್ರಾಣಿ, ಪಕ್ಷಿ) ದ್ರವಿಸುತ್ತಾರೆ. ದೊಡ್ಡವರಾದ ಮೇಲೆಯೂ ಹೀಗೆಯೇ ಇರುವರೆ ಎಂಬುದು ಅವರ ಈಗಿನ ಹಂತದಲ್ಲಿ ಕೇಳಲು ತಕ್ಕ ಪ್ರಶ್ನೆಯಲ್ಲ.
ಆರೋಪಿಸಿಕೊಳ್ಳದ ಸಾರ್ವಜಿಕ ಜೀವನ ದೊಡ್ಡದು. ಅದರ ತಳಹದಿ ಅಂತಃಕರಣಪೂರಿತ ಮಾನವೀಯತೆ. ಅದು ಭಕ್ತಿಯಂತೆ ಗರಗಸ. ಹೋರಾಟ, ಸಂಘಟನೆ ಇದೇ ಸಂಬAಧಕ್ಕೆ ಬರುವುದು. ಈ ಜಗದರಿವನ್ನು ತೋರಿದವ ಬಸವಣ್ಣ.
ಭಕ್ತಿಯೆಂಬುದ ಮಾಡಬಾರದು.
ಕರಗಸದಂತೆ ಹೋಗುತ್ತ ಕೊರೆವುದು, ಬರುತ್ತ ಕೊಯ್ದುದು.
ಘಟಸರ್ಪನಲ್ಲಿ ಕೈದುಡುಕಿದಡೆ ಹಿಡಿವುದ ಮಾಬುದೆ
ಕೂಡಲಸಂಗಮದೇವಾ?
"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...
"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...
"ದಾವಣಗೆರೆಯಲ್ಲಿ ಇಳಿದಾಗ ರಾತ್ರಿ ಎರಡೂವರೆ. ಆಟೋಕ್ಕೆ ಹೋಗಲೂ ಕಾಸಿಲ್ಲ. ಅದ್ಯಾರೋ ಪುಣ್ಯಾತ್ಮನಿಗೆ ಇರುವ ಸ್ಥಿತಿ ...
©2025 Book Brahma Private Limited.