Date: 10-11-2021
Location: ಬೆಂಗಳೂರು
ಕನ್ನಡ ನೆಲದಲ್ಲಿ ಜನ್ಮತಾಳಿ ದೆಹಲಿ ಗದ್ದುಗೆಗೆ ಏರಿದ ಏಕೈಕ ಹಾಗೂ ಅಪರೂಪದ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಜೀವನ ಚರಿತ್ರೆ ಈಗ ಇಂಗ್ಲಿಷ್‌ನಲ್ಲಿ ಬರುತ್ತಿದೆ. ಕರ್ನಾಟಕದವರೇ ಆದ ಖ್ಯಾತ ಪತ್ರಕರ್ತ ಸುಗತ ಶ್ರೀನಿವಾಸ್ ರಾಜು ಅವರ ಸುಮಾರು ಮೂರು ವರ್ಷಗಳ ಸತತವಾಗಿ ನಡೆಸಿದ ಅಧ್ಯಯನ-ಪ್ರವಾಸ-ಸಂದರ್ಶನಗಳ ಫಲವೇ ’ಫರೋಸ್ ಇನ್ ಎ ಫೀಲ್ಡ್’ ಎಂಬ ಈ ಕೃತಿ.
ಜಗತ್ತಿನ ಅತ್ಯಂತ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ಪೆಂಗ್ವಿನ್ ’ಫರೋಸ್ ಇನ್ ಎ ಫೀಲ್ಡ್’ ಕೃತಿಯನ್ನು ಬೆಳಕಿಗೆ ತರುತ್ತಿದ್ದು ನವೆಂಬರ್ ಕೊನೆಯ ವಾರ ಬಿಡುಗಡೆಯಾಗುತ್ತಿದೆ. ಹಾಗೆ ನೋಡಿದಲ್ಲಿ ಜೂನ್ 1, 1996ರಂದು ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸದ ಗೌಡರು ಆ ಕುರ್ಚಿಯಲ್ಲಿ ಇದ್ದದ್ದು ಕೇವಲ ಹನ್ನೊಂದು ತಿಂಗಳ ಕಾಲ ಮಾತ್ರ. ಆದರೆ, ಆ ಅಲ್ಪಾವಧಿಯಲ್ಲಿಯೇ ಕೇವಲ ರಾಷ್ಟ್ರೀಯ ನೆಲೆಯಲ್ಲಿ ಮಾತ್ರವಲ್ಲ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಛಾಪು ಮೂಡಿಸಿದ ಅಪರೂಪದ ರಾಜಕಾರಣಿ ದೇವೇಗೌಡರು.
ದೇವೇಗೌಡರ ಜೀವನಗಾಥೆ ಬರೆಯುವ ಯತ್ನ ಈಗಾಗಲೇ ಕೆಲವರು ಮಾಡಿಯಾಗಿದೆ. ಅದು ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲಿಯೂ ನಡೆದಿದೆ. ಆದರೆ, ಸುಗತ ಶ್ರೀನಿವಾಸರಾಜು ಅವರು ತಮ್ಮ ಆಳವಾದ ಅಧ್ಯಯನದ ಮೂಲಕ ‘ಫರೋಸ್ ಇನ್ ಎ ಫೀಲ್ಡ್’ ನಲ್ಲಿ ಹಲವು ಹಂತಗಳಲ್ಲಿ ಗೌಡರ ವ್ಯಕ್ತಿತ್ವವನ್ನು ಆಳವಾಗಿ ಇಳಿದು ನೋಡಲು ಯಶಸ್ವಿಯಾಗಿದ್ದಾರೆ.
ಸುಮಾರು ಏಳು ದಶಕಗಳಿಂದ, ಹೊಳೆನರಸೀಪುರ ತಾಲ್ಲೂಕು ಅಭಿವೃದ್ಧಿ ಪ್ರಾಧಿಕಾರದ ಸದಸ್ಯತ್ವದಿಂದ ಹಿಡಿದು ದೇಶದ ಪ್ರಧಾನಿಯಾಗುವ ಹಂತಕ್ಕೆ ಬೆಳೆದ ಗೌಡರ ಜೀವನಗಾಥೆಗೆ ಹಲವಾರು ಆಯಾಮಗಳಿವೆ. ಸುಮಾರು ಎರಡು ವರ್ಷಗಳ ಕಾಲ ಕರ್ನಾಟಕದ ಮುಖ್ಯಮಂತ್ರಿ ಆಗಿ ಕೂಡ ಕರ್ತವ್ಯ ನಿರ್ವಹಿಸಿದ ಗೌಡರು, ನಂತರ ಬಯಸದೇ ಬಂದ ಭಾಗ್ಯದ ಫಲವಾಗಿ ಪ್ರಧಾನಿ ಪಟ್ಟಕ್ಕೇರಿದವರು. ಇನ್ನೇನು ಗೌಡರು ಆ ಪಟ್ಟದಲ್ಲಿ ಗಟ್ಟಿಯಾದರೂ ಅಂದುಕೊಂಡ ಹಂತದಲ್ಲಿಯೇ ಪದತ್ಯಾಗ ಮಾಡಬೇಕಾದ ಸನ್ನಿವೇಶ ಎದುರಾಗಿತ್ತು.
ಎಲ್ಲವನ್ನೂ ಪಡೆದು, ನಂತರ ಎಲ್ಲವನ್ನೂ ಕಳೆದುಕೊಂಡರೂ ಒಬ್ಬ ರಾಜಕಾರಣಿಯಾಗಿ, ಕರ್ನಾಟಕದ ಧ್ವನಿಯಾಗಿ, ರೈತರ ಪ್ರತಿನಿಧಿಯಾಗಿ, ಪ್ರಬುದ್ಧ ಸಂಸತ್ ಪಟುವಾಗಿ, ನೀರಾವರಿ ತಜ್ಞನಾಗಿರುವ ಗೌಡರಿಗೆ ಸರಿಸಮಾನವಾಗಿ ನಿಲ್ಲುವ ಮತ್ತೊಬ್ಬ ರಾಜಕಾರಣಿಯನ್ನು ಈ ದೇಶ ಕಂಡಿಲ್ಲ. ಕಳೆದ ಸುಮಾರು ಎರಡೂವರೆ ದಶಕಗಳಿಂದ ಸಂಸತ್ ಸದಸ್ಯರಾಗಿ ಸದಾ ಈ ದೇಶದ ಹಿತ ಕಾಪಾಡುವ ನಿಟ್ಟಿನಲ್ಲಿ ಗೌಡರು ಕಾರ್ಯ ನಿರ್ವಹಿಸಿದ್ದಾರೆ.
ಗೌಡರೆಂತಹ ರಾಜಕಾರಣಿಯೆಂದರೆ, ಈಗ ಕೂಡ ಹೊಳೆನರಸೀಪುರದಲ್ಲಿದ್ದರೆ ಅವರು ತಾಲ್ಲೂಕು ಮಟ್ಟದ ರಾಜಕಾರಣಿಯಂತೆಯೇ ಯೋಚಿಸುತ್ತಾರೆ, ನಡೆದುಕೊಳ್ಳುತ್ತಾರೆ. ಹಾಸನ ಹೊಕ್ಕರೆ ಜಿಲ್ಲಾ ಮಟ್ಟದ ರಾಜಕಾರಣಿ. ಬೆಂಗಳೂರಿಗೆ ಬಂದರೆ ರಾಜ್ಯ ಮಟ್ಟದ ರಾಜಕಾರಣಿ. ದೆಹಲಿಯಲ್ಲಿದ್ದರೆ ರಾಷ್ಟ್ರ ಮಟ್ಟದ ರಾಜಕಾರಣಿ. ಹಾಗೆಯೇ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕೂಡ ಈಗ ಕೂಡ ಗೌಡರನ್ನು ಒಬ್ಬ ಪ್ರಬುದ್ಧ ರಾಜಕಾರಣಿ ಎಂದು ಪರಿಗಣಿಸಲಾಗುತ್ತದೆ. ಪ್ರಧಾನಿ ಪಟ್ಟದಿಂದ ಇಳಿದು 25 ವರ್ಷಗಳ ನಂತರವೂ ಭಾರತದ ರಾಜಕಾರಣದಲ್ಲಿ ಪ್ರಸ್ತುತವಾಗಿ ಉಳಿದಿರುವ ಗೌಡರ ಬದುಕಿನ ಹಲವು ಆಯಾಮಗಳನ್ನು ’ಫರೋಸ್ ಇನ್ ಎ ಫೀಲ್ಡ್’ ತೆರೆದಿಡುತ್ತದೆ.
ಅಂತಹ ಒಬ್ಬ ಅಪ್ಪಟ ಕನ್ನಡ ನೆಲದ ರಾಜಕಾರಣಿಯ ಜೀವನಗಾಥೆಯನ್ನು ಇಂಗ್ಲಿಷ್-ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪನ್ನು ಒಡಮೂಡಿಸಿರುವ ನಮ್ಮವರೇ ಆದ ಸುಗತ ಶ್ರೀನಿವಾಸರಾಜು ಅವರು ಅಕ್ಷರಗಳ ರೂಪದಲ್ಲಿ ತೆರೆದಿಟ್ಟಿದ್ದಾರೆ. ಈ ಕೃತಿ ಈಗ ಇಂಗ್ಲಿಷ್ ನಲ್ಲಿ ಪ್ರಕಟವಾಗುತ್ತಿದ್ದರೂ ಕನ್ನಡ ಮತ್ತು ಕರ್ನಾಟಕದವರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.
ಬೆಂಗಳೂರು: ಬೆಳಗಾವಿ ಜಿಲ್ಲೆಯ ಸಹೃದಯ ಸಾಹಿತ್ಯ ಪ್ರತಿಷ್ಠಾನವು 2024ರಲ್ಲಿ ಪ್ರಕಟವಾದ ಅತ್ಯುತ್ತಮ ಕವನ ಹಾಗೂ ಗಜಲ್ ಸಂಕಲ...
ಬೆಂಗಳೂರು: ಬಿ. ಕೆ. ಸುಮತಿ ಅವರಿಗೆ ತಾವು ತೊಡಗಿಕೊಂಡಂತಹ ಶ್ರವ್ಯ ಮಾಧ್ಯಮ ಕೇಂದ್ರ ಆಕಾಶವಾಣಿಯ ಬಗ್ಗೆ ಇನ್ನಿಲ್ಲದ ಗೌರವ...
ಬೆಂಗಳೂರು: ಸಾಂಸ್ಕೃತಿಕ ಅಧ್ಯಯನವು ಸಮಾಜ, ರಾಜಕಾರಣ, ಆರ್ಥಿಕತೆ, ಧಾರ್ಮಿಕತೆ ಹಾಗೂ ಲಿಂಗ ರಾಜಕಾರಣಗಳಲ್ಲಿ ಕಂಡು ಬರುವ ...
©2025 Book Brahma Private Limited.