Date: 31-12-1899
Location: ಬೆಂಗಳೂರು
''ಸಾಮಾನ್ಯವಾಗಿ ಒಂದು ಬಾಶೆಯಲ್ಲಿ ಇರುವ ಆಕ್ರುತಿಮಾಗಳು, ಆಕ್ರುತಿಮಾ ರೂಪಗಳು ಆ ಮನೆತನದ ಇತರ ಬಾಶೆಗಳಲ್ಲಿ ಕಂಡುಬರದಿದ್ದರೆ ಆ ರೂಪಗಳು ಆ ಬಾಶೆಯಲ್ಲಿ ಸ್ವತಂತ್ರವಾಗಿ ಬೆಳೆದಿರಬೇಕು. ಇದಕ್ಕೆ ಆ ಮನೆತನದ ಹೊರಗಿನ ಪ್ರೇರಣೆ, ತೆಗೆದುಕೊಳ್ಳುವಿಕೆ ಕಾರಣವಾಗಿರಬೇಕು,'' ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಜೋಡಿ ಪ್ರತಮ ಪುರುಶ ಸರ‍್ವನಾಮಗಳು’ ವಿಚಾರದ ಕುರಿತು ಬರೆದಿದ್ದಾರೆ.
ಸಾಮಾನ್ಯವಾಗಿ ಯಾವುದೆ ಬಾಶೆಯಲ್ಲಿ ಸರ‍್ವನಾಮಗಳು ಮುಚ್ಚಿದ ಪದಕೋಶವಾಗಿರುತ್ತವೆ. ಅಂದರೆ ಯಾವುದೆ ಬಾಶೆಯಲ್ಲಿ ಹೊಸತಾಗಿ ಸರ‍್ವನಾಮಗಳು ಸುಲಬವಾಗಿ ಹುಟ್ಟುವುದಿಲ್ಲ. ಹಾಗೆ ಹೊಸ ಸರ‍್ವನಾಮಗಳು ಬೆಳೆಯಬಹುದಾದರೂ ಅದು ಅತ್ಯಂತ ಅಪರೂಪವಾಗಿ ಯಾವಾಗಲೊ ಸಾವಿರಾರು ವರುಶಗಳಲ್ಲಿ ಒಮ್ಮೆ ಇಂತ ಬೆಳವಣಿಗೆ ಗಟಿಸಬಹುದು. ಅದು ಕೂಡ ಸಾಮಾನ್ಯ ಅಲ್ಲ. ಕನ್ನಡದಲ್ಲಿ ಅತ್ಯಂತ ಕುತೂಹಲಕರವಾಗಿ ಇಂತದೊಂದು ಬೆಳವಣಿಗೆ ಆಗಿದೆ. ಒಂದು ನಿರ‍್ದಿಶ್ಟ ಕಾಲಗಟ್ಟದಲ್ಲಿ ಹೊಸತಾಗಿ ಕೆಲವು ಸರ‍್ವನಾಮ ರೂಪಗಳು ಬೆಳೆದಿವೆ. ಅವುಗಳ ಬಗೆಗೆ, ಬಾಶೆಯೊಂದರಲ್ಲಿ ನಡೆಯಬಹುದಾದ ಅತ್ಯಂತ ಅಪರೂಪದ ಈ ಬೆಳವಣಿಗೆ ಬಗೆಗೆ ತುಸು ಇಲ್ಲಿ ಮಾತುಕತೆ.
ಮೊದಲಿಗೆ ಕನ್ನಡದ ಪ್ರತಮ ಪುರುಶ ಸರ‍್ವನಾಮಗಳ ಪಟ್ಟಿಯನ್ನು ಕೊಟ್ಟಿದೆ,
ಸ್ತ್ರೀಲಿಂಗ | ಪುಲ್ಲಿಂಗ | ನಪುಂಸಕಲಿಂಗ | |
ಏಕವಚನ ಜೋಡಿ2 | ಅವಳು | ಅವನು | ಅದು |
ಏಕವಚನ ಜೋಡಿ2 | ಅಕಿ/ಆಕೆ | ಅತ/ಆತ | |
ಬಹುವಚನ | ಅವರು | ಅವು |
ಗಮನಿಸಿ, ಅವನು ಮತ್ತು ಅವಳು ಎಂಬ ಪ್ರತಮ ಪುರುಶ ಸರ‍್ವನಾಮ ಜೋಡಿಯ ಜೊತೆಗೆ ಅತ/ಆತ ಮತ್ತು ಅಕಿ/ಆಕೆ ಎಂಬ ಇನ್ನೊಂದು ಜೋಡಿ ಬಳಕೆಯಲ್ಲಿದೆ.
ದ್ರಾವಿಡದ ಎಲ್ಲ ಬಾಶೆಗಳಲ್ಲಿ ಅವನು ಮತ್ತು ಅವಳು ಇವುಗಳು ಬಳಕೆಯಲ್ಲಿವೆ. ದ್ರಾವಿಡದ ಸರ‍್ವನಾಮಗಳ ಮೂಲರೂಪಗಳನ್ನು ಕೆಳಗೆ ಕೊಟ್ಟಿದೆ.
ಸ್ತ್ರೀಲಿಂಗ | ಪುಲ್ಲಿಂಗ | ನಪುಂಸಕಲಿಂಗ | |
ಏಕವಚನ | *ಅವಳು/*ಆವಳ್ | *ಅವನ್/*ಆವನ್ | *ಅತ್/*ಅದ್ |
ಬಹುವಚನ | *ಅವರ್/*ಆವರ್ | *ಅವ್ |
ಸಾಮಾನ್ಯವಾಗಿ ಒಂದು ಬಾಶೆಯಲ್ಲಿ ಇರುವ ಆಕ್ರುತಿಮಾಗಳು, ಆಕ್ರುತಿಮಾ ರೂಪಗಳು ಆ ಮನೆತನದ ಇತರ ಬಾಶೆಗಳಲ್ಲಿ ಕಂಡುಬರದಿದ್ದರೆ ಆ ರೂಪಗಳು ಆ ಬಾಶೆಯಲ್ಲಿ ಸ್ವತಂತ್ರವಾಗಿ ಬೆಳೆದಿರಬೇಕು. ಇದಕ್ಕೆ ಆ ಮನೆತನದ ಹೊರಗಿನ ಪ್ರೇರಣೆ, ತೆಗೆದುಕೊಳ್ಳುವಿಕೆ ಕಾರಣವಾಗಿರಬೇಕು. ಹಾಗಾದರೆ, ಕನ್ನಡದಲ್ಲಿ ಮಾತ್ರವೆ ಯಾಕೆ ಈ ಬೆಳವಣಿಗೆ?
ಇನ್ನು ಈ ರೂಪಗಳ ಬೆಳವಣಿಗೆ ಮತ್ತು ಬಳಕೆ ಕುರಿತು ತುಸು ಮಾತಾಡಬಹುದು. ಈ ರೂಪಗಳು ಕನ್ನಡದಾಗ ಹಲವಾರು ರೀತಿಯ ರಾಚನಿಕ ಸಮಸ್ಯೆಗಳನ್ನು ತೋರಿಸುತ್ತವೆ. ಕೆಳಗಿನ ಅಟ್ಟಗಳನ್ನು ಗಮನಿಸಿ.
ಸರ‍್ವನಾಮ ರೂಪಗಳು ಒಂದು ಬಾಶೆಯಲ್ಲಿ ಎಶ್ಟು ತೋರುಗ ರೂಪಗಳು ಇರುತ್ತವೆಯೊ ಅಶ್ಟು ರೂಪಗಳನ್ನು ಪಡೆದುಕೊಳ್ಳುತ್ತವೆ. ಕನ್ನಡದಾಗ ಮೂರು ತೋರುಗ ರೂಪಗಳು ಇವೆ. ಕನ್ನಡದಾಗ ದೂರತೋರುಗ ‘*ಅ/*ಆ>ಅದು, ನಡುತೋರುಗ *ಉ/*ಊ>ಉದು ಮತ್ತು ಸಮೀಪತೋರುಗ *ಇ/*ಈ>ಇದು ಎಂಬ ಮೂರು ತೋರುಗಗಳು ಇವೆ. ಇದರಲ್ಲಿ ನಡುತೋರುಗ ಹಳಗನ್ನಡದಾಗ ಇದ್ದು ಇಂದಿನ ಕನ್ನಡದಾಗ ಕಳೆದುಹೋಗಿದೆ. ಈ ತೋರುಗ ರೂಪಗಳನ್ನು ಆದರಿಸಿ ಈ ಕೆಳಗಿನ ಎಲ್ಲ ಸರ‍್ವನಾಮಗಳು ಬಳಕೆಯಲ್ಲಿರುವುದನ್ನು ಗಮನಿಸಿ.
ತೋರುಗ | ಸ್ತ್ರೀಲಿಂಗ | ಪುಲ್ಲಿಂಗ | ನಪುಂಸಕಲಿಂಗ | |
ಏಕವಚನ | ದೂರತೋರುಗ >*ಅ/*ಆ | ಅವಳು | ಅವನು | ಅದು |
ನಡುತೋರುಗ >*ಉ/*ಊ | ಉವಳು | ಉವನು | ಉದು | |
ಸಮೀಪತೋರುಗ >*ಇ/*ಈ | ಇವಳು | ಇವನು | ಇದು | |
ದೂರತೋರುಗ >*ಅ/*ಆ | ಅವರು | ಅವು | ||
ನಡುತೋರುಗ >*ಉ/*ಊ | ಉವರು | ಉವು | ||
ಸಮೀಪತೋರುಗ >*ಇ/*ಈ | ಇವರು | ಇವು |
ಈಗ ಎರಡನೆ ಜೋಡಿ ಸರ‍್ವನಾಮಗಳಲ್ಲಿ ಈ ರಚನೆ ಇದೆಯಾ ಎಂದು ಗಮನಿಸೋಣ.
ತೋರುಗ | ಸ್ತ್ರೀಲಿಂಗ | ಪುಲ್ಲಿಂಗ | ನಪುಂಸಕಲಿಂಗ | |
ಏಕವಚನ | ದೂರತೋರುಗ >*ಅ/*ಆ | ಅಕಿ/ಆಕೆ | ಅತ/ಆತ | ? |
ನಡುತೋರುಗ >*ಉ/*ಊ | ಊಕೆ | ಊತ/ಊತ | ? | |
ಸಮೀಪತೋರುಗ >*ಇ/*ಈ | ಈಕೆ | ಈತ/ಈತ | ? | |
ಬಹುವಚನ | ದೂರತೋರುಗ >*ಅ/*ಆ | ? | ? | |
ನಡುತೋರುಗ >*ಉ/*ಊ | ? | ? | ||
ಸಮೀಪತೋರುಗ >*ಇ/*ಈ | ? | ? |
ಮೊದಲ ಜೋಡಿಯ ಸರ‍್ವನಾಮಗಳು ಕನ್ನಡದಾಗ ಇರುವ ಲಿಂಗ ಮತ್ತು ವಚನಗಳನ್ನು ಆದರಿಸಿ ಅಶ್ಟು ರೂಪಗಳನ್ನು ಹೊಂದಿರುವುದನ್ನು ಮೇಲೆ ನೋಡಲಾಯಿತು. ಆದರೆ, ಎರಡನೆ ಜೋಡಿಯಲ್ಲಿ ಇದು ಕಾಣಿಸುವುದಿಲ್ಲ. ಸಾಮಾನ್ಯವಾಗಿ ಬಾಶೆಯಲ್ಲಿ ಗಣಿತದಲ್ಲಿ ಇರುವಂತೆ ಜ್ಯಾಮಿತಿ ರಚನೆ ಇರುತ್ತದೆ. ಈ ಜ್ಯಾಮಿತಿ ರಚನೆಯು ಮೊದಲ ಜೋಡಿಯ ಸಂದರ‍್ಬದಲ್ಲಿ ಕಾಣಿಸುತ್ತದೆ, ಆದರೆ ಎರಡನೆ ಜೋಡಿಯ ಸಂದರ‍್ಬದಲ್ಲಿ ಕಾಣಿಸುವುದಿಲ್ಲ. ಎಲ್ಲ ಲಿಂಗಗಳಲ್ಲಿ ಮತ್ತು ಎಲ್ಲ ವಚನಗಳಲ್ಲಿ ಇದಕ್ಕೆ ರೂಪಗಳು ಇಲ್ಲ.
ಅಲ್ಲದೆ ಸರ‍್ವನಾಮ ರೂಪಗಳ ಇತಿಹಾಸಿಕ ಬೆಳವಣಿಗೆಯನ್ನು ಗಮನಿಸಿದಾಗಲೂ ಈ ಎರಡು ಜೋಡಿಗಳ ನಡುವೆ ವ್ಯತ್ಯಾಸ ಕಂಡುಬರುತ್ತದೆ. ಗಮನಿಸಿ,
ಜೋಡಿ 1
ತೋರುಗ | ಸ್ತ್ರೀಲಿಂಗ | ಪುಲ್ಲಿಂಗ | |
ದೂರತೋರುಗ *ಅ/*ಆ | *ಅ/*ಆ | *ಅ/*ಆ+-ವ್-+-ಅಳ್=ಅವಳ್ | *ಅ/*ಆ+-ವ್-+-ಅನ್=ಅವನ್ |
ನಡುತೋರುಗ *ಉ/*ಊ | *ಉ/*ಊ | *ಉ/*ಊ+-ವ್-+-ಅಳ್=ಉವಳ್ | *ಉ/*ಊ+-ವ್-+-ಅನ್=ಉವನ್ |
ಸಮೀಪತೋರುಗ *ಇ/*ಈ | *ಇ/*ಈ | *ಇ/*ಈ+-ವ್-+-ಅಳ್=ಇವಳ್ | *ಇ/*ಈ+-ವ್-+-ಅನ್=ಇವನ್ |
ಇದರಲ್ಲಿ ಮೊದಲ ಜೋಡಿಯ ಮೂಲ ತೋರುಗ ರೂಪಗಳಿಗೆ *-ಅನ್, *-ಅಳ್ ಮತ್ತು *-ಅತ್ ಎಂಬ ಲಿಂಗ-ವಚನ ರೂಪಗಳು ಸೇರಿ ಸರ‍್ವನಾಮ ರೂಪಗಳು ಬೆಳೆದಿರುವುದ ಕಾಣಿಸುತ್ತದೆ.
ಜೋಡಿ 2ರಲ್ಲಿ ಇರುವ ಸರ‍್ವನಾಮಗಳಿಗೆ ಈ ರೀತಿ ಬೆಳವಣಿಗೆ ವಿವರಿಸುವುದು ತುಸು ಕಶ್ಟ.
ಕನ್ನಡ ಬಾಶೆ ವಾಕ್ಯಹಂತದಲ್ಲಿ ಮಾಡುಗ (ಕರ‍್ತ್ರು) ಮತ್ತು ಕ್ರಿಯೆ ಇವುಗಳ ನಡುವೆ ಒಪ್ಪಂದವನ್ನು ತೋರಿಸುತ್ತದೆ. ಅಂದರೆ, ವಾಕ್ಯದ ಮಾಡುಗದ ಲಿಂಗ ಮತ್ತು ವಚನಗಳು ಆ ವಾಕ್ಯದ ಕ್ರಿಯಾಪದದಲ್ಲಿ ಅಬಿವ್ಯಕ್ತಗೊಳ್ಳುತ್ತವೆ. ಹೀಗೆ ಲಿಂಗ-ವಚನ ರೂಪಗಳು ಈ ಒಪ್ಪಂದದಲ್ಲಿ ಬರುವಾಗ ಮೊದಲ ಜೋಡಿಯ ಸರ‍್ವನಾಮಗಳು ಮಾತ್ರ ಬರಬಲ್ಲವು, ಎರಡನೆ ಜೋಡಿಯ ಸರ‍್ವನಾಮಗಳು ಬರುವುದಿಲ್ಲ. ಇದು ಗಮನೀಯ. ಕೆಳಗಿನ ಬಳಕೆಗಳನ್ನು ಗಮನಿಸಿ.
ಜೋಡಿ-1 ಜೋಡಿ-2
ಅವನು ಮನೆಗೆ ಬಂದನು ?
ಅವಳು ಮನೆಗೆ ಬಂದಳು ?
ಅದು ಮನೆಗೆ ಬಂದಿತು ?
ಆತ ಬಂದಾತ, ಆಕೆ ಬಂದಾಕೆ ಎಂಬ ರೂಪಗಳು ಸಾದ್ಯ. ಆದರೆ, ಅವು ಒಪ್ಪಂದದಲ್ಲಿ ಮಾಡುಗ ಲಿಂಗ-ವಚನವನ್ನು ಹೇಳುವುದಕ್ಕೆ ಬರುವುದಿಲ್ಲ. ಬದಲಿಗೆ ಇವು ಬೇರೆ ವ್ಯಾಕರಣ ಕೆಲಸಕ್ಕೆ ಸೇರಿರುವುದು ಕಾಣಿಸುತ್ತದೆ. ಕೆಳಗಿನ ಬಳಕೆಗಳನ್ನು ಗಮನಿಸಿ.
ಜೋಡಿ-1 ಜೋಡಿ-2
ಅವನು ಮನೆಗೆ ಬಂದವನು ಆತ ಮನೆಗೆ ಬಂದಾತ
ಅವಳು ಮನೆಗೆ ಬಂದವಳು ಆಕೆ ಮನೆಗೆ ಬಂದಾಕೆ
ಮುಚ್ಚಿದ ಪದಕೋಶದಲ್ಲಿ ಇರುವ ಮತ್ತು ವ್ಯಾಕರಣ ಪ್ರಕ್ರಿಯೆಗೆ ಬಳಕೆಯಾಗುವ ರೂಪಗಳಲ್ಲಿ ಇಶ್ಟು ಮಟ್ಟಿನ ವ್ಯತ್ಯಾಸ ತೀರಾ ಅಸಹಜವೆನಿಸುತ್ತದೆ. ಇದಕ್ಕೆ ಬಹುಶಾ ಕನ್ನಡವು ಈ ಎರಡನೆ ಜೋಡಿಯನ್ನು ಆನಂತರದ ಯಾವುದೊ ಕಾಲಗಟ್ಟದಲ್ಲಿ ಸಾಮಾಜಿಕ ಕಾರಣಗಳಿಗಾಗಿ ಬೆಳೆಸಿಕೊಂಡಿದೆ.
ಇಲ್ಲಿ ಈ ಸರ‍್ವನಾಮ ರೂಪಗಳಿಗೆ ಒಂದೆರಡು ಬಳಕೆಗಳನ್ನು ವಿವಿದ ಒಳನುಡಿಗಳಿಂದ ಕೊಟ್ಟಿದೆ, ಗಮನಿಸಿ.
• ದಾರವಾಡ ಕನ್ನಡ ಆಕಿ ಮನಿಗೆ ಬಂದುಳು
ಅವುಳು (-ಗ) ಮನಿಗೆ ಬಂದುಳು
• ಮಂಗಳೂರು ಕನ್ನಡ ಆಕೆ (-ಗ) ಮನೆಗೆ ಬಂದಳು
ಅವಳು ಮನೆಗೆ ಬಂದಳು
• ಮಸ್ಕಿ ಕನ್ನಡ ಆಕಿ ಮನಿಗೆ ಬಂದ್ಲು
ಅವ್ಳು (-ಗ) ಮನಿಗೆ ಬಂದ್ಲು
ಕುತೂಹಲದ ವಿಚಾರವೆಂದರೆ ಬಡಗನ್ನಡಗಳಲ್ಲಿ ಎರಡನೆ ಜೋಡಿ ಸರ‍್ವನಾಮಗಳು ಸಹಜಾರ‍್ತದಲ್ಲಿ ಬಳಕೆಯಾಗುತ್ತವೆ ಮತ್ತು ಮೊದಲ ಜೋಡಿ ಸರ‍್ವನಾಮಗಳು ಕಡಿಮೆ ಗವುರವ (-ಗವುರವ)ದಲ್ಲಿ ಬಳಕೆಯಾಗುತ್ತವೆ. ಮೂಡಗನ್ನಡಗಳಲ್ಲಿ ಮೊದಲ ಜೋಡಿ ಸರ‍್ವನಾಮಗಳು ಸಹಜಾರ‍್ತದಲ್ಲಿ ಬಳಕೆಯಾದರೆ ಎರಡನೆ ಜೋಡಿ ಹೆಚ್ಚಿನ ಗವುರವ (+ಗವುರವ)ದಲ್ಲಿ ಬಳಕೆಯಾಗುತ್ತದೆ. ಪಡುಗನ್ನಡಗಳಲ್ಲಿಯೂ ಇದೆ ಬಗೆಯ ಬಳಕೆಯನ್ನು ಗಮನಿಸಬಹುದು. ಮೇಲಿನ ಉದಾಹರಣೆಗಳಲ್ಲಿ ಇದನ್ನು (-ಗ) ಮತ್ತು (+ಗ) ಎಂದು ಕ್ರಮವಾಗಿ ಗುರುತಿಸಿದೆ. ಈ ಬಳಕೆಯನ್ನು ಗಮನಿಸಿದಾಗ ಎರಡನೆ ಜೋಡಿ ಸರ‍್ವನಾಮ ರೂಪಗಳು ಗವುರವದ ಅಬಿವ್ಯಕ್ತಿಗೆಂದು ಬೆಳೆದಿವೆ ಎಂಬುದು ಸ್ಪಶ್ಟವಾಗುತ್ತದೆ. ಒಂದು ಮಾತುಗ ಸಮುದಾಯದಲ್ಲಿ ಯಾವುದೊ ಸಾಮಾಜಿಕ ಕಾರಣಕ್ಕೆ ಇಂತ ಬೆಳವಣಿಗೆ ಆಗಬಹುದು. ಕನ್ನಡದಲ್ಲಿ ಸರ‍್ವನಾಮ ರೂಪಗಳಲ್ಲಿ ಗವುರವದ ಅಬಿವ್ಯಕ್ತಿಯ ಅವಶ್ಯಕತೆ ಯಾಕೆ ಬಂದಿತು ಮತ್ತು ಅದಾಗಲೆ ಇರುವ ಸರ‍್ವನಾಮ ರೂಪಗಳು ಈ ಕೆಲಸಕ್ಕೆ ಸಾಕಾಗುವುದಿಲ್ಲ ಎಂಬ ಗ್ರಹಿಕೆ ಮಾತುಗ ಸಮುದಾಯಕ್ಕೆ
ಯಾಕೆ ಬಂದಿತು ಎಂಬುವು ಬಹು ಮಹತ್ವದ ಪ್ರಶ್ನೆಗಳು. ಬಹುಶಾ, ನನ್ನ ತಿಳುವಳಿಕೆ ಪ್ರಕಾರ, ಪ್ರಾಕ್ರುತ-ಸಂಸ್ಕ್ರುತದ ಸಂಬಂದದಲ್ಲಿ ಕನ್ನಡ ಮಾತುಗ ಸಮುದಾಯ ಇಂತ ಅವಶ್ಯಕತೆಯನ್ನು ಬೆಳೆಸಿಕೊಂಡಿರುವಂತಿದೆ.
ಕನ್ನಡವು ಪ್ರಾಕ್ರುತ-ಸಂಸ್ಕ್ರುತ ಬಾಶೆಗಳ ಜೊತೆ ಅತಿ ಹೆಚ್ಚು ನಂಟನ್ನು ಹೊಂದಿರುವ ದ್ರಾವಿಡ ಬಾಶೆ. ಕನ್ನಡದಂತೆಯೆ ಹೆಚ್ಚಿನ ನಂಟನ್ನು ತೋರಿಸುವ ಇನ್ನೊಂದು ಬಾಶೆ ತೆಲುಗು. ಕುತೂಹಲವೆಂದರೆ ಕನ್ನಡದಲ್ಲಿ ಆಗಿರುವ ಬೆಳವಣಿಗೆ ತೆಲುಗಿನಲ್ಲಿಯೂ ಆಗಿದೆ. ಇಲ್ಲಿ ತೆಲುಗಿನ ಎರಡು ಜೋಡಿ ಸರ‍್ವನಾಮಗಳನ್ನು ಕೆಳಗೆ ಪಟ್ಟಿಸಿದೆ.
ಸ್ತ್ರೀಲಿಂಗ | ಪುಲ್ಲಿಂಗ | ನಪುಂಸಕಲಿಂಗ | |
ಏಕವಚನ ಜೋಡಿ-1 | ಅದಿ | ವಾಡು | ಅದಿ |
ಏಕವಚನ ಜೋಡಿ-2 | ಆಮೆ | ಅತಡು | ? |
ಒಂದು ಮಹತ್ವದ ವಿಚಾರವನ್ನು ಇಲ್ಲಿ ತರಬಹುದು. ಈ ಬೆಳವಣಿಗೆ ಕನ್ನಡದಾಗ ಕಮ್ಮಿ ಎಂದರೂ ಎರಡು ಸಾವಿರ ವರುಶಗಳಿಗಿಂತ ಹಿಂದೆ ಆಗಿದೆ. ಅಂದರೆ ಇದರಿಂದ ತಿಳಿಯುವುದೆಂದರೆ ಕನ್ನಡದ ಇತಿಹಾಸ ಈಗ ಅಂದುಕೊಂಡಿರುವ ಮೂರರಿಂದ ಮೂರೂವರೆ ಸಾವಿರ ವರುಶಗಳಿಗಿಂತ ಇನ್ನೂ ಹಿಂದಕ್ಕೆ ಹೋಗುತ್ತದೆ. ಹಾಗೆ, ಕನ್ನಡವು ಪ್ರಾಕ್ರುತದ ಜೊತೆಗಿನ ನಂಟನ್ನು ಎರಡು ಸಾವಿರ ವರುಶಗಳಿಗಿಂತ ಹಿಂದೆ ಬಹು ಆಳವಾಗಿ ಹೊಂದಿದ್ದಿತು ಎಂಬುದನ್ನೂ ಇದು ತೋರಿಸುತ್ತದೆ. ಇದರೊಟ್ಟಿಗೆ ಇನ್ನೊಂದು ಮಹತ್ವದ ಅಂಶವನ್ನು ಇದು ತೋರಿಸುತ್ತದೆ. ಅದೆಂದರೆ, ಇದುವರೆಗೆ ವಿದ್ವಾಂಸರು ಮಾತಾಡಿರುವಂತೆ ಕನ್ನಡ ಪ್ರಾಕ್ರುತ-ಸಂಸ್ಕ್ರುತದಿಂದ ಬರಿಯ ಪದಕೋಶದಲ್ಲಿ ಮಾತ್ರ ಪ್ರಬಾವಕ್ಕೆ ಒಳಗಾಗಿಲ್ಲ, ಬದಲಿಗೆ ವ್ಯಾಕರಣದಲ್ಲಿಯೂ ಪ್ರಬಾವಕ್ಕೆ ಒಳಗಾಗಿದೆ ಎಂಬುದು ಇಲ್ಲಿ ಕಾಣಿಸುತ್ತದೆ.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ಬನಶಂಕರಿಯ ಮೈತುಂಬಾ ತೀಡಿದ ತಂಗಾಳಿಭರಿತ ಹಿತವಾದ ಚುರುಕು ಬಿಸಿಲು. ಜನಜಂಗುಳಿಯ ಬಾದಾಮಿಯ ಬನಶಂಕರಿ ಮಹಾಜಾತ್ರೆಯೊಳ...
"ಬಾಶೆಯ ಮೂಲಕ ಕೊಡುವುದರ ಕಡೆಗೆ ಅವರ ಗಮನ ಹರಿಯುವುದು ಕಶ್ಟವಾಗುತ್ತದೆ. ಇದರಿಂದ ಮಕ್ಕಳು ವಿಶಯವನ್ನು ಅನುಬವಿಸಲು ಸ...
"ನಾಡು ಕಟ್ಟುವ, ಸಂಸ್ಕೃತಿಯನ್ನು ಪುನರುಜ್ಜೀವಿಸುವ ಕೆಲಸವನ್ನು ಕೈಗೆತ್ತಿಗೊಂಡ ಬರಹಗಾರರಲ್ಲಿ ನಾವೆಲ್ಲರು ಒಂದಾಗಿ ...
©2025 Book Brahma Private Limited.